Friday, 1 March 2019

ಶಾಪ ಒಂದು ಪಾಪ - ಇನ್ಫೆಂಟ್ ಕಿಶೋರ್



ಪಾಪವು ಮನುಷ್ಯನನ್ನು ಹಾಳು ಮಾಡುತ್ತದೆ. ಶಾಪವೋ ಮನುಷ್ಯನನ್ನು ನರಕಕ್ಕೆ ಒಯ್ಯುವ ಒಂದು ದಾರಿಯಾಗಿದೆ. ಒಬ್ಬ ಮನುಷ್ಯನನ್ನು ಕೀಳಾಗಿ ಕಾಣುವುದು, ಅವರು ನಾಶವಾಗಲಿ ಎಂದು ಬಯಸುವುದು, ಕೇಡಾಗಲಿ ಎಂದು ಬೈಯುವುದು, ತೆಗಳುವುದು ಹಾಗೂ ನಾಶವಾಗಲಿ ಎಂದು ಹಾರೈಸುವುದು ಇವೆಲ್ಲ ಶಾಪದ ಗುಣಗಳು.

ಶಾಪಕ್ಕಾಗಿ ನಾವು ದೇವರ ನಾಮ, ದೇವರ ಸೃಷ್ಟಿ ಹಾಗೂ ದೇವರ ವರದಾನಗಳನ್ನು ಅಸ್ತ್ರಗಳಾಗಿ ಬಳಸಿಕೊಳ್ಳುತ್ತೇವೆ. ಅನಾರೋಗ್ಯದಿಂದ ಬಳಲಿ ಸಾಯಬಾರದೇ, ವಿಷ ಜಂತುಗಳು ಕಚ್ಚಿ ಸಾಯಬಾರದೇ, ದೇವರಿಗೆ ಕಣ್ಣಿಲ್ಲವೇ, ಅವನೊಬ್ಬ ದೇವರೇ, ದೇವರೇ ನೋಡಿಕೊಳ್ಳಲಿ, ನೀನು ನಾಶವಾಗಿ ಹೋಗು ಹಾಗೂ ಬರಬಾರದು ಬರಲಿ ಎಂದು ನೆಟಿಕೆ ಮುರಿಯುವುದು ಮತ್ತು ಬೈದು ಬೆದರಿಸುವುದಾಗಿದೆ. ಇಷ್ಟಲ್ಲದೆ ಮಾಟಮಂತ್ರಗಳನ್ನು ಮಾಡುವುದು ಅಥವಾ ಮಾಡಿಸುವುದು ಇವೆಲ್ಲಾ ಶಾಪದ ಬಹುರೂಪಗಳು.


ಶಾಪ ಏಕೆ ಪಾಪವಾಗಿದೆ?

ಮನುಷ್ಯನ ದೇಹ ಮತ್ತು ಮನಸ್ಸು ದೇವರ ಗುಡಿ ಹಾಗೂ ಪವಿತ್ರಾತ್ಮನ ವಾಸಸ್ಥಾನ. ದೇಹವಾಗಲೀ ಆತ್ಮವಾಗಲೀ ನಮ್ಮ ಸ್ವತ್ತಲ್ಲ. ಅದು ದೇವರಾದ ಸರ್ವೇಶ್ವರನ ಸ್ವತ್ತಾಗಿದೆ. ಯಾವ ಕಾರಣಕ್ಕೂ ನಮ್ಮ ದೇಹದ ಮೇಲಾಗಲೀ ಆತ್ಮದ ಮೇಲಾಗಲೀ ನಮಗೆ ಹಕ್ಕಿಲ್ಲ ಬದಲಾಗಿ ನಾವು ಬಾಡಿಗೆದಾರರಾಗಿದ್ದೇವೆ. ದೇಹಕ್ಕೂ ಮತ್ತು ಆತ್ಮಕ್ಕೂ ಒಡೆಯನಾಗಿರುವ ಸರ್ವೇಶ್ವರನಾದ ದೇವರು ನಮಗೆ ಅದನ್ನು ನೋಡಿಕೊಳ್ಳುವ ಹಾಗೂ ಅದನ್ನು ಆರೈಕೆ ಮಾಡುವ ಹಕ್ಕು ಮಾತ್ರವೇ ಕೊಟ್ಟಿದ್ದಾರೆ.

ಆದ್ದರಿಂದ ಅದನ್ನು ನಾವು ಒಳ್ಳೆಯ ಮನಸ್ಸಿನಿಂದ ಒಳ್ಳೆಯ ನಡತೆಯಿಂದ ಶುಚಿಯಾಗಿ ಶಿಸ್ತುಬದ್ಧವಾಗಿ ನೋಡಿಕೊಳ್ಳಬೇಕು, ಆರೈಕೆ ಮಾಡಬೇಕು, ಇರುವ ಸ್ವಲ್ಪ ಕಾಲದಲ್ಲಿ ಅದನ್ನು ಪವಿತ್ರವಾಗಿ ಕಾಪಾಡಿಕೊಳ್ಳಬೇಕು, ತದನಂತರ ಸರ್ವೇಶ್ವರನಾದ ದೇವರು ಅದನ್ನು ಹೇಗೆ ಸೃಷ್ಟಿಸಿದನೋ ಅದೇ ರೂಪವಾಗಿ ಅದನ್ನು ಹಿಂತಿರುಗಿಸಬೇಕು. ಇದೇ ನಾವು ಮಾನವರಾಗಿ ದೇವರಿಗೆ ಕೊಡುವ ಒಂದು ಕೊಡುಗೆಯಾಗಿದೆ. ಆದ್ದರಿಂದ ನಾವು ದೇಹವನ್ನಾಗಲೀ ಆತ್ಮವನ್ನಾಗಲೀ ಶಪಿಸುವುದು ಘೋರತಪ್ಪು. 

ಅದೇ ರೀತಿಯಲ್ಲಿ ದೇವರ ಸೃಷ್ಟಿಯೂ ಕೂಡಾ. ಪ್ರಕೃತಿ, ಪ್ರಾಣಿ ಪಕ್ಷಿ ದವಸ ಧಾನ್ಯಗಳು, ಹಣ್ಣುಹಂಪಲುಗಳು ದೇವರ ಸೃಷ್ಟಿಯಾಗಿವೆ. ಆದ್ದರಿಂದ ಕೊಡುಗೆಯಾಗಿ ಕೊಟ್ಟ ಈ ವಸ್ತುಗಳನ್ನು ನಾವು ಎಚ್ಚರಿಕೆಯಿಂದ ಉಪಯೋಗಿಸಬೇಕು. ಯಥೇಚ್ಛವಾಗಿ ವ್ಯರ್ಥವಾಗಿ ಉಪಯೋಗಿಸುವುದು ಒಳ್ಳೆಯದಲ್ಲ. ಅಲ್ಲದೆ ಅದನ್ನು ನಾವು ಪವಿತ್ರವಾಗಿ ಉಪಯೋಗಿಸತಕ್ಕದ್ದು.

ದೇವರ ಪುತ್ರನಾದ ಕ್ರಿಸ್ತ ಎಂದಿಗೂ ಶಪಿಸಲಿಲ್ಲ, ಆಣೆ ಮಾಡಲಿಲ್ಲ. ಬದಲಿಗೆ ದೇವಮಾರ್ಗವನ್ನು ಸ್ವರ್ಗಮಾರ್ಗವನ್ನು ತೋರಿಸಿಕೊಟ್ಟರು. ಅವರದು ಪ್ರೀತಿ ಸ್ನೇಹ ಸಹನೆ ಶಾಂತಿಯ ಮಾರ್ಗವಾಗಿತ್ತು, ಸರ್ವೇಶ್ವರನಾದ ತಮ್ಮ ಪಿತನೆಡೆಗೆ ಕರೆದೊಯ್ಯುವ ಸಾಧನವಾಗಿತ್ತು. ಆದ್ದರಿಂದ ಕೆಲವರು ಅವರ ಬೋಧನೆಯನ್ನು ಕೇಳಿ ಅವರನ್ನು ಹಿಂಬಾಲಿಸುತ್ತಿದ್ದರು, ಅವರಲ್ಲಿ ಪ್ರಾರ್ಥಿಸುತ್ತಿದ್ದರು, ಅವರ ಪಿತನಲ್ಲಿ ಪ್ರಾರ್ಥಿಸುತ್ತಿದ್ದರು. ಅವರಲ್ಲಿ ಅದ್ಭುತಗಳನ್ನು ಹಾಗೂ ಪ್ರೀತಿಯನ್ನು ಕಾಣುತ್ತಿದ್ದರು. 

ಶಪಿಸುವುದು ಒಂದು ಕೆಟ್ಟ ಹವ್ಯಾಸವಾಗಿದೆ. ಶಪಿಸುವುದಕ್ಕಾಗಿ ದೇವರ ನಾಮವನ್ನು ಬಳಸುವುದು ದೇವರ ಸೃಷ್ಟಿಯನ್ನು ಬಳಸುವುದು ಒಂದು ಹೀನವಾದ ಕೆಲಸ. ಕೆಲವರು ಹಾಸ್ಯಕ್ಕಾಗಿ ಮನರಂಜನೆಗಾಗಿ ಶಾಪ ಹಾಕುತ್ತಾರೆ.

ಒಬ್ಬ ಕ್ರೈಸ್ತ ಶಪಿಸುತ್ತಾನೆಂದರೆ ಅವನು ಕ್ರಿಸ್ತನ ಹಾಗೂ ಕ್ರೈಸ್ತಧರ್ಮದ ವಿರೋಧಿಯಾಗಿಯೂ ಶತ್ರುವಾಗಿಯೂ ಪರಿಣಮಿಸುತ್ತಾನೆ.



ಪವಿತ್ರರಾಗಿರಿ, ಶಪಿಸಬೇಡಿ

ಶಾಪವನ್ನು ಒಳ್ಳೆಯತನಕ್ಕೆ ಹೋಲಿಸುವುದಿಲ್ಲ. ಬದಲಾಗಿ ಪಾಪಕ್ಕೆ ಹೋಲಿಸಲಾಗುವುದು. ಶಪಿಸುವುದು ಕ್ರೈಸ್ತರ ಗುಣವಲ್ಲ ಅದು ದುರ್ಗುಣವಾಗಿದೆ. ದೇವರಾದ ಸರ್ವೇಶ್ವರ ಧರ್ಮಶಾಸ್ತ್ರದಲ್ಲಿ ಇಂತೆನ್ನುತ್ತಾರೆ: “ನಾನು ನಿಮ್ಮ ದೇವರಾದ ಸರ್ವೇಶ್ವರ, ನಾನು ಪವಿತ್ರನು, ನನ್ನ ನಾಮ ಪವಿತ್ರ, ನಾನು ನಿಮ್ಮ ದೇಹವೆಂಬ ಗುಡಾರದಲ್ಲಿ ನೆಲೆಸುವೆನು, ಆದ್ದರಿಂದ ನೀವು ಪವಿತ್ರರು, ನಿಮ್ಮನ್ನು ಪವಿತ್ರರಾಗಿ ಮಾಡುವೆನು, ನನ್ನ ನಡೆ ನುಡಿಗಳು ಪವಿತ್ರ, ನನ್ನ ಕಾರ್ಯಗಳು ಪವಿತ್ರ.”

ಶಪಿಸುವವನು ಶಾಪಗ್ರಸ್ತನು ಹಾಗೂ ಪಾಪಗ್ರಸ್ತನು. ಶಪಿಸುವುದು ಒಳ್ಳೆ ಲಕ್ಷಣವಲ್ಲ. ಬದಲಿಗೆ ದೌರ್ಬಲ್ಯವಾಗಿದೆ. ಆದ್ದರಿಂದ ಕ್ರೈಸ್ತರಾಗಿ ಶಪಿಸುವುದು ಕ್ರೈಸ್ತನಿಗೆ ಹಾಗೂ ಕ್ರೈಸ್ತಧರ್ಮಕ್ಕೆ ವಿರೋಧವಾಗಿ ಮಾಡುವ ಪಾಪವಾಗಿದೆ. ಕ್ರೈಸ್ತರ ಗುಣವು ಪ್ರೀತಿಸುವುದು ಪ್ರಾರ್ಥಿಸುವುದು ಮತ್ತು ಒಳ್ಳೆಯದನ್ನು ಬಯಸುವುದಾಗಿದೆ. ಕ್ರಿಸ್ತರು ಅವರ ಬೋಧನೆಯಲ್ಲಿ ಒತ್ತಿ ಹೀಗೆ ಹೇಳುತ್ತಾರೆ: “ಶಪಿಸದೆ ಆಶೀರ್ವದಿಸಿರಿ, ಪ್ರಾರ್ಥಿಸಿರಿ ಹಾಗೂ ಪ್ರೀತಿಸಿರಿ ನಿಮಗೆ ಕೇಡನ್ನು ಬಯಸುವವರಿಗಾಗಿ ಮತ್ತು ಹಿಂಸಿಸುವವರಿಗಾಗಿ.” 

ಕ್ರೈಸ್ತರಾಗಿ ಯಾರ ಬಾಯಿಂದಲೂ ಕೇಡಾಗಲೀ ಕೆಟ್ಟದಾಗಲೀ ಶಾಪವಾಗಲೀ ಬರಬಾರದು. ಅದರಿಂದ ಯೇಸುಕ್ರಿಸ್ತನ ಆತ್ಮ ನಮ್ಮಲ್ಲಿ ನೆಲೆಸುವುದಿಲ್ಲ. ನಾವು ಕ್ರಿಸ್ತನಿಗೆ ವಿರುದ್ಧವಾಗಿ ಬದುಕುವವರಾಗುತ್ತೇವೆ. ಶಪಿಸುವುದು ಪಾಪ ಮಾತ್ರವಲ್ಲ ನಮಗೆ ನಾವು ಮಾಡಿಕೊಳ್ಳುವ ಅನ್ಯಾಯವಾಗಿದೆ. ನಮ್ಮ ದೇಹಕ್ಕೆ ನಾವೇ ಕೊಳ್ಳಿ ಇಟ್ಟಂತಾಗುತದೆ. ನಮ್ಮ ಆತ್ಮವನ್ನು ಸ್ವತಃ ನಾವೇ ನರಕಕ್ಕೆ ತಳ್ಳಿದಂತಾಗುತ್ತದೆ. ಶಪಿಸುವುದು ದೇಹದ ಆತ್ಮದ ನಾಶ ಮಾತ್ರವಲ್ಲ ಬದಲಿಗೆ ಕುಟುಂಬದ, ಸಮಾಜದ, ದೇವರ ಸೃಷ್ಟಿಯ ನಾಶವಾಗಿದೆ. ನಾವು ನಮ್ಮನ್ನು ಶಪಿಸುವುದಿಲ್ಲದೆ ದೇವರನ್ನು ಅವನ ಸೃಷ್ಟಿಯನ್ನು ಶಪಿಸುತ್ತೇವೆ. ಶಾಪವೆಂಬುದು ದುರ್ಮರಣಕ್ಕೆ, ದುರ್ಮಾರ್ಗಕ್ಕೆ ಹಾಗೂ ಪಾಪಕ್ಕೆ ಕಾರಣ. ಜೀವನದಲ್ಲಿ ಸೈತಾನನಿಗೆ ಅವನ ಕೃತ್ಯಕ್ಕೆ ಎಡೆ ಮಾಡಿಕೊಟ್ಟಂತಾಗುತದೆ.

ನೆನಪಿಸಿಕೊಳ್ಳಿ ದೇಹ ಒಂದು ದೇಗುಲ, ಆತ್ಮ ಒಂದು ದೈವ, ನಡೆನುಡಿಗಳು ದೇವರ ಕ್ರಿಯೆಗಳು. ಆದ್ದರಿಂದ ಸೋದರರು ಸೋದರರಂತೆ, ಶತ್ರುಗಳು ಮಿತ್ರರಂತೆ, ಗಂಡ ಹೆಂಡತಿ ಅನ್ಯೋನ್ಯವಾಗಿ ತುಂಬು ಪ್ರೀತಿ ವಿಶ್ವಾಸದಿಂದ ಯಾರನ್ನೂ ಶಪಿಸದೆ, ಯಾರಿಗೂ ಕೇಡನ್ನು ಬಯಸದೇ, ಭಕ್ತಿಯತ, ಸಹನೆ, ಪ್ರೀತಿ, ವಿಶ್ವಾಸ, ಶಾಂತಿ, ನೆಮ್ಮದಿ ಮತ್ತು ಸ್ನೇಹದ ಸಹಬಾಳ್ವೆಯ ಬಾಳನ್ನು ಬಾಳುವುದೇ ನಿಜವಾದ ಕ್ರೈಸ್ತರ ಜೀವನ.

*******



No comments:

Post a Comment

ಎತ್ತಿತೋರಿಸಲಾದ ಪೋಸ್ಟ್

ಅನ್ನಮ್ಮ’ಳಿಗೆ ೨೫೦ರ ಹಾಗೂ ಅತಿ.ವಂ.ಪೊತ್ತಕಮೂರಿಗೆ ೫೦ರ ಸ್ಮರಣೆಯ ಸಂಭ್ರಮ

ಬೆಂಗಳೂರಿನ ಉತ್ತರಹಳ್ಳಿಯ ಅನ್ನಮ್ಮನ ಬೆಟ್ಟ, ಅಲ್ಲಿನ ಅನ್ನಮ್ಮಳ ಸಮಾಧಿ, ಆ ಬೆಟ್ಟದ ಮೇಲಿನ ಶಿಲುಬೆ, ಅಲ್ಲಿ ಪ್ರತಿವರ್ಷ ತಪಸ್ಸು ಕಾಲದ ಐದನೇ ಭಾನುವಾರ ನಡೆಯುವ ಯೇಸು...