ನಿರ್ಮಲವಾದ ಮನಸ್ಸು, ಪ್ರೀತಿಸುವ ಹೃದಯ ಹಾಗೂ ಮೌಲ್ಯಾಧಾರಿತ ಬದುಕಿಗಿಂತ ಈ ವಿಶ್ವದಲ್ಲಿ ಯಾವುದೂ ಉನ್ನತವಾದುದಿಲ್ಲವೆಂದರೆ ಅತಿಶಯೋಕ್ತಿಯಾಗಲಾರದು. ಪ್ರಸ್ತುತ ಸಮಾಜದಲ್ಲಿ ಇದು ಮರೀಚಿಕೆಯಾಗಿದೆ. ಯಾಕೆಂದರೆ ಇಂತಹ ಬದುಕಿಗೆ ಅಂತರಂಗಶುದ್ಧಿ ಮತ್ತು ಬಹಿರಂಗ ಶುದ್ಧಿ ಬೇಕೇ ಬೇಕು.

"ಕಳಬೇಡ ಕೊಲಬೇಡ, ಹುಸಿಯ ನುಡಿಯಲು ಬೇಡ,
ಮುನಿಯ ಬೇಡ, ಅನ್ಯರಿಗೆ ಅಸಹ್ಯ ಪಡಬೇಡ,
ತನ್ನ ಬಣ್ಣಿಸ ಬೇಡ ಇದಿರ ಅಳಿಯಲು ಬೇಡ,
ಇದೇ ಅಂತರಂಗ ಶುದ್ಧಿ! ಇದೇ ಬಹಿರಂಗ ಶುದ್ಧಿ!
ಇದೇ ನಮ್ಮ ಕೂಡಲಸಂಗಮನೊಲಿಸುವ ಪರಿ" ಎಂದು ಸಾರಿದ್ದಾರೆ.
ಹೀಗಿರುವಾಗ ನಮ್ಮ ಬಾಹ್ಯ ದೇಹ ಶುದ್ಧತೆಗಿಂತಲೂ ನಮ್ಮ ನಡೆನುಡಿ ಶುದ್ಧ ಬದುಕು ಅಂತರಂಗ ಶುದ್ಧತೆಗೆ ನಾಂದಿಯಾಗುತ್ತದೆ ಎಂಬುದರಲ್ಲಿ ಎರಡು ಮಾತಿಲ್ಲ.
ಅಂತರಂಗ ಶುದ್ಧವಾಗಿದ್ದಲ್ಲಿ ನಮ್ಮ ಆರಾಧನೆ, ಸ್ತುತಿ ವಂದನೆ ದೇವರಿಗೆ ಸಲ್ಲುತ್ತದೆ ಹಾಗೂ ಅದರ ಪ್ರತಿಫಲವು ನಮಗೆ ಲಭಿಸುತ್ತದೆ. ಇಲ್ಲವಾದಲ್ಲಿ ಅದು ಸಂಪೂರ್ಣವಾಗಿ ವ್ಯರ್ಥವೇ ಸರಿ. ಇದನ್ನೇ ಪ್ರವಾದಿ ಯೆಶಾಯರು
"ಈ ಜನರು ನನ್ನನ್ನು ಸಮೀಪಿಸುವುದು
ಬರಿ ಮಾತಿನ ಮರ್ಯಾದೆಯಿಂದ,
ಇವರು ನನ್ನನ್ನು ಸನ್ಮಾನಿಸುವುದು
ಬರಿ ಮಾತಿನ ಮಾಲೆಯಿಂದ,
ಇವರ ಹೃದಯವಾದರೋ ಬಲು
ದೂರವಿದೆ ನನ್ನಿಂದ
ಇವರು ನನಗೆ ಸಲ್ಲಿಸುವ ಭಕ್ತಿ ಕೂಡಿದೆ
ಕೇವಲ ಭಯದಿಂದ
ಕಲಿತಿಹರಿವರು ಮಾನವಕಲ್ಪಿತ
ಕಟ್ಟಳೆಯನು ಬಾಯಿಪಾಠದಿಂದ"
ಎನ್ನುತ್ತಾರೆ (ಯೆಶಾಯ29:13).
ಮಾನವರು ತಿನ್ನುವ ಆಹಾರ ಮಾನವನನ್ನು ಕಲುಷಿತಗೊಳಿಸುವುದಿಲ್ಲ. ಆದರೆ ಮಾನವರ ಅಂತರಂಗದಿಂದ ಹೊರ ಹೊಮ್ಮುವ ಪ್ರತಿಯೊಂದು ಭಾವನೆಯೂ ಅವನನ್ನು ಕಲುಷಿತಗೊಳಿಸುತ್ತದೆ. ಇದನ್ನು ಪ್ರಭು ಯೇಸು ಹೀಗೆ ತಿಳಿಸುತ್ತಾರೆ "ಹೊರಗಿನಿಂದ ಮನುಷ್ಯನ ಒಳಗೆ ಹೊಗುವ ಯಾವುದೂ ಅವನನ್ನು ಕಲುಷಿತಗೊಳಿಸುವುದಿಲ್ಲ. ಮನುಷ್ಯನ ಅಂತರಂಗದಿಂದ ಹೊರಬರುವುದೇ ಅವನನ್ನು ಕಲುಷಿತಗೊಳಿಸುತ್ತದೆ" (ಮಾರ್ಕ 7:15). ಯಾಕೆಂದರೆ "ಅವನು ತಿಂದದ್ದು ಅವನ ಹೃದಯವನ್ನು ಹೊಕ್ಕದೆ, ಹೊಟ್ಟೆಯನ್ನು ಮಾತ್ರ ಸೇರಿ, ಬಳಿಕ ದೇಹದಿಂದ ವಿಸರ್ಜಿತವಾಗುತ್ತದೆ. ಆದರೆ ಮನುಷ್ಯನ ಅಂತರಂಗದಿಂದ ಹೊರಹೊಮ್ಮವ ಯೋಚನೆಗಳು ಅವನನ್ನು ಕಲುಷಿತಗೊಳಿಸುತ್ತವೆ. ಮಾನವನ ಹೃದಯಾಂತರಾಳದಿಂದ ದುರಾಲೋಚನೆ, ಅನೈತಿಕತೆ, ಕಳ್ಳತನ,ಕೊಲೆ, ವ್ಯಭಿಚಾರ, ಲೋಭ, ಕೆಡುಕುತನ, ಮೋಸ, ಭಂಡತನ, ಅಸೂಯೆ, ಅಪದೂರು, ಅಹಂಕಾರ, ಮೂರ್ಖತನ ಮೊದಲಾದವು ಹೊರಬರುತ್ತವೆ ಈ ಎಲ್ಲಾ ಕೇಡುಗಳು ಮಾನವನ ಅಂತರಂಗದಿಂದಲೇ ಉದ್ಭವಿಸಿ ಅವನನ್ನು ಅಶುದ್ಧಮಾಡುತ್ತವೆ" (ಮಾರ್ಕ7:19-23).
ಇಂದು ಮನುಷ್ಯರು ಮಾನವ ನಿರ್ಮಿತ ನೀತಿ ನಿಯಮಗಳಿಗೆಅಧಿಕವಾಗಿ ಅಂಟಿಕೊಂಡು ದೈವ ನಿಯಮಗಳನ್ನು ಕಡೆಗಣಿಸುತ್ತಿದ್ದಾರೆ. ಈ ಕಾರಣ ಧರ್ಮದ ನೈಜತೆ ನಶಿಸುತ್ತಿದೆ.ಜನತೆ ದಿನದಿಂದ ದಿನಕ್ಕೆ ಬಾಹ್ಯ ಆಚರಣೆಗಳಿಗೆ ಕಟ್ಟುಬಿದ್ದು ಅವುಗಳನ್ನೆ ಪ್ರಧಾನವೆಂದರಿತು ಧರ್ಮದ ನಿಜ ಸಾರವನ್ನು ತಿಳಿದುಕೊಳ್ಳುವುದರಲ್ಲಿ ನಿರಾಸಕ್ತರಾಗಿದ್ದಾರೆ. ನೈಜ ಧರ್ಮ ಮಾನವರನ್ನು ಸುಸಂಸ್ಕೃತರನ್ನಾಗಿಯೂ, ವಿಶಾಲ ಮನೋಭಾವ ಉಳ್ಳವರನ್ನಾಗಿಯೂ, ಸರ್ವರ ಒಳಿತನ್ನು ಬಯಸುವ ನಿರ್ಮಲ ಹೃದಯಿಗಳನ್ನಾಗಿಯೂ ಮಾಡುತ್ತದೆ. ಅಂಥವರ ಅಂತರಂಗ ದೇವರ ತಾಣವಾಗಿ ಶುದ್ಧ ಬದುಕಿನೆಡೆಗೆ ತಿರುಗಿಕೊಳ್ಳುತ್ತಾರೆ. ಅವರ ನಡೆ ನುಡಿ ಇತರರನ್ನು ಆಕರ್ಷಿಸುತ್ತದೆ. ಅವರಲ್ಲಿ ದ್ವಂದ್ವವಿರುವುದಿಲ್ಲ. ಮನಸ್ಸಿನಲ್ಲಿ ಕಲ್ಮಶವಿರುವುದಿಲ್ಲ. ಅವರ ಬದುಕು ಪಾರದರ್ಶಕವಾಗಿ ಅಂತರಂಗ ಬಹಿರಂಗಗಳು ಒಂದೇ ಆಗಿರುತ್ತವೆ. ಅವರು ಅಂತರಂಗ ಬಹಿರಂಗಗಳನ್ನು ಅಶುದ್ಧಗೊಳಿಸುವ ಕಾರ್ಯಗಳಿಂದ ಬಹು ದೂರವಿರುತ್ತಾರೆ ಹಾಗೂ ಸಮಾಜದಒಳಿತಿಗೆ ಶ್ರಮಿಸಲು ತಮ್ಮನ್ನು ಸಮರ್ಪಿಸಿಕೊಳ್ಳುತ್ತಾರೆ.
ಅಂತರಂಗ ಮತ್ತು ಬಹಿರಂಗ ಶುದ್ಧತೆ ಒಂದೇ ದಿನದಲ್ಲಿ ಆಗುವಂತಹದಲ್ಲ. ಅದೊಂದು ಜೀವನ ಪರಿಯಂತರ ಸಾಗುವ ನಿರಂತರ ಪ್ರಕ್ರಿಯೆ. ಕೀರ್ತನಕಾರನಂತೆ "ಶುದ್ಧ ಹೃದಯವನುದೇವಾ, ನಿರ್ಮಿಸು. ಅಂತರಂಗವನು ಚೇತನಗೊಳಿಸು" (51:10) ಎಂದು ಎಡೆಬಿಡದೆ ಪ್ರಾರ್ಥಿಸಿದಾಗ, ಮಾನವರ ದುರ್ಗುಣಗಳು ಹಂತ ಹಂತವಾಗಿ ದಮನವಾಗಿ ನೈಜ ಧರ್ಮದ ಅರಿವು ಆರಂಭವಾಗುತ್ತದೆ. ಆಗ ಅಂತರಂಗ ಬಹಿರಂಗಗಳು ಶುದ್ಧಿಗೊಂಡು ಮಾನವರು ಮೌಲ್ಯಾಧಾರಿತ ಬದುಕಿನೆಡೆಗೆ ಮುಖ ಮಾಡುತ್ತಾರೆ. ಅಲ್ಲಿ ಸದ್ಗುಣಗಳು ಉದಯವಾಗುತ್ತವೆ. ಸತ್ಪಥದ ಹಾದಿ ತೆರೆದುಕೊಳ್ಳುತ್ತದೆ.
*******
No comments:
Post a Comment