ಯಲಹಂಕದ ನಾಡಪ್ರಭು ವಂಶದ ಮೊದಲನೇ ಕೆಂಪೇಗೌಡ ೧೫೩೭ರಲ್ಲಿ ಕಟ್ಟಿಸಿದ್ದು ಎನ್ನಲಾಗುವ
ಬೆಂಗಳೂರು, ವಿಜಯನಗರ ಆಳರಸರು ಮತ್ತು ಮುಂದೆ ಮರಾಠಿಗರ, ಮುಸ್ಲಿಮರ ಕೈಸೇರಿ ನಂತರ ಮೈಸೂರು ಒಡೆಯರ
ಪಾಲಾಯಿತು. ನಂತರ ಬ್ರಿಟಿಷರು ಬಂದಾಗ, ಅದರ ಪಕ್ಕದಲ್ಲೇ ಅವರು ತಮಗಾಗಿ ಸೇನಾ ನೆಲೆಯಾಗಿ ದಂಡು
ಪ್ರದೇಶವನ್ನುಅಭಿವೃದ್ಧಿ ಪಡಿಸಿದರು. ಸ್ವಾತಂತ್ರ್ಯದ ನಂತರ, ಕೆಲವು ದಶಕಗಳು ಕಳೆದ ಮೇಲೆ ತನ್ನ
ಕಬಂಧ ಬಾಹುಗಳನ್ನು ವಿಸ್ತರಿಸಿಕೊಳ್ಳುತ್ತಾ ಸುತ್ತಮುತ್ತಲ ಹಳ್ಳಿಗಳನ್ನು ಆಪೋಷಣೆ ಮಾಡುತ್ತ
ನಡೆದಿದೆ.
ಬೆಂಗಳೂರು ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ
ಎರಡು ಶತಮಾನಗಳ ಹಿಂದೆ ಜರುಗಿದ ನೈಸರ್ಗಿಕ ವಿಕೋಪಗಳು ಇಲ್ಲಿ ತಮ್ಮ ಛಾಯೆಯನ್ನು ಬಿಟ್ಟು ಹೋಗಿವೆ.
ಹಿಂದೆ ೧೮೭೬-೭೮ರ ವರೆಗೆ ಕಾಣಿಸಿಕೊಂಡಿದ್ದ ಭೀಕರ ಬರಗಾಲ ಬೆಂಗಳೂರು ಪೇಟೆಯ ಹಾಗೂ ಸುತ್ತಮುತ್ತಲ
ಹಳ್ಳಿಗರ ಜನಜೀವನವನ್ನು ಅಸ್ತವ್ಯಸ್ತಗೊಳಿಸಿತ್ತು. ಕಾಳುಕಡಿಗಳಿಗೆ ಹಾಹಾಕಾರವಾಗಿ, ತಿನ್ನಲು ಏನೂ
ಸಿಗದೇ ನೂರಾರು ಜನ ಸತ್ತರು, ಗಡ್ಡೆ ಗೆಣುಸು ತಿಂದು ಬದುಕಿದ ಜನಸಂಖ್ಯೆ ಬೆರಳೆಣಿಯಷ್ಟು ಮಾತ್ರ
ಇತ್ತು.
ಇದರಿಂದ
ಸುಧಾರಿಸಿಕೊಳ್ಳುವಲ್ಲಿ ಒಂದೆರಡು ದಶಕಗಳು ಕಳೆದವು. ಅಷ್ಟರಲ್ಲಿ ೧೮೯೮ - ೯೯ ರಲ್ಲಿ ಕಾಣಿಸಿಕೊಂಡ
ಪ್ಲೇಗ್ ಮಾರಿಯಿಂದ ಸಾವಿರಾರು ಜನ ಅಸುನೀಗಿದರು. ಬೆಂಗಳೂರು ಪೇಟೆಯಲ್ಲಿ ಎರಡೂವರೆ ಸಾವಿರ ಜನ
ಮೃತಪಟ್ಟರೆ, ದಂಡು ಪ್ರದೇಶದಲ್ಲಿ ಮೂರೂವರೆ ಸಾವಿರ ಜನ ಅಸುನೀಗಿದರು. ಇದರಿಂದ ಬೆಂಗಳೂರಿನ
ನಾಗರಿಕ ಸೌಲಭ್ಯಗಳ ಸುಧಾರಣೆಯಾದ್ದಂತೂ ಸತ್ಯ.
ಜೊತೆಗೆ
ಆ ಭಯಂಕರ ಮಾರಿಗಳು, ಹಿಂದಿನ ವಿವಿಧ ಬಡಾವಣೆಗಳಲ್ಲಿನ ರಕ್ಷಕ ದೇವತೆಗಳೆಂದು ಮುನೀಶ್ವರ, ಮಾರಮ್ಮ,
ಪ್ಲೇಗಮ್ಮ ಹೆಸರಿನ ಕ್ಷುದ್ರ ದೇವತೆಗಳ ಪುಟಾಣಿ ದೇವಸ್ಥಾನಗಳ ಅಸ್ತಿತ್ವದಿಂದ ಜನಮಾನಸದಲ್ಲಿ
ನೆನಪಿನಲ್ಲುಳಿದಿವೆ.
ಅದೇ ಬಗೆಯಲ್ಲಿ ಆ ಕಾಲದಲ್ಲಿದ್ದ ಕಥೋಲಿಕ
ಕ್ರೈಸ್ತರೂ ಈ ಮಾರಿಗಳಿಗೆ ಸಂವಾದಿಯಾಗಿ ತಮ್ಮದೇ ದೈವಗಳಿಗಾಗಿ ತಡಕಾಡುವಾಗ, ಅಂದಿನ ಮಿಷನರಿಗಳು
ಇಂಥ ವಿಪತ್ತುಗಳಿಂದ ರಕ್ಷಿಸುವ ಸಂತರನ್ನು ಅವರಿಗೆ ಪರಿಚಯಿಸಿದಂತೆ ಕಾಣುತ್ತದೆ. ಊರು ಹಾಗೂ ಪೈರುಪಚ್ಚೆಗಳ ರಕ್ಷಕ
ಮುನೀಶ್ವರನನ್ನು ಈ ಸ್ಥಳೀಯ ಕ್ರೈಸ್ತರು ಇಜಿಪ್ತ ಮೂಲದ ಪ್ರಥಮ ವನವಾಸಿ ಸಂತ ವನಚಿನ್ನಪ್ಪ
ಅವರಲ್ಲಿ ಕಂಡಿರಬೇಕು. [ಸೆಂಟ್ ಪಾಲ್ ದಿ ಫಸ್ಟ್ ಹರ್ಮಿಟ್ ( ಪಾಲ್ ಅಂದರೆ ಚಿನ್ನ, ಚಿಕ್ಕವ,
ಗಿಡ್ಡ) ಪ್ರಥಮ ವನವಾಸಿ ಸಂತ ವನಚಿನ್ನಪ್ಪ ಆಗಿದೆ.] ಹೊಲಗದ್ದೆಗಳನ್ನು ಹೊಂದಿದ್ದ ರೈತಾಪಿ
ಕ್ರೈಸ್ತಜನರ ಪಾಲಿಗೆ ಈ ಸಂತರು ಆಪ್ತವಾಗಿ ಕಾಣಿಸಿಕೊಳ್ಳುವುದನ್ನು ಈ ಸಂತರ ಮನವಿಮಾಲೆಯಿಂದ
ಗಮನಿಸಬಹುದಾಗಿದೆ.
ಅದೇ
ಬಗೆಯಲ್ಲಿ ಪ್ಲೇಗ್ ಮಾರಿ ಕಾಣಿಸಿಕೊಂಡಾಗ ಪ್ಲೇಗಮ್ಮ ಹೆಸರಿನ ಕ್ಷುದ್ರ ದೇವತೆ ಸ್ಥಳೀಯ ಜನರ
ಭರವಸೆ ಹಾಗೂ ಸಮಾಧಾನಕ್ಕೆ ಸಿಕ್ಕಾಗ ಸ್ಥಳೀಯ ಕ್ರೈಸ್ತರಿಗೆ ಮಿಷನರಿಗಳು, ಪಾದ್ರಿಗಳು ಈ ಪ್ಲೇಗ್
ಮಾರಮ್ಮಳ ಸಂವಾದಿಯಾಗಿ ಸಂತ ರಾಕ್ ಅವರನ್ನು ಅವರಿಗೆ ಪರಿಚಯಿಸಿರಬೇಕು. ಏಕೆಂದರೆ, ಫ್ರಾನ್ಸ್
ದೇಶದ ಮೂಲದ ಸಂತ ರಾಕ್ ಅವರನ್ನು ಪ್ಲೇಗ್ ಮಾರಿಯಿಂದ, ಅಂಟುರೋಗಗಳಿಂದ ರಕ್ಷಿಸುವ ರಕ್ಷಕ ಸಂತ
ಎಂದು ಕಥೋಲಿಕ ಧರ್ಮಸಭೆ ಗುರುತಿಸಿದೆ. ಆರೋಗ್ಯವನ್ನು ದಯಪಾಲಿಸುವ ಈತನ ಹೆಸರು ಸ್ಥಳೀಯ
ಕ್ರೈಸ್ತರಲ್ಲಿ ಆರೋಗ್ಯನಾಥ ಎಂದಾಗಿದೆ. [ರಾಯ (ತೆಲುಗು ರಾಯ- ಕಲ್ಲು) ದಿಂದ ರಾಯಪ್ಪ ಆದಂತೆ ಈ
ರಾಕ್ ಪದ, ಶಿಲೆಯ ಅರ್ಥದ ಹಿನ್ನೆಲೆಯಲ್ಲಿ ಕಲ್ಲಪ್ಪ ಎಂಬ ಕ್ರೈಸ್ತ ಹೆಸರಿನ ಭಾಗ್ಯ ಪಡೆದಿಲ್ಲ.
ಸಂತ ರಾಕ್ ಹೆಸರು ಭಾರತೀಕರಣಗೊಂಡು ಅವರು ಕೊಡುವ ಆರೋಗ್ಯಭಾಗ್ಯದ ಹಿನ್ನೆಲೆಯಲ್ಲಿ ಆರೋಗ್ಯನಾಥ
ಆಗಿ ಬಳಕೆಗೆ ಬಂದಿದೆ.]
ತಾವು
ಟಿಪ್ಪು ಸುಲ್ತಾನನ ಪತನದ ನಂತರ ಮದ್ರಾಸಿನಿಂದ ಬೆಂಗಳೂರಿಗೆಬಂದ ಬ್ರಿಟಿಷ್ ಸೇನೆಯ ಊಳಿಗದವರ
ವಂಶಸ್ಥರು ಎಂದು ಹಲಸೂರು ಕೆರೆಯ ಉತ್ತರ ದಿಕ್ಕಿನ ಬೆಂಗಳೂರಿನ ಹಳೆಯ ಬಡಾವಣೆಯಾಗಿರುವ ಇಂದಿನ
ಹೊಯ್ಸಳನಗರದ (ಮರ್ಫಿಟೌನ್) ನಿವಾಸಿಗಳು ಹೇಳಿಕೊಳ್ಳುತ್ತಾರೆ. ಸುಮಾರು ೧೮೬೫ರಿಂದ ಅವರ ಪೂರ್ವಿಕರು ದಂಡು ಪ್ರದೇಶದ ನೆರೆಯಲ್ಲಿದ್ದ ಈ
ಪ್ರದೇಶದಲ್ಲಿ ನೆಲೆಸಿದ್ದಿರಬೇಕು. ಮುಂದೆ೧೮೯೮ರಲ್ಲಿ ಭೀಕರ ರೋಗ ಪ್ಲೇಗ್ ನೂರಾರು ಜನರನ್ನು ಬಲಿ
ತೆಗೆದುಕೊಂಡಿತ್ತು. ಬರೋಡಾ ರಾಜ್ಯದ ಸ್ಥಾನಿಕ ಅಧಿಕಾರಿ, ನಂತರ ಮೈಸೂರು ಮತ್ತು ಕೊಡಗು
ಸಂಸ್ಥಾನಗಳ ಸ್ಥಾನಿಕ ಕರ್ನಲ್ ಸ್ಟುವರ್ಟ ಜಾರ್ಜ ನಾಕ್ಸ ಅವರು, ಈ ಜನಕ್ಕೆ ಒಂದಿಷ್ಟು ಸುಸಜ್ಜಿತ
ಮನೆಗಳನ್ನು ಒದಗಿಸಿದ್ದರಿಂದ ಈ ಬಡಾವಣೆ ನಾಕ್ಸ್ ಟೌನ್ ಎಂದು ಕರೆಯಿಸಿಕೊಳ್ಳುತ್ತಿತ್ತು.
ಮುಂದೆ ಈ ಬಡಾವಣೆಯನ್ನು ಬೆಂಗಳೂರು
ಪುರಸಭೆಯಲ್ಲಿ ೨೫ ವರ್ಷಗಳ ಕಾಲ ಎಕ್ಸಿಕ್ಯೂಟಿವ್ ಎಂಜಿನಿಯರ್ ಆಗಿದ್ದ ಡಬ್ಲೂ ಎಚ್ ಮರ್ಫಿ ಅವರು
ಮತ್ತಷ್ಟು ಸುಧಾರಿಸಿದ್ದರಿಂದ ಅದು ಮರ್ಫಿಟೌನ್ ಎಂಬ ಹೆಸರು ಪಡೆಯಿತಂತೆ. ಮಧ್ಯ ಚೌಕಾಕಾರದ ಆಟದ
ಮೈದಾನ, ಸುತ್ತಲೂ ಮನೆಗಳಿರುವ ಒಟ್ಟು ಒಂಬತ್ತು ಚೌಕಾಕಾರಗಳಲ್ಲಿ ಬಡಾವಣೆಯಲ್ಲಿನ ಮನೆಗಳನ್ನು
ಇಲ್ಲಿನ ಜನಕ್ಕೆ ಹಂಚಲಾಗಿತ್ತು. ಈಚೆಗೆ ೧೯೯೮ರಲ್ಲಿ ಬೆಂಗಳೂರು ಮಹಾನಗರ ಪಾಲಿಕೆಯು ಇದಕ್ಕೆ
ಹೊಯ್ಸಳ ನಗರ ಎಂದು ನಾಮಕರಣ ಮಾಡಿತು.
ಅಲ್ಲಿನ ಬಹುತೇಕ ನಿವಾಸಿಗಳು ಕಥೋಲಿಕ
ಕ್ರೈಸ್ತರಾಗಿದ್ದ ಹಿನ್ನೆಲೆಯಲ್ಲಿ ೧೮೭೩ರಲ್ಲಿ ಅಂದಿನ ನಗರಸಭೆಯು ಒಂದು ಚಿಕ್ಕ ನಿವೇಶನವನ್ನು
ಅವರ ಪ್ರಾರ್ಥನಾ ಚಟುವಟಿಕೆಗಳಿಗಾಗಿ ಮೀಸಲಿರಿಸಿ ಅದರ ಹಕ್ಕುಪತ್ರಗಳನ್ನು ವಂದನೀಯ ಫಾದರ್ ಇ.
ಗಾರ್ನಿಯರ್ ಅವರಿಗೆ ಒಪ್ಪಿಸಿತ್ತು. ಸ್ಥಳೀಯ ನಿವಾಸಿಗಳು ಐಟಿಸಿ ಸಂಸ್ಥೆಯ ನಿವೃತ್ತ ನೌಕರ ಆರ್.
ಎಸ್. ಆರೋಗ್ಯಸ್ವಾಮಿ ಅವರ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸಿಕೊಂಡು, ಆ ನಿವೇಶನದಲ್ಲಿ ಸೋಗೆ
ಮಾಡಿನ ಪುಟಾಣಿ ಚರ್ಚ್ ಕಟ್ಟಿಕೊಂಡು ಪ್ರಾರ್ಥನೆಗಳನ್ನು ಸಲ್ಲಿಸತೊಡಗಿದರು.
ಈ
ಪುಟಾಣಿ ಚರ್ಚು (ಪ್ರಾರ್ಥನಾಲಯ-ಚಾಪೆಲ್) ಸಂತ ಫ್ರಾನ್ಸಿಸ್ ಕ್ಷೇವಿಯರ್ ಚರ್ಚಿನ ಧರ್ಮಕೇಂದ್ರದ
(ಇದು ಇಂದಿನ ಸಂತ ಫ್ರಾನ್ಸಿಸ್ ಕ್ಷೇವಿಯರ್ ಪ್ರಧಾನಾಲಯ. ಕ್ಷೇವಿಯರ್ ಹೆಸರು ಚೌರಪ್ಪನಾಗಿ
ಭಾರತೀಕರಣಗೊಂಡಿದೆ) ವ್ಯಾಪ್ತಿಗೆ ಸೇರಿತ್ತು. ಎತ್ತರ ಪ್ರದೇಶದಲ್ಲಿದ್ದ ಅದನ್ನು ಜನ ದಿಣ್ಣೆ ಮಠ
ಎಂದು ಕರೆಯುತ್ತಿದ್ದರು. ಅದನ್ನು ಕೆಡವಿ ಎರಡನೇ ಬಾರಿ ಕಟ್ಟುವಾಗ ಅದರ ಮೇಲು ಉಸ್ತುವಾರಿಯನ್ನು
ಮೇಸ್ತ್ರಿ ಚೌರಪ್ಪ ವಹಿಸಿಕೊಂಡಿರುತ್ತಾರೆ. ಗುಮ್ಮಟ ಎರಡು ಮೂರು ಬಾರಿ ನಿಲ್ಲದೇ ಬಿದ್ದಿರುತ್ತದೆ.
ಆಗ ಸೇನೆಗೆ ವಿವಿಧ ಸೌಲತ್ತುಗಳನ್ನು ಒದಗಿಸಲು ಬೆಂಗಳೂರಿಗೆ ಬಂದು ನೆಲೆಸಿದ್ದ ಕ್ರೈಸ್ತ
ವಿಶ್ವಾಸಿ ರತನ್ ಸಿಂಗ್ ಅಂತಿಮ ಘಟ್ಟದಲ್ಲಿ ಮಧ್ಯದ ಗುಮ್ಮಟ ಕಟ್ಟೋಣದ ಜವಾಬ್ದಾರಿ ವಹಿಸಿ
ನಿರ್ವಹಿಸುತ್ತಾರೆ. ಅವರು ಸಂತ ರಾಕ್ ರ ಹೆಸರಿನಲ್ಲಿ ಒಂದು ಪುಟಾಣಿ ಚರ್ಚು ಕಟ್ಟಿ ಆಗಲೇ ಹೆಸರು
ಮಾಡಿದ್ದರಂತೆ.
ಮುಂದೆ
೧೯೩೪ರ ಸುಮಾರು ಮರ್ಫಿಟೌನಿನ ಚರ್ಚ್ ನಿರ್ಮಾಣ ಸಮಿತಿಯ ಜನ ಪವಾಡ ಪುರುಷ ಸಂತ ವನಚಿನ್ನಪ್ಪರ
ಹೆಸರಿನಲ್ಲಿ ಕಾಯಂ ಚರ್ಚ್ ಕಟ್ಟಡ ಕಟ್ಟಬೇಕೆಂದು ನಿರ್ಧರಿಸಿ ಧಾರಾಳ ದೇಣಿಗೆ ಸಂಗ್ರಹಿಸಿ
ಕಟ್ಟೋಣಕ್ಕೆ ಮುಂದಾದರು. ಪ್ರತಿ ಭಾನುವಾರ ಪ್ರಾರ್ಥನೆ, ಭಜನೆಗಳು ನಡೆಯ ತೊಡಗಿದವು. ಅಂತೆಯೇ
ಮೆರವಣಿಗೆಯನ್ನೂ ಆಯೋಜಿಸಲಾಗುತ್ತಿತ್ತು.
ಅದೇ
ಅವಧಿಯಲ್ಲಿ ೧೮೫೧ರಲ್ಲಿ ಕಟ್ಟಿದ್ದ ಸಂತ ಫ್ರಾನ್ಸಿಸ್ ಕ್ಷೇವಿಯರ್ ಹೆಸರಿನ ಚರ್ಚು ಹೆಚ್ಚಿದ
ವಿಶ್ವಾಸಿಗಳ ಜನಸಂಖ್ಯೆಗೆ ಸಾಲದಾದಾಗ ೧೯೩೨ರಲ್ಲಿ ಅದನ್ನು ಮತ್ತೆ ಕಟ್ಟಲಾಗಿದೆ. ಆಗ ಆ ಚರ್ಚಿನ
ವಿಚಾರಣಾ ಗುರುಗಳಾಗಿದ್ದ ವಂದನೀಯ ಫಾದರ್ ಸರ್ವಂಟನ್ ಅವರನ್ನು ಕಂಡಾಗ, ಅವರು ತಮ್ಮ ಹಳೆಯ ಚರ್ಚಿನ
ಕಟ್ಟಡದ ಕಿಟಕಿ, ಬಾಗಿಲುಗಳನ್ನು ಮರ್ಫಿಟೌನಿನಲ್ಲಿ ಕಟ್ಟಲು ಉದ್ದೇಶಿಸಿದ್ದ ಚರ್ಚ್ ಕಟ್ಟಡಕ್ಕೆ
ಕೊಡುಗೆಯಾಗಿ ನೀಡಿದರು. ಎ. ಸಿ. ಸೌರಿಯಪ್ಪ (ಇದು ತಮಿಳು ಭಾಷೆಯಲ್ಲಿನ ಚೌರಪ್ಪ) ಅವರು ಬಲಿಪೀಠದ
ಕಟ್ಟೆಯನ್ನು ಕೊಡ ಮಾಡಿದರು. ೧೯೩೫ರಲ್ಲಿ ವಂದನೀಯ ಫಾದರ್ ಸರ್ವಂಟನ್ ಅವರು, ಮರ್ಫಿಟೌನಿನ ಲ್ಲಿ
ನೂತನವಾಗಿ ನಿರ್ಮಿಸಲಾದ ಪುಟಾಣಿ ಚರ್ಚ್ ಅನ್ನು ಉದ್ಘಾಟಿಸಿದರು.
ಇಷ್ಟಾದ
ನಂತರ, ಪ್ರತಿವರ್ಷ ಜನವರಿ ೧೪ರಂದು ಮರ್ಫಿಟೌನಿನ ಲ್ಲಿರುವ ಸಂತ ವನಚಿನ್ನಪ್ಪರ ಪುಟಾಣಿ ಚರ್ಚಿನ
ಪಾಲಕ ಸಂತ, ಸಂತ ವನಚಿನ್ನಪ್ಪರ ಹಬ್ಬವನ್ನು ಆಚರಿಸುವ ಪದ್ಧತಿ ಆರಂಭವಾಯಿತು. ಬೆಳಿಗ್ಗೆ ಹಬ್ಬದ
ದೊಡ್ಡ ಪಾಡುಪೂಜೆ ನಡೆದರೆ, ಸಂಜೆ ಸಂತ ವನಚಿನ್ನಪ್ಪ ಅವರ ಸ್ವರೂಪವನ್ನು ಹೊತ್ತ ತೇರಿನ ಮೆರವಣಿಗೆ
ನಡೆಯುತ್ತಿತ್ತು. ಈ ಹಬ್ಬಕ್ಕೆ ಹಲಸೂರು, ದಂಡು (ಈಗಿನ ಶಿವಾಜಿನಗರ), ಪಾಪರೆಡ್ಡಿಪಾಳ್ಯ,
ವೆಂಕಟೇಶಪುರ, ಲಿಂಗರಾಜಪುರ, ಕಮ್ಮನಹಳ್ಳಿಗಳಿಂದ ಕಥೋಲಿಕ ಕ್ರೈಸ್ತ ವಿಶ್ವಾಸಿಗಳು ಧಾವಿಸಿ
ಬರುತ್ತಿದ್ದರು. ಅವರ ಜತೆಗೆ ಇತರ ಕೋಮಿನವರೂ ಈ ಸಂಭ್ರಮದ ವಾರ್ಷಿಕ ಉತ್ಸವದಲ್ಲಿ
ಭಾಗವಹಿಸುತ್ತಿದ್ದರು.
ಮುಂದೆ ೧೯೩೮ರಲ್ಲಿ ಹಲಸೂರಿನ ಲೂರ್ದು
ಮಾತೆಯಾಲಯವು ಪೂರ್ಣ ಪ್ರಮಾಣದ ಧರ್ಮಕೇಂದ್ರವಾಗಿ ರೂಪತಳೆದಾಗ, ಸಮೀಪದ ಮರ್ಫಿಟೌನಿನಲ್ಲಿದ್ದ ಸಂತ
ವನಚಿನ್ನಪ್ಪರ ಪುಟಾಣಿ ಚರ್ಚು ಅದರ ಉಪಕೇಂದ್ರವಾಯಿತು.
ಆಗ ವಂದನೀಯ ಅಲ್ಬರ್ಟ್ ಮಸ್ಕರನಿಹಾಸ್ ಅವರು ಹಲಸೂರು ಧರ್ಮಕೇಂದ್ರದ ವಿಚಾರಣಾ
ಗುರುಗಳಾಗಿದ್ದರು. ಅವರು, ಮೊದಮೊದಲು ತಿಂಗಳಿಗೊಮ್ಮೆ, ನಂತರ ಹದಿನೈದು ದಿನಗಳಿಗೊಮ್ಮೆ ಈ ಸಂತ
ವನಚಿನ್ನಪ್ಪರ ಪುಟಾಣಿ ಚರ್ಚಿನಲ್ಲಿ ಪೂಜೆ ನೀಡ ತೊಡಗಿದರು. ನಂತರ, ಬಂದ ವಿಚಾರಣಾ ಗುರು ವಂದನೀಯ
ಆಶೀರ್ವಾದಪ್ಪ ಅವರು, ಪ್ರತಿ ಭಾನುವಾರ ಬಲಿಪೂಜೆ ಕೊಡುವುದಕ್ಕೆ ಆಸಕ್ತಿ ತೋರಿದರು. ಕಾಲಾನಂತರ
೧೯೬೭ರಲ್ಲಿ ಬೆಂಗಳೂರು ಧರ್ಮಕ್ಷೇತ್ರದ ಮಹಾಧರ್ಮಾಧ್ಯಕ್ಷ ಅತಿ ವಂದನೀಯ ಡಿ. ಎಸ್. ಲೂರ್ದಸ್ವಾಮಿ
ಅವರ ಅವಧಿಯಲ್ಲಿ ಸಂತ ವನಚಿನ್ನಪ್ಪರ ಹೆಸರಿನ ಪುಟಾಣಿ ಚರ್ಚು ಪೂರ್ಣ ಪ್ರಮಾಣದ ಚರ್ಚಿನ ಅಸ್ತಿತ್ವ
ಪಡೆದು ವಿಚಾರಣಾ ಕೇಂದ್ರವಾಯಿತು.
ಆ ಸಂದರ್ಭದಲ್ಲಿ ಮರ್ಫಿಟೌನಿನ ಸಂತ
ವನಚಿನ್ನಪ್ಪರ ಚರ್ಚು ಹೆಸರುಬದಲಿಸಿಕೊಂಡು ಒಳ್ಳೆಯ ಕುರುಬ (ದಿ ಗುಡ್ ಷೆಫರ್ಡ್)ನ ಚರ್ಚು ಎಂಬ
ಹೆಸರು ಪಡೆಯಿತು. ಆಗ, ವಂದನೀಯ ಫಾದರ್ ಜಾನ್. ಎಫ್. ರೋಜಾರಿಯೊ ಈ ಚರ್ಚಿನ ಮೊದಲ ವಿಚಾರಣಾ
ಗುರುಗಳಾಗಿದ್ದರು. ಮುಂದೆ ೧೯೯೫ರಲ್ಲಿ ಈ ಚರ್ಚಿನ ಆರನೇ ವಿಚಾರಣಾ ಗುರುಗಳಾಗಿದ್ದ ವಂದನೀಯ ಫಾದರ್
ಮರಿಯ ಪ್ರಗಾಸಂ ಅವರು, ಪುರಾತನ ಶೈಲಿಯ ಹೆಂಚಿನ ಮನೆಯ ಗೋಪುರದ ಚರ್ಚ್ ಕಟ್ಟಡವನ್ನು ಕೆಡವಿ,
ಆಧುನಿಕ ಶೈಲಿಯ ಚರ್ಚ್ ಕಟ್ಟಡಕ್ಕೆ ಮುಂದಾದರು. ಭಕ್ತಾದಿಗಳಿಂದ, ದಾನಿಗಳಿಂದ ಹಣ ಸಂಗ್ರಹಿಸಿ
ನಿರ್ಮಿಸಲಾದ ನೂತನ ಚರ್ಚ್ ಕಟ್ಟಡವನ್ನು ೨೦೦೦ರಲ್ಲಿ ಬೆಂಗಳೂರು ಮಹಾಧರ್ಮಕ್ಷೇತ್ರದ ಅಂದಿನ
ಮಹಾಧರ್ಮಾಧ್ಯಕ್ಷ ಅತಿವಂದನೀಯ ಇಗ್ನೇಷಿಯಸ್ ಪೌಲ್ ಪಿಂಟೋ ಅವರು ಆಶೀರ್ವದಿಸಿ ಉದ್ಘಾಟಿಸಿದರು. ಈ
ಉತ್ತಮ ಕುರುಬನ ದೇವಾಲಯವಾದ ಹಲಸೂರಿನ ಹೊಯ್ಸಳನಗರದ ಸಂತ ವನಚಿನ್ನಪ್ಪರ ದೇವಾಲಯದಲ್ಲಿ ಇದುವರೆಗೂ
ಒಟ್ಟು ಹತ್ತು ಜನ ವಿಚಾರಣಾ ಗುರುಗಳು ಸೇವೆ ಸಲ್ಲಿಸಿದ್ದಾರೆ.
ಇಂದಿನ ಒಳ್ಳೆಯ ಕರುಬನ ದೇವಾಲಯವಾದ ಸಂತ
ವನಚಿನ್ನಪ್ಪರ ದೇವಾಲಯದಲ್ಲಿ, ಆರಂಭದಲ್ಲಿ ಪ್ರಾರ್ಥನೆ, ಭಜನೆ, ಮೆರವಣಿಗೆಗಳಿಂದ ವಿಶ್ವಾಸಿಗಳ
ಮನಸಿನಲ್ಲಿ ದೃಢವಾಗಿ ಬೇರುಬಿಟ್ಟಿದ್ದ ಆದರಣೆಗೊಳಗಾಗುತ್ತಿದ್ದ (ಕೃಷಿಕ ಕ್ರೈಸ್ತರು ಮತ್ತು ಕೃಷಿ
ಚಟುವಟಿಕೆಗಳು ಕಣ್ಮರೆಯಾದಂತೆ) ವನಚಿನ್ನಪ್ಪರ ಸ್ವರೂಪ ಇಂದು ಮೂಲೆಗುಂಪಾಗಿದೆ. ಗವಿಯಲ್ಲಿರುವ
ಮಾತೆ ಮರಿಯಳ ಸ್ವರೂಪ ಮತ್ತುಉತ್ತಮ ಕುರುಬ ಯೇಸುಸ್ವಾಮಿಯ ಸ್ವರೂಪಗಳು ಈ ಚರ್ಚಿನಲ್ಲಿ ಹೆಚ್ಚಿನ
ಪ್ರಾಮುಖ್ಯತೆ ಗಳಿಸಿವೆ.
ಇದೇ ಬಗೆಯಲ್ಲಿ ಕಮ್ಮನಹಳ್ಳಿಯಲ್ಲಿದ್ದ ಪ್ರಥಮ
ವನವಾಸಿ ಸಂತ ವನಚಿನ್ನಪ್ಪರ ದೇವಾಲಯ ಈಗ ಸಂತರಾದ ಹತ್ತನೇ ಭಕ್ತಿನಾಥರ ದೇವಾಲಯವಾಗಿ ಹೆಸರು
ಬದಲಿಸಿಕೊಂಡಿದೆ. ಆದರೂ ಅಲ್ಲಿನ ಸ್ಥಳೀಯ ಕಥೋಲಿಕ ಕ್ರೈಸ್ತ ವಿಶ್ವಾಸಿಗಳ ಆಸಕ್ತಿಯಿಂದ ಹಳೆಯ ಸಂತ
ವನಚಿನ್ನಪ್ಪರ ಹೆಸರಿನ ಪುಟಾಣಿ ಚರ್ಚು (ಚಾಪೆಲ್) ಇನ್ನೂ ಅಸ್ತಿತ್ವದಲ್ಲಿದೆ. ವನಚಿನ್ನಪ್ಪರ
ಹೆಸರಿನಲ್ಲಿ ವರ್ಷಕ್ಕೊಮ್ಮೆ ಬೇಡುದಲೆ ನಡೆಸುವುದು, ಸಂತ ವನಚಿನಪ್ಪರ ಸ್ವರೂಪದ ಮೆರವಣಿಗೆ ಮಾಡುವ
ಪರಿಪಾಠ ಅಲ್ಲಿ ಇನ್ನೂ ಜಾರಿಯಲ್ಲಿದೆ.
ರಾಮನಗರ
ತಾಲ್ಲೂಕು ಕನಕಪುರ ಹತ್ತಿರದ ಹಾರೋಬೆಲೆಯಲ್ಲೂ ಈ ಬಗೆಯ ಆಚರಣೆ ಅಸ್ತಿತ್ವದಲ್ಲಿದೆ. ಉತ್ತರ
ಕರ್ನಾಟಕದ ಗದಗಿನ ಸಮೀಪದ ಹಳ್ಳಿಗಳಲ್ಲಿ, ಬಾಗಲಕೋಟೆ ಜಿಲ್ಲೆಯ ಗುಳೇದಗುಡ್ಡ, ಆಸಂಗಿ
ಮೊದಲಾದೆಡೆಗಳಲ್ಲಿ, ಧಾರವಾಡ ಜಿಲ್ಲೆಯ ತುಮರಿಕೊಪ್ಪ ಹಾಗೂ ರಾಯಚೂರು ಜಿಲ್ಲೆಯ ಮುದಗಲ್ಲಿನಲ್ಲೂ
ವನಚಿನ್ನಪ್ಪರ ಆಚರಣೆಗಳನ್ನು ಕಾಣಬಹುದಾಗಿದೆ.
ಎಫ್. ಎಂ. ನಂದಗಾವ್
No comments:
Post a Comment