ಕಳೆದ ಸಂಚಿಕೆಯಲ್ಲಿ ಒಬೆರಾಮೋರ್ಗಾವ್ ಗ್ರಾಮದ ಕ್ರಿಸ್ತನ ನಾಟಕ
ಪ್ರದರ್ಶನದ ಇತಿಹಾಸ ಹಾಗೂ ಪರಿಚವನ್ನು ಮಾಡಿಕೊಂಡೆವು. ಈ ಒಂದು ಪ್ರದರ್ಶನ ಈ ಮಟ್ಟದಲ್ಲಿ
ಜಗದ್ವಿಖ್ಯಾತಿ ಪಡೆಯುವತ್ತ ಅದರ ಸಾಧನೆ ಹಾಗೂ ಪ್ರದರ್ಶನದ ಹಿಂದಿನ ಸಿದ್ಧತೆ ಬದ್ಧತೆಗಳನ್ನು ಅವಲೋಕಿಸಿದಾಗ
ನಿಜಕ್ಕೂ ಆಶ್ಚರ್ಯವಾಗುತ್ತದೆ.
ಕಥಾಹಂದರ
ಇದರ ಮೂಲ ಕಥೆ ಬೈಬಲ್ ನದೇ ಎಂಬುದು
ಎಲ್ಲರಿಗೂ ತಿಳಿದ ವಿಷಯ. ಅದರೆ ಕ್ರಿಸ್ತ ಜೆರುಸಲೇಮ್ ನಗರವನ್ನು ಜನರ ಸ್ವಾಗತದೊಂದಿಗೆ
ಪ್ರವೇಶಿಸುವುದರೊಂದಿಗೆ ಈ ಪ್ರದರ್ಶನ ಪ್ರಾರಂಭವಾಗುತ್ತದೆ. ಅಂದರೆ ಕ್ರಿಸ್ತನ ಜೀವನದ ಕೊನೆಯ
ದಿನಗಳೇ ಈ ಪ್ರದರ್ಶನದ ಪ್ರಮುಖ ಕಥಾಹಂದರ. ಆದರಿಂದಲೇ ಇದು Passion Play ಎಂದೇ ಹೆಚ್ಚು ಜನಪ್ರಿಯ. ಪ್ರದರ್ಶನ ನಡೆಯುವುದು ಜರ್ಮನ್
ಭಾಷೆಯಲ್ಲಾದರೂ ದೃಶ್ಯವೈಭವ ಹಾಗೂ ಸಂಗೀತದಿಂದಾಗಿ ಭಾಷೆ ತೊಡಕಾಗಲಾರದು ಎಂಬುದು ನೋಡಿದವರ
ಅಭಿಪ್ರಾಯ.
ಈ ನಾಟಕದ ದೊಡ್ಡ
ವೈಶಿಷ್ಟ್ಯವೆಂದರೆ ಹೊಸ ಹಾಗೂ ಹಳೆಯ ಒಡಂಬಡಿಕೆಯ ಸಂಬಂಧವನ್ನು ಬೆಸೆದುಕೊಳ್ಳುತ್ತಾ ಸಾಗುವುದು.
ಹೊಸ ಒಡಂಬಡಿಕೆಯ ಕ್ರಿಸ್ತನ ಜೀವನದ ಘಟನೆಯನ್ನು ಹಳೆಯ ಒಡಂಬಡಿಕೆಯ ಪ್ರಮುಖ ಘಟನೆಗಳಿಗೆ ತಳುಕು
ಹಾಕುತ್ತಾ ಸಾಗುತ್ತದೆ. ಆದರೆ ಈ ಎರಡು ಕಾಲಘಟ್ಟದ ಘಟನೆಗಳನ್ನು ಬೇರೆಯದೇ ರೀತಿಯ ನಿರೂಪಣಾ
ವಿಧಾನದಲ್ಲಿ ಪ್ರೇಕ್ಷಕರ ಮುಂದೆ ತೆರೆದಿಡಲಾಗುತ್ತದೆ. ಕ್ರಿಸ್ತನ ಜೀವನವನ್ನು ರಂಗರೂಪದ
ವಿಧಾನದಲ್ಲಿ ಅಭಿನಯಿಸಲಾಗುತ್ತದೆ. ಆದರೆ ಹಳೆಯ ಒಡಂಬಡಿಕೆಯ ಘಟನೆಗಳನ್ನು ನಟರು ಸ್ಥಿರ ರೂಪದ
ವಿಧಾನದಲ್ಲಿ ರಂಗವೇದಿಕೆಯ ಮೇಲೆ ನಿಲ್ಲುತ್ತಾರೆ. ಅದನ್ನು Still Images ಎನ್ನುತ್ತಾರೆ. ಅಂದರೆ ಒಂದು ಫೋಟೊ ಅಥವಾ ಸ್ಥಿರ ಚಿತ್ರವನ್ನು
ನಾವು ನೋಡಿದಂತೆ ವೇದಿಕೆಯ ಮೇಲೆ ನಟರು ಶಿಲೆಗಳಂತೆ ನಿಂತು ಒಂದು
ಘಟನೆಯನ್ನು ಬಿಂಬಿಸುತ್ತಾರೆ. ಇದು ನಿಜಕ್ಕೂ ಅಮೋಘವಾದ ಅನುಭವ ಎಂಬುದು ನೋಡಿದ ಜನರ ಉದ್ಗಾರ.
ಉದಾಹರಣೆಗೆ, ಯೇಸು ಮಹಾ
ದೇವಾಲಯದಲ್ಲಿ ವ್ಯಾಪಾರಿಗಳನ್ನು ಹೊಡೆದು ಓಡಿಸುವ ದೃಶ್ಯದ ನಂತರ ದೇವರು ಹತ್ತು ಕಟ್ಟಳೆ ಕೊಟ್ಟ
ಹಾಗೂ ಜನರ ಚಿನ್ನದ ಕರುವನ್ನು ಮಾಡಿ ಕುಣಿಯುವ ಸ್ಥಿರ ಚಿತ್ರವು ವೇದಿಕೆಯ ಮೇಲೆ
ತೋರಿಸಲಾಗುತ್ತದೆ. ಅಂತೆಯೇ ಯೇಸುವಿನ ಕಡೆಯ ಭೋಜನದ ಜೊತೆಗೆ ಈಜಿಪ್ಟಿನ ದಾಸ್ಯದಿಂದ ಬಿಡುಗಡೆ
ಹೊಂದಿದ ಇಸ್ರಯೇಲರ ಕೊನೆಯ ಆತುರದ ಭೋಜನದ ದೃಶ್ಯ ಮೂಡಿ ಬರುತ್ತದೆ, ಜೂದಾಸನು ತನ್ನ ತಪ್ಪಿಗಾಗಿ
ಪರಿತಪಿಸುವ ದೃಶ್ಯದೊಂದಿಗೆ ತಮ್ಮನನ್ನು ಕೊಂದ ಕಾಯಿನನು ಅತ್ತು ಪ್ರಲಾಪಿಸುವ ದೃಶ್ಯ ಹೀಗೆ
ಒಂದಕ್ಕೊಂದು ಸಂಬಂಧಪಡುವ ದೃಶ್ಯಗಳು ಮೂಡುತ್ತವೆ.
ಅಂತೆಯೇ ಒಟ್ಟು ಆರು ಗಂಟೆಯ ಈ ಪ್ರದರ್ಶನವನ್ನು ಮೂರು ಮೂರು ಗಂಟೆಗಳಾಗಿ ವಿಭಾಗಿಸಿ ಎರಡು
ಪ್ರದರ್ಶನಗಳ ನಡುವೆ ಮೂರು ಗಂಟೆಯ ವಿರಾಮವನ್ನು ನೀಡಲಾಗುತ್ತದೆ.
ನಟ
ನಟಿಯರು
ಒಬೆರಾಮೋರ್ಗಾವ್ ಗ್ರಾಮದಲ್ಲೇ ಹುಟ್ಟಿರುವ
ಅಥವಾ ಇಪ್ಪತ್ತು ವರ್ಷಗಳಿಂದ ಅಲ್ಲೇ ನೆಲಸಿರುವವರಿಗೆ ಮಾತ್ರವೇ ಈ ಪ್ರದರ್ಶನದಲ್ಲಿ ಅಭಿನಯಿಸುವ
ಅವಕಾಶ ಎಂಬ ನಿಯಮ ಇಲ್ಲಿದೆ. ವಿಶ್ವ ವಿಖ್ಯಾತವಾದ ಹಾಗೂ ಪವಿತ್ರಕ್ರಿಯೆ ಎಂಬ ನಂಬಿಕೆಯಿರುವ ಈ
ಪ್ರದರ್ಶನದಲ್ಲಿ ಪಾಲ್ಗೊಳ್ಳಲು ಸಹಜವಾಗಿಯೇ ಎಲ್ಲರಿಗೂ ಆಸೆಯಿರುತ್ತದೆ. ಆದರೆ ಎಲ್ಲರಿಗೂ
ಅವಕಾಶಕೊಡಲು ಸಾಧ್ಯವಿಲ್ಲದಿರುವುದರಿಂದ ಮೊದಲ ಹೆಜ್ಜೆಯಾಗಿ ಮೇಲೆ ಹೇಳಿದ ನಿಯಮವನ್ನು ತರಲಾಗಿದೆ.
2020ರಲ್ಲಿ
ನಡೆಯುವ ಪ್ರದರ್ಶಕ್ಕೆ ಈಗಾಗಲೇ ನಟ ನಟಿಯರ ಆಯ್ಕೆ ಪ್ರಕ್ರಿಯೆ ಪ್ರಾರಂಭವಾಗಿದೆ. ನಟಿಸಲು
ಇಚ್ಛಿಸುವ ಎಲ್ಲರಿಗೂ 2018ರ
ಆರಂಭದಲ್ಲೇ ಒಂದು ಅರ್ಜಿಯನ್ನು ಕೊಡಲಾಗುತ್ತದೆ. ಅದರಲ್ಲಿ ಯಾರು ಯಾವ ಪಾತ್ರವನ್ನು, ಯಾವ
ಭಾಗದಲ್ಲಿ ಅಥವಾ ಪ್ರದರ್ಶನದ ಯಾವ ವಿಭಾಗದಲ್ಲಿ, ವೇದಿಕೆಯ ಹಿಂದೆ ಮುಂದೆ ಹೀಗೆ ತಮ್ಮ
ಆಸಕ್ತಿಯನ್ನು ಆ ಅರ್ಜಿಯಲ್ಲಿ ತುಂಬಿಸಿಕೊಳ್ಳಲಾಗುತ್ತದೆ.
ನಿರ್ದೇಶಕರು ಹಾಗೂ ಸಂಗೀತ ನಿರ್ವಾಹಕರು ಈ ಅರ್ಜಿಗಳನ್ನು ಪರಿಶೀಲಿಸಿ
ನಟನಟಿ, ಗಾಯಕ ಹಾಗೂ ಇತರ ತೆರೆಮರೆಯ ಸಹಾಯಕರನ್ನು ಆಯ್ಕೆ ಮಾಡುತ್ತಾರೆ. ಆಯ್ಕೆಯಾದ ನಟರು
ಪ್ರದರ್ಶನದ ಒಂದು ವರ್ಷದ ಮುಂಚಿನ ವಿಭೂತಿ ಬುಧವಾರದಿಂದಲೇ ತಲೆ ಕೂದಲು ತೆಗೆಯುವುದು ನಿಷಿದ್ಢ.
ರೋಮನ್ ಪಾತ್ರಧಾರಿಗಳು ಬಿಟ್ಟರೆ ಉಳಿದವರು ಮೀಸೆ ಗಡ್ಡ ಬೋಳಿಸುವಂತೆಯೂ ಇಲ್ಲ. ನಟರು
ವೇದಿಕೆಯಲ್ಲಿ ಆದಷ್ಟು ನೈಜವಾಗಿ ಕಾಣಿಸಿಕೊಳ್ಳಬೇಕೆಂಬ ಉದ್ದೇಶ ಈ ನಿಯಮದ್ದು. ಪ್ರಮುಖ
ಪಾತ್ರಗಳಿಗೆ ಇಬ್ಬರು ಪಾತ್ರಧಾರಿಗಳು ತಯಾರಾಗಿರುತ್ತಾರೆ.
ತಾಂತ್ರಿಕ ವಿಭಾಗ
ನಿರ್ದೇಶಕ, ಸಹ ನಿರ್ದೇಶಕ, ರಂಗ ಹಾಗೂ ವಸ್ತ್ರ
ವಿನ್ಯಾಸ ನಿರ್ದೇಶಕ ಹಾಗೂ ಸಂಗೀತ ನಿರ್ದೇಶಕರಿರುವ ಬಳಗವು ಈ ಪ್ರದರ್ಶನದ ಆಗು ಹೋಗುಗಳ ಬಗ್ಗೆ
ನಿರ್ಧಾರ ಹಾಗೂ ಕಾರ್ಯ ಚಟುವಟಿಕೆಯನ್ನು ನಿರ್ಧರಿಸುತ್ತಾ ರೂಪುರೇಷೆಗಳನ್ನು ಸಿದ್ಧಪಡಿಸುತ್ತದೆ.
ಮುಂದಿನ ಪ್ರದರ್ಶನದ ಈ ತಂಡದಲ್ಲಿನ ಸಹ ನಿರ್ದೇಶಕರು ಮುಸ್ಲಿಮ್ ಆಗಿರುವುದು ವಿಶೇಷ.
ಸಂಗೀತ
ಇಂದಿಗೂ ಪ್ರದರ್ಶನದ ಸಂಗೀತದ ಮೂಲ ಬೇರುಗಳು 18ನೇ
ಶತಮಾನದ್ದೇ. 18ನೇ
ಶತಮಾನದಲ್ಲಿ ರೋಕಸ್ ಡೆಡ್ಲರ್ ರಚಿಸಿದ ಸಂಗೀತವನ್ನೇ ಕಾಲಕ್ಕೆ ತಕ್ಕಂತೆ ಪರಿಷ್ಕರಿಸುತ್ತಾ
ಬರಲಾಗಿದೆ. ಮುಂದಿನ ಪ್ರದರ್ಶನಕ್ಕೂ ಅದೇ ಮೂಲ. ಮುಂದಿನ ಪ್ರದರ್ಶನದಲ್ಲಿ 64 ಗಾಯಕರ
ತಂಡ ಇಡೀ ಪ್ರದರ್ಶನದ ಸಂಗೀತವನ್ನು ಪ್ರೇಕ್ಷಕರ ಮುಂದಿಡುತ್ತದೆ.
ಹಿನ್ನಲೆ
ಹಾಗೂ ವಾದ್ಯ ಸಂಗೀತ
ಗಾಯಕರಷ್ಟೇ ಪ್ರಮುಖ ಪಾತ್ರವಹಿಸುವುದು
ಹಿನ್ನಲೆ ಹಾಗೂ ವಾದ್ಯ ಸಂಗೀತ. ಇಡೀ ಪ್ರದರ್ಶನದ ಜೀವಾಳವೂ ಸಂಗೀತವೇ ಆದ್ದರಿಂದ ಇಲ್ಲಿ
ಪಾತ್ರಧಾರಿಗಳಷ್ಟೇ ಪ್ರಾಮುಖ್ಯತೆಯನ್ನು ವಾದ್ಯಗಾರರಿಗೂ ನೀಡಲಾಗುತ್ತದೆ. ಮೇಲೆ ತಿಳಿಸಿದ ಆ
ಸ್ಥಿರಚಿತ್ರಗಳ ಪ್ರದರ್ಶನದ ಬೆನ್ನೆಲುಬು ವಾದ್ಯ ಸಂಗೀತವೇ. ಆದರಿಂದ ಅಭಿನಯದ ಅಭ್ಯಾಸಕ್ಕೂ ಮೊದಲೇ
ಸಂಗೀತ, ವಾದ್ಯ ಸಂಗೀತ, ಹಿನ್ನಲೆ ಸಂಗೀತವೆಲ್ಲವೂ ಸಿದ್ಧವಾಗಿರುತ್ತದೆ.
ಅಭ್ಯಾಸ
ಹಾಗೂ ಪ್ರದರ್ಶನದ ವೇಳಾಪಟ್ಟಿ
ಪ್ರದರ್ಶನ ನಡೆಯುವ ವರ್ಷದ ಆರು ತಿಂಗಳುಗಳ ಕಾಲ
ನಡೆಯುವ ಈ ಪ್ರದರ್ಶನ ವೇಳಾ ಪಟ್ಟಿಯನ್ನು ಎರಡು ವರ್ಷದ ಮುಂಚೆಯೇ ನಿಗದಿಪಡಿಸಿ ತಿಳಿಸಲಾಗುತ್ತದೆ.
ಈಗಿನ 2020ರ
ಪ್ರದರ್ಶನಗಳನ್ನು ಈಗಾಗಲೇ ಪ್ರಕಟಿಸಲಾಗಿದೆ. 2020 ಮೇನಲ್ಲಿ ಆರಂಭವಾಗುವ ಪ್ರದರ್ಶನಕ್ಕೆ 2019ರ
ನವೆಂಬರಿನಿಂದ ಅಭ್ಯಾಸ ಪ್ರಾರಂಭವಾಗುತ್ತದೆ. ಈ ರೀತಿಯಾಗಿ ಮೊದಲೇ ನಿಗದಿ ಪಡಿಸುವುದರಿಂದ ಅನೇಕ
ವಿದೇಶಿ ಪ್ರವಾಸಿಗರು ಈ ಪ್ರದರ್ಶನಕ್ಕೆ ಬರಲು ಸಹಾಯವಾಗುತ್ತಾ ಬಂದಿದೆ.
ಆರ್ಥಿಕತೆ
ಹಾಗೂ ಬೆಳವಣಿಗೆ
ಈ ಪ್ರದರ್ಶನ ಈ ಗ್ರಾಮದ ಜನರ ಧಾರ್ಮಿಕ
ಶ್ರದ್ಧೆ ಹಾಗೂ ಭಕ್ತಿಗೆ ಸಾಕ್ಷಿಯಾಗಿ ನಿಂತಿದ್ದರೂ, ಈ ದೈವೀಕ ಕಾರ್ಯದಿಂದ ಇಲ್ಲಿನ ಜನರು ಹಾಗೂ
ಗ್ರಾಮವು ಆರ್ಥಿಕವಾಗಿ ಬೆಳೆದು ಬಂದಿರುವುದು ಸುಳ್ಳಲ್ಲ. ‘Die Passion zahlt’ ಅಂದರೆ 'ಈ
ಪ್ರದರ್ಶನ ಒದಗಿಸುತ್ತದೆ' ಎನ್ನುವುದು ಇಲ್ಲಿನ ಸ್ಥಳೀಯ ನಂಬಿಕೆ. ಈ ಗ್ರಾಮದ ಅಭಿವೃದ್ಧಿಗೆ
ಬೇಕಾದನ್ನು ಈ ಪ್ರದರ್ಶನವೇ ಒದಗಿಸುತ್ತದೆ ಎಂಬ ಭಾವ ಈ ಗ್ರಾಮದ ಮಟ್ಟಿಗೆ ನಿಜವಾಗಿದೆ.
ಆದ್ದರಿಂದಲೇ ಇಲ್ಲಿನ ಆಡಳಿತ ಪ್ರವಾಸಿಗರಿಗೆ ಆದಷ್ಟೂ ಉತ್ತಮವಾದ ಮೂಲ ಸೌಲಭ್ಯಗಳನ್ನು
ನೀಡುತ್ತದೆ.
ಹೆಚ್ಚಿನ
ವಿವರಗಳು
ಮುಂದಿನ ಪ್ರದರ್ಶನ ಹಾಗೂ ಈ ಗ್ರಾಮದಲ್ಲಿನ
ಸೌಲಭ್ಯಗಳ ವಿವರಗಳು ಅಂತರ್ಜಾಲದಲ್ಲಿ ತುಂಬಿವೆ. Oberammergau PassionPlay ಎಂಬುದಾಗಿ ಹುಡುಕಲು ಪ್ರಯತ್ನಿಸಿದರೆ ಎಲ್ಲಾ ವಿವರಗಳೂ
ಕ್ಷಣಮಾತ್ರದಲ್ಲಿ ದೊರಕುತ್ತದೆ. ಮುಂದಿನ ಪ್ರದರ್ಶನವನ್ನು ವೀಕ್ಷಿಸುವ ಭಾಗ್ಯ ನಿಮ್ಮದಾಗಲಿ.
- ಪ್ರಶಾಂತ್ ಇಗ್ನೇಷಿಯಸ್
No comments:
Post a Comment