Friday, 7 June 2019

ಕನ್ನಡ ಸಾಹಿತ್ಯಕ್ಕೆ ಕ್ರೈಸ್ತ ಸಾಹಿತಿಗಳ ಕೊಡುಗೆಗಳು

- ಡಾ. ಸಿಸ್ಟರ್ ಪ್ರೇಮ (ಎಸ್.ಎಮ್.ಎಮ್.ಐ)
ಸ್ವಾತಂತ್ರ್ಯ ಪೂರ್ವದಲ್ಲಿ ಕ್ರೈಸ್ತರು: 

ಮಿಷನರಿಗಳ ಆಗಮನಕ್ಕೂ ಮುಂಚೆ ಅಂದರೆ ಮೂರನೇ ಶತಮಾನದಲ್ಲೇ ಕ್ರೈಸ್ತ ಧರ್ಮವನ್ನು ಭಾರತಕ್ಕೆ ಹೊತ್ತು ತಂದವನೇ ಸಂತ ಥೋಮಸ್. ಸುಮಾರು ಎರಡು ಮತ್ತು ಮೂರನೇ ಶತಮಾನದಲ್ಲಿ ಪ್ರಪಂಚದ ವಿವಿಧ ಭಾಗಗಳಲ್ಲಿ ಕ್ರೈಸ್ತರು ಅನುಭವಿಸುತ್ತಿದ್ದ ಚಿತ್ರಹಿಂಸೆಯನ್ನು ಇತಿಹಾಸದ ಪುಟಗಳನ್ನು ತಿರುವಿದಾಗ ನೋಡುವುದಾದರೆ, ಪ್ರಾಚೀನ ಶತಮಾನಗಳಲ್ಲಿ ಕ್ರೈಸ್ತರು ಭಯದ ದವಡೆಗೆ ಸಿಲುಕಿ ರೋಮ್ ಮತ್ತು ಇತರೆ ದೇಶಗಳಲ್ಲಿ ರೋಮನ್ನರು ನೀಡುತ್ತಿದ್ದ ಚಿತ್ರಹಿಂಸೆಯನ್ನು ಮೌನವಾಗಿ ಅನುಭವಿಸುತ್ತಿದ್ದರು. 

ಅಂದಿನ ದಿನಗಳಲ್ಲಿ ಯಾವುದೇ ಕಾರಣವಿಲ್ಲದಿದ್ದರೂ ಕ್ರೈಸ್ತರನ್ನು ಬಹು ಕ್ರೂರವಾಗಿ ದಂಡಿಸಲಾಗುತ್ತಿತ್ತು. ಅನ್ಯ ದೇವರುಗಳನ್ನು ಆರಾಧಿಸುವಂತೆಯೂ ಮತ್ತು ಅಮಾಯಕರನ್ನು ಕೊಲ್ಲುವಂತೆಯೂ ಒತ್ತಾಯಿಸಲಾಗುತ್ತಿತ್ತು. ಇತರರು ಗೈದ ತಪ್ಪನ್ನು ಕ್ರೈಸ್ತರ ಮೇಲೆ ಹೊರಿಸುತ್ತಾ ತಪ್ಪಿತಸ್ಥರ ಸಾಲಿನಲ್ಲಿ ನಿಲ್ಲಿಸುವುದು, ಪಾಪಮಯವಾದ ಕೃತ್ಯಗಳನ್ನು ಎಸಗಲು ಒತ್ತಾಯಿಸುವುದು, ಅದನ್ನು ಒಪ್ಪದೆ ಪ್ರತಿಕ್ರಿಯಿಸಿದರೆ ಅದರ ಪರಿಣಾಮವಾಗಿ ಗಲ್ಲುಶಿಕ್ಷೆ, ಮರಣದಂಡನೆ, ಜೀವಂತವಾಗಿ ಶಿಲುಬೆ ಮೇಲೆ ಜಡಿಯುವುದು, ಹಸಿದ ಕ್ರೂರ ಪ್ರಾಣಿಗಳ ಬಾಯಿಗೆ ಎಸೆಯುವುದು, ಮುಳ್ಳಿನ ಚಾಟಿಗಳಿಂದ ಹೊಡೆಯುವುದು, ಈಟಿಗಳಿಂದ ತಿವಿಯುವುದು, ಚೂಪಾದ ಅಸ್ತ್ರಗಳಿಂದ ಚುಚ್ಚುವ ಮೂಲಕ ಕ್ರೈಸ್ತರನ್ನು ಹಿಂಸಿಸಿ ಕೊಲ್ಲಲಾಗುತ್ತಿತ್ತು ಎಂಬಿತ್ಯಾದಿ ಮಾಹಿತಿಯನ್ನು 'ಚರ್ಚ್ ಇತಿಹಾಸ' ಎಂಬ ಪುಸ್ತಕದಲ್ಲಿ ಕಾಣಬಹುದು. 

ಜೊತೆಗೆ, 70-72ನೇ ದಶಕಗಳಲ್ಲಿ ಅಂದರೆ ರೋಮನ್ನರ ಆಳ್ವಿಕೆಯಲ್ಲಿ ಪ್ರೇಕ್ಷಕರ ಮನರಂಜನೆಗಾಗಿ ಅಂದಿನ ರೋಮನ್ ಚಕ್ರಾಧಿಪತಿ ವೆಸ್ಪೆಸಿಯನ್ ಎಂಬುವನು (The largest amphitheater in the Roman world) 'ಕೊಲೋಸ್ಸಿಯಮ್' ಎಂಬ ಥಿಯೇಟರನ್ನು ರೋಮನ್ ಜನರ ಮನರಂಜನೆಗಾಗಿ ನಿರ್ಮಿಸಿದ್ದನು. ಅಲ್ಲಿ ನಡೆಯುವ ಸ್ಪರ್ಧೆಗಳನ್ನು ವೀಕ್ಷಿಸಿ ಮನರಂಜನೆ ಪಡೆಯಲು ಅಧಿಕ ಸಂಖ್ಯೆಯಲ್ಲಿ ಪ್ರೇಕ್ಷಕರು ಕಿಕ್ಕಿರಿದು ಸೇರುತ್ತಿದ್ದರು. ಭಯಾನಕ ಆಟೋಟ ಸ್ಫರ್ಧೆಗಳು ನಡೆಯುತ್ತಿದ್ದವು. ರೋಮನ್ ಅಧಿಕಾರಿಗಳು ತಮ್ಮ ಕ್ರೀಡಾ-ವಿನೋದಗಳ ಮಧ್ಯದಲ್ಲಿ ಕ್ರೈಸ್ತರನ್ನು ಹಿಂಸಿಸುವ ಸಲುವಾಗಿ ಅವರನ್ನು ಹಸಿದಿದ್ದ ಕ್ರೂರಪ್ರಾಣಿಗಳಾದ ಸಿಂಹ, ಹುಲಿ, ಚಿರತೆಗಳ ಬಾಯಿಗೆ ಎಸೆಯುತ್ತಾ ಅವರ ಚೀರಾಟ ಮತ್ತು ತೊಳಲಾಟದಲ್ಲಿ ವಿಕೃತಾನಂದ ಅನುಭವಿಸುತ್ತಿದ್ದಂತಹ ಸನ್ನಿವೇಶ ಹಾಗೂ ಸಂದರ್ಭಗಳ ಬಗ್ಗೆ ಇತಿಹಾಸದ ಪುಟಗಳನ್ನು ತಿರುವಿ ಅವರು ಅನುಭವಿಸಿದಂತಹ ಚಿತ್ರಹಿಂಸೆಯ ಘಟನೆಗಳನ್ನು ಓದುವಾಗ ಎಂಥವರಿಗೂ ಕರುಳು ಕಿತ್ತು ಬಂದತಾಗುತ್ತದೆ. 

ಹೀಗೆ ಪ್ರಾರಂಭದ ಶತಮಾನಗಳಲ್ಲಿ ಎಷ್ಟೋ ಕ್ರೈಸ್ತರು ಶಿಕ್ಷಣದಿಂದ ವಂಚಿತರಾಗಿದ್ದುದರ ಜೊತೆಗೆ ಎಲ್ಲೆಡೆ ಹಿಂಸೆ, ಬಡತನ ಮತ್ತು ನಿರುದ್ಯೋಗ ತಾಂಡವಾಡುತ್ತಿತ್ತು. ಕ್ರಮೇಣ ಹಲವು ವರ್ಷಗಳ ನಂತರ ವಿವಿಧ ಉದ್ಧೇಶಗಳೊಂದಿಗೆ ಪ್ರಪಂಚದ ವಿವಿಧ ಮೂಲೆಗಳಿಂದ ಮಿಷನರಿಗಳು ಭಾರತಕ್ಕೆ ಬರಲು ಪ್ರಾರಂಭಿಸಿದರು. 

ಮಿಷನರಿಗಳ ಆಗಮನ : 

ಕ್ರೈಸ್ತ ಧರ್ಮದ ಪ್ರಚಾರವನ್ನೇ ಪ್ರಧಾನ ಉದ್ದೇಶವಾಗಿಟ್ಟುಕೊಂಡು ಕ್ರೈಸ್ತೇತರರ ನಡುವೆ ಸೇವೆ ಮಾಡುವವನೇ ಮಿಷನರಿ. ಮಿಷನ್ ಎಂದರೆ 'ಕಳುಹಿಸುವಿಕೆ' (A sending) ನೀವು ಲೋಕದ ಎಲ್ಲಾ ಕಡೆಗೆ ಹೋಗಿ, ಪ್ರತಿಯೊಬ್ಬರಿಗೂ ಸುವಾರ್ತೆಯನ್ನು ಸಾರಿ ಎಂದು ಯೇಸು ಕ್ರಿಸ್ತನು ತನ್ನ ಶಿಷ್ಯರಿಗೆ ಕೊಟ್ಟ ಆದೇಶವೇ ಈ ಕಳುಹಿಸುವಿಕೆಯ ಮೂಲ ಕಾರಣ. 

ಯೇಸು ಕ್ರಿಸ್ತನ ಮರಣಾನಂತರ ಅವನ ಶಿಷ್ಯರು ಪ್ರಪಂಚದ ವಿವಿಧ ದೇಶಗಳಿಗೆ ಧರ್ಮಪ್ರಚಾರಕೋಸ್ಕರ ಪ್ರವಾಸ ಮಾಡಿದರು. ತರುವಾಯ ಕ್ರೈಸ್ತ ಧರ್ಮಸಭೆ ವಿಶಾಲವಾಗಿ ಬೆಳೆದಂತೆ ಧರ್ಮಪ್ರಚಾರ ಕಾರ್ಯಕ್ರಮವು ಬಹು ಬಿರುಸಾಗಿ ಬೆಳೆಯಲಾರಂಭಿಸಿತು. ಹೊಸ ಭೂಖಂಡಗಳು, ಹೊಸ ಸಂಸ್ಕೃತಿಗಳು ಮತ್ತು ಆಚಾರ-ವಿಚಾರಗಳು ಅಂದಿನ ಕ್ರೈಸ್ತ ಸಮಾಜಕ್ಕೆ ಪರಿಚಿತವಾದಂತೆ ಮಿಷನರಿಗಳು ಅಲ್ಲೆಲ್ಲಾ ಕ್ರೈಸ್ತಧರ್ಮವನ್ನು ಕೊಂಡೊಯ್ಯುವ ಕಾಯಕಕ್ಕಿಳಿದರು. ಈ ಮೇರೆಗೆ ಯೇಸುಕ್ರಿಸ್ತನ ಮತ್ತು ಅವನ ಉತ್ತರಾಧಿಕಾರಿಯಾದ ಧರ್ಮಸಭೆಯ ನಿರ್ದೇಶನಕ್ಕೆ ಒಳಪಟ್ಟು ಕ್ರೈಸ್ತ ಧರ್ಮವನ್ನು ಪ್ರಚಾರ ಮಾಡುವುದು 'ಮಿಷನ್' ಎಂದೂ, ಪ್ರಚಾರ ಮಾಡುವವನು 'ಮಿಷನರಿ' ಎಂದು ಸ್ಥೂಲವಾಗಿ ಹೇಳಬಹುದು. 

ಸುಮಾರು 14ನೆಯ ಶತಮಾನದ ಹೊತ್ತಿಗೆ ಮಿಷನರಿಗಳು ಮೊತ್ತ ಮೊದಲಿಗೆ ಭಾರತದಲ್ಲಿ ಕಾಲಿಟ್ಟರು. ಪೋರ್ಚುಗೀಸರು ಆಗಮಿಸುವ ಮೊದಲೇ ಡೊಮಿನಿಕನ್ ಮತ್ತು ಫ್ರಾನ್ಸಿಸ್ಕನ್ ಎಂಬ ಸನ್ಯಾಸಿ ಸಂಸ್ಥೆಗಳ ಮಿಷನರಿಗಳು ಇಲ್ಲಿಗೆ ಬಂದಿದ್ದರು. ಇವರಲ್ಲಿ ಮುಖ್ಯರಾದವರು ಬ್ರದರ್ ಜೋರ್ಡಾನ್ ಎಂಬ ಫ್ರೆಂಚ್ ಡೊಮಿನಿಕನ್ ಮಿಷನರಿ. ಇವನು ಕ್ರಿ.ಶ. 1321ರಲ್ಲಿ ಭಾರತಕ್ಕೆ ಬಂದು ಮತಪ್ರಚಾರ ಮಾಡಿದನು. ಈ ಮಿಷನರಿಗಳು ರೋಮ್‌ನಲ್ಲಿ ಇರುವ ಪೋಪ್‌ನ ಆದೇಶದ ಮೇರೆಗೆ ಯೂರೋಪಿನಿಂದ ಬಂದವರಾಗಿದ್ದರು. ಅಧಿಕ ಪ್ರಮಾಣದಲ್ಲಿ ಮಿಷನರಿಗಳು ಭಾರತಕ್ಕೆ ಬಂದುದು ಪೋರ್ಚುಗೀಸರ ಆಗಮನದ ಕಾಲದಲ್ಲಿ. ಕ್ರಿ.ಶ. 1500ರಲ್ಲಿ ಭಾರತಕ್ಕೆ ಬಂದ ಪೋರ್ಚುಗೀಸ್ ನಾವಿಕ ಕಬ್ರಾಲನ ತಂಡದಲ್ಲಿ ಎಂಟು ಮಂದಿ ಮಿಷನರಿಗಳೂ ಇದ್ದು ಇವರು ಪೋರ್ಚುಗೀಸ್ ವರ್ತಕರು ಹೋದಡೆಗಳಲ್ಲೆಲ್ಲಾ ಹೋಗುತ್ತಾ ಅಲ್ಲಿ ಮತ ಪ್ರಚಾರ ಮಾಡುತ್ತಿದ್ದರು. ಈ ಪೋರ್ಚುಗೀಸರ ಧನಸಹಾಯವು ಮತ್ತು ಅಧಿಕಾರ ಸಹಾಯವೂ ಲಭ್ಯವಿರುವ ವಸಾಹತುಗಳು ಮಿಷನ್ ಕೇಂದ್ರಗಳಾದವು. ಕಲ್ಲಿಕೋಟೆ, ಕಣ್ಣನೂರು, ಕ್ವಿಲೋನ್, ಕೊಚ್ಚಿನ್ ಮೊದಲಾದ ಸ್ಥಳಗಳಲ್ಲಿ ಮತಪ್ರಚಾರ ಮಾಡಿದರು, ಕ್ರಿ.ಶ. 1540ರ ಸುಮಾರಿಗೆ ಪೋರ್ಚುಗಲ್ಲಿನ ರಾಜನಾದ ಮೂರನೇ ಜಾನನ ಬೇಡಿಕೆಯ ಫಲವಾಗಿ ಹೊಸದಾಗಿ ಸ್ಥಾಪಿತವಾದ ಜೆಸ್ವಿಟ್ ಸನ್ಯಾಸಿ ಕ್ರಮದ ಮಿಷನರಿಗಳು ಭಾರತಕ್ಕೆ ಬಂದರು. 



ಕರ್ನಾಟಕದಲ್ಲಿ ಮಿಷನರಿಗಳು : 

ಕರ್ನಾಟಕಕ್ಕೆ ಕ್ರೈಸ್ತ ಧರ್ಮ ಪಾದಾರ್ಪಣೆ ಮಾಡಿದಂದಿನಿಂದ ಕ್ರೈಸ್ತ ಸಾಹಿತ್ಯ ಉಗಮವಾಯಿತು. ವಿವಿಧ ದೇಶಗಳಿಂದ ಆಗಮಿಸಿದ ಮಿಷನರಿಗಳು ಇಲ್ಲಿಯ ಭಾಷೆಯ ಅಂತಃಸತ್ವವನ್ನು ಅರಿತವರಾಗಿ ಧರ್ಮಪ್ರಚಾರದ ಜೊತೆಗೆ ವಿವಿಧ ಕ್ಷೇತ್ರಗಳಲ್ಲಿಯೂ ಅಭಿವೃದ್ಧಿ ಸಾಧಿಸಿದರು. ಕರ್ನಾಟಕದ ಕುರಿತಾಗಿ ಹೇಳುವುದಾದರೆ ಮಿಷನರಿಗಳು 18ನೇ ಶತಮಾನದಲ್ಲಿ ಅಂದರೆ ಸುಮಾರು ಕ್ರಿ.ಶ. 1804ರ ಸುಮಾರಿಗೆ ಇಲ್ಲಿಗೆ ಆಗಮಿಸಲಾರಂಭಿಸಿದರು. ಇವರ ಆಗಮನಕ್ಕೆ ಸುವಾರ್ತಾ ಪ್ರಸಾರಣೆಯೇ ಕಾರಣವಾಗಿತ್ತು. ಬ್ರಿಟೀಷರ ಜೊತೆಗೆ ಭಾರತೀಯ ನೆಲದಲ್ಲಿ ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಪ್ರಬಲಗೊಂಡಿದ್ದ ಕ್ರೈಸ್ತ ಧರ್ಮವು ಸಹ ಬೇರೂರುವಂತಾಯಿತು. ಯೂರೋಪ್, ಅಮೇರಿಕಾಗಳಲ್ಲಿ ನೆಲೆಸಿದ್ದ ಮಿಷನರಿಗಳನ್ನು ಭಾರತೀಯರ ಸಂಯಮತೆ ಹಾಗೂ ಉದಾರತೆಯ ಜೀವನ ಶೈಲಿಗಳು ಭಾರತದಲ್ಲಿ ಅವರು ನೆಲೆಸುವಂತೆ ಮಾಡಲು ಮೂಲ ಪ್ರೇರಕ ಶಕ್ತಿಗಳಾಗಿದ್ದವು. 

18ನೇ ಶತಮಾನದ ಆರಂಭದ ದಶಕಗಳಲ್ಲಿ ಸುವಾರ್ತಾ ಸೇವೆಯಲ್ಲಿ ಆಸಕ್ತಿ ಬೆಳೆದು ಹಲವಾರು ಮಿಷನರಿ ಸಂಘಗಳು ಅಸ್ತಿತ್ವಕ್ಕೆ ಬಂದವು. ಇಂಗ್ಲೆಂಡಿನಲ್ಲಿ ಕ್ರಿ.ಶ. 1792ರಲ್ಲಿ ಬ್ಯಾಪ್ಟಿಸ್ಟ್ ಮಿಷನರಿ ಸೊಸೈಟಿಯೂ, ಕ್ರಿ.ಶ. 1799ರಲ್ಲಿ ಚರ್ಚ್ ಮಿಷನರಿ ಸೊಸೈಟಿಯೂ, ಕ್ರಿ.ಶ. 1813ರಲ್ಲಿ ಭಾರತದಲ್ಲಿನ ಈಸ್ಟ್ ಇಂಡಿಯಾ ಕಂಪನಿಯ ಬದಲಾವಣಾ ನೀತಿಯಿಂದ ಈ ಕೆಳಕಂಡ ಮಿಷನರಿಗಳ ಆಗಮನಕ್ಕೆ ತುಂಬ ಅನುಕೂಲವಾಯಿತು. ಹೀಗೆ ಬಂದು ಭಾರತವನ್ನು ಪ್ರವೇಶಿಸಿ ಸೇವೆ ಪ್ರಾರಂಭಿಸಿದವರೆಂದರೆ -ಇಗ್ನೇಷಿಯಸ್ ಲಯೋಲಾ ಸ್ಥಾಪಿಸಿದ ಜೆಸ್ಯುಟ್ ಸೊಸೈಟಿ (Jesuit Scoiety), ಲಂಡನ್ ಮಿಷನ್ (London Mission), ವೆಸ್ಲಿಯನ್‌ ಮಿಷನ್, (Weslian Mission), ಮೆಥೋಡಿಸ್ಟ್ ಮಿಷನ್ (Methodist mission) ಹಾಗೂ ಜರ್ಮನ್ ಇವ್ಯಾಂಜೆಲಿಕಲ್ ಬ್ಯಾಸೆಲ್ ಮಿಷನ್. ಮೊದಲಿನದು ರೋಮನ್ ಕ್ಯಾಥೋಲಿಕ ಪಂಥದ ಪ್ರತಿನಿಧಿಯಾಗಿದ್ದರೆ, ಈ ಉಳಿದವು ಪ್ರೊಟೆಸ್ಟಂಟ್ ಸಂಸ್ಥೆಗಳಾಗಿವೆ. ನಮ್ಮ ಕನ್ನಡ ನಾಡಿನಲ್ಲಿ ಮಿಷನರಿ ಚಟುವಟಿಕೆಯು ಸುಮಾರು 18ನೇ ಶತಮಾನದಷ್ಟು ಹಿಂದಿನದ್ದಾಗಿದ್ದು, ಅದನ್ನು ಆರಂಭಿಸಿದವರು ಜೆಸ್ಯುಟ್ ಪಾದ್ರಿಯಾದ ಲಿಯೋನಾರ್ಡ್ ಸಿನ್ನಾಮಿ (ಕ್ರಿ.ಶ.1609-1676). ಅನಂತರ ಬಂದ ಇತರ ಮಿಷನ್ ಸಂಸ್ಥೆಗಳ ಮಿಷನರಿಗಳು ಧಾರವಾಡ, ಮಂಗಳೂರು, ಮೈಸೂರು, ಬೆಂಗಳೂರು, ಬಳ್ಳಾರಿ ಮತ್ತು ಬೆಳಗಾವಿ ಊರುಗಳಲ್ಲಿ ತಮ್ಮ ಸೇವೆಯನ್ನು ಪ್ರಾರಂಭಿಸಿದ್ದರು. 

ಕ್ರಿ.ಶ. 19ನೇ ಶತಮಾನದ ಮಧ್ಯದ ಸುಮಾರಿಗೆ ನಾಲ್ಕು ಕ್ರೈಸ್ತ ಮಿಷನರಿ ಸಂಸ್ಥೆಗಳಿಗೆ ಸಂಬಂಧಿಸಿದ 400ಕ್ಕೂ ಮೀರಿದ ಮಿಷನರಿ ವ್ಯಕ್ತಿಗಳು ಭಾರತದ ವಿವಿಧ ಪ್ರದೇಶಗಳಲ್ಲಿ ಕಾರ್ಯನಿರತರಾಗಿದ್ದರು. ಅದೇ ಸಮಯದಲ್ಲಿ ವಿಶ್ವದ ಎಲ್ಲೆಡೆ ಚದುರಿದ್ದ ಮಿಷನರಿಗಳು (ಸುಮಾರು 200ರಷ್ಟು) ಇದ್ದಾಗ ಭಾರತ ಒಂದರಲ್ಲೇ 400ಕ್ಕೂ ಹೆಚ್ಚು ಮೀರಿದುದು ಇವರ ಸಂಖ್ಯಾ ಬಾಹುಳ್ಯವನ್ನು ತೋರಿಸುತ್ತದೆ. ಆ ಸಂದರ್ಭದಲ್ಲಿ ಕ್ರೈಸ್ತಮತದ ಪ್ರಚಾರಕ್ಕೆಂದು ಭಾರತಕ್ಕೆ ಬರುತ್ತಿದ್ದ ವಾರ್ಷಿಕ ಧನ ಸಹಾಯ (Financial Assistance) ಸುಮಾರು 20ಲಕ್ಷ ರೂಪಾಯಿಗಳಷ್ಟಿದ್ದಿತು. ಇದರ ಪರಿಣಾಮದಿಂದಾಗಿ ಕ್ರೈಸ್ತರ ಮುದ್ರಣಾಲಯಗಳು ಹಾಗೂ ನೂರಾರು ವಿದ್ಯಾಲಯಗಳು ದೇಶದಾದ್ಯಂತ ತಲೆ ಎತ್ತಿ ನಿಂತವು. ಈ ಎಲ್ಲಾ ಯೋಜನೆಗಳ ಹಿಂದೆ ಮತಾಂತರ ಮಾಡುವುದು ಮಿಷನರಿಗಳ ಆಂತರಿಕ ಉದ್ದೇಶವಾಗಿ ಕಂಡುಬಂದರೂ, ಭಾರತೀಯರಿಗೆ ಶಿಕ್ಷಣ ಪ್ರಸಾರ ಹಾಗೂ ಜ್ಞಾನಾರ್ಜನೆಯನ್ನು ಮಾಡುವುದು ತಮ್ಮ ಆದ್ಯ ಉದ್ದೇಶವಾಗಿಸಿಕೊಂಡಿದ್ದ ಮಿಷನರಿಗಳು ಭಾರತೀಯ ಯುವ ಜನತೆಗೆ ಆಕರ್ಷಕರಾಗಿದ್ದರು. 

ಮಿಷನರಿ ಸಂಸ್ಥೆಗಳ ಹಾಗೂ ವ್ಯಕ್ತಿಗಳ ಬದುಕಿನ ಹಿನ್ನೆಲೆಯನ್ನು ಸೂಕ್ಷ್ಮವಾಗಿ ಅವಲೋಕಿಸಿದಾಗ ಅವರಲ್ಲಿ ಹೆಚ್ಚಿನ ಪ್ರಮಾಣದವರು ಜನ್ಮತಃ ಕುಶಾಗ್ರ ಬುದ್ಧಿಯುಳ್ಳವರು ಮತ್ತು ಕೆಲವು ಪ್ರತಿಭಾವಂತ ಮಿಷನರಿಗಳು ಯೂರೋಪಿನ ಪ್ರಖ್ಯಾತ ವಿಶ್ವವಿದ್ಯಾಲಯಗಳಲ್ಲಿ ವ್ಯಾಸಂಗ ಪಡೆದ ಉನ್ನತ ಪದವೀಧರರಾಗಿದ್ದರು. ಇವರುಗಳು ತಮ್ಮ ತಾಯ್ನಾಡಲ್ಲೇ ಯಾವುದೇ ಒಂದು ಉದ್ಯೋಗದಲ್ಲಿ ತೊಡಗಿ ಲಾಭದಾಯಕ ಮತ್ತು ನಿಶ್ಚಿಂತವಾದ ಜೀವನವನ್ನು ಸಾಗಿಸಬಹುದಾಗಿತ್ತು ಆದರೆ ಸ್ವಧರ್ಮ ನಿಷ್ಠಪರರಾಗಿ ಪ್ರೇರಿತಗೊಂಡು ಕ್ರೈಸ್ತ ಸೇವಾದೀಕ್ಷೆಯನ್ನು ಕೈಕೊಂಡರು. ಯೂರೋಫ್ ದೇಶಗಳಲ್ಲಿ ಯಾವುದಾದರೂ ಮಿಷನ್ ಸಂಸ್ಥೆಯೊಂದರ ಸದಸ್ಯರಾಗಿ, ಎರಡು-ಮೂರು ವರ್ಷಗಳ ಮತ ಪ್ರಸಾರದ ವಿಷಯದ ಬಗ್ಗೆ ತರಬೇತಿ ಹೊಂದಿ ಸ್ವಇಚ್ಛೆಯಿಂದ ತಮ್ಮ ತಾರುಣ್ಯಾವಸ್ಥೆಯಲ್ಲಿಯೇ ಭಾರತಕ್ಕೆ ಬರುತ್ತಿದ್ದರು. ಕನ್ನಡ ನಾಡಿನ ಆಚಾರ-ವಿಚಾರವನ್ನು ಮೈಗೂಡಿಸಿಕೊಂಡಿದ್ದರು. ಇವರ ಜೀವನ ಎಳ್ಳಷ್ಟು ಬಿಡುವಿಲ್ಲದೇ ಇರುವ ಜೀವನವಾಗಿದ್ದು, ಸತತ ಅಭ್ಯಾಸ, ಭಾಷಾಧ್ಯಯನ, ಕೃತಿಗಳ ರಚನೆ, ಅನುವಾದ ಕಾರ್ಯ, ಪ್ರಸಂಗ ನಡೆಸುವುದು ಮುಂತಾದ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿರುತ್ತಿದ್ದರು. ಸಾರಿಗೆ ಸಂಪರ್ಕಗಳ ಸಮರ್ಪಕವಾದ ಸೌಲಭ್ಯಗಳಿಲ್ಲದೆ ಇರುತ್ತಿದ್ದ ಆ ಕಾಲದಲ್ಲಿ ಸ್ವತಃ ತಾವುಗಳೇ ಕುದುರೆಗಾಡಿಗಳ ಮೂಲಕ ಮತ್ತು ಕಾಲ್ನಡಿಗೆಗಳ ಮೂಲಕವಾಗಿಯೇ ಹೋಗಿ ತಮ್ಮ ಕಾರ್ಯಗಳನ್ನು ಮುಗಿಸಿಕೊಂಡು ಬರುತ್ತಿದ್ದರು. ಇಂತಹ ಒಂದು ಸಂದರ್ಭದಲ್ಲಿ ಅವರ ವೈಯಕ್ತಿಕ ಆಸಕ್ತಿ, ಧೈರ್ಯ, ಸ್ಥೈರ್ಯ, ದೃಢತೆ ಮೆಚ್ಚುವಂತಹದು. ನಮ್ಮ ಕನ್ನಡ ನಾಡಿಗೆ ಬರಬೇಕೆಂದು ಪಣತೊಟ್ಟಾಗ ಅಲ್ಲಿದ್ದುಕೊಂಡೇ ಭಾರತೀಯ ಭಾಷೆಗಳ ಮೇಲೆ ಒಲವು ತೋರುತ್ತಿದ್ದರು ಇಲ್ಲವೇ ಸಮುದ್ರ ಪ್ರಯಾಣಗಳ ಮಾರ್ಗ ಮಧ್ಯದಲ್ಲಿಯೇ ಭಾಷಾಧ್ಯಯನಗಳ ಕಾರ್ಯಚಟುವಟಿಕೆಗಳಲ್ಲಿ ತೊಡಗುತ್ತಿದ್ದರು, ಈ ರೀತಿ ಹುಮ್ಮಸ್ಸಿನಿಂದ ಬಂದ ಮಿಷನರಿಗಳ ಉತ್ಕಟ ಬಯಕೆ 'ಶುಭಸಂದೇಶ ಪ್ರಚಾರ ಹಾಗು ಶಿಕ್ಷಣ ನೀಡುವಂತದಾಗಿತ್ತು. 

'ಮಾನವ ಜನ್ಮ ದೊಡ್ಡದು ಇದ ಹಾನಿ ಮಾಡಿಕೊಳ್ಳಬೇಡಿ ಹುಚ್ಚಪ್ಪಗಳಿರ' ಎಂಬ ಪುರಂದರದಾಸರ ಕೀರ್ತನ ತತ್ವದ ಮೇರೆಗೆ ತಾವು ಉದ್ದೇಶಿಸಿ ಬಂದಿದ್ದ ಕಾರ್ಯವನ್ನು ಅಚ್ಚುಕಟ್ಟಾಗಿ ಗೈದು ಕನ್ನಡ ನಾಡಿನ ಜನರಿಗೆ ಆದರ್ಶಕಳಸವಾಗಿದ್ದರು ನಮ್ಮ ಮಿಷನರಿಗಳು. ಇವರು ಬೇರೆ ಬೇರೆ ಕ್ಷೇತ್ರಗಳಲ್ಲಿದ್ದು ಘನವಾದ ಕಾರ್ಯ ಮಾಡಿದ್ದಾರೆ. ಇವರುಗಳ ಪ್ರಮುಖ ಉದ್ದೇಶ ಧರ್ಮಪ್ರಸಾರಣೆಯಾಗಿದ್ದರೂ ಅದರ ಜೊತೆಗೆ ವಿವಿಧ ಕ್ಷೇತ್ರಗಳ ಮೇಲ್ಮುಖ ಅಭಿವೃದ್ಧಿಯಲ್ಲಿ ಆಸಕ್ತಿವಹಿಸಿದ್ದರು ಎಂಬುದರ ಹಿಂದೆ ಬಲವಾದ ಕಾರಣವೂ ಇತ್ತು ಅದೇನೆಂದರೆ ತಮ್ಮಂತೆಯೇ ಈ ನಾಡಿನ ಜನರು ಕೂಡ ಎಲ್ಲಾ ವಿಧದಲ್ಲೂ ಶಿಸ್ತು, ಸಂಯಮ, ರೀತಿ-ನೀತಿಯ ಭಾವನೆಯನ್ನು ರೂಢಿಸಿಕೊಂಡು, ಉತ್ತಮವಾಗಿ ಕಲಿತು, ಜ್ಞಾನ ಸಂಪನ್ನರಾಗಬೇಕೆಂಬ ಆಸ್ಥೆಯನ್ನು ಹೊಂದಿದ್ದರು ಮತ್ತು ಇದೇ ತರಹದ ಜೀವನ ಶೈಲಿಯನ್ನೇ ಇಲ್ಲಿನ ಜನರಿಂದಲೂ ಬಯಸಿದರು. ಹೀಗೆ ಕರ್ನಾಟಕದಲ್ಲಿಯೂ ಕ್ರೈಸ್ತ ಮಿಷನರಿಗಳು ತಮ್ಮ ಸೇವೆಯನ್ನು ಆರಂಭಿಸುವ ಮೂಲಕ ಸಾಹಿತ್ಯ ಸೃಷ್ಟಿಗೆ ಅಡಿಗಲ್ಲನ್ನು ಹಾಕಿದರು ಎನ್ನಬಹುದು. 

ಪ್ರಮುಖ ಮಿಷನರಿಗಳ ಜೀವನ ಮತ್ತು ಸಾಧನೆ : 

ಯೇಸುಕ್ರಿಸ್ತನ ಕಾಲದಲ್ಲಿ ಹಲವಾರು ಶಿಷ್ಯರು ಇತರೆ ಊರುಗಳಿಗೆ ಸುವಾರ್ತೆ ಸಾರುವ ಕೆಲಸಕ್ಕಾಗಿ ಆರಿಸಿ ಕಳುಹಿಸಲ್ಪಟ್ಟಿದ್ದರು. ಕ್ರಮೇಣ ಆತನ ಅನುಯಾಯಿಗಳು ಅದೇ ತತ್ವಗಳನ್ನು ಅನುಸರಿಸುತ್ತಾ ಭಾರತ ದೇಶಕ್ಕೂ ಪ್ರಪಂಚದ ವಿವಿಧ ದೇಶಗಳಿಂದ ಶುಭ ಸಂದೇಶ ಪ್ರಚಾರಕ್ಕೆ ಆಗಮಿಸಿದರು. ಜರ್ಮನಿ, ಇಂಗ್ಲೆಂಡ್, ಸ್ವಿಝರ್‌ಲ್ಯಾಂಡಿನಿಂದ ಭಾರತಕ್ಕೆ ಬಂದ ಜೆಸುಯೆಟ್, ಲಂಡನ್, ವೆಸ್ಲಿಯನ್ ಮತ್ತು ಬಾಸೆಲ್ ಎಂಬ ಮಿಷನರಿಗಳು ಕರ್ನಾಟಕದಲಿ ವಿಶೇಷ ಪಾತ್ರ ವಹಿಸಿದ್ದರು. ಈ ಮಿಷನರಿಗಳು ಕರ್ನಾಟಕದ ಇತಿಹಾಸದಲ್ಲೇ ಶ್ರೇಷ್ಠವಾದ ಕಾರ್ಯಸಾಧನೆ ಗೈದು ಕೀರ್ತಿಶೇಷರಾಗಿದ್ದಾರೆ. ಈ ಎಲ್ಲಾ ಮಿಷನರಿಗಳು ತ್ಯಾಗಿಗಳಾಗಿದ್ದು ಧರ್ಮಪ್ರಸಾರದ ಕಾರ್ಯಕ್ಕಾಗಿ ತಮ್ಮನ್ನು ಸಮರ್ಪಿಸಿಕೊಂಡಿದ್ದರು. ಅಲ್ಲದೆ ಧರ್ಮಶಾಸ್ತ್ರದಲ್ಲೂ ಆಶಾವಾದಿ ಜ್ಞಾನವನ್ನು ಹೊಂದಿದ್ದರು. ಕರ್ನಾಟಕಕ್ಕೆ ಬಂದ ಮೇಲೆ ಧಾರ್ಮಿಕ ಪ್ರಚಾರದ ಜೊತೆ-ಜೊತೆಗೆ ಧಾರ್ಮಿಕ ಕೃತಿಗಳ ರಚನೆ, ಹಿಂದೂ ಹಾಗೂ ಕ್ರಿಶ್ಚಿಯನ್ ಧರ್ಮಗಳ ತೌಲನಿಕ ಅಧ್ಯಯನ, ದೇಶಿಯರನ್ನು ಮತಾಂತರಗೊಳಿಸುವ ಮತ್ತು ಪ್ರೋತ್ಸಾಹಿಸುವ ಮುಂತಾದ ಕೆಲಸ-ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು, ದೇಶಿಯರಲ್ಲಿ ಒಬ್ಬರಾಗಿ ಉಳಿದು ಅಮರರಾದರು. 

ಹೀಗೆ ಆಗಮಿಸಿದ ಮಿಷನರಿಗಳೆಂದರೆ ಜೆಸುಯೆಟ್ ಸೊಸೈಟಿಯ ಮಿಷನರಿಗಳು - ಲಿಯೋನಾರ್ಡೊ ಚಿನ್ನಮಿ, (ಕ್ರಿ.ಶ. 1609-1676), ಅಂತೋನ್ ಮರೀ ಪ್ಲಾಟೆ ಮುಂತಾದವರು. ಪ್ಯಾರಿಸ್ಸಿನ ಹೊರನಾಡು ಮಿಷನರಿಗಳಾದ ಎತಿಯೆನ್ ಲೂಯಿ ಶಾರ್ಬೊನೊ, ಜೆ ಬ್ಯಾರಿಲ್, (ಕ್ರಿ.ಶ. 1860-1870) ಅಗಸ್ತೆ ಬೊತೆಲೊ, (ಕ್ರಿ.ಶ. 1820-1892) ಲಿಯೊದೊರ್ ಅಂದ್ರೆ (ಕ್ರಿ.ಶ. 1850-1911) ಜೆರ್ಬಿಯೆ, ಆಮಾಂ ಕೊನ್‌ಸ್ತಾಂ (ಕ್ರಿ.ಶ. 1831-1913) ದೆಸೇಂ. ಹ್ಯುಗ್ ಮೆದಲೇಂ (ಕ್ರಿ.ಶ. 1837-1913) ಮುಂತಾದವರು. ಲಂಡನ್ ಮಿಷನರಿಗಳಾದ ಜಾನ್ ಹ್ಯಾಂಡ್ಸ್, ವಿಲಿಯಂ ರೀವ್, ಕಾಲಿನ್ ಕ್ಯಾಂಬೆಲ್, ಬಿ. ಎಲ್. ರೈಸ್ ನವರು. ವೆಸ್ಲಿಯನ್ ಮಿಷನರಿಗಳಾದ ಜಾನ್ ಗ್ಯಾರೆಟ್, ಹೆನ್ರಿಹೇಗ್, ಜೊಶಾಯ ಹಡ್ಸನ್, ಜೆ.ಆಲ್‌ಫ್ರಿಡ್ ವೇನ್ಸ್, ಡ್ಯಾನಿಯಲ್ ಸ್ಯಾಂಡರಸನ್, ಟಾಮ್ಲಿನ್ ಸನ್ ಮತ್ತು ಬಾಸೆಲ್ ಮಿಷನರಿಗಳಾದ ರೆವರೆಂಡ್ ಹರ್ಮನ್ ಮೊಗ್ಲಿಂಗ್, ರೆ. ಕೆ. ಜಾನ್‌ತಿಯರ್, ರೆ. ಗಾಡ್ ಫ್ರೆ ವೈಗಲ್, ರೆ. ಜಾರ್ಜ್‌ವುರ್‍ತ್. ರೆ. ಜಿ. ಕೀಸ್, ರೆ. ಯೊಹಾನೆ ಸಮುಲ್ಲರ್, ರೆ. ಬೆನಡಿಕ್ಟ್ ಲೂತಿ, ರೆ. ಜಿ. ಸಿ. ಲೇನ್ಹರ್, ರೆ. ಫೆಟ್ರಿಕ್ ಝಿಗ್ಲರ್, ರೆ. ಹೆರ್ಮನ್‌ರೀಫ್, ರೆ. ಬೆನ್ನಿನಿಗಸ್ ಗ್ರೇಟರ್, ರೆ. ಫರ್ಡಿನಾಂಡ್ ಕಿಟಲ್, ರೆ. ಜೆಮ್ಯಾಕ್ ಮತ್ತು ಕ್ಯಾನನ್‌ರಿ ವಿಂಗಟನ್ ಇವರುಗಳೆಲ್ಲ ವಿದೇಶಿಯ ಮಿಷನರಿಗಳಾಗಿದ್ದರು. ಈ ಮೇಲಿನ ಮಿಷನ್ ಸಂಸ್ಥೆಗಳಲ್ಲಿ ಪ್ರಮುಖರಾದವರ ಜೀವನ ಮತ್ತು ಸಾಧನೆಯನ್ನು ಮುಂದಿನ ಸಂಚಿಕೆಯಲ್ಲಿ ಮುಂದುವರಿಸಲಾಗುವುದು. 

******** 

1 comment:

  1. ಚಾ ಶಿ ಜಯಕುಮಾರ್ ಕೃಷ್ಣರಾಜಪೇಟೆ ಮಂಡ್ಯ ಜಿಲ್ಲೆ
    jayakumarcsj@gmail.com

    ReplyDelete

ಎತ್ತಿತೋರಿಸಲಾದ ಪೋಸ್ಟ್

ಅನ್ನಮ್ಮ’ಳಿಗೆ ೨೫೦ರ ಹಾಗೂ ಅತಿ.ವಂ.ಪೊತ್ತಕಮೂರಿಗೆ ೫೦ರ ಸ್ಮರಣೆಯ ಸಂಭ್ರಮ

ಬೆಂಗಳೂರಿನ ಉತ್ತರಹಳ್ಳಿಯ ಅನ್ನಮ್ಮನ ಬೆಟ್ಟ, ಅಲ್ಲಿನ ಅನ್ನಮ್ಮಳ ಸಮಾಧಿ, ಆ ಬೆಟ್ಟದ ಮೇಲಿನ ಶಿಲುಬೆ, ಅಲ್ಲಿ ಪ್ರತಿವರ್ಷ ತಪಸ್ಸು ಕಾಲದ ಐದನೇ ಭಾನುವಾರ ನಡೆಯುವ ಯೇಸು...