ನಾನು,
ಅದೇ ಮೂಗ, ಮೂಗ ಗಾರ್ದಭ.
ಹಿಮದಲಿ ನಡೆಯುತ, ಚಳಿಯಲಿ ನಡಗುತ,
ಹಿಂದೆ ಎರಡು ಸಹಸ್ರ ವರುಷಗಳ ಹಿಂದೆ,
ಪುಟಾಣಿ ಪಟ್ಟಣ ಬೆತ್ಲೆಹೇಮ್ ಮುಟ್ಟಿದವ.
ಮತ್ತೆ ಕತ್ತೆ ಕತ್ತೆ ಏನೊಂದು ಕೆಲಸಕ್ಕೆ ಬಾರದು,
ಎಂದು ಹಂಗಿಸಿ ಜರೆಯುವುದು ನನ್ನ, ಈ ಜಗವು.
ಆದರೂ,
ಹೊರಲಾರದ
ಹೊರೆ ಹೊರೆಸಿ, ಹೊರಸಿ,
ಸಾಗುವರು ಕಲ್ಲುಮುಳ್ಳಿನ ದುರ್ಗಮ ಹಾದಿಯಲಿ.
ಹೊಡೆತ,
ಬಡಿತ, ಒದೆತ, ಬೈಗುಳದ ಬಾಳು.
ಒಂದು ಮಾತನೂ ಆಡದ ನಾನೊಬ್ಬ ಕೆಪ್ಪ,
ಮಡಿವಾಳನ ಮನೆ ಸೇರದವ, ಕೆರೆ ಕಾಣದವ,
ಯಾರೇ ಕೂಗಾಡಿದರೂ ಸುಮ್ಮನಿರುವ ಬೆಪ್ಪ.
ಆದರೂ,
ನನ್ನದೂ ಅಂತ
ರಹಸ್ಯವೊಂದಿದೆ,
ಪವಿತ್ರ ಮೌನದ ರಾತ್ರಿಯ ಕತೆಯೊಂದಿದೆ.
ಪುನೀತ ಕುಟುಂಬವನು ದಡ ಮುಟ್ಟಿಸಿದ್ದು,
ಈ ಬೈಗುಳ ತಿನ್ನುವ ಬಡಪಾಯಿ ಕತ್ತೆ, ಕತ್ತೆ.
ಗೊತ್ತಾ ಎನ್ನ ಸಂತೋಷ, ಸಂತಸದ ಗುಮಿತ,
ಆ ಪವಿತ್ರ ಮೌನದ ರಾತ್ರಿ, ಜಗವೆಲ್ಲ ಮಲಗಿತ್ತು.
ಪುನೀತ ಕುಟುಂಬ ಕೊಟ್ಟಿಗೆಯಲ್ಲಿ ತಂಗಿತ್ತು
ಕೊಟ್ಟಿಗೆಯ ಮೇಲೆ ತಾರೆಯೊಂದು ಬೆಳಗಿತ್ತು
ಹಸುಗೂಸಿನಲಿ ಅರಸನ ಕಾಣಲು ಬಂದಿತ್ತು,
ಸುಮ್ಮನಸ್ಸ್ಸುಗಳ ದೊಡ್ಡದಾದ ದಂಡೆ ಬಂದಿತ್ತು.
ಮೂರು ರಾಯರ ತಂಡ ಭೇಟಿಗಾಗಿ ಕಾದಿತ್ತು
ಕುರುಬರ,
ದನುಕರುಗಳ
ಗುಂಪು ನೆರೆದಿತ್ತು.
ಪವಿತ್ರ ಮೌನದ ರಾತ್ರಿಯಲಿ, ಆ ಸರಿ ರಾತ್ರಿಯಲಿ
ದಟ್ಟಿಯ ಹೊತ್ತ ಹಸುಗೂಸು ಹುಲ್ಲಲಿ ಮಲಗಿತ್ತು.
ಯಾರು ಏನಾದರು ಅಂದುಕೊಳ್ಳಲಿ, ಬೈಯಲಿ
ಜಗನ್ನಿಯಾಮಕನ ಹೊತ್ತ ಎನಗೆ ಬೇಸರವಿಲ್ಲ
ಅಂದಿನಿಂದ ಚಿಂತೆಯೂ ಇಲ್ಲ, ಭಯವೂ ಇಲ್ಲ.
ಜರಿದಾಡುವವರ ಮಾತಿನ ಗೊಡವೇ ಎನಗಿಲ್ಲ.
ಹೆರೋದರಸನ ಕಣ್ಣು ತಪ್ಪಿಸಿ ದಾಟಿಸಿದೆ ಗಡಿಯ
ಐಗುಪ್ತ ದೇಶವ ಮುಟ್ಟಿತು ಪುನೀತ ಕುಟುಂಬವು
ಐಸಲೇ,
ಅಲ್ಲವೇ ಅಲ್ಲ, ಅದೊಂದು ಅದೃಷ್ಟದ ದಿನ,
ರಾಜಾಧಿರಾಜ, ಜಗದ ರಕ್ಷಕನ ಹೊತ್ತು ಸಾಗಿದ ದಿನ
ಬೆನ್ನು ಸಿಂಹಾಸನವಾದ ದಿನ, ಮರೆಯಲಾಗದ ದಿನ
ಹಸಿರೆಲೆ ಹಾಸಿ, ಉಘೇ ಉಘೇ ಎಂದರು ಸಕಲ ಜನ
No comments:
Post a Comment