Friday, 1 March 2019

ಮರಿಯಾಪುರ-ಮಹಿಮಾಪುರ - ಆಜು, ಮರಿಯಾಪುರ


ಎಷ್ಟೋ ಜನಕ್ಕೆ ಮರಿಯಾಪುರದೊಂದಿಗಿನ ನಂಟು ಶುರುವಾದದ್ದು ಮಹಿಮೆಯಿಂದಲೇ. ಕೆಲವರಿಗಂತೂ ಮರಿಯಾಪುರ ಎನ್ನುವುದಕ್ಕಿಂತ ಮಹಿಮಾಪುರ ಎನ್ನುವುದರಲ್ಲೇ ಸಂತೋಷ! ನನ್ನ ಮತ್ತು ಮರಿಯಾಪುರದೊಂದಿಗಿನ ನಂಟು ಇದೇ ರೀತಿ ಆರಂಭವಾದದ್ದು. ನನ್ನ ವಂಶಸ್ಥರು ಇದೇ ಊರಿನವರಾದರೂ, ನನಗೆ ಮರಿಯಾಪುರದಲ್ಲಿನ ಮೊದಲ ಪರಿಚಯ ಮಹಿಮೆ ನಾಟಕದೊಂದಿಗೆ. ನಾನು ಈ ಊರಿಗೆ ಬರುತ್ತಿದ್ದುದೇ ಮಹಿಮೆ ನಾಟಕವನ್ನು ನೋಡಲು, ಆನಂದಿಸಲು. ಇದೀಗ ನಾನು ಇದೇ ಊರಿನವನು, ಈ ಕಾರಣಕ್ಕೆ ನಾನು ಮಹಿಮೆಯ ಕುರಿತು ಬರೆಯಬೇಕೆಂದೆನಿಸಿದ್ದು. 

ಮಹಿಮೆಯ ಪ್ರೇಕ್ಷಕನಾಗಿ ವೇದಿಕೆ ಮೇಲಿನ ಪಾತ್ರಧಾರಿಗಳನ್ನು, ಪಾತ್ರಧಾರಿಯಾಗಿ ವೇದಿಕೆ ಕೆಳಗಿನ ಪ್ರೇಕ್ಷಕರನ್ನು ಕಂಡು, ಇಬ್ಬರ ಮನಸ್ಥಿತಿಯನ್ನು ಅರಿತು ಇಂದು ಬರಹಗಾರನಾಗಿ ಅವರಿಬ್ಬರ ಪರವಾಗಿ ಅದರ ಹೊರಗಿನ ವೈಭವ ಒಳಗಿನ ತಯಾರಿ, ಉದ್ದೇಶಗಳನ್ನು ಹೇಳುವ ಚಿಕ್ಕ ಪ್ರಯತ್ನ ಮಾಡುತ್ತಿದ್ದೇನೆ.

ಒಂದು ಒಳ್ಳೆಯ ಇತಿಹಾಸ ಸೃಷ್ಟಿಯಾಗ ಬೇಕೆಂದರೆ ಅದಕ್ಕೆ ಒಂದು ಒಳ್ಳೆಯ ಉದ್ದೇಶ ಮತ್ತು ಬಲವಾದ ಸಂಕಲ್ಪ ಬೇಕು, ಜೊತೆಗೆ ಒಂದು ನೆಲೆಯೂ ಬೇಕು. ಮಹಿಮೆಯ ಇತಿಹಾಸಕ್ಕೆ ನೆಲೆಯಾದದ್ದು ಸ್ವಾಮಿ ಫಿಲಿಫ್ ಸಿಜೋನ್ ನವರು 1884 ರಲ್ಲಿ ನಿರ್ಮಿಸಿದ ತಟ್ಟುಗುಪ್ಪೆ ಎಂಬ ಪುಟ್ಟ ಗ್ರಾಮ. ಬರೀ ಕಾಡು ಮೇಡುಗಳಿಂದ ಆವೃತವಾಗಿದ ಜಾಗವನ್ನು ಸಮಮಾಡಿ ಕ್ರಿಸ್ತನ ಗುಡಿಯನ್ನು ರೂಪಿಸಿ ಕ್ರೈಸ್ತರ ನೆಲೆಯಾಗಿಸಿದರು. ಇಂದಿಗೂ ಸಹ (ತಟ್ಟಗುಪ್ಪೆ) ಮರಿಯಾಪುರ ಕ್ರೈಸ್ತ ಊರಾಗೆ ಉಳಿದಿದೆ. ಮರಿಯಾಪುರದ ಉಗಮವೇ ಒಂದು ರೋಚಕ ಇತಿಹಾಸ. 

ಈ ಊರಿನ ಹೊಸ ಮನ್ವಂತರ ಆರಂಭವಾದದ್ದು 1994 ಧರ್ಮಕೇಂದ್ರದ ಗುರುಗಳಾಗಿ ಬಂದ ಸ್ವಾಮಿ ಆ. ತೋಮಸ್‍ ನವರಿಂದ. ಇಕ್ಕಟಾದ ಈ ಊರಿನ ದಾರಿಗಳನ್ನು, ಸಂಕುಚಿತಗೊಂಡಿದ್ದ ಜನಜೀವನವನ್ನು ಸುಧಾರಣೆಗೆ ತಂದು, ಶಿಕ್ಷಣಕ್ಕೆ ಹೆಚ್ಚು ಒತ್ತನ್ನು ನೀಡಿ ನಾಗರಿಕತೆಯ ಲೇಪನವನ್ನು ಹಚ್ಚಿದರು. ಇವರ ಸೇವೆಗೆ ಇಂದಿಗೂ ಪ್ರತ್ಯಕ್ಷ ಸಾಕ್ಷಿಗಳಾಗಿ ನಿಂತಿರುವುದು; ನಮ್ಮ ಊರಿನ ಅಗಲವಾದ ಬೀದಿಗಳು, ಸುಸಜ್ಜಿತ ಆಟದ ಮೈದಾನ, ಒಳಚರಂಡಿಯ ವ್ಯವಸ್ಥೆಗಳು. ಇದಕ್ಕಾಗೇ ನಾವು ಇವರನ್ನು ಮರಿಯಾಪುರದ ಆಧುನಿಕ ಶಿಲ್ಪಿಯೆನ್ನುವುದು. 

1995 ಕರ್ನಾಟಕದಲ್ಲಿ ಕನ್ನಡ ಕ್ರಾಂತಿ ಕಾಡ್ಗಿಚ್ಚಿನಂತೆ ಹಬ್ಬಿದ ಸಮಯ. ಅದೇ ವರ್ಷ ಮೊದಲ ಬಾರಿ ಕನ್ನಡದಲ್ಲಿ ಅಚ್ಚಾದ ಕಥೋಲಿಕ ಬೈಬಲ್ ಕನ್ನಡಿಗರ ಕೈ ಸೇರಿತ್ತು. ಇದರ ಜೊತೆಯಲ್ಲೇ ದೃಶ್ಯ ಮಾಧ್ಯಮದ ಮೂಲಕ ಧರ್ಮಪ್ರಚಾರ ಮಾಡಬೇಕೆಂಬ ಇಂಗಿತ ಸ್ವಾಮಿ ಆ. ತೋಮಸ್ ರವರಲ್ಲಿ ಅದಾಗಲೇ ಹೊಕ್ಕಿತ್ತು. 

ಜರ್ಮನಿಯಲ್ಲಿ passion of Christ ನಾಟಕವನ್ನು ಶತಕಗಳಿಂದ ನಡೆಸುತ್ತಿದ್ದರು. ಇದರೊಂದಿಗೆ ಕರ್ನಾಟಕದ ಕ್ರೈಸ್ತ ಊರುಗಳಾದ ಬೇಗೂರು, ದೊರಸಾನಿಪಾಳ್ಯ, ವೀರನಪಾಳ್ಯ, ಹಾರೋಬೆಲೆಯಲ್ಲಿ ನಡೆಯುತ್ತಿದ್ದ ನಾಟಕಗಳು ಆಗಿನ ಕಾಲಕ್ಕೆ ಪ್ರಸಿದ್ಧಿಯಾಗಿದ್ದವು. 

ಇಂತಹ ಸಂದರ್ಭದಲ್ಲೇ ಮಹಿಮೆಯ ನಾಟಕಕ್ಕೆ ಒಂದು ಪ್ರತ್ಯೇಕತೆ ಬೇಕಾಗಿತ್ತು. ಮುಂದೆ ಆ ಪ್ರತ್ಯೇಕತೆಯೇ ಮಹಿಮೆಯ ಪ್ರಖ್ಯಾತಿಗೆ ಮೂಲ ಕಾರಣವಾಯಿತು. ಆ ವಿಶೇಷತೆಯೇ ಬೈಬಲ್‍ನ ಒಟ್ಪು 78 ಪುಸ್ತಕಗಳನ್ನು ವೇದಿಕೆಯ ಮೇಲೆ ದೃಶ್ಯಮಾಧ್ಯಮದ ಮುಖಾಂತರ ಜನರಿಗೆ ತೋರಿಸುವುದು. ಈ ನಿರ್ಧಾರ ಎಷ್ಟು ಸಮರ್ಥವಾಗಿತ್ತೋ, ಅದಕ್ಕಾಗಿ ಮಾಡಬೇಕಾಗಿದ ತಯಾರಿಗಳು ಅಷ್ಟೇ ಕಠಿಣವಾಗಿದ್ದವು. 

ಇಂದಿನ ಮರಿಯಾಪುರ ಚರ್ಚಿನ ಹಿಂಬದಿಯಲ್ಲಿರುವ 125 ಮೀಟರ್ ಉದ್ದದ ವೇದಿಕೆಯನ್ನು ನಿರ್ಮಿಸಬೇಕಾಗಿತ್ತು (ಅದು ಆಗಿನ ಕಾಲಕ್ಕೆ ಜೆ.ಸಿ.ಬಿ ಹಾಗೂ ಯಾವುದೇ ತಂತ್ರಜ್ಞಾನದ ಬಳಕೆಯನ್ನು ಅರಿಯದ ಸಮಯದಲ್ಲಿ) ಈ ವೇದಿಕೆಯ ನಿರ್ಮಾಣಕ್ಕೆ ಶ್ರಮಿಸಿದವರು, ಆಗಿನ ಮರಿಯಾಪುರದ ಜನತೆ ಮತ್ತು ಸ್ವಾಮಿ ಆ. ತೋಮಸ್‍ನವರು. ಈ ಅಪ್ರತಿಮ ವೇದಿಕೆ ಇತರೆ ನಾಟಕಗಳಲ್ಲಿ ಬಳಸುವ ವೇದಿಕೆಯಂತಿರದೆ, ಪರದೆ ಇಲ್ಲದ ಹಾಗು ಸ್ಥಿರ ನೈಜ ವೇದಿಕೆಯಾಗಿರುವುದು ಗಮನಾರ್ಹ. ಇದರ ಒಂದೊಂದು ಕಲ್ಲೂ ಸಹ ಸ್ವಾಮಿ ಆ. ತೋಮಸ್ ಹಾಗೂ ಮರಿಯಾಪುರ ಜನತೆಯ ಹೆಸರನ್ನು ಹೇಳುತ್ತವೆ. 

ರಂಗಸಜ್ಜಿಕೆಯ ತಯಾರಿಯಾಗುತ್ತಿದಂತೆ ರಂಗಕಾರ್ಯಗಳ ತಯಾರಿ ಶುರುವಾಗಿತ್ತು. ಮರಿಯಾಪುರದ ವೇದಿಕೆ ಮೇಲಿನ ಮೊದಲ ಪ್ರದರ್ಶನ "ಕ್ರಿಸ್ತನ ಮಹಿಮೆ"ಎಂದು ನಿರ್ಧರಿಸಲಾಗಿತ್ತು, ಅದಕ್ಕಾಗಿ ಸಂಗೀತ ಸಂಯೋಜನೆ, ಸಂಭಾಷಣೆ, ಸಾಹಿತ್ಯ, ರಚಿಸಬೇಕಾಗಿತ್ತು ಇದಕ್ಕಾಗಿ ಮನವೊಡ್ಡಿದವರು ಕನ್ನಡ ಕ್ರೈಸ್ತ ಸಾಹಿತ್ಯದ ಧೃವತಾರೆಯಾದ ಸ್ವಾಮಿ ಚಸರಾ ನವರು. ಇಂದಿಗೂ ಜನ ಅವರು ರಚಿಸಿದ "ಕ್ರಿಸ್ತನ ಮಹಿಮೆ" ನಾಟಕದ ಪಾತ್ರಧಾರಿಗಳ ಸಂಭಾಷಣೆಯನ್ನು ನೆನೆದು ಮಾತಾಡುವುದ ಕೇಳಿದಾಗ ಆ ನಾಟಕದ ಸೊಗಡು ಏನೆಂದು ಅರ್ಥವಾಗುತ್ತದೆ.

ಹೀಗೆ ಸಿದ್ಧಗೊಂಡ ಸಂಭಾಷಣೆ ಸಾಹಿತ್ಯಗಳು ಹಲವಾರು ಕಲಾವಿದರ ಮತ್ತು ಹಾಡುಗಾರರ ಕಂಠ ಸಿರಿಯಿಂದ, ಧ್ವನಿ ಮುದ್ರಣಗೊಂಡಿತು. ಕಲೆಯನ್ನು ಮೈಗೂಡಿಸಿಕೊಂಡು ಬೆಳೆದಿದ್ದ ಮರಿಯಾಪುರದ ಜನತೆಯೇ ಮಹಿಮೆ ನಾಟಕದ ಕಲಾವಿದರಾದರು. ಹಗಲಿನ ಕೆಲಸ ಮುಗಿಸಿ ರಾತ್ರಿಯ ಚಳಿಯಲ್ಲಿ ನಿರಂತರ ಅಭ್ಯಾಸವನ್ನು ನಡೆಸುತ್ತಿದ್ದರು ಹಾಗೂ ಶಾಲಾ ಮಕ್ಕಳೂ ನೃತ್ಯಾಭ್ಯಾಸಗಳಲ್ಲಿದ್ದರು. 1994ರಲ್ಲಿ ಮರಿಯಾಪುರ ಕಂಡ ಧ್ವನಿ ಬೆಳಕು ಕಾರ್ಯಕ್ರಮದ (ಮಹಿಮೆ ನಾಟಕದ) ಕನಸು 6 ಮೇ 1995 ರ ರಾತ್ರಿ ಸರಿಸುಮಾರು 9:45ಕ್ಕೆ ನನಸಾಗಿ ಮರುದಿನವೂ ಪ್ರದರ್ಶನಗೊಂಡಿತ್ತು

ಅವರ ಆ ನನಸು ಎಷ್ಟು ವೈಭವಯುತವಾಗಿತ್ತೆಂದರೆ 125 ಮೀಟರ್ ಉದ್ದದ ಪರದೆರಹಿತ ವೇದಿಕೆಯ ಮೇಲೆ 250 ನಟನಟಿಯರು ಹಾಗು 500ಕ್ಕೂ ಅಧಿಕ ಶಾಲಾ ಮಕ್ಕಳು ನೃತ್ಯಕ್ಕೆ ಹೆಜ್ಜೆ ಹಾಕುವುದನ್ನು, 200ಕ್ಕೂ ಹೆಚ್ಚು ಸ್ಪಾಟ್ ಲೈಟ್‍ಗಳ ಹೊನಲು ಬೆಳಕಿನ ವ್ಯವಸ್ಥಯಲ್ಲಿ, 1000 ವ್ಯಾಟ್‍ನ ಸ್ಪಷ್ಟ ಧ್ವನಿಯಲ್ಲಿ ನೋಡಿ, ಆಲಿಸಿ, ಆನಂದಿಸಲು ವೇದಿಕೆಯ ಮುಂಭಾಗದ ನೆಲದ ಮೇಲೆ ಒಂದು ಚಾಪೆ ಹಾಸಿ ಸ್ವರ್ಗ ಧರೆಗಿಳಿದ ಅನುಭವವನ್ನು ಅನುಭವಿಸಿದವರಿಗಷ್ಟೇ ಗೊತ್ತು.

ಇದಾದ ನಂತರ ಪ್ರತಿವರ್ಷ ಅದೇ ಪರಿಶ್ರಮ, ಅದೇ ಅಭ್ಯಾಸ, ಅದೇ ನೈಪುಣ್ಯ, ನಟನೆ, ವೈಭವದೊಂದಿಗೆ, ಸ್ವಾಮಿ ಆ. ತೋಮಸ್‍ರವರ ಸಾರಥ್ಯ, ನಿರ್ವಹಣೆ, ನಿರ್ದೇಶನದಲ್ಲಿ ಬೈಬಲ್‍ನ ಹೊಸ ಮತ್ತು ಹಳೆ ಒಡಂಬಡಿಕೆ ಸೇರಿ 53 ಪುಸ್ತಕಗಳು ಹೊರಬಂದಿವೆ. ಸಾತ್ವಿ, ನಮ್ಮ ಎದೆಯಾಳದ ಹಣತೆ, ಸ್ವಾಮಿ ಸ್ಟ್ಯಾನಿ ಬ್ಯಾಪ್ಟಿಸ್ಟ್‍ರವರ ದಶಾಜ್ಞೆಗಳು, ಸಲೋಮನ್ ರಾಜನ ವೈಭವ, ಪ್ರೇಷಿತರ ಪ್ರಭೆ ಮುಂದಿನ ವರ್ಷಗಳಲ್ಲಿ ಪ್ರದರ್ಶನಗೊಂಡವು. ಪ್ರವಾದಿಗಳು, ರಾಣಿ ಎಸ್ತೇರ್, ಸಂಸೋನ್ ಮತ್ತು ಡೆಲೈಲಾಗಳು ಸ್ವಾಮಿ ಅ. ತೋಮಸ್‍ರವರ ರಚನೆಯಲ್ಲಿ ಹೊರ ಬಂದು ಈಗ ಜನ ಮನಸ್ಸಿನಲ್ಲಿ ಚಿರಸ್ಥಾಯಿಯಾಗಿವೆ. 

ಇದೀಗ ಬೈಬಲ್‍ನ ಇನ್ನೂ ಎರಡು ಪುಸ್ತಕಗಳಾದ ಯೋಬ ಮತ್ತು ತೋಬಿತ್ ಜೀವನಾಧಾರಿತ ನಾಟಕವು ಪ್ರದರ್ಶನಕ್ಕೆ ಸಜ್ಜಾಗಿವೆ. ಈ ನಾಟಕಕ್ಕೆ ಮಹಿಮೆಯ 25ನೇ ವಾರ್ಷಿಕೋತ್ಸವದ ಬೆಳ್ಳಿ ಸಂಭ್ರಮ ಇನ್ನಷ್ಟು ಪುಷ್ಟೀಕರಿಸಿ ಮಹಿಮೆಯ ವೈಭವವನ್ನು ಮತ್ತಷ್ಟು ಹೆಚ್ಚಾಗಿಸಿದೆ. ಪ್ರೇಕ್ಷಕರಿಗಾಗೇ ಸಿದ್ದಗೊಂಡ ಕಾಂಕ್ರೀಟ್ ನೆಲ ಮತ್ತು ಸಿನಿಮಾ ಮಂದಿರಗಳ ಬಾಲ್ಕನಿಯಂತೆ ಕೂರುವ ವ್ಯವಸ್ಥೆಯ ಮೆಟ್ಟಿಲು ಸಹ ಈ ಬಾರಿ ಹೊಸ ಅನುಭೂತಿ ನೀಡಲಿದೆ. ಮಹಿಮೆಯ 25 ವರ್ಷದ ವೇದಿಕೆ ಸಹ ಕಾಯಕಲ್ಪಗೊಂಡು ತಯಾರಾಗಿದೆ ಕಲಾವಿದರು ಸಹ ಹೊಸ ಪಾತ್ರಗಳಿಂದ ರಂಗದ ರಂಗೇರಿಸಲಿದ್ದಾರೆ. ಇನ್ನೂ ನೀವು ಬರುವುದೊಂದೇ ಬಾಕಿ. 

ನೀವೆಲ್ಲರೂ ಈ ಬಾರಿ (2019 ಮಾರ್ಚ್ 2)ರ ಬೆಳ್ಳಿ ಮಹೋತ್ಸದ ಅದ್ದೂರಿ ಮಹಿಮೆಯಲ್ಲೂ ನಂತರ ಬೆಳಗಿನ ಆಧ್ಯಾತ್ಮ ಬಲಿಪೂಜೆಯಲ್ಲೂ ನಮ್ಮೊಂದಿಗೆ ಸಹಭಾಗಿಗಳಾಗಬೇಕೆಂದು ಮಹಿಮೆ ನಾಟಕದ ಕರ್ತೃ, ನಿರ್ವಹಣೆ-ನಿರ್ದೇಶನದ ಸ್ವಾಮಿ ಆ. ತೋಮಸ್ ನವರು ಮತ್ತು ಮರಿಯಾಪುರದ ಜನತೆಯ ಪರವಾಗಿ ಕೋರುತ್ತೇವೆ: "ದೈವವಾಕ್ಯವ ಸವಿಯ ಬನ್ನಿ ಅರಿಯ ಬನ್ನಿ"

*******



No comments:

Post a Comment

ಎತ್ತಿತೋರಿಸಲಾದ ಪೋಸ್ಟ್

ಅನ್ನಮ್ಮ’ಳಿಗೆ ೨೫೦ರ ಹಾಗೂ ಅತಿ.ವಂ.ಪೊತ್ತಕಮೂರಿಗೆ ೫೦ರ ಸ್ಮರಣೆಯ ಸಂಭ್ರಮ

ಬೆಂಗಳೂರಿನ ಉತ್ತರಹಳ್ಳಿಯ ಅನ್ನಮ್ಮನ ಬೆಟ್ಟ, ಅಲ್ಲಿನ ಅನ್ನಮ್ಮಳ ಸಮಾಧಿ, ಆ ಬೆಟ್ಟದ ಮೇಲಿನ ಶಿಲುಬೆ, ಅಲ್ಲಿ ಪ್ರತಿವರ್ಷ ತಪಸ್ಸು ಕಾಲದ ಐದನೇ ಭಾನುವಾರ ನಡೆಯುವ ಯೇಸು...