'ಸಮಾಜದ ಕಟ್ಟಕಡೆಯವನಿಗೆ ನೀವು ಮಾಡುವ ಸೇವೆ ನನಗೇ ಸಲ್ಲುತ್ತದೆ' ಎಂದು ಯೇಸುಸ್ವಾಮಿ ಹೇಳಿದ್ದನ್ನು ನಮ್ಮ ಕ್ರೈಸ್ತ ಸಹೋದರ ಸಹೋದರಿಯರು ಅಕ್ಷರಶಃ ಪಾಲಿಸುತ್ತಾ ನೂರಾರು ವರ್ಷಗಳಿಂದ ವಿಶ್ವದೆಲ್ಲೆಡೆ ಅದರಲ್ಲೂ ದುರ್ಗಮ ಪ್ರದೇಶಗಳಲ್ಲಿ ನಡೆದಾಡಿ ರೋಗಿಗಳಿಗೆ ಆರೈಕೆ, ನತದೃಷ್ಟರಿಗೆ ಸಾಂತ್ವನ, ಸಮಾಜದ ಎಲ್ಲ ವರ್ಗದವರಿಗೂ ಶಿಕ್ಷಣ ನೀಡುತ್ತಿದ್ದಾರೆ.
ನಮ್ಮ ದೇಶ ಇಂಡಿಯಾದ ಸಂದರ್ಭದಲ್ಲಿ ಶಿಕ್ಷಣವು ಸಮಾಜದ ಕೆಲವೇ ಶ್ರೇಣಿಗಷ್ಟೇ ಹೊರತು ಇತರರಿಗೆ ನಿಲುಕದ ಕುಸುಮವಾಗಿತ್ತು. ಅದರಲ್ಲೂ ಹೆಣ್ಣುಮಕ್ಕಳಿಗೆ ವಿದ್ಯೆ ಎಂಬುದಂತೂ ಊಹಿಸಿಕೊಳ್ಳುವುದೂ ಸಾಧ್ಯವಿರಲಿಲ್ಲ.
ಅಂತಲ್ಲಿ ಬ್ರಿಟಿಷರು ಬರುವುದಕ್ಕೆ ಮೊದಲೇ ವರ್ಗಭೇದವಿಲ್ಲದೇ ಲಿಂಗಭೇದವಿಲ್ಲದೇ ಅಕ್ಷರಾಭ್ಯಾಸ ನೀಡಿದವರು ನಮ್ಮ ಕ್ರೈಸ್ತ ಮಿಷನರಿಗಳು. ಬಹುಶಃ ಇದೇ ಕಾರಣದಿಂದ ಕಲಿಕಾ ಕೇಂದ್ರಗಳಿಗಿದ್ದ ಅಯ್ಯನವರ ಮಠ ಎಂಬ ಹೆಸರನ್ನು ಕ್ರೈಸ್ತ ದೇವಾಲಯಗಳಿಗೂ ಅನ್ವಯಿಸಿ ಪಾದಾರಯ್ಯನ ಮಠ, (ದೇವರ) ತಾಯಿ ಮಠ ಎಂದು ಕರೆಯಲಾಯಿತು ಎಂದು ತೋರುತ್ತದೆ. ಇಂದಿಗೂ ನಮ್ಮ ಹಿರೀಕರು ಚರ್ಚುಗಳನ್ನು ತಾಯಿಮಠ ಎಂದೇ ಗುರುತಿಸುವುದನ್ನು ನೋಡಬಹುದು.
ಹಾಗೆ ನೋಡಿದರೆ ಕನ್ನಡ ನಾಡಿನಲ್ಲಿ ಶಿಕ್ಷಣ ಕ್ಷೇತ್ರವು ಎರಡು ಸಾವಿರ ವರ್ಷಗಳ ಪರಂಪರೆ ಹೊಂದಿದೆ. ಬಹು ಹಿಂದಿನಿಂದಲೂ ಬೌದ್ಧ ವಿಹಾರಗಳೂ ಜೈನ ಬಸದಿಗಳೂ ಸಂಘಟಿತ ರೂಪದಲ್ಲಿ ಶಿಕ್ಷಣ ನೀಡುತ್ತಿದ್ದವು. ಅಂದು ವಿದ್ಯಾದಾನವನ್ನು ಮಹಾ ಪುಣ್ಯಕಾರ್ಯವೆಂಬಂತೆ ಪರಿಭಾವಿಸಲಾಗುತ್ತಿತ್ತು. ವಿಬುಧರನ್ನು ಆದರಿಸಿ ಸಮಾಜದಲ್ಲಿ ಉತ್ತಮಸ್ಥಾನವನ್ನು ನೀಡುವುದು ಪದ್ಧತಿಯಾಗಿತ್ತು. ರಾಜರೂ ಧನಿಕರೂ ವಿಹಾರಗಳನ್ನು ಸ್ಥಾಪಿಸಿ ಅವಕ್ಕೆ ದತ್ತಿ ಕೊಡುವ ಸಂಪ್ರದಾಯವೂ ಬೆಳೆದುಬಂದಿತ್ತು. ಕ್ರಿಸ್ತಶಕ ಮೂರನೇ ಶತಮಾನದ ಬನವಾಸಿಯ ಒಂದು ಶಾಸನದಲ್ಲಿ ಶಿವಸ್ಕಂದ ನಾಗಶ್ರೀ ಎಂಬ ಚುಟು ರಾಜಕುಮಾರಿಯು ವಿದ್ಯಾದಾನಕ್ಕಾಗಿ ಒಂದು ಬೌದ್ಧ ವಿಹಾರವನ್ನು ನಿರ್ಮಿಸಿದ್ದಳು ಎಂಬ ಉಲ್ಲೇಖವಿದೆ. ಎರಡನೆಯ ಪುಲಕೇಶಿಯ ಆಳ್ವಿಕೆಯ ಹೊತ್ತಿಗೆ ಇಂತಹ ವಿಹಾರಗಳ ಸಂಖ್ಯೆ ನೂರಕ್ಕೆ ಏರಿತ್ತು.
ಮುಂದೆಯೂ ಗ್ರಂಥದಾನ, ಅಕ್ಷರದಾನಗಳ ಹೆಸರಲ್ಲಿ ಕಲಿಕೆಯು ಮುಂದುವರಿದ ಉಲ್ಲೇಖಗಳು ಕಾಣಸಿಗುತ್ತವೆ. ಘಟಿಕಗಳು, ಅಗ್ರಹಾರಗಳು, ಬ್ರಹ್ಮಪುರಿಗಳು, ಮಠಗಳು ಮತ್ತು ದೇಗುಲದ ವಿದ್ಯಾಲಯಗಳು ಉನ್ನತ ಶಿಕ್ಷಣವೀಯುತ್ತಿದ್ದ ಬಗ್ಗೆಯೂ ಪಾರಂಪರಿಕ ದಾಖಲೆಗಳಿವೆ.
ಇಷ್ಟೆಲ್ಲಾ ಇದ್ದರೂ ಹೆಣ್ಣುಮಕ್ಕಳ ವಿದ್ಯಾಭ್ಯಾಸಕ್ಕೆ ಗಮನ ನೀಡಿದ ಬಗ್ಗೆ ಎಲ್ಲೂ ಉಲ್ಲೇಖವಿಲ್ಲ. ಎಲ್ಲೋ ಒಬ್ಬರು ಇಬ್ಬರು ಅರಗುವರಿಯರು ರಾಣಿಯರು ವಿದ್ಯಾಪಾರಂಗತರಾಗಿದ್ದ ಉದಾಹರಣೆ ಇದ್ದರೂ ಸಾರ್ವತ್ರಿಕವಾಗಿ ಹೆಣ್ಣುಮಕ್ಕಳಿಗೆ ಶಿಕ್ಷಣ ನೀಡುತ್ತಿದ್ದ ಕುರಿತು ಎಲ್ಲೂ ಹೇಳಿಲ್ಲ.
ಲಿಂಗಾಯತ ಮಠಗಳು ತಮ್ಮ ಧರ್ಮಪ್ರಚಾರದ ಅಂಗವಾಗಿ ತಮ್ಮ ಮಠದಲ್ಲಿ ವಿದ್ಯೆ ಕಲಿಯುವವರಿಗಷ್ಟೇ ಪ್ರಸಾದದ ರೂಪದಲ್ಲಿ ಊಟ ನೀಡುವ ಆಮಿಷ ತೋರಿಸಿ ಸರ್ವ ವರ್ಗಗಳಿಗೂ ವಿದ್ಯಾದಾನ ಮಾಡಿದವಾದರೂ ಸ್ವತಃ ಹೆಣ್ಣುಮಕ್ಕಳು ವಿದ್ಯಾಭ್ಯಾಸಕ್ಕೆ ಮುಂದೆ ಬರಲಿಲ್ಲವೆಂಬುದು ನಮ್ಮ ಸಾಮಾಜಿಕ ವ್ಯವಸ್ಥೆಗೆ ಹಿಡಿದ ಕನ್ನಡಿಯಾಗಿದೆ. ಆದರೂ ಮಿಂಚಿನಂತೆ ಹೊಳೆಯುವ ಅಕ್ಕಮಹಾದೇವಿಯ ಕಾವ್ಯೋನ್ನತಿಯನ್ನು ಮೆಚ್ಚದಿರಲು ಸಾಧ್ಯವೇ ಇಲ್ಲ. ಅತ್ತಿಮಬ್ಬೆ, ಶಾಂತಲೆ, ಹೊನ್ನಮ್ಮ, ಮಲ್ಲಮ್ಮ ಮುಂತಾದವರು ವಿದ್ಯಾವಂತರಾಗಿದ್ದರೋ ಇಲ್ಲವೋ ಕಾವ್ಯ ಕಲೆಗಳ ಬಗೆಗಿನ ಅವರ ಒಲವು ಅಭಿನಂದನೀಯ.
ಬಹು ಹಿಂದಿನಿಂದಲೂ ವಿಬುಧರನ್ನು ಸನ್ಮಾನಿಸುವ ಹಾಗೂ ವಿದ್ಯಾರ್ಜನೆಯನ್ನು ನಿರಂತರವೂ ಮುಂದುವರಿಸುವ ಮಣಿಹಕ್ಕೆ ಸಾಮಾಜಿಕ ಗೌರವ ಸಂದಿದೆ. ಜೊತೆಗೆ ಮಕ್ಕಳನ್ನು ಪಡೆಯುವುದರಿಂದಲೇ ತಂದೆಯ ಕರ್ತವ್ಯ ಮುಗಿಯುವುದಿಲ್ಲ; ಅವರಿಗೆ ತಕ್ಕ ಶಿಕ್ಷಣವೀಯುವುದೂ ಅವನ ಕರ್ತವ್ಯವೆಂದು ನಮ್ಮ ಹಿರಿಯರು ಭಾವಿಸಿದ್ದರು. ಅಜ್ಞಾತ ಕವಿಯೊಬ್ಬನು,
ಮಕ್ಕಳಿಗೆ ತಂದೆ ಬಾಲ್ಯದೊ
ಳಕ್ಕರವಿದ್ಯೆಗಳನರಿಪದಿರ್ದೊಡೆ ಕೊಂದಂ
ಲಕ್ಕಧನಮಿರಲು ಕೆಡುಗುಂ
ಚಿಕ್ಕಂದಿನ ವಿದ್ಯೆ ಪೊರೆಗು ಚೂಡಾರತ್ನಾ
ಎಂದಿದ್ದಾನೆ. ಅದರರ್ಥ 'ಮಕ್ಕಳಿಗೆ ಅವರ ತಂದೆಯು ಅಕ್ಷರವಿದ್ಯೆಗಳನ್ನು ಕಲಿಸದಿದ್ದರೆ ಅವರನ್ನು ಸಾಯಿಸಿದಂತೆಯೇ. ವಿದ್ಯೆಯಿಲ್ಲದಿದ್ದರೆ ಲಕ್ಷ ಹಣವಿದ್ದರೂ ಪ್ರಯೋಜನಕ್ಕೆ ಬಾರದು. ಚಿಕ್ಕಂದಿನಲ್ಲಿ ಕಲಿತ ವಿದ್ಯೆ ಜೀವನಪರ್ಯಂತ ಕಾಯುವುದು'
ಈ ಒಂದು ಹಿನ್ನೆಲೆಯಲ್ಲಿ ನಮ್ಮ ಕ್ರೈಸ್ತ ಮಿಷನರಿಗಳು ವಿದ್ಯಾದಾನಕ್ಕೆ ಕೈಗೂಡಿಸಿದ ಬಗೆಯು ವಿಭಿನ್ನವೂ ವಿನೂತನವೂ ಆಗಿತ್ತು. ಅವರು ನಮ್ಮ ದೇಶದ ಪಾರಂಪರಿಕ ಕಾವ್ಯದ ಓದಿನ ಬದಲಾಗಿ ಶಾಲಾ ಪಠ್ಯಗಳಲ್ಲಿ ಭೂಗೋಳಶಾಸ್ತ್ರ, ಸಮಾಜಶಾಸ್ತ್ರ, ದೇಶವಿದೇಶಗಳ ಚರಿತ್ರೆ, ಸಾಮಾನ್ಯ ವಿಜ್ಞಾನ, ಗಣಿತ ಮುಂತಾದ ವಿಷಯಗಳನ್ನು ತುಂಬಿದರು. ನಕಾಶೆಗಳನ್ನು ಬರೆಯುವುದು ಹೇಗೆಂದು ಹೇಳಿಕೊಟ್ಟರು.
ಮೈಸೂರು ಸಂಸ್ಥಾನದ ಮಹಾರಾಜರು ಪ್ರಗತಿಪರ ವಿಚಾರಧಾರೆ ಹೊಂದಿದವರಾಗಿದ್ದು ತಮ್ಮ ನಾಡಿನಲ್ಲಿ ಶಿಕ್ಷಣಕ್ಕೆ ಬಹುತರ ಆದ್ಯತೆ ನೀಡಿದ್ದರಲ್ಲದೆ ಉನ್ನತ ಶಿಕ್ಷಣಕ್ಕಾಗಿ ವಿದ್ಯಾರ್ಥಿವೇತನ ಸ್ಥಾಪಿಸಿದವರಲ್ಲಿ ಮೊದಲಿಗರಾಗಿದ್ದರು. ಬನಾರಸ್ ವಿಶ್ವವಿದ್ಯಾಲಯ ಸ್ಥಾಪಿಸುವಲ್ಲಿ ಮೈಸೂರು ಮಹಾರಾಜರ ಕೊಡುಗೆ ಅತಿ ಹೆಚ್ಚಿನದಾಗಿತ್ತಲ್ಲದೆ ಅದೇ ಕಾರಣದಿಂದ ಅವರು ಮೂರು ಅವಧಿಯವರೆಗೆ ಆ ವಿಶ್ವವಿದ್ಯಾಲಯದ ಕುಲಪತಿ ಸ್ಥಾನವನ್ನು ಅಲಂಕರಿಸಿದ್ದರು. ದೇಶದಲ್ಲೇ ಮೊದಲ ಬಾರಿಗೆ ಕಡ್ಡಾಯ ಪ್ರಾಥಮಿಕ ಶಿಕ್ಷಣವನ್ನು ಪ್ರಾರಂಭಿಸಿದ ಕೀರ್ತಿ ಮೈಸೂರು ಮಹಾರಾಜರಿಗೆ ಸಲ್ಲುತ್ತದೆ.
ಅಂದು ದೇಶವನ್ನು ಆಳುತ್ತಿದ್ದ ಬ್ರಿಟಿಷ್ ಸರಕಾರವು ಜಾತ್ಯತೀತವಾಗಿದ್ದು ಮಿಷನರಿ ಕೆಲಸಕ್ಕೆ ಬೆಂಬಲ ನೀಡಲಿಲ್ಲವಾದರೂ ಸಾರ್ವತ್ರಿಕ ಶಿಕ್ಷಣಕ್ಕೆ ಪಠ್ಯಪುಸ್ತಕಗಳನ್ನು ರೂಪಿಸಲು ಮಿಷನರಿಗಳ ನೆರವು ಪಡೆಯಿತೆಂಬುದು ಗಮನಾರ್ಹ. ಈ ದೆಸೆಯಿಂದ ಅಂದಿನ ಶಿಕ್ಷಣದಲ್ಲಿ ಒಂದು ಏಕರೂಪತೆ ಸಾಧ್ಯವಾಯಿತು. ಹೀಗೆ ಎಲ್ಲೆಡೆ ಸರಕಾರಿ ಶಾಲೆಗಳು ತೆರೆಯಲ್ಪಟ್ಟು ಸಮಾಜದ ಎಲ್ಲರಿಗೂ ಸುಲಭವಾಗಿ ವಿದ್ಯೆ ಸಿಗುವಂತಾಯಿತು.
ಆದರೂ ನಮ್ಮ ದೇಶದ ಕ್ರೈಸ್ತ ಶಿಕ್ಷಣ ಸಂಸ್ಥೆಗಳು ಬಹುಕಾಲ ಹಾಗೂ ಬಹುಸ್ಥಳಗಳಲ್ಲಿ ತನ್ನ ಆಧಿಪತ್ಯ ಸ್ಥಾಪಿಸಿದ್ದವು. ನಮ್ಮ ದೇಶದಲ್ಲಿ ಆಧುನಿಕ ಶಿಕ್ಷಣ ವ್ಯವಸ್ಥೆಯ ಪ್ರಪ್ರಥಮ ರೂವಾರಿಗಳಾದ ಕ್ರೈಸ್ತ ವಿದ್ಯಾಸಂಸ್ಥೆಗಳು ಬಹು ವಿಶಾರದವೂ ವಿಚಾರಪ್ರದವೂ ಆದ ಶಿಕ್ಷಣದ ಮೂಲಕ ಸಹಸ್ರಾರು ಜನರನ್ನು ದೇಶ ಕಟ್ಟುವ ನಿಟ್ಟಿನಲ್ಲಿ ತಯಾರು ಮಾಡಿದವು. ದೇಶದ ಅತಿರಥ ಮಹಾರಥರಾಗಿ ವಿಜೃಂಭಿಸಿದ ನಾಯಕರನೇಕರು ಕ್ರೈಸ್ತ ಶಿಕ್ಷಣ ಸಂಸ್ಥೆಗಳಲ್ಲಿ ಅಥವಾ ಕ್ರೈಸ್ತ ಶಿಕ್ಷಣವೇತ್ತರಲ್ಲಿ ತಯಾರಾದರೆಂಬುದು ಗಮನಾರ್ಹ ಸಂಗತಿ.
ಆದರೆ ಸ್ವತಃ ಕ್ರೈಸ್ತರನ್ನು ಈ ಶಿಕ್ಷಣಸಂಸ್ಥೆಗಳು ಹೇಗೆ ನಡೆಸಿಕೊಂಡವು ಎಂಬುದನ್ನು ವಿಮರ್ಶೆಗೊಳಪಡಿಸಲೇಬೇಕು. 32ನೇ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರೂ ಸಾಹಿತ್ಯವೇತ್ತರೂ ಕ್ರೈಸ್ತ ಲಿಂಗಾಯತ ಉಭಯ ಧರ್ಮಗಳ ಪಂಡಿತೋತ್ತಮರೂ ಆಗಿದ್ದ ರೆವರೆಂಡ್ ಉತ್ತಂಗಿ ಚೆನ್ನಪ್ಪನವರ ಅನುಭವದ ಪ್ರಕಾರ “ಸ್ಥಳೀಯ ಕ್ರೈಸ್ತರನ್ನು ಕ್ರೈಸ್ತಧರ್ಮ ಪ್ರಚಾರಕ್ಕೆ ಅಗತ್ಯವಿದ್ದಷ್ಟೇ ಓದು ಬರಹದ ತಿಳಿವನ್ನು ನೀಡಬೇಕು, ಉಚ್ಚಶಿಕ್ಷಣ ಹಾಗೂ ಇಂಗ್ಲಿಷ್ ವಿಷಯಗಳಲ್ಲಿ ಅವರನ್ನು ಪಾರಂಗತರಾಗಲು ಬಿಡಬಾರದು, ಹಾಗೇನಾದರೂ ಅವರನ್ನು ಹೆಚ್ಚು ಓದಲು ಬಿಟ್ಟರೆ ಮುಂದೆ ನಮಗೇ ಕಂಟಕಪ್ರಾಯರಾದಾರು” ಎಂದು ಮಿಷನರಿ ಮುಖ್ಯಸ್ಥರು ಭಾವಿಸಿದಂತೆ ತೋರುತ್ತದೆ. ಹೀಗೆ ಅರ್ಹತೆಯಿದ್ದರೂ ಚನ್ನಪ್ಪನವರು ಉನ್ನತ ವ್ಯಾಸಂಗದಿಂದ ವಂಚಿತರಾದರೆಂಬುದು ಇತಿಹಾಸದ ನಗ್ನಸತ್ಯ.
ಸ್ವಾತಂತ್ರ‍್ಯಾನಂತರದ ದಿನಗಳಲ್ಲಿ ನಮ್ಮದೇ ಇಂಡಿಯಾದ ಸರಕಾರವು ಪಂಚವಾರ್ಷಿಕ ಯೋಜನೆಗಳ ಮೂಲಕ ದೇಶದಲ್ಲಿ ಆಮೂಲಾಗ್ರ ಅಭಿವೃದ್ಧಿಗೆ ತೊಡಗಿತು. ಸರ್ವರಿಗೂ ಶಿಕ್ಷಣ ಎಂಬ ಒಂದು ಯೋಜನೆಯಡಿಯಲ್ಲಿ ದುರ್ಗಮ ಪ್ರದೇಶಗಳಲ್ಲಿ ಶಾಲೆಗಳನ್ನು ಸ್ಥಾಪಿಸಿ ದುರ್ಬಲ ವರ್ಗದವರಿಗೂ ಶಿಕ್ಷಣವು ಎಟಕುವಂತೆ ಮಾಡಲು ಯತ್ನಿಸಿತು. ಈ ಒಂದು ಪ್ರಕ್ರಿಯೆಯಲ್ಲಿ ಅದಾಗಲೇ ತೊಡಗಿಕೊಂಡಿದ್ದ ಕ್ರೈಸ್ತ ಶಿಕ್ಷಣ ಸಂಸ್ಥೆಗಳಿಗೆ ಸರಕಾರದ ಅನುದಾನ ನೀಡಿ ಅವನ್ನೂ ಈ ಪ್ರಕ್ರಿಯೆಯಲ್ಲಿ ಒಳಗೊಳ್ಳುವಂತೆ ಮಾಡಲಾಯಿತು. ಹೀಗೆ ನಮ್ಮ ಧಾರ್ಮಿಕ ಶಿಕ್ಷಣ ಸಂಸ್ಥೆಗಳ ಶಿಕ್ಷಕರು ಸರಕಾರದ ಸಂಬಳವನ್ನು ಪಡೆಯುವುದು ಸಾಧ್ಯವಾಯಿತು. ಅಲ್ಲದೆ ನಮ್ಮ ಶಿಕ್ಷಣ ಸಂಸ್ಥೆಗಳು ತಮ್ಮ ಶಾಲಾಕಟ್ಟಡಗಳನ್ನು ಅಭಿವೃದ್ಧಿಪಡಿಸಲು ವಿದ್ಯಾರ್ಥಿಗಳಿಂದ ಕಟ್ಟಡನಿಧಿ ಸಂಗ್ರಹಿಸಲೂ ಪರೋಕ್ಷವಾಗಿ ಬೆಂಬಲಿಸಿದಂತಾಯಿತು.
ಇದೇ ಕಟ್ಟಡನಿಧಿ ಸಂಗ್ರಹಣೆಯು ಮುಂದೆ ಡೊನೇಶನ್ ಎಂಬ ರೂಪದಲ್ಲಿ ಭೂತಾಕಾರವಾಗಿ ಬೆಳೆದು ಹಣ ಕೊಡುವವರಿಗಷ್ಟೇ ಸೀಟು ಎಂಬ ತತ್ವ ಮೈಗೂಡಿಸಿಕೊಂಡು ದುರ್ಬಲರಿಗೆ ಶಿಕ್ಷಣವೆಂಬ ತತ್ವ ಮೂಲೆಗುಂಪಾಯಿತು. ಶಾಲೆಗಳನ್ನು ನಡೆಸುವುದು ಲಾಭದಾಯಕ ಉದ್ಯಮವಾಗಿ ಬದಲಾಯಿತು. ಉದಾಹರಣೆಗೆ ತಮಿಳುನಾಡಿನ ಯೇರ್ಕಾಡು ಎಂಬ ಗಿರಿಪ್ರದೇಶದಲ್ಲಿ ಬಡಜನರ ಸೇವೆಗಾಗಿ ವಿದೇಶದಿಂದ ವಂತಿಗೆ ಸ್ವೀಕರಿಸುವ ಕನ್ಯಾಮಠವೊಂದು ಬೆಂಗಳೂರಿನಲ್ಲಿ ಶಾಲೆ ತೆರೆದು ಸಮಾಜದ ಉನ್ನತವರ್ಗದವರಿಗಷ್ಟೇ ಸೀಟು ಕೊಡುತ್ತದೆ. ಹೀಗೆ ಕ್ರೈಸ್ತ ಶಿಕ್ಷಣಸಂಸ್ಥೆಗಳೆಂಬ ಹೆಸರು ಹೊತ್ತಿರುವ ಅನೇಕ ಶಾಲೆಗಳು ಕ್ರೈಸ್ತರಿಗೆ ಸೀಟು ಕೊಡದ ಅನೇಕ ಉದಾಹರಣೆಗಳನ್ನು ಈಗಲೂ ಕಾಣಬಹುದು.
ಹಾಗೆ ಇಂತಹ ಶಾಲೆಗಳಲ್ಲಿ ಶಿಕ್ಷಣ ಪಡೆದ ಸಮಾಜದ ಉನ್ನತ ವರ್ಗದ ಬಲಾಡ್ಯ ಸಮುದಾಯದ ವಿದ್ಯಾರ್ಥಿಗಳು ಮುಂದೆ ಉನ್ನತ ಸ್ಥಾನಗಳನ್ನು ಅಲಂಕರಿಸಿ ನಮ್ಮ ಧಾರ್ಮಿಕ ಸಂಸ್ಥೆಗಳ ವಿರುದ್ಧವೇ ಕತ್ತಿ ಜಳಪಿಸುವುದು ಸರ್ವೇಸಾಮಾನ್ಯವಾಗಿದೆ. ಹೀಗೆ ನಮ್ಮದೇ ಕ್ರೈಸ್ತಶಾಲೆಯ ವಿದ್ಯಾರ್ಥಿಯಾಗಿದ್ದ ಅರುಣ್ ಶೌರಿ ಎಂಬ ಪತ್ರಕರ್ತ ಮುಂದೆ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಯಲ್ಲಿ ಅಂಕಣಕಾರನಾಗಿ ನಮ್ಮ ಧಾರ್ಮಿಕ ವಿಷಯಗಳನ್ನು ಲೇವಡಿ ಮಾಡುತ್ತಾ ಪುಂಖಾನುಪುಂಖವಾಗಿ ಲೇಖನಗಳನ್ನು ಬರೆದದ್ದು ನೆನಪಿದೆ ತಾನೇ? ಇದೇ ಅರುಣ್ ಶೌರಿ ಮುಂದೆ ಲೋಕಸಭಾ ಸದಸ್ಯನಾಗಿ ಮಂತ್ರಿಯೂ ಆಗುತ್ತಾನೆನ್ನುವುದು ಆತ್ಮಘಾತುಕ ಸಂಗತಿ.
ಇಂದು ನಮ್ಮ ಶಾಲೆಗಳಲ್ಲಿ ಬೋಧಿಸುವ ಪಾದ್ರಿಗಳೂ, ಬ್ರದರುಗಳೂ, ಸಂನ್ಯಾಸಿನಿಯರೂ ಸರಕಾರದ ಅನುದಾನದಡಿಯಲ್ಲಿ ಸಂಬಳ ಪಡೆಯುತ್ತಿದ್ದರೂ ಆದಾಯ ತೆರಿಗೆ ಪಾವತಿಸಲು ವಿನಾಯಿತಿ ಪಡೆಯುತ್ತಿದ್ದಾರೇಕೆ ಎಂದು ಪ್ರಶ್ನಿಸಲಾಗುತ್ತಿದೆ. ಅಲ್ಲದೆ ಸರಕಾರದ ಅನುದಾನ ಪಡೆಯುವ ಕ್ರೈಸ್ತಶಾಲೆಗಳನ್ನು ವಶಕ್ಕೆ ತೆಗೆದುಕೊಂಡು ಸರಕಾರವೇ ಶಾಲೆ ನಡೆಸಬಾರದೇಕೆ ಎಂಬ ಪ್ರಶ್ನೆಯನ್ನೂ ಹಾಕಲಾಗುತ್ತಿದೆ.
ಇಂತಿರುವಲ್ಲಿ ನಮ್ಮದೇ ಶಾಲೆಗಳಲ್ಲಿ ನಮ್ಮ ಮಕ್ಕಳಿಗೆ ಸೀಟುಕೊಡದ, ನಮ್ಮ ಮಕ್ಕಳಲ್ಲಿ ನಾಯಕತ್ವದ ಗುಣ ಬೆಳೆಸದ, ನಮ್ಮ ಜನರನ್ನು ಭಾಷೆಯ ಕಾರಣದಿಂದ ಪ್ರಾದೇಶಿಕ ಕಾರಣದಿಂದ ತರತಮ ಭಾವದಲ್ಲಿ ಕಾಣುವ, ಬೇರೆಲ್ಲೋ ಸಂದರ್ಶನ ನಡೆಸಿ ಅಲ್ಲೆಲ್ಲಿಂದಲೋ ಶಿಕ್ಷಕರನ್ನು ತಂದು ಹೇರುವ ಹುಳುಕು ಮನಸ್ಸುಗಳು ಇರುವವರೆಗೂ ನಮ್ಮ ವಿಮೋಚನೆ ಯಾರಿಂದಲೂ ಸಾಧ್ಯವಿಲ್ಲ.
*********
No comments:
Post a Comment