Friday, 1 March 2019

ಕೊಡುವುದ ಕಲಿಸೆಮಗೆ ಕ್ರಿಸ್ತ - ಫಾದರ್ ಜಾನ್ ಪ್ರದೀಪ್ ಯೇ.ಸ.


ಈ ಜಗತ್ತಿಗೆ ಪ್ರಭು ಕ್ರಿಸ್ತನ ಆಗಮನವಾಗಿ ಇಗಾಗಲೇ 2018 ವರುಷಗಳು ಉರುಳಿವೆ. ಆದರೆ ಆತನ ಬೋಧನೆ ಸರ್ವಕಾಲಕ್ಕೂ ಅನ್ವಯವಾಗುತ್ತದೆ. ಈ ವಾಕ್ಯಗಳನ್ನು ಯಾವುದೋ ಬೈಬಲ್ ವಿವರಣಾ ಗ್ರಂಥ (ಕಾಮೆನ್ಟರಿ) ವನ್ನು ಓದಿ ಬರೆಯುತ್ತಿಲ್ಲ. ಬದಲಾಗಿ ಕಳೆದ ಕೆಲವು ತಿಂಗಳ ಹಿಂದೆ ನಾನು ಖುದ್ದಾಗಿ ಕೇಳಿದ ಹಾಗೂ ಕಂಡ ಘಟನೆಗಳ ಆಧಾರದ ಮೇಲೆ ಈ ಮೇಲಿನ ವಾಕ್ಯಗಳನ್ನು ಉಲ್ಲೇಖಿಸುತ್ತಿದ್ದೇನೆ. ನಾವೀಗ ಇಪ್ಪತ್ತೊಂದನೆ ಶತಮಾನದಲ್ಲಿ ಜೀವಿಸುತ್ತಿದ್ದೇವೆ. ಇಂದಿಗೂ ಕ್ರಿಸ್ತನ ಸುವಾರ್ತೆ ಅರ್ಥಗರ್ಭಿತವಾಗಿದೆ.


ಕ್ರಿಸ್ತನ ಬೋಧನೆ (ಶ್ರೀಮಂತರಿಗೆ ಸವಾಲು, ಲೂಕ 18: 24-25)

ಯೇಸು, ಸಿರಿವಂತರಿಗೆ ದೇವರ ಸಾಮ್ರಾಜ್ಯವನ್ನು ಸೇರುವುದು ಎಷ್ಟೊಂದು ಕಷ್ಟ! ಐಶ್ವರ್ಯವಂತನು ದೇವರ ಸಾಮ್ರಾಜ್ಯವನ್ನು ಪ್ರವೇಶಿಸುವುದಕ್ಕಿಂತಲೂ ಒಂಟೆಯು ಸೂಜಿಕಣ್ಣಿನಲ್ಲಿ ನುಸುಳುವುದು ಸುಲಭ! ಎಂದರು. 



ಘಟನೆ-1

ನನಗೆ ಪರಿಚಿತ ಒಬ್ಬ ಆಗರ್ಭ ಶ್ರೀಮಂತ ಕ್ರೈಸ್ತ ಕುಟುಂಬದಲ್ಲಿ ರಾಂಚಿಯ ಒಬ್ಬ ಹುಡುಗಿ ಕಳೆದ ಒಂದು ವರುಷದಿಂದ ಮನೆಕೆಲಸ ಮಾಡುತ್ತಿದ್ದಳು. ಪರೀಕ್ಷೆ ಬರೆಯಬೇಕು ಎಂದು ಹೇಳಿ ತನ್ನ ಹುಟ್ಟೂರಿಗೆ ವಾಪಸ್ಸು ಹೋದಳು. ಆ ಮನೆಯ ಒಡತಿ ಒಂದು ವರ್ಷದ ಸಂಪೂರ್ಣ ವೇತನವನ್ನು ಆಕೆಗೆ ನೀಡಿರಲಿಲ್ಲ. ಹದಿಮೂರು ಸಾವಿರ ಬಾಕಿಯಿತ್ತು. ಊರಿಗೆ ಹೋದ ಹುಡುಗಿ ಯಾವ ಕಾರಣದಿಂದಲೋ ವಾಪಸ್ಸು ಬರಲಿಲ್ಲ. ಆಕೆಯ ಅಕ್ಕ ನನ್ನ ಬಳಿ ಕೆಲಸ ಮಾಡುತ್ತಿದ್ದರು. ಬಾಕಿ ಹಣವನ್ನು ಕೇಳಿ ತರಲು ಅಕ್ಕನನ್ನು ಕಳುಹಿಸಿದೆ. ಬಾಕಿ ಹಣ ಕೇಳಲು ಹೋದ ಅಕ್ಕನಿಗೆ ಆ ಮನೆಯ ಒಡತಿ ನೀಡಿದ್ದು ಉದ್ದವಾದ ಒಂದು ಲಿಸ್ಟ್. ಊಟ-ವಸತಿಗೆಂದು ಹತ್ತು ಸಾವಿರ ಕಡಿತಗೊಳಿಸಿ ಕೇವಲ ಮೂರು ಸಾವಿರ ಕೊಟ್ಟಳು ಆ ಮನೆಯ ಒಡತಿ. ಪ್ರತಿನಿತ್ಯ ನಾ ಕಾಣುವಂತೆ ದಿವ್ಯ ಬಲಿಪೂಜೆಯಲ್ಲಿ ಹಾಜರಿರುವ ಈ ಐಶ್ವರ್ಯವಂತ ಕುಟುಂಬದಲ್ಲಿ ಉದಾರತೆ ಕಣ್ಮರೆಯಾಗಿಲ್ಲವೇ? 



-o-



ಕ್ರಿಸ್ತನ ಬೋಧನೆ (ಬಡ ವಿಧವೆಯ ಬಿಡಿಗಾಸು: ಲೂಕ 21, 1-4)

ದೇವಾಲಯದ ಕಾಣಿಕೆಯ ಪೆಟ್ಟಿಗೆಯಲ್ಲಿ ಧನವಂತರು ತಮ್ಮ ಕಾಣಿಕೆಯನ್ನು ಹಾಕುತ್ತಿದ್ದುದನ್ನು ಯೇಸುಸ್ವಾಮಿ ಗಮನಿಸಿದರು. ಅಷ್ಟರಲ್ಲಿ ಒಬ್ಬ ಬಡವಿಧವೆಯು ಅಲ್ಲಿಗೆ ಬಂದು, ತಾಮ್ರದ ಚಿಕ್ಕ ನಾಣ್ಯಗಳನ್ನು ಕಾಣಿಕೆಯಾಗಿ ಹಾಕಿದಳು. ಅದನ್ನು ಕಂಡ ಯೇಸು , ಈ ಬಡ ವಿಧವೆಯು ಎಲ್ಲರಿಗಿಂತಲೂ ಹೆಚ್ಚಾಗಿ ಅರ್ಪಿಸಿದಳೆಂದು ನಿಮಗೆ ನಿಶ್ಚಯವಾಗಿ ಹೇಳುತ್ತೇನೆ. ಅವರೆಲ್ಲರೂ ತಮ್ಮ ಅಪರಿಮಿತ ಐಶ್ವರ್ಯದಿಂದ ಕಾಣಿಕೆಯಿತ್ತರು: ಈಕೆಯಾದರೋ ತನ್ನ ಕಡುಬಡತನದಲ್ಲೂ ತನಗಿದ್ದ ಜೀವನಾಧಾರವನ್ನೆಲ್ಲ ಕೊಟ್ಟುಬಿಟ್ಟಳು, ಎಂದರು.





ಘಟನೆ-2



ಕೆಲವು ತಿಂಗಳ ಹಿಂದೆ ಪರಿಚಯವಾದ ಬೆಂಗಳೂರು ಧರ್ಮಕ್ಷೇತ್ರಕ್ಕೆ ಸೇರಿದ ಯಾಜಕರೊಬ್ಬರು ತಾನು ಸೇವೆ ಸಲ್ಲಿಸಿದ ಒಂದು ಧರ್ಮಕೇಂದ್ರದಲ್ಲಿ ಕೆಲವು ವರುಷಗಳ ಹಿಂದೆ ಆದ ಅನುಭವವನ್ನು ಸಂತಸದಿಂದ ನನ್ನೊಂದಿಗೆ ಹಂಚಿಕೊಳ್ಳುತ್ತಿದ್ದರು. ಅವರ ಧರ್ಮಕೇಂದ್ರಕ್ಕೆ ಸೇರಿದ ಒಬ್ಬ ಬಡ ಕ್ರೈಸ್ತ ಮಹಿಳೆ ಬಸ್ಸು ನಿಲ್ದಾಣದಲ್ಲಿ ದಿನನಿತ್ಯ ಹೂ ಮಾರುತ್ತಿದ್ದರು. ಒಂದು ದಿನ ತಾನು ಅನೇಕ ದಿನದಿಂದ ಸಂಪಾದಿಸಿದ ಸುಮಾರು ಏಳು ಸಾವಿರ ರೂಪಾಯಿಗಳನ್ನು ತಂದು ಈ ಯಾಜಕನ ಕೈಗಿಟ್ಟು ಈ ರೀತಿ ನುಡಿಯುತ್ತಾರೆ: “ಸ್ವಾಮಿ, ಈ ಹಣವನ್ನು ಧರ್ಮಕೇಂದ್ರದ ಕೆಲವು ಬಡಮಕ್ಕಳ ವಿದ್ಯಾಭ್ಯಾಸಕ್ಕೆ ಬಳಸಿಕೊಳ್ಳಿ” ಎಂದು. ಈಕೆಯ ಬದುಕಿನ ಪರಿಸ್ಥಿತಿಯನ್ನು ಅರಿತಿದ್ದ ಗುರುಗಳು ಹೇಳುತ್ತಾರೆ: “ದಯವಿಟ್ಟು ಬೇಡಿ ಅಮ್ಮ. ಈ ಹಣವನ್ನು ನೀವೇ ಯಾವುದಕ್ಕಾದರೂ ಬಳಸಿಕೊಳ್ಳಿ” ಎಂದು. ಆದರೂ ಈ ಬಡ ಮಹಿಳೆ ಒಪ್ಪದೇ ಒತ್ತಾಯಪೂರ್ವಕವಾಗಿ ಕೊಟ್ಟ ಹಣವನ್ನು ಸ್ವೀಕರಿಸಿ ಧರ್ಮಕೇಂದ್ರದ ಪಾಲನಾ ಸಮಿತಿಯ ಮುಂದಿಡುತ್ತಾರೆ. ಪಾಲನಾ ಸಮಿತಿಯ ಸಲಹೆಯಂತೆ ಬಡಮಕ್ಕಳ ಕ್ಷೇಮಾಭಿವೃದ್ಧಿಗೋಸ್ಕರವೇ ಒಂದು ನಿಧಿ ಸ್ಥಾಪಿಸುತ್ತಾರೆ. ಇವತ್ತಿಗೆ ಆ ನಿಧಿಯಲ್ಲಿ ಸುಮಾರು 10 ಲಕ್ಷ ಸಂಗ್ರಹವಾಗಿದೆ. 



ಸ್ನೇಹಿತರೇ, ತಪಸ್ಸು ಕಾಲದ ಹೊಸ್ತಿಲಲ್ಲಿ ನಾವಿದ್ದೇವೆ. ಲಯೋಲದ ಸಂತ ಇಗ್ನಾಸಿಯವರು ನುಡಿಯುತ್ತಿದ್ದರು: ಪ್ರೀತಿಯನ್ನು ಹೆಚ್ಚಾಗಿ ಬರೀ ಮಾತಿನಲ್ಲಿ ಅಲ್ಲ. ಬದಲಾಗಿ ಕಾರ್ಯರೂಪದಲ್ಲಿ ತೋರಬೇಕು. ಕ್ರಿಸ್ತನ ತ್ಯಾಗಮಯ ಬದುಕು, ಘಟನೆ-2 ರ ಬಡ ಮಹಿಳೆಯಲ್ಲಿದ್ದ ಉದಾರ ಮನಸ್ಸು ನಮ್ಮಲ್ಲೂ ಹೆಚ್ಚಾಗಿ ಬೆಳೆಯಲಿ. ಘಟನೆ-1 ರಲ್ಲಿನ ಅ ಸಿರಿವಂತ ಮನೆಯೊಡತಿಯಲ್ಲಿ ಕಾಣುವ ಸ್ವಾರ್ಥ ಲೆಕ್ಕಾಚಾರ ನಮ್ಮಿಂದ ದೂರ ಸರಿಯಲಿ. 



’ಕೊಡುವುದ ಕಲಿಸೆಮಗೆ ಕ್ರಿಸ್ತ’ ಎಂಬುದೇ ಈ ತಪಸ್ಸುಕಾಲದ ಪರ್ಯಂತ ನಮ್ಮ ಮನದಾಳದ ಕೋರಿಕೆಯಾಗಲಿ.



*******



No comments:

Post a Comment

ಎತ್ತಿತೋರಿಸಲಾದ ಪೋಸ್ಟ್

ಅನ್ನಮ್ಮ’ಳಿಗೆ ೨೫೦ರ ಹಾಗೂ ಅತಿ.ವಂ.ಪೊತ್ತಕಮೂರಿಗೆ ೫೦ರ ಸ್ಮರಣೆಯ ಸಂಭ್ರಮ

ಬೆಂಗಳೂರಿನ ಉತ್ತರಹಳ್ಳಿಯ ಅನ್ನಮ್ಮನ ಬೆಟ್ಟ, ಅಲ್ಲಿನ ಅನ್ನಮ್ಮಳ ಸಮಾಧಿ, ಆ ಬೆಟ್ಟದ ಮೇಲಿನ ಶಿಲುಬೆ, ಅಲ್ಲಿ ಪ್ರತಿವರ್ಷ ತಪಸ್ಸು ಕಾಲದ ಐದನೇ ಭಾನುವಾರ ನಡೆಯುವ ಯೇಸು...