ಜಗತ್ತಿನಾದ್ಯಂತ ಕ್ರೈಸ್ತ ಬಾಂಧವರು ಬೂದಿಬುಧವಾರ ಅಥವಾ ಆಶ್ ವೆನ್ಸ್ಡೇ ಎಂದು ವಿಶೇಷವಾಗಿ ಆಚರಿಸುವ ದಿನ ಸಂಭ್ರಮದ ಸಡಗರದ ಆಚರಣೆಯೇನಲ್ಲ. ಅದು ಶೋಕದ ಪರಿತಾಪದ ಹಾಗೂ ಉಪವಾಸದ ದಿನ. ಬ್ಲ್ಯಾಕ್ ಫ್ರೈಡೇ, ವೈಟ್ ಕ್ರಿಸ್ಮಸ್, ಪಾಮ್ ಸಂಡೇ ಅನ್ನುವ ಹಾಗೆ ಆಷ್ ವೆನ್ಸ್ ಡೇ ಅಥವಾ ಬೂದಿ ಬುಧವಾರವು ಕ್ರೈಸ್ತರಲ್ಲದವರ ಗಮನಕ್ಕೆ ಬರುವುದು ಕಡಿಮೆ.

ಹಿಂದೆಲ್ಲ ಯೆಹೂದ್ಯ ಸಂಸ್ಕೃತಿಯಲ್ಲಿ ಜನರು ತಮಗೆ ಕೆಡುಕುಂಟಾದಾಗ ತಾವು ದೇವರಿಗೆ ವಿಮುಖರಾದ್ದರಿಂದಲೇ ಕಷ್ಟಕೋಟಲೆ ಅನುಭವಿಸಬೇಕಾಗಿ ಬಂತೆಂದು ಬಗೆದು ಪ್ರಾಯಶ್ಚಿತ್ತ ರೂಪವಾಗಿ ಉತ್ತಮ ದುಕೂಲಗಳನ್ನು ತೊರೆದು, ಮೈಗೆಲ್ಲ ಬೂದಿ ಬಳಿದುಕೊಂಡು, ನಾರುಮಡಿಯುಟ್ಟು ತಪಶ್ಚರ್ಯೆ ಕೈಗೊಳ್ಳುತ್ತಿದ್ದರು. ಇಂದು ಕ್ರೈಸ್ತರು ಅದನ್ನೇ ಸಾಂಕೇತಿಕವಾಗಿ ಆಚರಿಸುತ್ತಾರೆ. ಕ್ರೈಸ್ತರೆಲ್ಲ ಚರ್ಚಿಗೆ ತೆರಳಿ ದೇವಾರಾಧನೆ ನಡೆಸಿ ಗುರುವರ್ಯರ ಮುಂದೆ ಸಾಲಾಗಿ ನಿಲ್ಲುತ್ತಾರೆ. ಗುರುವರ್ಯರು ಬೂದಿಬಟ್ಟಲನ್ನು ಒಂದು ಕೈಯಲ್ಲಿ ಹಿಡಿದು ಮತ್ತೊಂದು ಕೈಯಿಂದ ಚಿಟಿಕೆ ಚಿಟಿಕೆ ಬೂದಿ ತೆಗೆದು ಭಕ್ತಾದಿಗಳ ಹಣೆಯ ಮೇಲೆ ತಿಲಕದಂತೆ ಶಿಲುಬೆ ಗುರುತು ಹಾಕುತ್ತಾ ’ಮಣ್ಣಿಂದ ಬಂದ ಕಾಯವಿದು, ಮರಳಿ ಮಣ್ಣಿಗೇ ಸೇರುವುದು’ ಎಂದು ಉದ್ಘೋಷಿಸುತ್ತಾರೆ. ಆ ಸಂದರ್ಭದಲ್ಲಿ ಗಾನವೃಂದದವರು ’ಮಣ್ಣಿನಿಂದ ಸೃಷ್ಟಿಯಾದ ಮನುಜನೇ ಮರೆಯಬೇಡ ಮರಳಿ ಸೇರ‍್ವೆ ಮಣ್ಣಿಗೆ, ಸುಳ್ಳು ಬೇಡ ಸತ್ಯ ಹಾದಿ ಹುಡುಕುವ, ದ್ವೇಷ ತ್ಯಜಿಸಿ ಐಕ್ಯದಿಂದ ಬಾಳುವ . . . ’ ಎಂದು ಹಾಡುತ್ತಾರೆ.
ಹಣೆಯ ಮೇಲಿನ ವಿಭೂತಿಯ ಅನುಭೂತಿ ಒಂದೆಡೆಯಾದರೆ ಗುರುಗಳ ಮಾತಿನ ಒಳಾರ್ಥ ಮತ್ತೊಂದೆಡೆ, ಮನಕಲಕುವುದಕ್ಕೆ ಇನ್ನೇನು ತಾನೇ ಬೇಕು? ಜೀವನ ನಶ್ವರ, ಜೀವನ ಕ್ಷಣಿಕ, ಈ ಕೂಡಲೇ ಪಾಪಕ್ಕೆ ವಿಮುಖರಾಗಿ ದೇವರೆಡೆಗೆ ಅಭಿಮುಖರಾಗಬೇಕೆನ್ನುವ ಅರಿವು ತಪಶ್ಚರ್ಯೆಗೆ ನಾಂದಿಯಾಗುತ್ತದೆ.
ತಪಶ್ಚರ್ಯೆ ಎಂದರೆ ಹಿಂದಿನಂತೆ ವನವಾಸಕ್ಕೆ ತೆರಳಿ ಒಂಟಿಕಾಲಲ್ಲಿ ನಿಂತು, ಪಂಚಾಗ್ನಿಯಲ್ಲಿ ಬೆಂದು ಮಂತ್ರ ಹೇಳುತ್ತಾ ತಪಸ್ಸು ಮಾಡಲು ಸಾಧ್ಯವೇ? ಇಂದಿನ ಕಾಲದ ಸಾಂಕೇತಿಕ ತಪಸ್ಸಿನ ರೀತಿಯೇ ಬೇರೆ. ಈ ದಿನಗಳಲ್ಲಿ ಜನ ದೈನಂದಿನ ಕೆಲಸಗಳನ್ನು ಕುಂದಿಲ್ಲದೆ ನಡೆಸುತ್ತಲೇ ವ್ಯಕ್ತಿಗತ ವಾಂಛೆಗಳನ್ನು ಬಿಟ್ಟುಬಿಡುತ್ತಾರೆ. ಮನರಂಜನೆಯಿಂದ ದೂರಾಗುತ್ತಾರೆ, ಚಟಗಳನ್ನು ತೊರೆಯುತ್ತಾರೆ, ಮಾಂಸಾಹಾರ ವರ್ಜಿಸುತ್ತಾರೆ, ಪಾರ್ಟಿಗಳು ಔತಣಕೂಟಗಳು ಇಲ್ಲವಾಗುತ್ತವೆ, ಮದ್ಯಸೇವನೆ ಧೂಮಪಾನ ಸಿನಿಮಾ ಗಡದ್ದು ಊಟಗಳ ಬದಲಿಗೆ ಒಂದೊತ್ತು ಉಪವಾಸ ಇಲ್ಲವೇ ಸಪ್ಪೆ ಸಾರನ್ನವೇ ಪರಮಾನ್ನವಾಗುತ್ತದೆ. ಆಭರಣಗಳು ಪೆಟ್ಟಿಗೆ ಸೇರುತ್ತವೆ, ಬಟ್ಟೆಗಳಲ್ಲೂ ಸರಳತೆ ಕಾಣುತ್ತದೆ, ಪ್ರಸಾಧನಗಳ ಬಳಕೆ ಕಡಿಮೆಯಾಗುತ್ತದೆ.
ಯೇಸುಕ್ರಿಸ್ತ ನಮ್ಮನ್ನು ಅಪಾರವಾಗಿ ಪ್ರೀತಿಸಿದ ಹಾಗೂ ಆ ಪ್ರೀತಿಯ ಕಾರಣ ಶಿಲುಬೆಯ ಮೇಲೆ ಪ್ರಾಣತೆತ್ತ. ಕಂದಾಚಾರ, ಡಂಭಾಚಾರ, ಕುರುಡು ಕಟ್ಟಳೆ, ದರ್ಪ ದಬ್ಬಾಳಿಕೆಗಳಲ್ಲಿ ಕಳೆದುಹೋಗಿದ್ದ ಮನುಷ್ಯತ್ವವನ್ನು ಎತ್ತಿಹಿಡಿಯಲು ಯೇಸುಕ್ರಿಸ್ತನು ಎಷ್ಟೆಲ್ಲ ಯಾತನೆ ಅನುಭವಿಸಿರುವಾಗ, ಅದರ ಸ್ಮರಣೆಗಾಗಿ ನಾವು ಇಷ್ಟೂ ಮಾಡದಿದ್ದರೆ ಹೇಗೆ? ಮಣ್ಣಿಂದ ಸೃಷ್ಟಿಯಾದವರು ನಾವು ಮರಳಿ ಮಣ್ಣಿಗೇ ಸೇರಬೇಕಾದವರು, ಆದ್ದರಿಂದ ಪಾಪ ತೊರೆದು ಪರಸ್ಪರ ಸೋದರತೆಯಿಂದ ಬಾಳೋಣ ಎಂಬುದನ್ನು ನೆನೆಸಿಕೊಂಡು ಹಣೆಯ ಮೇಲಿನ ಬೂದಿಗೊಂದು ಅರ್ಥ ಕೊಡೋಣ.
********
No comments:
Post a Comment