'ಓದೋದಕ್ಕೂ ಬರೆಯೋದಕ್ಕೂ ಗೊತ್ತಿಲ್ಲದ ಅನಕ್ಷರಸ್ಥನಿಗೆ ನಾನು ಒಂದೇ ಕ್ಷಣದಲ್ಲಿ ಓದುಬರಹ ಕಲಿಸಬಲ್ಲೆ'. ಹಾಗಂತ ಹೇಳ್ತಾ ಫಕೀರನೊಬ್ಬ ಊರು ತುಂಬ ಓಡಾಡ್ತಿದ್ದ. ನಸ್ರುದ್ದೀನ್ ಅವನ ಬಳಿಗೆ ಓಡಿದ. 'ನನಗೆ ಕಲಿಸು' ಅಂದ.
ಫಕೀರ ನಸ್ರುದ್ದೀನನ ತಲೆಯ ಮೇಲೆ ಕೈಯಿಟ್ಟು ಧ್ಯಾನಿಸಿದ. 'ಈಗ ನಿಂಗೆ ಓದೋಕೆ ಬರುತ್ತೆ ಹೋಗು' ಅಂದ.
ಅದಾಗಿ ಅರ್ಧಗಂಟೆಗೆ ವಾಪಸ್ಸು ಬಂದ ನಸ್ರುದ್ದೀನ್, ಆ ಫಕೀರನಿಗೋಸ್ಕರ ಊರಲ್ಲೆಲ್ಲ ಹುಡುಕತೊಡಗಿದ.
'ಏನಾಯ್ತಪ್ಪ... ಓದೋದು ಕಲಿಸ್ತೀನಿ ಅಂತ ಫಕೀರ ಚೆನ್ನಾಗಿ ನಾಮ ಹಾಕಿದ್ನಾ?' ದಾರಿಹೋಕನೊಬ್ಬ ಕೇಳಿದ.
'ಹಂಗೇನಲ್ಲ, ಚೆನ್ನಾಗೇ ಓದೋದಕ್ಕೆ ಬರುತ್ತೆ. ಓದೋಕ್ ಬಂದಿದ್ರಿಂದಲೇ ಆ ಫಕೀರನ್ನ ಹುಡುಕ್ತಿರೋದು ನಾನು. ಎಲ್ಹೋದ ಆ ಮೋಸಗಾರ.'
'ಇದೇನಪ್ಪ ಹೀಗ್‌ಮಾತಾಡ್ತಿದ್ದೀಯ. ನಿಂಗೆ ಒಂದೇ ನಿಮಿಷದಲ್ಲಿ ಓದೋಕೆ ಕಲಿಸಿದೋನನ್ನ ಮೋಸಗಾರ ಅಂತಿದ್ದೀಯಲ್ಲ. ಸರೀನಾ ಇದು?'
'ಹೌದು ಮತ್ತೆ. ನಾನು ಓದೋಕೆ ಎತ್ತಿಕೊಂಡ ಪುಸ್ತಕದ ಮೊದಲನೇ ಸಾಲಲ್ಲೇ, 'ಎಲ್ಲಾ ಫಕೀರರೂ ಶುದ್ಧ ಮೋಸಗಾರರು' ಅಂತ ಬರೆದಿತ್ತು'.
------------
ಮುಲ್ಲಾ ನಸ್ರುದ್ದೀನ್ ಪ್ರವಚನ ನೀಡುತ್ತಾನೆ ಅಂದರೆ ಊರಿಗೆ ಊರೇ ಬಂದು ಸೇರುತ್ತಿತ್ತು. ಅವನು ಉದಾಹರಣೆ ಸಹಿತವಾಗಿ ವಿಷಯಗಳನ್ನು ವಿವರಿಸುವುದು ಅವರಿಗೆ ಖುಷಿ ಕೊಡುತ್ತಿತ್ತು. ಜನರಿಗೆ ಖುಷಿಯಾಗಲೆಂದು ನಸ್ರುದ್ದೀನ್ ಕೂಡಾ ಉತ್ಸಾಹದಲ್ಲಿ ಏನೋ ಒಂದು ಹೇಳಿಬಿಡುತ್ತಿದ್ದ.
ಆ ದಿನ ನಸ್ರುದ್ದೀನ್ ಮಾತನಾಡುತ್ತಾ, “ನೀವು ರೊಟ್ಟಿಯ ಒಂದು ಬದಿಗೆ ಬೆಣ್ಣೆ ಹಚ್ಚಿ ಮೇಲಕ್ಕೆ ಎಸೆಯಿರಿ. ನೀವು ಹೇಗೇ ಎಸೆದರೂ ಕೆಳಕ್ಕೆ ಬಿದ್ದಾಗ ಬೆಣ್ಣೆ ಹಚ್ಚಿದ ಬದಿ ಮೇಲಕ್ಕೇ ಇರುತ್ತದೆ” ಎಂದ.
ಜನರೆಲ್ಲಾ ಅತ್ಯಂತ ಆಸಕ್ತಿಯಿಂದ ಕೇಳಿಕೊಂಡರು. ರೊಟ್ಟಿಯನ್ನು ಎಸೆದಂತೆಯೂ, ಬೆಣ್ಣೆ ಹಚ್ಚಿದ ಬದಿಯೇ ಮೇಲೆ ಬಂದಂತೆಯೂ ಕಲ್ಪಿಸಿಕೊಂಡರು.
ಆ ಸಭಿಕರಲ್ಲಿ ಒಬ್ಬ ಹುಡುಗನಿಗೆ ಮಾತ್ರ ಅದನ್ನು ನಂಬಲಾಗಲಿಲ್ಲ. ಪರೀಕ್ಷೆ ಮಾಡಿಯೇಬಿಡೋಣ ಅಂದುಕೊಂಡು ತನ್ನ ಬಳಿಯಿದ್ದ ರೊಟ್ಟಿಗೆ ಬೆಣ್ಣೆ ಹಚ್ಚಿ ಮೇಲಕ್ಕೆ ಎಸೆದ. ಆ ರೊಟ್ಟಿ ಕೆಳಗೆ ಬಿತ್ತು. ಆದರೆ ನಸ್ರುದ್ದೀನ್ ಹೇಳಿದಂತೆ ಬೆಣ್ಣೆ ಹಚ್ಚಿದ ಬದಿ ಮೇಲಕ್ಕಿರದೆ, ಕೆಳಗೆ ಮುಖ ಮಾಡಿಕೊಂಡು ಮಣ್ಣಾಯಿತು. ಹುಡುಗ ಅದನ್ನು ತೆಗೆದುಕೊಂಡು ನಸ್ರುದ್ದೀನನ ಮುಂದೆ ಹಿಡಿಯುತ್ತಾ, 'ಎಲ್ಲಿ? ನೀವು ಹೇಳಿದಂತೆ ಆಗಲಿಲ್ಲವಲ್ಲ! ಬೆಣ್ಣೆ ಹಚ್ಚಿದ ಬದಿ ಕೆಳಮುಖವಾಗಿದೆಯಲ್ಲ! ನೀವು ಹೇಳುವುದೆಲ್ಲಾ ಸುಳ್ಳು' ಎಂದ.
ನಸ್ರುದ್ದೀನ್ ಚೂರೂ ಕಂಗೆಡದೆ ಮುಗುಳ್ನಗುತ್ತಾ, 'ನಾನು ಹೇಳಿದ್ದು ಸರಿಯಾಗೇ ಇದೆ. ನೀನು ತಪ್ಪು ಬದಿಗೆ ಬೆಣ್ಣೆ ಹಚ್ಚಿದ್ದೀಯ ಅಷ್ಟೇ’ ಅಂದ!
(ಕೃಪೆ https://aralimara.com)
ಸಂಗ್ರಹ - ಇನ್ನಾ
No comments:
Post a Comment