ಫಾದರ್ ಸ್ಟ್ಯಾನಿ ಬ್ಯಾಪ್ಟಿಸ್ಟ್ :
ದಿವಂಗತ ವಂದನೀಯ ಫಾದರ್ ಬ್ಯಾಪ್ಟಿಸ್ಟ್
ಜನಿಸಿದ್ದು ಚಿಕ್ಕಮಗಳೂರಿನಲ್ಲಿ. ಇವರು ಒಬ್ಬ
ಸರಳ ಕನ್ನಡಭಿಮಾನಿ. ಚುರುಕು ನಡಿಗೆ, ಹೆಗಲಿಗೊಂದು ಚೀಲ, ಎಲ್ಲರೊಡನೆಯೂ ಸರಳವಾಗಿ ಬೆರೆಯುವ ಗುಣ,
ಮಾತು ಮಾತಿಗೂ
ಹಾಸ್ಯ, ಎಲ್ಲವೂ ಒಬ್ಬರಲ್ಲೇ
ಮೇಳೈಸಿರುವ ಅಪರೂಪದ ವ್ಯಕ್ತಿ ದಿವಂಗತ ವಂದನೀಯ ಫಾದರ್ ಬ್ಯಾಪ್ಟಿಸ್ಟ್ ಎಂಬುದಾಗಿ ಅವರೊಂದಿಗೆ
ಹತ್ತಿರದ ಒಡನಾಟವನ್ನು ಹೊಂದಿದ್ದ ಅವರ ಆಪ್ತರೊಬ್ಬರಿಂದ ನಾ ಕೇಳಿದ ಮಾತು. ಮಾತೃಭಾಷೆ ಕೊಂಕಣಿಯೇ
ಆಗಿದ್ದರೂ ಕನ್ನಡಕ್ಕಾಗಿ ಕೊನೆವರೆಗೂ ದುಡಿದು,
ಮಡಿದ ಒಬ್ಬ
ಧೀಮಂತ ಮಾನವೀಯ ಹೃದಯಿಯಾಗಿದ್ದರು. ಫಾದರ್‍ರವರು ತುಂಬಾ ಸರಳ, ಸೃಜನಶೀಲ ಹಾಗೂ ಶಾಂತ ಸ್ವಭಾವದವರಾಗಿದ್ದರು. ಅವರು ಆಗಾಧವಾದ ಜ್ಞಾನವನ್ನು ಸಂಪಾದಿಸಿದ್ದರೂ
ಒಂದು ಕ್ಷಣವೂ ಸಮಯ ವ್ಯರ್ಥ ಮಾಡುತ್ತಿರಲಿಲ್ಲ. ಸಮಯದ ಬೆಲೆಯನ್ನು ಚೆನ್ನಾಗಿ ಅರಿತಿದ್ದರು. ಸಮಯ
ಸಿಕ್ಕಾಗಲೆಲ್ಲಾ ನಿರಂತರವಾಗಿ ಅನೇಕ ಪುಸ್ತಕಗಳನ್ನು ಓದಿ ಜ್ಞಾನಾರ್ಜನೆ ಮಾಡಿಕೊಳ್ಳುತ್ತಿದ್ದರು.
ಇಪ್ಪತ್ತನೆಯ ಶತಮಾನ ಕನ್ನಡ ಸಾಹಿತ್ಯ ಚರಿತ್ರೆಯ
ಸುವರ್ಣಯುಗ. ಈ ಯುಗದಲ್ಲಿ ಅವತರಿಸಿದಷ್ಟು ಕವಿ ಸಾಹಿತಿ ವೃಂದ ಮತ್ತು ವೈಭವಯುತ ವೈವಿಧ್ಯಮಯ
ಮೌಲ್ಯ ಸಂಪನ್ನ ಕೃತಿರಾಶಿ ಹಿಂದೆಂದೂ ಕಾಣದ್ದು. ಜಗತ್ತಿನ ಅತ್ಯುತ್ತಮ ಸಾಹಿತಿ ಹಾಗೂ ಸಾಹಿತ್ಯ
ಕೃತಿಗಳು, ವಿಮರ್ಶೆ, ಮೀಮಾಂಸೆ, ಸಂಶೋಧನಾ ಸಾಹಿತ್ಯ, ವಿಚಾರ ಸಾಹಿತ್ಯ ಮತ್ತು ಮಹಾಕಾವ್ಯ ಹೀಗೆ ಎಲ್ಲಾ ಪ್ರಕಾರಗಳಲ್ಲಿಯೂ ಅದ್ಭುತ ಕಾರ್ಯ
ನಡೆದಿತ್ತು ಆ ಅವಧಿಯಲ್ಲಿ. ಈ ನಿಟ್ಟಿನಲ್ಲಿ
ಕನ್ನಡ ಸಾಹಿತ್ಯದ ಮಟ್ಟಿಗೆ ವಂ.ಫಾ.ಸ್ಟ್ಯಾನಿ ಬ್ಯಾಪ್ಟಿಸ್ಟ್‍ರವರ ಹೆಸರು ಅತ್ಯುನ್ನತವಾದದ್ದು.
ಅವರೋರ್ವ ಕನ್ನಡಾಭಿಮಾನಿ. ಕನ್ನಡ ಕ್ರೈಸ್ತ ಸಾಹಿತ್ಯವನ್ನು ಕುರಿತ ಅವರ ಲೇಖನಗಳು ಮತ್ತು ಭಾಷಣ
ಕೇವಲ ಸ್ವಾರ್ಥತೆಯ ಅಂಧಾಭಿಮಾನ ಭಾವುಕತೆಯ ಫಲಗಳಲ್ಲ;
ವೈಚಾರಿಕ
ಪ್ರವೃತ್ತಿ, ಲೋಕಾನುಭವ, ವಿವೇಕಯುತವಾದ ದೂರದೃಷ್ಟಿ ಹಾಗೂ ಸಾತ್ವಿಕ ಧರ್ಮ-ನಿಷ್ಠೆಯಿಂದ ಪ್ರೇರಿತವಾದವು.
ಕನ್ನಡವೆನ್ನುವುದು ಅವರ ಪಾಲಿಗೆ ಒಂದು ಮಹಾಶಕ್ತಿ,
ಒಂದು
ದಿವ್ಯಮಂತ್ರ, ಒಂದು ಜನಾಂಗದ ಆಶೋತ್ತರಗಳ, ಸೃಜನಶೀಲ ಪ್ರತಿಭೆಯ ಆತ್ಮ ತೇಜಸ್ಸಿನ ಚಿಹ್ನೆ ಎಂಬುದು ಅವರ ಜೀವನ ಚರಿತ್ರೆಯನ್ನು ಅಧ್ಯಾಯನ
ಮಾಡುವಾಗÀ ತಿಳಿದ ವಿಚಾರ. ಕವಿ
ಕುವೆಂಪುರವರ- ‘ಕನ್ನಡ ಎನೆ ಕುಣಿದಾಡುವುದೆನ್ನೆದೆ,
ಕನ್ನಡ ಎನೆ
ಕಿವಿ ನಿಮಿರುವುದು’ ಎಂಬ ಕವಿತೆ ಫಾದರ್ ಸ್ಟ್ಯಾನಿ ಬ್ಯಾಪ್ಟಿಸ್ಟ್‍ರವರಿಗೆ ಸಲ್ಲುತ್ತದೆ.
ಕನ್ನಡದವರ ಪಾಲಿಗೆ ದಿವಂಗತರು ನಿಧಿಯಂತೆ. ಕರ್ನಾಟಕ ಕ್ರೈಸ್ತ ವಲಯದಲ್ಲಿ ಅದರಲ್ಲೂ ಬೆಂಗಳೂರು
ಮಹಾಧರ್ಮಕ್ಷೇತ್ರಕ್ಕೆ ಸಂಬಂಧಪಟ್ಟಂತೆ ಫಾದರ್ ಸ್ಟ್ಯಾನಿ ಬ್ಯಾಪ್ಟಿಸ್ಟ್‍ರವರ ಕೊಡುಗೆ
ಅಧ್ಬುತವಾದುದು.
ಕವಿ ವಾಣಿಯಲ್ಲಿ ಹೇಳುವುದಾದರೆ ‘ಸತ್ತಂತಿಹರನು
ಬಡಿದೆಚ್ಚರಿಸು, ಕಚ್ಚಾಡುವವರನು ಕೂಡಿಸಿ
ಒಲಿಸು, ಹೊಟ್ಟೆಯ ಕಿಚ್ಚಿಗೆ ಕಣ್ಣೀರ್
ಸುರಿಸು, ಒಟ್ಟಿಗೆ ಬಾಳುವ ತೆರದಲ್ಲಿ
ಹರಸು’. ಫಾದರ್ ಸ್ಟ್ಯಾನಿ ಬ್ಯಾಪ್ಟಿಸ್ಟ್ ಓರ್ವ ಛಲವಾದಿ. ತಾನು ನಿರ್ಧರಿಸಿದ್ದನ್ನು ಹೇಗಾದರೂ
ಪೂರೈಸಬೇಕೆಂಬ ಹಂಬಲ ಅವರದು. ಕನ್ನಡ ಕಥೋಲಿಕ ಬೈಬಲ್ಲಿನ ಭಾಷಾಂತರದಲ್ಲಿ ಅವರು ವಹಿಸಿದ ಮಹತ್ತರ
ಪಾತ್ರದಿಂದ ಇಂದು ಕಥೋಲಿಕ ಬೈಬಲ್ ನಮ್ಮ ಕೈ ಸೇರಿದೆ. ಅಂತೆಯೇ ಅವರಲ್ಲಿದ್ದ ಸಮಯ ಪ್ರಜ್ಞೆ ಹಾಗೂ
ಕರ್ತವ್ಯ ಪ್ರಜ್ಞೆಯು ಮನಸೂರೆಗೊಳ್ಳುವಂಥದ್ದು. ಇವರು ಕನ್ನಡಕ್ಕಾಗಿ ಹೋರಾಡಿದ ಮತ್ತು ಕಾರ್ಯ
ನಿರ್ವಹಿಸಿದ ಅಗ್ರಗಣ್ಯರಲ್ಲಿ ಒಬ್ಬರು ಎಂಬುದಕ್ಕೆ ಅವರು ನೀಡಿರುವ ಕೊಡುಗೆಗಳು ಸಾಕ್ಷಿಯಾಗಿವೆ.
ಅವುಗಳಲ್ಲಿ ಕೆಲವೆಂದರೆ, ಕನ್ನಡದ ಬೈಬಲ್, ಭಕ್ತಿಗೀತೆಗಳು, ಧರ್ಮೋಪದೇಶದ ಪುಸ್ತಕ, ದೊಡ್ಡ ಜಪದ ಪುಸ್ತಕ ಮತ್ತು
ಬೈಬಲಿನ ಸ್ತ್ರೀಯರು ಮತ್ತು ಇನ್ನು ಮುಂತಾದವು.
ಇವರು ಕನ್ನಡ ಹೋರಾಟದಲ್ಲಿ ಸುಮಾರು 50 ವರ್ಷಗಳಿಂದಲೂ ತಮ್ಮನ್ನು
ತೊಡಗಿಸಿಕೊಂಡಿದ್ದರೆನ್ನುವುದು ಹೆಮ್ಮೆಪಡುವಂತಹ ವಿಷಯ. ಅಂದು ಬಲಿಪೂಜೆಯಲ್ಲಿ ಲ್ಯಾಟಿನ್
ಭಾಷೆಯಲ್ಲಿ ಹೇಳುತ್ತಿದ್ದ ಎಲ್ಲಾ ವಿಷಯಗಳನ್ನು ಕನ್ನಡದಲ್ಲಿ ಭಾಷಾಂತರಿಸಿದ ಮೊದಲ
ವ್ಯಕ್ತಿಯಾಗಿದ್ದರು ಜೊತೆಗೆ ಕನ್ನಡ ಹೋರಾಟಗಾರರಾಗಿದ್ದರು. ತಮ್ಮ ಇಡೀ ಜೀವನವನ್ನೇ ಕನ್ನಡ
ಹೋರಾಟಕ್ಕೆ ಮುಡುಪಾಗಿಟ್ಟ ಶಿಸ್ತಿನ ವ್ಯಕ್ತಿಯಾಗಿದ್ದರು. ಮಳೆ, ಚಳಿ, ಬಿಸಿಲೆನ್ನದೆ ಸದಾ ಕಾರ್ಯೋನ್ಮುಖರಾಗಿದ್ದರು. ಕರ್ನಾಟಕ ಕ್ರೈಸ್ತರ ಹಕ್ಕು
ಬಾಧ್ಯತೆಗಳನ್ನು ಉಳಿಸಿಕೊಳ್ಳಲು ಕರ್ನಾಟಕದಲ್ಲಿ ಕನ್ನಡಿಗರಲ್ಲದೆ ಇನ್ಯಾರು ಹೋರಾಟ ಮಾಡ್ತಾರೆ
ಇದಕ್ಕಾಗಿ ನಾವೇನು ಬೇರೆ ರಾಜ್ಯಗಳಿಗೆ ಹೋಗಾಬೇಕಾಗುತ್ತಾ? ಎನ್ನುತ್ತಿದ್ದ ಅವರ ಸ್ವರವನ್ನು ಮರೆಯಲು ಸಾಧ್ಯವಿಲ್ಲ. ಕನ್ನಡ ಸಾಹಿತ್ಯದ ಬಗ್ಗೆ ಅವರು
ಮಾತಾಡುವಾಗಲೆಲ್ಲಾ ನಮ್ಮಲ್ಲಿ ಇನ್ನೂ ಅನೇಕ ಪುಸ್ತಕಗಳು ಬರಬೇಕಾದರೆ ನಾವು ಯುವ ಸಾಹಿತಿಗಳನ್ನು ಪ್ರೋತ್ಸಾಹಿಸಬೇಕು, ಕೃತಿ-ಕಾವ್ಯ, ವಿಚಾರಗಳನ್ನು ಬರೆದು
ಎಲ್ಲರಿಗೂ ತಲುಪಿಸಬೇಕು, ಹೀಗೆ ಮಾಡದಿದ್ದರೆ ನಮ್ಮ
ಜನಕ್ಕೆ ವಿಷಯಗಳು ಹೇಗೆ ಗೊತ್ತಾಗಲು ಸಾಧ್ಯ?
ಎಂದು
ಧೈರ್ಯದಿಂದ ತಮ್ಮ ಮನಸ್ಸಿನ ತುಡಿತವನ್ನು ಮುಚ್ಚುಮರೆ ಇಲ್ಲದೆ ಹೇಳುತ್ತಿದ್ದರಂತೆ. ಧಾರ್ಮಿಕ
ಗುರುಗಳಾಗಿ ಧಾರ್ಮಿಕ ವಿಧಿ-ವಿಧಾನಗಳ ಆಚರಣೆಯ ಕರ್ತವ್ಯದ ಜೊತೆಗೆ ಸಾಹಿತ್ಯ ಕ್ಷೇತ್ರದಲ್ಲಿ ಅವರು
ತಮ್ಮನ್ನೇ ತೊಡಗಿಸಿಕೊಂಡು ಸಾಹಿತ್ಯ ಕೃಷಿಯೊಂದಿಗೆ ಕ್ರೈಸ್ತ ಕನ್ನಡ ಸಾಹಿತ್ಯವನ್ನು
ಶ್ರೀಮಂತಗೊಳಿಸಿದ್ದಾರೆ. ಭಾಷಾಂತರ ಮತ್ತು ಇತರ ಕೃತಿಗಳಲ್ಲಿ ತಮ್ಮನ್ನೇ ತೊಡಗಿಸಿಕೊಂಡು
ಸಾಹಿತ್ಯಪ್ರಿಯರಿಗೆ ಆದರ್ಶನೀಯ ಗುರುವಾಗಿದ್ದಾರೆ.
ತಮ್ಮ ಮಾತೃಭಾಷೆ ಕೊಂಕಣಿಯಾದರೂ ಕರ್ನಾಟಕದ ಜನತೆಯನ್ನು
ಕ್ರಿಸ್ತನೆಡೆಗೆ ಕೈಬೀಸಿ ಕರೆಯುವ ಸಲುವಾಗಿ ತಮ್ಮ ಜೀವನವನ್ನೇ ಕನ್ನಡ ಭಾಷೆಗೆ ಮೀಸಲಾಗಿಟ್ಟ
ಮಹಾನ್ ವ್ಯಕ್ತಿ ಫಾದರ್ ಸ್ಟ್ಯಾನಿ ಬ್ಯಾಪ್ಟಿಸ್ಟ್. ಯಾರು ಏನೇ ಹೇಳಲಿ ಕರ್ನಾಟಕದಲ್ಲಿ ಕನ್ನಡ
ಭಾಷೆಗೆ ಕೊಡಬೇಕಾದ ಆದ್ಯತೆಯ ಬಗ್ಗೆ ತಮ್ಮ ನಿಲುವನ್ನು ಕಿಂಚಿತ್ತೂ ಸಡಿಲಿಸದೆ ಹಟಮಾರಿ ಧೋರಣೆ
ತಳೆದು ದಿಟ್ಟತನದ ಹೋರಾಟವನ್ನು ನಡೆಸಿದ ಧೀಮಂತ
ವ್ಯಕ್ತಿ. ಕನ್ನಡ ಬೈಬಲ್ ಭಾಷಾಂತರ ಕಾರ್ಯದಲ್ಲಿ ಮೊದಲಿನಿಂದ ಕೊನೆಯವರೆಗೂ ತಮ್ಮನ್ನೇ
ತೊಡಗಿಸಿಕೊಂಡು ಸಾವಿರಾರು ಪುಟಗಳ ಹಸ್ತಪ್ರತಿಗಳನ್ನು ಬರೆದು, ತಿದ್ದಿ ಮುದ್ರಣಕ್ಕೆ ಕಳುಹಿಸುತ್ತಿದ್ದರಲ್ಲದೇ ಇನ್ನಿತರ ಧಾರ್ಮಿಕ ಪುಸ್ತಕಗಳನ್ನು ಬರೆದು
ಕರ್ನಾಟಕದ ಕ್ರೈಸ್ತರನ್ನೂ, ಕ್ರೈಸ್ತೇತರರನ್ನೂ
ಆಧ್ಯಾತ್ಮದೆಡೆಗೆ ಆಕರ್ಷಿಸಿದ ಆದರ್ಶವ್ಯಕ್ತಿ. ಕಾಟಾಚಾರಕ್ಕಾಗಲಿ, ಬಲಾತ್ಕಾರದಿಂದಾಗಲಿ ತಮ್ಮನ್ನೇ ಎಂದೂ ಕನ್ನಡದ ಪರ ವಾಲಿಸಿಕೊಂಡವರಲ್ಲ ಅಲ್ಲದೆ
ಕನ್ನಡಿಗರೊಡನೆ ಗುರುತಿಸಿಕೊಂಡವರಲ್ಲ. ಕರ್ನಾಟಕದಲ್ಲಿ ಕ್ರಿಸ್ತನ ಸಂದೇಶ ಸಾರಲು ಕನ್ನಡ ಭಾಷೆ
ಅತ್ಯಾವಶ್ಯಕ ಎಂಬುದೇ ಅವರ ಅಪ್ಪಟ ಕಾಳಜಿಯಾಗಿತ್ತು ಹಾಗೂ ಅವರ ಹೋರಾಟದ ಏಕೈಕ ಕಾರಣವಾಗಿತ್ತು.
ದಿವಂಗತ ಫಾದರ್ ಸ್ಟ್ಯಾನಿಯವರು ಯಾವೊಂದು ಭಯವಿಲ್ಲದೆ ಇದ್ದದ್ದನ್ನು ಇದ್ದಂತೆ, ಕಂಡದ್ದನ್ನು ಕಂಡಂತೆ ಹೇಳುವ ನಿಷ್ಠುರ ಶಿಸ್ತಿನ ವ್ಯಕ್ತಿತ್ವವನ್ನು ಹೊಂದಿದ್ದರು. ಇವರು
ಕನ್ನಡ ಭಾಷಾ ಪ್ರೇಮಿ, ಹಾಗೆಂದು ಯಾವ ಅನ್ಯ
ಭಾಷೆಯನ್ನೂ ತಿರಸ್ಕರಿಸಿದವರಲ್ಲ, ಕೀಳೆಂದು ಬಗೆದವರಲ್ಲ.
ಅವರಿಗೆ ಹಲವು ಭಾಷೆಗಳ ಪರಿಣತಿ ಇತ್ತು. ಆದರೆ ಕನ್ನಡ ನಾಡಿನಲ್ಲಿ ಯೇಸುವಿನ ಶುಭವಾರ್ತೆಯನ್ನು
ಕನ್ನಡದಲ್ಲಿಯೇ ಸಾರುವ ಪಣತೊಟ್ಟದ್ದರು.
=============
ಮುಂದಿನ ಸಂಚಿಕೆಯಲ್ಲಿ ಫಾದರ್.ಸ್ಟ್ಯಾನಿಬ್ಯಾಪ್ಟಿಸ್ಟ್‍ರವರ
ಸಾಹಿತ್ಯಿಕ ಕೊಡುಗೆಗಳ ಬಗ್ಗೆ ಚರ್ಚಿಸಲಾಗುವುದು.
============

No comments:
Post a Comment