Friday, 13 July 2018

ಕಾರ್ಮೆಲ್ ಗಿರಿ

ಕ್ರೈಸ್ತ ಪಂಚಾಂಗದಲ್ಲಿ ಜುಲೈ ೧೬ ಅನ್ನು ಕಾರ್ಮೆಲ್ ಮಾತೆಗೆ ಅರ್ಪಿಸಲಾಗಿದೆ. ಕಾರ್ಮೆಲಮ್ಮ, ಕಾರ್ಮೆಲ್ ಮಾತೆ, ಉತ್ತರಿಕೆ ದೇವಮಾತೆ, ಉತ್ತರಿಮೇರಿ ಎಂದೆಲ್ಲ ಹೆಸರುಗಳನ್ನು ನಾವು ಕಾಣುತ್ತೇವಾದರೂ ಮರಿಯಮ್ಮನವರ ಮನವಿಮಾಲೆಯಲ್ಲಿ ಈ ಹೆಸರು ಉಲ್ಲೇಖವಾಗಿಲ್ಲ. ಒಡಂಬಡಿಕೆಯ ಪೆಟ್ಟಿಗೆಯೇ, ಉದಯಕಾಲದ ನಕ್ಷತ್ರವೇ, ದಾವಿದನ ಸಿಂಹಾಸನವೇ, ಮೋಕ್ಷದ ಬಾಗಿಲೇ ಎಂದೆಲ್ಲ ಅಮ್ಮನವರನ್ನು ಕರೆದಿರುವರಾದರೂ ಆ ಮನವಿಮಾಲೆಯಲ್ಲಿ ಕಾರ್ಮೆಲ್ ಗಿರಿಯೊಡತಿಯೇ ಎಂದೇಕೆ ಕರೆದಿಲ್ಲವೊ ತಿಳಿಯದು. 

ಜೆರುಸಲೇಮ್ ಪುಣ್ಯಭೂಮಿಯಲ್ಲಿ ಕಾನಾ, ಕಲ್ವಾರಿಗಳಂತೆಯೇ ಕಾರ್ಮೆಲ್ ಬೆಟ್ಟವೂ ಪ್ರಸಿದ್ಧ. ಕಾನಾ ಕಲ್ವಾರಿಗಳು ಯೇಸುಕ್ರಿಸ್ತರ ಸ್ಪರ್ಶದ ನಂತರ ಹೆಸರು ಗಳಿಸಿದರೆ ಕಾರ್ಮೆಲ್ ಗಿರಿಯು ಯೇಸುವಿಗೆ ಒಂಬೈನೂರು ವರ್ಷಗಳ ಮುನ್ನವೇ ಪವಿತ್ರ ಬೈಬಲಿನಲ್ಲಿ ಉಲ್ಲೇಖವಾಗಿದೆ. ಏಳು ವರ್ಷಗಳ ಭಯಂಕರ ಬರಗಾಲವನ್ನು ಅಂತ್ಯಗೊಳಿಸುವುದಾಗಿ ದೇವರು ಪ್ರವಾದಿ ಎಲೀಯನಿಗೆ ಮಾತುಕೊಟ್ಟು ಮೆಡಿಟರೇನಿಯನ್ ಸಮುದ್ರದ ಮೇಲೆ ಉದ್ಭವಗೊಂಡ ಅಂಗೈಯಗಲದ ಕಾರ್ಮೋಡವನ್ನು ಅವನಿಗೆ ಕಾಣಿಸಿದ್ದು ಕಾರ್ಮೆಲ್ ಬೆಟ್ಟದಲ್ಲಿರುವಾಗಲೇ. (೧ ಅರಸರು ೧೮: ೪೨:೪೫)

ಅದು ಕ್ರಿಸ್ತ ಹುಟ್ಟುವುದಕ್ಕೆ ಒಂಬೈನೂರು ವರ್ಷಗಳ ಮುನ್ನ ಇಸ್ರಾಯೆಲ್ ಸಾಮ್ರಾಜ್ಯವನ್ನು ಆಹಾಬ್ ಎಂಬ ದೊರೆ ಆಳುತ್ತಿದ್ದ ಸಮಯ. ಆಹಾಬನು ರಾಜ್ಯವಿಸ್ತರಣೆಯ ಸಮಯದಲ್ಲಿ ಶತ್ರುದೇಶಗಳಿಂದ ಹಿಡಿದು ತಂದಿದ್ದ ಕುಲೀನ ಹೆಂಗಳೆಯರನ್ನು ಮದುವೆಯಾಗಿ ಅವರ ಮಾತಿನಂತೆ ಏಕದೇವೋಪಾಸನೆಗೆ ಹೊರತಾಗಿ ಬಹುದೇವರುಗಳನ್ನು ಪೂಜಿಸತೊಡಗಿದ್ದ. ಅದೇ ಸಮಯದಲ್ಲಿ ಯೆಹೂದ್ಯರ ಪ್ರವಾದಿಯಾಗಿದ್ದ ಎಲೀಯನು ರಾಜನ ಕೃತ್ಯವನ್ನು ಖಂಡಿಸಿ ಕಲ್ಪಿತ ದೇವರುಗಳ ಅಸ್ತಿತ್ವವನ್ನೇ ಪ್ರಶ್ನಿಸುತ್ತಾನೆ. ಸ್ವತಃ ರಾಜನನ್ನು ಹಾಗೂ ಅಧಿಕಾರಸ್ತ ಅನ್ಯಧರ್ಮೀಯರನ್ನೂ ಅವರ ಪೂಜಾರಿಗಳನ್ನೂ ಏಕಾಂಗಿಯಾಗಿ ಎದುರಿಸುವ ಮನಃಶಕ್ತಿಯನ್ನು ಅವನು ರೂಢಿಸಿಕೊಂಡಿದ್ದ. ಏಕದೇವರಾದ ಯೆಹೋವನನ್ನು ಉಪಾಸನೆ ಮಾಡುತ್ತಾ ನಿತ್ಯವೂ ಆತನೊಂದಿಗೆ ಸಂಭಾಷಿಸುತ್ತಿದ್ದ ಎಲೀಯ ಅಪ್ರತಿಮ ವಾಗ್ಮಿಯೂ ಅಷ್ಟೇ ವಿನಯಶಾಲಿಯೂ ಆಗಿದ್ದ. ಆದರೆ ಪರಾತ್ಪರ ದೇವರ ವಿರುದ್ಧ ಯಾರು ಏನೇ ಮಾಡಿದರೂ ಸಹಿಸಲಾರದವನಾಗಿದ್ದ. ಸರ್ವೇಶ್ವರ ದೇವರಾದರೋ ಸದಾ ಎಲೀಯನ ಬಲಗೈಯಾಗಿದ್ದರು. ಆ ದೇವರ ನಿತ್ಯೋಪಾಸನೆಯಿಂದ ಎಲೀಯನಿಗೆ ಅತಿಮಾನುಷ ಶಕ್ತಿ ಪ್ರಾಪ್ತವಾಗಿತ್ತು. ಅದರ ಬಲದಿಂದಲೇ ಅವನು ದೊರೆ ಮತ್ತವನ ಅಧಿಕಾರಿ ಸಮಸ್ತರ ಅದರಲ್ಲೂ ವಿಶೇಷವಾಗಿ ಅಂತಃಪುರದ ಪ್ರಭಾವೀ ಪ್ರಮೀಳೆಯರನ್ನು ಏಕಾಂಗಿಯಾಗಿ ಎದುರಿಸಲು ಸಜ್ಜಾಗಿದ್ದ. 

ಅದೊಂದು ವಿಶಿಷ್ಟವೂ ವಿಚಿತ್ರವೂ ಆದ ಪೋಟಿ. ಕೆಲವಾರು ವರ್ಷಗಳಿಂದ ನಾಡಿನಲ್ಲಿ ಮಳೆಯಾಗಿರಲಿಲ್ಲ. ಮಳೆಗಾಗಿ ರಾಜನು ತನ್ನ ಪುರೋಹಿತವರ್ಗದ ಸಲಹೆಯ ಮೇರೆಗೆ ಅವರ ಎಲ್ಲ ದೇವರುಗಳಿಗೂ ಪೂಜೆ ಸಲ್ಲಿಸುತ್ತಿದ್ದ. ಆದರೂ ಮಳೆಯ ಸುಳಿವಿಲ್ಲ. ಇದೇ ಸಂದರ್ಭದಲ್ಲಿ ಎಲೀಯ ಸವಾಲು ಒಡ್ಡಿದ್ದ. ಸವಾಲನ್ನು ಸ್ವೀಕರಿಸಿದ್ದ ಪುರೋಹಿತರು ತಮ್ಮ ದೇವರುಗಳಿಗೆ ಬಲಿಯರ್ಪಿಸಿ ಮಳೆ ತರಲಾಗದೆ ಸೋತರು. ಅದಾದ ನಂತರ ಎಲೀಯನ ಸರದಿ. ಅವನು ಮಹಾಮಹಿಮ ಸರ್ವಶಕ್ತ ಏಕದೇವರಿಗೆ ಏಕಾಗ್ರತೆಯಿಂದ ಪ್ರಾರ್ಥನೆ ಮಾಡಿ ಪಶುಗಳನ್ನು ಬಲಿಗಾಗಿ ಸಿದ್ಧಗೊಳಿಸಿ ಪೀಠದ ಮೇಲಿಟ್ಟ. ಏನಾಶ್ಚರ್ಯ ದೇವರಾತ್ಮ ಸಿಡಿಲಿನ ರೂಪದಲ್ಲಿ ಪೀಠದ ಮೇಲಿಳಿದು ಬಲಿಯನ್ನು ದಹಿಸಿತು. ಕಲ್ಪಿತ ದೇವರುಗಳ ಪೂಜಾರಿಗಳೆಲ್ಲ ಕಾಲ್ಕಿತ್ತು ಓಡಿಹೋದರು. 

ಇನ್ನು ಮಳೆ ಬರುವುದು ಬಾಕಿಯಷ್ಟೇ. ಎಲೀಯನು ಗುಹೆಯಲ್ಲಿ ದೇವಧ್ಯಾನದಲ್ಲಿ ನಿರತನಾದ. ಹಗಲೆಲ್ಲ ಧಗೆಯೇರಿ ಸಂಜೆಯಾಗುತ್ತಿದ್ದಂತೆ ದೂರದ ಮೆಡಿಟರೇನಿಯನ್ ಸಮುದ್ರದ ಧೀರಗಂಭೀರ ನೀರಪಾತಳಿಯ ಮೇಲಿಂದ ಅಂಗೈ ಅಗಲದ ಮೇಘವೇಳುವುದು ಕಂಡಿತು. ಕೂಡಲೇ ಎದ್ದ ಎಲೀಯ ತನ್ನ ಅರಸನಿಗೆ ಬೇಗ ಓಡಿ ಅರಮನೆ ಸೇರಿಕೋ, ಪ್ರಳಯದಂತ ಮಳೆಯಾಗುವುದು ಎಂದು ಎಚ್ಚರಿಸಿ ಕಳಿಸಿ ತಾನೂ ಓಡುತ್ತಾ ಜೆರುಸಲೇಮ್ ತಲಪಿದ. ಅಷ್ಟರಲ್ಲೇ ಧಾರಾಕಾರ ಮಳೆಯಾಯಿತು. 

ವಿಶಾಲ ಮೆಡಿಟರೇನಿಯನ್ ಸಮುದ್ರವನ್ನು ಪಡುವಣ ಕಡಲದಂಡೆಯಾಗಿ ಹೊಂದಿರುವ ಇಸ್ರೇಲ್ ದೇಶದ ಉತ್ತರ ಭಾಗದಲ್ಲಿನ ಉನ್ನತವಾದ ಬೆಟ್ಟ ಕಾರ್ಮೆಲ್ ಬೆಟ್ಟ. ಈ ಬೆಟ್ಟದ ಮೇಲೆ ರಾತ್ರಿಯಿಡೀ ನಿರಂತರವಾಗಿ ಉರಿಸುತ್ತಿದ್ದ ದೀಪವೇ ಸಮುದ್ರದಲ್ಲಿ ಸಂಚರಿಸುತ್ತಿದ್ದ ನಾವೆಗಳಿಗೆ ಶತಮಾನಗಳ ಕಾಲ ಮಾರ್ಗಸೂಚಿಯಾಗಿತ್ತು. ವಿಶ್ವದ ಹಲವಾರು ಕಡೆಗಳಿಂದ ವರ್ತಕರು ಇಲ್ಲಿನ ರೇವುಪಟ್ಟಣಕ್ಕೆ ಬಂದು ಹೋಗುತ್ತಿದ್ದುದರಿಂದ ಕಾರ್ಮೆಲ್ ದಿಕ್ಸೂಚಿಯು "ಸ್ತೆಲ್ಲ ಮಾರಿಸ್" (stella maris) ಅಂದರೆ ಸಮುದ್ರದ ನಕ್ಷತ್ರವಾಗಿ ಬಲು ಪ್ರಸಿದ್ಧವಾಗಿತ್ತು. 

ಕಾರ್ಮೆಲ್ ಗಿರಿ ಮತ್ತು ಕಾನನ ಹಾಗೂ ಅದರಲ್ಲಿನ ಗುಹ್ವರಗಳು ಎಲೀಯನ ಕಾಲದಿಂದಲೂ ಹಲವು ಮುನಿಪುಂಗವರ ಏಕಾಂತ ಜೀವನಕ್ಕೆ ಆಶ್ರಯವಾಗಿತ್ತು. ಎರಡನೇ ಧರ್ಮಯುದ್ಧದ ನಂತರ (ಕ್ರಿಸ್ತಶಕ ೧೧೪೪-೪೯) ಐರೋಪ್ಯರ ಒಂದು ಗುಂಪು ಕಾರ್ಮೆಲಾದ್ರಿಯ ಮೇಲೆ ಆಧ್ಯಾತ್ಮಿಕ ಮಠ ನಿರ್ಮಾಣಕ್ಕೆ ತೊಡಗಿ ಅಲ್ಲೇ ನೆಲೆಕಂಡಿತು. ಸಂತ ಆಲ್ಬರ್ಟ್ ಎಂಬುವರು ಈ ಗುಂಪಿಗೆ ನೀತಿನಿಯಮಾವಳಿಗಳನ್ನು ಗೊತ್ತು ಮಾಡಿದ್ದರು. ಈ ಗುಂಪೇ ಮುಂದೆ ಕಾರ್ಮೆಲೈಟರೆಂದು ಪ್ರಖ್ಯಾತರಾದರು. ದೇವರೇ ಇವರ ಆಧ್ಯಾತ್ಮಿಕ ಕೇಂದ್ರವಾಗಿದ್ದರು ಮತ್ತು ಹಗಲಿರುಳು ಕರ್ತನ ಜಪ ಧ್ಯಾನಗಳೇ ಇವರ ಉಸಿರಾದವು. 

ಎಲೀಯನ ಆಸ್ತಿಕತೆಯ ಕಠೋರ ವ್ಯಕ್ತಿತ್ವವೇ ಈ ಕಾರ್ಮೆಲೈಟರಿಗೆ ಆದರ್ಶ ಮತ್ತು ಸ್ಫೂರ್ತಿಯಾಗಿದ್ದರೂ ಅವರು ಆರ್ದ್ರ ಅಂತಃಕರಣದ ವಾತ್ಸಲ್ಯವನ್ನೂ ಅರಸುತ್ತಿದ್ದರು. ದೇವಪುತ್ರನಿಗೇ ತಾಯಾದ ಅಮ್ಮ ಮರಿಯಮ್ಮನವರಲ್ಲಿ ತಾಯಮಮತೆಯನ್ನು ಅವರು ಕಂಡುಕೊಂಡರು. ಆಕೆಯೇ ಅವರ ಪಾಲಕಿಯಾದಳು. ಹೀಗೆ ಮಠದ ನಡುವೆ ಮಾತೆಗಾಗಿ ಪುಟ್ಟ ಮಂಟಪವೊಂದು ನಿಂತಿತು. ಅವರು ಆಕೆಯನ್ನು Virgo Dei genitrix (ವಿರ್ಗೊ ದೇಇ ಜೆನೆತ್ರೀಸ್ = ಕನ್ಯೆಯೇ ದೇವರತಾಯಿಯೇ) ಎಂದು ಕರೆದರಾದರೂ ಮುಂದೆ ಆಕೆ ಕಾರ್ಮೆಲ್ ಗಿರಿಯೊಡತಿ, ಕಾರ್ಮೆಲ್ ಬೆಟ್ಟದ ತಾಯಿ, ಕಾರ್ಮೆಲಮ್ಮನಾಗಿ ಪ್ರಸಿದ್ಧಳಾದಳು. "ಜಗದಗಲಕ್ಕೂ ಮಿಗಿಲಾದವನನ್ನು ಒಡಲಲ್ಲಿ ಹಿಡಿದಿಟ್ಟುಕೊಂಡು ಮಗುವಾಗಿ ಹೆತ್ತಮ್ಮ ಮರಿಯಮ್ಮ" (O Virgin Mother of God, He Whom the whole world does not contain, enclosed Himself in thy womb, being made man) ಎಂಬುದು ಕಾರ್ಮೆಲೈಟರ ಅತಿಪ್ರಿಯ ಹಾಡು. ವಿಶೇಷವಾಗಿ ಈ ಹಾಡನ್ನು ಅವರು ಸತ್ಪ್ರಸಾದದ ಆಶೀರ್ವಾದದ ಗಳಿಗೆಯಲ್ಲಿ ಹಾಡುತ್ತಾರೆ. 

ಕ್ರಿಸ್ತಶಕ ೧೨೭೪ರ ವೇಳೆಗೆ ಧರ್ಮಕ್ರಾಂತಿಯು ತಣಿದು ಲತೀನ್ ಆಧಿಪತ್ಯವು ನುಚ್ಚುನೂರಾಯಿತು. ಆಗ ಕಾರ್ಮೆಲ್ ಗಿರಿಯಲ್ಲಿ ಅಡಗಿದ್ದ ಐರೋಪ್ಯ ಸಂನ್ಯಾಸಿಗಳೆಲ್ಲ ತಂತಮ್ಮ ದೇಶಗಳಿಗೆ ಹಿಂದಿರುಗಿದರು. ಹಾಗೆಯೇ ತಾವು ಹೋದಡೆಯೆಲ್ಲ ಕಾರ್ಮೆಲ್ ಸಾಂಗತ್ಯದ ಸೊಗಡನ್ನೂ ಕೊಂಡೊಯ್ದರು. ತಮ್ಮ ಆಶ್ರಮಗಳಿಗೆಲ್ಲ ಮೌಂಟ್ ಕಾರ್ಮೆಲ್ ಎಂದು ಹೆಸರಿಟ್ಟುಕೊಂಡರು. ಅದೇ ರೀತಿಯಲ್ಲಿ ಮರಿಯಮ್ಮನವರನ್ನು ಸ್ತೆಲ್ಲಮಾರಿಸ್ ಎಂದು ಕರೆಯುವ ಪರಿಪಾಠ ಮೊದಲಾಯಿತು. 

ಸಮುದ್ರದಲ್ಲಿ ಚಂಡಮಾರುತವೆದ್ದು ಹಡಗು ಓಲಾಡಿ ದೆಸೆಗೆಟ್ಟು ಹೋಗಿ ಕಾರ್ಮೋಡ ತುಂಬಿದ ಕರಾಳ ರಾತ್ರಿಗಳಲ್ಲಿ ನಕ್ಷತ್ರಗಳಿಲ್ಲದೆ ದಿಕ್ಕುಗಾಣದಾಗಿ ಪರಿತಪಿಸುವಾಗ ಅಮ್ಮ ಮರಿಯಮ್ಮನವರೇ ಪಾರುಗಾಣಿಸುವರು ಎಂಬ ನಂಬಿಕೆಯಿಂದಾಗಿ ಸ್ತೆಲ್ಲ ಮಾರಿಸ್ ಎಂಬ ಹೆಸರು ನಾವಿಕರಲ್ಲಿ ಆಶಾಭಾವನೆ ಮೂಡಿಸಿತು. 

ಮತ್ತೊಂದು ಜನಪ್ರಿಯ ನಂಬುಗೆಯ ಪ್ರಕಾರ ಹದಿಮೂರನೇ ಶತಮಾನದಲ್ಲಿ ಜೀವಿಸುತ್ತಿದ್ದ ಕಾರ್ಮೆಲ್ ಮಠದ ಗುರು ಸೈಮನ್ ಸ್ತೋಕ್ ಎಂಬುವರು ಮಾತೆಯ ಬಳಿ ಪ್ರಾರ್ಥಿಸಿದಾಗ ಆಕೆ ಅವರಿಗೆ ದರ್ಶನವಿತ್ತು ಒಂದು ಕಂದು ಬಣ್ಣದ ಉತ್ತರೀಯ (ಶಾಲು) ವನ್ನು ಕೊಟ್ಟರೆಂದು ಹೇಳಲಾಗುತ್ತದೆ. ಅಂದಿನಿಂದ ಕಾರ್ಮೆಲೈಟರೆಲ್ಲ ಉತ್ತರೀಯವನ್ನು ಸಂಕೇತಿಸುವ ಉಣ್ಣೆಯ ಸಣ್ಣ ತುಣುಕೊಂದನ್ನು ತಮ್ಮ ದೇಹದ ಮೇಲೆ ಧರಿಸುವ ಪರಿಪಾಠ ಮೊದಲಾಯಿತು. ಕಂದು ಉಣ್ಣೆಯ ಸಣ್ಣ ತುಣುಕನ್ನು ಬಿಲ್ಲೆಯ ರೂಪದಲ್ಲಿ ಕೊರಳಿಗೆ ಇಳಿಬಿಟ್ಟುಕೊಳ್ಳುವ ಸಂಪ್ರದಾಯ ಜನಸಾಮಾನ್ಯರಲ್ಲೂ ಇದೆ. 

ಇಂದಿಗೂ ಜೆರುಸಲೆಮ್ ಪುಣ್ಯಭೂಮಿಗೆ ಪ್ರವಾಸ ಹೋಗುವವರು ಕಾರ್ಮೆಲ್ ಬೆಟ್ಟಕ್ಕೆ ಹೋದಾಗ ಸ್ತೆಲ್ಲಮಾರಿಸ್ ಮಠದಲ್ಲಿನ ಪೂಜಾಮಂದಿರದೊಳಗೆ ಪ್ರವಾದಿ ಎಲೀಯನ ಗುಹೆಯನ್ನೂ ಉತ್ತರಿಕೆ ಮಾತೆಯ ಸ್ವರೂಪವನ್ನೂ ದರ್ಶಿಸಬಹುದು. ಅಥವಾ ಬೆಂಗಳೂರಿನ ಬಳಿಯ ತಟ್ಟುಗುಪ್ಪೆಗೆ ಪ್ರವಾಸ ಹೋಗಿ ಕಾರ್ಮೆಲ್ ಮಾತೆಯನ್ನು ದರ್ಶಿಸಿ ತೋಪಿನಲ್ಲಿ ಬೇಡುದಲೆ ಊಟ ಮಾಡಬಹುದು. 



ಸಿ.ಮರಿಜೋಸೆಫ್ -



No comments:

Post a Comment

ಎತ್ತಿತೋರಿಸಲಾದ ಪೋಸ್ಟ್

ಅನ್ನಮ್ಮ’ಳಿಗೆ ೨೫೦ರ ಹಾಗೂ ಅತಿ.ವಂ.ಪೊತ್ತಕಮೂರಿಗೆ ೫೦ರ ಸ್ಮರಣೆಯ ಸಂಭ್ರಮ

ಬೆಂಗಳೂರಿನ ಉತ್ತರಹಳ್ಳಿಯ ಅನ್ನಮ್ಮನ ಬೆಟ್ಟ, ಅಲ್ಲಿನ ಅನ್ನಮ್ಮಳ ಸಮಾಧಿ, ಆ ಬೆಟ್ಟದ ಮೇಲಿನ ಶಿಲುಬೆ, ಅಲ್ಲಿ ಪ್ರತಿವರ್ಷ ತಪಸ್ಸು ಕಾಲದ ಐದನೇ ಭಾನುವಾರ ನಡೆಯುವ ಯೇಸು...