Monday, 8 April 2019

ನಾವು ಬದಲಾಗಬೇಕಿದೆ - ಸಹೋ. ಜಾರ್ಜ್ ಫೆರ್ನಾಂಡಿಸ್, ಎಂ. ದಾಸಾಪುರ


ಜಗತ್ತು ಅಂದಿನಿಂದ ಇಂದಿನವರೆಗೂ ಬದಲಾವಣೆಯ ಪಥದಲ್ಲಿ ಸಾಗುತ್ತಾ ಬಂದಿದೆ. ನಾವು ಗಮನಿಸಿದಂತೆ ನಮ್ಮ ಆಹಾರ ಪದ್ಧತಿಗಳಿಂದ ಹಿಡಿದು, ನಾವು ತೊಡುವ ಬಟ್ಟೆಗಳ ತನಕವೂ ಬದಲಾವಣೆಯು ಭರ್ಜರಿ ಬೇಟೆಯನ್ನೇ ಆಡುತ್ತಿದೆ. ಹೀಗಿರುವಲ್ಲಿ ಈ ಬದಲಾವಣೆಯೆಂಬ ಪದ ಎಂತಹ ಬಿರುಗಾಳಿಯನ್ನು ಎಬ್ಬಿಸಿದೆ ಎಂದು ತಿಳಿದುಕೊಳ್ಳಲು ಅಷ್ಟೇನು ಸಮಯವನ್ನು ವ್ಯಯಮಾಡಬೇಕೆಂದಿಲ್ಲ. ಏಕೆಂದರೆ ಕಾಲದ ಬದಲಾವಣೆಗಳು ಮನುಷ್ಯನನ್ನು ನಿರ್ಜೀವವನ್ನಾಗಿ ಮಾಡಿ ವಸ್ತುಗಳು ಜೀವಿಸುವಂತೆ ಮಾಡುತ್ತಿವೆ. ಬಹುಶಃ ಈ ಬದಲಾವಣೆಗಳು ಮಾನವನನ್ನು ಸಂದಿಗ್ಧ ಪರಿಸ್ಥಿತಿಗೆ ತಳ್ಳಿ. ಅವನ ಬಾಹ್ಯ ಬದಲಾವಣೆಗಳಲ್ಲಿ ನಾಟಕೀಯ ತಿರುವುಗಳನ್ನು ಹುಟ್ಟಿಹಾಕಿವೆ. ಹೀಗಿರುವಾಗ ಈ ಬದಲಾವಣೆ ಸಮಾಜಕ್ಕೆ ಅವಶ್ಯಕವೇ? 

ನಾವು ಜೀವಿಸುತ್ತಿರುವ ಈ ಸಮಾಜದಲ್ಲಿ ಹಲವಾರು ಬದಲಾವಣೆಗಳು ನಮ್ಮನ್ನು ಮೂಕವಿಸ್ಮಿತರನ್ನಾಗಿಸಿವೆ. ಆದರೆ ಮಾನವ ಎಂಬ ಜೀವಿ ಈ ಬದಲಾವಣೆಯ ಸುಳಿಗೆ ಸಿಲುಕಿ ಬಾಹ್ಯವಾಗಿ ತನ್ನನ್ನೇ ತನಗೆ ಬೇಕಾದ ರೀತಿಯಲ್ಲಿ ಬದಲಾಯಿಸಿಕೊಳ್ಳುತ್ತಿದ್ದಾನೆ. ಇದಕ್ಕೆ ಉದಾಹರಣೆ ಬೇಕಾದರೆ ಪ್ರಸ್ತುತ ನಮ್ಮ ದೇಶದಲ್ಲಿ ಆಗುತ್ತಿರುವ ಬಾಹ್ಯ ಬದಲಾವಣೆಯನ್ನು ಅವಲೋಕಿಸಿ ನೋಡಬಹುದಾಗಿದೆ. ಇಲ್ಲಿ ಆಗುತ್ತಿರುವ ಬದಲಾವಣೆಗಳು ಸ್ವಾರ್ಥ ಸಾಧನೆಯ ಶಿಖರವನ್ನೇರಿ, ಅಭಿವ್ಯಕ್ತಿ ಸ್ವಾತಂತ್ರದ ನಿರ್ಮೂಲನೆಗೆ ನಾಂದಿ ಹಾಡಲು ಕರೆನೀಡುತ್ತಿದೆ. ಮಾನವ ಬಾಹ್ಯವಾಗಿ ತುಂಬಾ ಬದಲಾವಣೆ ತಂದುಕೊಂಡಿದ್ದಾನೆ. ತನ್ನ ತಲೆ ಕೂದಲು ಬಾಚುವುದರಿಂದ ಹಿಡಿದು, ಸವೆದು ಹೋಗುವ ಚಪ್ಪಲಿಗಳ ತನಕ ವೈವಿಧ್ಯತೆಯಲ್ಲಿ ವೈವಿಧ್ಯತೆಯನ್ನು ಬದಲಾವಣೆ ಎಂದುಕೊಳ್ಳುತ್ತಾ, ತನ್ನನ್ನೇ ತಾನು ವಿಜ್ರಂಭಿಸಿಕೊಳ್ಳುತ್ತಾ, ಬಾಹ್ಯ ಬದಲಾವಣೆಗೆ ಜೈ ಜೈ ಎನ್ನುತ್ತಾ, ಮುಖ್ಯವಾಗಿ ತನ್ನ ಆಂತರ‍್ಯದಲ್ಲಿ ಕೋಪ, ಮದ, ಮತ್ಸರ, ದ್ವೇಷ, ಹಿಂಸೆ, ಜಂಭ, ಜಾತಿಯಲ್ಲಿ ಮೇಲುಕೀಳು ಎಂಬ ಕೆಟ್ಟ ಭಾವನೆಗಳ ಗೂಡು ಮಾಡಿಕೊಂಡು ಪ್ರೀತಿ, ಸ್ನೇಹ, ಸಂಬಂಧ ಮತ್ತು ವಿವೇಚನಾಶಕ್ತಿ ಎಂಬ ಸದ್ಗುಣಗಳನ್ನು ಗಾಳಿಗೆ ತೂರಿ, 'ಆಂತರಿಕವಾಗಿ ಮಾತ್ರ ನಾ ಬದಲಾಗಲಾರೆ' ಎಂಬ ಮಾತನ್ನು ಪರೋಕ್ಷವಾಗಿ ಆಡುತ್ತಿದ್ದಾನೆ. 

ಎಂಥಾ ವಿಚಿತ್ರ ಅಲ್ಲವೇ? ಕೇವಲ ನಮ್ಮ ಜೀವನ ನೀರಿನ ಮೇಲಿನ ಗುಳ್ಳೆಯಂತೆ ಎಂದು ತಿಳಿದಿದ್ದರೂ ಆಂತರಿಕ ಬದಲಾವಣೆಗೆ ಆದ್ಯತೆ ನೀಡುತ್ತಿಲ್ಲವಲ್ಲಾ? ಇಂದಿನ ಸಮಾಜವೂ ಬದಲಾವಣೆಯ ಸುಳಿಯಲ್ಲಿ ಹೊರಬರಲಾಗದೆ ಒದ್ದಾಡುತ್ತಿದೆ. ಏಕೆಂದರೆ ಸಮಾಜದ ನಿರ್ಮಾತೃವಾದ ಈ ಮಾನವನೇ ಬದಲಾವಣೆಗೆ ಅಡಿಗಲ್ಲು ಹಾಕಿದ್ದು. ವಿಪರ್ಯಾಸವೆಂದರೆ ಈ ಬದಲಾವಣೆಯನ್ನು ಕೇವಲ ಸಮಾಜಕ್ಕೆ ಸೀಮಿತಗೊಳಿಸಿ, ಅಂದರೆ ಸಮಾಜವನ್ನು ಒಂಟಿ ಜೀವಿಗಳ ಆಶ್ರಯ ತಾಣವನ್ನಾಗಿ ಮಾಡಿ 'ನಾ ಮಾತ್ರ ಆಂತರ‍್ಯದಲ್ಲಿ ಬದಲಾಗಲು ಪಣತೊಡುವುದಿಲ್ಲ' ಎಂಬ ಕಟು ಸತ್ಯವನ್ನು ನುಡಿಯುತ್ತಿದ್ದಾರೆ. 

ಇಪ್ಪತ್ತೊಂದನೇ ಶತಮಾನದಲ್ಲಿಯೂ ಕೂಡ ಮಾನವ ತನ್ನ ಮೂರ್ಖತೆಯನ್ನು ಎಷ್ಟರ ಮಟ್ಟಿಗೆ ಮೈಗೂಡಿಸಿಕೊಂಡಿದ್ದಾನೆ ಎಂದರೆ, ಯಾರೋ ಸಮಾಜದ ವಿರುದ್ಧ ಸುಳ್ಳು ಹೇಳಿ ಅದನ್ನೇ ಬದಲಾವಣೆ ಎಂದು ಬಿಂಬಿಸುತ್ತಿದ್ದರೆ, ಅದಕ್ಕೆ ತಕ್ಕಂತೆ ತನ್ನ ವಿವೇಕವನ್ನು ಉಪಯೋಗಿಸದೆ, ಆ ಸುಳ್ಳಿನ ಕಂತೆಯ ಬದಲಾವಣೆಯನ್ನು ಸರಿ ಎನ್ನುವಷ್ಟರಮಟ್ಟಿಗೆ ಬದಲಾಗಿದ್ದಾನೆ. ಹೀಗಿರುವಲ್ಲಿ ಬಾಹ್ಯ ಬದಲಾವಣೆಯನ್ನು ಸುಮ್ಮನೆ ಒಪ್ಪಿಕೊಂಡು, 'ಆಂತರ‍್ಯದಲ್ಲಿ ನಾ ಬದಲಾಗಲಾರೆ' ಎನ್ನುತ್ತಿರುವ ಈ ಮನುಷ್ಯನಿಗೆ ಏನೆನ್ನಬೇಕೋ? 

ವಿಚಿತ್ರ ನೋಡಿ! ಪ್ರೀತಿ ಮೂಲಕ ಮಾನವ ತನ್ನ ಜೀವನದಲ್ಲಿ ಹಲವಾರು ಬದಲಾವಣೆಗೆ ನಾಂದಿ ಹಾಡಬಹುದು ಎಂದು ಗೊತ್ತು. ಇತರರಿಗೆ ಸಹಾಯ ಹಸ್ತ ನೀಡುವುದರ ಮೂಲಕ ಇತರರ ಜೀವನದಲ್ಲಿ ಸಂತೋಷವೆಂಬ ತಂಗಾಳಿ ಬೀಸುವಂತೆ ಮಾಡಬಹುದು ಎಂದು ಗೊತ್ತು. ಮಾನವರು ಪರಸ್ಪರ ಅವಲಂಬಿತರು ಎಂಬುದು ತಿಳಿದ ವಿಷಯ. ಅಂತೆಯೇ ಹಾಸಿಗೆ ಇದ್ದಷ್ಟು ಕಾಲು ಚಾಚಬೇಕು ಎಂಬ ಕಟು ಸತ್ಯದ ಅರಿವೂ ಅವನಿಗುಂಟು. ಹೀಗೆ ಎಲ್ಲವನ್ನು ಅರಿತಿರುವ ಮಾನವ ಸಕಾರಾತ್ಮಕತೆಯ ಮನೋಭಾವನೆಯನ್ನು ಹೊಂದಿ, ಈ ಸಮಾಜವನ್ನು ಪ್ರಶಾಂತತೆಯೆಡೆಗೆ ಕೊಂಡೊಯ್ಯುವುದನ್ನು ಬಿಟ್ಟು, ನಕಾರಾತ್ಮಕ ಬದಲಾವಣೆಯೆ ನಮಗೆ ಮುಖ್ಯ ಎಂಬ ಕುರುಡು ಬದಲಾವಣೆಗೆ, ತನ್ನ ಹಸ್ತವನ್ನು ಚಾಚುತ್ತಿರುವ ಈ ಮನುಜನ ಪ್ರಸ್ತುತ ನಿಲುವು, ಮೂರ್ಖತನದ ಪರಮಾವಧಿ ಎಂದರೆ ತಪ್ಪಾಗಲಾರದು. 

ಆದ್ದರಿಂದ ನಮ್ಮೆಲ್ಲರ ಜೀವನವನ್ನು ಒಮ್ಮೆ ಆಂತರಿಕವಾಗಿ ವೀಕ್ಷಿಸಿಕೊಳ್ಳಬೇಕಾಗಿದೆ. ಸ್ವಾರ್ಥಪರ, ಜಂಭ, ಕ್ರೋಧ, ಮದ, ಮತ್ಸರ ಹಾಗೂ ಅಶಾಂತಿಯ ಗುಂಪುಗಳನ್ನು ಕಟ್ಟುವ ಬದಲು ಉತ್ತಮ ಸಮಾಜ ನಿರ್ಮಾಣ ಮಾಡಲು ಪ್ರಯತ್ನಿಸೋಣ. ಪ್ರಯತ್ನ ಎಂಬುದು ನಿರಂತರ ಪ್ರಕ್ರಿಯೆ. ಆದ್ದರಿಂದ ಈ ಪ್ರಯತ್ನ ಎಂಬ ಪ್ರಕ್ರಿಯೆಯಲ್ಲಿ ಆಂತರಿಕ ಬದಲಾವಣೆ ಎನ್ನುವ ಕಾಮನ ಬಿಲ್ಲು ನಮ್ಮಲ್ಲಿ ಮೂಡಬೇಕು. ಹೀಗೆ ಆಂತರಿಕ ಬದಲಾವಣೆಯ ಮೂಲಕ ನಿಜ ಮನುಷ್ಯರಾಗಿ ಬಾಳುವುದು ನಮ್ಮೆಲ್ಲರ ಕರ್ತವ್ಯ. ಆ ಕಾಮನ ಬಿಲ್ಲಿನಲ್ಲಿರುವ ಏಳು ಬಣ್ಣಗಳಂತೆ, ನಮ್ಮ ಸದ್ಗುಣಗಳು ಸಹ ನಮ್ಮ ಜೀವನದಲ್ಲಿ ಕಾಮನ ಬಿಲ್ಲಿನ ಹಾಗೆ ಮೂಡಿದಾಗ, ಆಂತರಿಕ ಬದಲಾವಣೆ ತನ್ನಿಂದ ತಾನೇ ಸಾಧ್ಯಾವಾಗುತ್ತದೆ. ಹೀಗೆ ಸಕಾರಾತ್ಮಕ ಭಾವನೆಗಳನ್ನು ಹುಟ್ಟು ಹಾಕಿ, ನವ ಸಮಾಜದ ಅಡಿಗಲ್ಲುಗಳಾಗಿ ಅದರ ಮೇಲೆ ಪ್ರೀತಿ, ಸ್ನೇಹ ಮತ್ತು ಸಂಬಂಧ ಎಂಬ ಸದ್ಗುಣಗಳ ಮನೆಯನ್ನು ನಿರ್ಮಿಸಿ, ನಾವು ಬದಲಾಗುತ್ತಿದ್ದೇವೆ ಎಂಬುದನ್ನು ನಿರೂಪಿಸೋಣ ಈ ನಿರೂಪಣೆಯ ಹಾದಿಯಲ್ಲಿ ಬದಲಾವಣೆ ಎಂದಿಗೂ ನಿಲ್ಲದಿರಲಿ. ಏಕೆಂದರೆ ಬದಲಾವಣೆ ನಿರಂತರ ಪ್ರಕ್ರಿಯೆ ಅಲ್ಲವೇ? 

ಇದಕ್ಕೆ ನೀವೇನಂತಿರಾ.........? 



———— 

No comments:

Post a Comment

ಎತ್ತಿತೋರಿಸಲಾದ ಪೋಸ್ಟ್

ಅನ್ನಮ್ಮ’ಳಿಗೆ ೨೫೦ರ ಹಾಗೂ ಅತಿ.ವಂ.ಪೊತ್ತಕಮೂರಿಗೆ ೫೦ರ ಸ್ಮರಣೆಯ ಸಂಭ್ರಮ

ಬೆಂಗಳೂರಿನ ಉತ್ತರಹಳ್ಳಿಯ ಅನ್ನಮ್ಮನ ಬೆಟ್ಟ, ಅಲ್ಲಿನ ಅನ್ನಮ್ಮಳ ಸಮಾಧಿ, ಆ ಬೆಟ್ಟದ ಮೇಲಿನ ಶಿಲುಬೆ, ಅಲ್ಲಿ ಪ್ರತಿವರ್ಷ ತಪಸ್ಸು ಕಾಲದ ಐದನೇ ಭಾನುವಾರ ನಡೆಯುವ ಯೇಸು...