ಅತಿಥಿ ದೇವೋಭವ ಎಂಬ ನಾಣ್ನುಡಿಯನ್ನು ನಾವೆಲ್ಲರೂ ಕೇಳಿರುತ್ತೇವೆ. ಪವಿತ್ರ ಬೈಬಲ್ ನಲ್ಲಿ ತಮ್ಮ ಮನೆಗೆ ಬಂದತಂಹ ಅತಿಥಿಗಳನ್ನು ಸತ್ಕರಿಸಿದ ಹಲವಾರು ಮಂದಿ ಅನೇಕ ವರದಾನಗಳನ್ನು ಪಡೆದಿರುವುದನ್ನು ನಾವು ಆಲಿಸಿರುತ್ತೇವೆ. ಅಬ್ರಹಾಮನು ತನ್ನ ಬಳಿಗೆ ಬಂದ ಅತಿಥಿಗಳನ್ನು ಸತ್ಕರಿಸಿದ ಫಲವಾಗಿ ಮುಪ್ಪಿನಲ್ಲಿ ಅವನಿಗೆ ಇಸಾಕ್ ಎಂಬ ಮಗ ಹುಟ್ಟಿದನು. ಅಂತೆಯೇ ಶುನೇಮಿನ ಮಹಿಳೆ ಸಹ ಪ್ರವಾದಿ ಎಲೀಷನಿಗೆ ತಂಗಲು ಸ್ಥಳವನ್ನು ಅನುವು ಮಾಡಿಕೊಟ್ಟಳು, ಬಂಜೆಯಾಗಿದ್ದ ಅವಳಿಗೆ ಎಲೀಷನು ಒಬ್ಬ ಮಗ ಜನಿಸುವಂತೆ ಆಶೀರ್ವದಿಸಿದನು.
ಹೀಗೆ ಮಾರ್ತಾಳು ಕೂಡ ಪ್ರಭುಕ್ರಿಸ್ತರನ್ನು ತನ್ನ ಮನೆಗೆ ಸ್ವಾಗತಿಸಿ, ಸತ್ಕರಿಸಿ ಧನ್ಯಳೆನಿಸಿಕೊಂಡಳು ಎಂದು ಲೂಕನ ಶುಭಸಂದೇಶ 10: 38-42ರಲ್ಲಿ ನಾವು ಓದುತ್ತೇವೆ.
ಯೇಸುಸ್ವಾಮಿ ತಮ್ಮ ಶಿಷ್ಯರೊಡನೆ ಪ್ರಯಾಣ ಮುಂದುವರಿಸಿ ಒಂದು ಹಳ್ಳಿಗೆ ಬಂದರು. ಅಲ್ಲಿ ಮಾರ್ತಾ ಎಂಬ ಮಹಿಳೆ ಅವರನ್ನು ತನ್ನ ಮನೆಗೆ ಆಮಂತ್ರಿಸಿದಳು. ಆಕೆಗೆ ಮರಿಯ ಎಂಬ ಸೋದರಿ ಇದ್ದಳು. ಈಕೆ ಪ್ರಭುವಿನ ಪದತಳದಲ್ಲಿ ಕುಳಿತುಕೊಂಡು ಅವರ ಬೋಧನೆಯನ್ನು ಆಲಿಸುತ್ತಿದ್ದಳು. ಮಾರ್ತಳಾದರೋ ಅತಿಥಿ ಸತ್ಕಾರಕ್ಕೆ ಅಡುಗೆ ಸಿದ್ಧತೆಯ ಗಡಿಬಿಡಿಯಲ್ಲಿ ಇದ್ದಳು. ಅವಳು ಬಂದು, ಪ್ರಭು ನನ್ನ ಸೋದರಿ ಈ ಕೆಲಸವನ್ನೆಲ್ಲಾ ನನಗೊಬ್ಬಳಿಗೇ ಬಿಟ್ಟಿದ್ದಾಳೆ. ನೀವಿದನ್ನು ಗಮನಿಸಬಾರದೇ? ನನಗೆ ಸಹಾಯ ಮಾಡುವಂತೆ ಅವಳಿಗೆ ಹೇಳಿ ಎಂದಳು. ಯೇಸು ಆಕೆಗೆ ಪ್ರತ್ಯುತ್ತರವಾಗಿ ’ಮಾರ್ತಾ, ಮಾರ್ತಾ ನೀನು ಅನಾವಶ್ಯಕ ಚಿಂತೆ ಪೇಚಾಟಗಳಿಗೆ ಒಳಗಾಗಿರುವೆ. ಆದರೆ ಅಗತ್ಯವಾದುದು ಒಂದೇ. ಮರಿಯಳು ಉತ್ತಮವಾದುದನ್ನೇ ಆರಿಸಿಕೊಂಡಿದ್ದಾಳೆ. ಅದನ್ನು ಆಕೆಯಿಂದ ತಗೆದುಕೊಳ್ಳಲಾಗದು’ ಎಂದರು.
ಮಾರ್ತಾ ಎಂದರೆ ಸ್ವಾಮಿನಿ. ಅದು ಸ್ವಾಮಿ ಎಂಬ ಪದದ ಸ್ತ್ರೀರೂಪ. ಅವಳು ಯೇಸುಸ್ವಾಮಿಗೆ ಅಚ್ಚುಮೆಚ್ಚಿನವಳಾಗಿದ್ದಳು ಎಂಬುದರಲ್ಲಿ ಯಾವುದೇ ಸಂಶಯವಿಲ್ಲ. ಮಾರ್ತಾಳಿಗೆ ಅತಿಥಿ ಸತ್ಕಾರ ಮಾಡುವುದರಲ್ಲಿ ಬಹಳ ಆಸಕ್ತಿ. ನಮ್ಮ ಮನೆಗಳಲ್ಲೂ ಕೂಡ ಗುರುಗಳು ಪ್ರಾರ್ಥಿಸುತ್ತಿರುವಾಗ ಅಥವಾ ಚರ್ಚೆ ಮಾಡುವಾಗ ಹೆಂಗಸರು ಅಡುಗೆಯ ಮನೆಯಲ್ಲಿ ಊಟದ ಸಿದ್ಧತೆಯನ್ನು ಮಾಡಿಕೊಂಡಿರುವುದಿಲ್ಲವೇ! ಹಾಗೆಯೇ ಮಾರ್ತಾಳು ಕೂಡ, ಮನೆಗೆ ಬಂದಿದ್ದಂತಹ ಯೇಸುವಿಗೆ ಮತ್ತು ತಮ್ಮ ಶಿಷ್ಯರಿಗೆ ಹಲವಾರು ಭಕ್ಷ್ಯಗಳನ್ನು ತಯಾರಿಸುತ್ತಿದ್ದಳು. ಮರಿಯಳಾದರೋ ಯೇಸುವಿನ ಪಾದದ ಬಳಿ ಕುಳಿತು ಅವರ ಬೋಧನೆಯನ್ನು ಆಲಿಸುತ್ತಿದ್ದಳು. ಎಲ್ಲರೂ ಪ್ರಾರ್ಥನೆಯಲ್ಲಿ ತೊಡಗಿದ್ದರೆ ಅಡುಗೆಯನ್ನು ತಯಾರಿಸುವವರಾರು ಎಂಬ ಆಲೋಚನೆ ಹೆಂಗಸರಿಗೆ ಸಹಜವೇ.
ಸಾಮಾನ್ಯವಾಗಿ ನಮ್ಮ ಮನೆಗೆ ಯಾರಾದರೂ ಅಥಿತಿಗಳು ಬಂದಾಗ ಮನೆಯ ಸದ್ಯಸ್ಯರೆಲ್ಲರೂ ಅತಿಥಿಗಳೊಡನೆ ಕುಳಿತು ಮಾತನಾಡುವ ಬದಲು ತಮ್ಮ ಕೆಲಸದಲ್ಲಿ ತಾವು ತಲ್ಲೀನರಾಗಿದ್ದರೆ, ಬಂದ ಅತಿಥಿಗಳಿಗೆ ಬೆಸರವಾಗುವುದಿಲ್ಲವೇ? ಆದುದರಿಂದಲೇ ಬಹುಶಃ ಮರಿಯಳು ಬೇರೆ ಯಾವುದೇ ಕೆಲಸಕ್ಕೆ ಗಮನವನ್ನು ಕೊಡದೆ ಯೇಸುವಿನ ಪಾದದ ಬಳಿ ಕುಳಿತುಕೊಂಡು ಯೇಸುವಿನ ಬೊಧನೆಯನ್ನು ಆಲಿಸುತ್ತಿರುವುದನ್ನು ನಾವು ಗಮನಿಸುತ್ತೇವೆ. ಮಾರ್ತಾಳು, ಮರಿಯಳ ಮೇಲಿನ ಕೋಪದಿಂದ ಯೇಸುವಿಗೆ, ಈ ಕೆಲಸವನ್ನೆಲ್ಲಾ ನನಗೊಬ್ಬಳಿಗೇ ಬಿಟ್ಟಿದ್ದಾಳೆ. ನೀವಿದನ್ನು ಗಮನಿಸಬಾರದೇ? ಎಂದು ದೂರು ನೀಡುತ್ತಾಳೆ. ಇಲ್ಲಿ ಮಾರ್ತಾಳು ಯೇಸುವಿನೊಂದಿಗೆ ಎಷ್ಟೊಂದು ಆತ್ಮೀಯತೆಯಿಂದ ಇದ್ದಳು ಎಂಬುವುದನ್ನು ನಾವು ಊಹಿಸಬಹುದು. ಆದರೆ ಯೇಸು ಮರಿಯಳ ಪರ ಮಾತನಾಡುತ್ತಾ ಅವಳು ಉತ್ತಮವಾದ ಆಯ್ಕೆಯನ್ನೇ ಹೊಂದಿದ್ದಾಳೆ ಎಂದು ಹೇಳಿ ದೇವರ ವಾಕ್ಯದ ಮಹತ್ವಕ್ಕೆ ಹೆಚ್ಚು ಆದ್ಯತೆಯನ್ನು ನೀಡುತ್ತಾರೆ. ಆದರೂ ಸಹ ಮಾನವೀಯತೆಯ ದೃಷ್ಟಿಯಿಂದ ಅತಿಥಿ ಸತ್ಕಾರವೂ ಶ್ರೇಷ್ಠ ಎಂಬುದನ್ನು ಯಾರೂ ಅಲ್ಲಗಳೆಯುವುದಿಲ್ಲ. ಇದು ಯೇಸುವಿಗೂ ತಿಳಿದಿತ್ತು.
ಅಂತೆಯೇ ಯೊವಾನ್ನ 11: 21ರಲ್ಲಿ ಮಾರ್ತಾಳ ಅಣ್ಣ ಲಾಜರನು ಸತ್ತಾಗ, ಮಾರ್ತಾಳು ಯೇಸುವಿಗಾಗಿ ಎದುರು ನೋಡುತ್ತಿದ್ದುದನ್ನು ನಾವು ಕಾಣುತ್ತೇವೆ. ಮಾರ್ತಾಳು ಯೇಸುವನ್ನು ಕಂಡ ತಕ್ಷಣ ’ಪ್ರಭುವೇ, ನೀವು ಇಲ್ಲಿದ್ದಿದ್ದರೆ ನನ್ನ ಸಹೋದರ ಸಾಯುತ್ತಿರಲಿಲ್ಲ’ ಎಂದು ತನ್ನ ದುಃಖವನ್ನು ಹಂಚಿಕೊಳ್ಳುತ್ತಾಳೆ. ಮಾರ್ತಾಳಿಗೆ ಯೇಸು ಅಲ್ಲಿದ್ದಿದ್ದರೆ ಲಾಜರನು ಸಾಯುತ್ತಿರಲಿಲ್ಲ ಎಂಬ ವಿಶ್ವಾಸವಿತ್ತು. ಆದುದರಿಂದಲೇ ಯೊವಾನ್ನ 11: 27ರಲ್ಲಿ ’ಹೌದು ಪ್ರಭುವೇ, ನೀವೇ ಅಭಿಷಿಕ್ತರಾದ ಲೋಕೋದ್ದಾರಕ, ದೇವರ ಪುತ್ರ’ ಎಂದು ತನ್ನ ವಿಶ್ವಾಸವನ್ನು ಪ್ರಕಟಿಸುತ್ತಾಳೆ. ಹೀಗೆ ಮಾರ್ತಾಳು ಪ್ರಭು ಕ್ರಿಸ್ತರನ್ನು ಸ್ವಾಗತಿಸಿ, ಸತ್ಕರಿಸಿ, ತನ್ನ ವಿಶ್ವಾಸವನ್ನೂ ಅಭಿವ್ಯಕ್ತಿಸಿ ದೇವರ ಮೆಚ್ಚುಗೆಗೆ ಪಾತ್ರಳಾಗಿ ನಮ್ಮೆಲ್ಲರಿಗೂ ಮಾದರಿಯಾಗಿದ್ದಾಳೆ.
*****
No comments:
Post a Comment