Friday, 5 April 2019

ಧರ್ಮಪ್ರಚಾರಕಳಾದ ಸಮಾರಿತ ಸ್ತ್ರೀ - ಸಹೋ. ಡೇವಿಡ್ ಕುಮಾರ್ ಎ. , ಬೆಂಗಳೂರು ಮಹಾಧರ್ಮಕ್ಷೇತ್ರ

ಯೊವಾನ್ನನ ಶುಭಸಂದೇಶ ಅಧ್ಯಾಯ 4:4ರಲ್ಲಿ ನಾವು ಯೇಸುಸ್ವಾಮಿ, ಸಮಾರಿಯದ ಸ್ತ್ರೀಯನ್ನು ಎದುರುಗೊಂಡ ಘಟನೆಯ ಕುರಿತು ಆಲಿಸುತ್ತೇವೆ. ಅಂದಿನ ಕಾಲದಲ್ಲಿ ಯೆಹೂದ್ಯರಿಗೂ ಮತ್ತು ಸಮಾರಿಯದವರಿಗೂ ಕೊಳುಕೊಡುಗೆ ಇರಲಿಲ್ಲ. ಕಾರಣ ಯೆಹೂದ್ಯರು ಬಾಬಿಲೋನಿಗೆ ಸೆರೆ ಹೋಗಿದ್ದಾಗ ಜೇರುಸಲೇಮ್‌ನಲ್ಲಿ ಉಳಿದಿದ್ದಂತಹ ಕೆಲವು ಸಮಾರಿಯದವರೂ ಅಸ್ಸೀರಿಯಾ ಹಾಗು ಇತರ ದೇಶಗಳ ಜನರೊಂದಿಗೆ ಬೆರೆತು ಮದುವೆ ಮಾಡಿಕೊಂಡಿದ್ದರು. ಸೆರೆಯಾಗಿದ್ದ ಯೆಹೂದ್ಯರು ಹಿಂತಿರುಗಿ ಜೆರುಸಲೇಮಿಗೆ ಬಂದ ಮೇಲೆ ಸಮಾರಿಯದವರನ್ನು ಬೆರೆತ ಜನ ಎಂದು ತಿರಸ್ಕರಿಸಿ ತಮ್ಮ ಮಡಿವಂತಿಕೆಯನ್ನು ಪ್ರತಿಪಾದಿಸುತ್ತಿದ್ದರು. 

ಹೀಗಿರುವಲ್ಲಿ ಪ್ರಯಾಣದಿಂದ ಬಳಲಿದ್ದ ಯೇಸುಸ್ವಾಮಿ ಬಾವಿಯ ಬಳಿ ಕುಳಿತುಕೊಂಡರು. ಆಗ ಸುಮಾರು ಮಧ್ಯಾಹ್ನದ ಹೊತ್ತು. ಒಬ್ಬ ಸಮಾರಿಯದ ಮಹಿಳೆ ನೀರು ಸೇದಲು ಅಲ್ಲಿಗೆ ಬಂದಳು. ಆಗ ಯೇಸು, ಕುಡಿಯಲು ನೀರು ಕೊಡು ಎಂದು ಕೇಳಿದರು (ಯೊವಾನ್ನ 4:5-8). 

ನೀರನ್ನು ತರಲು ಬಾವಿಗೆ ಹೋಗುವುದು ಇಂದಿಗೂ ಅನೇಕ ಹಳ್ಳಿಗಳಲ್ಲಿ ರೂಢಿಯಲ್ಲಿದೆ. ದಾರಿಯಲ್ಲಿ ಹೋಗುವಾಗ ಅಥವಾ ಬಾವಿಯ ಬಳಿ ಊರಿಗೆ ಹೊಸದಾಗಿ ಬಂದಿರುವಂತಹ ವ್ಯಕ್ತಿಗಳನ್ನು ಪರಿಚಯಸಿಕೊಳ್ಳುವುದು ಸರ್ವೇಸಾಮಾನ್ಯ. 

ಇಸ್ರಾಯೇಲಿನಲ್ಲಿಯೂ ಕೂಡ ಬಾವಿಗಳ ಬಳಿ ಅನೇಕ ಮುಖ್ಯ ಘಟನೆಗಳು ನಡೆದಿವೆ. ಪ್ರಯಾಣವನ್ನು ಮಾಡುತ್ತಾ ಬಾವಿಯ ಬಳಿಗೆ ಬಂದ ಯಾಕೋಬನು ತನ್ನ ಸೋದರ ಮಾವ ಲಾಬಾನನ ಮಗಳಾದ ರಾಖೆಲಳನ್ನು ಕಂಡದ್ದು ಬಾವಿಯ ಬಳಿಯೇ. ಅಬ್ರಹಾಮನ ಮಗನಾದ ಇಸಾಕ ತನಗೆ ಸರಿದೂಗುವ ಹೆಣ್ಣು ರೆಬೆಕ್ಕಳನ್ನು ಕಂಡದ್ದು ಕೂಡ ಬಾವಿಯ ಬಳಿಯೇ. ಅಂತಹ ಮೋಶೆಯೂ ಸಹ ತನ್ನ ಭವಿಷ್ಯದ ಪತ್ನಿ ಚಿಪ್ಪೋರಳನ್ನು ಕಂಡದ್ದು ಬಾವಿಯ ಬಳಿಯೇ. 

ಇಲ್ಲಿ ದಣಿದಿದ್ದಂತಹ ಯೇಸು ಯಾರಾದರೂ ನೀರನ್ನು ಸೇದಲು ಬರುವರು ಎಂಬ ದೃಢ ಮನಸ್ಸಿನಿಂದ ಬಾವಿಯ ಬಳಿ ಎದುರು ನೋಡುತ್ತಾ ಕುಳಿತ್ತಿದ್ದರು. ಆ ಸಂದರ್ಭದಲ್ಲಿ ಅಲ್ಲಿಗೆ ಬಂದ ಮಹಿಳೆಯಲ್ಲಿ ಕುಡಿಯಲು ನೀರು ಬೇಕೆಂದು ಕೇಳುತ್ತಾರೆ. ಆಗ ಅವರಿಬ್ಬರ ನಡುವೆ ಒಂದು ದೀರ್ಘ ಸಂಭಾಷಣೆ ನಡೆಯುತ್ತದೆ. 

ಯೇಸು 'ಕುಡಿಯಲು ಕೊಂಚ ನೀರು ಕೂಡು' ಎಂದಾಗ, ಆಕೆಗೆ ಒಬ್ಬ ಯೊಹೂದ್ಯ ವ್ಯಕ್ತಿ ಸಮಾರಿಯದವರ ಬಳಿ ನೀರನ್ನು ಕೇಳುವುದು ಆಶ್ಚರ್ಯವೆನಿಸಿತು. ಆದುದರಿಂದ ಆಕೆ ಪ್ರಶ್ನೆಯನ್ನು ಕೇಳಲು ಪ್ರಾರಂಭಿಸುತ್ತಾಳೆ. ನೀವು ಯೆಹೂದ್ಯರು, ನಾನು ಸಮಾರಿಯದವಳು. ಹೀಗಿರುವಲ್ಲಿ ನೀವು ನನ್ನಿಂದ ನೀರು ಕೇಳಬಹುದೆ? ಎನ್ನುತ್ತಾಳೆ. 

ಆಗ ಯೇಸು ಆಕೆಗೆ ಮುಖ್ಯವಾಗಿ ಮೂರು ರಹಸ್ಯಗಳನ್ನು ಬಯಲು ಮಾಡುತ್ತಾರೆ; 

1.ಮಹಿಳೆಯ ಜೀವನದ ರಹಸ್ಯ 

2.ಜೀವ ಜಲದ ರಹಸ್ಯ 

3.ಲೋಕೋದ್ಧಾರಕನ ರಹಸ್ಯ 

ಯೇಸುವನ್ನು ಆಕೆ ಮೊದಲು ಸಾಮಾನ್ಯ ಯೆಹೂದ್ಯನೆಂದು ಪರಿಗಣಿಸಿದ್ದಳು. ಆದರೆ ಯೇಸುಸ್ವಾಮಿ ಆಕೆಯ ಆಧ್ಯಾತ್ಮಿಕ ದಾಹವನ್ನು ಅರಿತಿದ್ದ ಕಾರಣ ಆಕೆಗೆ ಈ ನೀರನ್ನು ಕುಡಿಯುವ ಎಲ್ಲರಿಗೂ ಮತ್ತೆ ದಾಹವಾಗುತ್ತದೆ. ಆದರೆ ನಾನು ಕೊಡುವ ನೀರನ್ನು ಕುಡಿದವನಿಗೆ ಎಂದಿಗೂ ಮತ್ತೆ ದಾಹವಾಗದು; ಆ ನೀರು ಅವನಲ್ಲಿ ಉಕ್ಕಿ ಹರಿಯುವ ಬುಗ್ಗೆಯಾಗಿ, ನಿತ್ಯ ಜೀವನ್ನು ತರುತ್ತದೆ ಎಂದು ತಿಳಿಸುತ್ತಾರೆ. ಆಗ ಆಕೆ ಸ್ವಾಮಿ ಅಂತಹ ನೀರನ್ನು ಕೊಡಿ ಎಂದು ನುಡಿಯುತ್ತಾ ತನ್ನ ವಿಶ್ವಾಸದ ಮೊದಲ ಹೆಜ್ಜೆಯನ್ನು ಇಡುತ್ತಾಳೆ. 

ತದನಂತರ ಯೇಸು ಆಕೆಯ ವೈಯುಕ್ತಿಕ ಜೀವನದ ಕುರಿತು ಅರಿತಿದ್ದರೂ ಸಹ, ಆಕೆಯನ್ನು ಹೋಗಿ ನಿನ್ನ ಗಂಡನನ್ನು ಕರೆದುಕೊಂಡು ಬಾ ಎಂದು ನುಡಿಯುತ್ತಾರೆ. ಆಕೆಯಾದರೋ ತನ್ನ ಜೀವನದ ರಹಸ್ಯವನ್ನು ಬಿಚ್ಚಲು ಹಿಂಜರಿಯುತ್ತಾಳೆ. ಆದಕಾರಣ ನನಗೆ ಗಂಡನಿಲ್ಲ ಎಂದು ನುಡಿದು ಸುಮ್ಮನಾದಳು. ಆದರೆ ಯೇಸು ನಿನಗೆ ಐದು ಜನ ಗಂಡಂದಿರು ಇದ್ದರು. ಆದರೆ ನಿನ್ನೂಡನೆ ಇರುವವನು ನಿನ್ನ ಗಂಡನಲ್ಲ, ನೀನು ಹೇಳಿದ್ದು ಸರಿಯೇ ಎಂದು ಆಕೆಯ ಸಂಪೂರ್ಣ ಜೀವನವನ್ನೇ ತೆರೆದಿಡುತ್ತಾರೆ. ಆಗ ಆಕೆ ಸ್ವಾಮಿ, ತಾವು ಪ್ರವಾದಿ ಎಂದು ನನಗೀಗ ತಿಳಿಯಿತು ಎಂದು ನುಡಿಯುತ್ತಾಳೆ. ಈ ಎರಡನೇಯ ಹಂತದಲ್ಲಿ ಆಕೆಯ ವಿಶ್ವಾಸದ ಬೆಳೆವಣಿಗೆಯನ್ನು ನಾವು ಕಾಣಬಹುದು. 

ತದನಂತರ ಆಕೆ ತಮ್ಮ ಪೂರ್ವಜರ ದೇವಾಲಯದ ಮಹತ್ವದ ಕುರಿತು ಮಾತನಾಡುತ್ತಾಳೆ. ಪ್ರಸ್ತುತದಲ್ಲಿ ನಾವು ಅನೇಕ ಪುಣ್ಯಕ್ಷೇತ್ರಗಳನ್ನು ಕಾಣುತ್ತೇವೆ. ಪ್ರತಿಯೊಂದು ಪುಣ್ಯಕ್ಷೇತ್ರವು ಅದರದ್ದೇ ಆದ ಮಹತ್ವವನ್ನು ಹೊಂದಿದೆ. ಜನರು ತಮ್ಮ ಕ್ಷೇತ್ರ ಇತರ ಕ್ಷೇತ್ರಗಳಿಗಿಂತ ಉತ್ತಮವೆಂದು ಕೊಚ್ಚಿಕೊಳ್ಳುವುದು ಸರ್ವೇಸಾಮಾನ್ಯ. ಹೀಗೆ ಯೆಹೂದ್ಯರು ಜೆರುಸಲೇಮ್ ದೇವಾಲಯ ಆರಾಧನೆಗೆ ಯೋಗ್ಯವಾದದು ಎಂದರೆ, ಸಮಾರಿಯದವರು ಗೆರಿಜಿಮ್ ಪರ್ವತದ ದೇವಾಲಯವೇ ಉತ್ತಮವಾದುದು ಎಂದು ಭಾವಿಸುತ್ತಿದ್ದರು. ಆದ ಕಾರಣ ಆಕೆ ಯೆಹೂದ್ಯರು ದೇವರನ್ನು ಆರಾಧಿಸುವ ಕ್ಷೇತ್ರ ಇರುವುದು ಜೆರುಸಲೇಮಿನಲ್ಲೇ ಎಂದು ಹೇಳಿಕೊಳ್ಳುತ್ತಾರಲ್ಲಾ ಎಂಬ ವಿಷಯದ ಕುರಿತು ಯೇಸುವಿನ ಅಭಿಪ್ರಾಯವನ್ನು ಪಡೆಯಲು ಇಚ್ಛಿಸುತ್ತಾಳೆ. 

ಯೇಸು ತಾಳ್ಮೆಯಿಂದ, ದೇವರು ಪುಣ್ಯಕ್ಷೇತ್ರಕ್ಕೆ ಸೀಮಿತವಾಗಿಲ್ಲ ಅವರನ್ನು ಸತ್ಯದಿಂದಲೂ, ಪೂರ್ಣಮನಸ್ಸಿನಿಂದಲೂ ಆರಾಧಿಸುವುದೇ ಮುಖ್ಯ ಎಂಬುವುದನ್ನು ಆಕೆಗೆ ತಿಳಿಯಪಡಿಸುತ್ತಾರೆ. ತದನಂತರ ಯೇಸು ತಾನೇ ಲೋಕೋದ್ಧ್ದಾರಕ ಎಂದು ಬಹಿರಂಗಪಡಿಸಿದಾಗ ತನ್ನ ಕೊಡವನ್ನು ಅಲ್ಲಿಯೇ ಬಿಟ್ಟು ಊರಿಗೆ ಹೋಗಿ, ಊರ ಜನರೆಲ್ಲರನ್ನು ಯೇಸುವಿನ ಬಳಿ ಕರೆತರುವುದರ ಮೂಲಕ ತನ್ನ ಸಂಪೂರ್ಣ ವಿಶ್ವಾಸವನ್ನು ವ್ಯಕ್ತಪಡಿಸುತ್ತಾಳೆ. 

ಹೀಗೆ ಒಬ್ಬ ಸಮಾರಿಯದ ಸ್ತ್ರೀ ಯೇಸುವನ್ನು ಒಬ್ಬ ದಾರಿಹೋಕ ಯೆಹೂದ್ಯ ಎಂದು ಉದ್ದೇಶಿಸಿ, ನಂತರ ಆತನೊಬ್ಬ ಪ್ರವಾದಿಯೆಂದು ಗುರುತಿಸಿ, ಅಂತ್ಯದಲ್ಲಿ ಅವರೇ ಅಭಿಷಿಕ್ತರಾದ ಲೋಕೋದ್ಧಾರಕ ಎಂಬುವುದನ್ನು ಅರಿತು, ಒಬ್ಬ ಧರ್ಮಪ್ರಚಾರಕಳಾಗುತ್ತಾಳೆ. ಹೀಗೆ ಯೇಸುಸ್ವಾಮಿ ಪಾಪಿಗಳಿಗೂ ಕೂಡ ಧರ್ಮಪ್ರಚಾರಕರಾಗುವ ಸೌಭಾಗ್ಯವನ್ನು ಕಲ್ಪಿಸಿಕೊಟ್ಟರು. 

———— 

No comments:

Post a Comment

ಎತ್ತಿತೋರಿಸಲಾದ ಪೋಸ್ಟ್

ಅನ್ನಮ್ಮ’ಳಿಗೆ ೨೫೦ರ ಹಾಗೂ ಅತಿ.ವಂ.ಪೊತ್ತಕಮೂರಿಗೆ ೫೦ರ ಸ್ಮರಣೆಯ ಸಂಭ್ರಮ

ಬೆಂಗಳೂರಿನ ಉತ್ತರಹಳ್ಳಿಯ ಅನ್ನಮ್ಮನ ಬೆಟ್ಟ, ಅಲ್ಲಿನ ಅನ್ನಮ್ಮಳ ಸಮಾಧಿ, ಆ ಬೆಟ್ಟದ ಮೇಲಿನ ಶಿಲುಬೆ, ಅಲ್ಲಿ ಪ್ರತಿವರ್ಷ ತಪಸ್ಸು ಕಾಲದ ಐದನೇ ಭಾನುವಾರ ನಡೆಯುವ ಯೇಸು...