ಕನ್ನಡ ರಾಜ್ಯೋತ್ಸವದ ಸಂಭ್ರಮದಾಚರಣೆ ಮತ್ತು ಅತೀವ ಮಳೆಯಿಂದಾಗಿ ಮನೆಮಠ ಕಳೆದುಕೊಂಡು ಬೀದಿಪಾಲಾಗಿರುವ ಜನರ ಹತಾಶೆಯ ಹಿನ್ನಲೆಯಲ್ಲಿ ಒಂದು ನೈಜ ಘಟನೆಯನ್ನು ಒಂದು ಕಥೆಯ ರೂಪದಲ್ಲಿ ಬರೆಯುತ್ತಿದ್ದೇನೆ. ಖಂಡಿತವಾಗಿ ಓದಿ.. ಮತ್ತೊಮ್ಮೆ ಕನ್ನಡ ರಾಜೋತ್ಸವದ ಶುಭಾಶಯಗಳು...
“ಈ ಗೌರಮ್ಮಳಿಗೆ ಹುಚ್ಚು ಇರ್ಬೇಕು.. ಮಳೆಗೆ. ಮನೆ ಅಗೋ ಇಗೋ ಅಂತಿರ್ಬೇಕಾದ್ರೆ… ಮನೆ ಒಳ್ಗೆ ದೆವ್ವ ಕೂತಂಗೆ…ಕೂತ್ತಾವ್ಳೆ..”
ಪಕ್ಕದ ಮನೆಯ ನಾಗಮ್ಮ ಕಳವಳದಿಂದ ಆಡಿದ ಮಾತು ತನ್ನ ಮನೆಯ ಮುಂಭಾಗದ ಕೋಣೆಯಲ್ಲಿ ಮಂಡಿಗಳ ಮೇಲೆ ತನ್ನ ಇಡೀ ತಲೆಯ ಭಾರವನ್ನೆಲ್ಲಾ ಹಾಕಿ ಕಲ್ಲಂತೆ ಕೂತಿದ್ದ ಗೌರಮ್ಮಳ ಕಿವಿಗಳನ್ನು ಮುಟ್ಟಿದರೂ ಅವು ಅವಳ ಲೆಕ್ಕಕ್ಕೆ ಬರಲಿಲ್ಲ. ಕಾಲದ ಪರಿವೆಯನ್ನೇ ತಾನು ಕಳೆದುಕೊಂಡಂತೆ ಅವಳು ಮಂಕಾಗಿ ಧಾರಾಕಾರವಾಗಿ ಸುರಿಯುತ್ತಿದ್ದ ಮಳೆಯನ್ನು ಕೋಪದಿಂದ ದಿಟ್ಟಿಸುತ್ತಿದಳು. ಅವಳ ನೋಟದಡಿಯಲ್ಲಿ ಬಚ್ಚಿಟ್ಟುಕೊಂಡಿದ್ದ ಕಡು ವೈರಿಯನ್ನು ನೋಡುವ ಸಿಟ್ಟು ಅವಳ ನಿಟ್ಟುಸಿರಿನಲ್ಲಿ ಕಾಣಿಸಿಕೊಳ್ಳುತ್ತಿತ್ತು. ಇತ್ತ ಮನೆಯ ಮಗ್ಗಲಲ್ಲೇ ಇದ್ದ ರಾಜಣ್ಣನ ಚಿಲ್ಲರೆ ಅಂಗಡಿಯ ರೇಡಿಯೋದಿಂದ ಹಾಡು ಕೇಳಿಬರುತ್ತಿತ್ತು. ಗಂಡಸರೆಲ್ಲ ಅಂಗಡಿಯ ಕಟ್ಟೆಯ ಮೇಲೆ ಕೂತು ಚಳಿಯ ನೆವದಲ್ಲಿ ಒಂದಾದನಂತರ ಮತ್ತೊಂದು ಬೀಡಿ ಹಚ್ಚಿಕೊಂಡು ಬುಸ ಬುಸ ಹೊಗೆ ಬಿಡುತ್ತಾ ಮೂರ್ನಾಲ್ಕು ಬೀಡಿ ಕಟ್ಟುಗಳನ್ನು ಬೂದಿ ಮಾಡಿ ಮಳೆ ತಂದ ಪಜೀತಿಯ ಬಗ್ಗೆ ಹರಟುತ್ತಿದ್ದರು. ಇದ್ಯಾವುದರ ಪರಿವೇ ಇಲ್ಲದಂತೆ ಚಿಂತೆಯ ಬಾವಿಯ ಆಳಕ್ಕೆ ಇಳಿದು ಬಿಟ್ಟಿದ್ದ ಗೌರಮ್ಮ ಸುಮ್ನೆ ಕೂತಿದ್ಲು.
“ಈ ಹುಚ್ಚು ಮಳೆ ಇಂಗೇ ಮುಂದುವರಿದ್ರೆ... ನನ್ ಮನೀ ಗತಿಯೇನು ಅಂತ? ದೇವ್ರೆ ಈ ಹುಚ್ಚು ಮಳೆನಾ ನಿಲ್ಸಪ್ಪ” ದಿಗಿಲುಗೊಂಡ ಗೌರಮ್ಮ ಬೇಡಿಕೊಳ್ಳುತ್ತಿದಳು. ಮುಂಜಾನೆಯಿಂದಲೇ ಹನಿ ಹನಿಯಾಗಿ ಶುರುವಾದ ಮಳೆ ಸ್ವಲ್ಪ ಹೊತ್ತಿನಲ್ಲೇ ಜೋರಾಗಿ ಸುರಿಯಲಾರಂಭಿಸಿತ್ತು. ಇಂತಹ ಅಬ್ಬರದ ಮಳೆಗೆ “ನಿಂತುಬಿಡು” ಎಂಬ ಬೇಡಿಕೆಯನ್ನಿಟ್ಟುಕೊಂಡು ಕಾದು ಕೂತಿದ್ದಳು ಗೌರಮ್ಮ. ಅವಳ ಒಕ್ಕೊರಲಿನ “ಮನವಿ” ಮಳೆರಾಯನ ಗಣನೆಗೆ ಬರಲಿಲ್ಲವೋ ಅಥವಾ ಅವನ ಅಬ್ಬರದಲ್ಲಿ ಅವಳ ಅಳು ಅವನಿಗೆ ಕೇಳಲಿಲ್ಲವೋ ಧಪ ಧಪ ಎಂದು ಬೀಳುತ್ತಲೇ ಇದ್ದ. ಆಗಲೇ ಹೆಪ್ಪುಗಟ್ಟಿಕೊಂಡಿದ್ದ ಕಾರ್ಮೋಡ ಮಾತ್ರ ಸಮಯ ಮೀರಿದ ಕತ್ತಲೆಯನ್ನು ಕವಿಸಿ ಕತ್ತಲೆಯ ತೆರೆಯನ್ನು ಇಳಿಸಲು ಸಜ್ಜಾಗುತ್ತಿತ್ತು. ಆದರೂ ಗೌರಮ್ಮ ಕೂತಲೇ ಕೂತು ಮಳೆಯ ಅಂತ್ಯಕ್ಕೆ ಕಾದಿದ್ದಳು.
ನಿಜ, ಕೆಂಡದಂಥ ಬೇಸಿಗೆಯ ತಾಪಕ್ಕೆ ಧಗಧಗಿಸಿ ಉರಿಯುತ್ತಿದ್ದ ಊರಿಗೆ ಬೇಕಾಗಿದ್ದು ಕಿಂಚತ್ ಮಳೆ. ಮಳೆ ಬಾಲ ಹಿಡಿದು ಬರುವ ಅಲ್ಪ ತಂಪು, ಮೇಲಾಗಿ ಒಣಗಿದ್ದ ಬೆಳೆಗಳ ಆಸ್ತಿತ್ವದ ಉಳಿವಿಗಂತ ಅಲ್ಪಸ್ಪಲ್ಪ ನೀರು. ಇಂತಹ ತೀರ ಬೇಡಿಕೆಯನ್ನಿಟ್ಟುಕೊಂಡು ಕೂತಿದ್ದ ಊರಿಗೆ ಬಂದೂದಗಿದ್ದೇ ಬೇರೆ. ಆಕಾಶ ಮೋಡಗಳೆಲ್ಲಾ ಒಮ್ಮೆಲೇ ಕರಗಿ ಏಕಾಏಕಿಯಾಗಿ ಕಣ್ಣು ಕೋರೈಸುವ ಮಿಂಚು ಕಿವಿಗಡಚಿಕ್ಕುವ ಗುಡುಗು ಅರ್ಭಟಗಳಿಂದ ಆಕ್ರಮಣ ಪ್ರಾರಂಭಿಸಿ, ನಾಲ್ಕು ತಾಸಿಗೂ ಹೆಚ್ಚು ಹೊತ್ತು ಸತತವಾಗಿ ಭೋರ್ಗರೆದು ಊರಿಗೇ ಊರೇ ಬೆಚ್ಚಿ ಬೀಳುವಂತೆ ಮರಗಳನ್ನು ಬುಡಮೇಲಾಗಿಸಿ ಇಡೀ ಊರನ್ನು ಅಸ್ತವ್ಯಸ್ಥಗೊಳಿಸಿ ಹತ್ತಾರು ಎಕರೆಗಳ ಬೆಳೆಗಳನ್ನು ನುಂಗಿ ತೇಗಿದ್ದಲ್ಲದೆ ಇಡೀ ಊರನ್ನೇ ಜಲಾವೃತ್ತವಾಗಿಸಿ ಊಹೆಗೂ ಮೀರಿದ ಸಾವಿರಾರು ರೂಪಾಯಿ ಮೌಲ್ಯದ ನಷ್ಟವನ್ನು ಲೆಕ್ಕಪಟ್ಟಿಗೆ ಸೇರಿಸಿದ. ಅಷ್ಟಕ್ಕೇ ನಿಲ್ಲದೆ ಮೋರಿಗಳನ್ನು ದಿಕ್ಕು ತಪ್ಪುವಂತೆ ಮಾಡಿ ಮಣ್ಣ ರಸ್ತೆಗಳನ್ನು ಕೆಂಪು ನದಿಗಳಾಗಿಸಿಬಿಟ್ಟ. ಕೆಲ ಮನೆಗಳ ಅಡಿಪಾಯಗಳ ಬಾಯಿಗಳಿಗೆ ಬೇಕಾದಷ್ಟು ನೀರು ಕುಡಿಸಿ ನೆಲಕಚ್ಚುವಂತೆ ನೋಡಿಕೊಂಡಿದ್ದ. ಸಾಲದೆಂಬಂತೆ, ಹತ್ತಾರು ಮನೆಗಳ ಮೇಲ್ಛಾವಣಿಗಳನ್ನು ಬೀಳಿಸಿ ಬೋಳುಬೋಳಾಗಿಸಿದ್ದ, ಕರೆಂಟ್‍ಕಂಬಗಳನ್ನು ನೆಲಕ್ಕುರುಳಿಸಿ ಊರನ್ನು ಮತ್ತಷ್ಟು ಕತ್ತಲೆಗೆ ದೂಡಿ ಎಣ್ಣೆದೀಪಗಳ ಮರೆಹೊಗಲು ಅಪ್ಪಣೆಕೊಟ್ಟುಬಿಟ್ಟಿದ್ದ.
ಮಳೆಯ ಇಂತಹ ಕ್ಷಿಪ್ರದಾಳಿಗೆ ಹುಚ್ಚು ಆಟಕ್ಕೆ ಊರು ಒಂದು ಚೂರೂ ಸನ್ನದ್ಧವಾಗಿರಲಿಲ್ಲವೆಂಬ ಸತ್ಯವನ್ನು ಅಸ್ತವ್ಯಸ್ತದ ತಲ್ಲಣವೇ ಸಾರಿ ಸಾರಿ ಡಂಗೂರ ಹೊಡೆಯುತ್ತಿತ್ತು. ಇದರ ನಡುವೆ ಜನಸಾಮಾನ್ಯರು ಹಾಗೂ ಆಸ್ತಿಪಾಸ್ತಿ ರಕ್ಷಣೆಗೆ ಸರಕಾರವು ಯಾವುದೇ ರೀತಿಯ ಕ್ರಮಕೈಕೊಳ್ಳದಿರುವುದು ಜನರನ್ನು ಸಿಟ್ಟಿಗೆಬ್ಬಿಸಿತ್ತು. ಆದರೆ ಜನರ ಸಿಟ್ಟು ತಣ್ಣಗಾಯಿತೇ ವಿನಃ ಆಲಸೀ ಸರ್ಕಾರವನ್ನು ಬಡಿದೆಚ್ಚರಿಸುವ ಕಾರ್ಯ ಮಾಡಲಿಲ್ಲ. ಈ ಮಧ್ಯೆ, ಮುಂದಿನ ದಿನಗಳಲ್ಲಿ ಭಾರೀ, ಮಳೆಯಾಗುವ ಸಾಧ್ಯತೆಯಿದೆ ಎಂಬ ಮುನ್ನೆಚ್ಚರಿಕೆಯ ಮಾತುಗಳೂ ಅಲ್ಲಲ್ಲಿ ಕೇಳಿಬರುತ್ತಿದ್ದವು.
ಇವೆಲ್ಲಾ ಆಗಿದ್ದು ಎರಡು ದಿನಗಳ ಹಿಂದೆ. ಗೌರೇನಹಳ್ಳಿ ಎಂಬ ಆ ಕಡೆ ಹಳ್ಳಿಯೂ ಎನ್ನಿಸಿಕೊಳ್ಳದ ನಗರದ ಜಾತಿಗೂ ಸೇರದ ಒಂದು ಊರಿನಲ್ಲಿ. ನಗರದ ಮಗ್ಗುಲಲ್ಲಿ ಮಲಗಿಕೊಂಡಿದ್ದರೂ ನಗರದ ಗುಣಗಳನ್ನು ಎರವಲು ಪಡೆಯಲು ಹೆಣಗಾಡುತ್ತಿದ್ದ ಒಂದು ಕೊಂಪೆಯಲ್ಲಿ. ಈ ಊರಿನ ಮುಖ್ಯ ರಸ್ತೆಯಲ್ಲಿ ಬಸ್ಸುಗಳ ಓಡಾಟವಿತ್ತು, ಆಗಾಲೇ ತಲೆ ಎತ್ತಿಕೊಂಡಿದ್ದ ಬೇಕರಿಗಳು, ದಿನಸಿ ಅಂಗಡಿಗಳ ಮೆರವಣಿಗೆಯ ಸಾಲುಗಳಿತ್ತು. ಹೋಟೆಲುಗಳ ವ್ಯವಸ್ಥೆಯು ಹಿಂದೆ ಬಿದ್ದಿರಲಿಲ್ಲ. ಮುಖ್ಯ ರಸ್ತೆಯ ಬಳಿಯಲ್ಲಿ ಕೆಲವು ಮೆಕ್ಯಾನಿಕ್ ಹಾರ್ಡ್‍ವೇರ್, ವೆಲ್ಡಿಂಗ್ ಅಂಗಡಿಗಳು ಸೆಟೆದು ನಿಂತಿದ್ದವು. ಊರನ್ನು ಸುತ್ತುವರಿದಿದ್ದ ಕೆಲ ಗಾರ್ಮೆಂಟ್ ಪ್ಯಾಕ್ಟರಿಗಳು ಊರಿನ ಹೆಣ್ಣುಮಕ್ಕಳಿಗೆ ಉದ್ಯೋಗ ನೀಡುವ ನೆಪದಲ್ಲಿ, ಆಗಲೇ ಮಿತಿಮೀರಿ ದುಡಿಸಿಕೊಳ್ಳಲು ಆರಂಭಿಸಿ ಗೋಮುಖ ವ್ಯಾಘ್ರಗಳಾಗಿದ್ದವು. ಆದರೆ ನಗರಗಳಲ್ಲಿರುವ ಅವಸರ ಇಲ್ಲಿನ ಜನರಲ್ಲಿ ಇನ್ನೂ ಮೈದೆಳೆದಿರಲಿಲ್ಲ. ಯಾಂತ್ರಿಕತೆ ಜನರಲ್ಲಿ ಇನ್ನೂ ಪ್ರವೇಶ ಗಿಟ್ಟಿಸಿಕೊಂಡಿರಲಿಲ್ಲ. ಆದರೂ ನಗರವೆಂಬ ಮಾಯೆಗೆ ಸ್ವಲ್ಪ ಸ್ವಲ್ಪವಾಗಿ ತನ್ನನ್ನೇ ಅರ್ಪಿಸಿಕೊಳ್ಳುವಂತಿತ್ತು ಈ ಹಳ್ಳಿ. ರಾಜಕೀಯವಾಗಿ ಸುತ್ತಮುತ್ತ ಹಳ್ಳಿಗಳಿಗಿಂತ ಒಂದು ಹೆಜ್ಜೆ ಮುಂದಿದ್ದ ಗೌರೇನಹಳ್ಳಿ ಕೆಲ ಪುಡಾರಿಗಳ ರಾಜಕೀಯ ಬಿತ್ತನೆಗೆ ಕೃಷಿಭೂಮಿಯಾದ ಹೆಗ್ಗಳಿಕೆ ಹೊಂದಿತ್ತು. ಅವಸರದಲೇ ತಲೆ ಎತ್ತುತಿದ್ದ ಕೆಲ ಕಾಂಕ್ರಿಟ್ ಮನೆಗಳು ಊರಿನ ಕಾಂಕ್ರಿಟೀಕರಣಕ್ಕೆ ಚಾಲನೆಕೊಟ್ಟ ಹಸಿರು ನಿಶಾನೆಯಂತೆ ಬಣ್ಣ ಬಣ್ಣಗಳಿಂದ ಕಂಗೊಳಿಸುತ್ತಿದ್ದವು.
ಇಂತಹ ಊರಿನಲ್ಲಿ ಬಡಕಲಾಗಿ ಹಣ್ಣು ಹಣ್ಣು ಮುದುಕಿಯಂತೆ ಬಾಗಿ ನಿಂತಿದ್ದೇ ಗೌರಮ್ಮಳ ಪ್ರೀತಿಯ ಮನೆ. ಇದರ ನಡುವೆ, ಅದನ್ನು ಗೂಡು ಎನ್ನಬೇಕೋ ಅಥವಾ ಮನೆ ಎನ್ನಬೇಕೋ ಎಂಬ ಗೊಂದಲದಲ್ಲಿದ್ದ ಊರಿನವರಿಗೆ ಕಾಂಕ್ರಿಟ್ ಮನೆಗಳ ಹಾವಳಿಯಲ್ಲಿ ಅದು ಗೂಡಾಗಿಯೇ ಕಾಣುತ್ತಿತ್ತು. ಊರ ಜನರಿಗೆ ಗೂಡಂತೆ ಕಾಣುವ, ಗೌರಮ್ಮಳ ಪ್ರೀತಿಯ ಮನೆಗಿದ್ದಿದ್ದು ಸಾದಾ ಎರಡು ಕೋಣೆಗಳು ಮಾತ್ರ. ಅವು ಅಡ್ಡಗೋಡೆ ಹಾಕಿದ್ದ ಗೆರೆಯಿಂದ ಇಬ್ಭಾಗಕೊಂಡು ಹಿಂಬದಿ ಮತ್ತು ಮುಂಬದಿ ಕೋಣೆಗಳಾಗಿದ್ದವು. ಮನೆಯ ಮುಂಬಾಗಿಲಿನ ಹಣೆನೇರಕ್ಕೆ ಪೂಜೆಮಾಡಿ ಬಟ್ಟೆಯಲ್ಲಿ ಕಟ್ಟಿ ನೇತು ಹಾಕಿದ ಒಂದು ತೆಂಗಿನಕಾಯಿ ಧೂಳಲ್ಲಿ ಮಿಂದು ತನ್ನ ಸ್ವರೂಪವನ್ನೇ ಕಳೆದುಕೊಂಡಿತ್ತು. ಮುಂಬಾಗಿಲಿನ ಎದುರಿಗಿದ್ದ ನೇರಗೋಡೆಯ ಮೇಲೆ ಒಂದು ಲಕ್ಷ್ಮಿ ಪೊಟೋ ನಿರ್ಲಕ್ಷ್ಯಕ್ಕೀಡಾಗಿ ಒಣಗಿದ ಹಾರ ಧರಿಸಿಕೊಂಡಿತ್ತಾದರೂ ಮನೆಗೆ ಸಿಂಧೂರದಂತಿತ್ತು. ಪುರಾತನ ವಸ್ತು ಸಂಗ್ರಹಾಲಯದಲ್ಲಿಡಲು ಯೋಗ್ಯವಾದ ಒಂದು ಹಳೇ ಟ್ರಂಕು ಅದೇ ಕೋಣೆಯ ಬಲ ಭಾಗದ ಒಂದು ಮೂಲೆಯಲ್ಲಿ ಬಚ್ಚಿಟ್ಟುಕೊಂಡು ಬಟ್ಟೆಬರಿ ಕಸಕಡ್ಡಿಗಳನ್ನು ತುಂಬಿಕೊಂಡಂತೆ ಕಂಡು ಬಂತು. ಜತೆಗೆ ಮನೆಯ ಹಿಂಭಾಗದ ಕೋಣೆಯ ಎಡಭಾಗದಲ್ಲಿ ಮಣ್ಣಿನ ಒಂದು ಒಲೆಯಿತ್ತಾದರೂ ಅದು ಅಡುಗೆಮನೆಯಂತೆ ಕಂಡುಬರಲಿಲ್ಲ. ಎರಡು ಮೂರು ಸಣ್ಣ ಪಾತ್ರೆ ಸಾಮಾನುಗಳನ್ನು ಬಿಟ್ಟರೆ ಆ ಕೋಣೆಯಲ್ಲಿ ಮತ್ತೇನೂ ಇರಲಿಲ್ಲ. ಇನ್ನು ಮನೆಯ ಸುಣ್ಣಬಣ್ಣದ ಬಗ್ಗೆ ಹೇಳದೇ ಇರುವುದು ಒಳ್ಳೆಯದೆನಿಸುತ್ತದೆ. ಇಂತಹ ಬಡಕಲು ಮನೆಯನ್ನು ಗೌರಮ್ಮ ತನ್ನ ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದುದು ಮಾತ್ರ ಜನರಿಗೆ ಯಕ್ಷಪ್ರಶ್ನೆಯಾಗಿತ್ತು.
“ಆ ಮುದಿ ಗೂಬೆಗೆ ಸರಿಯಾದ ಕೋಳಿಗೂಡು” ಹೀಗೆ ತಲೆಗೊಂದು ಮಾತನಾಡಿ ಅಣಗಿಸಿ ನಗುತ್ತಿದ್ದರು ಊರಿನವರು. ಕೆಲವರಂತೂ ಗೌರಮ್ಮಳ ಮನೆಗಿರುವ ವಿಶೇಷತೆಯ ತಡಕಾಟದಲ್ಲಿ ಸೋತು “ಆ ಗೌರಮ್ಮಂಗೆ ಸ್ವಲ್ಪ ತಿಕ್ಲು” ಎಂದು ತೀರ್ಪು ಕೊಟ್ಟುಬಿಟ್ಟಿದ್ದರು.
ಮೂರ್ನಾಲ್ಕು ವರ್ಷಗಳ ಹಿಂದೆ ತನ್ನ ಮೊದಲನೇ ಮಗ ಹೊಸಮನೆಯನ್ನು ಕಟ್ಟಿ ತನ್ನ ಮನೆಗೆ ಬಂದು ಸೇರಿಕೋ ಎಂದು ಕರೆದಾಗಲೂ, “ನನ್ ಪ್ರಾಣ ಓದ್ರೂ ಈ ಮನಿ ಬಿಡೊಲ್ಲಾ” ನಿಷ್ಠುರವಾಗಿ ಗೌರಮ್ಮ ತಿರಸ್ಕರಿಸಿದ್ದು ಊರವರ ಬಾಯಿಗೆ ಉಪ್ಪಿನಕಾಯಿ ಆಗಿತ್ತು.
“ಈ ಹುಚ್ಚು ಮಳೆ ಇಂಗೇ ಮುಂದುವರಿದ್ರೆ... ನನ್ ಮನೀ ಗತಿಯೇನು? ದೇವ್ರೆ ಈ ಹುಚ್ಚು ಮಳೆನಾ ನಿಲಿಸಪ್ಪ” ಎಂದು ಮನಸ್ಸಿನಲೇ ಮತ್ತೊಮ್ಮೆ ಬೇಡಿಕೊಳ್ಳುತ್ತಿದ್ದ ಗೌರಮ್ಮ ಕೂತೇ ಇದ್ದಳು. ಹಲವು ದಿನಗಳಿಂದ ಕಣ್ಣಾಮುಚ್ಚಾಲೆ ಆಡುತ್ತಿದ್ದ ಮಳೆರಾಯ ನಿಲ್ಲುವಂತೆ ಕಾಣಲಿಲ್ಲ. ಆಕಾಶಕ್ಕೆ ತೂತು ಬಿದ್ದಂತೆ ಧಪ ಧಪ ಎಂದು ಬೀಳುತ್ತಿದ್ದ ಒಂದೊಂದು ತೊಟ್ಟು ಗೌರಮ್ಮಳ ಆತಂಕವನ್ನು ಹೆಚ್ಚಿಸುತ್ತಿದ್ದವು.
ಈ ನಡುವೆ ಮೂರ್ನಾಲ್ಕು ದಿನಗಳಿಂದ ಒಂದೇ ಸಮನೆ ಧಾರಾಕಾರವಾಗಿ ಸುರಿಯುತ್ತಿದ್ದ ಉಗ್ರಪ್ರತಾಪಿ ಮಳೆಯ ಹೊಡೆತಕ್ಕೆ ಸಿಲುಕಿದ್ದ ಗೌರಮ್ಮಳ ಚಿಕ್ಕ ಚೊಕ್ಕ ಮಣ್ಣಿನ ನಿಶಕ್ತ ಮನೆಯ ಹಿಂಭಾಗ ಕುಸಿದು ಪೂರ್ತಿ ಮನೆ ಕುಸಿದು ಬೀಳುವ ಮುನ್ಸೂಚನೆ ನೀಡಿತ್ತು. ಮನೆಯ ಬಲಬದಿಯ ಗೋಡೆಯಂತೂ ಮಳೆಯಲ್ಲಿ ಸಂಪೂರ್ಣ ತೊಯ್ದು ಶಿಥಿಲಗೊಂಡು, ನೆಲವನ್ನು ಕಚ್ಚಿಕೊಳ್ಳುವುದರಲ್ಲಿತ್ತು. ತಕ್ಷಣ ಮನೆಯ ರಿಪೇರಿಯ ಕೆಲಸ ಆಗಲೇಬೇಕಾಗಿತ್ತು.
“ಏನಾದ್ರು ಮಾಡಿ ನನ್ನ ಮನೀನ ಉಳಿಸಿಕೊಡಪ್ಪ” ಎಂದು ಗೋಗರೆಯುತ್ತಿದ್ದ ಗೌರಮ್ಮಳಿಗೆ
“ನಿನ್ನ ಮನೆಯ ರಿಪೇರಿಗೆ ಐದ್ರಿಂದ ಹತ್ತು ಸಾವಿರ ರೆಡಿ ಮಾಡ್ಕೊಂಡ್….ನನ್ನ ಕರಿ”
ಕಡ್ಡಿ ಮುರಿದಂಗೆ ಗಾರೆಯವ ಹೇಳ್ಬಿಟ್ಟಿದ್ದ. ಕೂಲಿ ಮಾಡಿ ಬದುಕುತ್ತಿದ್ದ ಗೌರಮ್ಮಳಿಗೆ ಅಷ್ಟು ಹಣವಾದರೂ ಎಲ್ಲಿಂದ ಬರಬೇಕು. ಗಂಡ ಮತ್ತು ತಾನು ಕೂಡಿಸಿಟ್ಟಿದ ದುಡ್ಡು ಆಗಲೇ ಗಂಡನ ಅಸ್ಪತ್ರೆ ಖರ್ಚು, ಅಂತ್ಯಕ್ರಿಯೆಗಂತ ಖರ್ಚಾಗಿ ಗೌರಮ್ಮ ಬರಿಗೈಯಲ್ಲಿದ್ದಳು. ಈ ಕಡೆ, ಇಳೀ ವಯಸ್ಸಿನಲ್ಲಿದ್ದ ಗೌರಮ್ಮಳಗೆ ಯಾರು ತಾನೇ ಸಾಲ ಕೊಟ್ಟಾರು? ಆಕಾಶಕ್ಕೆ ಏಣಿ ಹಾಕುವ ಪ್ರಯತ್ನವಾದರೂ ಗೌರಮ್ಮ ಧೃತಿಗೆಟ್ಟಿರಲ್ಲಿಲ್ಲ. ತನ್ನ ಮನೆಯ ರಕ್ಷಣೆಗೆ ಕೈಯೊಡ್ಡುವ ಸಾಧ್ಯತೆಗಳ ಬಗ್ಗೆ ಲೆಕ್ಕಹಾಕುತ್ತಿದಳು.
ಪ್ರತಿ ಮಂಗಳವಾರ ನಡೆಯುತ್ತಿದ್ದ ಉಳಿತಾಯ ಸಂಘದ ನೆನಪಾಗಿ “ಇವತ್ತು ಏನಾದ್ರೂ ಮಾಡಿ ಸಂಘದಿಂದ ಸಾಲ ಕೇಳ್ಲೇ ಬೇಕು… ಇಲ್ದೆದ್ರೆ ನನ್ ಮನೆ ಉಳಿಯೊದಿಲ್ಲ” ಹೊತ್ತು ಮೀರಿದ್ದರೂ ಸಂಕಲ್ಪ ಹೊತ್ತು ಸಂಘದ ಮನೆ ಕಡೆಗೆ ದೌಡಾಯಿಸಿದಳು.
ಮಳೆರಾಯನ ಕಣ್ಣುಮುಚ್ಚಾಲೆ ಆಟ ಇನ್ನೂ ಮುಗಿದಿರಲಿಲ್ಲ, ಮಳೆಯ ವೇಗ ಇಳಿಮುಖವಾಗಿದ್ದರೂ ಪಟ ಪಟ ಹನಿ ಬೀಳುತ್ತಲೇ ಇತ್ತು. ಆದರೂ ಮಳೆಯ ಜಪದಲ್ಲೇ ಸಂಘದ ಮನೆ ಕಡೆಗೆ ಹೆಜ್ಜೆ ಹಾಕಿದ ಅವಳು ದೇಹವನ್ನೇ ಬಿಟ್ಟ ಆತ್ಮದಂತೆ ಕಂಡಳು. ಅವಳ ಸೆರಗು ಇರಬೇಕಾದಲ್ಲಿ ಇರಲಿಲ್ಲ. ಕೆದರಿದ ತಲೆಕೂದಲು. ಬಾಡಿದ ಮುಖ. ದೃಢತೆಯನ್ನು ಕಳೆದುಕೊಂಡಿದ್ದ ಅವಳ ಹೆಜ್ಜೆಗಳಲ್ಲಿ ಬಿರುಸಿತ್ತಾದರೂ ಮನದಲ್ಲಿದ್ದ ಅವಳ ಆತಂಕ, ನೋವು ನಡೆಯಲ್ಲಿ ಕಾಣುತ್ತಿದ್ದವು. ತನ್ನ ಮನೆಯಿಂದ ಸುಮಾರು ಒಂದು ಕಿಲೊಮೀಟರು ದೂರದಲ್ಲಿದ್ದ ಸಂಘದ ಮನೆಗೆ ಕೆಸರ ಗುಂಡಿ ಹೊಂಡ ಎಂದು ತಲೆಕೆಡಿಸಿಕೊಳ್ಳದೆ ಮುನ್ನುಗ್ಗುತ್ತಿದ್ದ ಗೌರಮ್ಮಳ ನಡೆ ಕೀಲು ಕೊಟ್ಟ ಗೊಂಬೆಯಂತಿತ್ತು.
ಗೌರಮ್ಮಳಿಗೆ ಆ ಮನೆ ಕಲ್ಲುಮಣ್ಣಿನಿಂದ ಕಟ್ಟಿದ ನಿರ್ಜೀವ ಕಟ್ಟಡವಾಗಿರಲಿಲ್ಲ. ಗಂಡ ಮಕ್ಕಳ ನೆನೆಪುಗಳು ಸಾಲುಗಟ್ಟಿ ಬೆಚ್ಚನೆ ಕೂತುಬಿಟ್ಟ ಆಪ್ತ ಖನಿಯೇ ಅದಾಗಿತ್ತು. ಆ ಮನೆ ದಾಂಪತ್ಯ ಜೀವನದ ಪ್ರತಿಯೊಂದು ಹೆಜ್ಜೆಗಳನ್ನು ದಾಖಲಿಸಿದ ಬದುಕಿನ ಗ್ರಂಥಾಲಯವೇ ಏನೋ ಎಂಬುವಂತಿತ್ತು. ಗಂಡನ ಪ್ರೀತಿಯ ಮಾತುಗಳನ್ನು, ತನ್ನ ಮಕ್ಕಳ ಅಕ್ಕರೆಯ ನಗು ಅಳಲು ತೊದಲು ಮಾತುಗಳು ಪ್ರತಿಧ್ವನಿಸುವ ಒಲವಿನ ಕನವರಿಕೆಗಳನ್ನೇ ತುಂಬಿಕೊಂಡಿದ್ದ ಆ ಮನೆ ಗೌರಮ್ಮಳಿಗೆ ಒಂದು ವಿಸ್ಮಯ ಜಗತ್ತಾಗಿತ್ತು. ತಮ್ಮ ಮಕ್ಕಳ ಹೊಳಪಿನ ಭವಿಷ್ಯಕ್ಕೆ ಯೋಜನೆಗಳನ್ನು ನೇಯಿಸಿದ ಮುದ್ದಿನ ಗೂಡಾಗಿದ್ದಲ್ಲದೆ, ದನ ಕರುಗಳಿಗೆ, ಹೆಂಚುಗಳ ಸಂದುಗಳಲ್ಲಿ ಆಗಾಗ ನುಸುಳುತ್ತಿದ್ದ ಬೆಕ್ಕು, ’ಮೇ” ಎಂದು ಅರುಚಿಕೊಳ್ಳುತ್ತಿದ್ದ ಕುರಿಮೇಕೆಗಳಿಗೆ, ಮನೆಯ ಅಲಾರಂ ಗಡಿಯಾರಗಳಾಗಿದ್ದ ಕೋಳಿಗಳಿಗೆ ಸೂರನ್ನು ಒದಗಿಸಿ ಸಹಬಾಳ್ವೆ ಮಾಡಿಸಿದ ಆತ್ಮೀಯ ಭಾವವೇ ಅದಾಗಿತ್ತು. ಆದ್ದರಿಂದ ತನ್ನ ಮುರುಕು ಮನೆಯನ್ನು ಕಳೆದುಕೊಳ್ಳುವುದೆಂದರೆ, ತನ್ನ ಬದುಕಿನ ಭವ್ಯ ಇತಿಹಾಸವನ್ನೆ ಕಳೆದುಕೊಳ್ಳುವುದಾಗಿತ್ತು. ಬದುಕಿನ ಮಧುರ ಕ್ಷಣಗಳನ್ನು ನೆನಪಿಸುವ ಕನ್ನಡಿಯನ್ನೇ ಚೂರು ಚೂರು ಮಾಡಿಬಿಡುವಂತಾಗಿತ್ತು.
ಒಂದು ಕಾಲದಲ್ಲಿ ಬಾಡಿಗೆ ಮನೆಗಳ ಒಡತಿಯರು ಸಣ್ಣಪುಟ್ಟ ಕಾರಣಗಳಿಗೆಲ್ಲಾ ನೀಡುತ್ತಿದ್ದ ಉಗ್ರ ಹಿಂಸೆಗಳಿಂದ ಬೇಸತ್ತು ಬಾಡಿಗೆ ಮನೆಯೆಂದರೆ ವಾಕರಿಕೆ ಹುಟ್ಟುವಂತಾಗಿದ್ದ ಸಂದರ್ಭದಲ್ಲಿ ಹಠಕ್ಕೆ ಬಿದ್ದು ಗಂಡನನ್ನು ಹಿಂಸಿಸಿ ಬಹು ಆಸೆಯಿಂದ ಕಟ್ಟಿಕೊಂಡ ಸೂರಾಗಿತ್ತು. ಮನೆಕಟ್ಟಲು ಆರಂಭಿಸಿದ್ದಾಗ, ಬಿಟ್ಟಿ ಬಿಟ್ಟಿ ಸಲಹೆ ಸೂಚನೆಗಳನ್ನು ಕೊಡಲು ಬರುವವರ ಮುಂದೆ ಜಂಬದ ಬಾಯಿಂದ ಮನೆ ಬಗ್ಗೆ ಹೇಳುತ್ತಿದ್ದಳು. “ಗೌರಮ್ಮ ಮನೆಕಟ್ಟುತಾಳ?” ಎಂದು ಮೂಗುಮುರಿದು ಚುಚ್ಚಿ ಮಾತನಾಡುತ್ತಿದ್ದ ಜನರಿಗೆ ಮನೆಯನ್ನು ಕಟ್ಟಿ ಉತ್ತರಿಸಿದ್ದಳು. ಮನೆ ಕಟ್ಟಬೇಕೆಂಬ ಗೌರಮ್ಮಳ ಕನಸು ಮೂರ್ತವಾದಾಗ ಅವಳಿಗದು ಆಸೆ, ಸಂಭ್ರಮ, ದುಗುಡ, ಹತಾಶೆ, ಅತಂಕ ತುಂಬಿಕೊಂಡ ಒಂದು ಸಂಸಾರದಂತೆ ಕಂಡು ಬಂತು. ಕೆಳಮನೆ ರಾಜಣ್ಣ, ಗೌರಮ್ಮ ಎಂಬ ಒಂದು ವಿಳಾಸ ಕೊಟ್ಟಿದ್ದಲ್ಲದೆ, ಊರಿನಲ್ಲಿ ಅವರ ವಾಸ್ತವ್ಯವನ್ನು ಸ್ಥಿರೀಕರಣಗೊಳಿಸಿ, ಊರಿನ ಜನರ ಕಣ್ಣು ಬಾಯಿಗಳನ್ನು ಅವರತ್ತ ಸೆಳೆದಿದ್ದೇ ಈ ಮನೆ. ಮನೆ ಕಟ್ಟಿದ ಹೊಸದರಲ್ಲಿ ಊರಿನ ಕೆಲ ಮಂದಿ ಮನೆಯನ್ನು ನೋಡಿ ಹೊಟ್ಟಿಕಿಚ್ಚು ಪಟ್ಟಿದ್ದು ಗೌರಮ್ಮಳ ಗಮನಕ್ಕೆ ಬಾರದೆ ಇರಲಿಲ್ಲ. ಇಂತಹ ಭವ್ಯ ಪರಂಪರೆಯ ಮನೆಯನ್ನು ನೆಲಸಮ ಮಾಡಿಬಿಡಬೇಕು ಎಂಬ ಹಠಕ್ಕೆ ಬಿದ್ದಂತೆ ಮಳೆ ಧೋ ಎಂದು ಸುರಿಯುತ್ತಿತ್ತು.
ದಿನಪತ್ರಿಕೆಯ ಹಣೆಬರಗಳಂತಿದ್ದ “ಒಗ್ಗಟ್ಟಿನಲ್ಲಿ ಬಲವಿದೆ” “’ಸ್ವಾಲಂಬನೆ ನಮ್ಮ ಗುರಿ” ಎಂಬ ವಾಕ್ಯಗಳು ಗೋಡೆಯ ಮೇಲೆ ಭದ್ರಸ್ಥಾನ ಗಿಟ್ಟಿಸಿಕೊಂಡಿದ್ದ ಗಾಂಧಿ, ಅಂಬೇಡ್ಕರರ ಭಾವಚಿತ್ರಗಳ ಮಧ್ಯೆ ರಾರಾಜಿಸುತ್ತಿದ್ದವು. ಸಂಘವು ಸಮಯಕ್ಕೆ ಸರಿಯಾಗಿ ಪ್ರಾರಂಭಗೊಂಡಿತ್ತು. ಸಂಪ್ರದಾಯಿಕವಾಗಿ ಹೇಳುತ್ತಿದ್ದ ಪ್ರಾರ್ಥನೆಯ ಪಠನ ಮುಗಿದಿತ್ತು. ಉಳಿತಾಯ ಹಣದ ಜಮಾವಣೆ ಕಾರ್ಯ ಆರಂಭವಾಗಿತ್ತು. ಗಾಂಧಿ ಮತ್ತು ಅಂಬೇಡ್ಕರುಗಳ ಪೋಟೋಗಳ ಅಭಿಮುಖರಾಗಿ ಎರಡು ಸಾಲುಗಳಲ್ಲಿ ಕೋಣೆಯ ಕೇಂದ್ರಭಾಗದಲ್ಲಿ ಕುಳಿತಿದ್ದ ಹೆಂಗಸರು ಒಬ್ಬೊಬ್ಬರಾಗಿ ಪಾಸ್ ಪುಸ್ತಕಗಳನ್ನು ಹಿಡಿದು ಸಂಘಟಕರ ಬಳಿಗೆ ಬಂದು ಹಣ ಜಮಾವಣೆ ಮಾಡುತ್ತಿದ್ದರು. ಕೆಲ ಮಹಿಳೆಯರು ’ನಿಶ್ಯಬ್ದ’ ಎಂಬ ನಿಯಮಕ್ಕೆ ಹೆದರಿ ಪಿಸ ಪಿಸ ಎಂದು ದನಿ ತಗ್ಗಿಸಿ ಮಾತನಾಡುತ್ತಿದ್ದರು. ತಡವಾದರೂ ಹಠಾತ್ತಾಗಿ ಬಂದ ಗೌರಮ್ಮಳಿಗೆ ಬಾಗಿಲಿರಲಿ ಇಡೀ ಸಂಘವೇ ನಡುಗಿದಂತೆ ಕಂಡುಬಂತು. ಸಾಲಿನಲ್ಲಿ ಕುಳಿತುಕೊಳ್ಳುವ ಗೋಜಿಗೆ ಹೋಗದ ಗೌರಮ್ಮ ಕೋಣೆಯ ಮುಂಬಾಗಿಲು ಬಳಿಯಿಂದಲೇ “ನನ್ ಮನಿ ಮಳೆಗೆ ಬಿದೋಗ್ತಾ ಇದೆ… ಮನಿ ರಿಪೇರಿಗೆ ಸ್ವಲ್ಪ ಸಾಲ ಬೇಕು… ವಾರದಂಗೆ ಅಲ್ಪ ಸ್ವಲ್ಪ ಕಟ್ಟಿ ತೀರ್ಸುಬಿಡ್ತೀನಿ” ಎನ್ನುತ್ತಾ ಕೀರಲು ದನಿಯಿಂದ ಹೇಳಿದ ಮಾತು ಕೋಣೆಯನ್ನು ತುಂಬಿಕೊಂಡಿತ್ತು. ಒಮ್ಮೆಲೇ ಕೋಣೆಯಲ್ಲಿ ಮೌನ ಆವರಿಸಿತ್ತು. ಗೌರಮ್ಮಳಿಗೆ ಸಾಲ ಕೊಡಬೇಕೋ ಬೇಡವೋ ಎಂಬ ಲೆಕ್ಕಾಚಾರ ಬರಮಾಡಿಕೊಂಡಿದ್ದ ಮೌನ ಅದಾಗಿತ್ತು.
ಪ್ರಾಯಶಃ ಗೌರಮ್ಮಳ ಅಳಲು ಮಹಿಳೆಯರ ಸಂಘದ ವಿಶ್ವಾಸ ಗಳಿಸಿದಂತೆ ಕಾಣಲಿಲ್ಲ. “ಮೊದಲು ನೀನು ತೆಗೆದುಕೊಂಡಿರುವ ಸಾಲವನ್ನು ತೀರಿಸಿ ಆಮೇಲೆ ನೀನು ಲೋನ್ ಪಡೆಯಬಹುದು” ಸಂಘದ ಅಧ್ಯಕ್ಷರು ಹೇಳುತ್ತಿದ್ದಂತೆ, “ಕಷ್ಟ ಕಾಲ್ದಾಗೆ ಆಗದ ನಿಮ್ಮ ಸಂಗ ಎಂತ ಸಂಗ… ನಿಮ್ ಸಂಗನ್ನೂ ಬೇಡ… ನಿಮ್ಮ ಸಾಲಾನೂ ಬೇಡ..” ಭ್ರಮನಿರಸನಗೊಂಡ ಗೌರಮ್ಮ ಸಂಘ ಮನೆಯಿಂದ ರೌದ್ರಾವೇಶದಿಂದ ಹೊರಬಂದು ಮನೆಯ ಕಡೆ ಹೆಜ್ಜೆ ಹಾಕಿದಳು. “ಎಲ್ಲರಿಗಾಗಿ ಒಬ್ಬರು ಒಬ್ಬರಿಗಾಗಿ ಎಲ್ಲರು” ಎಂಬ ಧ್ಯೇಯಹೊತ್ತು ಹುಟ್ಟಿಕೊಂಡಿದ್ದ ಸಂಘವು ಕೂಡ ಗೌರಮ್ಮಳ ಆರ್ತನಾದವನ್ನು ಗ್ರಹಿಸಿಕೊಳ್ಳಲಿಲ್ಲ.
“ತನ್ನ ಮನೆಯ ರಿಪೇರಿ ಮಾಡಿಕೊಡಲು ತನ್ನ ಹಿರಿಮಗ ಶಂಕರಪ್ಪನನ್ನು ಹೇಗಾದರೂ ಮಾಡಿ ಒಪ್ಪಿಸಲೇಬೇಕು” ಎಂಬ ಸಂಕಲ್ಪ ಹೊತ್ತು ಶಂಕರಪ್ಪನ ಮನೆಯ ಕಡೆ ಹೆಜ್ಜೆ ಹಾಕಿದಳು ಗೌರಮ್ಮ. ಕೊನೆ ಪ್ರಯತ್ನ ಫಲ ನೀಡುತ್ತೋ ಇಲ್ಲವೋ ಎಂಬ ಗೊಂದಲದಲೇ ಶಂಕರಪ್ಪನ ಮನೆ ಮುಟ್ಟಿದಳು. ಅಯ್ಯಪ್ಪ ಸ್ವಾಮಿ ಮಾಲೆ ಹಾಕಿದ್ದರಿಂದ ಶಂಕರಣ್ಣ ರಾತ್ರಿ ನಡೆಬೇಕಾಗಿದ್ದ ಭಜನೆಯ ಕಾರ್ಯಕ್ರಮಕ್ಕೆ ಸಿದ್ಧಗೊಳ್ಳುತ್ತಿದ್ದ. ಹೆಂಡತಿ ಕೋಣೆಮನೆಯಲ್ಲಿದ್ದಳು. ಮಕ್ಕಳು ತಮ್ಮ ಪುಸ್ತಕಗಳನ್ನು ಹರಡಿಕೊಂಡು ಮಧ್ಯ ಕೋಣೆಯಲ್ಲಿ ಕುಳಿತಿದ್ದರು. ಒಮ್ಮೆಲೇ ಮನೆಯೊಳಗೆ ನುಗ್ಗಿದ ಗೌರಮ್ಮಳ ಕಣ್ಣುಗಳು ತಡಕಾಡಿದ್ದು ಶಂಕ್ರಣ್ಣನ್ನ. ಕಾಣಬೇಕಾಗಿದ್ದು ಕಂಡು ಶಾಂತವಾದ ಗೌರಮ್ಮಳ ಕಣ್ಣುಗಳು ಶಂಕ್ರಣ್ಣನ ಮೇಲೆ ನೆಟ್ಟವು.
“ಏ ಮಗಾ ಮನಿ ಕುಸಿಯುತ್ತಿದೆ, ಏನಾದ್ರು ಮಾಡಿ ಒಂಚೂರು ಆ ಮನಿ ರಿಪೇರಿ ಮಾಡ್ಸೋ.. ನಿನ್ ದಮ್ಮಯ್ಯ“ ಗೌರಮ್ಮ ಗೋಗರೆದಳು.
ಆ ಮನೆ ಬಿಟ್ಟು ನನ್ ಮನೆಗೆ ಬಂದು ಸೇರ್ಕೋ ಅಂತಾ ಎಷ್ಟು ಸಲ ಹೇಳೋದ್… ನನ್ ಮಾತ್ ಎಲ್ಲಿ ಕೇಳ್ತೀಯ.. ಆ ಮುರುಕು ಮನೆಯಲ್ಲಿ ಏನಿದೆ ಅಂತಾ?” ಎಂದು ಶಂಕ್ರಣ್ಣ ಕೂಗಾಡಿದ. ಕೂಗಾಟಕ್ಕೆ ಶಂಕ್ರಣ್ಣನ ಹೆಂಡತಿ ಕೋಣೆಮನೆ ಬಿಟ್ಟು ಶಂಕ್ರಣ್ಣನಿದ್ದ ಕಡೆ ಓಡಿಬಂದಳು. ಮಕ್ಕಳ ಕಣ್ಣುಗಳು ಪುಸ್ತಕಗಳ ಕಡೆಯಿಂದ ಶಂಕ್ರಣ್ಣ ಮತ್ತು ಗೌರಮ್ಮರ ಕಡೆ ವಾಲಿದವು.
“ಲೋ ಆಗಲ್ಲ ಕಣೋ.”
“ನಿನ್ ಪುರಾಣ ಸಾಕು… ನಾಳೆ ನಾನು ಅಯ್ಯಪ್ಪ ಸ್ವಾಮಿಗೆ ಹೋಗುತ್ತಿದೇನೆ.. ನಾನು ವಾಪಸ್ಸು ಬಂದ್ಮೇಲೆ ನೋಡ್ತೀನಿ..” ಎಂಬ ಶಂಕ್ರಣ್ಣನ ಮಾತು ಗೌರಮ್ಮಳ ಕಿವಿಗೆ ಬೀಳುತ್ತಿದ್ದಂತೆ, “ಲೋ ಈ ಹುಚ್ಚು ಮಳೆಗೆ ನಮ್ಮ ಮನೆ ಉಳೀತದಾ.. ಅಯ್ಯಪ್ಪಗೆ ಇನ್ನೊಂದು ವರ್ಷ ಹೋದ್ರೆ ಆಯಿತು… ಏನಾದರೂ ಮಾಡಿ.. ಮನೆ ಉಳಿಸಿ ಕೊಡೋ…”
ಗೌರಮ್ಮಳ ಕಳಕಳಿಯ ಮಾತುಗಳು ಬಂಡೆ ಮೇಲೆ ನೀರುಬಿದ್ದಂತೆ ಶಂಕ್ರಣ್ಣನನ್ನ ಮನದ ಬಂಡೆಯನ್ನು ಮುಟ್ಟದೆ ಸರಸರವೆಂದು ಹರಿದೋಯ್ತು. ಶಂಕ್ರಣ್ಣ ರಿಯಲ್ ಎಸ್ಟೇಟ್ ದಂಧೆಗೆ ಇಳಿದಿದ್ದ. ಜತೆಗೆ ನಗರದಿಂದ ಮದ್ಯದ ಬಾಟಲುಗಳನ್ನು ತಂದು ದುಪ್ಪಟ್ಟು ಬೆಲೆಗೆ ಮಾರಿ ಅಲ್ಪಸ್ವಲ್ಪ ದುಡ್ಡು ಕೂಡ ಮಾಡಿಕೊಂಡಿದ್ದ. ಹೀಗೆ ನಾನಾ ವೃತ್ತಿಗಳ ಕಲಾಸೆಗಳಿಂದ ಸಂಪಾದಿಸಿಕೊಂಡಿದ್ದ ದುಡ್ಡಿನಲ್ಲೇ ಒಂದು ದೊಡ್ಡ ಮನೆಯನ್ನು ಸಹ ಕಟ್ಟಿಸಿಕೊಂಡಿದ್ದ.
ಗೌರಮ್ಮಳ ಇನ್ನೊಬ್ಬ ಮಗ ಕುಳ್ಳ. ಹೆಸರು ರಮೇಶ ಅಂತಿದ್ದರೂ ಅವನ ಗಿಡ್ಡ ದೇಹವನ್ನು ಕಂಡು ಊರಿಗೆ ಊರೇ ಅವನನ್ನು ಕುಳ್ಳ ಎಂದು ಕರೆಯುತ್ತಿತು. ಅವನು ಅಪ್ರಾಪ್ತ ಹುಡುಗಿಯನ್ನು ಪ್ರೀತಿಸಿ ಅವಳೊಂದಿಗೆ ಕದ್ದೋಡಿ ಮದುವೆ ಮಾಡಿಕೊಂಡಿದ್ದ. ವೃತ್ತಿಯಲ್ಲಿ ಗೌಂಡಿ ಕೆಲಸ ಮಾಡುತ್ತಿದ್ದ ಕುಳ್ಳ ಸರಿಯಾಗಿ ಕೆಲಸಕ್ಕೆ ಹೋಗಿದ್ದಿದ್ದರೆ ಒಂದು ಸ್ವಂತ ಮನೆಯನ್ನು ಕಟ್ಟಿಕೊಳ್ಳಬಹುದಾಗಿತ್ತು. ಆದರೆ ಹಾಗಾಗಲಿಲ್ಲ. ಕುಳ್ಳ ಒಂದು ದಿನದ ಕೆಲಸಕ್ಕೆ ಹೋದರೆ ಮೂರುದಿನ ಮನಯಲ್ಲಿ ಕೂತು ಸಿಕ್ಕಾಪಟ್ಟೆ ಕುಡಿಯುತ್ತಿದ್ದ. ಕುಡಿತವನ್ನು ಚಟವಾಗಿಸಿಕೊಂಡಿದ್ದ ಕುಳ್ಳ ಮನೆ ಬಾಡಿಗೆ ಕಟ್ಟಲಾಗದೆ ಹೆಂಡತಿ ಮತ್ತು ಮಗುವಿನ ಜತೆ ಗೌರಮ್ಮಳ ಮನೆ ಸೇರಿಕೊಂಡಿದ್ದ. ಅದೇ ಕುಳ್ಳ ಸುರಿಯುತ್ತಿರುವ ಹುಚ್ಚು ಮಳೆಗೆ ಮನೆ ಕುಸಿಯುವುದೆಂದು ಗೊತ್ತಾಗಿ ರಾತ್ರೋರಾತ್ರಿ ಹೆಂಡತಿ, ಮಗುವಿನ ಜತೆ ಗಂಟುಮೂಟ್ಟೆ ಕಟ್ಟಿಕೊಂಡು ಗೌರಮ್ಮಳನ್ನು ನಡುನೀರಿನಲ್ಲಿ ಬಿಟ್ಟು ಮನೆಯಿಂದ ಓಟ ಕಿತ್ತಿದ್ದ.
ಗೌರಮ್ಮಳ ಮನೆಯ ಅಸ್ತಿತ್ವಕ್ಕೆ ಗಂಡಾಂತರ ಬಂದಿದ್ದು ಇದೇ ಮೊದಲ ಸಲವಲ್ಲ. ಬೃಹತ್ತಾದ ಸ್ಟಾರ್ ಅಪಾರ್ಟಮೆಂಟ್‍ನ ಮೂಲದಾರಿಯನ್ನು ಸೊಟ್ಟಾಗಾಗಿಸಿ, ನೇರದಾರಿಗೆ ಅಡ್ಡಗಾಲಾಗಿದ್ದ ಗೌರಮ್ಮಳ ಮನೆಯ ಖರೀದಿಗೆ ಮಾತುಕತೆ ನಡೆದಿತ್ತು. ಮಾರುಕಟ್ಟೆ ಬೆಲೆಗಿಂತ ದುಬಾರಿ ಬೆಲೆ ಕೊಟ್ಟು ಮನೆಯನ್ನು ಕೊಂಡುಕೊಳ್ಳಲು ಗೌರಮ್ಮಳ ಬೆನ್ನು ಹತ್ತಿದ ಅಪಾರ್ಟಮೆಂಟಿನ ಮಾಲೀಕನಿಗೆ, “ನಿಮ್ ಮನಿ ದಾರಿಗೊಸ್ಕರ ನಮ್ ಮನಿ ಕೆಡವಬೇಕಾ… ನನ್ ಜೀವ ಇರೋತನಕ ಇದ್ರ ಆಸೆ ಬಿಟ್‍ಬುಡಿ” ಎಂದು ಬಾಣ ಬಿಟ್ಟಾಗೆ ಮಾತಾಡಿ ಓಡಿಸಿದ್ದಳು.
ಈಗ ಏನು ಮಾಡುವುದೆಂದು ತೋಚದೆ ಮಂಕಾಗಿಬಿಟ್ಟಿದ್ದ ಗೌರಮ್ಮಳ ಮನಸ್ಸು ಮಾತ್ರ ಮನೆಯನ್ನು ಕಳೆದುಕೊಳ್ಳಲು ಸುತರಾಂ ಒಪ್ಪಲಿಲ್ಲ. ಕೊನೆಗೆ, ತನ್ನ ಮನೆಯನ್ನು ಉಳಿಸಿಕೊಳ್ಳುವ ಆಸೆಯನ್ನು ಜೀವಂತವಾಗಿಸಲು ಗೌರಮ್ಮ ಹೋಗಿದ್ದು ಊರಿನ ಚೇರ್ಮನ್ ಮನೆಗೆ.
ಪಕ್ಷದ ಕಚೇರಿಯಂತಿದ್ದ ಮನೆಯ ಮುಂಭಾಗದ ಕೋಣೆಯಲ್ಲಿ ಊರಿನ ಚೇರ್ಮನ್ ನಾಲ್ಕೈದು ಹೊಗಳುಭಟ್ಟರೊಂದಿಗೆ ಮಾತಿಗಿಳಿದಿದ್ದ. ಹೋಟೆಲಿಂದ ತರಿಸಿದ ಟೀ ಲೋಟಗಳು ಖಾಲಿಯಾಗಿ ಅಲ್ಲಲ್ಲಿ ಅನಾಥವಾಗಿ ಬಿದ್ದಿದ್ದವು. ಬೀಡಿಗಳ ಬೂದಿ ಮನೆಯೆಲ್ಲಾ ಹರಡಿಕೊಂಡಿದ್ದವು. ತರತರ ಭಂಗಿಗಳಿಂದ ಕೂಡಿದ ಪಕ್ಷದ ವರಿಷ್ಠರ ಭಾವಚಿತ್ರಗಳು ಕೋಣೆಯ ಗೋಡೆಯ ಮೇಲೆ ವಿರಾಜಿಸಿದ್ದವು.
ಆವೇಶದ ಮುಖ ಹೊತ್ತು ತನ್ನ ಮುಂದೆ ಪ್ರತ್ಯಕ್ಷಳಾದ ಗೌರಮ್ಮಳ ಕಂಡು ಅಲ್ಪಸ್ವಲ್ಪ ಗಲಿಬಿಲಿಗೊಂಡಂತೆ ಕಂಡರೂ ತೋರಿಸಿಕೊಳ್ಳದೆ ಹಲ್ಲುಗಳ ತೋರಿಸುತ್ತಾ, “ಏನು ಗೌರಮ್ಮ ಏನು ಸಮಾಚಾರ” ಕೃತಕವಾಗಿದ್ದರೂ ಅವನ ಪ್ರಶ್ನೆ ವಿನಯವಾಗಿತ್ತು.
“ಸ್ವಾಮೀ, ಏನಾದರೂ ಮಾಡಿ ನನ್ನ ಮನೆಯನ್ನು ಉಳ್ಸಿಕೊಡಿ.. ಈ ದರಿದ್ರ ಮಳೆಗೆ ನನ್ನ ಮನೆ ಅಗೋ ಇಗೋ ಅನ್ತಾ ಇದೆ” ಎಂದು ವಿನಂತಿಸುತ್ತಿದ್ದಂತೆ, ತಲೆ ಕೆರೆದುಕೊಳ್ಳಲು ಪ್ರಾರಂಭಿಸಿದ ಚೇರ್ಮನ್.
“ಈಗ ನಾನು ಪಂಚಾಯಿತಿ ಎಲೆಕ್ಷನಲ್ಲಿ ಬ್ಯುಸಿ ಇದ್ದೀನಿ.. ಎಲೆಕ್ಷನ್ ಮುಗಿದ ನಂತ್ರ ಮನೆನಾ ನಾನೇ ನಿಂತು ರಿಪೇರಿ ಮಾಡಿಸಿಕೊಡುತ್ತೀನಿ ಭಯ ಪಡಬೇಡ” ಎಂದು ಆತ ರಾಜಕಾರಣಿಯ ಶೈಲಿಯಲ್ಲೇ ಭರವಸೆಯನ್ನು ಕೊಡುತ್ತಿದ್ದಂತೆ, ಮನೆಯ ಮುಂದೆ ಯಾರದೋ ಕಾರು ಬಂದ ಸಪ್ಪಳವಾಯಿತು.
“ಈಗ ನಾನು ಇನ್ನೊಂದು ಹಳ್ಳಿಗೆ ಹೋಗ್ಬೇಕು … ಬರ್ತಿನಿ ಗೌರಮ್ಮ” ಹನುಮನ ಬಾಲದಂತಿದ್ದ ತನ್ನ ಬೆಂಬಲಿಗರ ಜೊತೆಗೂಡಿ ಅವನು ಮನೆಯಿಂದ ಹೊರನಡೆದ.
“ಅಲ್ಲಿ ತನ್ಕ ನನ್ ಮನೆ ಉಳಿಯೊಲ್ಲ” ಚುನಾವಣೆಯ ಸಂದರ್ಭದಲ್ಲಿ ಸಾಮಾನ್ಯ ಜನರ ಆಶೋತ್ತರಗಳಿಗೆ ತೆರೆದುಕೊಳ್ಳುವ ಚೇರ್ಮನ್ನನ ಕಿವಿಗಳಿಗೆ ಗೌರಮ್ಮ ಆಡಿದ ಮಾತು ಕೇಳಲೇ ಇಲ್ಲ. ಅವನಿಗೆ ಅದರ ಅವಶ್ಯಕತೆಯೂ ಇರಲಿಲ್ಲ.
ತನ್ನ ಮನೆಯನ್ನು ಉಳಿಸಿಕೊಳ್ಳಲು ಮಾಡಿದ ತನ್ನ ಸರ್ವ ಪ್ರಯತ್ನಗಳು ನೀರಿನ ಮೇಲೆ ಮಾಡಿದ ಹೋಮದಂತಾಗಿ, ಗೌರಮ್ಮ ಏನು ಮಾಡುವುದೆಂದು ತೋಚದೆ, ತನ್ನ ಮನೆಯ ಮುಂದಿನ ಕೋಣೆಯ ಮಧ್ಯಭಾಗದಲ್ಲಿ ಮಂಕಾಗಿ ಕೂತಳು. ನಿರ್ಭಾವದ ಅವಳ ಮುಖ ಯಾವುದೋ ಸಂಗ್ರಹಾಲಯದಲ್ಲಿದ್ದ ಹಳತಾದ ಮೂರ್ತಿಯಂತಿತ್ತು. ಅಸಹಾಯಕ ಸ್ಥಿತಿಯಲ್ಲಿ ಗೌರಮ್ಮ ಧಾರಾಕಾರವಾಗಿ ಸುರಿಯುತ್ತಿದ್ದ ಮಳೆಯನ್ನು ದಿಟ್ಟಿಸುತ್ತಾ..ಶಪಿಸುತ್ತಾ… ಕೂತಳು.ಆದರೆ ಮನಸ್ಸು ಸೋತಿರಲಿಲ್ಲ.
ಉಗ್ರಪ್ರತಾಪದಿಂದ ಮಳೆ ಸುರಿಯುತ್ತಲೇ ಇತ್ತು. ಗೌರಮ್ಮ ಅಗೊಮ್ಮೆ ಈಗೊಮ್ಮೆ ತಂತಾನೆ ಮಾತನಾಡಿಕೊಳ್ಳುತ್ತಿದ್ದಳು. ತನ್ನ ಮನೆಯ ಬಗೆಗಿನ ಚಿಂತೆ ಗೌರಮ್ಮಳ ಊಟ ನೀರು ಕಬಳಿಸಿದ್ದಲ್ಲದೆ ನಾಲ್ಕೈದು ದಿನಗಳ ನಿದ್ದೆಯನ್ನು ಸಹ ಕಿತ್ತುಕೊಂಡಿತ್ತು. ಗೌರಮ್ಮಳ ಕಣ್ಣುಗಳು ಕ್ಷಣಮಾತ್ರದಲ್ಲೇ ನಿದ್ದೆಗೆ ಸೋಲಲಾರಂಭಿಸಿತ್ತು. ಇಡೀ ದೇಶವೇ ಹೊತ್ತಿ ಉರಿದರೂ ಎಚ್ಚರವಾಗದಂತಹ ಭಯಂಕರ ನಿದ್ದೆ ಗೌರಮ್ಮಳನ್ನು ತಬ್ಬಿದ್ದರಿಂದ ಕ್ಷಣಮಾತ್ರದಲೇ ಗೌರಮ್ಮ ಕೋಣೆಯ ನೆಲದ ಮೇಲೆ ಮೈಮೇಲೆ ಪ್ರಜ್ಞೆಯೇ ಇಲ್ಲದಂತೆ ಬಿದ್ದುಕೊಂಡಳು. ವರುಣನಿಗೆ ಗೌರಮ್ಮಳ ಪ್ರಾರ್ಥನೆ ಕೇಳಿದಂತೆ ಕಾಣಲಿಲ್ಲ. ಗೌರಮ್ಮಳ ಮನೆಯ ಮೇಲೆ ಜಿದ್ದಿಗೆ ಬಿದ್ದವನಂತೆ ಧಾರಾಕಾರವಾಗಿ ಇನ್ನೂ ಸುರಿಯುತ್ತಲೇ ಇದ್ದ. ಜತೆಗೆ ತನ್ನ ಕಾರ್ಯಾಚರಣೆಯ ಗತಿ ಹೆಚ್ಚಿಸಿಕೊಂಡಿದ್ದ…