Friday, 5 April 2019

ನಾವು ಕ್ರೈಸ್ತರು, ನಮ್ಮಲ್ಲೆಷ್ಟು ಪಂಗಡಗಳು? ನಾವೆಲ್ಲರೂ ಒಂದೆಯೇ? - ಎಫ್.ಎಂ.ನಂದಗಾವ್.


ಸ್ಥೂಲವಾಗಿ ಹೇಳುವುದಾದರೆ, ಕ್ರೈಸ್ತರಲ್ಲಿ ಎರಡು ಪ್ರಮುಖ ಪಂಗಡಗಳಿವೆ ಎಂದು ನಾವು ಅಂದು ಕೊಂಡಿದ್ದೇವೆ. ಭಾರತೀಯರಾದ ನಮ್ಮ ತಿಳುವಳಿಕೆಯ ಆಧಾರದ ಮೇಲೆ ಕ್ರೈಸ್ತರು ಎಂದರೆ, ಕಥೋಲಿಕ ಕ್ರೈಸ್ತರು ಮತ್ತು ಪ್ರೊಟೆಸ್ಟೆಂಟ್ ಕ್ರೈಸ್ತರು ಎಂದು ನಾವು ಲೆಕ್ಕ ಹಾಕುತ್ತೇವೆ. ಕಥೋಲಿಕ ಕ್ರೈಸ್ತರು ರೋಮಿನ ಬಿಷಪರನ್ನು ಪೋಪರು ಅಥವಾ ಜಗದ್ಗುರುಗಳು ಎಂದು ಗುರುತಿಸಿ ಗೌರವಿಸುತ್ತಾರೆ. ಕಥೋಲಿಕ ಧರ್ಮಸಭೆಯ ನೀತಿನಿಯಮಾವಳಿಗಳು ರೋಮಿನಿಂದಲೇ ರೂಪ ತಳೆಯುತ್ತವೆ. ಪ್ರೊಟೆಸ್ಟೆಂಟರಲ್ಲಿ ನೂರಾರು, ಸಾವಿರಾರು ಪಂಗಡಗಳಿವೆ. ಅವರಲ್ಲಿ ಪೋಪರಂತೆ ಪರಮಾಧಿಕಾರದ ಜಗದ್ಗುರುಗಳಿಲ್ಲ. ಅವರಲ್ಲಿ ಹಲವಾರು ಪಂಗಡಗಳವರು ಕೆಲವೊಂದು ದೇಶಗಳಲ್ಲಿ ಒಕ್ಕೂಟಗಳನ್ನು ರಚಿಸಿಕೊಂಡು ತಮ್ಮ ಸಂಖ್ಯಾಬಲವನ್ನು ಪ್ರದರ್ಶಿಸುತ್ತಾರೆ. 

ನಾವು ನಮ್ಮ ತಿಳಿವಳಿಕೆಯ ಪರಿಧಿಯಿಂದಲೇ ಎಲ್ಲವನ್ನೂ ನೋಡುವುದರಿಂದ ನಮಗೆ ತಿಳಿದಿದ್ದಷ್ಟೇ ಜಗತ್ತು ಎಂದುಕೊಂಡಿರುತ್ತೇವೆ. ಆದರೆ, ಜಗತ್ತು ವಿಶಾಲವಾಗಿದೆ. ನಮ್ಮ ಅರಿವಿನ ಪರಿಧಿಗೆ ಸೇರದ ಜಗತ್ತಿನಲ್ಲಿ ಕ್ರೈಸ್ತರು ಎಂದರೆ, ಕೇವಲ ಕಥೋಲಿಕರು ಮತ್ತು ಪ್ರೊಟೆಸ್ಟೆಂಟ್ ಕ್ರೈಸ್ತರಷ್ಟೇ ಕ್ರೈಸ್ತರಲ್ಲ, ಇನ್ನೂ ಹಲವಾರು ಪಂಗಡದ ಕ್ರೈಸ್ತರನ್ನು ನಾವು ಕಾಣಬಹುದಾಗಿದೆ. ಅದಕ್ಕಾಗಿ ನಾವು ಸ್ವಲ್ಪ ಇತಿಹಾಸವನ್ನು ಅರಿತುಕೊಳ್ಳುವುದು ಸೂಕ್ತವೆನಿಸುತ್ತದೆ. 

ಕ್ರೈಸ್ತ ಪಂಗಡಗಳನ್ನು ಅವುಗಳ ಆಡಳಿತ ವ್ಯವಸ್ಥೆ, ಅವುಗಳ ನಾಯಕತ್ವ ಮತ್ತು ತತ್ವಾದರ್ಶಗಳ ಹಿನ್ನೆಲೆಯಲ್ಲಿ ವಿವಿಧ ಗುಂಪುಗಳಾಗಿ ವಿಂಗಡಿಸಬಹುದಾಗಿದೆ. ಕೆಲವೊಮ್ಮೆ ಅವು ತಮ್ಮನ್ನು ತಾವು ಧರ್ಮಸಭೆ (ಚರ್ಚು) ಅಥವಾ ಧಾರ್ಮಿಕ ಬಾಂಧವ್ಯದ ಒಡನಾಡಿಗಳ ಕೂಟ ಎಂದು ಕರೆದುಕೊಳ್ಳುವುದು ಉಂಟು. ಆದಿಯಲ್ಲಿ ಕ್ರೈಸ್ತರು ಪೌರಸ್ತ್ಯ ಮತ್ತು ಪಾಶ್ಚಿಮಾತ್ಯ ಧರ್ಮಸಭೆ ಎಂಬ ಗುಂಪಿನಲ್ಲಿ ಹಂಚಿಕೆಯಾಗಿದ್ದರು. ಪೌರಸ್ತ್ಯ ಚರ್ಚುಗಳು ತಮ್ಮನ್ನು ಮೂಲ ಕ್ರೈಸ್ತರು ಎಂದು ಹೇಳಿಕೊಳ್ಳುತ್ತಾರೆ. ಅವರನ್ನು ಸಂಪ್ರದಾಯಸ್ಥ ಕ್ರೈಸ್ತರು ಎಂದೂ ಕರೆಯಲಾಗುತ್ತದೆ. ಅವರಂತೆ, ಸಂತ ರಾಯಪ್ಪರೇ ತಮ್ಮ ಮೂಲ, ತಮ್ಮದೇ ಮೂಲ ಕ್ರೈಸ್ತ ಧರ್ಮಸಭೆ ಎಂದು ಹೇಳಿಕೊಳ್ಳುವ ರೋಮಿನಲ್ಲಿ ಪ್ರಧಾನ ನೆಲೆಹೊಂದಿರುವ ವಿಶ್ವವ್ಯಾಪಿ ಪಾಶ್ಚಿಮಾತ್ಯ ಧರ್ಮಸಭೆಯನ್ನು ಪಾಶ್ಚಿಮಾತ್ಯ ಚರ್ಚು ಅಥವಾ ರೋಮನ್ ಕಥೊಲಿಕ ಧರ್ಮಸಭೆ ಎಂದು ಕರೆಯಲಾಗುತ್ತದೆ. 

"ನನ್ನ ಕುರಿಗಳನ್ನು ಕಾಯಿ, ..ನನ್ನ ಕುರಿಗಳನ್ನು ಮೇಯಿಸು" - ಯೋವಾನ್ನನ ಶುಭಸಂದೇಶ-21ನೇ ಅಧ್ಯಾಯ 15ರಿಂದ 19ರವರೆಗಿನ ಚರಣಗಳಲ್ಲಿ ಪ್ರಭು ಯೇಸುಸ್ವಾಮಿ ತಮ್ಮ ಈ ಮಾತುಗಳ ಮೂಲಕ ತಮ್ಮ ಪ್ರೇಷಿತ ಶಿಷ್ಯ ರಾಯಪ್ಪ (ಪೇತ್ರ-ಪೀಟರ್)ರನ್ನು ತಮ್ಮ ಉತ್ತರಾಧಿಕಾರಿಯಾಗಿ ನಿಯಮಿಸಿದರು. ಅದು ನಿರಂತರವಾಗಿ ರೋಮಿನ ಮೇತ್ರಾಣಿಗಳಿಂದ ಪರಂಪರಾಗತವಾಗಿ ಮುಂದುವರಿದುಕೊಂಡು ಬಂದಿದೆ ಎಂಬುದು ಕಥೋಲಿಕ ಕ್ರೈಸ್ತರ ವಿಶ್ವಾಸ. ಇವರಿಬ್ಬರಲ್ಲಿ ಮತ್ತೆ ಹಲವಾರು ಒಳಪಂಗಡಗಳೂ ಇವೆ. ಉದಾಹರಣೆಗೆ, ಪೌರಸ್ತ್ಯ ಸಂಪ್ರದಾಯಸ್ಥ ಕ್ರೈಸ್ತ ಧರ್ಮಸಭೆಯಲ್ಲಿ- ಕಾಪ್ಟಿಕ್, ಇಥಿಯೋಪಿಯನ್, ಆರ್ಮೆನಿಯನ್, ಸಿರಿಯಾಕ್, ಎರಿಟ್ರೆನ್, ಭಾರತದ ಮಲಂಕರ- ಕ್ರೈಸ್ತ ಧರ್ಮಸಭೆಗಳು ಸೇರುತ್ತವೆ. 

ಪೌರಸ್ತ್ಯ ಮತ್ತು ಪಾಶ್ಚಿಮಾತ್ಯ ಕ್ರೈಸ್ತ ಧರ್ಮಸಭೆಗಳು ಒಂದೇ ಮೂಲದಲ್ಲಿ ಆರಂಭವಾದರೂ, ರಾಜಕೀಯ, ದೈವಶಾಸ್ತ್ರದ ವಿವರಣೆ ಹಾಗೂ ತಲೆಮಾರುಗಳ ನಡುವಿನ ವ್ಯತ್ಯಾಸಗಳು ಹಾಗೂ ಭಿನ್ನವಾದ ನಡಾವಳಿಗಳ ಕಾರಣ ಅವು ಬೇರೆ ಬೇರೆ ಅಸ್ತಿತ್ವ ಪಡೆದುಕೊಂಡವೆಂದು ಇತಿಹಾಸದ ಪುಟಗಳು ಸ್ಪಷ್ಟಪಡಿಸುತ್ತವೆ. 

ಸದ್ಯಕ್ಕೆ ವಿಶ್ವವ್ಯಾಪಿ ಹರಡಿರುವ ಕ್ರೈಸ್ತರ ಪಂಗಡಗಳಲ್ಲಿ ಸಂಖ್ಯಾಬಲದಲ್ಲಿ ಕಥೋಲಿಕರು, ಪೌರಸ್ತ್ಯರು, ಪ್ರೊಟೆಸ್ಟೆಂಟರಾದ ಲೂಥರನ್ಸ್ ,ಆಂಗ್ಲಿಕನ್ಸ್ ಅಥವಾ ಬ್ಯಾಪ್ಟಿಸ್ಟ್ ಕ್ರೈಸ್ತ ಪಂಗಡಗಳು ಮುಂಚೂಣಿಯಲ್ಲಿವೆ. 

ಕ್ರೈಸ್ತ ಪಂಗಡಗಳು ಬೆಳೆದು ಬಂದ ಬಗೆ 

ಮೊದಲು, ಪವಿತ್ರ ಗ್ರಂಥ ಬೈಬಲ್ಲಿನಲ್ಲಿ ಹೇಳಿರುವಂತೆ (ಮತ್ತಾಯನ ಶುಭಸಂದೇಶ 20ನೇ ಅಧ್ಯಾಯ 20ನೇ ಚರಣ), ‘ಎಲ್ಲಿ ಇಬ್ಬರು ಮೂವರು ನನ್ನ ನಾಮದಲ್ಲಿ ಸೇರಿರುತ್ತಾರೋ, ಅಲ್ಲಿ ನಾನು ಅವರ ಮಧ್ಯೆ ಇರುತ್ತೇನೆ' ಎಂದು ಯೇಸುಸ್ವಾಮಿ ನುಡಿದಂತೆ, ಜನ ತಮ್ಮ ಪಾಡಿಗೆ ತಾವು ಯೇಸುಸ್ವಾಮಿಯ ಹೆಸರಿನಲ್ಲಿ ಸೇರಿಕೊಂಡು, ಯೇಸುಸ್ವಾಮಿಯ ಸ್ಮರಣೆಯ ಪಾಸ್ಖ ಭೋಜನ- ಪ್ರಭು ಭೋಜನದ ಸಂಸ್ಕಾರವನ್ನು ನಡೆಸಿ, ಯೇಸುಸ್ವಾಮಿ ಕಲಿಸಿದ ‘ಪರಲೋಕ ಮಂತ್ರ (ಪ್ರಭುವಿನ ಪ್ರಾರ್ಥನೆಯ)ವನ್ನು ಜಪಿಸಿ, ಸರ್ವಶಕ್ತ ದೇವಪಿತನಿಗೆ ತಮಗೆ ತಿಳಿದ ಬಗೆಯಲ್ಲಿ ಪ್ರಾರ್ಥನೆ ಸಲ್ಲಿಸುತ್ತಿದ್ದರು. ಆದಿ ಕಾಲದ ಕ್ರೈಸ್ತ ವಿಶ್ವಾಸಿಕರು ಮತ್ತು ದೇವರ ನಡುವೆ ಸೇತುವೆಯಾಗಿ ಯಾಜಕರ ಬಳಗದ ವ್ಯವಸ್ಥೆಯು ಇನ್ನೂ ಸಾಂಘಿಕ ರೂಪ ತಳೆದಿರಲಿಲ್ಲ. ನಿಧಾನವಾಗಿ ರೋಮನ್ ಚಕ್ರವರ್ತಿಗಳ ಆಡಳಿತ ವ್ಯವಸ್ಥೆಯ ಮಾದರಿಯಲ್ಲಿಯೇ ಆದಿಕ್ರೈಸ್ತರ ಯಾಜಕರ ಸಂಘಟನೆ ಆರಂಭವಾಗಿರಬೇಕು. ರೋಮ್ ಪಟ್ಟಣದ ಪ್ರಭಾವಳಿ ಕುಂದಿದಾಗ, ಕಾನ್ಸಟಾಂಟಿನೋಪಲ್ ಸ್ವಲ್ಪ ಸಮಯ ಪ್ರವರ್ಧಮಾನಕ್ಕೆ ಬಂದಾಗ ಅದೂ ಒಂದು ಬೆಳವಣಿಗೆಯ, ಅಧಿಕಾರದ ಕೇಂದ್ರವಾಗಿತ್ತು ಎಂಬುದು ಒಂದು ಐತಿಹಾಸಿಕ ಸತ್ಯ. 

ಆದಿ ಕಾಲದ ಕ್ರೈಸ್ತ ಧರ್ಮಸಭೆ ಜನರ ಒತ್ತಾಸೆಯಿಂದ ಬೆಳೆಯುತ್ತ ಸಾಗಿತ್ತು. ಚಕ್ರವರ್ತಿ ಅಶೋಕನ ಕಾಲದಲ್ಲಿ ಬೌದ್ಧ ಧರ್ಮಕ್ಕೆ ರಾಜಾಶ್ರಯ ಸಿಕ್ಕ ಮಾದರಿಯಲ್ಲಿ, ಯಥಾರಾಜಾ ತಥಾ ಪ್ರಜಾ ಎಂಬಂತೆ, ರೋಮನ್ ಪ್ರಭುತ್ವದ ಪಾಲಕರು ಅಂದರೆ ಚಕ್ರವರ್ತಿಗಳು ಕ್ರೈಸ್ತ ಧರ್ಮವನ್ನು ಅಪ್ಪಿಕೊಂಡ ನಂತರ, ಅಂದಿನ ಪಾಶ್ಚಿಮಾತ್ಯರಿಗೆ ತಿಳಿದ ಜಗತ್ತಿನಲ್ಲಿ ಕ್ರೈಸ್ತ ಧರ್ಮದ ಹರಡುವಿಕೆ ನಾಗಾಲೋಟದಲ್ಲಿ ಸಾಗಿತು. ಅಂದಿನ ಕ್ರೈಸ್ತ ಧರ್ಮಸಭೆಯನ್ನು ಆ ಕಾಲದ ಯುರೋಪಿನ ಜನರ ತಿಳುವಳಿಕೆಯಲ್ಲಿನ ಜಗತ್ತಿನ ಮಹಾಕ್ರೈಸ್ತ ಧರ್ಮಸಭೆ ಎಂದು ಗುರುತಿಸಬಹುದು. ಜೊತೆಗೆ ಆ ಕಾಲದ ಆಯಾ ಪ್ರದೇಶಗಳಲ್ಲಿ ತಮ್ಮದೇ ಆದ ವಿಧದಲ್ಲಿ ತಾವು ಅಳವಡಿಸಿಕೊಂಡ ಪೂಜಾವಿಧಿಗಳನ್ನು ಪಾಲಿಸಿಕೊಂಡು ಬರುತ್ತಿದ್ದರು. ಅವಕ್ಕೊಂದು ಸಾಮಾನ್ಯ ಪ್ರಧಾನ ಕೇಂದ್ರವು ಇರಲಿಲ್ಲ. 

ನಮ್ಮ ನಾಡಿನಲ್ಲಿ 

ಕಳಬೇಡ ಕೊಲಬೇಡ, ಹುಸಿಯ ನುಡಿಯಲು ಬೇಡ, ಅನ್ಯರಿಗೆ ಅಸಹ್ಯ ಪಡಬೇಡ ಇವ ನಮ್ಮವ ಇವ ನಮ್ಮವ ಸರಳ ಮಾತುಗಳಲ್ಲಿ ಧರ್ಮವನ್ನು ಬೋಧಿಸಿದ ಬಸವಣ್ಣನ ಕಲ್ಯಾಣ ಕ್ರಾಂತಿಯ ನಂತರದಲ್ಲಿ ಚದುರಿಹೋದ ಶರಣರ ಪ್ರಭಾವಳಿ ಹೆಚ್ಚಿರುವ ನಮ್ಮ ಕನ್ನಡ ನಾಡಿನಲ್ಲಿ, ನೆರೆಯ ರಾಜ್ಯದ ಕೆಲವು ಸೀಮೆಗಳಲ್ಲಿ, ಉತ್ತರ ಕರ್ನಾಟಕದ ಪ್ರತಿಯೊಂದು ಊರುಗಳಲ್ಲಿ ಕಂಡುಬರುವ ಒಂದೋ, ಎರಡೋ ಹತ್ತೋ ಹದಿನಾರೋ ಮಠಗಳು, ಅದಕ್ಕೊಬ್ಬಬ್ಬರು ಜಗದ್ಗುರುಗಳು ಇರುವಂಥ ಪರಿಸ್ಥಿತಿ ಅವರದಾಗಿತ್ತು. ಕರ್ತರ ಪ್ರಾರ್ಥನೆ - ಪರಲೋಕದಲ್ಲಿರುವ ನಮ್ಮ ತಂದೆಯ ಪ್ರಾರ್ಥನೆ, ಕರ್ತ(ಪ್ರಭುವಿ)ನ ಬಲಿಪೂಜೆ - ಎಲ್ಲಾ ಕ್ರೈಸ್ತ ಪಂಗಡಗಳಲ್ಲಿ ಪ್ರಧಾನ ಪಾತ್ರ ವಹಿಸಿರುವಂತೆ, ಲಿಂಗಾಯಿತರಲ್ಲಿ ಇಷ್ಟಲಿಂಗ ಪೂಜೆ ಪ್ರಧಾನವಾಗಿದೆ. ಕಾಲಾನಂತರದಲ್ಲಿ ಕೆಲವು ಲಿಂಗಾಯಿತ ಮಠಗಳು ಭಾರಿ ಪ್ರಮಾಣದಲ್ಲಿ ಸೀಮೆಯನ್ನು ವ್ಯಾಪಿಸಿಕೊಂಡು ಅಭಿವೃದ್ಧಿಗೊಂಡರೆ, ಕೆಲವು ತಮ್ಮ ಊರಿಗೆ, ತಮ್ಮ ಓಣಿಗೆ ಮಾತ್ರ ಸೀಮಿತಗೊಂಡಿವೆ. ಕಾಲಕ್ರಮೇಣ ಪುರಾಣ ಕಥೆಗಳ ಹೊಳಹಿನ ಪಂಚಪೀಠಗಳು ಅವುಗಳ ಮೇಲೆ ತಮ್ಮ ಪ್ರಭುತ್ವವನ್ನು ಹೇರಲು ಮಾಡಿದ, ಮಾಡುವ ಪ್ರಯತ್ನಗಳನ್ನು ನಾವೂ ಇಂದಿಗೂ ನೋಡುತ್ತಿದ್ದೇವೆ. ನಮ್ಮಲ್ಲಿನ ಲಿಂಗಾಯಿತರ(ವೀರಶೈವ ಪರಂಪರೆಯ) ಪಂಚಪೀಠಗಳ ಮಾದರಿಯಲ್ಲಿ, ಅಂದಿನ ಯುರೋಪಿನ ನಾಗರಿಕ ಸಮಾಜದ ಉತ್ತುಂಗದ ಸ್ಥಿತಿಯಲ್ಲಿದ್ದ ರೋಮ್ ಮತ್ತು ಕಾನ್ಸಟಾಂಟಿನೋಪಲ್ ಊರುಗಳಲ್ಲಿ ನೆಲೆಗೊಂಡ ಪ್ರಭುತ್ವಗಳ ನೆರಳಲ್ಲಿ ಕ್ರೈಸ್ತ ಧರ್ಮದ ಎರಡು ಪ್ರಧಾನ ನೆಲೆಗಳು ಅಭಿವೃದ್ಧಿಗೊಂಡಿದ್ದವು. 

ಇಂದಿನ ಟರ್ಕಿ ದೇಶಕ್ಕೆ ಸೇರಿದ ಸೆಲ್ಕುಕ್ ಸನಿಹದ ಎಫೆಸಸ್ ಎಂಬ ಸ್ಥಳದಲ್ಲಿ, ಕ್ರಿಸ್ತಶಕ 431ರಲ್ಲಿ ಅಂದಿನ ವಿಶ್ವವ್ಯಾಪಿ ಕ್ರೈಸ್ತರ ಸಾರ್ವತ್ರಿಕ ಮಹಾಸಭೆ ಜರುಗಿತು. (ಅಂದಿನ ಕಾಲದ ಆ ಯುರೋಪಿನ ವಿಶ್ವದ ಜನಕ್ಕೆ ಉತ್ತರ ಮತ್ತು ದಕ್ಷಿಣ ಅಮೆರಿಕ, ನೈಲ್ ನದಿಯ ಆಚೆಗಿನ ಆಫ್ರಿಕಾ, ಆಸ್ಟ್ರೇಲಿಯ ಖಂಡಗಳ, ಭಾರತದ ಪರಿಚಯವೇ ಇರಲಿಲ್ಲ). ಆಗ, ಪೂರ್ವದ ಕ್ರೈಸ್ತ ಧರ್ಮಸಭೆ ಅಸ್ತಿತ್ವದಲ್ಲಿ ಬಂದಿತು. 1552ರ ಸುಮಾರಿನಲ್ಲಿ ಅದು ಮತ್ತೆ ಅಸ್ಸಿರಿಯದ ಪೂರ್ವದ ಧರ್ಮಸಭೆ ನಂತರದಲ್ಲಿ ಪುರಾತನ ಪೂರ್ವದ ಧರ್ಮಸಭೆ ಹೆಸರುಗಳಲ್ಲಿ ವಿಭಜನೆಗೊಂಡಿದೆ. ಮುಂದೆ ಮತ್ತೆ ಅದೇ ಟರ್ಕಿಯ ಇಸ್ತಾಂಬುಲ ಸನಿಹದ ಕಲ್ಸೆಡನ್ ಪಟ್ಟಣದಲ್ಲಿ 451ರಲ್ಲಿ ಮತ್ತೊಂದು ಮಹಾಸಭೆ ನಡೆಯಿತು. ಈ ಅವಧಿಯಲ್ಲಿ ಪೌರಸ್ತ್ಯ ಸಂಪ್ರದಾಯಸ್ಥ ಧರ್ಮಸಭೆ ರೂಪತಾಳಿತು. 

ತದನಂತರ, ಕ್ರಿಸ್ತಶಕ 1054ರಲ್ಲಿ ಅಂದಿನ ರಾಜಕೀಯ ಹಾಗೂ ಧಾರ್ಮಿಕ ಕೇಂದ್ರಗಳಾಗಿದ್ದ ರೋಮ್ ಮತ್ತು ಕಾನ್ಸಟಾಂಟಿನೋಪಲ್‍ಗಳಲ್ಲಿನ ಬಿಷಪರ ನಡುವಿನ ಅಧಿಕಾರ ಹಂಚಿಕೆಯಲ್ಲಿನ ವಿವಾದ ಹಾಗೂ ಧಾರ್ಮಿಕ ವಿಶ್ವಾಸ ಹಾಗೂ ಆಚರಣೆಗಳಲ್ಲಿನ ವ್ಯತ್ಯಾಸ ಮಹಾಕ್ರೈಸ್ತ ಧರ್ಮಸಭೆ, ಪೂರ್ವ ಮತ್ತು ಪಶ್ಚಿಮದ ಸೀಮೆಗಳ ಧರ್ಮಸಭೆಗಳು ಎಂದು ವಿಭಜನೆಗೊಂಡಿತು. ಅದನ್ನು ಮಹಾಧಾರ್ಮಿಕ ಬಿಕ್ಕಟ್ಟು ಅಥವಾ ಮಹಾಪಂಥಭೇದ ಎಂದು ಕ್ರೈಸ್ತ ಧರ್ಮಸಭೆಯ ಇತಿಹಾಸಕಾರರು ಗುರುತಿಸುತ್ತಾರೆ. ಪಶ್ಚಿಮದ ಧರ್ಮಸಭೆ ತನ್ನನ್ನು ರೋಮನ್ ಕಥೋಲಿಕ ಧರ್ಮಸಭೆ ಅಥವಾ ಲ್ಯಾಟಿನ್ ಧರ್ಮಸಭೆ ಎಂದು ಗುರುತಿಸಿಕೊಂಡಿತು. ಪೂರ್ವದಿಕ್ಕಿನ ಧರ್ಮಸಭೆ ಪೂರ್ವದ ಸಂಪ್ರದಾಯಸ್ಥ(ಆರ್ಥೊಡಾಕ್ಸ್)ಧರ್ಮಸಭೆ ಎನಿಸಿಕೊಂಡಿತು. ಇದರಲ್ಲಿನ ಒಂದು ಪಂಗಡ, ಕಥೋಲಿಕ ಧರ್ಮಸಭೆಯನ್ನು ಧಿಕ್ಕರಿಸಿ ಪ್ರೊಟೆಸ್ಟೆಂಟ್ ಪಂಗಡ ಹುಟ್ಟಿದ ಸಮಯದ ನಂತರ ಪೂರ್ವದ ಕಥೋಲಿಕ ಎಂದುಕೊಂಡು ಕಥೋಲಿಕ ಧರ್ಮಸಭೆಗೆ ಸೇರಿಕೊಂಡಿತು. ಇಂದು ಲ್ಯಾಟಿನ್ ಧರ್ಮಸಭೆಯು, ರೋಮನ್ ಕಥೋಲಿಕ ಧರ್ಮಸಭೆಯಾಗಿದೆ. 

ಕ್ರೈಸ್ತ ಧರ್ಮದ ಸುಧಾರಣೆಯ ಕಾಲದಲ್ಲಿ ಅಧಿಕೃತವಾಗಿ ಲ್ಯಾಟಿನ್ (ಇಂದೂ ಲ್ಯಾಟಿನ್ ರೋಮನ್ ಕಥೋಲಿಕ ಪಂಥದ ಅಧಿಕೃತ ಭಾಷೆ, ಅದೊಂದು ಬಗೆಯಲ್ಲಿ ಭಾರತದಲ್ಲಿನ ಪೌರಾಣಿಕ ಹಿನ್ನೆಲೆಯ ಶಿಷ್ಟ ದೇವರುಗಳಿಗೆ ಅರ್ಥವಾಗುವ/ಅವುಗಳನ್ನು ಸಂಬೋಧಿಸುವ ಸಂಸ್ಕೃತ ಭಾಷೆ ಇದ್ದಂತೆ) ಅಧಿಕೃತ ಪೂಜಾಭಾಷೆಯಾಗಿರುವ ಕಥೋಲಿಕ ಧರ್ಮಸಭೆಯ ಕೆಲವು ನಡವಳಿಕೆಗಳನ್ನು ಪ್ರತಿಭಟಿಸಿ, ಅದನ್ನು ಬಿಟ್ಟು ಹೊರಬಂದವರು ಪ್ರೊಟೆಸ್ಟೆಂಟ್ ಕ್ರೈಸ್ತ ಧರ್ಮಸಭೆಯನ್ನು ಕಟ್ಟಿಕೊಂಡರು. ಆಯಾ ದೇಶಗಳಲ್ಲಿನ ಈ ಪ್ರೊಟೆಸ್ಟೆಂಟ್ ಕ್ರೈಸ್ತರಿಗೆ ಆಯಾದೇಶ ಭಾಷೆಗಳೇ ಆಯಾ ಚರ್ಚು(ಧರ್ಮಸಭೆ)ಗಳಲ್ಲಿನ ಅಧಿಕೃತ ಭಾಷೆ. ಮೊದಲಿನಿಂದಲೂ ಪ್ರೊಟೆಸ್ಟೆಂಟರಲ್ಲಿ ಅನಬ್ಯಾಪ್ಟಿಸ್ಟ್, ಆಂಗ್ಲಿಕನ್, ರಿಫಾರ್ಮಡ್, ಲೂಥರನ್ ಕ್ರೈಸ್ತ ಧರ್ಮಸಭೆಗಳು ಅಸ್ತಿತ್ವದಲ್ಲಿವೆ. ಆಂಗ್ಲಿಕನ್ ಕ್ರೈಸ್ತ ಧರ್ಮಸಭೆ ಮತ್ತೆ ಎವೆಂಜಲಿಕಲ್ ಕ್ರೈಸ್ತ ಧರ್ಮಸಭೆಗಳಾಗಿ ಟಿಸಿಲೊಡೆದಿದೆ. 

ಪಶ್ಚಿಮದ ಕ್ರೈಸ್ತರು ಎಂದು ಸಂಬೋಧಿಸಿದಾಗ, ಅದರಲ್ಲಿ ಎವೆಂಜಲಿಕಲ್, ಅನಬ್ಯಾಪ್ಟಿಸ್ಟ್, ಆಂಗ್ಲಿಕನ್, ರಿಫಾರ್ಮಡ್, ಲೂಥರನ್ ಪ್ರೊಟೆಸ್ಟೆಂಟ್ ಪಂಗಡಗಳು ಮತ್ತು ಲ್ಯಾಟಿನ್ ಕಥೋಲಿಕ ಮತ್ತು ಪೂರ್ವದ ಕಥೋಲಿಕರನ್ನು ಸಂಬೋಧಿಸಿದಂತಾಗುತ್ತದೆ. ಅದೇ ಬಗೆಯಲ್ಲಿ ಪೂರ್ವದ ಕ್ರೈಸ್ತರು ಎಂದಾಗ, ಪೂರ್ವದ ಸಂಪ್ರದಾಯಸ್ಥ ಕ್ರೈಸ್ತರು, ಪೌರಸ್ತ ಸಂಪ್ರದಾಯಸ್ಥ ಕ್ರೈಸ್ತರು, ಪೂರ್ವದ ಅಸ್ಸಿರಿಯನ್ ಕ್ರೈಸ್ತ ಧರ್ಮಸಭೆ ಮತ್ತು ಪೂರ್ವದ ಪುರಾತನ ಕ್ರೈಸ್ತ ಧರ್ಮಸಭೆಗಳು ಈ ವ್ಯಾಪ್ತಿಗೆ ಸೇರುತ್ತವೆ. 

ಈಗಾಗಲೇ ಗಮನಿಸಿರುವಂತೆ, ಪಾಶ್ಚಿಮಾತ್ಯ ಕಥೋಲಿಕ ಕ್ರೈಸ್ತರನ್ನು ರೋಮನ್ ಕಥೋಲಿಕ್ ಕ್ರೈಸ್ತರು ಎಂದು ಗುರುತಿಸಲಾಗುತ್ತದೆ. ಈ ಕಥೋಲಿಕ ಧರ್ಮಸಭೆಯಲ್ಲಿ ಲ್ಯಾಟಿನ್ ಕ್ರೈಸ್ತ ಧರ್ಮಸಭೆಯ ಜೊತೆಗೆ 23 ಪೂರ್ವದ ಕಥೋಲಿಕ ಕ್ರೈಸ್ತ ಧರ್ಮಸಭೆಗಳು ಸೇರುತ್ತವೆ. ಈ 23 ಕಥೋಲಿಕ ಧರ್ಮಸಭೆಗಳ ಪೂಜಾವಿಧಿಗಳನ್ನು ಪ್ರಧಾನವಾಗಿ ಅಲೆಕ್ಸಾಂಡ್ರಿಯನ್, ಅರ್ಮೇನಿಯನ್, ಬೈಜಾಂಟೈನ್, ಪೂರ್ವದ ಸಿರಿಯಾಕ್, ಪಶ್ಚಿಮದ ಸಿರಿಯಾಕ್ ಧಾರ್ಮಿಕ ವಿಧಿಗಳ ಗುಂಪುಗಳಲ್ಲಿ ಗುರುತಿಸಲಾಗಿದೆ. ಇವರುಗಳಿಗೆ ಲ್ಯಾಟಿನ್ ಭಾಷೆಯೊಂದೆಯೇ ಪೂಜಾವಿಧಿಯ ಭಾಷೆಯಲ್ಲ. ಇವಿಷ್ಟಲ್ಲದೇ ಅವುಗಳಲ್ಲಿ ಮತ್ತಷ್ಟು ಒಳಪಂಗಡಗಳಿವೆ. 

ಕಥೋಲಿಕ ಕ್ರೈಸ್ತ ಧರ್ಮಸಭೆ, ತಾನೊಂದೇ ಪವಿತ್ರವಾದುದು, ವಿಶ್ವವ್ಯಾಪಿಯಾದುದು, ನೇರವಾಗಿ ಕ್ರಿಸ್ತನೇ ಆರಂಭಿಸಿದ ಪ್ರೇಷಿತರು ಮುಂದುವರಿಸಿದ ಧರ್ಮಸಭೆ ಎಂದು ಹೇಳಿಕೊಳ್ಳುತ್ತದೆ. ಲ್ಯಾಟಿನ್ ಕಥೋಲಿಕ ಧರ್ಮಸಭೆಯ ರೋಮಿನಲ್ಲಿ ನೆಲೆಸಿರುವ ಬಿಷಪರು ಈ ಕಥೋಲಿಕ ಕ್ರೈಸ್ತ ಧರ್ಮಸಭೆಯ ಪ್ರಧಾನರು - ಪೋಪರು, ನಮ್ಮ ನಾಡಿನ ಆಡುಭಾಷೆಯಲ್ಲಿ ಜಗದ್ಗುರುಗಳು. 

ನಮ್ಮ ನಾಡು ಭಾರತದಲ್ಲಿ ಲ್ಯಾಟಿನ್ ಕಥೋಲಿಕ ಕ್ರೈಸ್ತರ ಸಂಖ್ಯೆಯೇ ಅಧಿಕ. ಆದರೂ, ಕಥೋಲಿಕ ಧರ್ಮಸಭೆಯ ಪಾಲುದಾರರು ಆಗಿರುವ ಕೇರಳದಲ್ಲಿ ಮೊದಲನೇ ಶತಮಾನದಲ್ಲಿಯೇ ನೆಲೆಯೂರಿದ್ದವು ಎನ್ನಲಾಗುವ ಸಿರೋ ಮಲಬಾರ ಪಂಥದ ಕಥೋಲಿಕ ಕ್ರೈಸ್ತರು ಮತ್ತು ಸಿರೋ ಮಲಂಕರ ಪಂಥದ ಕ್ರೈಸ್ತರ ಸಂಖ್ಯಾಬಾಹುಳ್ಯ, ಕೇರಳವನ್ನು ಬಿಟ್ಟು ಹೊರ ರಾಜ್ಯಗಳಲ್ಲೂ ಹೆಚ್ಚುತ್ತಿರುವುದರಿಂದ ಅವರುಗಳಿಗೇ ಮೀಸಲಿರುವ ಪ್ರತ್ಯೇಕ ಧರ್ಮಕ್ಷೇತ್ರಗಳು (ಡಯಾಸಿಸ್) ಅಸ್ತಿತ್ವದಲ್ಲಿ ಬರತೊಡಗಿರುವುದನ್ನು ನಾವು ಕಾಣುತ್ತೇವೆ. ಕರ್ನಾಟಕದಲ್ಲಿ ಮಂಡ್ಯ, ಬೆಳ್ತಂಗಡಿ, ಭದ್ರಾವತಿ ಮತ್ತು ಪುತ್ತೂರುಗಳಲ್ಲಿ ಕೇರಳಿಗರ (ಕಥೋಲಿಕ ಕ್ರೈಸ್ತರ) ಮಲೆಯಾಳಂ ಧರ್ಮಕ್ಷೇತ್ರಗಳು ಕನ್ನಡ ನೆಲದಲ್ಲಿ ನೆಲೆ ಕಂಡಿವೆ. ಅವರ ಕೆಲವೊಂದು ರೀತಿರಿವಾಜುಗಳು ಲ್ಯಾಟಿನ್ ಕಥೋಲಿಕ ಕ್ರೈಸ್ತ ಪಂಥದವರಿಗಿಂತ ಭಿನ್ನವಾಗಿವೆ. 

ವಿಚಿತ್ರವೆಂದರೆ, ಈ ಕೇರಳಿಗರು ಲ್ಯಾಟಿನ್ ಪೂಜಾವಿಧಿಗಳನ್ನು ಆಚರಿಸುವ ಕಥೋಲಿಕರ ಚರ್ಚುಗಳಲ್ಲಿ ಪ್ರಾರ್ಥನೆಗಳಲ್ಲಿ ಸಹಜವಾಗಿ ಪಾಲ್ಗೊಳ್ಳಬಹುದು. ಅದೇ ವಿಶ್ವಮಾನ್ಯ ಲ್ಯಾಟಿನ್ ಕಥೋಲಿಕ ಪಂಥದ ಕ್ರೈಸ್ತರು ಈ ಮಲೆಯಾಳಿಗಳ ಚರ್ಚುಗಳ ಬಳಿಯೂ ಸುಳಿಯುವಂತಿಲ್ಲ. ಅವರ ಪೂಜಾವಿಧಿಗಳೆ ಬೇರ ವಿಧಾನದಲ್ಲಿವೆ. ಅಪ್ಪ್ಪಿತಪ್ಪಿ ಯಾರಾದರೂ ಲ್ಯಾಟಿನ್ ಕಥೋಲಿಕರು ಅಲ್ಲಿಗೆ ಹೋದರೆ ಅವರಿಗೆ ಪರರಾಜ್ಯಕ್ಕೆ ಅಥವಾ ಪರದೇಶಕ್ಕೆ ಹೋದ ಅನುಭವವಾಗುವುದು ತಪ್ಪಿದ್ದಲ್ಲ. ಮಲೆಯಾಳಿಗಳ ಚರ್ಚುಗಳು ಅಂದರೆ ಅವು ಅವರಿಗಾಗಿ, ಅವರಿಗೋಸ್ಕರ, ಅವರೇ ಕಟ್ಟಿಕೊಂಡ ಚರ್ಚುಗಳು. ಅವು ಕೋಟೆ ಬಾಗಿಲು ಭದ್ರವಾಗಿ ಮುಚ್ಚಿದ ಕೋಟೆಕೊತ್ತಲಗಳು. ಆದರೆ, ಲ್ಯಾಟಿನ್ ಕಥೋಲಿಕ ಕ್ರೈಸ್ತರ ಚರ್ಚುಗಳು ಬೇಲಿ ಇಲ್ಲದ ಹೊಲಗಳಿದ್ದಂತೆ. ಯಾರಾದರೂ, ಹೇಗಾದರೂ ಬಂದು ತಮಗೆ ಬೇಕಾದಂತೆ ಇದ್ದುಕೊಂಡು, ತಮ್ಮ ಮನೆ (ಚರ್ಚು) ಸಿದ್ಧವಾದಾಗ ಅಲ್ಲಿಗೇ ಹಿಂದಿರುಗಿ ಹೋಗಬಹುದು. ಇದಕ್ಕೆ ತಕ್ಕ ಉದಾಹರಣೆ ಕೆಲವು ವರ್ಷಗಳ ಹಿಂದೆ ವೈಟ್‌ಫೀಲ್ಡಿನಲ್ಲಿರುವ ಲೂರ್ದುಮಾತೆಯ ಚರ್ಚಿನಲ್ಲಾದ ಬೆಳವಣಿಗೆಗಳನ್ನು ಗಮನಿಸಬಹುದಾಗಿದೆ. 

ಪ್ರತಿವರ್ಷವೂ ಜನವರಿ ತಿಂಗಳಲ್ಲಿ ಸಕಲ ಕ್ರೈಸ್ತರ ಐಕ್ಯತೆಗಾಗಿ, ರೋಮನ್ ಕಥೋಲಿಕ ಧರ್ಮಸಭೆಯು ಪ್ರಾರ್ಥನಾ ಕೂಟಗಳನ್ನು, ಚರ್ಚಾಗೋಷ್ಠಿ, ವಿಚಾರ ಸಂಕಿರಣಗಳನ್ನು ಏರ್ಪಡಿಸುತ್ತದೆ. ಆದರೆ, ಅದರ ಆಶಯ, ಅದರ ಫಲಶೃತಿ ಯಾವಾಗಲೂ ಪ್ರಶ್ನಾರ್ಥಕವಾಗಿ ಕಾಡುತ್ತಾ ನಿಲ್ಲುತ್ತವೆ. ಕ್ರೈಸ್ತರಲ್ಲದವರಿಗೆ ಕ್ರೈಸ್ತರಲ್ಲಿರುವ ಒಳಪಂಗಡಗಳ ಬಗೆಗೆ ಮಾಹಿತಿ ಇರುವುದಿಲ್ಲ. ಅವರೆಲ್ಲಾ (ಕೊರಳಿಗೆ ಶಿಲುಬೆ ಕಟ್ಟಿಕೊಂಡವರೆಲ್ಲಾ) ಒಂದೇ ಎಂದುಕೊಂಡಿರುತ್ತಾರೆ. ಹಿಂದೆ ಕರ್ನಾಟಕದಲ್ಲಿ ಭಾರತೀಯ ಜನತಾಪಕ್ಷದ ಆಡಳಿತವಿದ್ದಾಗ, ಮೊದಲು ಚರ್ಚುಗಳ ಆಮೇಲೆ ಕನ್ಯಾಸ್ತ್ರೀಯರ ಮಠಗಳ (ಕಾನ್ವೆಂಟ್) ಮೇಲೆ ದಾಳಿಗಳು ನಡೆದವು. ಮೊದಲು ಪ್ರೊಟೆಸ್ಟೆಂಟ್ ಪಂಥದ ಕ್ರೈಸ್ತರ ಚರ್ಚುಗಳ ಮೇಲೆ ದಾಳಿ ನಡೆದವು. ಬಯಲು ಸೀಮೆಯ ಆ ಪ್ರೊಟೆಸ್ಟೆಂಟ್ ಧರ್ಮಸಭೆಗಳು ಪ್ರಚುರಪಡಿಸಿದ ಪುಸ್ತಕಗಳ ಬಗ್ಗೆ ಆಕ್ಷೇಪಣೆಗಳು ಬಂದವು. ಆಗ, ಕರಾವಳಿಯ ಲ್ಯಾಟಿನ್ ಪಂಥದ ರೋಮನ್ ಕಥೋಲಿಕ ಧರ್ಮಕ್ಷೇತ್ರದ ಮೇತ್ರಾಣಿಯೊಬ್ಬರು (ಬಿಷಪ್) ‘ಅದು ಬೇರೆ ಧರ್ಮಸಭೆ, ನಾವು ಬೇರೆ, ನಮ್ಮದು ಬೇರೆ ಎಂದರು. ಕ್ರೈಸ್ತರೆಲ್ಲರೂ ಒಂದೇ ಎಂಬ ವಿಚಾರಗಳು ಆಚರಣೆಗೆ ತರಬೇಕೆಂಬ ನಿಬಂಧನೆಗಳೇಕಿರಬೇಕು? ಒಳ್ಳೆಯ ವಿಚಾರಗಳನ್ನು ಬೆಂಬಲಿಸೋಣ. ಅದನ್ನು ಪಾಲಿಸುವುದು ತುಂಬಾ ಕಷ್ಟದ ಕೆಲಸ. ಕೆಲವು ತಿಂಗಳುಗಳಾದ ಮೇಲೆ ಅವರ ಧರ್ಮಕ್ಷೇತ್ರದ ಕನ್ಯಾಸ್ತ್ರೀ ಮಠಗಳ ಮೇಲೂ ದಾಳಿಗಳು ನಡೆದವು. ಆಶ್ಚರ್ಯಕರವೆನ್ನುವಂತೆ, ಈ ಕನ್ಯಾಸ್ತ್ರೀ ಮಠಗಳ ಮೇಲಿನ ದಾಳಿಗಳ ಸುದ್ದಿಗಳು ರಾಜ್ಯಾದ್ಯಂತ, ವಿಶ್ವದಾದ್ಯಂತ ಸದ್ದುಮಾಡಿದವು. ಭಜರಂಗ ದಳ ಅವುಗಳ ಹೊಣೆ ಹೊತ್ತುಕೊಂಡಿತ್ತು. 

ನಾಲ್ಕೈದು ದಶಕಗಳ ಹಿಂದೆ ಆಯಾ ಪ್ರಾದೇಶಿಕ ಭಾಷೆಗಳಲ್ಲಿ ಪ್ರಾರ್ಥನೆಗಳನ್ನು ಸಲ್ಲಿಸಬೇಕು ಎಂದು ಲ್ಯಾಟಿನ್ ರೋಮನ್ ಕಥೋಲಿಕ ಧರ್ಮಸಭೆಯು ನಿರ್ಧರಿಸಿದಂತೆ ಕನ್ನಡ ನಾಡು ಕರ್ನಾಟಕದಲ್ಲಿ ನೆಲದ ಭಾಷೆಗೆ ರಾಜ ಮರ್ಯಾದೆ ಸಿಗಬೇಕಿತ್ತು. (ತಮಿಳುನಾಡಿನ ರೋಮನ್ ಕಥೋಲಿಕ್ ಚರ್ಚುಗಳಲ್ಲಿ ತಮಿಳಿಗೆ, ಮಲೆಯಾಳ ಭಾಷೆಯ ಕೇರಳದಲ್ಲಿನ ಚರ್ಚುಗಳಲ್ಲಿ ಮಲೆಯಾಳ ಭಾಷೆಗೆ, ಆಂಧ್ರ ಮತ್ತು ತೆಲಂಗಾಣಗಳಲ್ಲಿ ಅಲ್ಲಿನ ಸ್ಥಳೀಯ ಭಾಷೆ ತೆಲುಗಿಗೆ ರಾಜಮರ್ಯಾದೆ ಸಂದಿದೆ.) 

ಆದರೆ, ಕರ್ನಾಟಕದಲ್ಲಿ ಕಥೋಲಿಕ ಧರ್ಮಸಭೆಯ ಪೂಜಾ ಭಾಷೆ ಸಂಸ್ಕೃತದಂತಿದ್ದ ಲ್ಯಾಟಿನ್ ಭಾಷೆ ಹಿಂದೆ ಸರಿದ ನಂತರ ಇಂಗ್ಲೀಷ್ ಕಥೋಲಿಕ ಕ್ರೈಸ್ತರ ಅಧಿಕೃತ ಪೂಜಾಭಾಷೆ, ಆಡಳಿತ ಭಾಷೆಯ ಸ್ಥಾನಮಾನ ಗಿಟ್ಟಿಸಿಕೊಂಡಿದೆ. ಇಂಗ್ಲೀಷ್ ಭಾಷೆಗೆ ರಾಜಮರ್ಯಾದೆ ಪ್ರತಿದಿನದ ಬಲಿಪೂಜೆಗಳಲ್ಲಿ ನಾವೆಲ್ಲಾ ಒಂದಾಗಿ ಪ್ರಾರ್ಥಿಸುತ್ತೇವೆ. ಆದರೆ, ನಾವು ಒಂದಾಗಿದ್ದೇವೆಯೇ? ಕನ್ನಡ ಭಾಷಿಕರು ಒಂದು ಸಮಯದ ಬಲಿಪೂಜೆಗೆ ಬಂದರೆ, ತಮಿಳು ಭಾಷಿಕರು ಇನ್ನೊಂದು ಸಮಯಕ್ಕೆ ಬಂದು ತಮಿಳು ಭಾಷೆಯಲ್ಲಿ ಪ್ರಾರ್ಥನೆ ಸಲ್ಲಿಸುತ್ತಾರೆ. ಅದರಂತೆ ಕೊಂಕಣಿ ಕ್ರೈಸ್ತರು ಇನ್ನೊಂದು ಸಮಯದಲ್ಲಿ ಸೇರುತ್ತಾರೆ. ತಮ್ಮದೇ ಪ್ರತ್ಯೇಕ ಚರ್ಚ್ ಕಟ್ಟಡ ಹೊಂದಿರದ ಮಲೆಯಾಳಿಗಳು (ಕೇರಳಿಗರು) ಇನ್ನೊಂದು ಅವಧಿಯಲ್ಲಿ ಬಂದು ಬಲಿಪೂಜೆಯಲ್ಲಿ ಭಾಗವಹಿಸುತ್ತಾರೆ. ಪುಣ್ಯಕ್ಕೆ ಕರ್ನಾಟಕದಲ್ಲಿನ ತೆಲುಗು ಭಾಷಿಕ ಲ್ಯಾಟಿನ್ ಕಥೋಲಿಕ ಕ್ರೈಸ್ತರು ಇನ್ನೂ ತಮ್ಮ ಮಾತೃಭಾಷೆ, ಮನೆಯ ಆಡುಭಾಷೆಗೊಂದು ಬಲಿಪೂಜೆಯ ಬೇಡಿಕೆ ಇಟ್ಟಿಲ್ಲ! 

ಬಲಿಪೂಜೆಯ ಸಂದರ್ಭದಲ್ಲಿ ಪ್ರಭುವಿನ ಪ್ರಾರ್ಥನೆಯ ನಂತರ ಯಾಜಕರು ಮತ್ತು ವಿಶ್ವಾಸಿಕರು ಪರಸ್ಪರ ಶಾಂತಿಯನ್ನು ಕೋರುವ ಪರಿಪಾಠವಿದೆ. ಅದೊಂದು ಪ್ರಭುವಿನ ಭೋಜನಕ್ಕೆ ಬಂದ ಕುಟುಂಬಗಳನ್ನು ಪರಸ್ಪರ ಬೆಸೆಯುವ ಸಾಧನವಾಗಬೇಕಿತ್ತು. ಆದರೆ, ಇಂದು ಅದೊಂದು ಕಾಟಾಚಾರದ ಆಚರಣೆಯಾಗಿದೆ. ಒಂದು ದಿನ ಒಂದು ಭಾನುವಾರ ಎರಡು ಕುಟುಂಬಗಳು ಪರಸ್ಪರ ಪರಿಚಿತರಾಗುವ ಪ್ರಕ್ರಿಯೆ ನಿರಂತರವಾಗಿ ಪ್ರತಿದಿನವೂ, ಪ್ರತಿಭಾನುವಾರವೂ ಜರುಗಿದರೆ, ಆ ಧರ್ಮಕ್ಷೇತ್ರದಲ್ಲಿರುವ ಪ್ರತಿಯೊಂದು ಕುಟುಂಬಗಳು ಪ್ರತಿಯೊಬ್ಬರಿಗೂ ಚಿರಪರಿಚಿತ ಕುಟುಂಬಗಳೇ ಆಗಿರುತ್ತಿದ್ದವು. ಧರ್ಮಸಭೆಯ ಉದಾತ್ತ ಆಶಯದಂತೆ ಎಲ್ಲರೂ ಒಂದೇ ಕುಟುಂಬವೇ ಆಗಿರುತ್ತಿದ್ದರು. ಆದರೆ, ಅದು ಆಗುತ್ತಿದೆಯೇ? ಇಲ್ಲವೇ ಇಲ್ಲ. ಇನ್ನು ಆಯಾ ಚರ್ಚುಗಳ ಪ್ರಾದೇಶಿಕ ವ್ಯಾಪ್ತಿಯನ್ನು ವಿವಿಧ ವಿಭಾಗಗಳಲ್ಲಿ ವಿವಿಧ ಸಂತರುಗಳ ಹೆಸರಿನಲ್ಲಿ (ವಾರ್ಡ ಅಥವಾ ಝೋನ್) ವಿಭಜಿಸಲಾಗಿದೆ. ಅವರುಗಳು ತಿಂಗಳಿಗೊಮ್ಮೆ, ಮೂರು ತಿಂಗಳಿಗೊಮ್ಮೆ ಸೇರುವ ಕ್ರಮ ಜಾರಿಯಲ್ಲಿದೆ. ಅದು ಎಲ್ಲರನ್ನು ಒಳಗೊಂಡು ತನ್ನ ಆಶಯವನ್ನು ಸಾಧಿಸಿದೆಯೇ? ಅಥವಾ ಅದು ಚರ್ಚುಗಳ ವ್ಯಾಪ್ತಿಯಲ್ಲಿನ ವಿಶ್ವಾಸಿಕರನ್ನು ಚರ್ಚುಗಳ ವಿಭಾಗಗಳಲ್ಲಿನ ವಿವಿಧ ಸಂತರ ಹೆಸರಿನ ಗುಂಪುಗಳಲ್ಲಿ ವಿಭಜಿಸಿದೆಯೇ? 

ಇದುವರೆಗೆ ಲ್ಯಾಟಿನ್ ಸಂಪ್ರದಾಯದ ಕಥೋಲಿಕ ಕ್ರೈಸ್ತರ ಚರ್ಚುಗಳಲ್ಲಿನ ಭಾಷೆ, ಸಂತರ ಗುಂಪುಗಳ ವಿಚಾರವಾಯಿತು. ಇದೇ ಬೆಂಗಳೂರಿನ ಮಹಾಧರ್ಮಕ್ಷೇತ್ರದಲ್ಲಿ ಮತ್ತೊಂದು ಬಗೆಯ ಗುಂಪುಗಳೂ ಅಸ್ತಿತ್ವದಲ್ಲಿವೆ. ಕುರುಬರು, ಗೌಡರು, ತಿಗುಳರು, ರೆಡ್ಡಿಗರು, ದಲಿತರು ಮೊದಲಾದ ಹೆಸರುಗಳಲ್ಲಿರುವ ಇವು ವಿವಿಧ ಜಾತಿಯ ಗುಂಪುಗಳು. ಬೌದ್ಧರಾದ ದಲಿತರಿಗೆ ಸಿಕ್ಕ ಮೀಸಲಾತಿಯ ಸೌಲಭ್ಯಗಳ ಲಾಭ ಕ್ರೈಸ್ತರಾಗಿ ಮತಾಂತರಗೊಂಡ ದಲಿತರಿಗೆ ದಕ್ಕಲಿ ಎಂಬ ಆಶಯದಲ್ಲಿ ದಲಿತರನ್ನು ದಲಿತರನ್ನಾಗಿಯೇ ಇರಿಸಿಕೊಳ್ಳಲು ಕಥೋಲಿಕ ಧರ್ಮಸಭೆ ಸದಾ ಮುಂಚೂಣಿಯಲ್ಲಿರಲು ಬಯಸುತ್ತಿದೆ. ಹತ್ತುಹಲವಾರು ಸಮುದಾಯಗಳು ತಾವು ಕ್ರೈಸ್ತರಾಗುವ ಪೂರ್ವದ ತಮ್ಮ ಜಾತಿಸೂಚಕಗಳನ್ನು ಇರಿಸಿಕೊಂಡು ಪ್ರತ್ಯೇಕತೆಯನ್ನು ರೂಢಿಸಿಕೊಳ್ಳತೊಡಗಿವೆ. ಇದುವರೆಗೂ ಕದ್ದುಮುಚ್ಚಿ ಸಂಘಟನೆಗಳನ್ನು ರಚಿಸಿಕೊಳ್ಳುತ್ತಿದ್ದ ಈ ಜಾತಿ ಸೂಚಕ ಸಂಘಟನೆಗಳು ಈಗ ತಮ್ಮ ಮುಖವಾಣಿ ಪತ್ರಿಕೆಗಳ ಮೂಲಕ ಮೇತ್ರಾಣಿಗಳ ನಿವಾಸಿಗಳ ಬಾಗಿಲನ್ನು ತಟ್ಟಿ ಒಳಗೂ ತೂರಿಕೊಳ್ಳುತ್ತಿವೆ! ಯಾವ ಬೇಧಭಾವವಿಲ್ಲದ ಕ್ರಿಸ್ತಾಂಬರರಾಗಿದ್ದರೂ ‘ಇವ ನಮ್ಮವ, ಅವನಾರವ' ಎಂಬ ಹಳವಳಿಕೆಗಳಿಂದ ನಾವಿನ್ನೂ ಹೊರಬಂದಿಲ್ಲ. 

ನಮ್ಮ ನಮ್ಮ ಧರ್ಮಕ್ಷೇತ್ರಗಳಲ್ಲಿ, ಊರುಗಳಲ್ಲಿ ವಿವಿಧ ಪಂಗಡಗಳಲ್ಲಿ, ಜಾತಿಗಳಲ್ಲಿ, ಭಾಷೆಗಳ ಹೆಸರುಗಳಲ್ಲಿ ಮನಸ್ಸನ್ನು ಸಜ್ಜುಗೊಳಿಸಿಕೊಂಡಿರುವ ನಾವು - ಕಥೋಲಿಕ ಕ್ರೈಸ್ತರು, ಪ್ರೊಟೆಸ್ಟೆಂಟ್‌ರು ಪೌರಸ್ತ್ಯ ಸಂಪ್ರದಾಯಸ್ಥ ಕ್ರೈಸ್ತರು ಒಂದಾಗುವುದು ಯಾವಾಗ? ಧರ್ಮಸಭೆಯ ಬೋಧನೆ ಆಶಯಗಳೆಲ್ಲಾ ಕೇವಲ ಚರ್ಚುಗಳಲ್ಲಿನ ಪ್ರಸಂಗಗಳಿಗೆ, ಭಾಷಣಗಳಿಗೆ ಸೀಮಿತವೆ? 

‘ಕ್ರಿಸ್ತ ಯೇಸುವಿನಲ್ಲಿ ಇಟ್ಟಿರುವ ವಿಶ್ವಾಸದ ಮೂಲಕ ನೀವೆಲ್ಲರೂ ದೇವರ ಮಕ್ಕಳಾಗಿದ್ದೀರಿ. ಹೇಗೆಂದರೆ, ಕ್ರಿಸ್ತ ಯೇಸುವಿನಲ್ಲಿ ಒಂದಾಗುವುದಕ್ಕೆ ದೀಕ್ಷಾಸ್ನಾನ ಮಾಡಿಸಿಕೊಂಡಿರುವ ನೀವೆಲ್ಲರೂ ಕ್ರಿಸ್ತಾಂಬರರಾಗಿದೀರಿ. ಕ್ರಿಸ್ತರನ್ನು ಧರಿಸಿಕೊಂಡಿದ್ದೀರಿ. ನೀವೆಲ್ಲರೂ ಕ್ರಿಸ್ತ ಯೇಸುವಿನಲ್ಲಿ ಒಂದಾಗಿದ್ದೀರಿ, ಎಂದೇ ಇನ್ನು ಮೇಲೆ ಯೆಹೂದ್ಯ - ಯೆಹೂದ್ಯನಲ್ಲದವ, ದಾಸ-ದಣಿ, ಗಂಡು-ಹೆಣ್ಣು ಎಂಬ ಬೇಧವಿಲ್ಲ. ನೀವು ಕ್ರಿಸ್ತಯೇಸುವಿಗೆ ಸೇರಿದವರಾಗಿದ್ದರೆ, ಅಬ್ರಹಾಮನ ಸಂತತಿಯೂ ಆಗಿದ್ದೀರಿ, ದೈವ ವಾಗ್ದಾನದ ಪ್ರಕಾರ ವಾರಸುದಾರರೂ ಆಗಿದ್ದೀರಿ ಎಂಬ ಪೌಲನ (ಪೌಲನು ಗಲಾತ್ಯರಿಗೆ ಬರೆದ ಪತ್ರದ ಮೂರನೇ ಅಧ್ಯಾಯದ 26ರಿಂದ 29 ಚರಣಗಳು) ಮಾತುಗಳು ಮೊದಲ ಶತಮಾನದಿಂದಲೂ ಅನುರಣಿಸುತ್ತಲೇ ಬರುತ್ತಿವೆ. ಆದರೆ, ಅವುಗಳ ಪ್ರಾಮಾಣಿಕ ಅನುಷ್ಠಾನ ಆಗುತ್ತಿಲ್ಲ. ಅವು ಈಗಲೂ ಕೇವಲ ಬಾಯಿಮಾತಿನ ಆಡಂಬರದ ಮಾತುಗಳೇ ಆಗುತ್ತಿರುವುದು ಒಂದು ದೊಡ್ಡ ದುರಂತ. 

ಈ ವಿದ್ಯಮಾನಕ್ಕೆ ಇನ್ನೊಂದು ಆಯಾಮವೂ ಉಂಟು. ನೂರಾರು, ಸಾವಿರಾರು ಕ್ರೈಸ್ತ ಪಂಗಡಗಳು ಒಂದೇ ಛತ್ರದ ಅಡಿ ಬಂದರೆ, ಎಲ್ಲರೂ ಒಂದೇ ಆಗುವರು ಎಂಬ ಮಾತುಗಳನ್ನು ಆಡುವವರು, ನಮ್ಮ ದೇಶದಲ್ಲಿ ಇಂದು ಎಲ್ಲ ಹಿಂದೂಗಳೂ ಒಂದೇ ಎಂಬ ಮಾತುಗಳಿಗೆ ಆಕ್ಷೇಪಣೆ ಎತ್ತುವಂತಿಲ್ಲ. ದೇಶದ ವೈವಿಧ್ಯತೆಗೆ ಕುತ್ತು ಎಂದು ಎಗರಾಡುವಂತಿಲ್ಲ. ನೈಸರ್ಗಿಕ ಕಾಡಿನಲ್ಲಿ ನೂರಾರು ಬಗೆಬಗೆಯ ಗಿಡಮರಗಳು ಇರುತ್ತವೆ. ಅದರಂತೆ ಪ್ರಾಣಿಪಕ್ಷಿಗಳ ವೈವಿಧ್ಯತೆಯೂ ಇರುತ್ತದೆ. ಅಲ್ಲಿ ಒಂದೇ ಜಾತಿಯ, ಒಂದೇ ಬಗೆಯ ಗಿಡಗಳನ್ನು ನೆಟ್ಟರೆ, ಒಂದೇ ಬಗೆಯ ಪ್ರಾಣಿಪಕ್ಷಿಗಳ ಸಂಕುಲಕ್ಕೆ ಅವಕಾಶ ಮಾಡಿಕೊಟ್ಟಂತಾಗುವುದಿಲ್ಲವೇ? ದೈವದತ್ತ ನಿಸರ್ಗದ ಪ್ರಕೃತಿಯ ವೈವಿಧ್ಯತೆಯೇ ಕಮರಿಹೋಗುತ್ತದೆ! ದೇವರು ಇದನ್ನು ಬಯಸುತ್ತಾರೆಯೆ? 

ನಮ್ಮ ನಾಡಿನಲ್ಲಿ ನೂರಾರು ವರ್ಷಗಳಿಂದಲೂ ಕುರಿಗಳನ್ನು ಕಾಯುವ ಕಾಯಕದ ಕುರುಬರಿದ್ದಾರೆ, ದನ ಕಾಯುವ ಗೊಲ್ಲರಿದಾರೆ ಗೌಳಿಗರಿದ್ದಾರೆ. ಅವರದೇ ಆದ ಬಗೆಬಗೆಯ ಆಚರಣೆಗಳು ಅವರಲ್ಲಿ ರೂಪತಳೆದಿವೆ. ಪ್ರಾದೇಶಿಕವಾಗಿ, ಭಾಷಿಕವಾಗಿ ದೈವಗಳ ಆರಾಧನೆ ವಿಧಾನಗಳನ್ನು ಆಧರಿಸಿ ಅವರಲ್ಲೂ ಹತ್ತಾರು ಒಳಪಂಗಡಗಳಿವೆ. ಎಲ್ಲಾ ಬ್ರಾಹ್ಮಣರೂ ಬ್ರಾಹ್ಮಣ ಎಂಬ ಒಂದೇ ಹೆಸರಿನಡಿ ಸೇರುವುದಿಲ್ಲ. ಸ್ಥೂಲವಾಗಿ ಅವರಲ್ಲಿ ಶೈವ ಮತ್ತು ವಿಷ್ಣುವಿನ ಆರಾಧಕರ ಎರಡು ಪ್ರಧಾನ ಗುಂಪುಗಳಿದ್ದರೆ, ನೂರಾರು ಒಳ ಪಂಗಡಗಳಿವೆ. ನಾಮಗಳನ್ನು ತೆಗೆದುಕೊಂಡರೆ, ಅಡ್ಡ ನಾಮದವರು, ಉದ್ದ ನಾಮದವರು, ಇಂಗ್ಲೀಷ್ ‘ವಿ ಆಕಾರದ, ಯು ಆಕಾರದ ಹಣೆಗಿಡುವ ನಾಮ ವೈವಿಧ್ಯಗಳೂ ಉಂಟು. ಬ್ರಾಹ್ಮಣರು ಸಸ್ಯಾಹಾರಿಗಳು ಎಂಬ ಮಾತಿದೆ. ಅವರಲ್ಲೂ ಕೆಲವು ಪಂಗಡಗಳವರು ಮೀನು ತಿನ್ನುವುದನ್ನು ರೂಢಿಸಿಕೊಂಡಿದ್ದಾರೆ! ಅಂಥವರನ್ನು ನಾವು ನೋಡಿರಲಿಕ್ಕಿಲ್ಲ ಅಷ್ಟೇ. 

ಹಿಂದೆ ಜಲಪ್ರಳಯವಾಗಿ ಇಡೀ ಜಗತ್ತು ಮುಳುಗಿದ್ದ ಸಂದರ್ಭದಲ್ಲಿ ದೇವರ ಆಣತಿಯಂತೆ ಪ್ರತಿಯೊಂದು ಜೀವಜಂತುಗಳ ಜೋಡಿಗಳನ್ನು ರಕ್ಷಿಸಿದ ನೋಹನೊಂದಿಗೆ ಒಪ್ಪಂದ ಮಾಡಿಕೊಂಡ ದೇವರು ಬಣ್ಣಬಣ್ಣದ ಕಾಮನಬಿಲ್ಲನ್ನು ಸಾಕ್ಷಿಯಾಗಿ ನಿಲ್ಲಿಸಿದನಂತೆ. ಆಗ, ದೇವರು ಒಂದೇ ಬಣ್ಣದ ಕಾಮನಬಿಲ್ಲಿಗೆ ಏಕೆ ಸೀಮಿತಗೊಳ್ಳಲಿಲ್ಲ? ಅಂಥ ಏಕತಾನತೆ ಅವನಿಗೂ ಬೇಡವಾಗಿತ್ತೆ? 

ಬ್ಯಾಬಿಲೋನ್ ಗೋಪುರ ಕಟ್ಟುತ್ತಿದ್ದ ಏಕ ಭಾಷಿಕ ಮಾನವ ಸಮುದಾಯದಲ್ಲಿ ವಿವಿಧ ಭಾಷೆಗಳನ್ನು ಹುಟ್ಟುಹಾಕಿ ವಿವಿಧ ಭಾಷಿಕ ಸಮುದಾಯಗಳು ಉಂಟಾಗುವಂತೆ ಮಾಡಿ ಗೋಪುರ ನಿರ್ಮಾಣಕ್ಕೆ ತಡೆಯೊಡ್ಡಲು ಗೊಂದಲಮೂಡಿಸಿದ್ದು ನಾವು ನಂಬುವ, ಆರಾಧಿಸುವ ದೇವರು ಇವರೇ ತಾನೆ? ದೇವರಿಗೇ ಬೇಡವಾದದ್ದು ನಮಗೆ ಬೇಕೆ? 

ಬಲಪಂಥೀಯದ ರಾಜಕೀಯ ವಿಚಾರಗಳ ಭಾರತೀಯ ಜನತಾಪಕ್ಷದ ಮೂಲ ಸೆಲೆಯಾಗಿರುವ, ಭಾರತವೊಂದು ಹಿಂದೂ ರಾಷ್ಟ್ರವೆಂಬ ಪರಿಕಲ್ಪನೆಯ ರಾಷ್ಟ್ರೀಯ ಸ್ವಯಂಸೇವಕ ಸಂಘದ ವಕ್ತಾರರು, ‘ಭಾರತೀಯ ಕ್ರೈಸ್ತರು ಇನ್ನೂ ವಿದೇಶಿ ಪ್ರಭುಗಳ (ಚರ್ಚುಗಳ) ವಶದಲ್ಲಿಯೇ ಇದ್ದಾರೆ, ಅವರು ಭಾರತೀಯರಾಗಬೇಕು, ಅವರ ಧರ್ಮಸಭೆ ಭಾರತೀಯ ಧರ್ಮಸಭೆಯಾಗಬೇಕು, ಅದು ಭಾರತೀಕರಣಗೊಳ್ಳಬೇಕು ಎಂಬ ವಾದವನ್ನು ಮುಂದಿಟ್ಟಿದ್ದಾರೆ. ಈ ವಕ್ತಾರರಲ್ಲಿ ಕೆಲವರು, ಶ್ರೀಗ್ರಂಥ ಬೈಬಲ್ ಯೇಸುಕ್ರಿಸ್ತನ ಯೌವ್ವನಾವಸ್ಥೆಯ ಬಗ್ಗೆ ಮೌನ ತಾಳಿದ ಸಂಧರ್ಭವನ್ನು ಬಳಸಿಕೊಂಡು, ಆ ಸಮಯದಲ್ಲಿ ಆತ ಅಂದಿನ ಕಾಲದಲ್ಲಿ ಆಧ್ಯಾತ್ಮಿಕ ಜ್ಞಾನದಲ್ಲಿ ಮುಂದಿದ್ದ ಭಾರತಕ್ಕೆ ಬಂದು ಆಧ್ಯಾತ್ಮಿಕ ಶಿಕ್ಷಣ ಪಡೆದಿದ್ದ ಎಂದರೆ, ಮತ್ತೆ ಕೆಲವರು, ‘ಆತ ತಮಿಳುನಾಡಿನ ಬ್ರಾಹ್ಮಣ ಕುಟುಂಬದ ಕುಡಿ' ಎಂದೂ ವಾದಿಸುತ್ತಿದ್ದಾರೆ. ಇದು, ನಮಗೆ ಅಪ್ರಸ್ತುತವೆನಿಸಿದರೂ ಅದು ಅವರಿಗೆ ಪ್ರಸ್ತುತ ವಿಚಾರವೇ ಆಗಿದೆ. 

ರಾಷ್ಟ್ರೀಯ ಸ್ವಯಂಸೇವಕ ಸಂಘದವರ ಆಗ್ರಹದ ಮುಂಚೆಯೇ ಭಾರತದ ಕಥೋಲಿಕ ಸಭೆ ಅವರ ಆಶಯಗಳನ್ನು ಬಲಪಡಿಸುವಂತೆಯೇ ನಡೆದುಕೊಳ್ಳುತ್ತಿರುವುದು ಒಂದು ದುರಂತ. ಶತಮಾನಗಳ ಹಿಂದೆ ಯೇಸುಸಭೆಯ ಮಿಷನರಿ ಪಾದ್ರಿ ರಾಬರ್ಟ್ ದೆ ನೋಬಲಿ ಅವರ ಕಾಲದಲ್ಲಿಯೇ ಸವರ್ಣೀಯರಿಗೆ ಬೇರೆ, ನಿಮ್ನ ಅಂದರೆ ದಲಿತ ವರ್ಗದ ಕ್ರೈಸ್ತರಿಗೆ ಬೇರೆ ಬೇರೆ ಗುರುಗಳ ವ್ಯವಸ್ಥೆ ಜಾರಿಯಲ್ಲಿತ್ತಂತೆ. ತಮಿಳು ನಾಡಿನಲ್ಲಿ ದಲಿತ ಸಮುದಾಯದ ಅಡಿಯಲ್ಲಿ ಬರುವ ನಾಡಾರ್, ಮೊದಲಾದ ಸಮುದಾಯದವರಿಗೆ ಅವರವರದೇ ಆದ ಕನ್ಯಾಸ್ತ್ರೀ ಮಠ (ಕಾನ್ವೆಂಟ್)ಗಳಿವೆಯಂತೆ. ಇಂತಹ ಬೆಳವಣಿಗೆಗಳ ತೀರ ಇತ್ತೀಚೆಗಿನ ಉದಾಹರಣೆಗಳನ್ನು ತೆಲಂಗಾಣ ಮತ್ತು ಆಂಧ್ರಪ್ರದೇಶಗಳಲ್ಲಿ ಕಾಣಬಹುದು. ದಲಿತರೇ ಹೆಚ್ಚಿನ ವಿಶ್ವಾಸಿಗಳು ಇರುವಲ್ಲಿ ದಲಿತ ಮೂಲಸೆಲೆಯ ಮೇತ್ರಾಣಿಗಳನ್ನು, ಕಮ್ಮ ಮತ್ತು ರೆಡ್ಡಿ ಮೂಲದ ಕ್ರೈಸ್ತರು ಇರುವ ಪ್ರದೇಶಗಳಲ್ಲಿ ಆಯಾ ಸಮುದಾಯದ ಮೇತ್ರಾಣಿಗಳನ್ನು ನೇಮಕ ಮಾಡಲಾಗುತ್ತದೆಯಂತೆ. ಇದೊಂದು ಬಗೆಯಲ್ಲಿ ಕುರುಬರಿಗೊಂದು ಮಠ, ಒಕ್ಕಲಿಗರಿಗೊಂದು ಮಠ ಕಟ್ಟಿಕೊಳ್ಳುವ ಪರಿಪಾಠದ ಹೋಲಿಕೆಯಂತೆಯೇ ಕಾಣುತ್ತದೆ. ಇದು ವಸ್ತುಸ್ಥಿತಿ. 

———— 

No comments:

Post a Comment

ಎತ್ತಿತೋರಿಸಲಾದ ಪೋಸ್ಟ್

ಅನ್ನಮ್ಮ’ಳಿಗೆ ೨೫೦ರ ಹಾಗೂ ಅತಿ.ವಂ.ಪೊತ್ತಕಮೂರಿಗೆ ೫೦ರ ಸ್ಮರಣೆಯ ಸಂಭ್ರಮ

ಬೆಂಗಳೂರಿನ ಉತ್ತರಹಳ್ಳಿಯ ಅನ್ನಮ್ಮನ ಬೆಟ್ಟ, ಅಲ್ಲಿನ ಅನ್ನಮ್ಮಳ ಸಮಾಧಿ, ಆ ಬೆಟ್ಟದ ಮೇಲಿನ ಶಿಲುಬೆ, ಅಲ್ಲಿ ಪ್ರತಿವರ್ಷ ತಪಸ್ಸು ಕಾಲದ ಐದನೇ ಭಾನುವಾರ ನಡೆಯುವ ಯೇಸು...