ಬಂದೂಕು ನಳಿಕೆಯ ಸವರುತ್ತಿವೆ
ಗುಂಡು ಹಾರಿಸುವ ಚಪಲದಲಿ
ತೊಟ್ಟಿಲು ಕಂದನ ಜಿಲಕಿಯೊಳಗೆ
ಮದ್ದು ಗುಂಡುಗಳ ಸಪ್ಪಳವೆ!
ಪಾರಿವಾಳದ ಗೂಡಿನೊಳಗೆ
ರಣಹದ್ದಿನ ಕೆಂಪು ಮೊಟ್ಟೆಗಳು
’ಸಿದ್ಧಿ ಪುರುಷ’ರ ಬಾಯಲ್ಲೂ
’ಯುದ್ಧ’ ’ಯುದ್ಧ’ ಓಂಕಾರನಾದ
ಗಡಿ ಬೇಲಿಗೆ ಹಬ್ಬಿದ್ದ
ಮಲ್ಲಿಗೆ ಪಾರಿಜಾತಗಳು
ದ್ವೇಷ ಕಿಡಿಗೆ ಸುಟ್ಟುಹೋಗಿವೆ
ಕೋಮು ಕುಮ್ಮಕ್ಕಿನ ಗೊಬ್ಬರದಲಿ
ಪಾಪಸ್ಸು ಕಳ್ಳಿ ಬೆಳೆದಿವೆ
ಬಂದೂಕಿನೊಳಗೂ ಆತ್ಮಸಾಕ್ಷಿಯಿದೆ
ಒಳಗೊಳಗೆ ಪಿಸುಗುಡುತ್ತಿದೆ
“ ಯಾರ ಎದೆಯ ಸೀಳಲಿ” ?
“ಯಾರಿಗಿಂದು ವಿಧವೆಯ ಪಟ್ಟ” ?!
ಯುದ್ಧ ಕತ್ತಲಲಿ ಬೆತ್ತಲಾಗುವುದು ದೇಶ
ಒಣ ಪ್ರತಿಷ್ಠೆಗೆ ಬಡಕಲಾದವರು ನಾವು
ಎಸೆದು ಬಿಡಿ ರಣ ಆಯುಧಗಳ
ಮತ್ತೆ ಅರಳಲಿ ಸಂಪಿಗೆ, ಕೇದಗೆ
ಹಬ್ಬಲಿ ಮೆಲ್ಲಗೆ ಮಲ್ಲಿಗೆ ಹೂಗಳು
ಬಂದೂಕಿನ ನಳಿಕೆಯ ಮೇಲೆ
ಹಸಿರಾಗಲಿ ಬಿಡಿ ಯುದ್ಧಭೂಮಿಗಳು
ಬೀಸಿ ಬಿಡಲಿ ತಂಗಾಳಿಯು ಒಮ್ಮೆ
ಗಡಿ ಬೇಲಿಯ ಎಲ್ಲೆಯ ದಾಟಿ – ಪಾರಿಜಾತವ ಹೊತ್ತು !
*******
No comments:
Post a Comment