Friday, 18 December 2020

ಕಥಾದನಿ

ಮುಲ್ಲಾ ನಸ್ರುದ್ದೀನನಿಗೆ ಅಂದು ಬೆಳಗ್ಗೆಯೇ ಮದುವೆ ನಡೆಯಿತು. ಅದೇ ರಾತ್ರಿ ನದಿಯ ಈ ದಡದಿಂದ ಆ ದಡಕ್ಕೆ ಮುಲ್ಲಾ ನಸ್ರುದ್ದೀನ್ ಮತ್ತು ಅವನ ವಧು ನೆಂಟರಿಷ್ಟರೊಂದಿಗೆ ದೋಣಿಯಲ್ಲಿ ಪ್ರಯಾಣ ಮಾಡುತ್ತಿದ್ದರು. ಆಗ ದಿಢೀರನೆ ಬಿರುಗಾಳಿ ಬಂದೆರಗಿತು. ನದಿಯಲ್ಲಿ ಪ್ರವಾಹ ಬಿರುಸಾಗಿದ್ದಿತು. ಇವರೆಲ್ಲ ಪ್ರಯಾಣ ಮಾಡುತ್ತಿದ್ದ ದೋಣಿ ತಲ್ಲಣಿಸಿ ಹುಲ್ಲಿನಂತೆ ಅಲುಗಾಡಿತು. ಹೊಸ ಗಂಡಹೆಂಡತಿಯಾದಿಯಾಗಿ ದೋಣಿಯಲ್ಲಿ ಇದ್ದ ಎಲ್ಲರಿಗೂ ಮರಣಭಯ ಆವರಿಸಿಕೊಂಡಿತು! ಆದರೆ ಮುಲ್ಲಾ ಮಾತ್ರ ಯಾವ ಭಯವೂ ಇಲ್ಲದೆ ಶಾಂತವಾಗಿದ್ದ. ಇದನ್ನು ಗಮನಿಸಿದ ಅವನ ಹೆಂಡತಿ, “ನಿಮಗೆ ಭಯವೆನ್ನಿಸ್ತಾ ಇಲ್ವಾ?” ಎಂದು ಗಂಡನನ್ನು ಅಚ್ಚರಿಯಿಂದ ಕೇಳಿದಳು.

ಮುಲ್ಲಾ ನಸ್ರುದ್ದೀನ್ ಯಾವ ಉತ್ತರವನ್ನೂ ನೀಡದೆ ತನ್ನ ಸೊಂಟದಲ್ಲಿದ್ದ ಕತ್ತಿಯನ್ನು ತೆಗೆದು ಹೆಂಡತಿಯ ಗಂಟಲನ್ನು ಚುಚ್ಚಿ ಇರಿಯುವ ಹಾಗೆ ಹತ್ತಿರ ಬಂದ. ಹೆಂಡತಿ ವಿಚಲಿತಳಾಗಲಿಲ್ಲ. ಆಗ ಮುಲ್ಲಾ ನಸ್ರುದ್ದೀನ್ ತನ್ನ ಹೆಂಡತಿಯನ್ನು ನೋಡಿ ಕೇಳಿದ: “ಯಾಕೆ, ನಿಂಗೆ ಸ್ವಲ್ಪಾನೂ ಭಯ ಆಗ್ಲಿಲ್ವಾ?” ಅದಕ್ಕೆ ಅವನ ಹೆಂಡತಿ, “ಈ ಕತ್ತಿಯೇನೂ ಖಂಡಿತವಾಗಿಯೂ ತುಂಬಾ ಅಪಾಯಕಾರಿಯಾದ್ದೇ ಆಗಿರಬಹುದು. ಆದರೆ ಅದನ್ನು ಹಿಡಿದುಕೊಂಡಿರುವವರು ನನ್ನ ಮೇಲೆ ತುಂಬಾ ಪ್ರೀತಿ-ಪ್ರೇಮ ಆಸೆ ಇಟ್ಟಿರೊ ನನ್ನ ಗಂಡ. ಆದ್ದರಿಂದ ನನಗೆ ಭಯವಾಗಲಿಲ್ಲ' ಎಂದಳು.

ಹಾಗೆಯೇ ನನಗೂ, ಈ ಬಿರುಗಾಳಿ ಅಲೆಗಳು ಬೇಕಾದರೆ ಅಪಾಯಕಾರಿ ಯಾಗಿರಬಹುದು. ಆದರೆ ಇದನ್ನು ಆಡಿಸುತ್ತಿರುವ ಅಲ್ಲಾಹ್ ಕರುಣಾಮಯಿ, ಆದ್ದರಿಂದ ನನಗೆ ಭಯ ಇಲ್ಲ ಎಂದ ಮುಲ್ಲಾ    ನಸ್ರುದ್ದೀನ್.

================

ಮುಲ್ಲಾ ನಸ್ರುದ್ದೀನ್ ಒಂದು ದಿವಸ ದುಃಖದಿಂದ ಕುಳಿತುಕೊಂಡಿದ್ದ. ಮುಲ್ಲಾನನ್ನು ನೋಡಲು ಆತ್ಮೀಯ ಸ್ನೇಹಿತ “ಯಾಕೆ ಶೋಕದಿಂದ್ದೀಯ? ಎಂದು ಕೇಳಿದ. ಮುಲ್ಲಾ ಅಳುವುದಕ್ಕೆ ಪ್ರಾರಂಭಿಸಿಬಿಟ್ಟ. “ನನ್ನ ಮಾವ ತಮ್ಮ ಹೆಸರಲ್ಲಿದ್ದ ಆಸ್ತಿಯನ್ನೆಲ್ಲ ನನ್ನ ಹೆಸರಿಗೆ ಬರೆದಿಟ್ಟು ಬಿಟ್ಟು ಸತ್ತುಹೋದರು! ಅದನ್ನು ಯೋಚಿಸಿಯೇ ಅಳುತ್ತಿದ್ದೇನೆ” ಎಂದ ಮುಲ್ಲಾ

ನಿನ್ನ ಮಾವ ನಂಗೊತ್ತು. ಅವರಿಗೆ ಎಂಬತ್ತು ವರ್ಷ ವಯಸ್ಸಾಗಿತ್ತಲ್ಲ... ಸಾವು ಸಹಜವಾದದ್ದುತಾನೇ ? ಅದಕ್ಕೋಸ್ಕರ ಯಾಕೆ ಇಷ್ಟೊಂದು ದುಃಖ? ನಿಜ ಹೇಳಬೇಕಾದರೆ, ಅವರ ಅಷ್ಟೊಂದು ಆಸ್ತಿ ನಿನಗೆ ಬರುತ್ತಿರುವುದಕ್ಕೆ ನೀನು ಸಂತೋಷಪಡಬೇಕು” ಎಂದು ಮುಲ್ಲಾನಿಗೆ ಮಿತ್ರ ಸಾಂತ್ವನ ಹೇಳಲು ಪ್ರಯತ್ನಿಸಿದ. ಆದರೆ ಮುಲ್ಲಾ “ನನ್ನ ದುಃಖ ನಿನಗರ್ಥವಾಗೋದಿಲ್ಲ ಮಿತ್ರ! ಹೋದ ವಾರವೇ ನನ್ನ ಚಿಕ್ಕಪ್ಪ, ನನ್ನ ಹೆಸರಿಗೆ ಒಂದು ಲಕ್ಷದಷ್ಟು ಆಸ್ತಿ ಬರೆದಿಟ್ಟು ಸತ್ತುಹೋದರು" ಎಂದು ಹೇಳಿ ಇನ್ನೂ ಜೋರಾಗಿ ಸದ್ದು ಮಾಡುತ್ತ ಅಳತೊಡಗಿದ. ಆ ಮಿತ್ರನಿಗೆ ಆಶ್ಚರ್ಯ! “ನಿನ್ನ ಚಿಕ್ಕಪ್ಪನವರೂ ನಂಗೊತ್ತು... ಅವರಿಗೂ ಎಂಬತ್ತೈದು ವರ್ಷ ವಯಸ್ಸು... ಹಣ ಬಂದದ್ದನ್ನು ತಿಳಿದು ಸಂತೋಷಪಡೋ ಬದ್ಲು ಮಂಗನ ಹಾಗೆ ಹೀಗೆ ಅಳ್ತಿದ್ದೀಯಲ್ಲ?'' ಎಂದು ಮಿತ್ರ ಬೇಸರದಿಂದ ಕೇಳಿದ. “ನನ್ನ ದುಃಖ ಇನ್ನೂ ದೊಡ್ಡದು. ನನ್ನ ನೂರು ವರ್ಷ ವಯಸ್ಸಿನ ತಾತ ಎರಡು ಲಕ್ಷಕ್ಕೂ ಹೆಚ್ಚು ಆಸ್ತಿಯನ್ನು ನನ್ನ ಹೆಸರಿಗೆ ಬರೆದಿಟ್ಟು ನಿನ್ನೆ ಸತ್ತುಹೋದರು' ಎಂದ ಮುಲ್ಲಾ. ಮಿತ್ರನಿಗೆ ಕೋಪವೇ ಬಂತು. “ನನಗರ್ಥಾನೇ ಆಗ್ತಿಲ್ಲ. ನೀನು ಯಾಕಾದ್ರೂ ಅಳ್ತಿದ್ದೀಯಾ ತಿಳೀತಿಲ್ಲ” ಎಂದ,

ಮುಲ್ಲಾ ಕಣ್ಣುಗಳನ್ನು ಒರೆಸಿಕೊಳ್ಳುತ್ತ ಹೇಳಿದ: “ಹಣವಂತರಾದ ನನ್ನ ಮಾವ, ಚಿಕ್ಕಪ್ಪ, ತಾತ ಎಲ್ಲರೂ ಸತ್ತುಹೋದ್ರು. ಇನ್ನು ಮೇಲೆ ನನ್ನ ಹೆಸರಿಗೆ ಆಸ್ತಿ ಬರೆಯೋದಕ್ಕೆ ಯಾರೂ ಉಳಿದಿಲ್ವಲ್ಲ!”

ಸಂಗ್ರಹ ಇನ್ನಾ

No comments:

Post a Comment

ಎತ್ತಿತೋರಿಸಲಾದ ಪೋಸ್ಟ್

ಅನ್ನಮ್ಮ’ಳಿಗೆ ೨೫೦ರ ಹಾಗೂ ಅತಿ.ವಂ.ಪೊತ್ತಕಮೂರಿಗೆ ೫೦ರ ಸ್ಮರಣೆಯ ಸಂಭ್ರಮ

ಬೆಂಗಳೂರಿನ ಉತ್ತರಹಳ್ಳಿಯ ಅನ್ನಮ್ಮನ ಬೆಟ್ಟ, ಅಲ್ಲಿನ ಅನ್ನಮ್ಮಳ ಸಮಾಧಿ, ಆ ಬೆಟ್ಟದ ಮೇಲಿನ ಶಿಲುಬೆ, ಅಲ್ಲಿ ಪ್ರತಿವರ್ಷ ತಪಸ್ಸು ಕಾಲದ ಐದನೇ ಭಾನುವಾರ ನಡೆಯುವ ಯೇಸು...