Friday, 13 July 2018

ಕಥಾದನಿ


ತರುಣಿಯ ಮುಟ್ಟಿ ಸನ್ಯಾಸಿ ಕೆಟ್ಟ!
          ಇಬ್ಬರು ಯುವ ಸನ್ಯಾಸಿಗಳು ನದಿಯೊಂದನ್ನು ದಾಟಿ ಆಶ್ರಮ ತಲುಪಬೇಕಿತ್ತು. ನದಿದಡವನ್ನು ತಲುಪಿದಾಗ ಒಬ್ಬ ತರುಣಿ ನದಿಯಲ್ಲಿ ಮುಳುಗುತ್ತಿರುವ ದೃಶ್ಯ ಕಣ್ಣಿಗೆ ಬೀಳುತ್ತದೆ. ಒಬ್ಬ ಯುವ ಸನ್ಯಾಸಿ ಹೇಳಿದ "ಅಯ್ಯೋ ಹುಡುಗಿ ನೀರಲ್ಲಿ ಮುಳುಗಿ ಹೋಗುತ್ತಿದ್ದಾಳಲ್ಲಾ! ನಾವಾದರೋ ಸನ್ಯಾಸಿಗಳು, ಮಾಡುವುದಾದರೂ ಏನು?"
          ಮತ್ತೊಬ್ಬ ಏನೂ ಮಾತನಾಡದೆ ಈಜಿಕೊಂಡು ಹೋಗಿ ಮುಳುಗುತ್ತಿರುವ ತರುಣಿಯನ್ನು ಎತ್ತಿಕೊಂಡು ಬಂದು ದಡ ಸೇರಿದ. ಪ್ರಾಥಮಿಕ ಆರೈಕೆ ಮಾಡಿದ, ತರುಣಿಯನ್ನು ಸಾವಿನ ದವಡೆಯಿಂದ ಪಾರುಮಾಡಿದ ಸಮಾಧಾನದಿಂದ ಆಶ್ರಮ ಸೇರಿದ. ಅದಾಗಲೇ ಆ ಮತ್ತೊಬ್ಬ ಸನ್ಯಾಸಿ ಆಶ್ರಮಕ್ಕೆ ದೌಡಾಯಿಸಿದ್ದ. ಹಿರಿಯ ಸನ್ಯಾಸಿಗೆ ನದಿಯಯಲ್ಲಿ ನಡೆದ ವೃತ್ತಾಂತವನ್ನೆಲ್ಲಾ ರೆಕ್ಕೆಪುಕ್ಕ ಕಟ್ಟಿ ಕಥೆ ಹೇಳಿದ್ದ.
          ತರುಣಿಯನ್ನು ಸಾವಿನಿಂದ ಪಾರುಮಾಡಿದ್ದ ಸನ್ಯಾಸಿಯೋ ಪ್ರಸನ್ನ ಚಿತ್ತದಿಂದ ಆಶ್ರಮಕ್ಕೆ ಬಂದ. ಹಿರಿಯ ಸನ್ಯಾಸಿಗಳನ್ನು ಹೊರತುಪಡಿಸಿ ಎಲ್ಲರೂ ಇವನನ್ನು ಅಪರಾಧಿಯನ್ನು ನೋಡುವಂತೆ ನೋಡುತ್ತಿದ್ದಾರೆ. ಇವನಿಗೆ ಎಲ್ಲವೂ ಅರ್ಥವಾಯ್ತು. ಹಿರಿಯ ಸನ್ಯಾಸಿ ಇವನನ್ನು ಕೇಳಿದ-
"
ಯುವತಿಯೊಬ್ಬಳನ್ನು ಮುಟ್ಟಿ ಬಿಟ್ಟೆಯಂತಲ್ಲಾ?"
          "ಹೌದು ಸ್ವಾಮೀಜಿ, ನಾನು ಮುಟ್ಟಿದ್ದೂ ನಿಜ. ಅಲ್ಲೇ ಬಿಟ್ಟಿದ್ದೂ ನಿಜ. ಆದರೆ ನನ್ನ ಮಿತ್ರ ಸನ್ಯಾಸಿ ಆ ಯುವತಿಯನ್ನು ಆಶ್ರಮಕ್ಕೂ ಕರೆತಂದು ಬಿಟ್ಟನಲ್ಲಾ?!"

ಕಣ್ಣು ಮಿಟುಕಿಸದೆ ನಾನು ನಿನ್ನ ಕತ್ತಿಗೆ ಕತ್ತು ಒಡ್ಡಬಲ್ಲೆ
          ಆಂತರಿಕ ಯುದ್ಧಗಳಲ್ಲಿ ತೊಡಗಿದ್ದ ಜಪಾನಿನಲ್ಲಿ ಸೈನ್ಯ ಊರೊಂದಕ್ಕೆ ನುಗ್ಗಿದರೆಕೈಗೆ ಸಿಕ್ಕವರನ್ನೆಲ್ಲ ಕೊಂದು ಊರನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಳ್ಳುತ್ತಿದ್ದರು. ಒಂದು ಹಳ್ಳಿಯಲ್ಲಿನ ಜನರು ಸೈನ್ಯ ಆಕ್ರಮಣ ಮಾಡುವ ಮುನ್ನವೇ ತಮ್ಮ ಸಾಮಾನು ಸರಂಜಾಮುಗಳನ್ನು ಕಟ್ಟಿಕೊಂಡು ಪಲಾಯನ ಗೈದಿದ್ದರು.
          ಹಳ್ಳಿಗೆ ದಾಳಿಯಿಟ್ಟ ಸೈನ್ಯಕ್ಕೆ ಬರಿದಾದ ಮನೆಗಳು, ಮಾರುಕಟ್ಟೆಗಳು ಕಂಡವು. ಆದರೆ ಒಂದು ವಿಹಾರದಲ್ಲಿ ವಯಸ್ಸಾದ ಒಬ್ಬ ಝೆನ್ ಗುರು ಮಾತ್ರ ಉಳಿದಿದ್ದ. ವೃದ್ಧ ಗುರುವಿನ ಬಗ್ಗೆ ಕುತೂಹಲ ಉಂಟಾಗಿ ಸೈನ್ಯದ ದಂಡನಾಯಕ ಆತನನ್ನು ನೋಡಲು ವಿಹಾರಕ್ಕೆ ಬಂದ. ದಂಡನಾಯಕನನ್ನು ಕಂಡೂ ಗುರುವು ವಿಚಲಿತನಾಗಲಿಲ್ಲ. ತನ್ನನ್ನು ಕಂಡು ನಡುಗುವ, ಮಂಡಿಯೂರಿ ಕುಳಿತುಕೊಳ್ಳುವವರನ್ನೇ ಎಲ್ಲೆಡೆ ಕಂಡಿದ್ದ ದಂಡನಾಯಕನಿಗೆ ಕೋಪ ನೆತ್ತಿಗೇರಿತು.
            ಮೂರ್ಖ! ನೀನು ಯಾರ ಎದುರು ನಿಂತಿದ್ದೀಯ ಅಂತ ಗೊತ್ತಿದೆಯಾ? ಕಣ್ಣು ಮಿಟುಕಿಸದೆ ನಾನು ನಿನ್ನ ಕತ್ತು ಸೀಳಿಹಾಕಬಲ್ಲೆ" ದಂಡನಾಯಕ ಅಬ್ಬರಿಸಿದ.
          ಗುರು ತಣ್ಣನೆಯ ಧ್ವನಿಯಲ್ಲಿ ಉತ್ತರಿಸಿದ, "ನೀನು ಯಾರ ಎದುರು ನಿಂತಿದ್ದೀಯ ಅಂತ ತಿಳಿದಿದೆಯಾ? ಕಣ್ಣು ಮಿಟುಕಿಸದೆ ನಾನು ನಿನ್ನ ಕತ್ತಿಗೆ ಕತ್ತು ಒಡ್ಡಬಲ್ಲೆ"

ಇದುವೇ ವೇದಶಾಸ್ತ್ರದ ಸಾರಾಂಶ
          ಶಿಷ್ಯನೊರ್ವ ಬಂದು, ಹೆಲ್ಲೆಲ್ ಎಂಬ ಯೆಹೂದ್ಯ ಗುರುವಿನ ಬಳಿ ಹೋಗಿ, "ಒಂದೇ ಮಾತಿನಲ್ಲಿ ವೇದಶಾಸ್ತ್ರದ ಸಾರ ಸಮಸ್ತವನ್ನು ಹೇಳ ಬಲ್ಲೆಯಾ?" ಎಂದು ಕೇಳಿದಾಗ, "ಬೇರೆಯವರು ನಿನಗೇನು ಮಾಡಬಾರದೆಂದು ಬಯಸುತ್ತೀಯೋ ಅದನ್ನು ನೀನು ಪರರಿಗೆ ಮಾಡಬೇಡ, ಇದುವೇ ವೇದಶಾಸ್ತ್ರದ ಸಾರಾಂಶ. ಉಳಿದೆಲ್ಲವೂ ವಿವರಣೆ" ಎಂದು ನುಡಿದರು.

ಸಂಗ್ರಹ : ಇನ್ನಾ

No comments:

Post a Comment

ಎತ್ತಿತೋರಿಸಲಾದ ಪೋಸ್ಟ್

ಅನ್ನಮ್ಮ’ಳಿಗೆ ೨೫೦ರ ಹಾಗೂ ಅತಿ.ವಂ.ಪೊತ್ತಕಮೂರಿಗೆ ೫೦ರ ಸ್ಮರಣೆಯ ಸಂಭ್ರಮ

ಬೆಂಗಳೂರಿನ ಉತ್ತರಹಳ್ಳಿಯ ಅನ್ನಮ್ಮನ ಬೆಟ್ಟ, ಅಲ್ಲಿನ ಅನ್ನಮ್ಮಳ ಸಮಾಧಿ, ಆ ಬೆಟ್ಟದ ಮೇಲಿನ ಶಿಲುಬೆ, ಅಲ್ಲಿ ಪ್ರತಿವರ್ಷ ತಪಸ್ಸು ಕಾಲದ ಐದನೇ ಭಾನುವಾರ ನಡೆಯುವ ಯೇಸು...