ಯುವಕರು 'ನಿರಂಕುಶಮತಿ' ಗಳಾಗಬೇಕು. `ನಿರಂಕುಶಮತಿ'ತ್ವ ಎಂದರೆ ನಿರಂಕುಶ ಪ್ರಭುತ್ವದಂತೆ ಎಂದು ತಿಳಿಯಬಾರದು. ನಿರಂಕುಶ ಪ್ರಭುತ್ವದ ಲಕ್ಷಣವೆಂದರೆ ವಿವೇಕಹೀನವಾದ ಸ್ವಚ್ಛಂದ ವರ್ತನೆ. ಸಂಯಮಪೂರ್ಣವಾದ ಬುದ್ಧಿ ಸ್ವಾತಂತ್ರ್ಯವೇ `ನಿರಂಕುಶಮತಿ.' ಮತಿ ಮಾನವನ ಸವೋತ್ಕೃಷ್ಟವಾದ ಆಯುಧ. ಮತಿಯೇ ಕತ್ತಲಲ್ಲಿ ದಾರಿ ತೋರುವ ರತ್ನದ ಕೈದೀವಿಗೆ. ಮತಿಯ ದೆಸೆಯಿಂದಲೇ, ಪ್ರಾಣಿಮಾತ್ರವಾಗುತ್ತಿದ್ದ ನರಜೀವಿ ಮನುಷ್ಯತ್ವಕ್ಕೆ ಏರಿದ್ದಾನೆ. ಮತಿಯ ಕೃಪಾಮಹಿಮೆಯಿಂದಲೇ ನಾವು ಮನುಷ್ಯತ್ವದಿಂದ ದೇವತ್ವಕ್ಕೆ ಏರಬೇಕಾಗಿದೆ. ಮತಿ ಮನುಷ್ಯತ್ವದ ಹಕ್ಕು. ಆ ಹಕ್ಕನ್ನು ಬಿಟ್ಟವನು ಮನುಷ್ಯತ್ವ ಕಳೆದುಕೊಳ್ಳುತ್ತಾನೆ. ಆದ್ದರಿಂದ, ಸಹೋದರರೇ, ಮತಿ ನಿಮ್ಮ ನೆಚ್ಚಿನ ರನ್ನ ದೀವಿಗೆಯಾಗಲಿ. ಸ್ವಲ್ಪವಾಗಿಯೋ ಹೆಚ್ಚಾಗಿಯೋ ಮತಿ ಮನುಷ್ಯರೆಲ್ಲರಲ್ಲಿಯೂ ಇರುತ್ತದೆ. ಆದರೆ ಈಗೇನಾಗಿದೆ ಅದರ ಗತಿ? ಮೌಢ್ಯದಿಂದಲೂ ಮತಾಚಾರಗಳಿಂದಲೂ ಸಮಾಜ ಭೀತಿಯಿಂದಲೂ ರಾಜಭಯದಿಂದಲೂ ಸ್ವರ್ಗ ನರಕ ದೇವಾನುದೇವತೆಗಳ ಮೋಹ ಮಾಯೆಗಳಿಂದಲೂ ಅದು ಸತ್ವರಹಿತವಾಗಿದೆ; ಕಾಂತಿಹೀನವಾಗಿದೆ. ಚಕ್ರವರ್ತಿಯಂತೆ ಸಿಂಹಾಸನದಲ್ಲಿ ಮಂಡಿಸಬೇಕಾದುದು ತೊತ್ತಾಗಿ ಕಾಲೊತ್ತಬೇಕಾಗಿದೆ. ಎಂದರೆ ಮತಿಗೆ ಅಂಕುಶಗಳು ಅತಿಯಾಗಿ ಹೋಗಿ ಜೀವವೆ ನಿಸ್ತೇಜವಾಗಿದೆ. ಯುವಕ ಮಿತ್ರರೇ, ಅಧೋಗತಿಗಿಳಿದಿರುವ ನಮ್ಮ ಮತಿಯನ್ನು ಮತ್ತೆ ಆಕಾಶಕ್ಕೆತ್ತಬೇಕು.
ಮತಿಯನ್ನು ನಿಸ್ತೇಜಗೈದಿರುವ ಕೆಲವು ಅಂಶಗಳನ್ನು ವಿವರಿಸುತ್ತೇನೆ. ಸಾವಧಾನದಿಂದ ಕೇಳಿ. ಮತ ನಮಗೊಂದು ದೊಡ್ಡ ಬಂಧನವಾಗಿದೆ; ನಾಡಿನ ಏಳ್ಗೆಯ ಕುತ್ತಿಗೆಗೆ ಉರುಳಾಗಿದೆ. ಪರಮಶಾಂತಿಯೂ ಪರಮಾನಂದವೂ ಆಗಿರುವ ಪರಮೇಶ್ವರನನ್ನು ಪಡೆಯಲೆಂದು ಜೀವನ ಮಾಡುವ ಪ್ರಯತ್ನವೆ ಮತದ ನಿಜಾವಸ್ಥೆ. ಆದರೆ ಈಗ ನಾವು ಮತ ಎಂದು ಕರೆದುಕೊಳ್ಳುವ ಆಚಾರ ಸಮೂಹ ಬರಿಯ ಸಾಮಾಜಿಕವಾದ ಕಟ್ಟುಕಟ್ಟಳೆಗಳ ಕಾಟವಾಗಿದೆ. ಒಬ್ಬರನ್ನೊಬ್ಬರು ಮುಟ್ಟದಿರುವುದು, ನೋಡದಿರುವುದು; ಒಬ್ಬರೊಡನೊಬ್ಬರು ಕುಳಿತು ಭೋಜನ ಮಾಡದಿರುವುದು; ನಾಮ ಹಾಕಿಕೊಳ್ಳುವುದು; ವಿಭೂತಿ ಹಚ್ಚಿಕೊಳ್ಳುವುದು, ಮುದ್ರೆ ಹೊಡೆದುಕೊಳ್ಳುವುದು, ಶಿಲುಬೆ ಧರಿಸಿಕೊಳ್ಳುವುದು, ಕೆಲವರನ್ನು ಸಾರ್ವಜನಿಕವಾದ ಬಾವಿ ಕೆರೆಗಳಲ್ಲಿ ನೀರು ತೆಗೆದುಕೊಳ್ಳದಂತೆ ಮಾಡುವುದು; ಕೆಲವರನ್ನು ದೇವಸ್ಥಾನದೊಳಕ್ಕೆ ಸೇರಿಸದಿರುವುದು; ಮತ್ತೆ ಕೆಲವರನ್ನು ಗುಡಿಯೊಳಗೆ ಹತ್ತು ಮಾರು ಮಾತ್ರ ಬರಗೊಡಿಸುವುದು; ಹಾಗೆ ಬರಗೊಡೊಸಬೇಕೇ ಬೇಡವೇ ಎಂದು ಚರ್ಚೆ ನಡೆಸುವುದು; ಇತ್ಯಾದಿ ಕೆಲಸಕ್ಕೂ ಬಾರದ, ಶ್ರೇಯಸ್ಕರವೂ ಅಲ್ಲದ ನೂರಾರು ಆಚಾರ ವ್ಯವಹಾರಗಳ ಸಮಷ್ಟಿಯೇ ನಮ್ಮ ಮತದ ಹುರುಳಾಗಿ ಕುಳಿತಿದೆ. ಉಪನಿಷತ್ ಭಗವದ್ಗೀತೆ ಮತ್ತು ಮಹಾವಿಭೂತಿಗಳು ಸಾರಿದ ಮತ್ತು ಸಾರುತ್ತಿರುವ ಅಮೃತ ಸಂದೇಶ ಅರಣ್ಯರೋದನವಾಗಿದೆ. ಆದರೆ ಇನ್ನು ಹೆಚ್ಚು ಕಾಲ ಆ ಅಮೃತಸಂದೇಶಕ್ಕೆ ಕಿವುಡಾಗಿರಲಾರೆವು. ಹಾಗಿದ್ದರೆ ನಮಗೂ ನಮ್ಮ ಸಂಸ್ಕೃತಿಗೂ ಮರಣವೇ ಗತಿಯಾಗುತ್ತದೆ. ಯುವಕರಾದವರು ಎಚ್ಚತ್ತುಕೊಂಡು ದೀರ್ಘದೃಷ್ಟಿಯಿಂದಲೂ ವಿಶಾಲ ಹೃದಯದಿಂದಲೂ ಸನಾತನವಾದರೂ ಚಿರನವೀನವಾದ ಆತ್ಮನ ಚಿರಂತನ 'ದರ್ಶನ'ವನ್ನು ಪಡೆದು ತಮ್ಮನ್ನೂ ದೇಶವನ್ನೂ ಉದ್ಧಾರಮಾಡಿಕೊಳ್ಳಬೇಕಾಗಿದೆ....
ಕುವೆಂಪು ಸಂಚಯ ಪುಟ - 710
No comments:
Post a Comment