ಸುಳ್ಳು ಸುದ್ದಿಗಳ ಹಾವಳಿ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ವಾಟ್ಸ್
ಅಪ್, ಫೇಸ್ಬುಕ್, ಟ್ವೀಟರುಗಳು ಇಲ್ಲದ ಕಾಲದಲ್ಲಿ ಬಾಯಿಂದ ಬಾಯಿಗೆ ಅಂಕುಡೊಂಕಾಗಿ ಹರಿದು ವಿರೂಪಗೊಳ್ಳುತ್ತಾ, ಗಾತ್ರದಲ್ಲಿ
ಚಿಕ್ಕದೋ ದೊಡ್ಡದೋ ಆಗಿ ಕುಗ್ಗುತ್ತಾ ಹಿಗ್ಗುತ್ತಾ, ಸತ್ಯದಿಂದ
ದೂರ ಸರಿಯುತ್ತಾ ಪ್ರಸಾರಗೊಳ್ಳುತ್ತಿದ್ದ ಸುದ್ದಿಗಳ ವ್ಯಾಪ್ತಿ ಒಂದು ಹಳ್ಳಿಗೋ, ಊರಿಗೋ ಅಥವಾ
ಒಂದು ಪಟ್ಟಣಕ್ಕೋ
ಸೀಮಿತಗೊಳ್ಳುತ್ತಿತ್ತು. ಆದರೆ ಇಂದು ವಾಟ್ಸ್ ಅಪ್, ಫೇಸ್ಬುಕ್ ಟ್ವೀಟರುಗಳ ಭರಾಟೆಯಲ್ಲಿ ಇಡೀ ಜಗತ್ತಿಗೆ ಕ್ಷಣಮಾತ್ರದಲ್ಲೇ ಸುದ್ದಿ ಹರಿದುಬಿಡುವಷ್ಟು ವೇಗ ಕಂಡುಕೊಂಡಿದೆ. ಇಡೀ ಜಗತ್ತನ್ನು ಒಳ್ಳೆ ಸುದ್ದಿಗಳೇ ಆಕ್ರಮಿಸಿದರೆ ಯಾರಿಗೂ ಎಳ್ಳಷ್ಟೂ ತೊಂದರೆ ಆಗುತ್ತಿರಲಿಲ್ಲ. ಸಮಸ್ಯೆಯೆಂದರೆ ಯಾವುದೇ ಅಡೆತಡೆಯಿಲ್ಲದೆ ಅವು ಹರಡುತ್ತಿರುವ
ರೀತಿ ಮತ್ತು ಅವುಗಳಿಂದ ಅಗುತ್ತಿರುವ ಅನಾಹುತಗಳು. ಕೆಲವು ದಿನಗಳ ಹಿಂದೆ ಮಕ್ಕಳ
ಕಳ್ಳನೆಂದು ಭಾವಿಸಿ ರಾಜಾಸ್ಥಾನದ ಕಾಲುರಾಮ್ ಎನ್ನುವಾತನನ್ನು ಜನರ ಗುಂಪೊಂದು ಥಳಿಸಿ ಹತ್ಯೆ
ಮಾಡಿದ್ದ ಘಟನೆ, ಬೆಂಗಳೂರಿನ ಚಾಮರಾಜಪೇಟೆಯಲ್ಲಿ
ನಡೆದ ಘಟನೆಗಳ ಹಿಂದೆ ವಾಟ್ಸ್ ಅಪ್, ಫೇಸ್ ಬುಕ್ಕಿನಂತಹಾ ಸಾಮಾಜಿಕ ತಾಣಗಳ ವದಂತಿಗಳೇ ಕಾರಣವೆನ್ನಲಾಗಿದೆ. ಇನ್ನೊಂದು ಕಡೆ ಜೈನ ಮುನಿಯೊಬ್ಬರ ಮೇಲೆ ಮುಸಲ್ಮಾನರು ಹಲ್ಲೆ ನಡೆಸಿದ್ದಾರೆ ಎಂಬ
ಸುಳ್ಳು ಸುದ್ದಿಯನ್ನು ಪೊಸ್ಟ್ ಮಾಡಿ ಕೊನೆಗೆ ಆ ಫೇಕ್ ನ್ಯೂಸ್‌ಗೆ ಜನ್ಮ ನೀಡಿದ ಜನಕನನ್ನು
ಬಂಧಿಸಲಾಗಿತ್ತು.
ಮೊನ್ನೆ ನಮ್ಮ ಕಾಲೇಜಿನ ಬಗ್ಗೆ
ಒಂದು ಸುಳ್ಳು ಸುದ್ದಿ ಹಬ್ಬಿಸಿಬಿಟ್ಟಿದ್ದರು. ನಮ್ಮ ಕಾಲೇಜು ಈ ವರ್ಷ ವಿದ್ಯಾರ್ಥಿಗಳಿಲ್ಲದೆ
ಮುಚ್ಚಿ ಹೋಗಿದೆ ಎಂದು ಯಾರೋ ಪುಣಾತ್ಮ ಯಾವ ಸಂಭಾವನೆ ತೆಗೆದುಕೊಳ್ಳದೆ ಸುಳ್ಳು ಹರಡಿಬಿಟ್ಟಿದ.
ಪರಿಚಯವಿದ್ದವರು ಪೋನ್ ಮಾಡಿ "ಫಾದರ್ ನಿಮ್ಮ ಕಾಲೇಜ್ ಕ್ಲೋಸ್ ಆಗಿದೆಯಂತೆ? ಯಾಕೆ ಅಡ್ಮಿಷನ್ಸ್ ಅಗಿಲ್ವಾ? ಹೀಗೆ ಹತ್ತಾರು
ಪ್ರಶ್ನೆಗಳು ಒಮ್ಮೆಲೇ ಬಂದಿದ್ದು ಕೇಳಿ ದಂಗಾಗಿಬಿಟ್ಟೆ. ಇಲ್ಲ ಕಾಲೇಜ್ ಕ್ಲೋಸ್ ಆಗಿಲ್ಲಾ, ಅಡ್ಮಿಷನ್ ಪ್ರಕ್ರಿಯೆ ನಡೆಯುತ್ತಿದೆ
ಎಂದು ಜನರಿಗೆ ತಿಳಿಸಲು ಕಾಲೇಜಿನ ಸುತ್ತ ಮುತ್ತಲಿನ ಜನಜಂಗುಳಿಯ ಸ್ಥಳಗಳಲ್ಲಿ ಪೋಸ್ಟರ್ಸ್/ಭಿತ್ತಿ ಚಿತ್ರಗಳನ್ನು
ಹಾಕಿಸಲು ಸಾವಿರಾರು ರೂಪಾಯಿಗಳನ್ನು ಖರ್ಚು ಮಾಡಬೇಕಾಗಿ ಬಂತು. ಯಾರು ಈ ಸುಳ್ಳು ಸುದ್ದಿಯನ್ನು
ಹಬ್ಬಿಸಿದ್ದು? ಯಾಕಾಗಿ ಈ ಸುದ್ದಿಯು ಹಬ್ಬಿತ್ತು? ಹೀಗೆ ಹುಟ್ಟಿಕೊಂಡ ಹತ್ತಾರು ಪ್ರಶ್ನೆಗಳಿಗೆ
ಉತ್ತರ ಸ್ವಷ್ಟವಾಗಲಿಲ್ಲ.
ಫೇಕ್ ನ್ಯೂಸ್ ಅಥವಾ ಸುಳ್ಳು
ಸುದ್ದಿಯೆಂದರೇನು? ಸಾಧಾರಣವಾಗಿ ಇದು ಅನ್‍ಲೈನ್ ಅಥವಾ ಸಾಂಪ್ರದಾಯಿಕ ಮಾಧ್ಯಮದಲ್ಲಿ ಸುಳ್ಳು
ಅಥವಾ ವಿರೂಪಗೊಂಡ ಮಾಹಿತಿ ಹರಡುವುದನ್ನು ಸೂಚಿಸುತ್ತದೆ. ಸಾಮಾನ್ಯವಾಗಿ ಸುಳ್ಳುಸುದ್ದಿಗಳು ವಿರೂಪಗೊಳಿಸಿದ
ಮಾಹಿತಿಯ ಅಥವಾ ಕಲ್ಪಿತ ಸುಳ್ಳುಗಳ ಆಧಾರದಿಂದ ಹುಟ್ಟಿಕೊಳ್ಳುತ್ತವೆ. ಈ ನಕಲಿ ಸುದ್ದಿಗಳು ಸೈಜ ಸುದ್ದಿಗಳಂತೆ ತಮ್ಮನ್ನೇ ತಾವು
ತೋರಿಸಿಕೊಳ್ಳುವುದರಿಂದ, ನಾನಾ ಧರ್ಮ ಜಾತಿ ಪಂಗಡದ ಜನರಲ್ಲಿರುವ ಕೆಲವೊಂದು ಸಾಮಾಜಿಕ
ಪೂರ್ವಗ್ರಹಿಕೆಗಳಿಗೆ ತಕ್ಕಂತೆ ಸ್ಪಂದಿಸುವುದರಿಂದ, ಹುದುಗಿರುವ ಕೋಪ, ದ್ವೇಷ, ಮತ್ಸರ, ಹತಾಶೆ, ಭಯ ಹೀಗೆ ಮನುಷ್ಯನ ಭಾವನೆಗಳನ್ನು ತನಗೆ
ಇಷ್ಟಬಂದ ರೀತಿಯಲ್ಲಿ ದಬ್ಬಾಳಿಕೆ ಮಾಡಿಕೊಳ್ಳುವ ಸಾಮರ್ಥ್ಯವಿರುವುದರಿಂದ ಸುಳ್ಳು ಸುದ್ದಿಗಳು ತುಂಬಾ
ಪರಿಣಾಮಕಾರಿಯಾಗುತ್ತಿವೆ.
ಈ ಸುಳ್ಳು ಸದ್ದಿಗಳ ಮೂಲ
ಉದ್ದೇಶಗಳೇನು? ರಾಜಕೀಯ ನಿರ್ಧಾರಗಳನ್ನು ಪ್ರಭಾವಿಸುವುದಕ್ಕಾಗಿ, ತಮ್ಮ ಅರ್ಥಿಕ
ಹಿತಾಸಕ್ತಿಯನ್ನು ಕಾಪಾಡಿಕೊಳ್ಳವುದಕ್ಕಾಗಿ, ಅಧಿಕಾರವನ್ನು ಕಬಳಿಸುವುದಕ್ಕಾಗಿ, ಓದುಗರನ್ನು ವಶೀಕರಿಸಿಕೊಳ್ಳಲು, ಉದ್ರೇಕಿಸಲು, ಕೆರಳಿಸಲು ಈ ಸುಳ್ಳುಸುದ್ದಿಗಳು ಹುಟ್ಟಿಕೊಳ್ಳುತ್ತವೆ. ಇಲ್ಲಿ ಹುಟ್ಟಿಕೊಳ್ಳುತ್ತದೆ
ಅನ್ನುವುದಕ್ಕಿಂತ ಹುಟ್ಟಿಸುತ್ತಾರೆ ಎನ್ನಬಹುದೇನೋ!!
ಈ ನಕಲಿ ಸುದ್ದಿಗಳು
ಕಾಳ್ಗಿಚ್ಚಿನಂತೆ ಶರವೇಗವಾಗಿ ಹರಡುತ್ತವೆ. ಅವುಗಳಿಗೆ ತಡೆಗೋಡೆಗಳನ್ನು ಕಟ್ಟುವುದೇ
ಕಷ್ಟವಾಗಿಬಿಡುತ್ತದೆ. ಕೆಲವೊಮ್ಮೆ ಅವುಗಳನ್ನು ವಿರೋಧಿಸಲು ಸಹ ನಮಗೆ ಶಕ್ತಿ ಸಾಲದಾಗುತ್ತದೆ. ಇಂತಹ
ಸುಳ್ಳು ಸುದ್ದಿಗಳ ನಿಜಗುಣ ಮತ್ತು ಅವು ಧರಿಸಿಕೊಂಡಿರುವ ಮುಖವಾಡಗಳನ್ನು ಕಳಚಿ ಜನರಿಗೆ
ತಿಳಿಸುವುದು ಕೂಡ ಪ್ರಯಾಸವಾಗಿಬಿಡುತ್ತದೆ. ನಿರಾಧಾರ ಸುದ್ದಿಗಳಾದ ಇವು ದ್ವೇಷ ಹುಟ್ಟಿಸುತ್ತವೆ, ಮನುಷ್ಯತ್ವವನ್ನು
ಮರೆಸುತ್ತವೆ. ಇತರರನ್ನು
ಶತ್ರುಗಳಾಗಿಸುತ್ತವೆ. ದ್ವೇಷವನ್ನು ಕೆರಳಿಸುತ್ತವೆ.
ಮೊನ್ನೆ ನನ್ನ ಗೆಳೆಯರೊಬ್ಬರು
ಸ್ವಿಸ್ ಬ್ಯಾಂಕ್‍ನಲ್ಲಿರವ ಕಪ್ಪು ಹಣವನ್ನು ಇಟ್ಟಿರುವವರ ಹೆಸರುಗಳುಳ್ಳ ಪಟ್ಟಿಯನ್ನು ವಾಟ್ಸಾಪ್ ಗುಂಪಿನಲ್ಲಿ ಫಾರ್ವರ್ಡ್ ಮಾಡಿ ನಗೆಪಾಟಲಿಗೆ
ಗುರಿಯಾದರು. ಕೆಲವರಂತೂ ಒಂದು ಹೆಜ್ಜೆ
ಮುಂದೆ ಹೋಗಿ ನಿರ್ದಯವಾಗಿ ಗೆಳೆಯನನ್ನು ತರಾಟೆಗೆ ತೆಗೆದುಕೊಂಡರು. ಆ ಪಟ್ಟಿ ಅಸಮರ್ಥನೀಯ ಸುದ್ದಿಯಾಗಿತ್ತು. ರಾಜಕೀಯ ಲಾಭಕ್ಕಾಗಿ ಒಂದು ರಾಜಕೀಯ ಪಕ್ಷವು ಇನ್ನೊಂದು ಪಕ್ಷದ
ನಾಯಕರನ್ನು ಗುರಿಯಾಗಿಸಿಕೊಂಡು ವ್ಯಾಪಕವಾಗಿ ಹರಡಿಸಿದ ಸುದ್ದಿಯಾಗಿತ್ತು.
ಆದ್ದರಿಂದ ಈ ಸುಳ್ಳು ಸುದ್ದಿಗಳ
ಬಗ್ಗೆ ನಾವು ಎಚ್ಚರದಿಂದ ಇರಬೇಕು. ಹೊರಗೆ ಕುರಿಯ ವೇಷದಲ್ಲಿ ಬಂದರೂ ಒಳಗೆ ಅವು ಕಿತ್ತುತಿನ್ನುವ
ತೋಳಗಳು. ಅವುಗಳ ಫಲದಿಂದ ಅವುಗಳ ವರ್ತನೆಗಳಿಂದ ಅವುಗಳನ್ನು ಗುರುತು ಹಚ್ಚಬಹುದು. ಫೇಕ್ ನ್ಯೂಸ್ ಪ್ಯಾಕ್ಟರಿಗಳ ಮೇಲೆ
ನಿಗಾವಹಿಸಬೇಕು. ಜನರಿಗೆ ಸುಳ್ಳು ಸಂಗತಿಗಳನ್ನು ನೀಡುವ ಮಂದಿಗೆ ಬುದ್ದಿ ಕಲಿಸಬೇಕು. ಮಾಧ್ಯಮಗಳು
ಸುಳ್ಳು ಸುದ್ದಿಗಳ ಬಗ್ಗೆ ಜಾಗೃತಿ ಮೂಡಿಸಲು ಅನೇಕ ಕ್ರಮಗಳು ಕೈಗೊಂಡಿವೆ. ಅವುಗಳ ಬಗ್ಗೆ
ತಿಳಿಯುವುದು ಕೂಡ ಅತ್ಯವಶ್ಯಕ. ಸುಳ್ಳು
ಮತ್ತು ನೈಜ ಸುದ್ದಿಗಳನ್ನು ಬೇರ್ಪಡಿಸುವ ವಿವೇಚನೆ ನಮ್ಮಲ್ಲಿರಬೇಕು
ಮತ್ತು ಜನರಲ್ಲೂ ಅದನ್ನು ಬೆಳೆಸಬೇಕು.
ಸುದ್ದಿಗಳ ಪ್ರತಿಫಲದಿಂದ
ಸುದ್ದಿಗಳ ಗುಣವನ್ನು ನಾವು ಅಳೆಯಬೇಕು. ಕ್ರಿಸ್ತ ಹೇಳಿದಂತೆ ಮುಳ್ಳುಕಳ್ಳಿಯಲ್ಲಿ ದ್ರಾಕ್ಷಿ
ಕೊಯ್ಯುವುದುಂಟೇ? ಮದ್ದುಗುಣಿಕೆಯಲ್ಲಿ ಅಂಜೂರ ಕೀಳುವುದುಂಟೇ? ಅದರಂತೆಯೇ ಒಳ್ಳೆಯ ಮರ ಒಳ್ಳೆಯ
ಹಣ್ಣನ್ನೂ ಕೆಟ್ಟ ಮರವು ಕೆಟ್ಟ ಹಣ್ಣನ್ನೂ ಕೊಡುತ್ತದೆ. ಸುದ್ದಿಗಳು ದ್ವೇಷ ಹುಟ್ಟಿಸಿ ಜನರನ್ನು ಧ್ರುವೀಕರಿಸಿದರೆ, ಜನರ ನಡುವಿನ
ಐಕ್ಯತೆಯನ್ನು ನಾಶಪಡಿಸಿದರೆ ಅವು ಅಪ್ಪಟ ಸುಳ್ಳು ಸುದ್ದಿಗಳೇ. ಕೆಟ್ಟ ಮರವನ್ನು ಕಡಿದು
ಬೆಂಕಿಯಲ್ಲಿ ಹಾಕುವಂತೆ ಸುಳ್ಳು ಸುದ್ದಿಗಳನ್ನು ವ್ಯವಸ್ಥಿತವಾಗಿ ರೂಪಿಸುವ ಫೇಕ್ ನ್ಯೂಸ್ ಪ್ಯಾಕ್ಟರಿಗಳನ್ನು ನಾವು
ನಾಶ ಮಾಡಬೇಕು. ಅವುಗಳ ಮೇಲೆ ಕಠಿಣ ಕ್ರಮವನ್ನು ಜರುಗಿಸಲು ಸರ್ಕಾರಗಳನ್ನು ಒತ್ತಾಯಿಸಬೇಕು. ಪೂಜಾರಿಯಾಗಲೀ ರಾಜಕೀಯ ನಾಯಕರಾಗಲೀ ಸುಳ್ಳು ಯಾರಿಂದ ಬಂದರೂ ಸುಳ್ಳೇ. ಸುಳ್ಳು ಪ್ರವಾದಿಗಳನ್ನು ಅವರ ನಡೆಯಿಂದ ಗುರುತು ಹಚ್ಚಬಹುದು. ನೈಜಸುದ್ದಿಗಳು ಸಮರ್ಥನೀಯ. ಅವು ಒಳ್ಳೆತನವನ್ನು ಬೆಳೆಸುತ್ತವೆ . ಸಂಬಂಧಗಳನ್ನು ವರ್ಧಿಸುತ್ತವೆ
. ಮನುಷ್ಯತ್ವದ ಬಿಂಬವಾಗಿರುತ್ತವೆ.
ಶಾಂತಿಯನ್ನು ಕಾಪಾಡುವ, ಪ್ರಚಾರ
ಮಾಡುವ ಪತ್ರಿಕೋದ್ಯಮವನ್ನು ಬೆಳೆಸೋಣ. ಸುಳ್ಳುತನದ, ಘೋಷಣೆಗಳ, ಅಬ್ಬರಿಸುವ, ಕೂಗಾಟಗಳ, ಉದ್ರೇಕಕಾರಿ, ಪ್ರಚೋದನಕಾರಿ ಪತ್ರಿಕೋದ್ಯಮವನ್ನು ಪ್ರಶ್ನಿಸೋಣ. ಜನರಿಂದ ಜನರಿಗಾಗಿ ಪತ್ರಿಕೋದ್ಯಮ
ಇರುವಂತೆ ನೋಡಿಕೊಳ್ಳೋಣ. ದೀನ ದಲಿತರ, ದನಿರಹಿತರ ದನಿಯಾಗುವ
ಪತ್ರಿಕೋದ್ಯಮವನ್ನು ಬೆಂಬಲಿಸೋಣ.
ಒಂದು ಕಥೆ ನೆನಪಾಗುತ್ತಿದೆ. ಸತ್ಯ
ಮತ್ತು ಸುಳ್ಳು ನದಿಗೆ ಸ್ನಾನಕ್ಕೆ ಹೋದವಂತೆ. ಸತ್ಯ ಇನ್ನೂ ಸ್ನಾನ ಮಾಡುತ್ತಿರುವಾಗಲೇ ಸುಳ್ಳು
ಬೇಗ ಸ್ನಾನ ಮುಗಿಸಿ ನೀರಿನಿಂದ ಹೊರಗೆ ಬಂದು ಸತ್ಯ ಕಳಚಿಟ್ಟಿದ್ದ ಉಡುಪನ್ನು ಹಾಕಿಕೊಂಡು
ಹೋಯ್ತು. ಪಾಪ ಸತ್ಯ ವಿಧಿಯಿಲ್ಲದೇ ಸುಳ್ಳಿನ ಉಡುಪು ತೊಟ್ಟುಕೊಂಡೇ ಓಡಾಡಬೇಕಾಗಿದೆ ಈಗಲೂ!
ಸತ್ಯಕ್ಕೆ ಅಭಿಮುಖವಾಗಲು ಪ್ರಾರ್ಥನೆ
ದೇವರೇ ಶಾಂತಿಯ ಸಾಧನವಾಗಿಸು
ಇನ್ನೊಬ್ಬರ ಬಗ್ಗೆ ಮಾತನಾಡುವಾಗ
ಅವರು ನಮ್ಮ ಸಹೋದರ, ಸಹೋದರಿಯರು ಎಂದರಿತು
ಮಾತನಾಡಲು ಕಲಿಸು
ನಮ್ಮ ಮಾತುಗಳು ಜಗತ್ತಿನಲ್ಲಿ ಒಳ್ಳೆತನದ ಬೀಜಗಳಾಗಲಿ
ಎಲ್ಲಿ ಕೂಗಾಟವಿದೆಯೋ ಅಲ್ಲಿ ಕೇಳಿಸಿಕೊಳ್ಳುವ ಪ್ರವೃತ್ತಿ ಬೆಳೆಸಲಿ
ಎಲ್ಲಿ ಗೊಂದಲವಿದೆಯೋ ಅಲ್ಲಿ ಸಾಮರಸ್ಯವನ್ನು ಪ್ರೇರೇಪಿಸಲಿ
ಎಲ್ಲಿ ಅಸ್ಪಷ್ಟತೆ ಇದೆಯೋ ಅಲ್ಲಿ ಸ್ವಷ್ಟತೆ ತರಲಿ
ಎಲ್ಲಿ ವಿಭಜನೆ ಇದೆಯೋ ಅಲ್ಲಿ ಐಕ್ಯತೆಯ ಮೂಡಿಸಲಿ
ಎಲ್ಲಿ ಹಗೆತನವಿದೆಯೋ ಅಲ್ಲಿ ಗೌರವಿಸುವುದನ್ನು ಕಲಿಸಲಿ
ಎಲ್ಲಿ ಸಂಶಯವಿದೆಯೋ ಅಲ್ಲಿ ನಂಬಿಕೆ ವಿಶ್ವಾಸವನ್ನು ಎಚ್ಚರಗೊಳಿಸಲಿ
ಎಲ್ಲಿ ಟೊಳ್ಳುತನವಿದೆಯೋ ಅಲ್ಲಿ ಪ್ರಶ್ನೆಗಳ ಕೇಳಲಿ
ಎಲ್ಲಿ ಸುಳ್ಳುತನವಿದೆಯೋ ಅಲ್ಲಿ ಸತ್ಯವನ್ನು ತರಲಿ..
No comments:
Post a Comment