Showing posts with label ನೀವೂ ನೋಡಿ. Show all posts
Showing posts with label ನೀವೂ ನೋಡಿ. Show all posts

Saturday, 4 April 2020

ಮೊಲೊಕೈ - ದಿ ಸ್ಟೋರಿ ಆಫ್ ಫಾದರ್ ಡೇಮಿಯನ್

- ಪ್ರಶಾಂತ್ ಇಗ್ನೇಶಿಯಸ್
------------------
ಫ್ರಾನ್ಸ್ ನ ಯೇಸು ಮತ್ತು ಮರಿಯಮ್ಮನವರ ಪವಿತ್ರ ಹೃದಯದ ಸಭೆಗೆ ಸೇರಿದ್ದ ಫಾದರ್ ಡೇಮಿಯನ್ ರವರು ಹವಾಯ್ ರಾಜ್ಯದಲ್ಲಿ ಸಲ್ಲಿಸಿದ ಸೇವೆ ಕುರಿತಾದ ಚಿತ್ರವೇ ‘ಮೊಲೊಕೈ - ದಿ ಸ್ಟೋರಿ ಆಫ್ ಫಾದರ್ ಡೇಮಿಯನ್’. ಪೌಲ್ ಕೋಕ್ಸ್ ನಿರ್ದೇಶನದ ಈ ಚಿತ್ರ 1999ರಲ್ಲಿ ಬಿಡುಗಡೆಯಾಯಿತು. 
ಅಮೆರಿಕ ಸಮೀಪದ ಹವಾಯ್ ದ್ವೀಪಕ್ಕೆ ಏಷಿಯಾದ ವಲಸಿಗರು ಬಂದು ನೆಲಸುವುದರೊಂದಿಗೆ ಅಲ್ಲಿ ಕುಷ್ಠ ರೋಗವೂ ಕಾಣಿಸಿಕೊಳ್ಳತೊಡಗುತ್ತದೆ. ಅದು ವ್ಯಾಪಕವಾಗಿ ಹರಡುತ್ತಿದ್ದಂತೆ, ಪಕ್ಕದ ಕಲೌಪಾಪ ಎಂಬ ಸಣ್ಣ ಹಳ್ಳಿಗೆ ರೋಗ ಬಾಧಿತರನ್ನು ಸರ್ಕಾರ ಕಳುಹಿಸುತ್ತದೆ. ಇದಕ್ಕೆ ಹವಾಯ್ ಸರ್ಕಾರಕ್ಕೆ ಕಥೋಲಿಕ ಧರ್ಮಸಭೆ ನೆರವು ನೀಡುತ್ತದೆ. 
ಆ ಬಾಧಿತರ ಆಧ್ಯಾತ್ಮಿಕ ನೆರವು ಹಾಗೂ ಕೊನೆಯ ಸಂಸ್ಕಾರಕ್ಕಾಗಿ ಒಬ್ಬ ಧರ್ಮಗುರುವನ್ನು ಕಳುಹಿಸಬೇಕೆಂದು ಆ ಪ್ರಾಂತ್ಯದ ಧರ್ಮಾಧ್ಯಕ್ಷರಿಗೆ ಅನಿಸುತ್ತದೆ. ಆಗ ಫಾದರ್ ಡೇಮಿಯನ್ ಇದಕ್ಕೆ ಸ್ವಯಂ ಮುಂದೆ ಬರುತ್ತಾರೆ. ಆದರೆ ಅಲ್ಲಿ ಯಾರನ್ನೂ ಮುಟ್ಟಬಾರದೆಂಬ ಎಚ್ಚರಿಕೆಯನ್ನು ಅವರಿಗೆ ನೀಡಲಾಗುತ್ತದೆ. ಫಾದರ್ ಡೇಮಿಯನ್ ಕಲೌಪಾಪಗೆ ಬಂದು ಏನು ಮಾಡುತ್ತಾರೆ ಎಂಬುದೇ ಚಿತ್ರದ ಕಥಾವಸ್ತು.
ಹಾಗೆ ಕಲೌಪಾಪಗೆ ಬಂದ ಫಾದರ್ ಡೇಮಿಯನ್ ರನ್ನು ಅಲ್ಲಿನ ನಿರಾಶಾದಾಯಕ ವಾತಾವರಣ ಸ್ವಾಗತಿಸುತ್ತದೆ. ಸಾವಿನ ದವಡೆಯಲ್ಲಿರುವವರ ಹಾಗೂ ಮಾರಣಾಂತಿಕ     ಕುಷ್ಠರೋಗದಿಂದ ವಿಧ ವಿಧವಾಗಿ ನರಳುತ್ತಿರುªವರು ಇನ್ನೇನು ತಾನೇ ಮಾಡಲು ಸಾಧ್ಯ.? ಎಲ್ಲರೂ ತಮ್ಮ ಜೀವದ ಆಸೆ ಬಿಟ್ಟಿರುವಾಗ ಅಲ್ಲೊಂದು ಲೋಲಪತನ ಮನೆ ಮಾಡಿರುತ್ತದೆ. ಉಡಾಫೆ, ಅಹಂಕಾರ ನೆರಮನೆಯಂತಿರುತ್ತದೆ. ಇದ್ದ ಸಣ್ಣ ದೇವಾಲಯವೊಂದು ಅಲ್ಲಿನ ಧಾರ್ಮಿಕ ಆಗು ಹೋಗುಗಳ ಪ್ರತಿಬಿಂಬವಾಗಿ ಪಾಳುಬಿದ್ದು ಹೋಗಿರುತ್ತದೆ. 
ಹೀಗೆ ರೋಗ ಬಾಧಿತರ ಜಾಗಕ್ಕೆ ಆಧ್ಯಾತ್ಮಿಕ ನೆರವಿಗಾಗಿ ಬಂದ ಗುರು ಮುಂದೆ ಹೇಗೆ ಆ ಊರಿನವರೇ ಆಗುತ್ತಾರೆ ಎಂಬ ಹೃದಯಸ್ಪರ್ಶಿ ಚಿತ್ರಣ ಇಲ್ಲಿದೆ. ಫಾದರ್ ಡೇಮಿಯನ್ ಪಾತ್ರಧಾರಿ ಡೇವಿಡ್ ವೆನ್ನಾಮ್ ಚಿತ್ರದ ವಿವಿಧ ಹಂತದಲ್ಲಿ ಪಾತ್ರವಾಗಿ ತಲ್ಲೀನವಾಗಿರುವ ಪರಿ ಅದ್ಭುತ.
ಚಿತ್ರದಲ್ಲಿ ಅನೇಕ ರೀತಿಯ ಸಂಘರ್ಷಗಳನ್ನು ಉತ್ತಮವಾಗಿ ಚಿತ್ರಿಸಲಾಗಿದೆ. ಮೊದಲಿಗೆ ಆ ನಿರಾಶೆಯ ವಾತಾವರಣವೇ ಒಂದು ದೊಡ್ಡ ತೊಡಕಾದರೆ, ಮಾರಣಾಂತಿಕ ರೋಗ ಮತ್ತೊಂದು ತೊಡಕಾಗುತ್ತದೆ. ನಂತರ ಅಲ್ಲಿನ ಜನರ ಮನೋಭಾವ, ಫಾದರ್ ಡೇಮಿಯನ್‍ಗೆ ತಮ್ಮ ಸಂಸ್ಥೆಯಿಂದಲೇ ಸಿಗದ ನೆರವು, ರಾಜಕೀಯ ತಂತ್ರಗಾರಿಕೆ, ರಾಜಕೀಯ ಹಾಗೂ ಧಾರ್ಮಿಕ ಅಧಿಕಾರಶಾಹಿಯ ಸ್ವಾರ್ಥ, ಕಠೋರತೆ ಎಲ್ಲವೂ ಇದೆ. 
ಅದಕ್ಕೆ ಉದಾಹರಣೆಯಾಗಿ ಫಾದರ್ ಡೇಮಿಯನ್ ತಮಗೆ ತಿಳಿದಿರುವ ಒಬ್ಬರ ಮೂಲಕ ತಾವು ಮಾಡುತ್ತಿರುವ ಕಾರ್ಯಕ್ಕಾಗಿ ಹಣವನ್ನು ತರಿಸಲು ಒಂದು ಪತ್ರ ಬರೆಯುತ್ತಾರೆ. ಆದರೆ ಆ ರೀತಿಯ ಪತ್ರದಿಂದ ಅಲ್ಲಿನ ಸರ್ಕಾರ ಹಾಗೂ ಧಾರ್ಮಿಕ ವ್ಯವಸ್ಥೆ ಏನೂ ಮಾಡುತ್ತಿಲ್ಲವೆಂಬ ಸಂದೇಶ ಹೊರಜಗತ್ತಿಗೆ ಹೋಗಬಹುದು ಎಂಬ ಕಾರಣದಿಂದ ಆ ಪ್ರದೇಶದ ಪ್ರಧಾನ ಮಂತ್ರಿ ಹಾಗೂ ಧಾರ್ಮಿಕ ಸಂಸ್ಥೆಯ ಮುಖ್ಯಸ್ಥರು ಫಾದರ್ ಡೇಮಿಯನ್‍ರನ್ನು ಖಂಡಿಸುತ್ತಾರೆ. 
ಅಲ್ಲಿ ನಡೆಯುತ್ತಿರುವುದು ಹೊರ ಜಗತ್ತಿಗೆ ಗೊತ್ತಾಗಬಾರದು ಎನ್ನುತ್ತಾ ಆ ಒಳ್ಳೆಯ ಕಾರ್ಯಕ್ಕಿಂತ ತಮ್ಮ ತಮ್ಮ ಪ್ರತಿಷ್ಠೆ ಮುಖ್ಯ ಎಂಬುದನ್ನು ಚಿತ್ರದಲ್ಲಿ ತೋರಿಸಲಾಗಿದೆ. ಆ ಪ್ರದೇಶದ ರಾಣಿ ಈ ರೋಗಗ್ರಸ್ಥ ಪ್ರದೇಶಕ್ಕೆ ಭೇಟಿ ಕೊಡಲು ಬಂದು ಅಲ್ಲಿನ ಜನರೊಂದಿಗೆ ಬೆರೆಯುವುದು, ಫಾದರ್ ರವರ ಸೇವೆಯನ್ನು ಪ್ರಶಂಸಿಸುವುದು, ಆದರೆ ಅದೇ ಧಾರ್ಮಿಕ ನಾಯಕರು ಅಲ್ಲಿ ಬರಲು ಹಿಂಜರಿಯುತ್ತಾ, ಅನಾದರ ತೋರಿಸುವುದು ಮೌಲ್ಯಗಳ ದ್ವಂದ್ವವನ್ನು ಎತ್ತಿ ತೋರಿಸುತ್ತದೆ. 
ವ್ಯವಸ್ಥೆ ಹೇಗೆ ತನ್ನ ಕ್ರೂರತನವನ್ನು ಪ್ರದರ್ಶಿಸಬಹುದು ಎಂಬುದರ ಮತ್ತೊಂದು ನಿದರ್ಶನ ಇಲ್ಲಿ ಸುಂದರವಾಗಿ ಮೂಡಿಬಂದಿದೆ. ಸುಮಾರು ತಿಂಗಳುಗಳ ಕಾಲದಿಂದ ಪಾಪ ನಿವೇದನೆಯನ್ನು ಮಾಡದ ಫಾದರ್ ತಮ್ಮ  ಉನ್ನತಾಧಿüಕಾರಿಗಳಿಗೆ ಈ ಮೂಲಕ ಪತ್ರ ಬರೆಯುತ್ತಾರೆ. ಮಾರಣಾಂತಿಕ ರೋಗದ ಗೂಡಾದ ಈ ದ್ವೀಪಕ್ಕೆ ಯಾವುದೇ ಒಬ್ಬ ಗುರು ಬರಲು ಒಪ್ಪದೇ ಅನೇಕ ರೀತಿಯ ಸಬೂಬುಗಳನ್ನು ನೀಡಿ ತಪ್ಪಿಸಿಕೊಳ್ಳುತ್ತಾರೆ. ಇದನ್ನು ತಿಳಿದ ಅಲ್ಲಿನ ಧರ್ಮಾಧ್ಯಕ್ಷರು ತಾವೇ ಕಲೌಪಾಪಗೆ ಹೋಗುವ ನಿರ್ಧಾರ ಮಾಡುತ್ತಾರೆ. ರೋಗದ ಸ್ಥಳಕ್ಕೆ ಹೋಗುವುದು ಬೇಡ ಎಂಬ ಸಲಹೆಯನ್ನು ಧಿಕ್ಕರಿಸಿ ಅವರು ಹೋಗುತ್ತಾರೆ. 
ಧರ್ಮಾಧ್ಯಕ್ಷರು ಹಡಗಿನಲ್ಲಿ ಹೋದಾಗ ಅಲ್ಲಿನ ಆರೋಗ್ಯ ಇಲಾಖೆಯು ಅವರನ್ನು ಹಡಗಿನಿಂದ ಇಳಿಯಲು ಅನುಮತಿ ನೀಡುವುದಿಲ್ಲ. ಇತ್ತ ದ್ವೀಪದಿಂದ ಒಂದು ಸಣ್ಣ ದೋಣಿಯ ಮೂಲಕ ಹಡಗಿನತ್ತ ಬರುವ ಫಾದರ್ ಡೇಮಿಯನ್‍ಗೂ ಕೂಡ ಹಡಗನ್ನು ಹತ್ತಲು ಅನುಮತಿ ನಿರಾಕರಿಸಲಾಗುತ್ತದೆ. ಇಂತಹ ಒಂದು ಸಂದಿಗ್ಧ ಪರಿಸ್ಥಿತಿಯಲ್ಲಿ ಕೆಳಗಿನ ಒಂದು ಸಣ್ಣ ದೋಣಿಯಲ್ಲಿ ಫಾದರ್, ಮೇಲೆ ನಿಂತ ಧರ್ಮಾಧ್ಯಕ್ಷರರ ನಡುವಿನ ಪಾಪ ನಿವೇದನೆಯ ದೃಶ್ಯ ಅತ್ಯಂತ ಹೃದಯಂಗಮವಾಗಿಯೂ ಹಾಗು ಹಾಸ್ಯಮಯವಾಗಿಯೂ ಚಿತ್ರಿತವಾಗಿದೆ. ಪಾಪ ನಿವೇದನೆ ಸುತ್ತಮುತ್ತಲಿನ ಜನರಿಗೆ ಅರ್ಥವಾಗದಂತೆ ಪ್ರೆಂಚ್ ಭಾಷೆಯಲ್ಲಿ ತನ್ನ ಪಾಪ ನಿವೇದನೆಯನ್ನು ಮಾಡುತ್ತಾರೆ. 
ಈ ಧಾರ್ಮಿಕ ಸಂಸ್ಥೆಗಳ ಕ್ರೂರತನ ಎಲ್ಲಿಯ ತನಕ ಹೋಗಿ ಮುಟ್ಟುತ್ತದೆ ಎಂದರೆ ಫಾದರ್ ಡೇಮಿಯನ್ ಅಲ್ಲಿನ ಜನರೊಂದಿಗೆ ಬೆರೆಯುವುದನ್ನು ಸಹಿಸದ ಧಾರ್ಮಿಕ ಸಂಸ್ಥೆ ಅವರಿಗೆ ಯಾವುದಾದರೂ ಲೈಂಗಿಕ ರೋಗ ತಗುಲಿದೆಯೇ ಎಂಬುದನ್ನು ಸಂಸ್ಥೆಯ ವೈದ್ಯರ ಮೂಲಕ ಖಾತರಿಪಡಿಸಿಕೊಳ್ಳುತ್ತದೆ. ಈ ದೃಶ್ಯ ನೋಡುಗರ ಹೃದಯದಲ್ಲಿ ಕೋಪವನ್ನು ತರಿಸುತ್ತದೆ. ಏಕೆಂದರೆ ಆ ಊರಿನ ಯುವತಿಯೊಬ್ಬಳು ಅವರಲ್ಲಿ ಆಕರ್ಷಿತಳಾಗಿ ಅವರ ಸಾಂಗತ್ಯ ಬಯಸಿದಾಗ, ಅವರು ಅವಳನ್ನು ತಿರಸ್ಕರಿಸಿರುತ್ತಾರೆ. ನೋಡುಗರ ಭಾವನೆಯ ಪ್ರತಿರೂಪವೋ ಎಂಬಂತೆ ಅಲ್ಲಿರುವ ಖುರ್ಚಿಯನ್ನು ಒದ್ದು ಫಾದರ್ ತಮ್ಮ ಕೋಪವನ್ನು ಹೊರಗೆಡುವುತ್ತಾರೆ. 
ಈ ರೀತಿಯ ಅನೇಕ ಸುಂದರ ದೃಶ್ಯಗಳು ಚಿತ್ರದಲ್ಲಿ ಇವೆ. ಕೆಲವೊಂದು ದೃಶ್ಯಗಳು ಕಣ್ಣಲ್ಲಿ ನೀರು ತರಿಸಿದರೆ, ಮತ್ತೆ ಕೆಲವು ಕೋಪ ಬರಿಸುತ್ತದೆ. ಅನೇಕ ದೃಶ್ಯಗಳು ಮನಸ್ಸಿನ ಆಳದಲ್ಲಿ ನಿಲ್ಲುವಂತೆ ಮಾಡಲು ನಿರ್ದೇಶಕರು ಯಶಸ್ವಿಯಾಗಿದ್ದಾರೆ. ಸಾವಿನ ದವಡೆಯಲ್ಲಿ ವೈದ್ಯಕೀಯ ಸಹಾಯಕನಾಗಿದ್ದ ವೃದ್ಧನೊಬ್ಬನ ಹಾಗೂ ಫಾದರ್ ನಡುವೆ ನಡೆಯುವ ಸಂಭಾಷಣೆಗಳು, ಆತನ ಅಂತ್ಯಸಂಸ್ಕಾರಕ್ಕೆ ದೇವಾಲಯದ ದುರಸ್ತಿಗೆ ಇಟ್ಟಿದ ಒಳ್ಳೆಯ ಮರದಿಂದ ಶವಪೆಟ್ಟಿಗೆಯನ್ನು ತಯಾರಿಸುವುದು, ಡೈಯಿಂಗ್ ಶೆಡ್‍ನಲ್ಲಿ ಸಾಯುತ್ತಿರುವ ಮಗುವನ್ನು ತಬ್ಬಿ ಅಳುವ ದೃಶ್ಯ, ಸಣ್ಣ ವಯಸ್ಸಿನ ಮಗನನ್ನು ಹೊಡೆಯುವ ಕುಡುಕ ತಂದೆಯನ್ನು ಫಾದರ್ ಎಚ್ಚರಿಸುವುದು ಎಲ್ಲವೂ ಮನಸ್ಸಿಗೆ ಬಹಳ ಹತ್ತಿರ. 
ಇನ್ನು ಚಿತ್ರದಲ್ಲಿ ಹಾಸ್ಯ ಇದ್ದೂ ಇಲ್ಲದಂತಿದೆ. ಸಂಗೀತವೂ ಇಲ್ಲಿ ಅತ್ತ್ಯುತ್ತಮವಾಗಿ ಬಳಕೆಯಾಗಿದೆ. ಗಾನವೃಂದದ ಅಭ್ಯಾಸ ಹಾಗೂ ಪೂಜೆಯ ಸಮಯದಲ್ಲಿ ಸಂಗೀತದ ಬಳಕೆ ನಿಜಕ್ಕೂ ಉತ್ತಮ. ರೋಗಿಗಳ ಕರುಣಾಜನಕವಾದ ದೃಶ್ಯಗಳ ನಡುವೆಯೇ ಬೆಟ್ಟ, ಹಸಿರು, ಸಮುದ್ರದ ನಡುವಿನ ಪ್ರದೇಶದ ದೃಶ್ಯಗಳು ಛಾಯಾಗ್ರಾಹಕನ ಮೂಲಕ ಈ ಚಿತ್ರಕ್ಕೆ ಅಗತ್ಯವಾಗಿ ಬೇಕಾದ ತಂಪನ್ನು, ಸಾಂತ್ವನವನ್ನು ನೀಡುತ್ತವೆ.
ಎಲ್ಲಾ ಪಾತ್ರದಾರಿಗಳು ಇಲ್ಲಿ ಪಾತ್ರವೇ ಆಗಿ ಹೋಗಿದ್ದಾರೆ. ಅದರಲ್ಲೂ ಅನೇಕ ನಿಜ ರೋಗಿಗಳನ್ನೇ ಬಳಸಿರುವುದನ್ನು ಕಾಣಬಹುದು. ಚಿತ್ರದ ನೈಜತೆಗೆ ಅವರು ನೀಡಿರುವ ಕೊಡುಗೆ ಚಿತ್ರದ ಗುಣಮಟ್ಟ ಎತ್ತರಿಸಿದೆ. ಅನೇಕ ರೀತಿಯ ಸಾಮಾಜಿಕ, ಧಾರ್ಮಿಕ ಹಾಗೂ ಮೌಲ್ಯಗಳ ಸಂಘರ್ಷಗಳನ್ನು ಕಾಣುತ್ತಿರುವ ನಮಗೆ ಈ ಚಿತ್ರ ಆಪ್ತವಾಗುತ್ತದೆ ಅಂತೆಯೇ ಮಾರಣಾಂತಿಕ ರೋಗದ ಭಯವನ್ನು ಅನುಭವಿಸುತ್ತಿರುವ ಈ ಸಮಯದಲ್ಲಿ ನಮ್ಮಂತೆ ನಿಮ್ಮಂತೆ ಬಾಳಿದ ವ್ಯಕ್ತಿಯೊಬ್ಬ ತೋರಿದ ಮಾನವೀಯ ಕಾಳಜಿಯನ್ನು ಆರಿಯಲು ಈ ಚಿತ್ರವನ್ನು ನಾವು ನೋಡಲೇಬೇಕು. ಈ ಮೂಲಕ ಇಷ್ಟು ಕಾಲ ನಮಗೆ ಅಜ್ಞಾತವಾಗಿ ಉಳಿದು ಹೋಗಿದ್ದ ಫಾದರ್ ಡೇಮಿಯನ್ ರವರ ಸೇವಾ ಜೀವನಕ್ಕೆ ನಮ್ಮ ಗೌರವವನ್ನು ಸಲ್ಲಿಸ ಬಹುದಾಗಿದೆ. ಯುಟ್ಯೂಬ್‍ನಲ್ಲಿ ಈ ಚಿತ್ರ ಲಭ್ಯವಿದೆ 
**********

Friday, 1 March 2019

ಮಾರ್ಸೆಲಿನೋ - ಪ್ರಶಾಂತ್ ಇಗ್ನೇಷಿಯಸ್




1955 ರಲ್ಲಿ ಬಿಡುಗಡೆಯಾದ ಮಾರ್ಸೆಲಿನೋ ಪಾನ್ ಇ ವಿನೋ ಎಂಬುದು ನಿಜಕ್ಕೂ ಶ್ರೇಷ್ಠ ಚಿತ್ರಗಳ ಸಾಲಿನಲ್ಲಿ ನಿಲ್ಲಬಲ್ಲ ಚಿತ್ರ. ಸರಳವಾದ ಕಥೆಯೊಂದನ್ನು ಅತ್ಯಂತ ಸುಂದರ ಹಾಗೂ ಆಪ್ತವಾಗಿ ಚಲನ ಚಿತ್ರದ ಮೂಲಕ ಮುಂದಿಡುವ ಕಾರ್ಯವನ್ನು 50-60ರ ದಶಕದಲ್ಲಿ ಹಲವಾರು ನಿರ್ದೇಶಕರು ಜಾಗತೀಕ ಮಟ್ಟದಲ್ಲಿ ಮಾಡಿದ್ದರು. ’ಮಾರ್ಸೆಲಿನೋ’ ಆ ಚಿತ್ರಗಳ ಸಾಲಿಗೆ ಸೇರಬಹುದಾದಂತ ಚಿತ್ರ. ಲಡಿಸ್ಲೋ ವಜ್ಡ ಎಂಬ ನಿರ್ದೇಶಕನ ಕೈಚಳಕದಲ್ಲಿ ಮೂಡಿ ಬಂದ ಈ ಸ್ಪಾನಿಷ್ ಭಾಷೆಯ ಚಿತ್ರಕ್ಕೆ ಭಾಷೆಯ ಹಂಗಿಲ್ಲ. ಭಾಷೆ ಅರ್ಥವಾಗದಿದ್ದರೂ ಚಿತ್ರ ಹೊರಡಿಸುವ ಭಾವನಾತ್ಮಕ ತರಂಗಗಳು ನೋಡುಗರನ್ನು ತನ್ನ ತೆಕ್ಕೆಗೆ ಸೆಳೆದುಕೊಳ್ಳುತ್ತದೆ. ಒಂದು ಚಿತ್ರ ನಿರ್ಮಾಣದಲ್ಲಿ ಬೇಕಾದ ಅಷ್ಟೂ ಮೂಲಭೂತ ತಾಂತ್ರಿಕ ಪರಿಭಾಷೆಯನ್ನು, ಅಚ್ಚುಕಟ್ಟುತನವನ್ನು, ಕಲಾವಂತಿಕೆಯನ್ನು ಬಳಸಿಕೊಂಡಿರುವ ಈ ಚಲನಚಿತ್ರ ಅಂದಿನ ಕಾಲಕ್ಕೆ ಹಣ ಗಳಿಕೆಯಲ್ಲೂ, ಖ್ಯಾತಿಯಲ್ಲೂ ಯಶಸ್ವಿಯಾಯಿತು.

ಚಿತ್ರದ ವಸ್ತು ಸರಳ. ಸ್ಪೇನಿನ ಹಳ್ಳಿಯೊಂದರಲ್ಲಿ ಫ್ರಾನ್ಸಿಸ್ಕನ್ ಗುರುಗಳು ಬಂದು, ಯುದ್ಧದಿಂದ ಬಿದ್ದು ಹೋಗಿದ್ದ ಹಳೆಯ ಕಟ್ಟಡವೊಂದರಲ್ಲಿ ತಮ್ಮ ಸೇವಾ ಜೀವನ ಆರಂಭಿಸುತ್ತಾರೆ. ಮೂವರಿಂದ ಪ್ರಾರಂಭವಾದ ಅವರ ಗುರುಮಠಕ್ಕೆ ಅಲ್ಲಿನ ಸ್ಥಳೀಯ ಮೇಯರ್ ಆಸರೆಯಾಗಿ ನಿಲ್ಲುತ್ತಾನೆ. ಕ್ರಮೇಣ 12 ಜನರಿರುವ ಗುರು ನಿಲಯಕ್ಕೆ ಅನಪೇಕ್ಷಿತ ಅತಿಥಿಯೊಬ್ಬ ಒಂದು ವಾರದ ಎಳೇಮಗುವಿನ ರೂಪದಲ್ಲಿ ಬರುತ್ತದೆ. ಮಗುವನ್ನು ತಮ್ಮ ಬಳಿ ಇಟ್ಟುಕೊಳ್ಳಬೇಕೆ? ಯಾರಿಗಾದರೂ ಕೊಡಬೇಕೇ? ಎಂಬ ಗೊಂದಲ ಗುರುಗಳದ್ದು. ಮುದ್ದು ಮಗು ತಮ್ಮ ಬಳಿಯೇ ಇರಲಿ ಎಂಬುದು ಅವರ ಆಸೆಯಾದರೂ ತಮ್ಮ ಧಾರ್ಮಿಕ ಜೀವನ ಮಗುವಿನ ಪಾಲನೆಯಲ್ಲಿ ಕಳೆದು ಹೋಗಬಾರದೆಂಬ ಕರ್ತವ್ಯ ಪ್ರಜ್ಞೆ ಅವರಲ್ಲಿ ಜಾಗೃತವಾಗುತ್ತದೆ.

ಹತ್ತಿರದ ಹಳ್ಳಿಗೆ ಹೋಗಿ ಅಲ್ಲಿನ ಅನೇಕರನ್ನು ಕೇಳಿಕೊಂಡರೂ, ಮಗುವನ್ನು ತೆಗೆದುಕೊಳ್ಳಲು ಯಾರೂ ಸಿದ್ದರಿಲ್ಲ. ಹಳ್ಳಿಯಲ್ಲಿನ ವ್ಯಾಪಾರಸ್ಥನೊಬ್ಬ ಮಗುವನ್ನು ಸಾಕಲು ಒಪ್ಪಿದರೂ ಅವನ ಜೀವನ ವಿಧಾನ, ಆತನ ಸ್ವಭಾವವನ್ನು ನೋಡಿ ಗುರುಗಳೇ ಅವನಿಗೆ ಮಗುವನ್ನು ಕೊಡಲು ನಿರಾಕರಿಸುತ್ತಾರೆ. ಮುಂದೆ ಅವನೇ ಆ ಊರಿಗೆ ಮೇಯರ್ ಆಗುತ್ತಾನೆ. ಹಳೆಯ ಮೇಯರ್ ಆ ಗುರುಗಳಿದ್ದ ಜಾಗವನ್ನು ಅವರಿಗೇ ನೊಂದಾಯಿಸಲು ಬಯಸಿದಾಗ, ತಮ್ಮದು ಏನಿದ್ದರೂ ಬೇಡಿ, ದುಡಿಯುವ ಜೀವನ ವಿಧಾನ, ಆಸ್ತಿ ಮಾಡುವುದು ತಮ್ಮ ಸಂಸ್ಥೆಯ ನಿಯಮಕ್ಕೆ ವಿರುದ್ಧ ಎಂದು ಗುರುಗಳು ನಿರಾಕರಿಸುತ್ತಾರೆ.

ಇತ್ತ ಮಗುವನ್ನು ತಾವೇ ಸಾಕಲು ಗುರುಗಳು ನಿರ್ಧರಿಸಿ, ಒಬ್ಬೊಬ್ಬರು ಒಂದೊಂದು ಜವಾಬ್ದಾರಿಯನ್ನು ವಹಿಸಿಕೊಳ್ಳುತ್ತಾರೆ. ಮಗು ಆ ಗುರು ನಿಲಯದಲ್ಲೇ ಎಲ್ಲರ ಮುದ್ದಿನ ಮಗುವಾಗಿ ಬೆಳೆಯುತ್ತದೆ. ಮಗು ಬಾಲಕನಾಗಿ, ಮಾರ್ಸೆಲಿನೋ ಎಂಬ ಹೆಸರಿನಿಂದ ಬೆಳೆದು ತನ್ನ ತುಂಟತನದಿಂದ ಎಲ್ಲರ ಪ್ರೀತಿ ಗಳಿಸುತ್ತಾನೆ. ಅಲ್ಲಿನ ಒಂದೊಂದು ಗುರುವಿಗೂ ಒಂದೊಂದು ಅಡ್ಡ ಹೆಸರನ್ನು ಇಟ್ಟು, ಅದೇ ಹೆಸರು ಆ ನಿಲಯದಲ್ಲಿ ಚಾಲ್ತಿಯಲ್ಲಿರುವಂತೆ ನೋಡಿಕೊಳ್ಳುತ್ತಾನೆ. ಅಲ್ಲಿನ 12 ಗುರುಗಳ ಲಾಲನೆ, ಪಾಲನೆ, ಪ್ರೀತಿ ದೊರಕಿದರೂ ತಾಯಿ ಪ್ರೀತಿಗಾಗಿನ ಹಂಬಲ ಮಾರ್ಸೆಲಿನೋನಲ್ಲಿ ಕಾಣುತ್ತದೆ. ತನ್ನ ನಿಲಯಕ್ಕೆ ಬಂದ ತಾಯೊಬ್ಬಳ ಮಗನ ಹೆಸರು ಮಾನುಯೇಲ್ ಎಂದು ತಿಳಿದು, ಕಾಲ್ಪನಿಕ ಮಾನುಯೇಲ್ ಎಂಬ ಗೆಳೆಯನೊಂದಿಗೆ ಮಾತನಾಡುತ್ತಾ ದಿನ ಕಳೆಯುತ್ತಾನೆ. ಗುರುಗಳ ನಡುಕಟ್ಟಿನ ಹಗ್ಗವನ್ನು ಮತ್ತೊಬ್ಬರದಕ್ಕೆ ಕಟ್ಟಿಬಿಡುವುದು, ದೇವಾಲಯದ ಘಂಟೆಯ ಶಬ್ದ ಕೇಳದಂತೆ ಅದಕ್ಕೆ ಬಟ್ಟೆ ಕಟ್ಟುವುದು, ಪಾತ್ರೆಯಲ್ಲಿ ಕಪ್ಪೆಗಳನ್ನು ಇಡುವುದು, ದೇವಾಲಯದ ತೀರ್ಥ ತೊಟ್ಟಿಯಲ್ಲಿ ಕಾಗದದ ದೋಣಿ ಮಾಡಿ ತೇಲಿ ಬಿಡುವುದು... ಹೀಗೆ ಸಾಗುತ್ತದೆ ಅವನ ತುಂಟಾಟ.
ಗುರು ನಿಲಯದ ಮಹಡಿಯಲ್ಲಿ ಹಳೆಯ ವಸ್ತು, ಸಾಮಾನುಗಳನ್ನು ಹಾಕಿರುತ್ತಾರೆ. ಅಲ್ಲಿಗೆ ತುಂಟ ಮಾರ್ಸೆಲಿನೋ ಹೋಗಬಾರದೆಂಬ ಕಾರಣದಿಂದ ’ಮೇಲೆ ಒಬ್ಬ ದೊಡ್ಡ ಮನುಷ್ಯನಿದ್ದಾನೆ, ಅಲ್ಲಿಗೆ ಹೋದರೆ ನಿನ್ನನ್ನು ಅಪಹರಸಿ ಬಿಡುತ್ತಾನೆ’ ಎಂದು ಗುರುಗಳೆಲ್ಲಾ ಮಾರ್ಸೆಲಿನೋನನ್ನು ಹೆದರಿಸಿರುತ್ತಾರೆ. ಆದರೆ ತುಂಟ ಮಾರ್ಸೆಲಿನೋ ಕುತೂಹಲ ಇನ್ನೂ ಹೆಚ್ಚಾಗುತ್ತದೆ. ಆ ಮಹಡಿಗೆ ಹೋಗುವ ಸಾಹಸವನ್ನು ಹಲವಾರು ಬಾರಿ ಮಾಡಿ ಕೊನೆಗೊಮ್ಮೆ ಯಶಸ್ವಿಯಾಗುತ್ತಾನೆ.

ಮೇಲೆ ಹೋದಾಗ ಅವನಿಗೆ ಕಾಣುವುದು ಶಿಲುಬೆ ಮೇಲಿನ ಯೇಸುವಿನ ಪ್ರತಿಮೆ. ಯಾತನೆಯ ಆ ಪ್ರತಿಮೆಯ ಮುಖ ನೋಡಿದಾಗ ’ಈ ವ್ಯಕ್ತಿಯ ಮುಖದಲ್ಲಿ ಹಸಿವು ಕಾಣುತ್ತಿದೆ’ ಎಂದು ಹೋಗಿ ಒಂದಷ್ಟು ರೊಟ್ಟಿ ತರುತ್ತಾನೆ. ಮುಗ್ಧ ಮಾರ್ಸೆಲಿನೋ ಸಹಜವೆಂಬಂತೆ ಯೇಸುವಿನೊಂದಿಗೆ ಮಾತನಾಡುತ್ತಾನೆ. ಪವಾಡ ಸದೃಶ ರೀತಿಯಲ್ಲಿ ಪ್ರತಿಮೆಗೆ ಜೀವ ಬಂದು ಯೇಸುವೇ ಆ ರೊಟ್ಟಿಯನ್ನು ತಿನ್ನುತ್ತಾರೆ. ಇಲ್ಲಿಂದ ಶುರುವಾಗುವ ಅವರಿಬ್ಬರ ನಡುವಿನ ಒಡನಾಟ ಆತ್ಮೀಯವಾಗಿ ಮುಂದುವರಿಯುತ್ತದೆ. 

ಇತ್ತ ಮಾರ್ಸೆಲಿನೋ ವರ್ತನೆಯಲ್ಲಿ ಆಗುವ ಬದಲಾವಣೆಗಳು ಗುರುಗಳೆಲ್ಲರ ಗಮನ ಸೆಳೆಯುತ್ತದೆ. ಹಿರಿಯ ಗುರುಗಳು ಮಾರ್ಸೆಲಿನೋಗೆ ಹೆಚ್ಚು ಹತ್ತಿರವಾದ ಅಡುಗೆ ಮನೆಯ ಉಸ್ತುವಾರಿ ಗುರುಗಳ ಬಗ್ಗೆ ಮಾರ್ಸೆಲಿನೋ ಬಗ್ಗೆ ವಿಚಾರಿಸುತ್ತಾರೆ. ಅಡುಗೆ ಉಸ್ತುವಾರಿ ಗುರುಗಳು ಸಹ ಕಾಣೆಯಾಗುತ್ತಿರುವ ರೊಟ್ಟಿ ಹಾಗೂ ದ್ರಾಕ್ಷಾರಸದ ಬಗ್ಗೆ ಕಳವಳ ವ್ಯಕ್ತಪಡಿಸುತ್ತಾರೆ. ಆಗ ಹಿರಿಯ ಗುರುಗಳು ಮಾರ್ಸೆಲಿನೋವನ್ನು ಹಿಂಬಾಲಿಸಿ ಆ ರೊಟ್ಟಿ ಹಾಗೂ ದ್ರಾಕ್ಷಾರಸವನ್ನು ಆತ ಏನು ಮಾಡುತ್ತಿದ್ದಾನೆ ನೋಡಿ ತಿಳಿದುಕೊಳ್ಳಬೇಕೆಂದು ಉಸ್ತುವಾರಿ ಗುರುಗಳಿಗೆ ಹೇಳುತ್ತಾರೆ.

ಅದರಂತೆ ಗುರುಗಳು ಮಾರ್ಸೆಲಿನೋನನ್ನು ಹಿಂಬಾಲಿಸುತ್ತಾರೆ. ಮಹಡಿಯ ಕೋಣೆಯಲ್ಲಿ ಮಾರ್ಸೆಲಿನೋ ಯೇಸುವಿನೊಡನೆ ಆಪ್ತವಾಗಿ ಮಾತನಾಡುತ್ತಿರುವುದನ್ನು ನೋಡಿ ದಂಗಾಗುತ್ತಾರೆ. ಮುಂದೆ ಏನಾಗುತ್ತದೆ ಎಂಬುದನ್ನು ಚಿತ್ರ ನೋಡಿ ಆನಂದಿಸಬೇಕು.

ಅತ್ಯಂತ ಸರಳ ನಿರೂಪಣಾ ಶೈಲಿಯಲ್ಲಿ ಚಿತ್ರಿತವಾಗಿರುವ ಚಿತ್ರ ನೋಡುಗರನ್ನು ಮೊದಲ ದೃಶ್ಯದಿಂದಲೂ ತನ್ನತ್ತ ಸೆಳೆದುಕೊಳ್ಳುತ್ತದೆ. ಯಾವುದೇ ರೀತಿಯ ವೈಭವಗಳು ಇಲ್ಲಿದಿದ್ದರೂ ಚಿತ್ರ ತಾಂತ್ರಿಕವಾಗಿ ಕಥೆಗೆ ಬೇಕಾದಷ್ಟು ಅಚ್ಚುಕಟ್ಟಾಗಿದ್ದು ಕಣ್ಣಿಗೆ ತಂಪೆರೆಯುತ್ತದೆ. ಛಾಯಾಗ್ರಹಣ ಹಾಗೂ ಸಂಕಲನವು ಅತ್ಯಂತ ನೈಜವಾಗಿದ್ದು, ನಿಮ್ಮ ನಡುವಿನ ದೃಶ್ಯಗಳನ್ನೇ ನೋಡುತ್ತಿದ್ದೇವೇನೋ ಎನಿಸದಿರದು. ಹಿನ್ನೆಲೆ ಸಂಗೀತವೂ ಚಿತ್ರಕ್ಕೆ ಪೂರಕವಾಗಿದೆ.

ಆದರೆ ಚಿತ್ರ ಮನದಲ್ಲಿ ನಿಲ್ಲುವುದು ಚಿತ್ರದಲ್ಲಿನ ನಟರ ಆಪ್ತ ಅಭಿನಯದಿಂದ. 12 ಜನ ಗುರುಗಳು ನಿಮ್ಮಲ್ಲಿ ಭಕ್ತಿಯನ್ನು, ಪ್ರೀತಿಯನ್ನು, ಅವರ ಜೀವನ ಶೈಲಿಯ ಬಗ್ಗೆ ಅನುಕಂಪವನ್ನು ಹುಟ್ಟಿಸುತ್ತಾರೆ. ಇನ್ನು ಬಾಲಕನ ಪಾತ್ರದಲ್ಲಿ ಪಬ್ಲಿಟೋ ಕಾಲ್ವೋ ನಟಿಸುವ ಗೋಜೆಗೆ ಹೋಗಿಲ್ಲ. ತನ್ನ ಮುಗ್ದ ಚಲನವಲನವನ್ನು ಕ್ಯಾಮೆರಾ ಮುಂದೆ ಮುಂದುವರಿಸಿದ್ದಾನೇನೋ ಎನಿಸುತ್ತದೆ. ಮುಗ್ಧ ನಗು, ತುಂಟಾಟ, ಯೇಸುವಿನ ಪ್ರತಿಮೆಯ ಮುಂದಿನ ಕಾರುಣ್ಯ, ಕಣ್ಣುಗಳಲ್ಲಿನ ತನ್ಮಯತೆ ಎಲ್ಲದರಲ್ಲೂ ವಯಸ್ಸಿಗೆ ಮೀರಿದ ನಟನೆಯಿಂದ ಕಾಲ್ವೋ ಅಜರಾಮರವಾಗಿ ಉಳಿಯುತ್ತಾನೆ. 

ಪ್ರತಿ ದೃಶ್ಯದಲ್ಲೂ ನಿರ್ದೇಶಕರ ಕಲಾ ನೈಪುಣ್ಯತೆ ಎದ್ದು ಕಾಣುತ್ತದೆ. ತಾಂತ್ರಿಕತೆ ಹಾಗೂ ಅಭಿನಯ ಎರಡರಲ್ಲೂ ಪೂರ್ಣವಾದ ಕೆಲಸವನ್ನು ತೆಗೆಯುವಲ್ಲಿ ನಿರ್ದೇಶಕರ ಶ್ರಮ, ಪ್ರೀತಿ ಕಾಣುತ್ತದೆ. ಕೊನೆಗೆ ಇದೊಂದು ಚಲನಚಿತ್ರದಂತೆ ಕಾಣದೆ ದಿನ ನಿತ್ಯದ ಚಲನವಲನದ ದೃಶ್ಯ ದಾಖಾಲಾತಿಯೇನೋ ಎಂಬಂತೆ ಕಾಣುತ್ತದೆ.

ಒಮ್ಮೆ ನೋಡಿ. ಯುಟ್ಯೂಬ್ ನಲ್ಲಿ ಲಭ್ಯವಿದೆ. Marceleno Pan Y Vino ಎಂದು ಹುಡುಕಿ ನೋಡಿ.



*******



Friday, 11 January 2019

ನೀವೂ ನೋಡಿ, ಆ ಮನೋಜ್ಞ ಚಲನಚಿತ್ರ: 'ಆಫ್‌ ಗಾಡ್ಸ್‌ ಅಂಡ್‌ ಮೆನ್‌'

2010 ರಲ್ಲಿ ಬಿಡುಗಡೆಗೊಂಡ  ಫ್ರೆಂಚ್ ಚಿತ್ರ ಆಫ್ ಗಾಡ್ಸ್ ಅಂಡ್ ಮೆನ್. ವಿಶ್ವ ವಿಖ್ಯಾತ ಕೇನ್ಸ್ ಚಿತ್ರೋತ್ಸವದಲಿ ಮೊದಲು ಪ್ರದರ್ಶಿತಗೊಂಡ ಈ ಚಿತ್ರವು ಮೆಚ್ಚುಗೆಯನ್ನು, ಅನೇಕ ರೀತಿಯ ಪ್ರಶ್ನೆಗಳನ್ನು ಹುಟ್ಟು ಹಾಕುತ್ತದೆ. ಅಲ್ಲದೆ ಆ ಪ್ರಶ್ನೆಗಳಿಗೆ ಉತ್ತರ ನೀಡುವಲ್ಲಿ  ಚಿತ್ರವು ವಿಫಲವಾಗಿದೆ ಎಂಬ ಟೀಕೆಯನ್ನು ಸಹಾ ಎದುರಿಸಿದೆ.

ಆಲ್ಜೀರಿಯಾದಲ್ಲಿ ನಡೆದ ಸತ್ಯ ಘಟನೆಯೊಂದನ್ನು ಆಧಾರ ವಾಗಿಟ್ಟುಕೊಂಡು ಈ ಚಿತ್ರವು ನಿರ್ಮಾಣಗೊಂಡಿತು. ಜೇವಿಯರ್ ಬಿಯೋವಿಯೋ ಈ ಚಿತ್ರದ ನಿರ್ದೇಶಕ. ಚಿತ್ರಕಥೆಯಲ್ಲಿ ನಿರ್ಮಾಪಕ ಕೋಮರ್ ಜೊತೆ ನಿರ್ದೇಶಕ ಸಹ ಕೈ ಜೋಡಿಸಿದ್ದಾನೆ.

ಮೊದಲೇ ಹೇಳಿದಂತೆ ಇದೊಂದು ಸತ್ಯ ಘಟನೆಯ ಸ್ಪರ್ತಿಯಿಂದ ನಿರ್ಮಾಣಗೊಂಡ ಚಿತ್ರ. 1996ರಲ್ಲಿ ಏಳು ಜನ ಫ್ರೆಂಚ್ ಗುರುಗಳು, ಆಲ್ಜೀರಿಯಾ ದ ಟಿಬಿಯಿನ್ ಎಂಬ ಹಳ್ಳಿಯಲ್ಲಿನ ಮಠದಿಂದ ಅಪಹರಣಕ್ಕೆ ಒಳಗಾಗುತ್ತಾರೆ. ನಂತರ ಅವರುಗಳ ಶಿರಚ್ಛೇದನಗೊಂಡ ದೇಹಗಳು ಸಿಗದೇ  ಕೇವಲ ತಲೆಗಳು ಸಿಗುತ್ತವೆ. ಆಲ್ಜೀರಿಯದ ಮೂಲಭೂತವಾದಿ ಭಯೋತ್ಪಾದಕರು ಈ ಕೊಲೆಗಳನ್ನು ತಾವು ಮಾಡಿದ್ದೇವೆಂದು ಕೊಚ್ಚಿಕೊಳ್ಳುತ್ತಾರೆ.

ಆದರೆ ನಂತರದ ವರ್ಷಗಳ ತನಿಖೆ ಮತ್ತು ವರದಿಗಳ ಪ್ರಕಾರ ಅಲ್ಜೀರಿಯಾದ ಸೈನ್ಯದಿಂದಲೇ ಬಿಡುಗಡೆ ಕಾರ್ಯಾಚರಣೆಯ ಸಂದರ್ಭದಲ್ಲಿ ಆಕಸ್ಮಿಕವಾಗಿ ಈ ಗುರುಗಳು ಸಾವನ್ನಪ್ಪುತ್ತಾರೆ. ಈ ಒಂದು ಅಪವಾದದಿಂದ ತಪ್ಪಿಸಿಕೊಳ್ಳಲು ಸೈನ್ಯವೇ ಅವರ ಶಿರಚ್ಛೇದನ ಮಾಡಿ ಭಯೋತ್ಪಾದಕರ ಕಾರ್ಯವೆಂದು ಆರೋಪಿಸುತ್ತಾರೆ ಎಂಬುದಾಗಿ ವರದಿಗಳಿವೆ. ಯಾವುದು ನಿಜ ಎಂಬುದು ಇನ್ನೂ ಮರೀಚಿಕೆಯಾಗಿಯೇ ಉಳಿದಿದೆ.

ಇದು ನಡೆದ ಘಟನೆಯಾದರೆ, ಇಷ್ಟನ್ನು ಬಳಸಿಕೊಂಡ ಚಿತ್ರವೇ ಆಫ್ ಗಾಡ್ಸ್ ಅಂಡ್ ಮೆನ್. ಈ ಚಿತ್ರವು ಬಹಳ ಮನೋಜ್ಞವಾಗಿ ಹೃದಯಂಗಮವಾಗಿ ಮೂಡಿ ಬಂದಿದೆ. ಅಲ್ಜೀರಿಯಾದ ಬಡ ಸ್ಥಳವೊಂದರಲ್ಲಿ ಏಳು ಜನ ಗುರುಗಳು ತಮ್ಮ ಸೇವಾ ವೃತ್ತಿಯನ್ನು ಮಾಡುತ್ತಿರುತ್ತಾರೆ. ಶಾಂತಿಯುತ ಹಾಗೂ ಪ್ರಾರ್ಥನಾಮಯ ಜೀವನ ಅವರದು. ಜೊತೆಗೆ ಸುತ್ತಮುತ್ತಲಿನ ಜನರೊಂದಿಗೆ ಬೆರೆಯುತ್ತಾ  ಅವರ ಕಷ್ಟ ಸುಖಗಳಲ್ಲಿ ಭಾಗಿಯಾಗುವ ಗುರುಗಳು ವೈದ್ಯಕೀಯ ಸೇವೆಯನ್ನು ಸಹ ನೀಡುತ್ತಿರುತ್ತಾರೆ.

ಆರ್ಥಿಕವಾಗಿ ಬಡತನದಲ್ಲಿದ್ದರೂ ತಮ್ಮ ಮಠದ ಒಳಗೆ ತಮಗೆ ಬೇಕಾದ ತರಕಾರಿಗಳನ್ನು ಬೆಳೆಸಿಕೊಳ್ಳುತ್ತಾ ತಮ್ಮದೇ ತ್ಯಾಗಮಯ ಜೀವನವನ್ನು ನಡೆಸುತ್ತಿರುತ್ತಾರೆ. ಇಂತಹ ಸಮಯದಲ್ಲಿ ದೇಶದಲ್ಲಿ ರಾಜಕೀಯ ಅರಾಜಕತೆ ಉಂಟಾಗುತ್ತದೆ. ಅದರೊಂದಿಗೆ ಧಾರ್ಮಿಕ ಅಸಹನೆ, ಅಸಹಿಷ್ಣುತೆಯೂ ಪ್ರಾರಂಭವಾಗುತ್ತದೆ. ರಾಜಕೀಯ ಹಾಗೂ ಧಾರ್ಮಿಕ ಕಾರಣಗಳಿಂದ ಕೊಲೆ, ಅಪಹರಣಗಳು ಸಾಮಾನ್ಯವೆಂಬಂತೆ ನಡೆಯುತ್ತಿರುತ್ತವೆ. 

ಇದೇ ಸಮಯದಲ್ಲಿ ಮಠದ ಹತ್ತಿರದಲ್ಲೇ ಕೆಲಸ ಮಾಡುತ್ತಿದ್ದ ಕಾರ್ಮಿಕರ ಸಾಮೂಹಿಕ ಮಾರಣಹೋಮ ನಡೆಯುತ್ತದೆ. ಜನರು ಭಯಭೀತರಾಗುತ್ತಾರೆ. ಗುರುಗಳು ಸಹಾ ವಿಚಿಲಿತರಾದರೂ, ತಮ್ಮ ಸೇವಾ ಬದುಕಿಗೆ ಬದ್ಧರಾಗಿ ಉಳಿಯುತ್ತಾರೆ. ಇತ್ತ ಇವೆಲ್ಲವನ್ನೂ  ಕಂಡ ಸರ್ಕಾರವು ತನ್ನ ಅಧಿಕಾರಿಯೊಬ್ಬನನ್ನು ಗುರುಗಳ ಬಳಿ ಕಳುಹಿಸಿ ಮಾತನಾಡುತ್ತದೆ. ಆ ಅಧಿಕಾರಿಯು ಗುರುಗಳು ಇನ್ನು ಈ ದೇಶದಲ್ಲಿ ವಾಸಿಸುವುದು ಅಪಾಯಕಾರಿ ಎಂದು ತಿಳಿಸುತ್ತಾ ಅವರು ದೇಶವನ್ನು ಬಿಟ್ಟು ತಮ್ಮ ಸ್ವಂತ ದೇಶವಾದ ಫ್ರಾನ್ಸಿಗೆ ಮರುಳಬೇಕೆಂದು ಸಲಹೆ  ನೀಡುತ್ತಾನೆ. ಅಲ್ಲದೆ ಅವರಿರುವ ತನಕ ಮಠಕ್ಕೆ ಸರ್ಕಾರದಿಂದ ಸೈನ್ಯಾ ಭದ್ರತೆಯನ್ನು ಕೊಡುವ ಭರವಸೆ ನೀಡುತ್ತಾನೆ. 

ಆದರೆ ಗುರುಗಳು ಇದನ್ನು ಒಪ್ಪದೇ ಕಷ್ಟದಲ್ಲಿ ಇರುವ ಜನರನ್ನು ಬಿಟ್ಟು ಹೋಗುವುದಿಲ್ಲ ಎಂದು ಪಟ್ಟು ಹಿಡಿಯುತ್ತಾರೆ. ಅಲ್ಲದೆ ಮಠದಲ್ಲಿ ಸೈನ್ಯವಿರುವುದು ಬೇಡವೆಂದು ಹೇಳುತ್ತಾರೆ. ಇದರ ಬಗ್ಗೆ ಅಲ್ಲಿನ ಜನರೊಂದಿಗೆ ಮಾತನಾಡಿದಾಗ ಜನರು ಕೂಡ ಗುರುಗಳು ಊರನ್ನು ತೊರೆದರೆ ತಮಗೆ ಉಳಿಗಾಲವಿಲ್ಲ ಎಂದು ಹೇಳುತ್ತಾರೆ.

ಈ ಸಮಯದಲ್ಲಿ ಗುರುಗಳು ತಾವು ಏನು ಮಾಡಬೇಕೆಂಬ ಕಠಿಣವಾದ ನಿರ್ಧಾರ ತೆಗೆದುಕೊಳ್ಳುವ ಸಮಯ ಬರುತ್ತದೆ. ಆ ನಿರ್ಣಯ ಸುಲಭವಾದದ್ದಲ್ಲ. ಗುರುಗಳ ನಡುವೆಯೇ ವಾಗ್ವಾದಗಳು ನಡೆಯುತ್ತವೆ.  ತಮ್ಮ ಜೀವನಗಳು ಕೊಲೆಗಡುಕರ ಕೈಗೆ ಏಕೆ ಸುಲಭದ ತುತ್ತಾಗಬೇಕು ಎಂಬ ವಾದಗಳು ಅವರಲ್ಲೇ ನಡೆಯುತ್ತದೆ. 

ಮಠದ ಮೇಲ್ವಿಚಾರಕ ಗುರುಗಳಾದ ಕ್ರಿಸ್ಟಿಯನ್ ತಮ್ಮದೇ ಆದ ವಾದವನ್ನು ಮುಂದಿಡುತ್ತಾರೆ ಅದರ ಪ್ರಕಾರ ತಾವು ಮಠದಲ್ಲಿಯೇ ಉಳಿದು ಜನರ ಸೇವೆ ಮಾಡುವುದಾಗಿ ತಿಳಿಸುತ್ತಾರೆ.  ಅಂತೆಯೇ ಮಠದ ರಕ್ಷಣೆಗಾಗಿ ಸೈನಿಕರನ್ನು ಕಳುಹಿಸುವ ಪ್ರಸ್ತಾವವನ್ನು ಸಹ ತಿರಸ್ಕರಿಸುವ ನಿರ್ಣಯ ಮಾಡುತ್ತಾರೆ. ಕೊನೆಗೆ ಎಲ್ಲಾ ಗುರುಗಳು ಈ ನಿರ್ಣಯಕ್ಕೆ ಅನುಮೋದನೆ, ಸಹಮತವನ್ನು ನೀಡಿ ತಾವು ಸಹ ಗುರು ಮಠದಲ್ಲಿ ಉಳಿಯುವ ನಿರ್ಧಾರಕ್ಕೆ ಬರುತ್ತಾರೆ. 

ಮುಂದೆ ಅವರು ನಿರೀಕ್ಷಿಸುತ್ತಿದ್ದ ಆ ಸಮಯ ಬರುತ್ತದೆ. ಕ್ರಿಸ್ತ ಜಯಂತಿಯ ಹಿಂದಿನ ದಿನ ಮೂಲಭೂತವಾದಿಗಳ ಭಯೋತ್ಪಾದಕ ತಂಡವು ಮಠಕ್ಕೆ ಬರುತ್ತದೆ. ಗಾಯಗೊಂಡ ತಮ್ಮ ಸದಸ್ಯನೊಬ್ಬನನ್ನು ಮಠದ ವೈದ್ಯ ಗುರುಗಳು ಬಂದು ಉಪಚರಿಸಬೇಕೆಂದು ಆಜ್ಞೆ ನೀಡುತ್ತಾರೆ ಗುರು ಕ್ರಿಶ್ಚಿಯನ್ ಆ ಆಜ್ಞೆಯನ್ನು  ತಿರಸ್ಕರಿಸುತ್ತಾರೆ. ತಮ್ಮಲ್ಲಿ ವೈದ್ಯಕೀಯ ನೆರವು ನೀಡುವಷ್ಟು ಸಾಮಗ್ರಿ ಇಲ್ಲವೆಂದು ಹಾಗೂ ವೈದ್ಯ ಗುರುಗಳು ಅನಾರೋಗ್ಯದಿಂದ ಬಳಲುತ್ತಿರುವುದರಿಂದ ಅವರು ಬರಲಾಗುವುದಿಲ್ಲ ಎಂದು ತಿಳಿಸುತ್ತಾರೆ. ಆಶ್ಚರ್ಯವೆಂಬಂತೆ ತಂಡದ ನಾಯಕ ಇದನ್ನು ಒಪ್ಪಿಕೊಳ್ಳುತ್ತಾನೆ. ಅಷ್ಟು ಮಾತ್ರವಲ್ಲದೆ ತಾನು ಸರ್ಕಾರದಿಂದ ಹತನಾಗುವ ತನಕ ಆ ಮಠಕ್ಕೆ ರಕ್ಷಣೆಯನ್ನೂ ನೀಡುತ್ತಾನೆ.

ಮುಂದಿನ ದಿನಗಳಲ್ಲಿ ಗುರುಗಳನ್ನು ಭಯೋತ್ಪಾದಕರು ಅಪಹರಿಸುತ್ತಾರೆ. ಸಾವಿನತ್ತ ಅವರ ಭಾರವಾದ ನಡಿಗೆಯಿಂದ ಚಿತ್ರ ಕೊನೆಗೊಳ್ಳುತ್ತದೆ.

ಚಿತ್ರದಲ್ಲಿ ಅನೇಕ ದೃಶ್ಯಗಳು ಮನಕಲಕುವಂತಿದೆ. ಹೊರಗಡೆ ನಡೆಯುವ ರಾಜಕೀಯ ಧಾರ್ಮಿಕ ಕೋಲಾಹಲದ ನಡುವೆ ಮಠದ ಒಳಗಿನ ಮಾನಸಿಕ ತಳಮಳವನ್ನು ಸುಂದರವಾಗಿ ಚಿತ್ರಿಸಿಲಾಗಿದೆ. ಸಾವು ಖಚಿತ ಎಂದು ತಿಳಿದ ಮೇಲೆ ಗುರುಗಳ ಮನಸ್ಸಿನಾಳದಲ್ಲಿ ನಡೆಯುವ ದ್ವಂದ್ವ ಯುದ್ಧವನ್ನು ನಿರ್ದೇಶಕ ಯಾವುದೇ ನಿಲುವು ತಾಳದೇ ಭಾವಗಳ ಸಂಘರ್ಷದ ಮೊರೆ ಹೋಗುತ್ತಾನೆ. ಅವರು ಗುರುಗಳಾಗಿದ್ದರೂ, ಆಳದಲ್ಲಿ ಅವರೂ ಸಾಮಾನ್ಯ ಮನುಷ್ಯರಂತೆಯೇ ಜೀವನದ ಬಗ್ಗೆ ಆಸೆ ಇಟ್ಟುಕೊಂಡವರೇ ಆಗಿರುತ್ತಾರೆ. ಆದರೆ ಅದೆಲ್ಲವನ್ನೂ ಮೀರಿದ ಅವರ ಬದ್ಧತೆಯನ್ನು ನಿರ್ದೇಶಕ ಚಿತ್ರಿಸಿದ್ದಾನೆ.

ಮಠಕ್ಕೆ ಬರುವ ಅತಿಥಿಗಳನ್ನು ಸತ್ಕರಿಸುವ ಭೋಜನದ ದೃಶ್ಯದಲ್ಲಿ ಎಲ್ಲರೂ ಸೇರಿ ನಲಿಯುತ್ತಲ್ಲೇ ಮುಂದೆ ತಮಗೆ ಬರಬಹುದಾದ ಸಾವು ಹಾಗೂ ಅದರೊಂದಿಗಿನ ತಮ್ಮ ಅಗಲಿಕೆ ನೆನೆದು ದು:ಖಿಸುವ ದೃಶ್ಯ ಕಣ್ಣೀರು ತರಿಸುತ್ತದೆ.


ಅಂತೆಯೇ ಯುವತಿಯೊಬ್ಬಳು ಹಿರಿಯ ಗುರುಗಳನ್ನು ಪ್ರೀತಿ ಪ್ರೇಮದ ಬಗ್ಗೆ ಕೇಳುತ್ತಾ, “ನೀವು ಎಂದಾದರೂ ಪ್ರೇಮದಲ್ಲಿ ಸಿಲುಕಿದ್ದೀರ” ಎಂದು ಕೇಳುತ್ತಾಳೆ. ಅದಕ್ಕೆ ಉತ್ತರವಾಗಿ ಗುರುಗಳು” ಹೌದು  ಅನೇಕ ಬಾರಿ ಎಂದು ಉತ್ತರಿಸುತ್ತಾ,  ನಂತರ ಅದಕ್ಕಿಂತಲೂ ದೊಡ್ಡದಾದ ಪ್ರೇಮದಲ್ಲಿ ಕಳೆದ 60 ವರ್ಷಗಳಿಂದ ಇದ್ದೇನೆ ಎಂದು ತಮ್ಮ ಗುರು ಜೀವನದ ಬಗ್ಗೆ ಹೇಳುತ್ತಾರೆ. ಈ ರೀತಿಯ ಅನೇಕ ದೃಶ್ಯ ಹಾಗೂ ಅವುಗಳ ಒಟ್ಟು ಪರಿಣಾಮದಿಂದಾಗಿ ಇದು ನಾವು ನೋಡಲೇ ಬೇಕಾದ ಚಿತ್ರಗಳ ಸಾಲಿನಲ್ಲಿ ನಿಲ್ಲುತ್ತದೆ.●●●
-ಪ್ರಶಾಂತ್‌ ಇಗ್ನೇಶಿಯಸ್‌

Thursday, 13 December 2018

‘ಜೊಯ್ ನೋಯೆಲ್’ ಅಥವಾ ‘ಮೆರ್ರಿ ಕ್ರಿಸ್ಮಸ್’.


¨ ಪ್ರಶಾಂತ್ ಇಗ್ನೇಷಿಯಸ್

1914ರ ಮಹಾಯುದ್ಧದ ಸಮಯದಲ್ಲಿ ನಡೆದ ಸತ್ಯ ಘಟನೆಯೊಂದನ್ನು ಆಧರಿಸಿ ನಿರ್ಮಾಣವಾದ ಚಿತ್ರವೇ ’ಜಾಯ್ ನೋಯೆಲ್’ ಅಥವಾ ’ಮೆರ್ರಿ ಕ್ರಿಸ್ಮಸ್’. ಕ್ರಿಸ್ಟಿಯನ್ ಕ್ಯಾರಿಯನ್ ಎಂಬ ಫ್ರೆಂಚ್ ನಿರ್ದೇಶಕ ನಿರ್ದೇಶಿಸಿದ ಈ ಚಿತ್ರ ಅತ್ಯುತ್ತಮ ವಿದೇಶಿ ಚಿತ್ರವೆಂದು ಆಸ್ಕರ್ ಪ್ರಶಸ್ತಿಗೆ ನಾಮಾಂಕಿತವಾಗಿತ್ತು. 2005ರ ಪ್ರತಿಷ್ಠಿತ ಕೇನ್ಸ್ ಚಿತ್ರೋತ್ಸವದಲ್ಲಿ ಪ್ರದರ್ಶಿತವಾಗಿ, ಎಲ್ಲರ ಮೆಚ್ಚುಯನ್ನೂ ಗಳಿಸಿತ್ತು. ಕೇವಲ ಎರಡು ಕೋಟಿ ಅಮೆರಿಕನ್ ಡಾಲರ್ ‍ಗಳಲ್ಲಿ ನಿರ್ಮಾಣಗೊಂಡ ಈ ಚಿತ್ರ ಬಾಕ್ಸ್ ಆಫೀಸ್ ನಲ್ಲಿ ಅಷ್ಟೇನೂ ಸದ್ದು ಮಾಡದಿದ್ದರೂ ಚಿತ್ರ ನೋಡಿದವರೆಲ್ಲರೂ ಅತ್ಯುತ್ತಮ ಚಿತ್ರವೆಂದು ಇದನ್ನು ಹೊಗಳುತ್ತಾರೆ. ಮೊದಲೇ ತಿಳಿಸಿದಂತೆ ಇದು ಸತ್ಯ ಘಟನೆಯೊಂದನ್ನು ಆಧರಿಸಿದ ಚಿತ್ರವಾಗಿದೆ. ಈ ರೀತಿಯ ಘಟನೆಗಳನ್ನು ಬೆಳ್ಳಿ ತೆರೆಗೆ ತರುವಾಗ ಒಬ್ಬ ನಿರ್ದೇಶಕ ಅನೇಕ ರೀತಿಯ ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಚಿತ್ರವನ್ನು ಯಾವ ದೃಷ್ಟಿಕೋನದಲ್ಲಿ ಹೇಗೆ ತೆರೆಯ ಮೇಲೆ ತರಬೇಕೆಂಬ ಅಂಶ ಒಂದು ದೊಡ್ಡ ಸವಾಲಾಗುತ್ತದೆ. ಇಲ್ಲಿ ನಿರ್ದೇಶಕ ಅದನ್ನು ನಿವಾರಿಸಿ ಯುದ್ಧದಲ್ಲಿ ಪಾಲ್ಗೊಂಡಿದ್ದ ಸೈನಿಕರ ಅನುಭವಗಳ ಮೂಲಕ ತೆರೆದಿಡುವ ಪ್ರಯತ್ನವನ್ನು ಮಾಡುತ್ತಾರೆ ಹಾಗೂ ಅದರಲ್ಲಿ ಯಶಸ್ವಿಯೂ ಆಗುತ್ತಾರೆ.
ಚಿತ್ರದ ಬಗ್ಗೆ ಬರೆಯುವ ಮುನ್ನ ಈ ಚಿತ್ರದ ಮೂಲ ವಸ್ತುವಿನ ಹಿನ್ನಲೆಯನ್ನು ಬರೆಯಬೇಕಾಗುತ್ತದೆ. 1914ರಲ್ಲಿ ಇಡೀ ವಿಶ್ವವನ್ನೇ ಕರಾಳತೆಯತ್ತ ದೂಡಿದ ಮೊದಲನೆಯ ಮಹಾ ಯುದ್ಧವು ತನ್ನ ಉತ್ತುಂಗದ ಸ್ಥಿತಿಯಲ್ಲಿರುವಾಗ, ಎಲ್ಲೆಡೆ ದ್ವೇಷ ರೋಷ ಹಾಗೂ ಕಹಿ ಭಾವಗಳೇ ತಾಂಡವವಾಡುತ್ತಿರುತ್ತದೆ. ರಾಜಕೀಯ ಕಾರಣಗಳಿಂದ ಆರಂಭಗೊಂಡ ಈ ಮಹಾಯುದ್ಧದಲ್ಲಿ ಹೆಚ್ಚು ವ್ಯಯಕ್ತಿಕ ಹಾನಿಗೊಳಗಾದವರು ಯುದ್ಧಭೂಮಿಯಲ್ಲಿ ಹೋರಾಡಿದ ಸೈನಿಕರು.
ಜರ್ಮನಿ ಹಾಗೂ ಮಿತ್ರ ದೇಶಗಳ ನಡುವಿನ ಈ ಮಹಾಸಮರ ಎರಡೂ ಕಡೆಗಳಲ್ಲಿ ಅಪಾರ ಸಾವು ನೋವನ್ನು ತಂದಿರುತ್ತದೆ. ಆದರೂ ನಾಯಕರುಗಳ ಮನಸು ಕರಗದೆ ಸಮರ ಮುಂದುವರಿಯುತ್ತದೆ. ಬೆಲ್ಜಿಯಂ ಮೂಲಕ ಫ್ರೆಂಚ್ ನೆಲದ ಮೇಲೆ ಆಕ್ರಮಣ ಮಾಡಿಕೊಂಡು ಬಂದ ಜರ್ಮನ್ ಸೈನ್ಯವನ್ನು ಫ್ರೆಂಚ್ ಹಾಗೂ ಬ್ರಿಟಿಷ್ ಪಡೆ ಯಶಸ್ವಿಯಾಗಿ ತಡೆದು ನಿಲ್ಲಿಸುತ್ತದೆ. ಎರಡು ಕಡೆಯ ಪಡೆಗಳು ಜಗ್ಗದೆ ತಮ್ಮ ಪಟ್ಟುಗಳನ್ನು ಸಡಲಿಸದ ಕಾರಣ ಯುದ್ಧ ಯಾವುದೇ ರೀತಿಯ ಪ್ರಗತಿ ಕಾಣದೇ ಒಂದು ಹಂತದಲ್ಲಿ ನಿಂತ ನೀರಂತೆ ಆಗುತ್ತದೆ.
 ಎರಡು ಪಡೆಗಳು ಮೇಲುಗೈ ಸಾಧಿಸಲು ಸಾಧ್ಯವಾಗದೆ ಆಕ್ರಮಣವನ್ನು ಬಿಟ್ಟು ತಮ್ಮ ನೆಲೆಯನ್ನು ಕಾಪಾಡಿಕೊಳ್ಳುವ ತಂತ್ರಕ್ಕೆ ಮೊರೆ ಹೋಗಿ ಒಂದು ರೀತಿ ಸ್ತಬ್ಧವಾದ ಸ್ಥಿತಿಯಲ್ಲಿರುತ್ತಾರೆ. ಆದರೂ ಎಚ್ಚರದ ಸ್ಥಿತಿಯಲ್ಲಿ ಎರಡೂ ಪಡೆಗಳು ತಮ್ಮ ನೆಲೆಯನ್ನು ಕಾಯುತ್ತಿರುತ್ತದೆ. ಯುದ್ಧ ಭೂಮಿಯಲ್ಲಿನ ದೊಡ್ಡ ಕಂದಕಗಳಲ್ಲಿ ನೆಲೆಸುವ ಪಡೆಗಳ ಸೈನಿಕರು ಒಂದು ರೀತಿಯ ತಾತ್ಕಾಲಿಕ ವಿಶ್ರಾಂತಿಗೆ ಮೊರೆಹೋಗುತ್ತಾರೆ. ಕಂದಕಗಳಲ್ಲಿ ತಾತ್ಕಾಲಿಕ ಗೋಡೆಗಳ ಹಿಂದೆ ಇದ್ದ ಎರಡು ಕಡೆಯ ಸೈನಿಕರು ಒಮ್ಮೊಮ್ಮೆ ಬರುವ ಆಹಾರ ಪದಾರ್ಥಗಳನ್ನು ಪಡೆಯುವ ಸಮಯದಲ್ಲಿ ಒಂದು ಕಡೆ ಸೇರುತ್ತಾರೆ. ಒಂದಷ್ಟು ಮಟ್ಟಿಗೆ ಪರಿಚಯ ಮಾಡಿಕೊಂಡು ಪರಸ್ಪರ ವಿಷಯಗಳನ್ನು ವಿನಿಮಯವೂ ಮಾಡಿಕೊಳ್ಳುತ್ತಾರೆ. ಆದರೆ ಯುದ್ಧ ನೀತಿ ಮಾತ್ರ ಕಠೋರ ನಿರ್ದಯವಾಗಿರುವುದರಿಂದ ತಮ್ಮ ಮೂಲಕ್ಕೆ ಮರಳುತ್ತಾರೆ.
ಹೀಗೆ ಅಲ್ಲೂ ಇಲ್ಲ ಇಲ್ಲೂ ಇಲ್ಲ ಎಂಬ ಸ್ಥಿತಿಗೆ ತಲುಪಿದ ಸಮರದ ಈ ಸಮಯದಲ್ಲಿ ಸಂಧಾನದ ಮಾತುಕತೆಗಳು ನಡೆಯುತ್ತವೆ. ಈ ರೀತಿಯ ಶಾಂತಿ ಸಂಧಾನದ ಮಾತುಕತೆಗಳು ಯಾವುದೇ ಪ್ರಯೋಜನಕ್ಕೆ ಬಾರದೆ ವಿಫಲವಾಗುತ್ತವೆ. ಅಂದಿನ ಪೋಪ್ ಹದಿನೈದನೇ ಬೆನೆಡಿಕ್ಟ್ ಕೂಡಾ ಪಡೆಗಳ ನಡುವಿನ ಶಾಂತಿಗೆ ಪ್ರಯತ್ನಿಸುತ್ತಾರೆ. ಕೊನೆಯ ಪಕ್ಷ ಬಾನಿನಲ್ಲಿ ದೇವದೂತರು ಹಾಡುವ ಕ್ರಿಸ್ಮಸ್ ಹಿಂದಿನ ಸಂಜೆಯಾದರೂ ಗುಂಡು ಮದ್ದುಗಳ ಶಬ್ದವಿಲ್ಲದೆ ಶಾಂತಿ ಇರಲಿ ಎಂದು ಅವರು ಕೇಳಿಕೊಂಡರೂ ಮಿಲಿಟರಿ ಮತ್ತು ರಾಜಕೀಯ ನಾಯಕರು ಅದಕ್ಕೆ ಮನಸು ಕಿವಿಗೊಡದೆ ಕಠಿಣ ನಿಲುವನ್ನು ತೋರಿಸುತ್ತಾರೆ.
ಈ ನಡುವೆ ಸೈನಿಕರು ಮಾತ್ರ ತೀರ ಆಕ್ರಮಣಶೀಲರಾಗದೆ ತಕ್ಕಮಟ್ಟಿಗಿನ ಮಾನವೀಯತೆ ಮೆರೆಯುತ್ತಾ, ಸಾಗುತ್ತಾ ತಮ್ಮ ಕುಟುಂಬಗಳನ್ನು ನೆನೆಯುತ್ತ ಕಾಲ ಕಳೆಯುತ್ತಾರೆ. ಅಲ್ಲಿ ಒಂದು ಅನಧಿಕೃತವಾದ ಸಂಧಾನವೆಂಬಂತೆ ಪ್ರತಿ ಸಂಜೆ ಸೈನಿಕರು ಸ್ವಯಂ ಯುದ್ಧ ವಿರಾಮ ಘೋಷಿಸಿಕೊಂಡು ಸತ್ತ ಸೈನಿಕರ ಸಂಸ್ಕಾರ ಹಾಗೂ ಗಾಯಾಳುಗಳನ್ನು ತಮ್ಮ ಶಿಬಿರಗಳಿಗೆ ತೆಗೆದುಕೊಂಡು ಹೋಗುವ ಶಾಂತಿಯ ಹೆಜ್ಜೆಗಳನ್ನು ಹಿಡಿಯುತ್ತಾರೆ.
ಹಾಗೆ ಶಾಂತಿಯ ಪ್ರಕ್ರಿಯೆ ಗೊತ್ತಿಲ್ಲದೆ ನಡೆದಿರುತ್ತದೆ. ಇದರ ಜೊತೆಗೆ ಸಂಗೀತವೂ ಸಹ ಈ ಪ್ರಕ್ರಿಯೆಯಲ್ಲಿ ಪ್ರಮುಖವಾದ ಪಾತ್ರ ವಹಿಸುತ್ತದೆ. ಸಂಜೆಯಲ್ಲಿ ಸೈನಿಕರು ತಮ್ಮ ನೋವು ದಣಿವನ್ನು ಮರೆಯಲು ತಮ್ಮದೇ ಆದ ರೀತಿಯಲ್ಲಿ ಹಾಡುತ್ತಾ ಕೇಕೆ ಹಾಕುತ್ತಾ, ಕೆಲವು ಸಲ ವಿರೋಧಿ ಸೈನಿಕರ ಕಾಲೆಳೆಯುತ್ತಾ ಹಾಡುಗಳನ್ನು ಹಾಡುತ್ತಿರುತ್ತಾರೆ.
ಈ ಹಿನ್ನೆಲೆಯಲ್ಲಿ ಡಿಸೆಂಬರ್ 24 ರ ರಾತ್ರಿ ಆದ ಘಟನೆಯನ್ನು ಆಧರಿಸಿ ನಿರ್ಮಾಣಗೊಂಡ ಚಿತ್ರವಿದು. ಈ ಚಿತ್ರದಲ್ಲಿ ಯುದ್ಧಭೂಮಿಯಲ್ಲಿ ಸೇವೆ ಸಲ್ಲಿಸಿದ ಆರು ಪ್ರಮುಖ ಪಾತ್ರಧಾರಿಗಳ ಭೂಮಿಕೆಯಲ್ಲಿ ಚಿತ್ರಿಸಲಾಗಿದೆ. ಲೆಫ್ಟಿನೆಂಟ್ ಗಾರ್ಡನ್, ಲೆಫ್ಟಿನೆಂಟ್ ಆಡಿಬೋರ್ಡ್, ಲೆಫ್ಟಿನೆಂಟ್ ಹಾರ್ಸ್ ಮೇಯರ್ ಹಾಗೂ ಅವರನ್ನು ರಂಜಿಸಲು ಬಂದ ಜರ್ಮನಿಯ ಇಬ್ಬರು ಪ್ರಖ್ಯಾತ ಸಂಗೀತಗಾರರಾದ ಸ್ಪ್ರಿಂಕ್ ಹಾಗೂ ಆತನ ಪ್ರೇಯಸಿ ಆನಾರವರ ಪಾತ್ರವೇ ಇಲ್ಲಿ ಪ್ರಮುಖ ಭೂಮಿಕೆ.
ಕ್ರಿಸ್ಮಸ್ ಸಮಯದಲ್ಲಿ ಸೈನಿಕ ಪಡೆಗೆ ತಮ್ಮ ಗಾಯನದ ಮೂಲಕ ಹಾರೈಸುವುದು ಸ್ಪ್ರಿಂಕ್ ಹಾಗೂ ಆನಾರ ಉದ್ದೇಶ. ಈ ಉದ್ದೇಶದಿಂದ ಬಂದ ಸ್ಪ್ರಿಂಕ್ ಕ್ರಿಸ್ಮಸ್ಸಿನ ಹಿಂದಿನ ದಿನ ಅಂದರೆ ಕ್ರಿಸ್ಮಸ್ ಈವ್ನಂದು ಯುದ್ಧ ಭೂಮಿಗೆ ಬರುತ್ತಾರೆ. ಆ ಸಮಯದಲ್ಲಿ ಸ್ಪ್ರಿಂಕ್ ಕ್ರಿಸ್ಮಸ್ಸಿನ ಪ್ರಸಿದ್ಧ ಗೀತೆಯಾದ ’ಸೈಲೆಂಟ್ ನೈಟ್’ ಹಾಡಲು ತೊಡಗುತ್ತಾನೆ.
ಇದು ಜರ್ಮನಿಯ ಶಿಬಿರದಲ್ಲಿ ಮಾತ್ರವಲ್ಲದೆ ವಿರೊಧೀ ಪಡೆಗಳ ಶಿಬಿರದಲ್ಲೂ ಒಂದು ರೀತಿಯ ಸಂಚಲನವನ್ನು ಉಂಟು ಮಾಡುತ್ತದೆ. ಕೇವಲ ಮದ್ದು ಗುಂಡುಗಳ ವಾಸನೆ, ಆಕ್ರಂದನ ಬೇಸರದ ಗೂಡಾಗಿದ್ದ ಕಂದಕದಿಂದ ಕ್ರಿಸ್‍ಮಸ್ ಸಂದೇಶ ಹೊರ ಹೊಮ್ಮುತ್ತದೆ.
 ಜರ್ಮನ್ ಸೈನಿಕರು ಸಹಾ ಪುಟ್ಟ ಪುಟ್ಟ ಕ್ರಿಸ್ಮಸ್ ಟ್ರೀ ಗಳನ್ನು ಮಾಡಿ ಅದನ್ನು ಕಂದಕದ ಮೇಲಿನ ಯುದ್ಧಭೂಮಿಯ ನೆಲದ ಮೇಲೆ ಇಡಲು ಪ್ರಾರಂಭಿಸುತ್ತಾರೆ. ಸಣ್ಣದಾಗಿ ಕ್ರಿಸ್ಮಸ್ಸಿನ ವಾತಾವರಣ ಅಲ್ಲಿ ಸೃಷ್ಟಿಯಾಗುತ್ತದೆ. ಇದನ್ನು ನೋಡಿ ಏನು ಮಾಡುವುದೆಂದು ತಿಳಿಯದೇ ಫ್ರೆಂಚ್ ಮಿತ್ರ ಪಡೆಗಳ ಶಿಬಿರದಲ್ಲಿ ಒಂದು ರೀತಿಯ ಗೊಂದಲ ಆವರಿಸುತ್ತದೆ. ಆದರೆ ಅವರ ಮನದಲ್ಲೂ ಸಹಾ ಕ್ರಿಸ್ಮಸ್ಸಿನ ಸುಂದರ ಭಾವಗಳು ಚಿಗುರುತ್ತವೆ.
ಇತ್ತ ಸ್ಪ್ರಿಂಕ್ ತನ್ನ ’ಸೈಲೆಂಟ್ ನೈಟಿನ’ ಹಾಡನ್ನು ಮುಂದುವರಿಸುತ್ತಾನೆ. ವಿರೋಧಿ ಪಾಳಯದಲ್ಲಿನ ಸ್ಕಾಟ್ ಸೈನಿಕರಲ್ಲಿ ಒಬ್ಬ ತನ್ನ ಬಳಿಯಿದ್ದ ಬ್ಯಾಗ್ ಪೈಪರ್ ವಾದನದಿಂದ  ಸಣ್ಣದಾಗಿ ನುಡಿಸಲು ಪ್ರಾರಂಭಿಸುತ್ತಾನೆ. ಹಾಡಿಗೆ ಬ್ಯಾಗ್ ಪೈಪರ್ ವಾದನ ದನಿಗೂಡಿಸುತ್ತದೆ. ಆ ಸ್ಪೂರ್ತಿ, ಉತ್ತೇಜನ ಇಡೀ ಸೈನಿಕ ಪಡೆಗೆ ಹರಡುತ್ತದೆ.
ಎರಡೂ ಕಡೆಯ ಪಡೆಯ ಸೈನಿಕರಲ್ಲಿ ಒಂದು ರೀತಿಯ ರೋಮಾಂಚನ ಉಂಟಾಗುತ್ತದೆ. ಈ ಹೊತ್ತಿನಲ್ಲಿ ಒಂದು ಅನಿರೀಕ್ಷಿತವಾದ ಘಟನೆ ನಡೆಯುತ್ತದೆ. ಸ್ಪ್ರಿಂಕ್ ಹಾಡುತ್ತಾ ಹಾಡುತ್ತಾ ಕಂದಕದಿಂದ ಮೆಲ್ಲಗೆ ಮೆಟ್ಟಿಲುಗಳನ್ನು ಹತ್ತುತ್ತಾ ಯುದ್ಧ ಭೂಮಿಯ ನೆಲದ ಮೇಲೆ ನಿಂತು ಹಾಡಲು ಪ್ರಾರಂಭಿಸುತ್ತಾನೆ.
 ಜರ್ಮನಿಯ ಪಡೆಯ ಲೆಫ್ಟಿನೆಂಟ್ ಇದನ್ನು ವಿರೋಧಿಸಿದರೂ ಗಮನಕೊಡದೆ ಆತ  ವಿರೋಧಿ ಪಡೆಯುತ್ತ ಹೆಜ್ಜೆ ಹಾಕುತ್ತಾನೆ. ಇತ್ತ ಗನ್ನುಗಳನ್ನು ಇಟ್ಟುಕೊಂಡು ನೋಡುತ್ತಿದ್ದ ಮಿತ್ರ ಪಡೆಯ ಸೈನಿಕರು ಏನೂ ಮಾಡಲು ತೋಚದೆ ನಿಲ್ಲುತ್ತಾರೆ.
ಹಾಡು ಮುಂದುವರಿಯುತ್ತಿದ್ದಂತೆಯೇ ಮದ್ದು ಗುಂಡುಗಳು ನೆಲಕ್ಕೆ ಉರುಳಿ ಮಾನವ ಹೃದಯಗಳು ಸೈನಿಕರ ರೂಪದಲ್ಲಿ ಕಂದಕದಿಂದ ಮೇಲೆ ಬಂದು ಯುದ್ಧ ಭೂಮಿಯ ಆ ನೆತ್ತರಿನ ನಡುವೆ ಸ್ನೇಹದ ಹಸ್ತವನ್ನು ಚಾಚುತ್ತದೆ. ಸ್ಪ್ರಿಂಕ್ ತನ್ನ ಗಾಯನವನ್ನು ಮುಗಿಸಿದ್ದೇ ತಡ ವಿರೋಧಿ ಪಾಳಯದಿಂದ ಚಪ್ಪಾಳೆ ಹಾಗೂ ಕೇಕೆಯ ರೂಪದಲ್ಲಿ ಅಭಿನಂದನೆಯ ಮಹಾಪೂರ ಹರಿದು ಬರುತ್ತದೆ.
ಅಲ್ಲಿಗೆ ಒಬ್ಬೊಬ್ಬರೇ ಸೈನಿಕರು ಎರಡು ಪಡೆಗಳ ನಡುವಿನ ಯಾರಿಗೂ ಸೇರದ ’ನೋ ಮ್ಯಾನ್ ಲ್ಯಾಂಡಿ’ನ ಕಡೆ ಹೆಜ್ಜೆ ಹಾಕುತ್ತಾರೆ ಅಲ್ಲಿಗೆ ಕ್ರಿಸ್ಮಸ್ಸಿನ ಶಾಂತಿ ಪ್ರೀತಿಯ ಸಂದೇಶ ಭೀಕರ ಯುದ್ಧಭೂಮಿಯಲ್ಲಿ ತನ್ನದೇ ಆದ ರೀತಿಯಲ್ಲಿ ಸಾಕಾರಗೊಳ್ಳುತ್ತದೆ.
ಮುಂದೆ ಏನಾಗುತ್ತದೆ ಎನ್ನುವುದನ್ನು ಚಿತ್ರವನ್ನು ನೋಡಿಯೇ ಸವಿಯಬೇಕು. ಮನೋಜ್ಞವಾಗಿ ಮೂಡಿಬಂದಿರುವ ಈ ಚಿತ್ರ ಯುದ್ಧದ ಭೀಕರತೆಯನ್ನು ಮಾನವನ ಅಂತರಾಳದಲ್ಲಿ ಶಾಂತಿಯ ಹಾತೊರೆಯುವಿಕೆ, ಗುಂಪಿನಲ್ಲಿದ್ದರೂ ಕಾಡುವ ಏಕಾಂಗಿತನ, ಪ್ರೀತಿಗಾಗಿಯ ಹಂಬಲವನ್ನು ತೆರೆಯ ಮೇಲೆ ತೆರೆದಿರುತ್ತದೆ.
ಅಂತೆಯೇ ನಾಯಕರುಗಳ ಸ್ವಾರ್ಥದಲ್ಲಿ ಬಲಿಪಶುವಾಗುವ ಸಾಮಾನ್ಯ ಜನರ ತಲ್ಲಣ, ಸೈನಿಕರ ನೋವು, ಅವರ ಕುಟುಂಬದವರ ಕಾತುರ, ಕೊನೆಗೆ ಜಗತ್ತಿನ ಎಲ್ಲಾ ಜನರ ಬಗೆಗಿನ ಕಾಳಜಿ ಅನುಕಂಪವನ್ನು ಚಿತ್ರ ನಿಧಾನವಾಗಿ ತೆರೆದಿರುತ್ತದೆ.
ಆದ್ದರಿಂದಲೇ ಈ ಚಿತ್ರ ನೋಡಲೇಬೇಕಾದ ಚಿತ್ರಗಳ ಸಾಲಿನಲ್ಲಿ ಖಂಡಿತವಾಗಿಯೂ ನಿಲ್ಲುತ್ತದೆ. ಅದರಲ್ಲೂ ಕ್ರಿಸ್ಮಸ್ ಸಮಯದಲ್ಲಿ ಈ ಚಿತ್ರ ಮತ್ತಷ್ಟು ಆಪ್ತವಾಗುತ್ತದೆ.



Monday, 8 October 2018

’ಸೈಲೆನ್ಸ್’


ವಿಶ್ವಾಸ ಹಾಗೂ ಸ್ಥಳೀಯ ವ್ಯವಸ್ಥೆಯ ನಡುವಿನ ಸಂಘರ್ಷ ಹಾಗೂ ಅದರ ಹಿನ್ನೆಲೆಯಲ್ಲಿ ಬರುವ ಭಾವನಾತ್ಮಕ ತೊಳಲಾಟದ ಚಿತ್ರ ಸೈಲೆನ್ಸ್’.
ಹಾಲಿವುಡ್ ನ ಅತ್ಯಂತ ಜನಪ್ರಿಯ ನಿರ್ದೇಶಕರುಗಳಲ್ಲಿ ಒಬ್ಬರಾದ ಮಾರ್ಟಿನ್ ಸ್ಕೋರ್ಸೆಸಿ ಚಿತ್ರಗಳನ್ನು ಜನ ಮೆಚ್ಚುವುದು ಅದರ ಚಿತ್ರಣ ಹಾಗೂ ವಸ್ತುವಿಗಾಗಿ. ಮಾರ್ಟಿನ್‍ರವರ ಯಾವುದೇ ಚಿತ್ರವು ದೊಡ್ಡ ಕ್ಯಾನ್ವಾಸಿನ ಚಿತ್ರ ಮಾತ್ರವಲ್ಲದೆ ಅಂತರಾಳದಲ್ಲಿ ಅನೇಕ ಪದರುಗಳನ್ನು ಮತ್ತು ಒಳ ಅರ್ಥಗಳನ್ನು ಒಳಗೊಂಡಿರುತ್ತವೆ. ಅವರ ಚಿತ್ರಗಳ ಈ ಅಂಶಗಳ ಬಗ್ಗೆಯೇ ದೊಡ್ಡ ಮಟ್ಟದ ಸಂವಾದಗಳನ್ನು ನಾವು ಕಾಣಬಹುದು. ಕಚ್ಚಾ ಎನಿಸುವಂತ ನಿರೂಪಣೆ, ಅತ್ತ್ಯುತ್ತಮ ತಾಂತ್ರಿಕತೆ,  ಕಥಾವಸ್ತುವಲ್ಲಿನ ಗಾಢತೆ, ವಿಷಾದ ಹಾಗೂ ನೈಜತೆಯಿಂದಾಗಿ ಮಾರ್ಟಿನ್ ಹಾಲಿವುಡ್‍ನ ಅಗ್ರಮಾನ್ಯ ನಿರ್ದೇಶಕರಲ್ಲಿ ಒಬ್ಬರಾಗಿದ್ದಾರೆ. ಅಂತೆಯೇ ಅವರ ಚಿತ್ರಗಳು ವಿವಾದಾತ್ಮಕ ಚಿತ್ರಗಳ ಸಾಲಿನಲ್ಲೂ ನಿಲ್ಲುತ್ತದೆ. ಅವರ ಯಾವುದೇ ಚಿತ್ರದಲ್ಲಿ ಒಂದಷ್ಟು ಆಧ್ಯಾತ್ಮಿಕತೆ ಇದ್ದೇ ಇರುತ್ತದೆ ಎಂಬುದು ವಿಮರ್ಶಕರ, ಚಿತ್ರರಸಿಕರ ಅಭಿಪ್ರಾಯವಾಗಿದೆ. ಹಾಗೇ ನೋಡಿದರೆ ಸೈಲೆನ್ಸ್ ಪೂರ್ಣ ಧಾರ್ಮಿಕ ವಸ್ತುವನ್ನೇ ಒಳಗೊಂಡ ಮಾರ್ಟಿನ್‍ರವರ ಮೂರನೆಯ ಚಿತ್ರ. ಸಾಕಷ್ಟು ವಿವಾದ ಸೃಷ್ಟಿಸಿದ್ದ- ದಿ ಲಾಸ್ಟ್ ಟೆಂಪ್ಟೇಶನ್ ಆಫ್ ಕ್ರೈಸ್ಟ್ ಹಾಗೂ ಕುಂದನ್ ಅವರ ಇತರ ಧಾರ್ಮಿಕ ಹಿನ್ನೆಲೆಯುಳ್ಳ ಚಿತ್ರಗಳು.
17ನೇ ಶತಮಾನದ ಜಪಾನಿನ ನಾಗಸಾಕಿ ಸುತ್ತಮುತ್ತ ನಡೆಯುವ ಘಟನೆಗಳು ಈ ಚಿತ್ರದ ಕಥಾವಸ್ತು. ಇದು ಶುಸಾಕು ಏಂಡೋ ಎಂಬ ಕಾದಂಬರಿಕಾರನ ಸೈಲೆನ್ಸ್ ಹೆಸರಿನ ಕಾದಂಬರಿ ಆಧಾರಿತ ಚಿತ್ರವಾಗಿದೆ. ಈ ಕಾದಂಬರಿಯನ್ನು ಬರೆಯಲು ಪ್ರೇರಣೆಯಾದ ಸಂದರ್ಭವೇ ಆಸಕ್ತಿಕರವಾದದು. ಜಪಾನಿನ ಮ್ಯೂಸಿಯಂ ಒಂದರಲ್ಲಿ ಹದಿನಾರು, ಹದಿನೇಳನೇ ಶತಮಾನಕ್ಕೆ ಸೇರಿದ ಕ್ರಿಸ್ತನ ಚಿತ್ರವುಳ್ಳ ಫಲಕಗಳು ಕಾದಂಬರಿಕಾರನನ್ನು ಸೆಳೆಯುತ್ತದೆ. ೧೬, ೧೭ನೇ ಶತಮಾನದಲ್ಲಿ ಜಪಾನಿನಲ್ಲಿ ಕ್ರೈಸ್ತ ಧರ್ಮವನ್ನು ಅಡಗಿಸುವ ನಿಟ್ಟಿನಲ್ಲಿ ಕ್ರೈಸ್ತ ಅನುಯಾಯಿಗಳಿಗೆ ಒಂದು ಪರೀಕ್ಷೆಯನ್ನು ಒಡ್ಡಲಾಗುತ್ತಿತ್ತು. ಅವರನ್ನು ನಿಲ್ಲಿಸಿ, ಕ್ರಿಸ್ತ ಅಥವಾ ಕ್ರೈಸ್ತ ಧರ್ಮಕ್ಕೆ ಸೇರಿದ ಕೆತ್ತನೆಯಿದ್ದ ಫಲಕವನ್ನು ನೆಲದ ಮೇಲಿಟ್ಟು ಕಾಲಿನಲ್ಲಿ ತುಳಿಯಬೇಕೆಂದು ಕ್ರೈಸ್ತರಿಗೆ ಆಜ್ಞೆಯನ್ನು ನೀಡಲಾಗುತಿತ್ತು.
ಆ ಫಲಕವನ್ನು ತುಳಿದವರನ್ನು ಬಿಡುಗಡೆ ಮಾಡಲಾಗುತ್ತಿತ್ತು, ಅದನ್ನು ಅವರು ತುಳಿಯದಿದ್ದರೆ ಅವರು ಕ್ರೈಸ್ತರು ಎಂಬುದು ಸಾಬೀತಾಗಿ ಅವರನ್ನು ಹಿಂಸೆಗೆ ಅಥವಾ ಸಾವಿಗೆ ಗುರಿ ಮಾಡಲಾಗುತ್ತಿತ್ತು. ಮ್ಯೂಸಿಯಂನಲ್ಲಿದ್ದ ಈ ಫಲಕಗಳು ಒಂದು ಪ್ರೇರಣೆಯಾದರೆ, ಜಪಾನಿಗೆ ಸೇವೆ ಮಾಡಲು ಬಂದ ಪೋರ್ಚುಗಲ್ಲಿನ ಯೇಸು ಸಭೆಯ ಗುರುಗಳ ಬಗ್ಗೆ ಸಂಶೋಧನೆಯನ್ನುಮಾಡುವಾಗ ಕ್ರೈಸ್ತ ಪಾದ್ರಿ ಕ್ರಿಸ್ಟೋವ ಫೆರೆರಾ ಎಂಬ ಗುರುಗಳ ಉಲ್ಲೇಖ ಸಿಗುತ್ತದೆ.
1630ರ ಹೊತ್ತಿಗೆ ಆ ಗುರುಗಳ ಬಗ್ಗೆ ಯಾವುದೇ ರೀತಿಯ ವಿವರಗಳು ಮುಂದುವರಿಯಲಿಲ್ಲ ಇದು ಏಕೆ ಎಂದು ತಿಳಿಯಲು ಪ್ರಯತ್ನಿಸಿದಾಗ, ಆ ಗುರುಗಳು ತಮ್ಮ ವಿಶ್ವಾಸವನ್ನು, ಕ್ರೈಸ್ತ ಧರ್ಮವನ್ನು ತೊರೆದರು ಎಂಬ ಸಣ್ಣ ಮಾಹಿತಿ ಸಿಗುತ್ತದೆ. ಮುಂದಿನ ಮಾಹಿತಿಗಳು ಲಭ್ಯವಾಗದೆ ಇದ್ದಾಗ ಅಂದಿನ ಜಪಾನಿನ ಸಾಮಾಜಿಕ ಹಾಗೂ ಧಾರ್ಮಿಕ ಸ್ಥಿತಿಗತಿಗಳನ್ನು ಅವಲೋಕಿಸಿ ಕಾದಂಬರಿಕಾರ ತನ್ನದೇ ಆದ ಒಂದು ಕಲ್ಪನೆಯಲ್ಲಿ ಫೆರೆರಾರವರ ಮುಂದಿನ ಜೀವನವನ್ನು ಕಾದಂಬರಿಯಲ್ಲಿ ಮುಂದುವರಿಸುತ್ತಾರೆ. ಈ ಕಥಾ ಭಾಗದ ಮುಂದುವರಿಕೆಯೇ ಈ ಚಿತ್ರದ ಒಂದು ಕಥಾವಸ್ತು.
ಚಿತ್ರದಲ್ಲಿ ಹೀಗೆ ಕ್ರೈಸ್ತ ಧರ್ಮವನ್ನು ತ್ಯಜಿಸಿ ಫೆರೆರಾ ಸ್ಥಳೀಯ ಧರ್ಮದ ಅನುಯಾಯಿಗಳಾದರು ಎಂಬ ಸುದ್ದಿ ಬರುತ್ತದೆ. ಇದನ್ನು ನಂಬದ ಫೆರೆರಾರವರ ಇಬ್ಬರು ಶಿಷ್ಯ ಗುರುಗಳಾದ ಸೆಬಾಸ್ಟಿಯೋ ರಾಡ್ರಿಗಸ್ ಹಾಗೂ ಫ್ರಾನ್ಸಿಸ್ಕೋ ಗರುಪೆ ಅವರನ್ನು ಹುಡುಕಿಕೊಂಡು ಜಪಾನ್ ದೇಶಕ್ಕೆ ಬರುತ್ತಾರೆ.
ತಮ್ಮ ಜೀವಕ್ಕೆ ಮುಳುವಾಗಬಹುದು ವಿಷಯ ತಿಳಿದಿದ್ದರೂ ಕ್ರಿಸ್ತನ ಮೇಲಿನ ಪ್ರೇಮಕ್ಕಾಗಿ ಮತ್ತು ತಮ್ಮ ಗುರುಗಳ ಮೇಲಿನ ಅಭಿಮಾನಕ್ಕಾಗಿ ಜಪಾನಿಗೆ ಆ ಇಬ್ಬರು ಗುರುಗಳು ಬರುತ್ತಾರೆ. ಆ ಸಮಯದಲ್ಲಿ ಜಪಾನಿನಲ್ಲಿ ಕ್ರೈಸ್ತ ಧರ್ಮ ಅವನತಿಯೆಡೆಗೆ ಸಾಗುತ್ತಿರುತ್ತದೆ. ಸುಮಾರು 3 ಲಕ್ಷದಷ್ಟಿದ್ದ ಕ್ರೈಸ್ತರ ಸಂಖ್ಯೆ ಕೆಲವೇ ಸಾವಿರದಷ್ಟಾಗಲು ಕಾರಣಗಳು ಅವರಿಗೆ ಸಿಗುತ್ತದೆ. ಇಬ್ಬರು ಗುರುಗಳು ಅಲ್ಲಿ ಕ್ರೈಸ್ತ ಧರ್ಮವನ್ನು ಕಟ್ಟುವ ಕೈಂಕರ್ಯಕ್ಕೆ ಮುಂದಾಗುತ್ತಾರೆ
ಆ ಸಮಯದಲ್ಲಿ ಅವರಿಬ್ಬರೂ ಅನುಭವಿಸುವ ಯಾತನೆ ಮತ್ತು ಅಲ್ಲಿನ ಧಾರ್ಮಿಕ ನಾಯಕರು ಅವರಿಗೆ ನೀಡುವ ಚಿತ್ರ ಹಿಂಸೆಯನ್ನು ಈ ಚಿತ್ರದಲ್ಲಿ ನಾವು ಕಾಣಬಹುದಾಗಿದೆ. ಚಿತ್ರದಲ್ಲಿ ಅನೇಕ ಹೃದಯಂಗಮ ದೃಶ್ಯಗಳನ್ನು ಮಾರ್ಟಿನ್ ತಮ್ಮ ಎಂದಿನ ಶೈಲಿಯಲ್ಲಿ ಮೂಡಿಸಿದ್ದಾರೆ ಕೆಲವೊಮ್ಮೆ ಆ ದೃಶ್ಯಗಳು ಮನಕಲುಕುವುದು ಮಾತ್ರವಲ್ಲದೆ, ನಮ್ಮ ಹೃದಯವನ್ನೇ ತಿವಿಯುತ್ತದೆ. ಜಪಾನಿನಲ್ಲಿ ಅಂದಿನ ಧಾರ್ಮಿಕ ಸ್ಥಿತಿಗತಿಗಳನ್ನು, ಹಾಗೂ ಕ್ರೈಸ್ತರು ಅನುಭವಿಸುವ ಅನೇಕ ರೀತಿಯ ಕಷ್ಟ ಹಿಂಸೆಗಳನ್ನು ಈ ಚಿತ್ರದಲ್ಲಿ ಚಿತ್ರಿಸಲಾಗಿದೆ.

ತಮ್ಮ ಗುರುಗಳನ್ನು ಹುಡುಕಿಕೊಂಡು ಬಂದ ಈ ಇಬ್ಬರು ಪಾದ್ರಿಗಳು ಕ್ರೈಸ್ತ ವಿಶ್ವಾಸಕ್ಕೆ ಕಟ್ಟುಬಿದ್ದ ಪರಿಣಾಮವಾಗಿ ಗರುಪೆ ತಮ್ಮ ಜೀವವನ್ನೇ ತೆರಬೇಕಾಗುತ್ತದೆ. ರಾಡ್ರಿಗಸ್ ಅದಕ್ಕಿಂತ ಘೋರವಾದ ಪ್ರಸಂಗವನ್ನು ಮುಂದೆ ಅನುಭವಿಸಬೇಕಾಗುತ್ತದೆ. ಹುಡುಕಿಕೊಂಡು ಬಂದ ತಮ್ಮ ಗುರುಗಳಾದ ಫೆರೆರಾ ವಿಶ್ವಾಸವನ್ನು ತ್ಯಜಿಸಿ ಅಲ್ಲಿನ ಧಾರ್ಮಿಕ ವ್ಯವಸ್ಥೆಯ ಒಂದು ಭಾಗವಾಗಿ, ಯಾವುದೇ ರೀತಿಯ ಸಂಕಟವಿಲ್ಲದೆ, ನೋವಿಲ್ಲದೆ ಬದುಕುತ್ತಿರುವುದನ್ನು ಕಂಡ ರಾಡ್ರಿಗಸ್ ಅನುಭವಿಸುವ ನೋವು ಹಾಗೂ ಮಾನಸಿಕ ತಳಮಳದ ದೃಶ್ಯ ಚಿತ್ರದ ಹೈಲೈಟ್ ಗಳಲ್ಲಿ ಒಂದು.
ಮುಂದೆ ಪರಿಸ್ಥಿತಿಯ ಶಿಶುವಾಗಿ ಹಾಗೂ ತಮ್ಮ ಜನರನ್ನು ರಕ್ಷಿಸುವ ಸಲುವಾಗಿ ರಾಡ್ರಿಗಸ್ ಕೂಡ ಕ್ರೈಸ್ತ ಧರ್ಮವನ್ನು ಬಿಟ್ಟು ಅಲ್ಲಿನ ಧಾರ್ಮಿಕ ವ್ಯವಸ್ಥೆಯಲ್ಲಿ ಒಂದಾಗುವಂತಹ ಪ್ರಸಂಗ ಬರುತ್ತದೆ. ಆ ಪರಿಸ್ಥಿತಿಯ ಭಾಗವಾಗಿ ಅವರು ಕ್ರಿಸ್ತನ ಫಲಕವನ್ನು ತುಳಿಯಬೇಕಾದ ಪ್ರಸಂಗ ಬರುತ್ತದೆ. ಮಾನಸಿಕ ಹಾಗೂ ಧಾರ್ಮಿಕ ತೊಳಲಾಟದಲ್ಲಿ ಬಿದ್ದ ಅವರಿಗೆ ಕ್ರಿಸ್ತನ ಮಾತುಗಳು ಕೇಳಿಸುತ್ತದೆ. ತನ್ನ ಚಿತ್ರವು ಇರುವ ಫಲಕವನ್ನು ತುಳಿ ಎಂದು ಕ್ರಿಸ್ತನೇ ಹೇಳಿದಂತೆ ಭಾಸವಾಗುತ್ತದೆ. ಇಲ್ಲಿ ಕ್ರಿಸ್ತ ಒಬ್ಬ ಪರಿಸ್ಥಿತಿಗಳನ್ನು ಅರ್ಥಮಾಡಿಕೊಳ್ಳಬಲ್ಲ ದೇವರು ಎಂಬುದನ್ನು ಹಾಗೂ ನೋವು, ಕಷ್ಟ ಪಡುವವರ ಪರವಾಗಿ ನಿಲ್ಲಬಲ ದೇವರು ಎಂಬುದನ್ನು ನಿರ್ದೇಶಕರು ತೋರಿಸಿದ್ದಾರೆ.
ಕೊನೆಗೆ ರಾಡ್ರಿಗಸ್ ಸ್ವಾಭಾವಿಕ ಸಾವಿಗೀಡಾಗಿ ಅಲ್ಲಿನ ಸಂಪ್ರದಾಯದಂತೆಯೇ ಅಗ್ನಿ ಸ್ಪರ್ಶಕ್ಕೆ ಗುರಿಯಾಗುತ್ತಾರೆ. ಅಲ್ಲಿ ಕ್ರೈಸ್ತ ಧರ್ಮದ ಲವಲೇಶವೂ ಕಾಣುತ್ತಿಲ್ಲ ಎಂಬ ಸಂದರ್ಭದಲ್ಲಿ ಚಿತ್ರ ಮುಗಿಯುತ್ತಿದ್ದಂತೆ, ಅಗ್ನಿಸ್ಪರ್ಷಕ್ಕೆ ಗುರಿಯಾಗುವ ರಾಡ್ರಿಗಸ್‍ರವರ ಕೈ ಒಂದು ಮರದ ಸಣ್ಣ ಶಿಲುಬೆನ್ನು ಭದ್ರವಾಗಿ ಹಿಡಿದಿಟ್ಟುಕೊಂಡಿರುವುದನ್ನು ಕಾಣುತ್ತದೆ.
ನೋಡುಗರ ಎದೆಯನ್ನು ನಾಟುವಂತ ಪರಿಣಾಮವನ್ನು ಚಿತ್ರ ಮೂಡಿಸುವುದರಲ್ಲಿ ಎಂದಿನಂತೆ ಮಾರ್ಟಿನ್ ಸ್ಕೋರ್ಸೆಸಿ ಯಶಸ್ವಿಯಾಗಿದ್ದಾರೆ. ಯುವ ಪಾದ್ರಿ ರಾಡ್ರಿಗಸ್ ಪಾತ್ರದಲ್ಲಿ ನಟ ಆಂಡ್ರೂ ಗಾರ್ಫೀಲ್ಡ್‍ರವರದು ಮನೋಜ್ಞ ಅಭಿನಯ. ಚಿತ್ರದಲ್ಲಿ ಬರುವ ಜಪಾನ್ ಪಾತ್ರಧಾರಿಗಳ ಅಭಿನಯ ಅದೆಷ್ಟು ತನ್ಮಯವಾಗಿದೆ ಎಂದರೆ ಚಿತ್ರ ಕೆಲವೇ ನಿಮಿಷಗಳಲ್ಲಿ ನಿಮ್ಮನ್ನು ಜಪಾನ್ ಹಾಗೂ ೧೭ನೇ ಶತಮಾನಕ್ಕೆ ಕರೆದ್ಯೊಯ್ಯುತ್ತದೆ. ಚಿತ್ರದ ಸಂಗೀತ, ಛಾಯಗ್ರಹಣವೆಲ್ಲವೂ ಉತ್ಕೃಷ್ಟ ಮಟ್ಟದಾಗಿದೆ.
ಸುಮಾರು 3 ಗಂಟೆಯಷ್ಟು ದೀರ್ಘವಾದ ಈ ಚಿತ್ರವನ್ನು ಬಿಡುವು ಮಾಡಿಕೊಂಡು ನೋಡಬೇಕಾಗುತ್ತದೆ.


Friday, 10 August 2018

'ಪ್ಯಾಶನ್ ಆಫ್ ಕ್ರೈಸ್ಟ್’


ಟೆನ್ ಕಮ್ಯಾಂಡ್‌ಮೆಂಟ್ಸ್, ಬೆನ್ ಹರ್ ನಂತಹ ಅದ್ಧೂರಿ ಬೈಬಲ್ ಆಧಾರಿತ ಚಿತ್ರಗಳನ್ನು ತಯಾರಿಸಿದ ಹಾಲಿವುಡ್‍ನಲ್ಲಿ ಇತ್ತೀಚಿನ ವರ್ಷಗಳಲ್ಲಿ ಬಂದ ಖ್ಯಾತ ಬೈಬಲ್ ಆಧಾರಿತ ಚಿತ್ರವೆಂದರೆ ಅದು ’ಪ್ಯಾಶನ್ ಆಫ್ ಕ್ರೈಸ್ಟ್’ ಚಿತ್ರ. ನಿಮಗೆಲ್ಲರಿಗೂ ತಿಳಿದಿರುವಂತೆ ಇದು ಯೇಸುಕ್ರಿಸ್ತನ ಜೀವನದ ಕೊನೆಯ ಹನ್ನೆರಡು ಗಂಟೆಗಳ ಕಾಲವನ್ನು ಮೂಲ ವಸ್ತುವಾಗಿಟ್ಟುಕೊಂಡ ಚಿತ್ರವಾಗಿದೆ. ಇಲ್ಲಿ ಕ್ರಿಸ್ತನ ನೋವು ಯಾತನೆ, ಶಿಲುಬೆಯ ಮರಣವೇ ಪ್ರಮುಖ ಕಥಾವಸ್ತು. ಅದೇ ಭಾಗವಾಗಿ ಶಿಲುಬೆಯನ್ನು ಹೊತ್ತು ನಡೆದ ಯೇಸುವಿನ ಆ ಹಾದಿಯ ಚಿತ್ರಣ ಹಾಗೂ ನಂತರದ ಮರಣದ ಚಿತ್ರಣವನ್ನು ದೀರ್ಘವಾಗಿಯೂ ವಿಸ್ತೃತವಾಗಿಯೂ ತೋರಿಸಲಾಗಿದೆ. ಜೊತೆ ಜೊತೆಗೆ ಯೇಸುವಿನ ಜೀವನ, ಬೋಧನೆಯ ಸಣ್ಣ ಸಣ್ಣ ದೃಶ್ಯಗಳು ಫ್ಲ್ಯಾಶ್ ಬ್ಯಾಕ್ ತಂತ್ರದಲ್ಲಿ ಮೂಡಿ ಬರುತ್ತದೆ. 

ಪ್ರೇರಣೆ ಹಾಗೂ ಮೂಲ : 

ಚಿತ್ರದ ಮೂಲ ಪ್ರೇರಣೆ ಶುಭ ಸಂದೇಶದಲ್ಲಿನ ಮತ್ತಾಯ, ಮಾರ್ಕ ಹಾಗೂ ಲೂಕನ ಪುಸ್ತಕಗಳೇ. ಈ ಪುಸ್ತಕಗಳಲ್ಲಿನ ಯೇಸುವಿನ ಕೊನೆಯ ದಿನದ ಆಗು ಹೋಗುಗಳನ್ನು ಚಿತ್ರಕತೆಯಲ್ಲಿ ಬಳಸಿಕೊಳ್ಳಲಾಗಿದೆ. ಇದರ ಜೊತೆಗೆ ಅಲ್ಲಲ್ಲಿ ಕಂಡು ಬರುವ ಫ್ರೈಡೇ ಸಾರೋ, ಅಂದರೆ ಶುಭ ಶುಕ್ರವಾರದಂದು ಕೆಲವರ ದೇಹದಲ್ಲಿ ಕಾಣಿಸಿಕೊಳ್ಳುವ ಯೇಸುವಿನ ಗಾಯಗಳ ಗುರುತು ಹಾಗೂ ಅನುಭವಗಳನ್ನು ಇಲ್ಲಿ ಬಳಸಿಕೊಳ್ಳಲಾಗಿದೆ. ಮುಖ್ಯವಾಗಿ ಹದಿನೇಳನೇ ಶತಮಾನದ ಆನಿ ಕ್ಯಾಥರಿನ್ ಎನ್ರಿಚ್ ಎಂಬವರ ಅನುಭವಗಳನ್ನು ಚಿತ್ರಕತೆಯಲ್ಲಿ ಅಳವಡಿಸಿಕೊಳ್ಳಲಾಗಿದೆ. 

ಖ್ಯಾತ ನಟ ಮೆಲ್ ಗಿಬ್ಸನ್ ನಿರ್ದೇಶನ : 

ಈ ಚಿತ್ರವು ಬಿಡುಗಡೆಯ ಮುಂಚೆಯೇ ಸಾಕಷ್ಟು ಕುತೂಹಲವನ್ನೂ ನಿರೀಕ್ಷೆಯನ್ನೂ ಹುಟ್ಟಿಸಿತು. ಅದಕ್ಕೆ ದೊಡ್ಡ ಕಾರಣ, ಹಾಲಿವುಡ್ ಚಿತ್ರಗಳಲ್ಲಿ ನಾಯಕನಾಗಿ ಅತ್ಯಂತ ದೊಡ್ಡ ಯಶಸ್ಸು ಹಾಗೂ ಖ್ಯಾತಿಯನ್ನು ಪಡೆದಿದ್ದ ಮೆಲ್ ಗಿಬ್ಸನ್ ಈ ಚಿತ್ರವನ್ನು ನಿರ್ದೇಶಿಸಿದ್ದು. ಸಾಮಾನ್ಯವಾಗಿ ಸಾಹಸ ಚಿತ್ರಗಳಲ್ಲೇ ತನ್ನನ್ನು ತೊಡಗಿಸಿಕೊಂಡು ಬಂದು ಅಪಾರ ಜನಮನ್ನಣೆಯನ್ನು ಪಡೆದವನು ಮೆಲ್ ಗಿಬ್ಸನ್. ತನ್ನ ಸುಂದರ ಮುಖ ಹಾಗೂ ಅಂಗಸೌಷ್ಟವದಿಂದ ಚಿತ್ರ ರಸಿಕರ ಮನದಲ್ಲಿ ನೆಲಸಿದ್ದ ಮೆಲ್ ಗಿಬ್ಸನ್ ನ ಹೊಸ ಚಿತ್ರವೆಂದರೆ ಇಡೀ ಚಿತ್ರ ಜಗತ್ತೇ ಎದುರು ನೋಡುವಂತ ಸಂಗತಿಯಾಗಿತ್ತು 

ತೊಂಬತ್ತರ ದಶಕದಲ್ಲಿ ಬ್ರೇವ್ ಹಾರ್ಟ್ ಎಂಬ ಐತಿಹಾಸಿಕ ಸ್ವಾತಂತ್ರ್ಯ ಹೋರಾಟದ ಚಿತ್ರವನ್ನು ಇದೇ ಗಿಬ್ಸನ್ ನಿರ್ಮಿಸಿ ನಿರ್ದೇಶಿದ್ದ. ಅದಕ್ಕಿಂತ ಮುಖ್ಯವಾಗಿ ಅದರಲ್ಲಿ ನಾಯಕನಾಗಿ ಮನೋಜ್ಞವಾದ ಅಭಿನಯವನ್ನೂ ಮಾಡಿದ್ದ. ಆ ಚಿತ್ರ ಅನೇಕ ರೀತಿಯ ಒಳ್ಳೆಯ ವಿಮರ್ಶೆ, ಪ್ರಶಸ್ತಿ ಗಳಿಸಿಕೊಂಡಿದ್ದಲ್ಲದೆ ಗಲ್ಲಾಪೆಟ್ಟಿಗೆಯಲ್ಲಿ ಅಪಾರ ಹಣವನ್ನು ಸಹಾ ಬಾಚಿಕೊಂಡಿತು. 

ಇಂತಹ ಮೆಲ್ ಗಿಬ್ಸನ್ ಈ ಚಿತ್ರದ ನಿರ್ಮಾಣವನ್ನು ಪ್ರಕಟಿಸಿದಾಗ ಆತನೇ ಯೇಸುಕ್ರಿಸ್ತನ ಪಾತ್ರವನ್ನು ಮಾಡಬಹುದೇ ಎಂಬ ಪ್ರಶ್ನೆಗಳು ಎದ್ದವು. ನೋಡಲು ತಕ್ಕ ಮಟ್ಟಿಗೆ ಯೇಸುವನ್ನು ಹೋಲಬಹುದಾದರೂ ಗಿಬ್ಸನ್ ಆ ಪಾತ್ರಕ್ಕೆ ಆರಿಸಿಕೊಂಡದ್ದು ಜಿಮ್ ಕೆವಜಲ್ ಎಂಬ ನಟನನ್ನು. ಕ್ಯಾಮರಾ ಹಿಂದೆ ನಿರ್ದೇಶಕ ಪಟ್ಟವನ್ನು ತಾನು ಹೊರುತ್ತಾನೆ ಮೆಲ್ ಗಿಬ್ಸನ್. ಆಶ್ಚರ್ಯವೆಂದರೆ ಯಾವುದೇ ನಿರ್ಮಾಣ ಸಂಸ್ಥೆಯೂ ಈ ಚಿತ್ರದ ನಿರ್ಮಾಣದಲ್ಲಿ ಆಸಕ್ತಿ ತೋರಲಿಲ್ಲ. ಆದರಿಂದ ಮೆಲ್ ಗಿಬ್ಸನ್ ತಾನೇ ಸ್ವತಃ ಮೂವತ್ತು ದಶ ಲಕ್ಷ ಡಾಲರು‍ಗಳನ್ನು ಹೂಡಬೇಕಾಯಿತು. 

ನಿರ್ಮಾಣ ಹಾಗೂ ಭಾಷೆ: 

ಈ ಚಿತ್ರದ ಬಹುಭಾಗವನ್ನು ಇಟಲಿಯಲ್ಲೇ ಚಿತ್ರಿಸಲಾಯಿತು. ಅದಕ್ಕಿಂತ ವಿಶೇಷವೆಂದರೆ ಈ ಚಿತ್ರದ ತಯಾರಿಕೆಯಲ್ಲಿ ಬಹುತೇಕ ಹಾಲಿವುಡ್ ಜನರೇ ತೊಡಗಿಕೊಂಡರೂ ಈ ಚಿತ್ರದಲ್ಲಿ ಅರಾಮಯಿಕ್, ಹೀಬ್ರೂ ಹಾಗೂ ಲ್ಯಾಟಿನ್ ಭಾಷೆಯನ್ನೇ ಬಳಸಿಕೊಳ್ಳಲಾಗಿದೆ. ಚಿತ್ರದಲ್ಲಿ ಯೇಸುವಿನ ಕಾಲದ ಹಾಗೂ ಸ್ಥಳದ ಭಾಷೆಯನ್ನೇ ಬಳಸಿದರೆ ಚಿತ್ರ ಮತ್ತಷ್ಟು ನೈಜವಾಗಿಯೂ, ಆ ಕಾಲದ ಪರಿಸರಕ್ಕೆ ಹತ್ತಿರವಾಗಿಯೂ ಮೂಡಿ ಬರುತ್ತದೆ ಎಂಬುದು ನಿರ್ದೇಶಕ ಮೆಲ್ ಗಿಬ್ಸನ್ ಅಭಿಪ್ರಾಯವಾಗಿತ್ತು. ಅದಕ್ಕಿಂತ ಹೆಚ್ಚಾಗಿ ಯೇಸುವಿನ ಕೊನೆಯ ದಿನದ ಘಟನೆಗಳು ಎಲ್ಲರಿಗೂ ಪರಿಚಿತವೇ ಆಗಿದ್ದೂ, ಯೇಸುವಿನ ಚಿಂತನೆ ಬೋಧನೆ ಮತ್ತು ಸುತ್ತಮುತ್ತಲಿನ ಘಟನೆಗಳನ್ನು ಅತ್ಯಂತ ಪರಿಣಾಮಕಾರಿಯಾಗಿ ತೋರಿಸಲು ಭಾಷೆಗಿಂತ ದೃಶ್ಯಗಳೇ ಪ್ರಧಾನ ಭೂಮಿಕೆ ಆಗಲಿ ಎಂಬುದು ಚಿತ್ರ ತಂಡದ ಅಭಿಪ್ರಾಯವಾಗಿತ್ತು. 

ನಟರ ಪಾಡು : 

ಕ್ರಿಸ್ತ ಪಾತ್ರಧಾರಿ ಜಿಮ್ ಕೆವಿಜೆಲ್ ಈ ಚಿತ್ರದ ಚಿತ್ರೀಕರಣದಲಿ ಪಟ್ಟ ಕಷ್ಟ ಒಂದೆರಡಲ್ಲ. ಒಮ್ಮೆ ಸಿಡಿಲು ಬಡಿದು ಬೆನ್ನ ಮೇಲೆ ದೊಡ್ಡ ಗಾಯ ಮೂಡಿದರೆ, ಮತ್ತೊಮ್ಮೆ ಭಾರವಾದ ಶಿಲುಬೆ ಬೆನ್ನ ಮೇಲೆ ಬಿದ್ದು ಭುಜದ ಮೂಳೆಗಳು ಮುರಿದಿದ್ದವು. ಶಿಲುಬೆ ಮೇಲೆ ತೂಗಾಡುವ ದೃಶ್ಯದ ಚಿತ್ರೀಕರಣದ ಸಮಯದಲ್ಲಿ ಬಳಲಿಕೆಯಾಗಿ ನ್ಯುಮೋನಿಯಕ್ಕೆ ತುತ್ತಾದರು. ಒತ್ತಡದ ಪರಿಣಾಮವಾಗಿ ಚಿತ್ರೀಕರಣದ ನಂತರ ಹೃದಯ ಶಸ್ತ್ರ ಚಿಕಿತ್ಸೆಗೂ ಒಳಗಾಗಬೇಕಾಯಿತು. ಜಿಮ್ ಪ್ರತಿ ದಿನ ಎಂಟು ಗಂಟೆಗಳ ಕಾಲ ಮೇಕಪ್‍ಗಾಗಿ ಸಮಯ ಕಳೆಯಬೇಕಾಗುತಿತ್ತು. 

ಬಿಡುಗಡೆ ಹಾಗೂ ಯಶಸ್ಸು: 

ಈ ಚಿತ್ರ ೨೦೦೪ರ ಬೂದಿ ಬುಧವಾರದಂದು ಬಿಡುಗಡೆಗೊಂಡಿತು. ಸುಮಾರು ಮೂವತ್ತು ದಶಲಕ್ಷ ಡಾಲರ್ ನೊಂದಿಗೆ ನಿರ್ಮಾಣವಾದ ಈ ಚಿತ್ರ ಅದೆಷ್ಟು ಅಪಾರವಾದ ಯಶಸ್ಸನ್ನು ಪಡೆಯಿತೆಂದರೆ, ಕೊನೆಗೆ ಈ ಚಿತ್ರ ಅರು ನೂರು ದಶಲಕ್ಷ ಡಾಲರ್ ಗಳಷ್ಟು ಬಾಚಿಕೊಂಡಿತು ಅಂದರೆ ನಮ್ಮ ರೂಪಾಯಿ ಲೆಕ್ಕದಲ್ಲಿ ಸುಮಾರು ನಾಲ್ಕುಸಾವಿರ ಕೋಟಿ ರೂಪಾಯಿ. ಚಿತ್ರ ವಿಮರ್ಶಕರ ಮೆಚ್ಚುಗೆ ಹಾಗೂ ಜನಪ್ರಿಯತೆಯನ್ನೂ ಪಡೆಯಿತು. ಮೂರು ಅಕಾಡೆಮಿ ಪ್ರಶಸ್ತಿಗಳೂ ಚಿತ್ರದ ಪಾಲಾಯಿತು. ಚಿತ್ರದ ನಾಯಕ ಕ್ರಿಸ್ತನ ಪಾತ್ರಧಾರಿ ಜಿಮ್ ಕೆವಜಲ್ ರಾತ್ರೋರಾತ್ರಿ ಮನೆಮಾತಾದ. 

ವಿವಾದಗಳು : 

ಹಾಗಾದರೆ ಚಿತ್ರದಲ್ಲಿ ಏನೂ ನ್ಯೂನತೆಗಳಿಲ್ಲವೇ ಎಂಬ ಪ್ರಶ್ನೆ ಎದುರಾಗಬಹುದು. ೨೦೦೬ರ ಎಂಟರ್‍ಟೈನ್‍ಮೆಂಟ್ ಪತ್ರಿಕೆಯ ಪ್ರಕಾರ ಈ ಚಿತ್ರ ಅತ್ಯಂತ ವಿವಾದಾತ್ಮಕ ಚಿತ್ರ. ಚಿತ್ರ ಅನೇಕ ರೀತಿಯ ವಿವಾದಗಳನ್ನು ಮೈ ಮೇಲೆ ಎಳೆದುಕೊಂಡಿತು. ಚಿತ್ರದ ಉದ್ದಕ್ಕೂ ಹಿಂಸೆಯನ್ನು ವೈಭವೀಕರಿಸಲಾಗಿದೆ ಎಂಬ ದೊಡ್ಡ ಕೂಗು ಎದ್ದಿತು. ಸೈನಿಕರು, ಸಿಪಾಯಿಗಳು ಚಿತ್ರದಲ್ಲಿ ಯೇಸುವನ್ನು ನಡೆಸಿಕೊಂಡ ರೀತಿ ಬರ್ಬರವಾಗಿದೆ. ಒಬ್ಬ ಸಾಮಾನ್ಯ ಮನುಷ್ಯ ಅಷ್ಟೊಂದು ಪ್ರಮಾಣದ ಹಿಂಸೆಯನ್ನು ಸಹಿಸಲು ಸಾಧ್ಯವಿಲ್ಲವೆಂಬ ಮಾತುಗಳೂ ಕೇಳಿ ಬಂದವು. ಚಿತ್ರವನ್ನು ನೋಡಿದಾಗ ಆ ಮಾತಿನಲ್ಲಿ ಸತ್ಯವಿದೆ ಎನಿಸುತ್ತದೆ. ಯೇಸುವನ್ನು ಕೊರಡೆಗಳಿಂದ ಹೊಡೆಯುವ ದೃಶ್ಯದಲ್ಲಿ ಯೇಸುವಿನಿಂದ ಸುರಿಯುವ ರಕ್ತದ ಪ್ರಮಾಣ ನಿಜವಾಗಿ ಸುರಿದರೆ ಯಾವುದೇ ಮನುಷ್ಯ ಬದುಕುಳಿಯಲು ಸಾಧ್ಯವಿಲ್ಲ ಎಂದು ನಮಗೇ ಅನಿಸುತ್ತದೆ. ಅದೇ ರೀತಿ ಅನೇಕ ದೃಶ್ಯಗಳಲ್ಲಿ ಹಿಂಸೆಯನ್ನು ವೈಭವೀಕರಿಸಲಾಗಿದೆ ಎಂಬದು ದೊಡ್ಡ ವಿವಾದಕ್ಕೆ ವೇದಿಕೆಯಾಯಿತು. ಸೌದಿ, ಬಹ್ರೈನ್, ಕುವೇಟ್ ಮುಂತಾದ ದೇಶಗಳಲ್ಲಿ ಚಿತ್ರವನ್ನು ಬಹಿಷ್ಕರಿಸಲಾಯಿತು. 

ಹಾಗೆಯೇ ಯಹೂದ್ಯರನ್ನು ಚಿತ್ರದಲ್ಲಿ ಅತ್ಯಂತ ಕೀಳಾಗಿ ಹಾಗೂ ಕ್ರೂರವಾಗಿ ಚಿತ್ರಿಸಲಾಗಿದೆ ಎಂಬುದೂ ಸಹಾ ವಿಮರ್ಶಕರ ಅಭಿಪ್ರಾಯವಾಯಿತು. ಇತಿಹಾಸದ ಉದ್ದಕ್ಕೂ ಬೈಬಲ್ ಬಗೆಗಿನ ಅಪಸ್ವರದಲ್ಲಿ ಯಹೂದ್ಯರನ್ನು ಕ್ರೂರ ಜನರಾಗಿ ಚಿತ್ರಿಸಿಲಾಗಿದೆ ಎಂಬುದು ಸಾಮಾನ್ಯ ದೂರು. ಅದಕ್ಕೆ ತಕ್ಕಂತೆ ಇಲ್ಲೂ ಅದು ಮುಂದುವರಿದಿದೆ ಎಂಬ ಮಾತುಗಳು ಕೇಳಿ ಬಂದವು. 

ಇನ್ನು ಚಿತ್ರೀಕರಣವೆಲ್ಲ ಮುಗಿದು ಚಿತ್ರವನ್ನು ಅಂದಿನ ಪೋಪ್ ಜಾನ್ ಪಾಲ್‍ ರವರಿಗೆ ತೋರಿಸಲಾಯಿತು. ಜಾನ್ ಪಾಲ್‍ರವರು ಚಿತ್ರ ’ಉತ್ತಮವಾಗಿದೆ, ಹೇಗಿದೆಯೋ ಹಾಗೆ ಮೂಡಿ ಬಂದಿದೆ’ ಎಂದು ತಮ್ಮ ಅಭಿಪ್ರಾಯವನ್ನು ತಿಳಿಸಿದರು ಎಂದು ಚಿತ್ರ ತಂಡ ಹೇಳಿತು. ಆದರೆ ಜಾನ್ ಪಾಲ್‍ರವರು ಹಾಗೇ ಹೇಳಿಯೇ ಇಲ್ಲ, ಚಿತ್ರ ತಂಡ ಅವರ ಹೆಸರನ್ನು ತಮ್ಮ ಪ್ರಚಾರಕ್ಕೆ ಬಳಸಿಕೊಳ್ಳುತ್ತಿದೆ ಎಂಬ ಮತ್ತೊಂದು ವಿವಾದವೂ ಸೃಷ್ಟಿಯಾಯಿತು. ಚಿತ್ರ ಹಾಗೂ ಚಿತ್ರ ತಂಡ ಈ ವಿವಾದಗಳ ಅಡೆತಡೆಗಳನ್ನೆಲ್ಲಾ ದಾಟಿಕೊಂಡು ಮುಂದೆ ಹೋಗಲು ಯಶಸ್ವಿಯಾಯಿತು. 

ಚಿತ್ರದ ಬಗೆಗಿನ ವಿವಾದಗಳು ಏನೇ ಇದ್ದರೂ ಚಿತ್ರವು ಅತ್ಯಂತ ಜನಪ್ರಿಯ ಹಾಗೂ ಯಶಸ್ವೀ ಚಿತ್ರಗಳಲ್ಲಿ ಒಂದಾಗಿ ತನ್ನ ಸ್ಥಾನ ಪಡೆದಿದೆ. ಒಮ್ಮೆ ನೋಡಲೇಬೇಕಾದ ಚಿತ್ರ.


 ¨ ಪ್ರಶಾಂತ್ ಇಗ್ನೇಷಿಯಸ್


Friday, 13 July 2018

ಒಬೆರಾಮೋರ್ ಗಾವ್‍ನ ಯೇಸು ಕ್ರಿಸ್ತನ ಪ್ಯಾಷನ್ ಪ್ಲೇ


          ಳೆದ ಸಂಚಿಕೆಯಲ್ಲಿ ಒಬೆರಾಮೋರ್ಗಾವ್ ಗ್ರಾಮದ ಕ್ರಿಸ್ತನ ನಾಟಕ ಪ್ರದರ್ಶನದ ಇತಿಹಾಸ ಹಾಗೂ ಪರಿಚವನ್ನು ಮಾಡಿಕೊಂಡೆವು. ಈ ಒಂದು ಪ್ರದರ್ಶನ ಈ ಮಟ್ಟದಲ್ಲಿ ಜಗದ್ವಿಖ್ಯಾತಿ ಪಡೆಯುವತ್ತ ಅದರ ಸಾಧನೆ ಹಾಗೂ ಪ್ರದರ್ಶನದ ಹಿಂದಿನ ಸಿದ್ಧತೆ ಬದ್ಧತೆಗಳನ್ನು ಅವಲೋಕಿಸಿದಾಗ ನಿಜಕ್ಕೂ ಆಶ್ಚರ್ಯವಾಗುತ್ತದೆ.

ಕಥಾಹಂದರ
          ಇದರ ಮೂಲ ಕಥೆ ಬೈಬಲ್ ನದೇ ಎಂಬುದು ಎಲ್ಲರಿಗೂ ತಿಳಿದ ವಿಷಯ. ಅದರೆ ಕ್ರಿಸ್ತ ಜೆರುಸಲೇಮ್ ನಗರವನ್ನು ಜನರ ಸ್ವಾಗತದೊಂದಿಗೆ ಪ್ರವೇಶಿಸುವುದರೊಂದಿಗೆ ಈ ಪ್ರದರ್ಶನ ಪ್ರಾರಂಭವಾಗುತ್ತದೆ. ಅಂದರೆ ಕ್ರಿಸ್ತನ ಜೀವನದ ಕೊನೆಯ ದಿನಗಳೇ ಈ ಪ್ರದರ್ಶನದ ಪ್ರಮುಖ ಕಥಾಹಂದರ. ಆದರಿಂದಲೇ ಇದು Passion Play ಎಂದೇ ಹೆಚ್ಚು ಜನಪ್ರಿಯ. ಪ್ರದರ್ಶನ ನಡೆಯುವುದು ಜರ್ಮನ್ ಭಾಷೆಯಲ್ಲಾದರೂ ದೃಶ್ಯವೈಭವ ಹಾಗೂ ಸಂಗೀತದಿಂದಾಗಿ ಭಾಷೆ ತೊಡಕಾಗಲಾರದು ಎಂಬುದು ನೋಡಿದವರ ಅಭಿಪ್ರಾಯ.
          ಈ ನಾಟಕದ ದೊಡ್ಡ ವೈಶಿಷ್ಟ್ಯವೆಂದರೆ ಹೊಸ ಹಾಗೂ ಹಳೆಯ ಒಡಂಬಡಿಕೆಯ ಸಂಬಂಧವನ್ನು ಬೆಸೆದುಕೊಳ್ಳುತ್ತಾ ಸಾಗುವುದು. ಹೊಸ ಒಡಂಬಡಿಕೆಯ ಕ್ರಿಸ್ತನ ಜೀವನದ ಘಟನೆಯನ್ನು ಹಳೆಯ ಒಡಂಬಡಿಕೆಯ ಪ್ರಮುಖ ಘಟನೆಗಳಿಗೆ ತಳುಕು ಹಾಕುತ್ತಾ ಸಾಗುತ್ತದೆ. ಆದರೆ ಈ ಎರಡು ಕಾಲಘಟ್ಟದ ಘಟನೆಗಳನ್ನು ಬೇರೆಯದೇ ರೀತಿಯ ನಿರೂಪಣಾ ವಿಧಾನದಲ್ಲಿ ಪ್ರೇಕ್ಷಕರ ಮುಂದೆ ತೆರೆದಿಡಲಾಗುತ್ತದೆ. ಕ್ರಿಸ್ತನ ಜೀವನವನ್ನು ರಂಗರೂಪದ ವಿಧಾನದಲ್ಲಿ ಅಭಿನಯಿಸಲಾಗುತ್ತದೆ. ಆದರೆ ಹಳೆಯ ಒಡಂಬಡಿಕೆಯ ಘಟನೆಗಳನ್ನು ನಟರು ಸ್ಥಿರ ರೂಪದ ವಿಧಾನದಲ್ಲಿ ರಂಗವೇದಿಕೆಯ ಮೇಲೆ ನಿಲ್ಲುತ್ತಾರೆ. ಅದನ್ನು Still Images ಎನ್ನುತ್ತಾರೆ. ಅಂದರೆ ಒಂದು ಫೋಟೊ ಅಥವಾ ಸ್ಥಿರ ಚಿತ್ರವನ್ನು ನಾವು ನೋಡಿದಂತೆ ವೇದಿಕೆಯ ಮೇಲೆ ನಟರು ಶಿಲೆಗಳಂತೆ ನಿಂತು ಒಂದು ಘಟನೆಯನ್ನು ಬಿಂಬಿಸುತ್ತಾರೆ. ಇದು ನಿಜಕ್ಕೂ ಅಮೋಘವಾದ ಅನುಭವ ಎಂಬುದು ನೋಡಿದ ಜನರ ಉದ್ಗಾರ.
          ಉದಾಹರಣೆಗೆ, ಯೇಸು ಮಹಾ ದೇವಾಲಯದಲ್ಲಿ ವ್ಯಾಪಾರಿಗಳನ್ನು ಹೊಡೆದು ಓಡಿಸುವ ದೃಶ್ಯದ ನಂತರ ದೇವರು ಹತ್ತು ಕಟ್ಟಳೆ ಕೊಟ್ಟ ಹಾಗೂ ಜನರ ಚಿನ್ನದ ಕರುವನ್ನು ಮಾಡಿ ಕುಣಿಯುವ ಸ್ಥಿರ ಚಿತ್ರವು ವೇದಿಕೆಯ ಮೇಲೆ ತೋರಿಸಲಾಗುತ್ತದೆ. ಅಂತೆಯೇ ಯೇಸುವಿನ ಕಡೆಯ ಭೋಜನದ ಜೊತೆಗೆ ಈಜಿಪ್ಟಿನ ದಾಸ್ಯದಿಂದ ಬಿಡುಗಡೆ ಹೊಂದಿದ ಇಸ್ರಯೇಲರ ಕೊನೆಯ ಆತುರದ ಭೋಜನದ ದೃಶ್ಯ ಮೂಡಿ ಬರುತ್ತದೆ, ಜೂದಾಸನು ತನ್ನ ತಪ್ಪಿಗಾಗಿ ಪರಿತಪಿಸುವ ದೃಶ್ಯದೊಂದಿಗೆ ತಮ್ಮನನ್ನು ಕೊಂದ ಕಾಯಿನನು ಅತ್ತು ಪ್ರಲಾಪಿಸುವ ದೃಶ್ಯ ಹೀಗೆ ಒಂದಕ್ಕೊಂದು ಸಂಬಂಧಪಡುವ ದೃಶ್ಯಗಳು ಮೂಡುತ್ತವೆ.
ಅಂತೆಯೇ ಒಟ್ಟು ಆರು ಗಂಟೆಯ ಈ ಪ್ರದರ್ಶನವನ್ನು ಮೂರು ಮೂರು ಗಂಟೆಗಳಾಗಿ ವಿಭಾಗಿಸಿ ಎರಡು ಪ್ರದರ್ಶನಗಳ ನಡುವೆ ಮೂರು ಗಂಟೆಯ ವಿರಾಮವನ್ನು ನೀಡಲಾಗುತ್ತದೆ.

ನಟ ನಟಿಯರು
          ಒಬೆರಾಮೋರ್ಗಾವ್ ಗ್ರಾಮದಲ್ಲೇ ಹುಟ್ಟಿರುವ ಅಥವಾ ಇಪ್ಪತ್ತು ವರ್ಷಗಳಿಂದ ಅಲ್ಲೇ ನೆಲಸಿರುವವರಿಗೆ ಮಾತ್ರವೇ ಈ ಪ್ರದರ್ಶನದಲ್ಲಿ ಅಭಿನಯಿಸುವ ಅವಕಾಶ ಎಂಬ ನಿಯಮ ಇಲ್ಲಿದೆ. ವಿಶ್ವ ವಿಖ್ಯಾತವಾದ ಹಾಗೂ ಪವಿತ್ರಕ್ರಿಯೆ ಎಂಬ ನಂಬಿಕೆಯಿರುವ ಈ ಪ್ರದರ್ಶನದಲ್ಲಿ ಪಾಲ್ಗೊಳ್ಳಲು ಸಹಜವಾಗಿಯೇ ಎಲ್ಲರಿಗೂ ಆಸೆಯಿರುತ್ತದೆ. ಆದರೆ ಎಲ್ಲರಿಗೂ ಅವಕಾಶಕೊಡಲು ಸಾಧ್ಯವಿಲ್ಲದಿರುವುದರಿಂದ ಮೊದಲ ಹೆಜ್ಜೆಯಾಗಿ ಮೇಲೆ ಹೇಳಿದ ನಿಯಮವನ್ನು ತರಲಾಗಿದೆ. 2020ರಲ್ಲಿ ನಡೆಯುವ ಪ್ರದರ್ಶಕ್ಕೆ ಈಗಾಗಲೇ ನಟ ನಟಿಯರ ಆಯ್ಕೆ ಪ್ರಕ್ರಿಯೆ ಪ್ರಾರಂಭವಾಗಿದೆ. ನಟಿಸಲು ಇಚ್ಛಿಸುವ ಎಲ್ಲರಿಗೂ 2018ರ ಆರಂಭದಲ್ಲೇ ಒಂದು ಅರ್ಜಿಯನ್ನು ಕೊಡಲಾಗುತ್ತದೆ. ಅದರಲ್ಲಿ ಯಾರು ಯಾವ ಪಾತ್ರವನ್ನು, ಯಾವ ಭಾಗದಲ್ಲಿ ಅಥವಾ ಪ್ರದರ್ಶನದ ಯಾವ ವಿಭಾಗದಲ್ಲಿ, ವೇದಿಕೆಯ ಹಿಂದೆ ಮುಂದೆ ಹೀಗೆ ತಮ್ಮ ಆಸಕ್ತಿಯನ್ನು ಆ ಅರ್ಜಿಯಲ್ಲಿ ತುಂಬಿಸಿಕೊಳ್ಳಲಾಗುತ್ತದೆ.
          ನಿರ್ದೇಶಕರು ಹಾಗೂ ಸಂಗೀತ ನಿರ್ವಾಹಕರು ಈ ಅರ್ಜಿಗಳನ್ನು ಪರಿಶೀಲಿಸಿ ನಟನಟಿ, ಗಾಯಕ ಹಾಗೂ ಇತರ ತೆರೆಮರೆಯ ಸಹಾಯಕರನ್ನು ಆಯ್ಕೆ ಮಾಡುತ್ತಾರೆ. ಆಯ್ಕೆಯಾದ ನಟರು ಪ್ರದರ್ಶನದ ಒಂದು ವರ್ಷದ ಮುಂಚಿನ ವಿಭೂತಿ ಬುಧವಾರದಿಂದಲೇ ತಲೆ ಕೂದಲು ತೆಗೆಯುವುದು ನಿಷಿದ್ಢ. ರೋಮನ್ ಪಾತ್ರಧಾರಿಗಳು ಬಿಟ್ಟರೆ ಉಳಿದವರು ಮೀಸೆ ಗಡ್ಡ ಬೋಳಿಸುವಂತೆಯೂ ಇಲ್ಲ. ನಟರು ವೇದಿಕೆಯಲ್ಲಿ ಆದಷ್ಟು ನೈಜವಾಗಿ ಕಾಣಿಸಿಕೊಳ್ಳಬೇಕೆಂಬ ಉದ್ದೇಶ ಈ ನಿಯಮದ್ದು. ಪ್ರಮುಖ ಪಾತ್ರಗಳಿಗೆ ಇಬ್ಬರು ಪಾತ್ರಧಾರಿಗಳು ತಯಾರಾಗಿರುತ್ತಾರೆ.

ತಾಂತ್ರಿಕ ವಿಭಾಗ                                               
          ನಿರ್ದೇಶಕ, ಸಹ ನಿರ್ದೇಶಕ, ರಂಗ ಹಾಗೂ ವಸ್ತ್ರ ವಿನ್ಯಾಸ ನಿರ್ದೇಶಕ ಹಾಗೂ ಸಂಗೀತ ನಿರ್ದೇಶಕರಿರುವ ಬಳಗವು ಈ ಪ್ರದರ್ಶನದ ಆಗು ಹೋಗುಗಳ ಬಗ್ಗೆ ನಿರ್ಧಾರ ಹಾಗೂ ಕಾರ್ಯ ಚಟುವಟಿಕೆಯನ್ನು ನಿರ್ಧರಿಸುತ್ತಾ ರೂಪುರೇಷೆಗಳನ್ನು ಸಿದ್ಧಪಡಿಸುತ್ತದೆ. ಮುಂದಿನ ಪ್ರದರ್ಶನದ ಈ ತಂಡದಲ್ಲಿನ ಸಹ ನಿರ್ದೇಶಕರು ಮುಸ್ಲಿಮ್ ಆಗಿರುವುದು ವಿಶೇಷ.

ಸಂಗೀತ
          ಇಂದಿಗೂ ಪ್ರದರ್ಶನದ ಸಂಗೀತದ ಮೂಲ ಬೇರುಗಳು 18ನೇ ಶತಮಾನದ್ದೇ. 18ನೇ ಶತಮಾನದಲ್ಲಿ ರೋಕಸ್ ಡೆಡ್ಲರ್ ರಚಿಸಿದ ಸಂಗೀತವನ್ನೇ ಕಾಲಕ್ಕೆ ತಕ್ಕಂತೆ ಪರಿಷ್ಕರಿಸುತ್ತಾ ಬರಲಾಗಿದೆ. ಮುಂದಿನ ಪ್ರದರ್ಶನಕ್ಕೂ ಅದೇ ಮೂಲ. ಮುಂದಿನ ಪ್ರದರ್ಶನದಲ್ಲಿ 64 ಗಾಯಕರ ತಂಡ ಇಡೀ ಪ್ರದರ್ಶನದ ಸಂಗೀತವನ್ನು ಪ್ರೇಕ್ಷಕರ ಮುಂದಿಡುತ್ತದೆ.

ಹಿನ್ನಲೆ ಹಾಗೂ ವಾದ್ಯ ಸಂಗೀತ
          ಗಾಯಕರಷ್ಟೇ ಪ್ರಮುಖ ಪಾತ್ರವಹಿಸುವುದು ಹಿನ್ನಲೆ ಹಾಗೂ ವಾದ್ಯ ಸಂಗೀತ. ಇಡೀ ಪ್ರದರ್ಶನದ ಜೀವಾಳವೂ ಸಂಗೀತವೇ ಆದ್ದರಿಂದ ಇಲ್ಲಿ ಪಾತ್ರಧಾರಿಗಳಷ್ಟೇ ಪ್ರಾಮುಖ್ಯತೆಯನ್ನು ವಾದ್ಯಗಾರರಿಗೂ ನೀಡಲಾಗುತ್ತದೆ. ಮೇಲೆ ತಿಳಿಸಿದ ಆ ಸ್ಥಿರಚಿತ್ರಗಳ ಪ್ರದರ್ಶನದ ಬೆನ್ನೆಲುಬು ವಾದ್ಯ ಸಂಗೀತವೇ. ಆದರಿಂದ ಅಭಿನಯದ ಅಭ್ಯಾಸಕ್ಕೂ ಮೊದಲೇ ಸಂಗೀತ, ವಾದ್ಯ ಸಂಗೀತ, ಹಿನ್ನಲೆ ಸಂಗೀತವೆಲ್ಲವೂ ಸಿದ್ಧವಾಗಿರುತ್ತದೆ.

ಅಭ್ಯಾಸ ಹಾಗೂ ಪ್ರದರ್ಶನದ ವೇಳಾಪಟ್ಟಿ
          ಪ್ರದರ್ಶನ ನಡೆಯುವ ವರ್ಷದ ಆರು ತಿಂಗಳುಗಳ ಕಾಲ ನಡೆಯುವ ಈ ಪ್ರದರ್ಶನ ವೇಳಾ ಪಟ್ಟಿಯನ್ನು ಎರಡು ವರ್ಷದ ಮುಂಚೆಯೇ ನಿಗದಿಪಡಿಸಿ ತಿಳಿಸಲಾಗುತ್ತದೆ. ಈಗಿನ 2020ರ ಪ್ರದರ್ಶನಗಳನ್ನು ಈಗಾಗಲೇ ಪ್ರಕಟಿಸಲಾಗಿದೆ. 2020 ಮೇನಲ್ಲಿ ಆರಂಭವಾಗುವ ಪ್ರದರ್ಶನಕ್ಕೆ 2019ರ ನವೆಂಬರಿನಿಂದ ಅಭ್ಯಾಸ ಪ್ರಾರಂಭವಾಗುತ್ತದೆ. ಈ ರೀತಿಯಾಗಿ ಮೊದಲೇ ನಿಗದಿ ಪಡಿಸುವುದರಿಂದ ಅನೇಕ ವಿದೇಶಿ ಪ್ರವಾಸಿಗರು ಈ ಪ್ರದರ್ಶನಕ್ಕೆ ಬರಲು ಸಹಾಯವಾಗುತ್ತಾ ಬಂದಿದೆ.

ಆರ್ಥಿಕತೆ ಹಾಗೂ ಬೆಳವಣಿಗೆ
          ಈ ಪ್ರದರ್ಶನ ಈ ಗ್ರಾಮದ ಜನರ ಧಾರ್ಮಿಕ ಶ್ರದ್ಧೆ ಹಾಗೂ ಭಕ್ತಿಗೆ ಸಾಕ್ಷಿಯಾಗಿ ನಿಂತಿದ್ದರೂ, ಈ ದೈವೀಕ ಕಾರ್ಯದಿಂದ ಇಲ್ಲಿನ ಜನರು ಹಾಗೂ ಗ್ರಾಮವು ಆರ್ಥಿಕವಾಗಿ ಬೆಳೆದು ಬಂದಿರುವುದು ಸುಳ್ಳಲ್ಲ. Die Passion zahlt’ ಅಂದರೆ 'ಈ ಪ್ರದರ್ಶನ ಒದಗಿಸುತ್ತದೆ' ಎನ್ನುವುದು ಇಲ್ಲಿನ ಸ್ಥಳೀಯ ನಂಬಿಕೆ. ಈ ಗ್ರಾಮದ ಅಭಿವೃದ್ಧಿಗೆ ಬೇಕಾದನ್ನು ಈ ಪ್ರದರ್ಶನವೇ ಒದಗಿಸುತ್ತದೆ ಎಂಬ ಭಾವ ಈ ಗ್ರಾಮದ ಮಟ್ಟಿಗೆ ನಿಜವಾಗಿದೆ. ಆದ್ದರಿಂದಲೇ ಇಲ್ಲಿನ ಆಡಳಿತ ಪ್ರವಾಸಿಗರಿಗೆ ಆದಷ್ಟೂ ಉತ್ತಮವಾದ ಮೂಲ ಸೌಲಭ್ಯಗಳನ್ನು ನೀಡುತ್ತದೆ.

ಹೆಚ್ಚಿನ ವಿವರಗಳು
          ಮುಂದಿನ ಪ್ರದರ್ಶನ ಹಾಗೂ ಈ ಗ್ರಾಮದಲ್ಲಿನ ಸೌಲಭ್ಯಗಳ ವಿವರಗಳು ಅಂತರ್ಜಾಲದಲ್ಲಿ ತುಂಬಿವೆ. Oberammergau PassionPlay ಎಂಬುದಾಗಿ ಹುಡುಕಲು ಪ್ರಯತ್ನಿಸಿದರೆ ಎಲ್ಲಾ ವಿವರಗಳೂ ಕ್ಷಣಮಾತ್ರದಲ್ಲಿ ದೊರಕುತ್ತದೆ. ಮುಂದಿನ ಪ್ರದರ್ಶನವನ್ನು ವೀಕ್ಷಿಸುವ ಭಾಗ್ಯ ನಿಮ್ಮದಾಗಲಿ.


- ಪ್ರಶಾಂತ್ ಇಗ್ನೇಷಿಯಸ್

Tuesday, 12 June 2018

ಒಬೆರಾಮೋರ್ ಗಾವ್‍ನ ಯೇಸು ಕ್ರಿಸ್ತನ ಪ್ಯಾಷನ್ ಪ್ಲೇ



 ಕಳೆದ ಒಂದು ದಶಕ ನಿಜಕ್ಕೂ ಮಹತ್ತರವಾದ ದಶಕವೆಂದೇ ಹೇಳಬಹುದು. ವಿಕಾಸ ಹಾಗೂ ಒಂದು ರೀತಿಯ ವಿನಾಶವೂ ಜೊತೆ ಜೊತೆಯಾಗಿ ಹೆಜ್ಜೆ ಹಾಕಿದೆ. ಕಳೆದ ಈ ದಶಕವನ್ನು ಫೇಸ್ಬುಕ್, ವಾಟ್ಸಪ್ಪ್, ಟ್ವಿಟ್ಟರ್, ಐಫೋನ್ ಗಳದ್ದೇ ದಶಕವೆಂದರೆ ತಪ್ಪಾಗಲಾರದೇನೋ. ಈ ದಶಕದಲ್ಲಿ ಇವುಗಳು ಮಾಡಿರುವ ಕ್ರಾಂತಿ ಸಣ್ಣದೇನಲ್ಲ. ಇಡೀ ಜಗತ್ತು ಬೆರಳುಗಳಲ್ಲಿ ಕ್ರಿಯಾಶೀಲವಾಗಿದೆ.
ಇದರ ನಡುವೆ ಐತಿಹಾಸಿಕ ಮಹತ್ತರವಾದುದೆಲ್ಲಾ ತನ್ನ ಮಹತ್ವವನ್ನು ಕಳೆದುಕೊಳ್ಳುತ್ತಿದೆಯೇ ಅಥವಾ ಸಂಪೂರ್ಣ ನಿರ್ಲಕ್ಷ್ಯಕ್ಕೆ ಒಳಗಾಗುತ್ತಿದೆಯೇ ಎಂಬ ಭಯ ಆತಂಕ ಮೂಡುತ್ತಿರುವಂತೆಯೇ, 'ಇಲ್ಲ, ಫೇಸ್ಬುಕ್ ಇತ್ಯಾದಿಗಳು ಇತಿಹಾಸ, ಸಂಸ್ಕೃತಿಗೆ ಸಹಾಯಕವೂ ಆಗಬಲ್ಲದು ಎಂಬುದನ್ನು ಆಗಾಗ್ಗೆ ತೋರಿಸುತ್ತಲೇ ಬಂದಿದೆ. ಇತ್ತೀಚಿನ ಹತ್ತಿರದ ಉದಾಹರಣೆ ಎಂದರೆ 'ಮಲೆಗಳಲ್ಲಿ ಮಳೆ ಮಗಳು’ ಪ್ರದರ್ಶನಕ್ಕೆ ಕಿಕ್ಕಿರಿದ್ದು ಬರುತ್ತಿದ್ದ ಯುವ ಮನಸುಗಳು. ಬಹುತೇಕರು ಅದಕ್ಕೆ ಬುಕ್ ಮೈ ಷೋ ಸಹಾಯದಿ೦ದಲೇ ಟಿಕೆಟ್ ಕಾಯ್ದಿರಿಸಿದ್ದು.

ಇಷ್ಟೆಲ್ಲಾ ಯೋಚನೆ ಬಂದದ್ದು, ಜರ್ಮನಿಯ ಒಬೆರಾಮೋರ್ ಗಾವ್ ನಲ್ಲಿ ಪ್ರತಿ ಹತ್ತು ವರ್ಷಕೊಮ್ಮೆ ನಡೆಯುವ 'ಯೇಸು ಕ್ರಿಸ್ತನ ಪ್ಯಾಷನ್ ಪ್ಲೇ' ಬಗ್ಗೆ ಯೋಚಿಸುತ್ತಾ ಕುಳಿತಾಗ. ಸುಮಾರು 400ವರ್ಷ ಇತಿಹಾಸವಿರುವ ಈ ಪ್ರದರ್ಶನ ಇದೇ 2020ರಲ್ಲಿ ಮತ್ತೆ ಪ್ರದರ್ಶನಗೊಳ್ಳುತ್ತದೆ. 2010ರಲ್ಲಿ ನಡೆದ ಹಿಂದಿನ ಪ್ರದರ್ಶನ ಎಂದಿನಂತೆಯೇ ಯಶಸ್ವಿಯಾಯಿತು. ಮೊಬೈಲ್ ಕ್ರಾಂತಿ ತನ್ನ ಉತ್ತುಂಗದಲ್ಲಿರುವ ಈ ಸಮಯದಲ್ಲಿ ಈ ಪ್ರದರ್ಶನಕ್ಕೆ ಯಾವ ರೀತಿಯ ಪ್ರತಿಕ್ರಿಯೆ ದೊರಕಬಹುದು ಎನ್ನುವ ಕುತೂಹಲ ನನ್ನದು.
ಮೊದಲಿಗೆ 1633ರಲ್ಲಿ ಆರಂಭಗೊಂಡ ಒಬೆರಾಮೋರ್ ಗಾವ್ ನ ಒಂದಷ್ಟು ಇತಿಹಾಸ ಹಾಗೂ ಆಸಕ್ತಿಕರ ಮಾಹಿತಿಗಳು ಇಂತಿವೆ
1618 ರಿಂದ 1648 - ಸ್ವೀಡ್ಸ್ ಯುದ್ಧವೆಂಬ ಮಹಾ ಪಿಡುಗಿಗೆ ಜರ್ಮನಿಯ ಒಬೆರಾಮೊರ್ಗಾವ್ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಜನರು ತತ್ತರಿಸಿ ಹೋಗಿರುತ್ತಾರೆ.
1632- ಸ್ವಾಬಿಯಾ, ಬಾವಾರಿಯಾಗೆ ತಗಲಿಕೊಂಡ ಪ್ಲೇಗ್ ರೋಗ ಗ್ರಾಮಕ್ಕೂ ಒಬ್ಬ ವ್ಯಕ್ತಿಯ ಮೂಲಕ ಅಟ್ಟಹಾಸದೊಂದಿಗೆ ಪ್ರವೇಶಿಸುತ್ತದೆ.
1632 ಅಕ್ಟೊಬರ್ - ಸಾವಿರಕ್ಕೆ ಒಬ್ಬರಲ್ಲಿ ಕಾಣಿಸಿಕೊಂಡ ರೋಗ ಮುಂದಿನ ಮಾರ್ಚ್ ಹೊತ್ತಿಗೆ ಸಾವಿರದಲ್ಲಿ ೨೦ ಜನಕ್ಕೆ ಹರಡುತ್ತದೆ. ಇಡೀ ಗ್ರಾಮವೇ ರೋಗದ ಸಾವು ನೋವಿಗೆ ತತ್ತರಗೊಳ್ಳುತ್ತದೆ.
1633- ಒಟ್ಟಾಗಿ ಸೇರಿದ ಜನರು ಹಾಗೂ ನಾಯಕರು ಒಂದು ನಿರ್ಧಾರಕ್ಕೆ ಬರುತ್ತಾರೆ. ಅಲ್ಲಿಯವರೆಗೂ ಅಲ್ಲಿ ಇಲ್ಲಿ, ಆಗಾಗ ನಡೆಸಿಕೊಂಡು ಬರುತ್ತಿದ್ದ ಕ್ರಿಸ್ತನ ಜೀವನದ ನಾಟಕ ಪ್ರದರ್ಶನವನ್ನು, ಇನ್ನು ಮುಂದೆ ಪ್ರತಿ ಹತ್ತು ವರ್ಷಕೊಮ್ಮೆ ತಪ್ಪದೆ ನೆಡೆಸಿಕೊಂಡು ಹೋಗುವ ವ್ರತ ಮಾಡುತ್ತಾರೆ. ಅಚ್ಚರಿ ಎಂಬಂತೆ, ಅಂದಿನಿಂದ ರೋಗದಿಂದ ಸಾಯುವುದು ಕಡಿಮೆಯಾಗುತ್ತದೆ. ನಾಟಕದ ಇತಿಹಾಸದ ಮಾಹಿತಿ ಪ್ರಕಾರ ವ್ರತದ ನಂತರ ಒಬ್ಬರೂ ಸಾಯಲಿಲ್ಲ.
1634 - ಮೊದಲ ಪ್ರದರ್ಶನ ನಡೆಯುತ್ತದೆ. ಪ್ಲೇಗ್ ರೋಗದಿಂದ ಸತ್ತ ಜನರ ಸಮಾಧಿಯ ಆವರಣವೇ ಪ್ರದರ್ಶನದ ಸ್ಥಳವಾಗುತ್ತದೆ.
1664 - ನಾಲ್ಕನೆಯ ಪ್ರದರ್ಶನದ ವೇಳೆ ಸಿದ್ಧಗೊಂಡ ನಾಟಕದ ಸ್ಕ್ರಿಪ್ಟ್, ನಾಟಕದ ಅತ್ಯಂತ ಹಳೆಯ ಲಭ್ಯವಿರುವ ದಾಖಲೆಯಾಗಿದೆ. ಊರಿನ ಶಿಕ್ಷಕರಾಗಿದ್ದ ಜಾರ್ಜ್ ಕೈಸರ್ ಇದರ ಲೇಖಕ.
1680 - ಪ್ರದರ್ಶನವನ್ನು 'ಸೊನ್ನೆ' ಯಿಂದ ಕೊನೆಗೊಳ್ಳುವ ವರ್ಷಗಳಲ್ಲಿ ನಡೆಸುವ ಪ್ರತೀತಿ ಪ್ರಾರಂಭವಾಯಿತು. ಅಂದಿನಿಂದ ಇದು ನಡೆದುಕೊಂಡು ಬಂದಿದೆ.
1801 - ಗ್ರಾಮದ ಆರ್ಥಿಕ ಪರಿಸ್ಥಿತಿ ಸುಧಾರಿಸಲು 1800 ಮುಂದುವರಿದ ಭಾಗವಾಗಿ ಪ್ರದರ್ಶನಗಳು ನಡೆಯುತ್ತದೆ.
1920 - ಮೊದಲ ಮಹಾಯುದ್ಧದಲ್ಲಿ ಇದರ ಅನೇಕ ನಟರು ಸಂಗೀತಗಾರರು ಪಾಲ್ಗೊಂಡಿದ್ದರಿಂದ 1920ರಲ್ಲಿ ಪ್ರದರ್ಶನ ನಡೆಯದೆ 1922 ರಲ್ಲಿ ನಡೆಯುತ್ತದೆ.
1934 - 300ನೇ ವರ್ಷದ ನೆನಪಿಗಾಗಿ ವಿಶೇಷ ಪ್ರದರ್ಶನ. ವಿಶೇಷ ಪ್ರದರ್ಶನಕ್ಕೆ ಹಿಟ್ಲರ್ ತನ್ನ ನಾಜಿ ಹಿಂಡಿನ ಜೊತೆ ಬಂದು ವೀಕ್ಷಿಸಿತ್ತಾನೆ. ಜರ್ಮನಿಯ ಮಣ್ಣಿನ ಸೊಗಡಿನ ಪ್ರತೀಕವೆಂದು ಇದನ್ನು ಬಣ್ಣಿಸುತ್ತಾನೆ.
1940 - ಎರಡನೆಯ ಮಹಾ ಯುದ್ಧದಿಂದಾಗಿ ಪ್ರದರ್ಶನ ನಡೆಯುವುದಿಲ್ಲ.
1984 – 350 ವರ್ಷಗಳ ನೆನಪಿಗಾಗಿ ವಿಶೇಷ ಪ್ರದರ್ಶನ ನಡೆಯುತ್ತದೆ. ಆಡಳಿತ ಮಂಡಳಿಯಲ್ಲಿ ಭಾರಿ ಬದಲಾವಣೆ. ಕೇವಲ 24 ವರ್ಷದ ಕ್ರಸ್ಟ್ರಿಯನ್ ಸ್ಟಾಕ್ಲ್ ನನ್ನು ನಿರ್ದೇಶಕನಾಗಿ ಆಯ್ಕೆ ಮಾಡುವ ಕ್ರಾಂತಿಕಾರಕ ನಿರ್ಧಾರ. ಹೊಸ ಪ್ರಯೋಗ ಹಾಗೂ ಆಧುನಿಕತೆಗೆ ತೆರೆದುಕೊಳ್ಳುವ ನಿರ್ಧಾರ.
2010ರಂದು 42ನೇ ಪ್ರದರ್ಶನ. 2020ರಲ್ಲಿ ಮುಂದಿನ ಪ್ರದರ್ಶನ.

(ಮುಂದುವರಿಯುವುದು)
¨ ಪ್ರಶಾಂತ್ ಇಗ್ನೇಷಿಯಸ್


ಎತ್ತಿತೋರಿಸಲಾದ ಪೋಸ್ಟ್

ಅನ್ನಮ್ಮ’ಳಿಗೆ ೨೫೦ರ ಹಾಗೂ ಅತಿ.ವಂ.ಪೊತ್ತಕಮೂರಿಗೆ ೫೦ರ ಸ್ಮರಣೆಯ ಸಂಭ್ರಮ

ಬೆಂಗಳೂರಿನ ಉತ್ತರಹಳ್ಳಿಯ ಅನ್ನಮ್ಮನ ಬೆಟ್ಟ, ಅಲ್ಲಿನ ಅನ್ನಮ್ಮಳ ಸಮಾಧಿ, ಆ ಬೆಟ್ಟದ ಮೇಲಿನ ಶಿಲುಬೆ, ಅಲ್ಲಿ ಪ್ರತಿವರ್ಷ ತಪಸ್ಸು ಕಾಲದ ಐದನೇ ಭಾನುವಾರ ನಡೆಯುವ ಯೇಸು...