Showing posts with label ಕಥಾದನಿ. Show all posts
Showing posts with label ಕಥಾದನಿ. Show all posts

Friday, 18 December 2020

ಕಥಾದನಿ

ಮುಲ್ಲಾ ನಸ್ರುದ್ದೀನನಿಗೆ ಅಂದು ಬೆಳಗ್ಗೆಯೇ ಮದುವೆ ನಡೆಯಿತು. ಅದೇ ರಾತ್ರಿ ನದಿಯ ಈ ದಡದಿಂದ ಆ ದಡಕ್ಕೆ ಮುಲ್ಲಾ ನಸ್ರುದ್ದೀನ್ ಮತ್ತು ಅವನ ವಧು ನೆಂಟರಿಷ್ಟರೊಂದಿಗೆ ದೋಣಿಯಲ್ಲಿ ಪ್ರಯಾಣ ಮಾಡುತ್ತಿದ್ದರು. ಆಗ ದಿಢೀರನೆ ಬಿರುಗಾಳಿ ಬಂದೆರಗಿತು. ನದಿಯಲ್ಲಿ ಪ್ರವಾಹ ಬಿರುಸಾಗಿದ್ದಿತು. ಇವರೆಲ್ಲ ಪ್ರಯಾಣ ಮಾಡುತ್ತಿದ್ದ ದೋಣಿ ತಲ್ಲಣಿಸಿ ಹುಲ್ಲಿನಂತೆ ಅಲುಗಾಡಿತು. ಹೊಸ ಗಂಡಹೆಂಡತಿಯಾದಿಯಾಗಿ ದೋಣಿಯಲ್ಲಿ ಇದ್ದ ಎಲ್ಲರಿಗೂ ಮರಣಭಯ ಆವರಿಸಿಕೊಂಡಿತು! ಆದರೆ ಮುಲ್ಲಾ ಮಾತ್ರ ಯಾವ ಭಯವೂ ಇಲ್ಲದೆ ಶಾಂತವಾಗಿದ್ದ. ಇದನ್ನು ಗಮನಿಸಿದ ಅವನ ಹೆಂಡತಿ, “ನಿಮಗೆ ಭಯವೆನ್ನಿಸ್ತಾ ಇಲ್ವಾ?” ಎಂದು ಗಂಡನನ್ನು ಅಚ್ಚರಿಯಿಂದ ಕೇಳಿದಳು.

ಮುಲ್ಲಾ ನಸ್ರುದ್ದೀನ್ ಯಾವ ಉತ್ತರವನ್ನೂ ನೀಡದೆ ತನ್ನ ಸೊಂಟದಲ್ಲಿದ್ದ ಕತ್ತಿಯನ್ನು ತೆಗೆದು ಹೆಂಡತಿಯ ಗಂಟಲನ್ನು ಚುಚ್ಚಿ ಇರಿಯುವ ಹಾಗೆ ಹತ್ತಿರ ಬಂದ. ಹೆಂಡತಿ ವಿಚಲಿತಳಾಗಲಿಲ್ಲ. ಆಗ ಮುಲ್ಲಾ ನಸ್ರುದ್ದೀನ್ ತನ್ನ ಹೆಂಡತಿಯನ್ನು ನೋಡಿ ಕೇಳಿದ: “ಯಾಕೆ, ನಿಂಗೆ ಸ್ವಲ್ಪಾನೂ ಭಯ ಆಗ್ಲಿಲ್ವಾ?” ಅದಕ್ಕೆ ಅವನ ಹೆಂಡತಿ, “ಈ ಕತ್ತಿಯೇನೂ ಖಂಡಿತವಾಗಿಯೂ ತುಂಬಾ ಅಪಾಯಕಾರಿಯಾದ್ದೇ ಆಗಿರಬಹುದು. ಆದರೆ ಅದನ್ನು ಹಿಡಿದುಕೊಂಡಿರುವವರು ನನ್ನ ಮೇಲೆ ತುಂಬಾ ಪ್ರೀತಿ-ಪ್ರೇಮ ಆಸೆ ಇಟ್ಟಿರೊ ನನ್ನ ಗಂಡ. ಆದ್ದರಿಂದ ನನಗೆ ಭಯವಾಗಲಿಲ್ಲ' ಎಂದಳು.

ಹಾಗೆಯೇ ನನಗೂ, ಈ ಬಿರುಗಾಳಿ ಅಲೆಗಳು ಬೇಕಾದರೆ ಅಪಾಯಕಾರಿ ಯಾಗಿರಬಹುದು. ಆದರೆ ಇದನ್ನು ಆಡಿಸುತ್ತಿರುವ ಅಲ್ಲಾಹ್ ಕರುಣಾಮಯಿ, ಆದ್ದರಿಂದ ನನಗೆ ಭಯ ಇಲ್ಲ ಎಂದ ಮುಲ್ಲಾ    ನಸ್ರುದ್ದೀನ್.

================

ಮುಲ್ಲಾ ನಸ್ರುದ್ದೀನ್ ಒಂದು ದಿವಸ ದುಃಖದಿಂದ ಕುಳಿತುಕೊಂಡಿದ್ದ. ಮುಲ್ಲಾನನ್ನು ನೋಡಲು ಆತ್ಮೀಯ ಸ್ನೇಹಿತ “ಯಾಕೆ ಶೋಕದಿಂದ್ದೀಯ? ಎಂದು ಕೇಳಿದ. ಮುಲ್ಲಾ ಅಳುವುದಕ್ಕೆ ಪ್ರಾರಂಭಿಸಿಬಿಟ್ಟ. “ನನ್ನ ಮಾವ ತಮ್ಮ ಹೆಸರಲ್ಲಿದ್ದ ಆಸ್ತಿಯನ್ನೆಲ್ಲ ನನ್ನ ಹೆಸರಿಗೆ ಬರೆದಿಟ್ಟು ಬಿಟ್ಟು ಸತ್ತುಹೋದರು! ಅದನ್ನು ಯೋಚಿಸಿಯೇ ಅಳುತ್ತಿದ್ದೇನೆ” ಎಂದ ಮುಲ್ಲಾ

ನಿನ್ನ ಮಾವ ನಂಗೊತ್ತು. ಅವರಿಗೆ ಎಂಬತ್ತು ವರ್ಷ ವಯಸ್ಸಾಗಿತ್ತಲ್ಲ... ಸಾವು ಸಹಜವಾದದ್ದುತಾನೇ ? ಅದಕ್ಕೋಸ್ಕರ ಯಾಕೆ ಇಷ್ಟೊಂದು ದುಃಖ? ನಿಜ ಹೇಳಬೇಕಾದರೆ, ಅವರ ಅಷ್ಟೊಂದು ಆಸ್ತಿ ನಿನಗೆ ಬರುತ್ತಿರುವುದಕ್ಕೆ ನೀನು ಸಂತೋಷಪಡಬೇಕು” ಎಂದು ಮುಲ್ಲಾನಿಗೆ ಮಿತ್ರ ಸಾಂತ್ವನ ಹೇಳಲು ಪ್ರಯತ್ನಿಸಿದ. ಆದರೆ ಮುಲ್ಲಾ “ನನ್ನ ದುಃಖ ನಿನಗರ್ಥವಾಗೋದಿಲ್ಲ ಮಿತ್ರ! ಹೋದ ವಾರವೇ ನನ್ನ ಚಿಕ್ಕಪ್ಪ, ನನ್ನ ಹೆಸರಿಗೆ ಒಂದು ಲಕ್ಷದಷ್ಟು ಆಸ್ತಿ ಬರೆದಿಟ್ಟು ಸತ್ತುಹೋದರು" ಎಂದು ಹೇಳಿ ಇನ್ನೂ ಜೋರಾಗಿ ಸದ್ದು ಮಾಡುತ್ತ ಅಳತೊಡಗಿದ. ಆ ಮಿತ್ರನಿಗೆ ಆಶ್ಚರ್ಯ! “ನಿನ್ನ ಚಿಕ್ಕಪ್ಪನವರೂ ನಂಗೊತ್ತು... ಅವರಿಗೂ ಎಂಬತ್ತೈದು ವರ್ಷ ವಯಸ್ಸು... ಹಣ ಬಂದದ್ದನ್ನು ತಿಳಿದು ಸಂತೋಷಪಡೋ ಬದ್ಲು ಮಂಗನ ಹಾಗೆ ಹೀಗೆ ಅಳ್ತಿದ್ದೀಯಲ್ಲ?'' ಎಂದು ಮಿತ್ರ ಬೇಸರದಿಂದ ಕೇಳಿದ. “ನನ್ನ ದುಃಖ ಇನ್ನೂ ದೊಡ್ಡದು. ನನ್ನ ನೂರು ವರ್ಷ ವಯಸ್ಸಿನ ತಾತ ಎರಡು ಲಕ್ಷಕ್ಕೂ ಹೆಚ್ಚು ಆಸ್ತಿಯನ್ನು ನನ್ನ ಹೆಸರಿಗೆ ಬರೆದಿಟ್ಟು ನಿನ್ನೆ ಸತ್ತುಹೋದರು' ಎಂದ ಮುಲ್ಲಾ. ಮಿತ್ರನಿಗೆ ಕೋಪವೇ ಬಂತು. “ನನಗರ್ಥಾನೇ ಆಗ್ತಿಲ್ಲ. ನೀನು ಯಾಕಾದ್ರೂ ಅಳ್ತಿದ್ದೀಯಾ ತಿಳೀತಿಲ್ಲ” ಎಂದ,

ಮುಲ್ಲಾ ಕಣ್ಣುಗಳನ್ನು ಒರೆಸಿಕೊಳ್ಳುತ್ತ ಹೇಳಿದ: “ಹಣವಂತರಾದ ನನ್ನ ಮಾವ, ಚಿಕ್ಕಪ್ಪ, ತಾತ ಎಲ್ಲರೂ ಸತ್ತುಹೋದ್ರು. ಇನ್ನು ಮೇಲೆ ನನ್ನ ಹೆಸರಿಗೆ ಆಸ್ತಿ ಬರೆಯೋದಕ್ಕೆ ಯಾರೂ ಉಳಿದಿಲ್ವಲ್ಲ!”

ಸಂಗ್ರಹ ಇನ್ನಾ

Tuesday, 10 November 2020

ಕಥಾದನಿ

 ಹೇಗೆ ನಿಲ್ಲಿಸುವುದೆಂದು ಮರೆತು ಬಿಟ್ಟಿದ್ದೆ

ಆಂಡ್ರ್ಯೂ ಕಾರ್ನೆಗಿ ಪ್ರಪಂಚದಲ್ಲಿ ಅತೀ ಶ್ರೀಮಂತರಲ್ಲಿ ಒಬ್ಬ. ಅವನನ್ನು ಒಮ್ಮೆ ಈ ರೀತಿ ಪ್ರಶ್ನಿಸಲಾಯಿತ್ತು; ನಿಮ್ಮಲ್ಲಿ ಸಾಕಷ್ಟು ಆಸ್ತಿ ಇತ್ತು, ಕನಿಷ್ಠ ನಿಮ್ಮ ಬದುಕಿನ ಕೊನೆದಿನಗಳಾದರೂ ಎಲ್ಲವನ್ನು ಬಿಟ್ಟು ನೆಮ್ಮದಿಯಿಂದ ಬಾಳಬಹುದಿತ್ತಲ್ಲ? ಹೌದು, ನಿಜ ಆದರೆ ನಾನು ಸಂಪಾದಿಸುವ ನನ್ನ ಚಟವನ್ನು ನಿಲ್ಲಿಸಲಾಗಲಿಲ್ಲ, ಹೇಗೆ ನಿಲ್ಲಿಸುವುದೆಂದು ಮರೆತು ಬಿಟ್ಟಿದ್ದೆ!

-----------

ದೇಶ ಕಟ್ಟುವ ಪುಣ್ಯಕೆಲಸವನ್ನು ಮಾಡ್ತಿದ್ದೀನಿ

ಮಟ ಮಟ ಮಧ್ಯಾಹ್ನದ ಬಿಸಿಲಿನಲ್ಲಿ ಬಿಸಿ ಬಿಸಿ ಸುಡುತ್ತಿದ್ದ ಇಟ್ಟಿಗೆಯನ್ನು ಹೊತ್ತುಕೊಂಡು ಕಾರ್ಮಿಕರು ಓಡಾದುತ್ತಿದ್ದರು. ಅಲ್ಲಿಗೆ ಬಂದ ಸನ್ಯಾಸಿಯೊಬ್ಬರು, ನೀನು ಏನು ಮಾಡ್ತಾ ಇದ್ದೀಯಾ? ಎಂದು ಕೆಲಸಗಾರನೊಬ್ಬನನ್ನು ಕೇಳಿದರು. ಅದಕ್ಕೆ ಅವನು ನೋಡಿದ್ರೆ ಗೋತ್ತಾಗಲ್ವ ಕಲ್ಲುಮಣ್ಣು ಹೋರ್ತಿದೀನಿ ಎಂದ. ಅದೇ ಪ್ರಶ್ನೆಯನ್ನು ಪಕ್ಕದಲ್ಲಿದ್ದ ಇನ್ನೊಬ್ಬನನ್ನು ಸನ್ಯಾಸಿ ಕೇಳಿದ. ಅದಕ್ಕೆ ಅವನು ನಾನು ಕೂಲಿಗಾಗಿ ನನ್ನ ಸಂಸಾರಕ್ಕೆ ಆಹಾರವನ್ನು ಸಂಪಾದಿಸುತ್ತಿದ್ದೀನಿ ಎಂದ. ಸನ್ಯಾಸಿ ಮತ್ತೊಬ್ಬನೊಂದಿಗೆ ನೀನು ಏನು ಮಾಡ್ತಾ ಇದ್ದೀಯಾ? ಎಂದು ಅದೇ ಪ್ರಶ್ನೆಯನ್ನು ಕೇಳಿದರು. ಅದಕ್ಕೆ ಆ ಮೂರವನೆಯವನು ನಾನು ಮಕ್ಕಳ ವಿದ್ಯಾಭ್ಯಾಸಕ್ಕೆ ಶಾಲೆಯ ಕಟ್ಟಡವನ್ನು ಕಟ್ಟುತ್ತಿದ್ದೇನೆ ಎಂದು ಉತ್ತರಿಸಿದ. ಇದೇ ಪ್ರಶ್ನೆಯನ್ನು ಕೇಳಿದ ಇನ್ನೊಬ್ಬನ ಉತ್ತರ, ದೇಶ ಕಟ್ಟುವ ಪುಣ್ಯಕೆಲಸವನ್ನು ಮಾಡ್ತಿದ್ದೀನಿ.

-------------

ನ್ಯೂರಟಿಕ್ ಮಗು

ಪುಟ್ಟ ಮೇರಿ ತನ್ನ ತಾಯಿಯೊಂದಿಗೆ ಸಮುದ್ರ ತೀರದಲ್ಲಿದ್ದಳು. ಅಮ್ಮ ನಾನು ಮರಳಿನಲ್ಲಿ ಆಡಬಹುದೇ? ಪುಟ್ಟ ಮೇರಿ ತಾಯಿಯನ್ನು ಕೇಳಿದಳು. ಬೇಡ ಬೇಡ ನಿನ್ನ ಸ್ವಚ್ಛವಾದ ಬಟ್ಟೆ ಕೊಳೆಯಾಗುತ್ತದೆ ಎಂದು ಮಗಳನ್ನು ತಡೆದಳು. ಮತ್ತೊಮ್ಮೆ ಅಮ್ಮ ನಾನು ನೀರಿನಲ್ಲಿ ಆಟವಾಡಬಹುದೇ? ಮೇರಿ ಅಮ್ಮಳನ್ನು ಗೊಗರೆದಳು. ಬೇಡ ಮೇರಿ ನಿನ್ನ ಬಟ್ಟೆಗಳು ಒದ್ದೆಯಾಗುತ್ತದೆ ಮತ್ತು ನಿನಗೆ ಶೀತ ನೆಗಡಿ ಬರಬಹುದು ಮತ್ತೊಮ್ಮೆ ನೀರಿನಲ್ಲಿ ಆಟವಾಡಕೆಂಬ ಆಸೆಯಿಂದ ಇದ್ದ ಮೇರಿಯನ್ನು ತಾಯಿ ತಡೆದಳು. ನಾನು ಇತರ ಮಕ್ಕಳೊಂದಿಗೆ ಆಡಬಹುದೇ? ಮೇರಿ ಅಮ್ಮಳನ್ನು ವಿನಂತಿಸಿದಳು. ಬೇಡ ನೀನು ಜನಸಂದಣಿಯಲ್ಲಿ ಕಳೆದುಹೋಗುವೆ ಎಂದು ತಾಯಿ ಹೇಳಿದಳು. ಕೊನೆಗೆ ಅಮ್ಮ ನನಗೆ ಐಸ್‌ಕ್ರಿಮ್ ಕೊಡಿಸಿ ಎಂದು ಬೇಡಿಕೊಂಡಳು. ಅದಕ್ಕೆ ತಾಯಿ ಬೇಡ ಬೇಡ ಅದು ನಿನ್ನ ಗಂಟಲಿಗೆ ಒಳ್ಳೆಯದಲ್ಲ ಎಂದು ಹೇಳಿದಳು. ಮೇರಿ ಒಮ್ಮಲೇ ಜೋರಾಗಿ ಅಳಲು ಪ್ರಾರಂಭಿಸಿದಳು. ತಾಯಿ ತನ್ನ ಪಕ್ಕ ನಿಂತಿದ್ದ ತನ್ನ ಗೆಳತಿಯ ಕಡೆ ತಿರುಗಿ  ಅಬ್ಬಾ ಇಂಥ ತೆಲೆಕೆಟ್ಟ ನ್ಯೂರಟಿಕ್ ಮಗುವನ್ನು ನೀವು ಎಂದಾದರೂ ನೋಡಿದ್ದೀರಾ? ಎಂದ ಹೇಳತೊಡಗಿದಳು.

------------

 ಸಂಗ್ರಹ ಅನುವಾದ - ಇನ್ನಾ


Sunday, 8 November 2020

ಕಥಾದನಿ

ಸಮಯವನ್ನು ಹಾಳು ಮಾಡುವುದನ್ನು ಬಿಟ್ಟು, ಹೋಗಿ ಕಲ್ಲುಗಳನ್ನು ಸಂಗ್ರಹಿಸುವುದು ಸೂಕ್ತ

ಚಂದ್ರನ ಮೇಲೆ ಪಾದಾರ್ಪಣೆ ಮಾಡಿದ ವ್ಯಕ್ತಿ, ಚಂದ್ರನ ಮೇಲಿಂದ ಭೂಮಿಯ ಕಡೆ ಕಣ್ಣು ಹಾಯಿಸಿ ನೋಡಿ ಭಾವಪರವಶನಾಗಿ,

ಅಬ್ಬಾ! ಎಷ್ಟು ಮನೋಹರ! ಎಂದು ಉದ್ಗರಿಸಿದ.

ತಕ್ಷಣ ತನ್ನ ಮನಃಸ್ಥಿತಿಯನ್ನು ಬದಲಾಯಿಸಿಕೊಂಡು ತನ್ನಷ್ಟಕ್ಕೆ ತಾನೇ ಹೇಳಿಕೊಂಡ

ಸಮಯವನ್ನು ಹಾಳು ಮಾಡುವುದನ್ನು ಬಿಟ್ಟು, ಹೋಗಿ ಕಲ್ಲುಗಳನ್ನು ಸಂಗ್ರಹಿಸುವುದು ಸೂಕ್ತ ಎಂದು.

=============

ವೈದ್ಯನಿಗೆ ಮೂರು, ವಕೀಲನಿಗೆ ಐದು

ನಿಮ್ಮ ಮಕ್ಕಳು ಹೇಗಿದ್ದಾರೆ? ವ್ಯಕ್ತಿ ಮಹಿಳೆಯನ್ನು ಕೇಳಿದ

ಚೆನ್ನಾಗಿದ್ದಾರೆ ಧನ್ಯವಾದಗಳು ಎಂದು ಉತ್ತರಿಸಿದಳು ಮಹಿಳೆ.

ಮತ್ತೊಮ್ಮೆ ಅವರಿಗೆ ಎಷ್ಟು ವಯಸ್ಸು? ಎಂದು ಕೇಳಿದ ವ್ಯಕ್ತಿಗೆ

ಮಹಿಳೆ ಹೇಳುತ್ತಾಳೆ ; ವೈದ್ಯನಿಗೆ ಮೂರು, ವಕೀಲನಿಗೆ ಐದು ಎಂದು

====================

ಬೇರೆಯವರು ನಿನಗೇನು ಮಾಡಬಾರದೆಂದು ಬಯಸುತ್ತೀಯೋ ಅದನ್ನು ಪರರಿಗೆ ನೀನು ಮಾಡಬೇಡ

ಶಿಷ್ಯನೋರ್ವ ಬಂದು, ಹೆಲ್ಲೆಲ್ ಎಂಬ ಯೆಹೂದ್ಯ ಗುರುವಿನ ಬಳಿ ಹೋಗಿ, ಒಂದೇ ಮಾತಿನಲ್ಲಿ ವೇದಶಾಸ್ತ್ರದ ಸಾರ ಸಮಸ್ತವನ್ನು ಹೇಳ ಬಲ್ಲಿಯಾ? ಎಂದು ಕೇಳಿದಾಗ, ಬೇರೆಯವರು ನಿನಗೇನು ಮಾಡಬಾರದೆಂದು ಬಯಸುತ್ತೀಯೋ ಅದನ್ನು ಪರರಿಗೆ ನೀನು ಮಾಡಬೇಡ, ಇದುವೇ ವೇದಶಾಸ್ತ್ರದ ಸಾರಾಂಶ. ಉಳಿದೆಲ್ಲವೂ ವಿವರಣೆ ಎಂದು ನುಡಿದರು.

=========================

ಗುಲಾಬಿ ಬಣ್ಣದ ಕನ್ನಡಕವನ್ನು ಹಾಕಿಕೊಳ್ಳುವುದರಿಂದ ಮನೆಯ ಬಣ್ಣ ಗುಲಾಬಿ ಬಣ್ಣವಾಗುವುದಿಲ್ಲ.

ತೆನಾಲಿರಾಮ ಮತ್ತು ಅವನ ಪತ್ನಿ ಅವರ ಮನೆಗೆ ಯಾವ ಬಣ್ಣ ಬಳಿಸುವುದು ಎಂದು ಚರ್ಚಿಸುತ್ತಿದ್ದರು.

ಪತ್ನಿ : ನನಗೆ ಗುಲಾಬಿ ಬಣ್ಣವೇ ಬೇಕು

ತೆನಾಲಿ : ಸರಿಯಾಗಿ ವಿಚಾರ ಮಾಡಿ ಹೇಳುತ್ತಿರುವೆಯಾ? ನಾವು ಪ್ರಕಾಶಮಾನವಾಗಿ ಕಾಣುವ ಬಿಳಿಯ ಬಣ್ಣ ಹಾಕಿದರೆ ಒಳ್ಳೆಯದು.

ಪತ್ನಿ : ನಾನು, ನನ್ನ ಮನಸ್ಸಿನಲ್ಲಿ ನಿರ್ಧರಿಸಿದ್ದೇನೆ - ಗುಲಾಬಿ ಬಣ್ಣವಿದ್ದರೆ ಮಾತ್ರ ನಾನು ಸಂತೋಷಪಡುತ್ತೇನೆ.

ತೆನಾಲಿ (ಅವಳಿಗೆ ಗುಲಾಬಿ ಬಣ್ಣದ ಕನ್ನಡಕವನ್ನು ಕೊಡುತ್ತಾ) : ಒಳ್ಳೆಯದು, ನಿನ್ನಿಷ್ಟದಂತೆಯೇ ಆಗಲಿ. ಈ ಕನ್ನಡಕವನ್ನು ಹಾಕಿಕೋ. ಬರೀ ಗೋಡೆ ಅಷ್ಟೇ ಅಲ್ಲ, ನಾನೂ ಕೂಡಾ ಗುಲಾಬಿ ಬಣ್ಣವಾಗಿಯೇ ಕಾಣ್ತೀನಿ ! 

ತೆನಾಲಿ ರಾಮ ಏನು ಆಲೋಚನೆ ಮಾಡುತ್ತಿದ್ದ - ಗುಲಾಬಿ ಬಣ್ಣದ ಕನ್ನಡಕವನ್ನು ಹಾಕಿಕೊಳ್ಳುವುದರಿಂದ ಮನೆಯ ಬಣ್ಣ ಗುಲಾಬಿ ಬಣ್ಣವಾಗುವುದಿಲ್ಲ.

 ಸಂಗ್ರಹ -ಇನ್ನಾ

**********

 

ಕಥಾದನಿ

ಆದ್ವೈತದ ಆನೆ
ಆದ್ವೈತಿಯೊಬ್ಬ ಪ್ರವಚನ ಮಾಡಿ ಜಗತ್ತೆಲ್ಲ ಮಿಥ್ಯೆ, ಮಾಯೆ, ಬ್ರಹ್ಮವೊಂದೇ ಸತ್ಯ ಎಂದೆಲ್ಲ ದೀರ್ಘವಾಗಿ ವಿವರಿಸಿ. ಪ್ರವಚನ ಮುಗಿಸಿ ಬೀದಿಯಲ್ಲಿ ಬರುತ್ತಿದ್ದಂತೆ ದೇವಸ್ಥಾನದ ಆನೆ ಆತನನ್ನು ಓಡಿಸಿಕೊಂಡು ಬಂತು. ಆತನು ಓಡಲು ತೊಡಗಿದ. ಪ್ರವಚನ ಕೇಳಿದವನೊಬ್ಬ ಪ್ರಶ್ನೆ ಮಾಡಿದ, ಏನಯ್ಯಾ ಜಗತ್ತು ಸುಳ್ಳು ಮಾಯೆ ಅನ್ನುತ್ತಿ. ಬ್ರಹ್ಮವೆನ್ನುತ್ತೀ. ಆನೆ ಬಂದರೆ ಓಡುತ್ತೀ. ಅದೂ ದೇವರ ಆನೆ ಅದು. ಬ್ರಹ್ಮಕ್ಕೆ ಬ್ರಹ್ಮದ ಭಯವೆ? `ಅಯ್ಯಾ ನಿನಗೆ ನನ್ನ ಪ್ರವಚನ ಅರ್ಥವಾಗಲಿಲ್ಲ. ಅಜ್ಞಾನ ಹೋಗಲಿಲ್ಲ. ಜಗತ್ತೆ ಸುಳ್ಳು. ಆ ಆನೆ ಸುಳ್ಳು, ನಾನು ಓಡಿದ್ದು, ಈಗ ನಾನು ಉತ್ತರ ಕೊಟ್ಟಿದ್ದು, ನೀನು ಹೇಳಿದ್ದು ಎಲ್ಲವೂ ಸುಳ್ಳು, ಮಾಯೆ, ಗಜೋಷ ಮಿಥ್ಯಾ, ಪಲಾಯನೋಪಿ ಮಿಥ್ಯಾ ಎಂದು ಗುರು ಉತ್ತರಿಸಿದ

--------------------------
ಉಳಿಸಿಕೋ. ಮುಂದೆ ನಿನ್ನ ಮಕ್ಕಳಿಗೆ ಉಪಯೋಗಕ್ಕೆ ಬಂದೀತು
ವಯಸ್ಸಾದ ತನ್ನ ತಂದೆ, ತನಗೂ ಕುಟುಂಬಕ್ಕೂ ಹೊರೆ ಎಂಬ ತಿಳಿದ ಒಬ್ಬನು. ಅವನನ್ನು ಪೆಟ್ಟಿಗೆಯೊಳಗಿಟ್ಟು ಪರ್ವತದ ತುದಿ ಗೊಯ್ದು ಪಟ್ಟಿಗೆಯನ್ನು ಉರುಳಿಸಿ ಬಿಡಬೇಕೆಂದಿದ್ದ. ಅಷ್ಟರಲ್ಲಿ ಒಳಗಿಂದ ಒಂದು ಬೆಳಕು ಮತ್ತು ಮಾತುಗಳು ಬಂದವು.
ಅಯ್ಯಾ ಮಗನೆ, ನೀನು ನನ್ನನ್ನು ಪೆಟ್ಟಿಗೆಯಿಂದ ತೆಗೆದು ಪರ್ವತಾಗ್ರದಿಂದ ಕೆಳಗೆಸೆದು ಬಿಡು. ಒಳ್ಳೆಯದೇ-ಆದರೆ ಪೆಟ್ಟಿಗೆಯನ್ನು ಉಳಿಸಿಕೋ. ಮುಂದೆ ನಿನ್ನ ಮಕ್ಕಳಿಗೆ ಉಪಯೋಗಕ್ಕೆ ಬಂದೀತು.

--------------------
ಅಯ್ಯಾ, ನೀನು ಆಚೆ ದಡದಲ್ಲೇ ಇದ್ದೀ
ನದಿಯ ತೀರದಲ್ಲಿ ಕುಳಿತು ಬಹಳ ಹೊತ್ತು ಆಲೋಚಿಸಿ ತಲೆ ಕೆರೆದು ಕೊಳ್ಳುತ್ತಿದ್ದ ಒಬ್ಬನ ಬಳಿ ಬುದ್ದನು ಬಂದು ಕೇಳಿದ.
ಏನಯ್ಯ, ಇಲ್ಲಿ ಒಬ್ಬನೇ ಕುಳಿತು ಯೋಚಿಸುತ್ತಿ, ನದಿಯನ್ನೇ ನೋಡುತ್ತಿದ್ದಿ?
ವಿಸ್ತಾರವಾದ ಈ ನದಿಯ ಆಚೆ ದಾಟಿ ಹೋಗುವುದು ಹೇಗೆಂದು ಯೋಚನೆ
ಅಯ್ಯಾ, ನೀನು ಆಚೆ ದಡದಲ್ಲೇ ಇದ್ದೀ, ನಿನಗದು ಗೊತ್ತಿಲ್ಲ ಅಷ್ಟೇ!!!
ಶಿಷ್ಯ ಆಕಾಶ ನೋಡಿದ.

ಸಂಗ್ರಹ - ಇನ್ನಾ

**********

Saturday, 20 June 2020

ಕಥಾದನಿ

ಈ ಸಮುದ್ರ ಎಂದರೇನು? ಅದು ಎಲ್ಲಿದೆ?

ಸಮುದ್ರ ನಿನ್ನ ಅಸ್ತಿತ್ವ ದಂತೆ ನಿನ್ನನ್ನು ಸುತ್ತುವರಿದಿದೆ ಮೀನೊಂದು, ರಾಣಿ ಮೀನಿನ ಹತ್ತಿರ ಹೋಗಿ ಒಂದು ಪ್ರಶ್ನೆ ಹೇಳಿತಂತೆ. ‘ನಾನು ಸಮುದ್ರದ ಬಗ್ಗೆ ಸಾಕಷ್ಟು ಕೇಳಿದ್ದೇನೆ. ಸದಾಕಾಲ ಕೇಳುತ್ತಿರುತ್ತೇನೆ. ಆದರೆ ಈ ಸಮುದ್ರ ಎಂದರೇನು? ಅದು ಎಲ್ಲಿದೆ? ರಾಣಿ ಮೀನು ಹೀಗೆ ಉತ್ತರಿಸಿತು: ‘ನೀನು ಬದುಕುತ್ತಿರುವುದು, ಓಡಾಡುತ್ತಿರುವುದು ಸಮುದ್ರದಲ್ಲಿ. ಸಮುದ್ರ ನಿನ್ನೊಳಗೆ ಇದೆ. ನಿನ್ನ ಹೊರಗೂ ಇದೆ. ನೀನು ಸಮುದ್ರ ಸೃಷ್ಟಿ, ನೀನು ಸಮುದ್ರದೊಳಗೆ ಲಯವಾಗಿದೆ. ಸಮುದ್ರ ನಿನ್ನ ಅಸ್ತಿತ್ವದಂತೆ ನಿನ್ನನ್ನು ಸುತ್ತುವರಿದಿದೆ.’

ಒಂದು ಬಟ್ಟಲು ಚಹಾ

ನಾನು-ಇನ್ ಒಬ್ಬ ಜಪಾನಿ ಗುರು. ಒಮ್ಮೆ ವಿಶ್ವವಿದ್ಯಾಲಯದ ಪ್ರೋಫೆಸರ್ ಎರು ಝನ್ ವಿಚಾರ ತಿಳಿಯಲು ಈತನನ್ನು ಭೇಟಿಯಾದ. ನಾನು-ಇನ್ ಪ್ರೋಫೆಸರರನ್ನು ಬರಮಾಡಿಕೊಂಡು ಚಹಾ ಕೊಡಲು ಅಣಿಯಾದರು. ನಾನು-ಇನ್ ಬಟ್ಟಲು ಚಹಾ ತುಂಬಿದರು. ಬಟ್ಟಲು ಭರ್ತಿಯಾದರೂ ನಾನು-ಇನ್ ಚಹಾ ತುಂಬುವುದನ್ನು ನಿಲ್ಲಿಸಲಿಲ್ಲ. ಸುರಿಯುತ್ತಲೇ ಇದ್ದರು. ಬಟ್ಟಲು ತುಂಬಿ ಚಹಾ ಹೊರಕ್ಕೆ ಚೆಲ್ಲಿತು. ಇದನ್ನು ಗಮನಿಸಿದ ಪ್ರೋಫೆಸರ್‍ಗೆ ಸುಮ್ಮನಿರಲಾಗಲಿಲ್ಲ! ‘ಬಟ್ಟಲು ತುಂಬಿದೆ. ಇನ್ನು     ಹಿಡಿಸುವುದಿಲ್ಲ'. ನಾನು-ಇನ್ ಹೇಳಿದರು: ‘ಈ ಬಟ್ಟಲಿನಂತೆ ನೀವೂ ನಿಮ್ಮ ಅಭಿಪ್ರಾಯ ಗಳಲ್ಲಿ, ಊಹಾಪೋಹಗಳಿಗೆ, ಚಿಂತೆಗಳಲ್ಲಿ ಮುಳುಗಿ ಹೋಗಿರುವಿರಿ. ನಿಮ್ಮ ಬಟ್ಟಲು ಖಾಲಿಯಾಗದೆ ನಾನು ನಿಮಗೆ ಝನ್ ವಿಚಾರ ತಿಳಿಸುವುದಾದರೂ ಹೇಗೆ ? ತುಂಬಿಸುವುದಾದರೂ ಹೇಗೆ ?

ಬದುಕೆಂಬುದು ಇಂದು ನಾಳೆಗಳ ವಾಸ್ತವ

ಕಾರ್ವೆತ್ ಮಿಚೆಲ್ ಹೇಳಿದ ಕಥೆಯಿದು. ಒಬ್ಬ ಒಂದು ಗಿಳಿಯನ್ನು ಖರೀದಿಸಿ, ಮನೆಗೆ ತಂದು ‘ಇವೊತ್ತು’ ಎಂದು ಹೇಳಲು ಕಲಿಸಿಕೊಟ್ಟನಂತೆ. ಆ ಗಿಳಿ ಆ ವ್ಯಕ್ತಿಯನ್ನು ಕಂಡಾಗಲೆಲ್ಲಾ ‘ಇವೊತ್ತು’ ‘ಇವೊತ್ತು’ ಎಂದು ಕಿರಿಚಿಕೊಳ್ಳುತ್ತಿತ್ತಂತೆ. ಅವನು ಬೆಳಿಗ್ಗೆ ಎದ್ದಾಗ, ರಾತ್ರಿ ಮನೆಗೆ ಬಂದಾಗ ಯಾವಾಗಲೂ ಆ ಗಿಳಿ ‘ಇವೊತ್ತು’ ಎಂದು ನೆನಪಿಸುತ್ತಿತಂತೆ.

ಸುಮಾರು ಆರು ತಿಂಗಳ ನಂತರ ಆ ವ್ಯಕ್ತಿ ಇನ್ನೊಂದು ಗಿಳಿಯನ್ನು ಖರೀದಿಸಿ ‘ನಾಳೆ’ ಎಂದು ಹೇಳಲು ಆ ಗಿಳಿಗೆ ಕಲಿಸಿಕೊಟ್ಟನಂತೆ. ಬದುಕೆಂಬುದು ಇಂದು ಮಾತ್ರ, ಅದಕ್ಕೆ ನಾಳೆಗಳಿಲ್ಲ ಎಂದು ನಾನು ಬದುಕುತ್ತಿದ್ದೇನೆ! ಆದರೆ ಬದುಕೆಂಬುದು ಇಂದು ನಾಳೆಗಳ ವಾಸ್ತವ. ವರ್ತಮಾನ ಮತ್ತು ಭವಿಷ್ಯತ್ ಕಾಲದ ಮೊತ್ತ. ಅ ಎರಡು ಗಿಳಿಗಳು ಬದುಕೆಂಬುದು ಇಂದು ನಾಳೆಗಳ ವಾಸ್ತವ ಎಂದು ಅರಿತು ಬಾಳಲು ಅವನಿಗೆ ನೆರವಾದವಂತೆ.

 

ಸಂಗ್ರಹ - ಇನ್ನಾ

**********


Saturday, 9 May 2020

ಆತನಿಗೆ ಕೇವಲ ವ್ಯಾಪಾರದ ಪ್ರಶ್ನೆಯಷ್ಟೇ !

ಸಣ್ಣ ಊರೊಂದರಲ್ಲಿ ಪುಟ್ಟದೊಂದು ಚರ್ಚ್ ಇತ್ತು. ಅಲ್ಲಿನ ಪಾದ್ರಿಗೆ ಒಬ್ಬ ಮುದುಕನಿಂದ ಬಹಳವೇ ಕಿರಿಕಿರಿ ಅನುಭವಿಸುತ್ತಿದ್ದ. ಆದರೆ ಚರ್ಚಿನ ಸಮೂಹದಲ್ಲೇ ಆತ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿದ್ದ. ಆತ ಚರ್ಚಿಗೆ ಅತಿ ಹೆಚ್ಚಿನ ದೇಣಿಗೆಯನ್ನು ನೀಡಿದ - ಹಾಗೆ ನೋಡಿದರೆ ಆ ಚರ್ಚನ್ನು ಕಟ್ಟಿಸಿದ್ದೇ ಆತ. ಪಾದ್ರಿಗೂ ಸಂಬಳವನ್ನು ನೀಡುತ್ತಿದ್ದವನು ಆತನೇ. ಪ್ರತಿ ಪ್ರವಚನದಲ್ಲೂ ಆತ ಚರ್ಚಿನ ಮೊದಲ ಸಾಲಿನ ಬೆಂಚಿನಲ್ಲಿ ಕುಳಿತುಕೊಳ್ಳುತ್ತಿದ್ದ, ಮುದುಕ ಪ್ರವಚನದ ಮಧ್ಯದಲ್ಲೇ ನಿದ್ದೆಗೆ ಜಾರಿ ಬಿಡುತ್ತಿದ್ದ. ಆತನ ನಿದ್ರೆಯಿಂದ  ಪಾದ್ರಿಗೆ ಕಿರಿಕಿರಿಯಾಗುತ್ತಿರಲಿಲ್ಲ. ಆತ ನಿಜಕ್ಕೂ ಗಟ್ಟಿಯಾಗಿ ಗೊರಕೆ ಹೊಡೆಯುತ್ತಿದ್ದ. ಇದರಿಂದ ಪಾದ್ರಿಗಷ್ಟೇ ಅಲ್ಲ, ಚರ್ಚಿನಲ್ಲಿದ್ದ ಇತರರಿಗೂ ಕಿರಿಕಿರಿ ಉಂಟು ಮಾಡುತ್ತಿತ್ತು. ಆತನ ಗೊರಕೆಯಿಂದ ಚರ್ಚಿನ ಇತರರ ನಿದ್ರೆಗೆ ಭಂಗವಾಗುತ್ತಿತ್ತು!

ಕಡೆಗೆ ಚರ್ಚಿನ ಇತರೆ ಭಕ್ತರು ಪಾದ್ರಿಗೆ ಹೇಳಿದರು, “ಈಗ ಏನಾದರೂ ಮಾಡಲೇಬೇಕು. ಈ ಮುದುಕ ಮೊದಲ ಸಾಲಲ್ಲೇ ಕುಳಿತು ಗೊರಕೆ ಹೊಡೆಯುತ್ತಾನೆ ಇದರಿಂದ ನಿಮಗೂ ತೊಂದರೆ, ನಮ್ಮೆಲ್ಲರ ನಿದ್ರೆಗೂ ತೊಂದರೆ”

ಕ್ರೈಸ್ತ ದೇಶಗಳಲ್ಲಿನ ಜನರು ಶನಿವಾರ ತಡ ರಾತ್ರಿಯವರೆಗೂ ಎಚ್ಚರವಾಗಿರುತ್ತಾರೆ. ಏಕೆಂದರೆ ನಾಳೆ ಭಾನುವಾರ, ಅವರು ವಿಶ್ರಮಿಸಿಕೊಳ್ಳಬಹುದು. ಮುಂಜಾನೆಯೇ ಚರ್ಚಿಗೆ ಹೋಗಬೇಕು. ಬಹುಶಃ ಅವರು ಹಿಂದಿನ ರಾತ್ರಿಯಿಡೀ ನಿದ್ರೆಯನ್ನೇ    ಮಾಡಿರುವುದಿಲ್ಲ ಹಾಗೂ ಚರ್ಚು ನಿದ್ರೆಗೆ ಅತ್ಯಂತ ಪ್ರಸಕ್ತವಾದ ಜಾಗ. ಹಾಗಾಗಿ ಅವರು ಹೇಳಿದರು, “ನಾವು ಇಷ್ಟು ಮುಂಚಿತವಾಗಿ ಮುಂಜಾನೆಯಲ್ಲಿಯೇ ಚರ್ಚಿಗೆ ಬರುವುದು ತಣ್ಣಗೆ ಒಂದು ಸಣ್ಣ ನಿದ್ದೆ ತೆಗೆಯಲು. ಆದರೆ ಈ ಮೂರ್ಖ ಎಲ್ಲರನ್ನೂ ಎಬ್ಬಿಸಿಬಿಡುತ್ತಾನೆ. ನಿಮ್ಮ ಪ್ರವಚನವನ್ನು ಕೇಳುವುದಕ್ಕೆ ಬದಲಾಗಿ ನಾವು ಆತನ ಗೊರಕೆಯನ್ನು ಕೇಳಬೇಕು. ದಯವಿಟ್ಟು ಇದರ ಬಗ್ಗೆ ಏನಾದರೂ ಮಾಡಿ”

ಪಾದ್ರಿ ಆಲೋಚಿಸಿದ. ಮುದುಕ ಪ್ರತಿ ಸಲ ಚರ್ಚಿಗೆ ಬರುವಾಗ ತನ್ನ ಮೊಮ್ಮಗನನ್ನು ಕರೆದುಕೊಂಡು ಬರುತ್ತಿದ್ದ, ಆ ಹುಡುಗ ಸಾಮಾನ್ಯವಾಗಿ ಮುದುಕನ ಪಕ್ಕದಲ್ಲೇ ಇರುತ್ತಿದ್ದ, ಪಾದ್ರಿ ಅಂದುಕೊಂಡ, “ಬಹುಶಃ ಆ ಹುಡುಗನಿಗೆ ಆಮಿಷ ಒಡ್ಡಬಹುದು.”

ಆ ಹುಡುಗನನ್ನು ಕರೆದು ಪಾದ್ರಿ ಹೇಳಿದ, “ನೀನು ನಿನ್ನ ತಾತನನ್ನು ನಿದ್ದೆ ಮಾಡುವಾಗಲೆಲ್ಲಾ ಎಬ್ಬಿಸಿದರೆ ನಿನಗೆ ಪ್ರತಿ ಭಾನುವಾರ ಒಂದು ಡಾಲರ್ ಕೊಡುವೆ. ನೀನು ಮಾಡಬೇಕಾದ್ದು ಇಷ್ಟೇ, ಆತ ಗೊರಕೆ ಹೊಡೆಯಲು ಶುರುಮಾಡಿದಾಗಲೆಲ್ಲಾ ನೀನು ಆತನಿಗೆ ಹೊಡೆದು ಎಚ್ಚರಿಸುತ್ತಿರಬೇಕು.” ಹುಡುಗ ಹೇಳಿದ, “ಒಳ್ಳೆಯದು. ಅವನಿಗೆ ನಾನು ಮಲಗುವುದಕ್ಕೆ ಬಿಡುವುದಿಲ್ಲ.”

ಮುಂದಿನ ಭಾನುವಾರ ಆಹ್ಲಾದಕರವಾಗಿತ್ತು. ಎಲ್ಲರೂ ಹಾಯಾಗಿ ಮಲಗಿದರು. ಪಾದ್ರಿ ಪ್ರತಿ ಬಾರಿ ಹೇಳುತ್ತಿದ್ದ ಪ್ರವಚನವನ್ನೇ ಪುನರುಚ್ಚರಿಸಿದ. ಆತನ ಬಳಿ ಮೂರ್ನಾಲ್ಕು ಪ್ರವಚನಗಳು ಸಿದ್ಧವಾಗಿರುತ್ತಿದ್ದವು. ಹುಡುಗ ಮುದಕನಿಗೆ ಬಡಿದು ಬಡಿದು ಎಚ್ಚರವಾಗಿಸುತ್ತಿದ್ದ. ಮುದುಕ ಕೇಳಿದ, “ಏನಿದು ತಲೆ ಹರಟೆ, ಪದೇ ಪದೇ ಏನು ಮಾಡುತ್ತಿದ್ದೀಯ?”

ಹುಡುಗ ನಕ್ಕ, ಆದರೆ ಮುದುಕನಿಗೆ ಗೊರಕೆ ಹೊಡೆಯಲು ಬಿಡಲಿಲ್ಲ. ಪ್ರವಚನ ಮುಗಿದ ನಂತರ ಮುದುಕ ತನ್ನ ಮೊಮ್ಮಗನಿಗೆ ಕೇಳಿದ, “ಏನು ವಿಷಯ” ನನ್ನ ಬೆಳಗನ್ನೆಲ್ಲಾ ಹಾಳು ಮಾಡಿದೆಯಲ್ಲ? ಯಾಕೆ ಹೇಳು.” ಹುಡುಗ ಹೇಳಿದ, “ಇದು ವ್ಯಾಪಾರದ ವಿಷಯ. ನಿನ್ನನ್ನು ಗೊರಕೆ ಹೊಡೆಯದಂತೆ ತಡೆದರೆ ಆತ ನನಗೆ ಒಂದು ಡಾಲರ್ ಕೊಡುತ್ತಾನೆ” ಮುದುಕ ಹೇಳಿದ, “ಯೋಚನೆ ಮಾಡಬೇಡ, ಇದು ವ್ಯಾಪಾರ ಅನ್ನುವುದಾದರೆ ನಾನು ನಿನಗೆ ಪ್ರತಿವಾರ ಎರಡು ಡಾಲರ್ ಕೊಡುತ್ತೇನೆ. ಮುಂದಿನ ವಾರದಿಂದ ನನ್ನ ನಿದ್ದೆ ಹಾಳು ಮಾಡಬೇಡ”. ಮುಂದಿನ ಭಾನುವಾರ ಬಂದಿತು. ಪಾದ್ರಿಗೆ ಆಶ್ಚರ್ಯವಾಯಿತು. ಮುದುಕ ಗೊರಕೆ ಹೊಡೆಯುತ್ತಿರುವುದನ್ನು ಕಂಡು ಪಾದ್ರಿ ಹುಡುಗನತ್ತ ತಿರುಗಿ ಕಣ್ಣು ಮಿಟುಕಿಸಿ ಮುದಕನನ್ನು ಎಚ್ಚರವಾಗಿಸುವಂತೆ ಸೂಚಿಸುತ್ತಾನೆ. ಆದರೆ ಹುಡುಗ ಸುಮ್ಮನೆ ನಗುತ್ತಾ ಕುಳಿತಿದ್ದ. ಮುದುಕ ನಿರಾಯಾಸವಾಗಿ ಗೊರಕೆ ಹೊಡೆಯುತ್ತಿದ್ದ. ಉಳಿದ ಯಾರಿಗೂ ನಿದ್ದೆ ಬರಲಿಲ್ಲ. ಪ್ರವಚನ ಮುಗಿಸಿದ ನಂತರ ಪಾದ್ರಿ ಹುಡುಗನನ್ನು ಪಕ್ಕಕ್ಕೆ ಕರೆದು ಕೇಳಿದ, “ಏನಾಯ್ತು, ನಿನಗೆ ಡಾಲರ್ ಬೇಡವೇ?” ಆತ ಹೇಳಿದ, “ನಾನೇನ್ ಮಾಡ್ಲಿ? ಇದು ವ್ಯಾಪಾರದ ವಿಷಯ.” ಪಾದ್ರಿ ಕೇಳಿದ, “ಏನು ವ್ಯಾಪಾರ?” ಆತ ಹೇಳಿದ, “ತಾತ ನನಗೆ ಎರಡು ಡಾಲರ್ ಕೊಡುತ್ತೀನಿ ಅಂದಿದ್ದಾನೆ. ಈಗ ಏನು ಮಾಡ್ತೀರಿ ನೋಡಿ.” ಪಾಪದ ಪಾದ್ರಿಗೆ ತಾನು ಮುದುಕನೊಂದಿಗೆ ಸ್ಪರ್ಧಿಸಲು ಸಾಧ್ಯವಿಲ್ಲ ಎಂದು ತಿಳಿಯಿತು. ಈತ ಮೂರು ಡಾಲರ್ ಕೊಟ್ಟರೆ? ಇದು ಬಡವ ಪಾದ್ರಿಗೆ ದೊಡ್ಡ ಮೊತ್ತವಾಗುತ್ತದೆ. ಮುದುಕ ನಾಲ್ಕು ಡಾಲರ್ ಕೊಡುತ್ತಾನೆ. ಈ ತಂತ್ರ ಉಪಯೋಗಿಸಿದರೆ ತಾನು ಸಂಪೂರ್ಣವಾಗಿ ಸೋಲಪ್ಪಬೇಕಾಗುತ್ತದೆ ಎಂಬುದು ಅರಿವಾಗುತ್ತದೆ. ಹುಡುಗನಿಗೆ ಪಾದ್ರಿಯ ಪ್ರವಚನದಲ್ಲೂ ಆಸಕ್ತಿಯಿಲ್ಲ, ಚರ್ಚಿನ ಕಲಾಪದಲ್ಲೂ ಆಸಕ್ತಿಯಿಲ್ಲ, ಮುದುಕನ ಬಗ್ಗೆಯೂ ಆಸಕ್ತಿಯಿಲ್ಲ. ಇದು ಆತನಿಗೆ ಕೇವಲ ವ್ಯಾಪಾರದ ಪ್ರಶ್ನೆಯಷ್ಟೇ.

 ಸಂಗ್ರಹ - ಇನ್ನಾ


Saturday, 4 April 2020

ಕಥಾದನಿ

--------------
- ಇನ್ನಾ
ನಿಮಗೆ ಉಂಗುರವನ್ನು ನೀಡಲಿಲ್ಲ ಎಂದು ನೆನಪಿಡಿ
ಒಮ್ಮೆ ಒಬ್ಬ, ಮುಲ್ಲಾ ನಸ್ರುದಿನ್ ಹತ್ತಿರ ಬಂದು ಈ ರೀತಿಯಾಗಿ ವಿನಂತಿಸಿದ: "ನಿಮ್ಮ ಉಂಗುರವನ್ನು ನನಗೆ ಸ್ಮರಣಾರ್ಥವಾಗಿ ನೀಡಿ, ಆದ್ದರಿಂದ ನಾನು ಅದನ್ನು ನೋಡಿದಾಗಲೆಲ್ಲಾ ನಾನು ನಿಮ್ಮನ್ನು ನೆನಪಿಸಿಕೊಳ್ಳುತ್ತೇನೆ."
ಮುಲ್ಲಾ ಉತ್ತರಿಸಿದ: “ನಾನು ನಿಮಗೆ ಉಂಗುರವನ್ನು ಕೊಡಲು ಸಾಧ್ಯವಿಲ್ಲ. ಆದರೆ ನೀನು ನನ್ನನ್ನು ನೆನಪಿಟ್ಟುಕೊಳ್ಳಲು ಬಯಸಿದಾಗಲೆಲ್ಲಾ, ನಿನ್ನ ಬೆರಳನ್ನು ನೋಡಿ ನಾನು ನಿಮಗೆ ಉಂಗುರವನ್ನು ನೀಡಲಿಲ್ಲ ಎಂದು ನೆನಪಿಡಿ!”
------------------------
ಉಂಗುರವನ್ನು ಎಲ್ಲಿ ಹುಡುಕಲಿ ?
ಮುಲ್ಲಾ ತನ್ನ ಮನೆಯ ಒಂದು ಕೋಣೆಯಲ್ಲಿ ಉಂಗುರವನ್ನು ಕಳೆದುಕೊಂಡಿದ್ದ. ಅವನು ಸ್ವಲ್ಪ ಸಮಯ ಉಂಗುರಕ್ಕಾಗಿ ಆ ಕೋಣೆಯಲ್ಲಿ ಹುಡುಕಾಡಿದ. ಆದರೆ ಅವನಿಗೆ ಕೋಣೆಯಲ್ಲಿ ಉಂಗುರ ಸಿಗದ ಕಾರಣ, ಅವನು ಮನೆಯ ಮುಂದಿದ್ದ ಅಂಗಳಕ್ಕೆ ಹೊರಟು ಅಲ್ಲಿ ಉಂಗುರಕ್ಕಾಗಿ ಹುಡುಕಲು ಪ್ರಾರಂಭಿಸಿದನು. ಅವನು ಏನು ಮಾಡುತ್ತಿದ್ದಾನೆಂದು ನೋಡಿದ ಅವನ ಹೆಂಡತಿ ಕೇಳಿದಳು: “ಮುಲ್ಲಾ, ನೀವು ಕೋಣೆಯಲ್ಲಿ ನಿಮ್ಮ ಉಂಗುರವನ್ನು ಕಳೆದುಕೊಂಡಿದ್ದೀರಿ, ಆದರೆ ನೀವು ಅದನ್ನು ಅಂಗಳದಲ್ಲಿ ಏಕೆ ಹುಡುಕುತ್ತಿದ್ದೀರಿ??” ಮುಲ್ಲಾ ತನ್ನ ಗಡ್ಡವನ್ನು ಸವರಿಕೊಂಡು ಹೇಳಿದ: “ಕೋಣೆ ತುಂಬಾ ಕತ್ತಲೆಯಾಗಿರುವುದ್ದರಿಂದ ನನಗೆ ಕೋಣೆಯಲ್ಲಿ ಏನು ಕಾಣುತ್ತಿಲ್ಲ. ಅಂಗಳಲ್ಲಿ ಹೆಚ್ಚು ಬೆಳಕು ಇರುವುದರಿಂದ ನಾನು ಉಂಗುರವನ್ನು ಹುಡುಕಲು ಅಂಗಳಕ್ಕೆ ಬಂದಿದ್ದೇನೆ.?”
------------------------
ಕಳೆಗಳನ್ನು ಪ್ರೀತಿಸಲು ಕಲಿಯಬೇಕು
ಒಮ್ಮೆ ಮುಲ್ಲಾ ತನ್ನ ಕೈತೋಟದಲ್ಲಿ ಎಲ್ಲಾ ರೀತಿಯ ಬೀಜಗಳನ್ನು ಹಾಕಿದನು. ಜೀಜಗಳು ಮೊಳಕೆಯೊಡೆದು ಸಸಿಗಳಾಗಲು ಉತ್ಸುಕತೆಯಿಂದ ಕಾಯುತ್ತಿದ್ದ. ಕೆಲವೊಂದು ಬೀಜಗಳು ಮೊಳಕೆಯೊಡೆದು ಸಸಿಗಳಾದವು. ಆದರೆ ಕೈತೋಟದಲ್ಲಿ ಹೆಚ್ಚಾಗಿ ಕಳೆಗಳೇ ಕಾಣಿಸಿಕೊಂಡವು. ಹತಾಶೆಯಿಂದ ಮುಲ್ಲಾ ಅರಮನೆ ತೋಟಗಾರರೊಂದಿಗೆ ಸಮಾಲೋಚಿಸಲು ಅರಮನೆಗೆ ತೆರಳಿದ. ತೋಟಗಾರಿಕೆಯಲ್ಲಿ ಪರಿಣಿತಿ ಪಡೆದ ತೋಟಗಾರನಿಗೆ ಮುಲ್ಲಾ ಹೇಳಿದ “ನಾನು ಕಳೆಗಳನ್ನು ಕಡಿಮೆ ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡಿದೆ: ಕಳೆಗಳನ್ನು ಕಿತ್ತು ಬಿಸಾಡಿದೆ, ಹೆಚ್ಚು ಹೆಚ್ಚು ಹೂವಿನ ಬೀಜಗಳನ್ನು ನೆಟ್ಟೆ. ಆದರೆ ಕೈತೋಟದಲ್ಲಿ ಕಳೆಗಳು ಮಾತ್ರ ಕಡಿಮೆಯಾಗಲಿಲ್ಲ. ಏನು ಮಾಡೋದು? ಎಲ್ಲಿ ನೋಡಿದರೂ ಕಳೆಗಳೇ ಕಳೆಗಳು! ಅರಮನೆಯ ತೋಟಗಾರ ಸ್ವಲ್ಪ ಸಮಯದವರೆಗೆ ಮುಲ್ಲಾ ಹೇಳಿದನ್ನೆಲ್ಲಾ ಕೇಳಿ, ಒಂದು ಬುದ್ಧಿವಂತ ಸಲಹೆಕೊಟ್ಟ: "ನೀವು ಬಹು ಮುಖ್ಯವಾಗಿ ಮಾಡಬೇಕಿರುವುದು ಏನೆಂದರೆ ನೀವು ಕಳೆಗಳನ್ನು ಪ್ರೀತಿಸಲು ಕಲಿಯಬೇಕು”
**********

Friday, 13 March 2020

ಕಥಾದನಿ

ಅವಲಂಬಿತರಾಗುವಂತಹ ಪ್ರವೃತ್ತಿಯನ್ನು ನಿವಾರಿಸುವುದು 
ಪ್ರಾರ್ಥನೆಯಲ್ಲೇ ಸದಾ ಮಗ್ನನಾಗಿರುತ್ತಿದ್ದ ಶಿಷ್ಯನಿಗೆ ಗುರುಗಳು ಹೀಗೆ ಹೇಳುತ್ತಾರೆ
“ದೇವರ ಮೇಲೆ ಯಾವಗಲ್ಲೂ ಆವಲಂಬಿತನಾಗಿರ್ತಿಯಲ್ಲ, ಯಾವಾಗ ನೀನು ನಿನ್ನ ಸ್ವಂತ ಕಾಲುಗಳ ಮೇಲೆ ನಿಲ್ಲುತ್ಯಾ?
ಗುರುಗಳ ಮಾತುಗಳನ್ನು ಕೇಳಿದ ಶಿಷ್ಯನು ಆಶ್ಚರ್ಯಗೊಂಡು
“ಆದರೆ ದೇವರನ್ನು ತಂದೆಯಂತೆ ಪರಿಭಾವಿಸಬೇಕೆಂದು ನೀವೇ ಹೇಳಿದ್ದೀರಿ!”
“ಹೌದು ತಂದೆಯೆಂದರೆ ತನ್ನವರನ್ನು ಯಾವಾಗಲ್ಲೂ ತನ್ನ ಮೇಲೆ  ಸಂಪೂರ್ಣವಾಗಿ ಅವಲಂಬಿತವಾಗಿರುವಂತೆ ಮಾಡುವುದಲ್ಲ, ತನ್ನವರು ಅವಲಂಬಿತರಾಗುವಂತಹ ಪ್ರವೃತ್ತಿಯನ್ನು ನಿವಾರಿಸುವುದು ಎಂಬ ಸತ್ಯವನ್ನು ಯಾವಾಗ ಕಲಿಯುತ್ತೀರಿ?” ಎಂದು ಗುರುಗಳು ಶಿಷ್ಯನಿಗೆ ಉತ್ತರಿಸಿದರು.
---------------------
ನೀನು ಯಾರನ್ನೂ ಹಿಂಬಾಲಿಸುವುದು ಬೇಡ
“ನಾನು ನಿಮ್ಮನ್ನು ಹಿಂಬಾಲಿಸಲು ಬಂದಿದ್ದೇನೆ” ಗುರುಗಳು ಹಿಂಬಾಲಿಸಲು ಬಂದವನ್ನು ಹೇಳಿದ. ಅದಕ್ಕೆ ಗುರುಗಳು
“ನೀನು ನನ್ನ ಜೊತೆ ಇರಬಹುದು ಆದರೆ ನನ್ನ ಹಿಂಬಾಲಕನಾಗುವುದು ಬೇಡ”  ಎಂದು ಹೇಳಿದರು.
“ಮತ್ತೇ ನಾನು ಯಾರನ್ನು ಹಿಂಬಾಲಿಸಲಿ?” ವ್ಯಕ್ತಿ ಗುರುಗಳನ್ನು ಪ್ರಶ್ನಿಸಿದ
ಅದಕ್ಕೆ ಗುರುಗಳು “ ನೀನು ಯಾರನ್ನೂ ಹಿಂಬಾಲಿಸುವುದು ಬೇಡ. ಯಾವಾಗ ನೀನು ಇನ್ನೊಬ್ಬರನ್ನು ಹಿಂಬಾಲಿಸಲು ಆರಂಭಿಸುವೆಯೋ ಆ ಕ್ಷಣವೇ ನೀನು ಸತ್ಯವನ್ನು ಹಿಂಬಾಲಿಸುವುದನ್ನು ಬಿಟ್ಟು ಬಿಡುವೆ” ಎಂದು ಹೇಳಿ ಮೌನಕ್ಕೆ ಜಾರಿದರು.
---------------------
ಮಾತುಗಳ ನಡುವಿನ ಮೌನವನ್ನು ಆಲಿಸು
ದೇವರ ಬಗೆಗಿನ ನಮ್ಮ ಮಾತುಗಳು, ಪ್ರತಿಮೆಗಳು ಎಲ್ಲವೂ ದೇವರ ಬಗ್ಗೆ ವಿವರಿಸುವುದಕ್ಕಿಂತ ವಿರೂಪಗೊಳ್ಳಿಸುವುದೇ ಹೆಚ್ಚು” ಎಂದು ಗುರುಗಳು ಶಿಷ್ಯರಿಗೆ ಹೇಳುತ್ತಿದಂತೆ, ಒಬ್ಬ ಶಿಷ್ಯನು ಗುರುವನ್ನು ಕೇಳುತ್ತಾನೆ “ ಹಾಗದರೆ ದೇವರ ಬಗ್ಗೆ ನಾವು ಮಾತನಾಡುವುದಾದರೂ ಹೇಗೆ?
ಗುರುಗಳು ಪ್ರತ್ಯುತ್ತರವಾಗಿ “ ಮೌನದ ಮೂಲಕ” ಎಂದು ಹೇಳುತ್ತಿದಂತೆ
“ಹಾಗದರೆ ನೀವೇಕೆ ದೇವರ ಬಗ್ಗೆ ಮಾತನಾಡುತ್ತೀರಿ?”
ಮತ್ತೊಮ್ಮೆ ಪ್ರಶ್ನೆ ಮಾಡಿದ ಶಿಷ್ಯನಿಗೆ ಗುರುಗಳು ಹೇಳುತ್ತಾರೆ
“ನಾನು ಮಾತನಾಡುವಾಗ ನೀನು ನನ್ನ ಮಾತುಗಳನ್ನು ಕೇಳಿಸಿಕೊಳ್ಳಬೇಡ, ಮಾತುಗಳ ನಡುವಿನ ಮೌನವನ್ನು  ಆಲಿಸು”
-------------------------
ಇನ್ನಾ

Thursday, 13 February 2020

ಕಥಾದನಿ

- ಇನ್ನಾ

ಬುದ್ಧಿವಂತ ಶಿಷ್ಯನೊಬ್ಬ ಚಂದ್ರನನ್ನ ದಿಟ್ಟಿಸಿ ನೋಡುತ್ತಾ ಪರವಶಗೊಂಡು ಮೌನವಾದ
ಚಂದಿರನ ಸೌಂದರ್ಯಕ್ಕೆ ಆಕರ್ಷಿತನಾದ ಗುರು ತನ್ನ ಶಿಷ್ಯರನ್ನು ಕರೆದೊಯ್ದು ಚಂದ್ರನತ್ತ ಬೆರಳು ತೋರಿಸಿದನು. ಅಜ್ಞಾನಿ ಶಿಷ್ಯರು ಗುರುವಿನ ಬೆರಳಿಗೆ ಆಕರ್ಷಿತರಾಗಿ, ಗುರುವಿನ ಬೆರಳಿನ ಮಹತ್ವದ ಕುರಿತು ಚರ್ಚೆಗಳನ್ನು ನಡೆಸಿದರು. ಅವುಗಳ ಬಗ್ಗೆ ಪ್ರವಚನಗಳನ್ನು ನೀಡಲು ಪ್ರಾರಂಭಿಸಿದರು. ಆದರೆ ಬುದ್ಧಿವಂತ ಶಿಷ್ಯನೊಬ್ಬ ಚಂದ್ರನನ್ನ ದಿಟ್ಟಿಸಿ ನೋಡುತ್ತಾ ಪರವಶಗೊಂಡು ಮೌನವಾದ.
--------------
ಅವು ನನಗೇ ಸಿಗಬೇಕು, ನಾನೇ ಅವನ್ನ ಅನುಭವಿಸಬೇಕು ಎಂದೇನೂ ಇಲ್ಲ
ಅದೊಂದು ದಿನ ರಾಜನು ಕುದುರೆಯನ್ನೇರಿ ತನ್ನ ರಾಜ್ಯದಲ್ಲಿ ತಿರುಗಾಟದಲ್ಲಿದ್ದನು. ದಾರಿಯುದ್ದಕ್ಕೂ ತನಗೆ ಸಿಕ್ಕಿದ ಬಹಳಷ್ಟು ಜನರ ಯೋಗಕ್ಷೇಮವನ್ನು ವಿಚಾರಿಸಿ ಮುಂದೆ ಸಾಗುತ್ತಿದ್ದನು. ರಸ್ತೆಯ ಎರಡೂ ಬದಿಗಳಲ್ಲಿ ಬೃಹತ್ ಮರಗಳು ಬೆಳೆದಿದ್ದವು. ಅಲ್ಲಿಂದ ಒಂದಷ್ಟು ಮುಂದೆ ಸರಿದಾಗ ರಾಜನು ಒಬ್ಬ ಮುದುಕನನ್ನು ಕಂಡನು. ಆತನು ಒಂದು ಮಾವಿನ ಮರದ ಸಸಿಯನ್ನು ನೆಡುತ್ತಿದ್ದನು. ರಾಜನು ಆ ವೃದ್ಧನಿದ್ದಲ್ಲಿ ಹೋಗಿ ಆತನಲ್ಲಿ ವಿಚಾರಿಸಿದನು: “ಅಜ್ಜಾ ನೀನೇನನ್ನು ಮಾಡುತ್ತಿರುವೆ”
ಆ ಮುದುಕ ಉತ್ತರಿಸಿದ: “ನಾನು ಮಾವಿನ ಮರದ ಸಸಿಯನ್ನು ನೆಡುತ್ತಿದ್ದೇನೆ” ರಾಜನಿಗೆ ಇವೆಲ್ಲವೂ ವಿಚಿತ್ರವೆಂಬಂತೆ ಕಂಡಿತು. ಆಶ್ಚರ್ಯದಿಂದಲೇ ರಾಜನು ಆತನಲ್ಲಿ ವಿಚಾರಿಸಿದನು: “ಆದರೆ ಅಜ್ಜಾ, ನಿನಗೆ ಇಷ್ಟು ವಯಸ್ಸಾಗಿದೆ. ನೀನು ಈ ಮಾವಿನ ಸಸಿಯನ್ನು ನೆಡುತ್ತಿರುವುದಾದರೂ ಯಾರಿಗಾಗಿ” ಈ ಗಿಡವು ಬೆಳೆದು ಮರವಾಗುವುದು ಯಾವಾಗ? ಅದರಲ್ಲಿ ಮಾವಿನ ಹಣ್ಣು ಬೆಳೆಯುವಾಗ ನೀನು ಸತ್ತು ಮಣ್ಣಾಗಿರುವೆ ನಿನಗೆ ಇದರಿಂದ ಆಗುವ ಲಾಭವಾದರೂ ಏನು?”
ರಾಜನ ಮಾತುಗಳನ್ನು ಆಲಿಸಿದ ಮುದುಕನು ನಗುತ್ತಾ ಹೀಗೆಂದ: “ರಾಜರೇ, ಇಲ್ಲಿ ಕಾಣುತ್ತಿರುವ ಮರಗಳೆಲ್ಲ ನಾನು ನೆಟ್ಟು ಬೆಳೆಸಿದವುಗಳಲ್ಲ. ಅವನ್ನು ನನ್ನ ತಾತ, ಮುತ್ತಾತ ಇವರುಗಳು ನೆಟ್ಟು ಬೆಳೆಸಿದವುಗಳು. ಈ ಗಿಡವೂ ಬೆಳೆದು ಮರವಾಗಿ ಅದರಲ್ಲಿ ಮಾವು ಸಿಗುವುದು, ಅವು ನನಗೇ ಸಿಗಬೇಕು, ನಾನೇ ಅವನ್ನ ಅನುಭವಿಸಬೇಕು ಎಂದೇನೂ ಇಲ್ಲ” ಆ ವೃದ್ಧನ ಮಾತುಗಳು ಕೇಳಿದ ರಾಜನು ಸಂತೋಷಪಟ್ಟನು.

-0--0--0--0--0--0-

Wednesday, 15 January 2020

ಕಥಾದನಿ

- ಇನ್ನಾ
ಮೆಡಿಟೇಶನ್
ಒಬ್ಬ ಝೆನ್ ಮಾಸ್ಟರ್ ಗೆ ಇಬ್ಬರು ಶಿಷ್ಯರಿದ್ದರು. ಪ್ರತಿದಿನ ಅವರಿಬ್ಬರೂ ಮಾಸ್ಟರ್ ಮನೆಯ ಮುಂದಿನ ಗಾರ್ಡನ್ ನಲ್ಲಿ `ವಾಕಿಂಗ್ ಮೆಡಿಟೇಶನ್' ಮಾಡುತ್ತಿದ್ದರು. ಝೆನ್ ಸಂಪ್ರದಾಯದಲ್ಲಿ ಪ್ರತಿ ಕ್ರಿಯೆಯೂ ಧ್ಯಾನವೇ. ಸದಾ 24 ಗಂಟೆ ಕುಳಿತು ಧ್ಯಾನ ಮಾಡುವುದು ಕಷ್ಟ. ಕಾಲುಗಳು ಮರಗಟ್ಟುತ್ತವೆ, ರಕ್ತದ ಚಲನೆಗೆ ತೊಂದರೆಯಾಗುತ್ತದೆ. ಆದ್ದರಿಂದ ಝೆನ್ ಸನ್ಯಾಸಿಗಳು ಸ್ವಲ್ಪ ಹೊತ್ತು ಕೂತು ಧ್ಯಾನ ಮಾಡುತ್ತಾರೆ ಆಮೇಲೆ ಸ್ವಲ್ಪ ಹೊತ್ತು ನಡೆದಾಡುತ್ತ ಧ್ಯಾನ ಮಾಡುತ್ತಾರೆ.
ಮಾಸ್ಟರ್‍ನ   ಈ ಶಿಷ್ಯರಿಬ್ಬರಿಗೂ ಹೊಗೆಸೊಪ್ಪು ಸೇದುವ ಚಟ ಆದರೆ ಅವರಿಬ್ಬರೂ ಮಾಸ್ಟರ್ ಗೆ ಹೆದರಿ ಗಾರ್ಸನ್ನಲ್ಲಿ ಹೊಗೆಸೊಪ್ಪು ಸೇದುತ್ತಿರಲಿಲ್ಲ. ಒಂದು ದಿನ ಶಿಷ್ಯರಿಬ್ಬರೂ ಪ್ರತ್ಯೇಕವಾಗಿ ಮಾಸ್ಚರ್ ಬಳಿ ಹೋಗಿ ಗಾರ್ಸನ್ನಲ್ಲಿ ವಾಕಿಂಗ್ ಮೆಡಿಟೇಶನ್ ಮಾಡುವಾಗ ಹೊಗೆ ಸೊಪ್ಪು ಸೇದಲು ಮಾಸ್ಟರ್‍ನ ಅನುಮತಿ ಕೇಳಲು ನಿರ್ಧರಿಸಿದರು.
ಮರುದಿನ ಒಬ್ಬ ಶಿಷ್ಯ ಗಾರ್ಸನ್ನಲ್ಲಿ ಹೊಗೆಸೊಪ್ಪು ಸೇದುತ್ತ ನಡೆದಾಡುತ್ತಿರುವುದನ್ನು ಕಂಡು ಇನ್ನೊಬ್ಬ ಶಿಷ್ಯನಿಗೆ ಸಿಟ್ಟು ಬಂತು. ``ನಾನೂ ಅನುಮತಿ ಕೇಳಿದೆ ಆದರೆ ಮಾಸ್ಟರ್ ನಿರಾಕರಿಸಿಬಿಟ್ಟರು. ನಿನಗೆ ಹೇಗೆ ಒಪ್ಪಿಗೆ ಕೊಟ್ಟರು? ನಾನು ಈಗಲೇ ಮಾಸ್ಟರ್ ಬಳಿ ಹೋಗುತ್ತೇನೆ'' ಅವ ಸಿಟ್ಟಿನಿಂದ ಹೇಳಿದ.
``ನಿಲ್ಲು ನಿಲ್ಲು, ನೀನು ಮಾಸ್ಟರ್‍ನ ಏನಂತ ಕೇಳಿದೆ?'' ಮೊದಲ ಶಿಷ್ಯ ಕೇಳಿದ.
``ವಾಕಿಂಗ್ ಮೆಡಿಟೇಶನ್ ಮಾಡುವಾಗ ಹೊಗೆಸೊಪ್ಪು ಸೇದಲೆ? ಎಂದು ಕೇಳಿದೆ'' ಎರಡನೆಯವ ಉತ್ತರಿಸಿದ.
``ಅದೇ ನೋಡು ನೀನು ಮಾಡಿದ ತಪ್ಪು. ಹಾಗಲ್ಲ ಕೇಳೋದು. ಹೊಗೆಸೊಪ್ಪು ಸೇದುವಾಗ ವಾಕಿಂಗ್ ಮೆಡಿಟೇಶನ್ ಮಾಡಬಹುದಾ ಅಂತ ಕೇಳಬೇಕಿತ್ತು. ನಾನು ಹಾಗೆ ಕೇಳಿದೆ'' ಮೊದಲ ಶಿಷ್ಯ ನಕ್ಕು ಬಿಟ್ಟ.

ನನ್ನ ಗುರು ಅದೆಷ್ಟು ಬುದ್ಧಿವಂತನೆಂದರೆ, ಹಸಿವಾದಾಗ ತಿನ್ನುತ್ತಾನೆ ಮತ್ತು ಸುಸ್ತಾದಾಗ ಮಲಗುತ್ತಾನೆ ಹಾಗೂ ಅಗತ್ಯವಿದ್ದಾಗ ಮಾತನಾಡುತ್ತಾನೆ.
ಬೌದ್ಧ ಬಿಕ್ಕುಗಳ ಗುಂಪು ಒಂದು ಊರಿನಿಂದ ಇನ್ನೊಂದು ಊರಿಗೆ ಸುತ್ತಾಡುತ್ತಿರುತ್ತವೆ. ಒಮ್ಮೆ ಇಂತಹ ಬಿಕ್ಕುಗಳ ಅನೇಕ ಗುಂಪುಗಳು, ನಾಲ್ಕು ರಸ್ತೆಗಳು ಸೇರುವ ಊರೊಂದರಲ್ಲಿ ತಂಗಿದ್ದವು. ಬೇರೆ ಬೇರೆ ಗುಂಪಿನ ನಾಲ್ಕು ಜನ ಶಿಷ್ಯ ಸನ್ಯಾಸಿಗಳು ತಮ್ಮ ನಡುವೆ ತಮ್ಮ ಅನುಭವಗಳ ಬಗ್ಗೆ ಚರ್ಚಿಸುತ್ತಿದ್ದರು. ಆ ಮಧ್ಯೆ ಅವರ ಮಾತು ಯಾರ ಗುರು ಹೆಚ್ಚು ಶ್ರೇಷ್ಠ ಮತ್ತು ಉತ್ತಮ? ಎಂಬುದರ ಕುರಿತು ಹೊರಳಿತು. ಒಬ್ಬ ಶಿಷ್ಯ ಹೇಳಿದ, ನನ್ನ ಗುರು ಎಷ್ಟು ಶಕ್ತಿಶಾಲಿಯೆಂದರೆ, ನಾಲ್ಕು ದಿನಗಳ ಹಿಂದೆ ನಮ್ಮ ಗುಂಪನ್ನು ಡಕಾಯಿತರು ಸುತ್ತುವರಿದಾಗ, ಕೇವಲ ತನ್ನ ಕಣ್ಸನ್ನೆಯಿಂದಲೇ ಎಲ್ಲರನ್ನೂ ಹಿಮ್ಮೆಟ್ಟಿಸಿದ.
ಇನ್ನೊಬ್ಬ ಶಿಷ್ಯ, ನನ್ನ ಗುರು ಝೆನ್ ಮಾತ್ರವಲ್ಲ, ರಕ್ಷಣಾ ವಿದ್ಯೆಯಲ್ಲಿ ಕೂಡ ಪಾರಂಗತ. ನಲ್ವತ್ತು ಜನರೊಂದಿಗೆ ಕತ್ತಿಹಿಡಿದು ಹೋರಾಡುವಾಗಲೇ, ಇನ್ನೂ ಇಪ್ಪತ್ತು ಜನರನ್ನು ವಾದದಲ್ಲಿ ಮಣಿಸಬಲ್ಲ ಎಂದ.
ಮೂರನೆಯ ಶಿಷ್ಯ ಹೇಳಿದ, ನನ್ನ ಗುರುವಿಗೆ ಇರುವಷ್ಟು ನಿಯಂತ್ರಣ ಶಕ್ತಿ ನಿಮ್ಮಲ್ಲಿ ಯಾರ ಗುರುವಿಗೂ ಇದ್ದಂತಿಲ್ಲ. ಆತ ದಿನವಿಡೀ ನಿದ್ದೆಮಾಡದೇ, ಆಹಾರ ಸೇವಿಸದೇ ಇರಬಲ್ಲ. ಕೊನೆಯ ಶಿಷ್ಯ ಹೇಳಿದ, ನನ್ನ ಗುರು ಅದೆಷ್ಟು ಬುದ್ಧಿವಂತನೆಂದರೆ, ಹಸಿವಾದಾಗ ತಿನ್ನುತ್ತಾನೆ ಮತ್ತು ಸುಸ್ತಾದಾಗ ಮಲಗುತ್ತಾನೆ ಹಾಗೂ ಅಗತ್ಯವಿದ್ದಾಗ ಮಾತನಾಡುತ್ತಾನೆ.
-0--0--0--0--0--0-

Saturday, 21 December 2019

ಕಥಾದನಿ


ಕೊಟ್ಟಿಗೆಯಲ್ಲಿ ಕೆಸರು, ಸಗ್ಣಿ, ಗಂಜ್ಲ ಬಿಟ್ರೆ ನೀವು ಹೇಳುವ ಹಾಗೆ ಬೇರೇನು ನನಗೆ ಕಾಣಿಸಲೇ ಇಲ್ಲ ! 

ಗೋಶಾಲೆಯಲ್ಲಿ ಹುಟ್ಟಿದ ಬಾಲ ಯೇಸುವನ್ನು ಕಾಣಲು ಹಸು, ಕುರಿ, ಎತ್ತು, ಮೇಕೆ, ಕೋಳಿ ಹೀಗೆ ಹಲವಾರು ಪ್ರಾಣಿಪಕ್ಷಿಗಳು ಹೋದವು. ಜತೆಗೆ ಹಂದಿಯು ಸಹ ಇತರರನ್ನು ಸೇರಿ ಗೋದಲಿ ಕಡೆ ಹೋಗಿತ್ತು. ಅಲ್ಲಿ ಕಂಡ ಅತ್ಯಾಕರ್ಷಕ ದೃಶ್ಯವನ್ನು ಕಂಡು ಮನಸೂರೆಗೊಂಡು ತಮ್ಮ ವಾಸಸ್ಥಳಕ್ಕೆ ಹಿಂದುರುಗಿದ ಪ್ರಾಣಿಪಕ್ಷಿಗಳು ತಮ್ಮ ಕಣ್ಣುಗಳನ್ನು ತುಂಬಿಕೊಂಡಿದ್ದ ಮನೋಹರ ದೃಶ್ಯವನ್ನು ವರ್ಣಿಸಿ ಹೇಳಲಾರಂಭಿಸಿದವು. ಎಲ್ಲಾ ಪ್ರಾಣಿಪಕ್ಷಿಗಳ ವರ್ಣನೆಯನ್ನು ಆಲಿಸಿದ ಹಂದಿ ಹೇಳಿತಂತೆ: "ಗೋಶಾಲೆಯಲ್ಲಿ ಕೆಸರು, ಸಗಣಿ, ಗಂಜ್ಲ ಬಿಟ್ರೆ ನೀವು ಹೇಳುವ ಹಾಗೆ ಬೇರೇನೂ ನನಗೆ ಕಾಣಿಸಲೇ ಇಲ್ಲ" ಎಂದು. 


ಹೌದು ಬನ್ನಿ ಸಾಕಷ್ಟು ಸ್ಥಳವಿದೆ ಒಳಗೆ ಬನ್ನಿ 

ಕ್ರಿಸ್ತ ಯೇಸುವಿನ ಜನನದ ರೂಪಕವನ್ನು ಅಭಿನಯಿಸುತ್ತಿದ್ದ ಸಂದರ್ಭ. ಮರಿಯಳಿಗೆ ಪ್ರಸವಕಾಲ ಸಮೀಪಿಸಿದ್ದರಿಂದ ಹೆರಿಗೆಗೆ ಒಂದು ಮನೆಯ ಅವಶ್ಯವಾಗಿತ್ತು. ಪರಸ್ಥಳ ಬೆತ್ಲೆಹೇಮಿನಲ್ಲಿ ಮನೆಗಾಗಿ ಕಾಡಿ ಬೇಡಿ ಹುಡುಕಾಡಿದರೂ ಸಿಗದೆ ಇದ್ದಾಗ ಕೊನೆಗೆ ಒಂದು ಕೊಟ್ಟಿಗೆಯಲ್ಲಿ ಯೇಸು ಹುಟ್ಟುವ ದೃಶ್ಯವನ್ನು ಅಭಿನಯಿಸಿ ತೋರಿಸಬೇಕಾಗಿತ್ತು. 

ಮನೆಯನ್ನು ಕೇಳಿಕೊಂಡು ಬರುವ ಜೋಸೆಫ್ ಮತ್ತು ಮರಿಯಳಿಗೆ ಛತ್ರದ ಯಜಮಾನನ ಪಾತ್ರವಹಿಸಿದ ಒಬ್ಬ ಪುಟ್ಟ ಬಾಲಕ "ಮನೆ ಖಾಲಿ ಇಲ್ಲ" ಎಂದು ಬೈದು ಅವರನ್ನು ವಾಪಸ್ಸು ಕಳಿಸುವಂತೆ ಅಭಿನಯಿಸಬೇಕಾಗಿತ್ತು. ಆದರೆ ಜೋಸೆಫ ಮತ್ತು ಮರಿಯಳ ಕಷ್ಟವನ್ನು ಕಂಡು "ಹೌದು ಬನ್ನಿ ಛತ್ರದಲ್ಲಿ ಸಾಕಷ್ಟು ಸ್ಥಳವಿದೆ ಒಳಗೆ ಬನ್ನಿ" ಎಂದು ಹೇಳಿ ಮುಂದುವರಿಯಬೇಕಾಗಿದ್ದ ನಾಟಕವನ್ನು ಕೊನೆಗೊಳಿಸಿಯೇ ಬಿಟ್ಟ. 


ಅವನಿಗೆ ನನ್ನ ಅವಶ್ಯಕತೆ ತುಂಬಾ ಇದೆ 

ಒಬ್ಬ ಝೆನ್ ಗುರುಗಳು ತನ್ನ ಶಿಷ್ಯಂದಿರ ಮಧ್ಯೆ ಏನೋ ಗದ್ದಲವಾಗುತ್ತಿರುವುದನ್ನು ಗಮನಿಸಿ ಏನಾಯಿತೆಂದು ಕೇಳಿದರು. ಅವರು ಒಬ್ಬ ಶಿಷ್ಯನನ್ನು ಗುರುವಿನ ಮುಂದೆ ತಳ್ಳಿ “ಇವನು ಮತ್ತೆ ಕಳ್ಳತನ ಮಾಡಿದ್ದಾನೆ” ಎಂದರು. ಗುರುಗಳು “ಅವನನ್ನು ಕ್ಷಮಿಸಿಬಿಡಿ”ಎಂದರು. ಅದಕ್ಕೆ ಶಿಷ್ಯರು “ಸಾಧ್ಯವೇ ಇಲ್ಲ. ನಿಮಗೋಸ್ಕರ ನಾವು ಇವನನ್ನು ಈಗಾಗಲೇ ಸಾಕಷ್ಟು ಬಾರಿ ಕ್ಷಮಿಸಿದ್ದೇವೆ. ನೀವೀಗ ಅವನನ್ನು ಹೊರಗೆ ಕಳುಹಿಸದಿದ್ದರೆ, ನಾವೆಲ್ಲರೂ ಇಲ್ಲಿಂದ ಹೊರಟುಹೋಗುತ್ತೇವೆ ”ಎಂದು ಹೆದರಿಸಿದರು.“ನೀವೆಲ್ಲ ಹೊರಟು ಹೋದರೂ ಸಹ, ನನಗೆ ಅವನನ್ನು ಹೊರ ಕಳಿಸುವ ಇಂಗಿತವಿಲ್ಲ. ನಿಮಗೆ ನನ್ನ ಅವಶ್ಯಕತೆ ಇಲ್ಲದಿರಬಹುದು ಆದರೆ ಅವನಿಗೆ ನನ್ನ ಅವಶ್ಯಕತೆ ತುಂಬಾ ಇದೆ” ಎಂದು ಗುರುಗಳು ಹೇಳಿದರು. ಆಗ ಅಪರಾಧವನ್ನೆಸಗಿದ ಶಿಷ್ಯ ಗುರುಗಳ ಪಾದಕ್ಕೆ ಬಿದ್ದು ಕಣ್ಣೀರಿಟ್ಟ. 


******************* 

Thursday, 7 November 2019

ಕಥಾದನಿ

ಕುರುಡರು ಮತ್ತು ಆನೆ
ವಿಭಿನ್ನ ಮತಗಳ ಮತ್ತು ದೇವರ ಕುರಿತಂತೆ ಹಲವು ಮಂದಿ ಪ್ರಜೆಗಳ ನಡುವೆ ಬಿಸಿಬಿಸಿ ಚರ್ಚೆ ನಡೆಯಿತಾದರೂ ಸರ್ವಸಮ್ಮತವಾದ ಉತ್ತರವೊಂದೂ ಸಿಕ್ಕಲಿಲ್ಲ. ಎಂದೇ, ಅವರು ದೇವರು ನೋಡಲು ಹೇಗಿರುತ್ತದೆ ಎಂಬುದನ್ನು ತಿಳಿಯಲು ಬುದ್ಧನ ಬಳಿ ಬಂದರು. ಒಂದು ಭವ್ಯವಾದ ಆನೆಯನ್ನೂ ನಾಲ್ವರು ಕುರುಡರನ್ನೂ ಕರೆ ತರುವಂತೆ ಬುದ್ಧ ತನ್ನ ಶಿಷ್ಯರಿಗೆ ಆದೇಶಿಸಿದ. ಅವರು ಅಂತೆಯೇ ಮಾಡಿದ ನಂತರ ಅವನು ನಾಲ್ವರು ಕುರುಡರನ್ನು ಅನೆಯ ಹತ್ತಿರ ಕರೆತಂದು ಆನೆ 'ನೋಡಲು' ಹೇಗಿರುತ್ತದೆ ಎಂಬುದನ್ನು ವಿವರಿಸಲು ಹೇಳಿದ.
ಮೊದಲನೆಯ ಕುರುಡ ಆನೆಯ ಕಾಲನ್ನು ಮುಟ್ಟಿ ಆನೆ ಕಂಭದಂತಿದೆ ಎಂಬುದಾಗಿ ಹೇಳಿದ. ಎರಡನೆಯವನು ಹೊಟ್ಟೆಯನ್ನು ಮುಟ್ಟಿ ಹೇಳಿದ: "ಗೋಡೆಯಂತಿದೆ." ಮೂರನೆಯವನು ಕಿವಿಯನ್ನು ಮುಟ್ಟಿ ಹೇಳಿದ: "ಬಟ್ಟೆಯ ಚೂರಿನಂತಿದೆ." ನಾಲ್ಕನೆಯವನು ಬಾಲವನ್ನು ಮುಟ್ಟಿ ಹೇಳಿದ: "ಹಗ್ಗದಂತಿದೆ." ತತ್ಪರಿಣಾಮವಾಗಿ ಆನೆ ಹೇಗೆ ಗೋಚರಿಸುತ್ತದೆ ಎಂಬುದರ ಕುರಿತು ಬಿಸಿಬಿಸಿ ಚರ್ಚೆ ಆಯಿತು.
ಬುದ್ಧ ಪ್ರಜೆಗಳನ್ನು ಕೇಳಿದ: "ಪ್ರತೀ ಕುರುಡನೂ ಆನೆಯನ್ನು ಮುಟ್ಟಿದ್ದಾನಾದರೂ ಅವರು ಆನೆಯನ್ನು ಬೇರೆ ಬೇರೆ ರೀತಿಯಲ್ಲಿ ವರ್ಣಿಸಿದ್ದಾರೆ. ಅವರ ಉತ್ತರಗಳ ಪೈಕಿ ಯಾವುದು ಸರಿ?"
ನೀನು ತಪ್ಪು ಬದಿಗೆ ಬೆಣ್ಣೆ ಹಚ್ಚಿದ್ದೀಯ
ಮುಲ್ಲಾ ನಸ್ರುದ್ದೀನ್ ಊರಿನವರಿಗೆ ಒಂದು ಪ್ರವಚನ ನೀಡುತ್ತಿದ್ದ. ಪ್ರವಚನದ ಮಧ್ಯೆ ಒಂದು ಉದಾಹರಣೆ ನೀಡುತ್ತಾ, `ನೀವು ರೊಟ್ಟಿಯ ಒಂದು ಬದಿಗೆ ಬೆಣ್ಣೆ ಹಚ್ಚಿ ಮೇಲಕ್ಕೆ ಎಸೆಯಿರಿ. ನೀವು ಹೇಗೇ ಎಸೆದರೂ ಕೆಳಕ್ಕೆ ಬಿದ್ದಾಗ ಬೆಣ್ಣೆ ಹಚ್ಚಿದ ಬದಿ ಮೇಲಕ್ಕೇ ಇರುತ್ತದೆ' ಎಂದ. ಜನರೆಲ್ಲಾ ಅತ್ಯಂತ ಭಕ್ತಿಯಿಂದ ಕೇಳಿಸಿಕೊಳ್ಳುತ್ತಿದ್ದರು. ಆದರೆ ಒಬ್ಬ ಕಿಡಿಗೇಡಿ ಹುಡುಗ ಪರಿಶೀಲಿಸೋಣವೆಂದು ತಕ್ಷಣವೇ ತನ್ನ ಬಳಿಯಿದ್ದ ರೊಟ್ಟಿಗೆ ಬೆಣ್ಣೆ ಹಚ್ಚಿ ಮೇಲಕ್ಕೆಸೆದ. ಟಪಕ್ಕನೆ ಬೆಣ್ಣೆ ಹಚ್ಚಿದ ಬದಿ ಕೆಳಕ್ಕೆ ಬಿದ್ದು ಮಣ್ಣಾಯಿತು. ಅದನ್ನು ತೆಗೆದುಕೊಂಡು ಮುಲ್ಲಾನಿಗೆ ತೋರಿಸಿ `ನೋಡಿ, ನೀವು ಹೇಳಿದ್ದು ಸುಳ್ಳು' ಎಂದ. ಮುಲ್ಲಾ ಗಡ್ಡ ನೀವಿಕೊಂಡು ಮುಗುಳ್ನಗುತ್ತಾ, `ಇಲ್ಲಾ ನಾನು ಹೇಳಿದ್ದು ಸರಿಯಿದೆ. ನೀನು ತಪ್ಪು ಬದಿಗೆ ಬೆಣ್ಣೆ ಹಚ್ಚಿದ್ದೀಯ' ಎಂದ.
"ಧರ್ಮದ ಮೂಲಧರ್ಮ ಉಂಟಲ್ಲ, ಅದಕ್ಕೆ ಧರ್ಮವೇ ಇಲ್ಲ"
ಬುದ್ಧ ಮಹಾಕಶ್ಯಪನಿಗೆ ತಾವರೆ ನೀಡಿ ಮೌನವಾದ...
ಸಭೆಯ ಕೊನೆಗೆ ನುಡಿದ -
"ಧರ್ಮದ ಮೂಲಧರ್ಮ ಉಂಟಲ್ಲ, ಅದಕ್ಕೆ ಧರ್ಮವೇ ಇಲ್ಲ".'
"ಸ್ವಾಮೀ ಈಗ ನಿಮ್ಮ ಇಡೀ ಜೀವನ ವ್ಯರ್ಥವಾಗುತ್ತದೆ"
ಒಂದು ಬಾರಿ ಮುಲ್ಲಾ ನಸ್ರುದ್ದೀನ್‌ದೋಣಿಯಲ್ಲಿ ಪ್ರಯಾಣ ಬೆಳೆಸುತ್ತಿದ್ದ. ಅವನಂತೆಯೇ ಒಂದಿಷ್ಟು ಸಹಯಾತ್ರಿಕರು ದೋಣಿಯಲ್ಲಿದ್ದರು. ಎಲ್ಲರೂ ಒಂದೇ ಮಟ್ಟದ ಬುದ್ಧಿವಂತರಾಗಿದ್ದರು. ಅದೇ ದೋಣಿಯಲ್ಲಿ ಪರವೂರಿನ ವ್ಯಕ್ತಿಯೊಬ್ಬನಿದ್ದ. ನೋಡಲು ಉತ್ತಮ ಬಟ್ಟೆಬರೆಯನ್ನು ಧರಿಸಿ ಪಂಡಿತನಂತೆ ಕಾಣುತ್ತಿದ್ದ ಅವನ ಮುಖದಲ್ಲಿ ಗರ್ವ ಎದ್ದು ಕಾಣುತ್ತಿತ್ತು. ಅವನು ನಸ್ರುದ್ದೀನ್‌ಮುಲ್ಲಾನಲ್ಲಿ ಮಾತಿಗೆ ಆರಂಭಿಸಿದ. ಹೀಗೆ ಮಾತನಾಡುವಾಗ ಮುಲ್ಲಾ ಒಂದು ಪದವನ್ನು ತಪ್ಪಾಗಿ ಉಚ್ಚರಿಸಿದ. ಪಂಡಿತ ಇದನ್ನು ಕೇಳಿ ಮುಲ್ಲಾನನ್ನು ಹಾಸ್ಯ ಮಾಡುತ್ತಾ ಜೀವನದಲ್ಲಿ ನೀನು ಒಮ್ಮೆಯೂ ಅಕ್ಷರಗಳ ಉಚ್ಚಾರವನ್ನೇ ಕಲಿತಿಲ್ಲವೇ ಎಂದು ಕೇಳುತ್ತಾನೆ. ಇಲ್ಲ ಎಂದ ಮುಲ್ಲಾನಿಗೆ ಹಾಗಾದರೆ ನಿನ್ನ ಅರ್ಧ ಜೀವನ ವ್ಯರ್ಥವಾಯಿತಲ್ಲ ಎನ್ನುತ್ತಾನೆ. ಅಷ್ಟೊತ್ತಿಗೆ ಗಾಳಿ ಜೋರಾಗಿ ಬೀಸಿ ದೋಣಿ ಅಲುಗಾಡಲಾರಂಭಿಸುತ್ತದೆ. ಆಗ ಮುಲ್ಲಾ ಪಂಡಿತನಿಗೆ ತಮಗೆ ಈಜಲು ಬರುತ್ತದೆಯೋ ಎಂದು ಕೇಳುತ್ತಾನೆ. ಇಲ್ಲ ಎನ್ನುತ್ತಾನೆ ಪಂಡಿತ. ಆಗ ಮುಲ್ಲಾ ಅವನಿಗೆ "ಸ್ವಾಮೀ ಈಗ ನಿಮ್ಮ ಇಡೀ ಜೀವನ ವ್ಯರ್ಥವಾಗುತ್ತದೆ. ಯಾಕೆಂದರೆ ದೋಣಿ ಮುಳುಗುತ್ತಿದೆ. ಬದುಕಬೇಕಾದರೆ ನೀರಿಗೆ ಹಾರಿ ಈಜಲೇಬೇಕು" ಎಂದು ಹೇಳಿ ನೀರಿಗೆ ಹಾರುತ್ತಾನೆ.'
*******************

Wednesday, 9 October 2019

ಕಥಾದನಿ

ಇನ್ನಾ
jeevadani2016@gmail.com

ಕಚ್ಚುವುದು ಚೇಳಿನ ಗುಣ, ರಕ್ಷಿಸುವುದು ನನ್ನ ಗುಣ
ಹೆನ್ರಿ ನೌವೆನ್ ಈ ಒಂದು ಕಥೆಯನ್ನು ಹೇಳುತ್ತಾರೆ. ಒಬ್ಬ ಮುದುಕ ಗಂಗಾ ನದಿಯ ತೀರದಲ್ಲಿ ಪ್ರತಿದಿನ ಧ್ಯಾನ ಮಾಡುತ್ತಿದ್ದ. ಒಂದು ದಿನ ಧ್ಯಾನ ಮಾಡುವಂತಹ ಸಮಯದಲ್ಲಿ, ಚೇಳೊಂದು ನೀರಿನಲ್ಲಿ ಕೊಚ್ಚಿಕೊಂಡು ಹೋಗುತ್ತಿದ್ದನ್ನು ಕಂಡು, ಚೇಳನ್ನು ರಕ್ಷಿಸಲು ಮುನ್ನುಗ್ಗಿದ್ದ. ಚೇಳನ್ನು ನೀರಿನಿಂದ ತೆಗೆಯಲು ಪ್ರಯತ್ನಿಸುತ್ತಿದ್ದಂತೆ, ಆ ಚೇಳು ಅವನ ಕೈ ಕಡಿದಿತ್ತು. ಆದರೂ ಬಿಡದೆ, ಚೇಳನ್ನು ನೀರಿನಿಂದ ಮೇಲೆತ್ತಲು ಹೋದಾಗ, ಮತ್ತೊಮ್ಮೆ ಆ ಚೇಳು ಅವನ ಕೈಯನ್ನು ಕಚ್ಚಿತ್ತು. ಅವನ ಕೈ ನೋವಿನಿಂದ ಉಬ್ಬಲು ಪ್ರಾರಂಭಿಸಿತ್ತು. ಆದರೂ ಕೈಚೆಲ್ಲದೆ, ಚೇಳನ್ನು ರಕ್ಷಿಸಲು ಪ್ರಯತ್ನಿಸುತ್ತಿದ್ದ ವ್ಯಕ್ತಿಯನ್ನು ಕಂಡ ಒಬ್ಬ ಯಾತ್ರಿಕ “ಹೇ ಮೂರ್ಖ, ನಿನಗೆ ಏನಾಗಿದೆ? ಆ ಕ್ರೂರಿ ಕೃತಜ್ಞತೆಯಿಲ್ಲದ ಪ್ರಾಣಿಯನ್ನು ರಕ್ಷಿಸಲು ನಿನ್ನ ಜೀವವನ್ನೇ ಅಪಾಯಕ್ಕೆ ದೂಡುತ್ತಿದ್ದೀಯಲ್ಲಾ? ನಿನಗೆ ಬುದ್ಧಿ ಇದ್ಯಾ?” ಎಂದು ಬೈಯುತ್ತಿದ್ದಂತೆ, ಆ ಮುದುಕ ಶಾಂತವಾಗಿ “ ಓ ಸ್ನೇಹಿತನೇ ಕಚ್ಚುವುದು ಚೇಳಿನ ಗುಣ, ರಕ್ಷಿಸುವುದು ನನ್ನ ಗುಣ” ಎಂದು ಹೇಳಿ ತನ್ನ ಪ್ರಯತ್ನವನ್ನು ಮುಂದುವರಿಸಿದನಂತೆ.
ಎಲ್ಲರನ್ನೂ ರಕ್ಷಿಸುವುದು ದೇವರ ಸ್ವಭಾವ. ಕಳೆದು ಹೋದವರನ್ನು ಹುಡುಕಿ ತರುತ್ತಾನೆ, ಗಾಯಗೊಂಡವರನ್ನು ಗುಣಪಡಿಸುತ್ತಾನೆ, ತಪ್ಪು ಮಾಡಿದವರನ್ನು ಕ್ಷಮಿಸಿ ಆಲಂಗಿಸಿಕೊಳ್ಳುತ್ತಾನೆ. ಹತಾಶೆಯಲ್ಲಿ ಇರುವವರಿಗೆ ಭರವಸೆ ಕೊಡುತ್ತನೆ. ದೇವರಿಗೆ ಪ್ರತಿಯೊಬ್ಬರೂ ಮುಖ್ಯರೇ. ಅಮುಖ್ಯರೆಂಬುವರು ಯಾರು ಇಲ್ಲ. ದೇವರ ಪ್ರೀತಿ ಕೂಡು, ಕಳೆ, ಗುಣಕಾರಗಳನ್ನು ಅಂದರೆ ಲೆಕ್ಕವನ್ನು ಮೀರಿದ್ದು. ನಮ್ಮ ದುಷ್ಟತನಕ್ಕೆ ಪಶ್ಚಾತ್ತಾಪ ಪಟ್ಟು ಹುಡುಕಿ ಬರುವ ದೇವರನ್ನು ತಬ್ಬಿಕೊಳ್ಳೋಣ.
ಬದುಕೆಂಬುದು ಇಂದು ನಾಳೆಗಳ ವಾಸ್ತವ
ಕಾರ್ವೆತ್ ಮಿಷೆಲ್ ಹೇಳಿದ ಕಥೆಯಿದು. ಒಬ್ಬ ಒಂದು ಗಿಳಿಯನ್ನು ಖರೀದಿಸಿ, ಮನೆಗೆ ತಂದು “ಇವೊತ್ತು” ಎಂದು ಹೇಳಲು ಕಲಿಸಿಕೊಟ್ಟನಂತೆ. ಅ ಗಿಳಿ ಅ ವ್ಯಕ್ತಿಯನ್ನು ಕಂಡಾಗೆಲ್ಲಾ “ಇವೊತ್ತು” “ಇವೊತ್ತು” ಎಂದು ಕಿರಿಚಿಕೊಳ್ಳುತ್ತಿತ್ತಂತೆ. ಅವನು ಬೆಳಗ್ಗೆ ಎದ್ದಾಗ, ರಾತ್ರಿ ಮನೆಗೆ ಬಂದಾಗ ಆ ಗಿಳಿ ಯಾವಾಗಲೂ ಇವೊತ್ತು ಇವೊತ್ತು ಎಂದು ನೆನಪಿಸುತ್ತಿತ್ತಂತೆ.
ಸುಮಾರು ಆರು ತಿಂಗಳ ನಂತರ ಆ ವ್ಯಕ್ತಿ ಇನ್ನೊಂದು ಗಿಳಿಯನ್ನು ತಂದು “ನಾಳೆ” ಎಂದು ಹೇಳಲು ಆ ಕಲಿಸಿಕೊಟ್ಟನಂತೆ. ಬದುಕೆಂಬುದು ಇಂದು ಮಾತ್ರ, ಅದಕ್ಕೆ ನಾಳೆಗಳಿಲ್ಲ ಎಂದು ನಾನು ಬದುಕುತ್ತಿದ್ದೇನೆ, ಆದರೆ ಬದುಕೆಂಬುದು ಇಂದು ನಾಳೆಗಳ ವಾಸ್ತವ. ವರ್ತಮಾನ ಮತ್ತು ಭವಿಷತ್ ಕಾಲದ ಮೊತ್ತ. ಹೌದು ಆ ಎರಡು ಗಿಳಿಗಳು ಬದುಕೆಂಬುದು ಇಂದು ನಾಳೆಗಳ ವಾಸ್ತವ ಎಂದು ಅರಿತು ಬಾಳಲು ಅವನಿಗೆ ನೆರವಾದವಂತೆ.
“ಇಲ್ಲ ಸಾರ್ ಸೀಟ್ ಖಾಲಿ ಇದೆ. ಕೂತು ಕೊಳ್ಳಿ”

ರಾಜು ಬೆಂಗಳೂರಿನಿಂದ ಮೈಸೂರಿಗೆ ಹೋಗಬೇಕಿತ್ತು. ಬಸ್ಸನ್ನು ಹತ್ತಿದ್ದಾಗ ಒಂದು ಸೀಟು ಖಾಲಿಯಿತ್ತು. ಕುಳಿತುಕೊಳ್ಳುವ ಮೊದಲು ಆ ಬಸ್ಸು ಯಾವ ಊರಿಗೆ ಹೋಗುತ್ತದೆ ಎಂಬುವುದನ್ನು ಖಾತ್ರಿ ಮಾಡಿಕೊಳ್ಳಲು, ಪಕ್ಕದ ಆಸನದಲ್ಲಿ ಕುಳಿತಿದ್ದ ಪ್ರಯಾಣಿಕನನ್ನು ಉದ್ದೇಶಿಸಿ: ಈ ಬಸ್ಸು ಮೈಸೂರಿಗೆ ಹೋಗುತ್ತದೆಯೇ? ಎಂದು ಕೇಳಿದ. “ಇಲ್ಲ ಸಾರ್, ಸೀಟ್ ಖಾಲಿ ಇದೆ, ಕೂತು ಕೊಳ್ಳಿ” ಎಂದು ಉತ್ತರಿಸಿದ.!

Friday, 6 September 2019

ಕಥಾದನಿ



ನಾನು ನಿಸ್ವಾರ್ಥಿ, ಇತರರ ಬಗ್ಗೆ ಆಲೋಚಿಸುವವನು 

ಪ್ರಖ್ಯಾತ ವಿದ್ವಾಂಸನೊಬ್ಬ ನಸ್ರುದ್ದೀನನ ಹಳ್ಳಿಯಲ್ಲಿ ಹಾದು ಹೋಗುತ್ತಿದ್ದ. ಆತನಿಗೆ ಹಸಿವಾಗಿತ್ತು. ಎದುರಿಗೆ ಸಿಕ್ಕ ನಸ್ರುದ್ದೀನನನ್ನು ಆ ಊರಿನಲ್ಲಿ ಒಳ್ಳೆಯ ಊಟ ಸಿಗುವ ಸ್ಥಳ ಯಾವುದು ಎಂದು ಕೇಳಿದ. ನಸ್ರುದ್ದೀನ್ ತನಗೆ ತಿಳಿದಿದ್ದ ಉಪಾಹಾರ ಮಂದಿರದ ವಿಳಾಸ ತಿಳಿಸಿದ. ಆ ವಿದ್ವಾಂಸನಿಗೆ ನಸ್ರುದ್ದೀನ್ ಸಹ ಒಬ್ಬ ವಿದ್ವಾಂಸನ ಹಾಗೆ ಕಂಡು ಆತನೊಂದಿಗೆ ಬಹಳಷ್ಟು ವಿಷಯ ಚರ್ಚೆ ಮಾಡಬಹುದೆಂದು ಆತನನ್ನು ಸಹ ತನ್ನ ಜೊತೆ ಊಟಕ್ಕೆ ಬರುವಂತೆ ಆಹ್ವಾನಿಸಿದ. ಬಹಳ ಸಂತೋಷದಿಂದ ಒಪ್ಪಿದ ನಸ್ರುದ್ದೀನ್ ಆತನನ್ನು ಉಪಾಹಾರ ಮಂದಿರಕ್ಕೆ ಕರೆದೊಯ್ದ. ಅಲ್ಲಿ ಊಟಕ್ಕೆ ತಾಜಾ ಮೀನು ಸಿಗುತ್ತದೆ ಎಂದು ತಿಳಿದು ವಿದ್ವಾಂಸ ಎರಡು ಮೀನು ಬಡಿಸಲು ಹೇಳಿದ. ಬಡಿಸುವವ ತಟ್ಟೆಯಲ್ಲಿ ಎರಡು ಮೀನು ತಂದಾಗ ಅದರಲ್ಲಿ ಒಂದು ಸ್ವಲ್ಪ ದೊಡ್ಡದು ಮತ್ತೊಂದು ಸಣ್ಣದಿತ್ತು. ನಸ್ರುದ್ದೀನ್ ಗಬಕ್ಕನೆ ದೊಡ್ಡ ಮೀನನ್ನು ಎತ್ತಿ ತನ್ನ ತಟ್ಟೆಗೆ ಹಾಕಿಕೊಂಡ. ಅದನ್ನು ನೋಡಿದ ವಿದ್ವಾಂಸ ಮುಲ್ಲಾ ನಸ್ರುದ್ದೀನನಿಗೆ ಆತನ ನಡತೆಯ ಬಗ್ಗೆ ದೊಡ್ಡ ಭಾಷಣವನ್ನೇ ಮಾಡಿದ. ಆ ರೀತಿ ಯಾವುದೇ ವ್ಯಕ್ತಿ ಸ್ವಾರ್ಥಿಯಾಗಿರಬಾರದೆಂದೂ, ಆ ರೀತಿಯ ನಡತೆಯು ಎಲ್ಲ ನೈತಿಕ ಮೌಲ್ಯಗಳನ್ನು ಧಿಕ್ಕರಿಸುವುದೆಂದೂ ಹೇಳಿದ. ಆ ವಿದ್ವಾಂಸ ಬಹಳಷ್ಟು ಹೇಳಿ ತನ್ನ ಭಾಷಣ ನಿಲ್ಲಿಸಿದ. ಅದನ್ನೇ ಕಾಯುತ್ತಿದ್ದ ನಸ್ರುದ್ದೀನ್, ‘ನನ್ನ ಸ್ಥಾನದಲ್ಲಿ ನೀವಿದ್ದಿದ್ದರೆ ಏನು ಮಾಡುತ್ತಿದ್ದಿರಿ?’ಎಂದು ಕೇಳಿದ. 

‘ನಾನು ನಿಸ್ವಾರ್ಥಿ, ಇತರರ ಬಗ್ಗೆ ಆಲೋಚಿಸುವವನು. ಹಾಗಾಗಿ ನಾನು ಮೊದಲು ಚಿಕ್ಕ ಮೀನೇ ತೆಗೆದುಕೊಳ್ಳುತ್ತಿದ್ದೆ’ ಎಂದ ವಿದ್ವಾಂಸ. ಅದಕ್ಕೆ ನಸ್ರುದ್ದೀನ್, ‘ಹೌದೇ! ತೆಗೆದುಕೊಳ್ಳಿ, ನಿಮ್ಮ ಚಿಕ್ಕಮೀನು ಇನ್ನೂ ಇಲ್ಲೇ ಇದೆ’ ಎನ್ನುತ್ತಾ ಅದನ್ನು ತೆಗೆದು ವಿದ್ವಾಂಸನ ತಟ್ಟೆಗೆ ಹಾಕಿದ. 



ಕತ್ತೆ ಮತ್ತು ಮುಠ್ಠಾಳರು 

ಮುಲ್ಲಾನಸ್ರುದ್ದೀನ್ ಮತ್ತು ಆತನ ಮಗ ತಮ್ಮ ಕತ್ತೆಯ ಮೇಲೆ ಕೂತು ಮಾರುಕಟ್ಟೆಗೆ ಹೋಗುತ್ತಿದ್ದರು. ಅದನ್ನು ನೋಡಿದ ಕೆಲವರು, "ಎಂಥಾ ಕಾಲ ಬಂತು ನೋಡಿ! ಈ ಇಬ್ಬರು ಮೂಕ ಪ್ರಾಣಿಯ ಮೇಲೆ ಹೇಗೆ ಕೂತು ಹೋಗುತ್ತಿದ್ದಾರೆ. ಬಡಪಾಯಿ ಪ್ರಾಣಿ ಅವರ ತೂಕಕ್ಕೆ ಬಾಗಿಹೋಗಿದೆ!" ಎಂದರು. 

ಆ ಮಾತನ್ನು ಕೇಳಿದ ನಸ್ರುದ್ದೀನ್ ತನ್ನ ಮಗನಿಗೆ ಕತ್ತೆಯಿಂದ ಕೆಳಗಿಳಿದು ನಡೆದು ಕೊಂಡು ಬರಲು ತಿಳಿಸಿದ. ಸ್ವಲ್ಪ ಮುಂದೆ ಹೋದಂತೆ ರಸ್ತೆಯ ಬದಿಯಲ್ಲಿ ನಿಂತಿದ್ದ ಕೆಲವರು, "ಎಂಥಾ ಕಾಲ ಬಂತು ನೋಡಿ! ಈ ಧಡಿಯ ತನ್ನ ಬಡಪಾಯಿ ಮಗನನ್ನು ನಡೆಸಿಕೊಂಡು ತಾನು ಕತ್ತೆಯ ಮೇಲೆ ಕೂತು ಹೋಗುತ್ತಿದ್ದಾನೆ!" ಎಂದರು. 

ಅದನ್ನು ಕೇಳಿಸಿಕೊಂಡ ನಸ್ರುದ್ದೀನ್ತ ತಾನು ಕತ್ತೆಯಿಂದ ಕೆಳಗಿಳಿದು ತನ್ನ ಮಗನನ್ನು ಕತ್ತೆಯ ಮೇಲೆ ಕೂರಿಸಿ, ತಾನು ಅದರ ಪಕ್ಕದಲ್ಲಿ ನಡೆಯುತ್ತಾ ಹೋದ. ಒಂದಷ್ಟು ದೂರ ಹೋದ ಮೇಲೆ ಒಂದು ಜನರ ಗುಂಪು ಇವರನ್ನು ಹಾದು ಹೋಯಿತು. ಅವರಲ್ಲೊಬ್ಬ, "ಎಂಥಾ ಕಾಲ ಬಂತು ನೋಡಿ! ವಯಸ್ಸಿನ ಹುಡುಗ ಕತ್ತೆಯ ಮೇಲೆ ಕೂತು ಹೋಗುತ್ತಿದ್ದಾನೆ, ವಯಸ್ಸಾದ ಆತನ ತಂದೆ ನಡೆದು ಹೋಗುತ್ತಿದ್ದಾನೆ!" ಎಂದ. 

ಆತನ ಮಾತು ಕೇಳಿಸಿಕೊಂಡ ನಸ್ರುದ್ದೀನ್ ತನ್ನ ಮಗನನ್ನೂ ಕೆಳಕ್ಕಿಳಿಸಿ ಕತ್ತೆಯ ಹಗ್ಗ ಹಿಡಿದುಕೊಂಡು ಅದನ್ನು ಕರೆದೊಯ್ಯುತ್ತಾ ಇಬ್ಬರೂ ನಡೆದುಕೊಂಡು ಹೊರಟರು. ಎದುರಿಗೆ ಮತ್ತೊಂದು ಜನರ ಗುಂಪು ಬಂದಿತು. ಇವರನ್ನು ನೋಡಿದ ಅವರಲ್ಲೊಬ್ಬಾತ, "ಈ ಮುಠ್ಠಾಳರನ್ನು ನೋಡಿ! ಅವರ ಬಳಿ ಕತ್ತೆಯೊಂದಿದೆ, ಆದರೂ ನಡೆದು ಹೋಗುತ್ತಿದ್ದಾರೆ!" ಎಂದ. 


ತಜ್ಞರುತಪ್ಪುಮಾಡುವುದುಂಟೆ? 

ಮರಣ ಹೊಂದಿದ್ದಾನೆ ಎಂದು ತಜ್ಞರಿಂದ ತೀರ್ಮಾನಿಸಲಾದ ಒಬ್ಬನನ್ನು ಸಮಾಧಿ ಮಾಡಲೆಂದು ಹೊತ್ತುಕೊಂಡು ಹೋಗಲಾಯಿತು. ಶವಪೆಟ್ಟಿಗೆಯನ್ನು ಕೆಳಗಿಳಿಸಬೇಕು ಎನ್ನುವಷ್ಟರಲ್ಲೇ ಒಳಗಿದ್ದವನು ಮುಚ್ಚಳವನ್ನು ಹೊಡೆಯಲಾರಂಭಿಸಿದ, ಒಡನೆಯೇ ಶವ ಪೆಟ್ಟಿಗೆಯನ್ನು ತೆರೆಯಲಾಯಿತು. ಸತ್ತು ಹೋದ ಎಂದೆಣಿಸಿದ ವ್ಯಕ್ತಿ ಎದ್ದು ಕುಳಿತು ನೀವೇನು ಮಾಡ್ತಾ ಇದ್ದೀರಾ? ನಾನಿನ್ನೂ ಜೀವಂತವಾಗಿಯೇ ಇದ್ದೇನೆ. ಸತ್ತು ಹೋಗಿಲ್ಲ ಎಂದವನೇ ಹೊರಬರಲು ಪ್ರಯತ್ನಿಸಿದ. ಸುತ್ತಲಿದ್ದವರು ಭಯಭ್ರಾಂತರಾಗಿ ಗುರುಗಳು ಮತ್ತು ವೈದ್ಯರು ನೀನು ಮರಣ ಹೊಂದಿದ್ದೀಯೆಂದು ಸಾಬೀತು ಪಡಿಸಿದ್ದಾರೆ. ತಜ್ಞರು ತಪ್ಪು ಮಾಡುವುದುಂಟೆ. ಒಳಗೆ ಸೇರು, ನೀನು ಸತ್ತು ಹೋಗಿದ್ದೀಯಾ ಎಂದು ಅವನನ್ನು ಬಲವಂತವಾಗಿ ಶವಪೆಟ್ಟಿಗೆಯಲ್ಲಿ ಮುಚ್ಚಿ, ಶಾಸ್ತ್ರೋಕ್ತವಾಗಿ ಸಮಾಧಿ ಮಾಡಿದರು. 


· ಇನ್ನಾ

Wednesday, 7 August 2019

ಕಥಾದನಿ


- ಇನ್ನಾ

ಟಿಕೇಟ್ ಕಳೆದುಕೊಂಡ ಮುಲ್ಲಾನಸ್ರುದ್ದೀನ್! ಒಮ್ಮೆ ಮುಲ್ಲಾನಸ್ರುದ್ದೀನ, ರೈಲುಪ್ರಯಾಣ ಮಾಡುತ್ತಿದ್ದ. ತನ್ನ ಕಂಪಾರ್ಟಮೆಂಟ್ ಟಿಕೇಟ್ ಕಲೆಕ್ಟರ್ ಬರುತ್ತಿರುವುದನ್ನ ದೂರದಿಂದ ಗಮನಿಸಿದ ಮುಲ್ಲಾ, ಸಹ ಪ್ರಯಾಣಿಕರ ಜೇಬುಗಳಲ್ಲಿ,ಚೀಲಗಳಲ್ಲಿ ತನ್ನ ಟಿಕೇಟ್‍ನ್ನು ಹುಡುಕತೊಡಗಿದ.
ಮುಲ್ಲಾನ ಈ ವರ್ತನೆಯನ್ನು ನೋಡಿ ಆಶ್ಚರ್ಯಚಕಿತನಾದ ಸಹ ಪ್ರಯಾಣಿಕನೊಬ್ಬ ಪ್ರಶ್ನೆಮಾಡಿದ.
“ಹಿರಿಯರೆ ನಿಮ್ಮ ಟಿಕೇಟು ನಿಮ್ಮ ಜೇಬು ಅಥವಾ ನಿಮ್ಮ ಚೀಲದಲ್ಲಿರಬೇಕಲ್ಲವೆ? ನೀವು ಅಲ್ಲಿ ಬಿಟ್ಟು ಬೇರೆಲ್ಲ ಕಡೆ ಹುಡುಕುತ್ತಿದ್ದೀರಲ್ಲ"
“ಹೌದು ನಾನು ಅಲ್ಲಿ ಹುಡುಕಬಹುದಿತ್ತು ಆದರೆ ಟಿಕೇಟು ಅಲ್ಲಿ ಸಿಗದಿದ್ದರೆ ನನ್ನ ಎಲ್ಲ ಭರವಸೆಯೂ ನಾಶವಾಗಿಬಿಡುತ್ತದಲ್ಲ"ಮುಲ್ಲಾ ಉತ್ತರಿಸಿದ.
———————

"That’s fine, but while you’re making a contribution I’m making a real commitment!”

ಕೋಳಿ ಮತ್ತು ಹಂದಿ ರೈತನೊಂದಿಗೆ ಜೀವಿಸುತ್ತಿದ್ದವು. ಅವರೆಡಕ್ಕೂ ರೈತನೆಂದರೆ ಪಂಚಪ್ರಾಣ. ಏಕೆಂದರೆ ರೈತನು ಅವುಗಳನ್ನು ತುಂಬ ಪ್ರೀತಿಸುತ್ತಿದ್ದ ಮತ್ತು ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದ. ಒಂದು ದಿನ ಕೋಳಿಯು ಹಂದಿಯ ಬಳಿಗೆ ಬಂದು "ರೈತನು ನಮ್ಮನ್ನು ಎಷ್ಟೂ ಪ್ರೀತಿಯಿಂದ ನೋಡಿಕೊಳ್ಳುತ್ತಾನೆ ಅಲ್ವಾ; ಅವನಿಗೆ ನಾವೆಂದ್ರೆ ಪಂಚಪ್ರಾಣ, ಅವನಿಗೆ ನಾವೇನಾದರೂ ಕೊಡಬೇಕು" ಎಂದು ಹೇಳಿತ್ತು. ಹಂದಿ ಪ್ರತ್ಯತ್ತರವಾಗಿ "ಹೌದೌದು, ರೈತ ನಮ್ಮನ್ನು ಪ್ರೀತಿಯಿಂದ ಆರೈಕೆ ಮಾಡುತ್ತಾನೆ, ನೀನು ಹೇಳಿದ ಹಾಗೆ, ಅವನ ಪ್ರೀತಿಗೆ ಪ್ರತಿಯಾಗಿ ನಾವು ಎನಾದರೂ ಕೊಡಲೇಬೇಕು ,, ಆದರೆ ಏನು ಕೊಡುವುದು?" ಎಂದು ಹಂದಿಯು ಕೋಳಿಯನ್ನು ಕೇಳಿತ್ತು.
ಕೋಳಿಯು ಸ್ವಲ್ಪ ಹೊತ್ತು ಯೋಚಿಸಿ. ನಮ್ಮ ಯಜಮಾನಿಗೆ ಬೆಳಗಿನ ಉಪಹಾರವೆಂದರೆ ತುಂಬಾ ಇಷ್ಟ. ಅದನ್ನು ತುಂಬಾ ಆನಂದಿಸುತ್ತಾನೆ. ಅದಕ್ಕಾಗಿ ನಾನು ನನ್ನ ಕೆಲವು ಮೊಟ್ಟೆಗಳನ್ನು ಕೊಡುತ್ತೇನೆ. ಆದರೆ ಮೊಟ್ಟೆಗಳಿಂತ ಹ್ಯಾಮ್ (ಹಂದಿ ಮಾಂಸದಿಂದ ತಯಾರಿಸಿದ ಪದಾರ್ಥ) ಅಂದ್ರೆ ರೈತನಿಂದ ತುಂಬಾ ಇಷ್ಟ.ಅದಕ್ಕಾಗಿ ನೀನು ರೈತನಿಗೆ ಹ್ಯಾಮ್ ಕೊಡು ಎಂದು ಹೇಳುತ್ತಿದಂತೆ, ಹಂದಿ ಯೋಚಿಸಿ ಹೇಳಿತಂತೆ ""that’s fine, but while you’re making a contribution I’m making a real commitment!”
———————————-

ಅವಳು ನನ್ನನ್ನು ಗುರುತಿಸದೆ ಇರಬಹುದು. ಆದರೆ ನಾನು ಅವಳನ್ನು ಗುರುತಿಸುತ್ತೀನಲ್ಲ
ಅರುಳುಮರಳು ಕಾಯಿಲೆ ಅಂತಿಮ ಹಂತದಲ್ಲಿರುವ ತನ್ನ ಹೆಂಡತಿಯನ್ನು ಸಮರ್ಪಕವಾಗಿ ನೋಡಿಕೊಳ್ಳಲು ಸಾಧ್ಯವಿಲ್ಲ ಎಂದು ಗಂಡನಿಗೆ ತಿಳಿದಿತ್ತು. ಆದರೂ ಅವನು ಅವಳಿಗೆ ಬೇಕಾದಂತಹ ಎಲ್ಲಾ ರೀತಿಯ ಸೌಲಭ್ಯಗಳ ಏರ್ಪಾಡು ಮಾಡಿದ್ದ ಮತ್ತು ಪ್ರತಿದಿನ ಅವಳನ್ನು ಸರಿಯಾಗಿ ಮಧ್ಯಾಹ್ನ ಊಟದ ಸಮಯದಲ್ಲಿ ಭೇಟಿ ಮಾಡುತ್ತಿದ್ದ.
ಒಂದು ದಿನ ಅವನಿಗೆ ರಸ್ತೆಯಲ್ಲಿ ಸಣ್ಣ ಅಪಘಾತವಾಗಿ ಆಸ್ಪತ್ರೆಗೆ ಸೇರಿಸಲಾಯಿತ್ತು. ಪ್ರಜ್ಞೆ ಬಂದು ತುರ್ತುಕೋಣೆಯಲ್ಲಿರುವ ವಾಸ್ತವ ಅವನಿಗೆ ತಿಳಿಯಿತ್ತು. ಮಧ್ಯಾಹ್ನ ಊಟದ ಸಮಯ ಸಮೀಪಿಸುತ್ತಿದ್ದಂತೆ ಅವನಲ್ಲಿ ಚಡಪಡಿಕೆ ಪ್ರಾರಂಭವಾಯಿತ್ತು, ಅವನ ತೋಳ ಗಾಯಕ್ಕೆ ಹೊಲಿಗೆ ಹಾಕಲು ದಾದಿಯೊಬ್ಬರು ಬಂದಾಗ, "ನಾನು ಹೊರಡಬೇಕು," ಅವನು ಜೋರಾಗಿ ಹೇಳಿದ. "ನಿಮ್ಮ ಗಾಯಗಳಿಗೆ ಇನ್ನೂ ಜೌಷದಿ ಹಾಕಬೇಕು.treatment ಇನ್ನೂ ಮುಗಿದಿಲ್ಲ" ಎಂದು ಅವಳು ಅವನಿಗೆ ಹೇಳಿದಳು. "ಆದರೆ ನಾನು ಮಧ್ಯಾಹ್ನ ನನ್ನ ಹೆಂಡತಿಯನ್ನು ಭೇಟಿ ಮಾಡಬೇಕು" ಎಂದು ಅವನು ಹೇಳಿದ. "ಸರಿ" ಎಂದ ಅವಳು ನಿಧಾನವಾಗಿ ಅವನಿಗೆ, "ಕ್ಷಮಿಸಿ, ಇಂದು ಸ್ವಲ್ಪ ತಡವಾಗಬಹುದು."ಎಂದು ಹೇಳಿದಳು.
ಆ ವ್ಯಕ್ತಿ ತನ್ನ ಹೆಂಡತಿಗಿರುವ ಕಾಯಿಲೆ ಕಥೆಯನ್ನು ದಾದಿಗೆ ಸವಿಸ್ತಾರವಾಗಿ ಹೇಳಿದ. ಜತೆಗೆ ಅವನು ಪ್ರತಿ ಮಧ್ಯಾಹ್ನ ಹೆಂಡತಿಯನ್ನು ಕಾಣಲು ಹೋದಾಗ, "ಅವಳು ನನ್ನನ್ನು ಗುರುತೇ ಹಚ್ಚುವುದಿಲ್ಲ, ನಾನು ಯಾರೆಂದು ಸಹ ಅವಳಿಗೆ ತಿಳಿಯುವುದಿಲ್ಲ" ಎಂದು ಹೇಳುತ್ತಾನೆ. ಅದಕ್ಕೆ ಪ್ರತ್ಯುತ್ತರವಾಗಿ, "ನೀವು ಯಾರೆಂದು ಗುರುತಿಸಲಾಗದ ಹೆಂಡತಿಯ ಬಗ್ಗೆ ಏಕೆ ಅಷ್ಟೂ ತಲೆ ಕೆಡಿಸಿಕೊಳ್ಳುತ್ತೀರಾ. ಇವತ್ತು ಅವಳನ್ನು ನೋಡಲು ಸ್ವಲ್ಪ ತಡ ಮಾಡಿ ಹೋದ್ರು, ಏನು ಆಗಲ್ಲ..ಸ್ವಲ್ಪ ವಿಶ್ರಾಂತಿ ತೆಗೆದುಕೊಳ್ಳಿ" ಎಂದು ಹೇಳುತ್ತಿದಂತೆ, "ಇಲ್ಲ ನಾನು ಹೋಗಲೇ ಬೇಕು. ಅವಳು ನನ್ನನ್ನು ಗುರಿತಿಸದೆ ಇರಬಹುದು. ಆದರೆ ನಾನು ಅವಳನ್ನು ಗುರುತ್ತಿಸುತ್ತೀನಲ್ಲ" ಎಂದು ಹಾಸಿಗೆ ಬಿಟ್ಟು ಹೊರನಡೆದನಂತೆ.



Friday, 12 July 2019

ಕಥಾದನಿ

ನಾನು ನಡೆಯುತ್ತಾ ಅವಳನ್ನು ನೋಡುತ್ತಿದ್ದೆ…
ಇಬ್ಬರು ಯುವ ಸನ್ಯಾಸಿಗಳು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದರು. ಜೊತೆ ಜೊತೆಗೆ ಹೆಜ್ಜೆ ಹಾಕುತ್ತಿದಂತೆ ಅವರು ನಡೆಯುತ್ತಿದ್ದ ದಿಕ್ಕಿಗೆ ವಿರುದ್ಧವಾಗಿ ಒಂದು ಸುಂದರ ಯುವತಿ ನಡೆದುಕೊಂಡು ಬರುತ್ತಿದ್ದನ್ನು ಕಂಡ ಸನ್ಯಾಸಿಗಳ ಕಣ್ಣುಗಳು ಆ ಹುಡುಗಿಯ ಮೇಲೆ ನಾಟಿತ್ತು. ಹುಡುಗಿಯನ್ನು ನೋಡುತ್ತಾ ನಡೆಯುತ್ತಿದ್ದ ಒಬ್ಬ ಸನ್ಯಾಸಿ ಎಡವಿ ಬಿದ್ದನು. ಎಡವಿ ಬಿದ್ದ ಸನ್ಯಾಸಿ ಇನ್ನೊಬ್ಬ ಸನ್ಯಾಸಿಯನ್ನು ಕೇಳಿದ;

ಅಲ್ಲ ನಾವಿಬ್ಬರೂ ಆ ಹುಡುಗಿಯನ್ನು ನೋಡುತ್ತಾ ನಡೆಯುತ್ತಿದ್ದೇವು, ಆದರೆ ನಾನು ಮಾತ್ರ ಎಡವಿ ಬಿದ್ದೆ, ನೀನು ಎಡವಿ ಬೀಳಲಿಲ್ಲ. ಅದು ಹೇಗೆ” ಎಂದು ಪ್ರಶ್ನಿಸಿದ. ಪ್ರತ್ಯುತ್ತರವಾಗಿ ಇನ್ನೊಬ್ಬ ಸನ್ಯಾಸಿ ಹೇಳಿದ… ”ನೀನು ಅವಳನ್ನು ನೋಡುತ್ತಾ ನಡೆದೆ, ನಾನು ನಡೆಯುತ್ತಾ ಅವಳನ್ನು ನೋಡುತ್ತಿದ್ದೆ…”

ಮಾತನಾಡುವಾಗ ಎಚ್ಚರ ವಹಿಸು

ಒಬ್ಬ ರೈತ ತನ್ನ ನೆರೆಮನೆಯವರಿಗೆ ಬಾಯಿಗೆ ಬಂದಂತೆ ಬೈದ. ಅನಂತರ ತಪ್ಪಿನ ಅರಿವಾಗಿ ಚರ್ಚಿನ ಪಾದ್ರಿಯ ಬಳಿಗೆ ತೆರಳಿ ಕ್ಷಮೆ ಕೋರಿದ. ಪಾದ್ರಿ ಅವನಿಗೆ, ಒಂದು ಚೀಲದ ತುಂಬ ಗರಿಗಳನ್ನು ತುಂಬಿ ನಗರದ ಮಧ್ಯಭಾಗದಲ್ಲಿ ಸುರಿಯುವಂತೆ ಹೇಳಿದ. ರೈತ ಹಾಗೇ ಮಾಡಿದ. ಮತ್ತೆ ಆ ಗರಿಗಳನ್ನು ಆಯ್ದು ಚೀಲಕ್ಕೆ ತುಂಬುವಂತೆ ಪಾದ್ರಿ ಸೂಚಿಸಿದ. ಮಾತಿನಂತೆ ನಡೆದುಕೊಳ್ಳಲು ಯತ್ನಿಸಿದನಾದರೂ ಗರಿಗಳೆಲ್ಲ ಗಾಳಿಯಲ್ಲಿ ಹಾರಿ ಹೋಗಿದ್ದರಿಂದ ವಿಫಲನಾದ. ಖಾಲಿ ಚೀಲದಲ್ಲಿ ಮರಳಿದ ರೈತನಿಗೆ ಪಾದ್ರಿ ಹೇಳಿದ – “ನೀನು ಆಡಿದ ಮಾತುಗಳೂ ಹೀಗೆಯೇ. ಮಾತುಗಳನ್ನೇನೋ ಆಡಿದ್ದೀಯ. ಆದರೆ ಅವನ್ನೆಲ್ಲ ವಾಪಸ್ ಪಡೆಯಲು ಈಗ ಸಾಧ್ಯವೇ? ಆದ್ದರಿಂದ ಮಾತನಾಡುವಾಗ ಎಚ್ಚರ ವಹಿಸು”

ಸಂಗ್ರಹ - ಇನ್ನಾ



Friday, 7 June 2019

ಕಥಾದನಿ

'ಓದೋದಕ್ಕೂ ಬರೆಯೋದಕ್ಕೂ ಗೊತ್ತಿಲ್ಲದ ಅನಕ್ಷರಸ್ಥನಿಗೆ ನಾನು ಒಂದೇ ಕ್ಷಣದಲ್ಲಿ ಓದುಬರಹ ಕಲಿಸಬಲ್ಲೆ'. ಹಾಗಂತ ಹೇಳ್ತಾ ಫಕೀರನೊಬ್ಬ ಊರು ತುಂಬ ಓಡಾಡ್ತಿದ್ದ. ನಸ್ರುದ್ದೀನ್‌ ಅವನ ಬಳಿಗೆ ಓಡಿದ. 'ನನಗೆ ಕಲಿಸು' ಅಂದ. 

ಫಕೀರ ನಸ್ರುದ್ದೀನನ ತಲೆಯ ಮೇಲೆ ಕೈಯಿಟ್ಟು ಧ್ಯಾನಿಸಿದ. 'ಈಗ ನಿಂಗೆ ಓದೋಕೆ ಬರುತ್ತೆ ಹೋಗು' ಅಂದ. 

ಅದಾಗಿ ಅರ್ಧಗಂಟೆಗೆ ವಾಪಸ್ಸು ಬಂದ ನಸ್ರುದ್ದೀನ್‌, ಆ ಫಕೀರನಿಗೋಸ್ಕರ ಊರಲ್ಲೆಲ್ಲ ಹುಡುಕತೊಡಗಿದ. 

'ಏನಾಯ್ತಪ್ಪ... ಓದೋದು ಕಲಿಸ್ತೀನಿ ಅಂತ ಫಕೀರ ಚೆನ್ನಾಗಿ ನಾಮ ಹಾಕಿದ್ನಾ?' ದಾರಿಹೋಕನೊಬ್ಬ ಕೇಳಿದ. 

'ಹಂಗೇನಲ್ಲ, ಚೆನ್ನಾಗೇ ಓದೋದಕ್ಕೆ ಬರುತ್ತೆ. ಓದೋಕ್‌ ಬಂದಿದ್ರಿಂದಲೇ ಆ ಫಕೀರನ್ನ ಹುಡುಕ್ತಿರೋದು ನಾನು. ಎಲ್ಹೋದ ಆ ಮೋಸಗಾರ.' 

'ಇದೇನಪ್ಪ ಹೀಗ್‌ಮಾತಾಡ್ತಿದ್ದೀಯ. ನಿಂಗೆ ಒಂದೇ ನಿಮಿಷದಲ್ಲಿ ಓದೋಕೆ ಕಲಿಸಿದೋನನ್ನ ಮೋಸಗಾರ ಅಂತಿದ್ದೀಯಲ್ಲ. ಸರೀನಾ ಇದು?' 

'ಹೌದು ಮತ್ತೆ. ನಾನು ಓದೋಕೆ ಎತ್ತಿಕೊಂಡ ಪುಸ್ತಕದ ಮೊದಲನೇ ಸಾಲಲ್ಲೇ, 'ಎಲ್ಲಾ ಫಕೀರರೂ ಶುದ್ಧ ಮೋಸಗಾರರು' ಅಂತ ಬರೆದಿತ್ತು'. 

------------ 

ಮುಲ್ಲಾ ನಸ್ರುದ್ದೀನ್ ಪ್ರವಚನ ನೀಡುತ್ತಾನೆ ಅಂದರೆ ಊರಿಗೆ ಊರೇ ಬಂದು ಸೇರುತ್ತಿತ್ತು. ಅವನು ಉದಾಹರಣೆ ಸಹಿತವಾಗಿ ವಿಷಯಗಳನ್ನು ವಿವರಿಸುವುದು ಅವರಿಗೆ ಖುಷಿ ಕೊಡುತ್ತಿತ್ತು. ಜನರಿಗೆ ಖುಷಿಯಾಗಲೆಂದು ನಸ್ರುದ್ದೀನ್ ಕೂಡಾ ಉತ್ಸಾಹದಲ್ಲಿ ಏನೋ ಒಂದು ಹೇಳಿಬಿಡುತ್ತಿದ್ದ. 

ಆ ದಿನ ನಸ್ರುದ್ದೀನ್ ಮಾತನಾಡುತ್ತಾ, “ನೀವು ರೊಟ್ಟಿಯ ಒಂದು ಬದಿಗೆ ಬೆಣ್ಣೆ ಹಚ್ಚಿ ಮೇಲಕ್ಕೆ ಎಸೆಯಿರಿ. ನೀವು ಹೇಗೇ ಎಸೆದರೂ ಕೆಳಕ್ಕೆ ಬಿದ್ದಾಗ ಬೆಣ್ಣೆ ಹಚ್ಚಿದ ಬದಿ ಮೇಲಕ್ಕೇ ಇರುತ್ತದೆ” ಎಂದ. 

ಜನರೆಲ್ಲಾ ಅತ್ಯಂತ ಆಸಕ್ತಿಯಿಂದ ಕೇಳಿಕೊಂಡರು. ರೊಟ್ಟಿಯನ್ನು ಎಸೆದಂತೆಯೂ, ಬೆಣ್ಣೆ ಹಚ್ಚಿದ ಬದಿಯೇ ಮೇಲೆ ಬಂದಂತೆಯೂ ಕಲ್ಪಿಸಿಕೊಂಡರು. 

ಆ ಸಭಿಕರಲ್ಲಿ ಒಬ್ಬ ಹುಡುಗನಿಗೆ ಮಾತ್ರ ಅದನ್ನು ನಂಬಲಾಗಲಿಲ್ಲ. ಪರೀಕ್ಷೆ ಮಾಡಿಯೇಬಿಡೋಣ ಅಂದುಕೊಂಡು ತನ್ನ ಬಳಿಯಿದ್ದ ರೊಟ್ಟಿಗೆ ಬೆಣ್ಣೆ ಹಚ್ಚಿ ಮೇಲಕ್ಕೆ ಎಸೆದ. ಆ ರೊಟ್ಟಿ ಕೆಳಗೆ ಬಿತ್ತು. ಆದರೆ ನಸ್ರುದ್ದೀನ್ ಹೇಳಿದಂತೆ ಬೆಣ್ಣೆ ಹಚ್ಚಿದ ಬದಿ ಮೇಲಕ್ಕಿರದೆ, ಕೆಳಗೆ ಮುಖ ಮಾಡಿಕೊಂಡು ಮಣ್ಣಾಯಿತು. ಹುಡುಗ ಅದನ್ನು ತೆಗೆದುಕೊಂಡು ನಸ್ರುದ್ದೀನನ ಮುಂದೆ ಹಿಡಿಯುತ್ತಾ, 'ಎಲ್ಲಿ? ನೀವು ಹೇಳಿದಂತೆ ಆಗಲಿಲ್ಲವಲ್ಲ! ಬೆಣ್ಣೆ ಹಚ್ಚಿದ ಬದಿ ಕೆಳಮುಖವಾಗಿದೆಯಲ್ಲ! ನೀವು ಹೇಳುವುದೆಲ್ಲಾ ಸುಳ್ಳು' ಎಂದ. 

ನಸ್ರುದ್ದೀನ್ ಚೂರೂ ಕಂಗೆಡದೆ ಮುಗುಳ್ನಗುತ್ತಾ, 'ನಾನು ಹೇಳಿದ್ದು ಸರಿಯಾಗೇ ಇದೆ. ನೀನು ತಪ್ಪು ಬದಿಗೆ ಬೆಣ್ಣೆ ಹಚ್ಚಿದ್ದೀಯ ಅಷ್ಟೇ’ ಅಂದ! 

(ಕೃಪೆ https://aralimara.com) 

ಸಂಗ್ರಹ - ಇನ್ನಾ 

Sunday, 12 May 2019

ಕಥಾದನಿ - ¨ ಇನ್ನಾ

ಪೀತಿ ಎಂಬ ಔಷಧಿಯನ್ನು ಇನ್ನಷ್ಟು ಹೆಚ್ಚಿಸು ಅಷ್ಟೇ..
ಜಗತ್ತಿನಲ್ಲಿ ತುಂಬಿ ತುಳುಕುತ್ತಿರುವ ಸಮಸ್ಯೆಗಳ ಪರಿಹಾರಕ್ಕೆ ಔಷಧಿ ಎನು? ಶಿಷ್ಯ ಗುರುವನ್ನು ಕೇಳಿದ. “ಎಲ್ಲಾ ಸಮಸ್ಯೆಗಳ ಪರಿಹಾರಕ್ಕೆ ಇರುವ ಒಂದೇ ಒಂದು ಔಷಧಿ ಎಂದರೆ ಪ್ರೀತಿ ಅಂದರೆ ಪ್ರೀತಿಸುವುದು” ಗುರು ಉತ್ತರಿಸಿದ. ಶಿಷ್ಯ ಗೊಂದಲಗೊಂಡ. ಪುನಃ ಕೇಳಿದ “ಈ ಪ್ರೀತಿಯು ಸಹ ಸಮಸ್ಯೆಗಳಿಗೆ ಪರಿಹಾರ ಕೊಡಲು ವಿಫಲವಾದರೇ?” ಗುರು ಸಮಾಧಾನದಿಂದ ಹೇಳಿದ “ ಪ್ರೀತಿ ಎಂಬ ಜೌಷಧಿಯನ್ನು ಇನ್ನಷ್ಟು ಹೆಚ್ಚಿಸು ಅಷ್ಟೇ..”

ನನ್ನನ್ನು ಸಹ ಒಳಹೊಗಲು ಅವರು ಬಿಡುತ್ತಿಲ್ಲ!
ಪಾಪಿಯೊಬ್ಬ ದೇವರಿಗೆ ದೂರು ಕೊಟ್ಟ “ ದೇವರೇ ನನ್ನನ್ನು ಜನರು ಬಹಿಷ್ಕರಿಸಿದ್ದಾರೆ ಚರ್ಚ್ ಒಳಗೆ ನನ್ನನ್ನು ಬಿಡುತ್ತಿಲ್ಲ…” ಪಾಪಿಯ ವೇದನೆಯನ್ನು ಆಲಿಸಿದ ದೇವರು “ಎಂತದು ನಿನ್ನ ದೂರು! ನನ್ನನ್ನು ಸಹ ಚರ್ಚ್ ಒಳಗೆ ಹೋಗಲು ಅವರು ಬಿಡುತ್ತಿಲ್ಲ!” ಎಂದು ದುಃಖದಿಂದ ನುಡಿದರಂತೆ.

ನಾನು ಕೊಡುವುದು ಹಾಲಾದರೂ, ಅದನ್ನು ಕೊಡುವುದು ನಾನು ಬದುಕಿರುವಾಗ
ಹಂದಿ ಮತ್ತು ಹಸುವಿನ ನಡುವೆ ಒಂದು ಚರ್ಚೆ ಅರಂಭವಾಯಿತು. ಹಂದಿ ಹಸುಗೆ ಹೇಳಿತ್ತು “ನೀನು ಜನರಿಗೆ ಕೇವಲ ಹಾಲು ಮಾತ್ರ ಕೊಡ್ತೀಯ, ನಾನಾದರೊ ನನ್ನನ್ನೇ ಸಂಪೂರ್ಣವಾಗಿ ಅವರಿಗೆ ಕೊಡುತ್ತೀನಿ… ಕೊನೆಗೆ ನನ್ನ ಕರುಳನ್ನು ಸಹ ಅವರು ಬಿಡುವುದಿಲ್ಲ… ಆದರೂ ಜನರು ನಿನ್ನನ್ನೇ ಹೆಚ್ಚು ಗೌರವಿಸುತ್ತಾರಲ್ಲ ಅದು ಹೇಗೆ?”
ಆಗ ಹಸು ಹೇಳಿತು: “ನೀನು ಎಲ್ಲವನ್ನು ಕೊಡೋದು ನೀನು ಸತ್ತ ಮೇಲೆ.. ನಾನು ಕೊಡುವುದು ಹಾಲಾದರೂ, ಅದನ್ನು ಕೊಡುವುದು ನಾನು ಬದುಕಿರುವಾಗ…ಅದಕ್ಕೆ ಜನರು ನಿನಗಿಂತ ನನ್ನನ್ನು ಹೆಚ್ಚಾಗಿ ಗೌರವಿಸುತ್ತಾರೆ”




Friday, 5 April 2019

ಕಥಾದನಿ - ಇನ್ನಾ

ಕವಿಯೊಬ್ಬ ಗುರುವಿನ ಬಗ್ಗೆ ಪುಸ್ತಕವೊಂದನ್ನು ಬರೆಯಲು ಮಠಕ್ಕೆ ಬಂದು 'ನೀವು ಮಹಾಜ್ಞಾನಿ, ಪ್ರತಿಭಾವಂತರೆಂದು ಜನ ಅಂದುಕೊಳ್ಳುತ್ತಾರೆ. 'ನೀವು ಮಹಾಜ್ಞಾನಿಯೇ?' ಎಂದು ಕೇಳುತ್ತಾನೆ. 

‘ನೀನೂ ಹಾಗೆ ಭಾವಿಸಬಹುದು' ಎಂದು ನಸುನಗುತ್ತಾ ನುಡಿಯುತ್ತಾರೆ ಗುರು. 

‘ಮತ್ತೆ ಒಬ್ಬ ಮಹಾಜ್ಞಾನಿ, ಹೇಗಾಗುತ್ತಾನೆ’ ಎಂಬುದು ಬರಹಗಾರನ ಸಂದೇಹ. 

’ಕಾಣುವ ಸಾಮರ್ಥ್ಯ ಹೊಂದಿದ್ದರೆ ಸಾಕು' ಎಂದುತ್ತರಿಸುತ್ತಾರೆ ಗುರು. 

ಕವಿಗೆ ಗೊಂದಲವಾಗುತ್ತದೆ. ತಲೆ ಕೆರೆದುಕೊಳ್ಳುತ್ತಾ ಅವನಂದುಕೊಳ್ಳುತ್ತಾನೆ 'ಕಾಣುವುದಾದರೂ ಏನನ್ನು?' 

ಆಗ ಗುರು ಸಾವಕಾಶವಾಗಿ ಅಷ್ಟೇ ಸ್ಪಷ್ಟವಾಗಿ 'ಹುಳುವಿನೊಳಗಿನ ಚಿಟ್ಟೆಯನ್ನು, ಮೊಟ್ಟೆಯೊಳಗಿನ ಗಿಡುಗವನ್ನು, ಸ್ವಾರ್ಥಿ ಮನದೊಳಗಿನ ಸಂತನನ್ನು, ಸಾವಿನೊಳಗಿನ ಜೀವವನ್ನು, ಬೇರ್ಪಟ್ಟವುಗಳಲ್ಲಿ ಒಗ್ಗಟ್ಟನ್ನು, ದೈವತ್ವದೊಳಗೆ ಮಾನವತ್ವವನ್ನು ಮತ್ತು ಮನುಷ್ಯನೊಳಗಿನ ದೈವತ್ವವನ್ನು ಕಾಣಬೇಕು' ಎನ್ನುತ್ತಾರೆ. 

ಆಚೆನ್ ಬಿಷಪರಾದ ಕ್ಲಾಸ್ ಹೆಮೆರ್ಲೆಯವರು ತಾವು ಸಾಯುವ ಸಮಯ ಸನ್ನಿಹಿತವಾದಾಗ ಉತ್ಥಾನಕಾಲದ ಪರಿಪತ್ರ (ಈಸ್ಟರ್ ಲೆಟರ್)ವನ್ನು ಬರೆಯುತ್ತಾ 'I wish each of us Easter eyes: ಸಾವಿನಲ್ಲಿ ಬದುಕ ಕಾಣೋಣ, ತಪ್ಪಿನಲ್ಲಿ ಕ್ಷಮೆ ಕಾಣೋಣ, ಒಡೆದು ಹೋದವು ಒಂದಾಗುವುದ ಕಾಣೋಣ, ಪರಿತಾಪದಲ್ಲಿ ಜಯವನ್ನು ಕಾಣೋಣ, ಮನುಜರಲ್ಲಿ ದೇವರ ಕಾಣೋಣ, ದೇವರಲ್ಲಿ ಮನುಷ್ಯನನ್ನು ಕಾಣೋಣ ಹಾಗೆಯೇ ನಾನು ಎಂಬಲ್ಲಿ ನೀವು ಎಂಬುದ ಕಾಣೋಣ' 

ನಿನ್ನೆ ಆತಂಕವಿತ್ತು, ಇವತ್ತು ಧೈರ್ಯ ಬಂದಿದೆ, ನಾಳೆ ನೆಮ್ಮದಿ ಸಿಗುತ್ತದೆ 

ಜಪಾನಿನಲ್ಲಿ ಅಣುವಿನ ವಿಕಿರಣ ಎಲ್ಲರನ್ನೂ ತತ್ತರಿಸಿಬಿಟ್ಟಿತು. ಆದರೆ ಇಂದು ಬಹುಪಾಲು ಜಪಾನಿಯರಿಗೆ ನೆನಪಿರುವುದು, ಅಲ್ಲಿನ ಸಾವಲ್ಲ. ಪುನರುತ್ಥಾನ. ಒಬ್ಬ ಜಪಾನಿ ಹೇಳಿದ್ದ, "ನಾವು ಸಾವು ನೋವಿನ ಬಗ್ಗೆ ಯೋಚಿಸುತ್ತಿಲ್ಲ, ಮತ್ತೆ ಪುನರುತ್ಥಾನಗೊಳ್ಳುವ ಬಗ್ಗೆ ಯೋಚಿಸುತ್ತಿದ್ದೇವೆ". ಜಪಾನಿಯರು ಪುನರುತ್ಥಾನದ ಬಗ್ಗೆ ಯೋಚಿಸುವುದು ಇದೇ ಮೊದಲಲ್ಲ. 1948ರಲ್ಲಿ ಅಣುಬಾಂಬಿನ ವಿನಾಶದ ಧೂಳನ್ನು ಕೊಡವಿ ಮತ್ತೆ ಎದ್ದುಬಂದರು.ಕೇವಲ ಎದ್ದುಬರಲಿಲ್ಲ, ಹೊಸ ಮನುಷ್ಯರಾಗಿ ಪುನರುತ್ಥಾನ ಹೊಂದಿದರು. ಈಗ ಹಿರೋಶಿಮಾವಲ್ಲ, ಪುಕುಶಿಮಾ ಮತ್ತೆ ಪುನರುತ್ಥಾನಗೊಳ್ಳುತ್ತಿದೆ. ನಾಲ್ಕು ರಿಯಾಕ್ಟರುಗಳು ಸಿಡಿದ ಮೇಲೆ ಪರಿಸ್ಥಿತಿ ಹೇಗಿದೆ ಎಂದು ಕೇಳಿದವರಿಗೆ ಒಬ್ಬ ಪತ್ರಕರ್ತ ಹೇಳಿದ." ನಿನ್ನೆ ಆತಂಕವಿತ್ತು, ಇವತ್ತು ಧೈರ್ಯ ಬಂದಿದೆ, ನಾಳೆ ನೆಮ್ಮದಿ ಸಿಗುತ್ತದೆ." 

ಅಮೂಲ್ಯವಾದ ನಿಧಿ 

ಪ್ರವಾಸಿಗರ ಗುಂಪೊಂದು ಬಸ್ಸನಲ್ಲಿ ಸುಂದರ ಮನೋಹರವಾದ ದೇಶವನ್ನು ಹಾದು ಹೋಗುತ್ತಿದ್ದಾರೆ: ಸುಂದರ ಕೆರೆ ಸರೋವರಗಳು, ಹಸಿರು ಮಲೆನಾಡು, ಅತ್ಯಾಕರ್ಷಕ ಪರ್ವತ ಶ್ರೇಣಿಗಳು, ಮನಸೆಳೆಯುವ ಝರಿಗಳು.ಆದರೆ ಪ್ರವಾಸಿಗರಿಗೆ ಮಾತ್ರ ಬಸ್ಸಿನ ಕಿಟಕಿಯಾಚೆಗೆ ಏನಿದೆ ಎಂಬುವುದರ ಬಗ್ಗೆ ಬೇಕಿಲ್ಲ. ಪ್ರಯಾಣದ ಎಲ್ಲಾ ಸಮಯವನ್ನು ಬಸ್ಸುನಲ್ಲಿ ಗೌರಯುತ ಆಸನ ಯಾರಿಗೆ ಸಿಗುತ್ತದೆ? ಜನರ ಪ್ರಶಂಸೆ ಯಾರಿಗೆ ಸಿಗುತ್ತದೆ? ಹೀಗೆ ಇಂತಹ ಚಿಂತೆಗಳಲ್ಲಿ ಮಗ್ನರಾಗಿ ಪ್ರಯಾಣವನ್ನು ಮುಗಿಸುತ್ತಾರೆ..!!! 

Friday, 1 March 2019

ಏನೂ ಹೇಳುವುದಿಲ್ಲ. ಸುಮ್ನೆ ಕೇಳಿಸಿಕೊಳ್ಳುತ್ತಾರೆ

ಏನೂ ಹೇಳುವುದಿಲ್ಲ. ಸುಮ್ನೆ ಕೇಳಿಸಿಕೊಳ್ಳುತ್ತಾರೆ
ಪತ್ರಕರ್ತ: ನೀವು ಪ್ರಾರ್ಥನೆಗೆ ಕೂತಾಗ ದೇವರಿಗೆ ಏನು ಹೇಳುತ್ತೀರಿ?

ಸನ್ಯಾಸಿನಿ: ನಾನು ಏನೂ ಹೇಳುವುದಿಲ್ಲ, ಸುಮ್ನೆ ಕೇಳಿಸಿಕೊಳ್ಳುತ್ತೇನೆ.

ಪತ್ರಕರ್ತ: ಹಾಗಾದರೆ, ದೇವರು ನಿಮಗೆ ಏನು ಹೇಳ್ತಾರೆ?

ಸನ್ಯಾಸಿನಿ: ಏನೂ ಹೇಳುವುದಿಲ್ಲ. ಸುಮ್ನೆ ಕೇಳಿಸಿಕೊಳ್ಳುತ್ತಾರೆ.

ಹಾಗೇ ಸುಮ್ಮನೆ ..

ನೀವೂ ನಿಮ್ಮ ಕೋಣೆಯನ್ನು ಬಿಟ್ಟುಹೋಗಬೇಕಿಲ್ಲ. ಕುರ್ಚಿಯ ಮೇಲೆ ಕುಳಿತುಕೊಂಡೇ ಕೇಳಿಸಿಕೊಳ್ಳಿ. ಕೇಳಿಸಿಕೊಳ್ಳುವುದು ಬೇಡ, ಸುಮ್ನೆ ಕಾಯಿರಿ, ಸ್ತಬ್ಧವಾಗಿ ಎಕಾಂಗಿಯಾಗಿರಿ… ಜಗತ್ತೇ ನಿಮಗೆ ಅರ್ಪಿಸಿಕೊಳ್ಳುತ್ತಾ ಬಯಲಾಗಿಬಿಡುವುದು, ಅದು ಭಾವಪರವಶತೆಯಿಂದ ನಿಮ್ಮ ಕಾಲುಗಳ ಮೇಲೆ ಉರುಳಾಡುವುದು….


ಹೃದಯದಿಂದ ಸಹ ಕೇಳಬೇಕು

ಶಿಷ್ಯ: ಜಗತ್ತಿನ ವಾಸ್ತವವನ್ನು ತಿಳಿಯುವುದಾದರೂ ಹೇಗೆ? ಯಾವುದು ನಮ್ಮನ್ನು ಜಗದ ವಾಸ್ತವದಿಂದ ದೂರ ಮಾಡುತ್ತದೆ?

ಗುರುಗಳು: ಯಾವಾಗಲೂ ಪೂರ್ಣ ಹೃದಯದಿಂದ ಎರಡೂ ಕಡೆಗಳಿಂದಲೂ ಕೇಳು, ಆಗ ನಿನಗೆ ಜ್ಞಾನೋದಯವಾಗುವುದು… ಕೇವಲ ಒಂದೇ ಕಡೆಯಿಂದ ಕೇಳಿದರೆ ಅದು ನಿನ್ನನ್ನು ಕತ್ತಲೆಗೆ ದೂಡಿಬಿಡುವುದು…

ಆಲಿಸುವುದನ್ನು ಗುರುತಿಸಲು ಚೀನಿಯರು ಎರಡು ವಿಭಿನ್ನ ಚಿಹ್ನೆಗಳನ್ನು ಬಳಸುತ್ತಾರಂತೆ: ಒಂದು ಕಿವಿ ಮತ್ತೊಂದು ಹೃದಯ. ನಾವು ನಿಜವಾಗಿಯೂ ಆಲಿಸಲು ಕಿವಿಗಳನ್ನು ಮಾತ್ರ ಬಳಸಿದರೆ ಸಾಲದು … ಹೃದಯದಿಂದ ಸಹ ಕೇಳಬೇಕು.



¨ ಇನ್ನಾ



ಎತ್ತಿತೋರಿಸಲಾದ ಪೋಸ್ಟ್

ಅನ್ನಮ್ಮ’ಳಿಗೆ ೨೫೦ರ ಹಾಗೂ ಅತಿ.ವಂ.ಪೊತ್ತಕಮೂರಿಗೆ ೫೦ರ ಸ್ಮರಣೆಯ ಸಂಭ್ರಮ

ಬೆಂಗಳೂರಿನ ಉತ್ತರಹಳ್ಳಿಯ ಅನ್ನಮ್ಮನ ಬೆಟ್ಟ, ಅಲ್ಲಿನ ಅನ್ನಮ್ಮಳ ಸಮಾಧಿ, ಆ ಬೆಟ್ಟದ ಮೇಲಿನ ಶಿಲುಬೆ, ಅಲ್ಲಿ ಪ್ರತಿವರ್ಷ ತಪಸ್ಸು ಕಾಲದ ಐದನೇ ಭಾನುವಾರ ನಡೆಯುವ ಯೇಸು...