Friday, 18 December 2020

`ಬನ್ನಿ ಬಂಗಾರದ ಹೊಲದಾಗ' - ಎಫ್.ಎಂ. ನಂದಗಾವ

 

``ಅಯ್ಯ ಇವರೂ, ಬನ್ನಿ ಬಂಗಾರ ಬೆಳಿಸ್ಯಾರ''.

 ಮೂಲಿ ಮನಿ ಮಲ್ಲವ್ವನ ಮಗಳು ಶೈಲಾ ಜೋರಾಗಿ ಅಂದ ಈ ಮಾತು ಇಡೀ ಮನೇಸ ಮಂದಿಗೆಲ್ಲಾ ಕೇಳಿಸಿತು

 ಶೈಲಾಳ ಕೈ ಹಿಡಿದ ಮಲ್ಲವ್ವ ಮೆತ್ತಗ, ``ಸುಮ್ಮಕಿರ ನಮ್ಮವ್ವ'' ಅಂದದ್ದು ಯಾರಿಗೂ ಗೊತ್ತಾಗಲಿಲ್ಲ. ಮಗಳು ಮತ್ತ ಎಲ್ಲಾರ ಮುಂದ ಏನರ ಅಪದ್ಧ ಆಡಿಗೀಡ್ಯಾಳು ಅಂತ ಸಂಭಾಳಸಾಕ ನೋಡಿದಳು.

 ಅಂದ ಬೇಸ್ತವಾರ. ಓಣ್ಯಾನ ಮಂದಿ ಅವತ್ತ ಅನ್ನವ್ವ ಅಕ್ಕೋರ ಮನ್ಯಾಗ ಇಟ್ಟ ಕ್ರಿಸ್ಮಸ್ ಗೊಂಬಿಗೋಳ್ನ ನೋಡಾಕ ಒಬ್ಬೊಬ್ಬರ ಬರಾಕ ಹತ್ತಿದ್ದರು.

 ಮಂಟೂರ ದಾರಿ ಬನಶಂಕರಿ ಸಾಲಿಗೆ ಹೊಸದಾಗಿ ವರ್ಗ ಆಗಿ ಹೆಡ್ಡಕ್ಕೋರು ಬಂದಿದ್ದರು. ಅವರು, ಅನ್ನವ್ವಕ್ಕೊರು. ಅವರ ಹಿರ್ಯಾನೂ ಮಾಸ್ತರ. ಅವರಿಗಿನ್ನೂ ಈ ಊರಿಗೆ ವರ್ಗ ಆಗಿರಲಿಲ್ಲ. ಹಿಂಗಾಗಿ ಅವರು ಆ ಊರಾಗಿದ್ದರ, ಇವರೂ ಈ ಊರಾಗ ಇರೂವಂಗಾಗಿತ್ತು. ಎಂಟ ದಿನದ ನಾತಾಳ ಸೂಟಿನ್ನ, ಅದ ಆಗ ಒಂದ ದಿನಕ್ಕ ಇಳಿಸಿತ್ತು ಸರ್ಕಾರ. ಹಿಂಗಾಗಿ ಅನ್ನವ್ವಕ್ಕೋರ ಹಿರ್ಯಾ ಊರಾಗ ಇರಲಿಲ್ಲ.

 ಸಾಲಿ ಸಮೀಪ ಅಂತ ಮಣಿಯಾರ ಓಣಿಯೊಳಗ ಅಕ್ಕೋರು, ಹುಸೇನಪ್ಪ ಅವರ ತಂಗಿ ಮನೀನ ಬಾಡಗಿ ಹಿಡದಿದ್ದರು. ನಾಕ ಮಕ್ಕಳ ಇರೂ ಮನಿ ಸಣ್ಣದಿದ್ದರೂ ನೀರುನಿಡಿ, ಸಂಡಾಸಕ್ಕ ಅನಕೂಲ ಇತ್ತು.

 ***

 ಓಣ್ಯಾನ ಹುಡುಗರೆಲ್ಲಾ ಒಂದಾದ್ರ, ಶೈಲಾಳದ್ದು ಒಂದ ಗುಲಗಂಜಿ ತೂಕ ಹೆಚ್ಚ. ಪುರಾಣ ಕತಿ ಆಗಲಿ, ಹೊಸ ಆಟ, ಕೇಳಿಸಿಕೊಂಡ ಮಾತಾಗಲಿ ಒಟ್ಟ ಮರೀತಿರಲಿಲ್ಲ. ಬೆಳತನಕ ರಾಮಾಯಣ ಕೇಳಿದ ಹುಡುಗರು, ಮರುದಿವಸ ಮುಂಜಾನೆ ರಾಮಗ ಸೀತಾ ಏನಾಗಬೇಕು? ಅಂತ ಕೇಳಿದರ `ಹೆಂಡ್ತಿ' ಅಂತ ಬಡಬಡಿಸಿತದ್ದರ, ಶೈಲಾ ಸಂಬಂಧ ಹುಡುಕಿ `ತಮ್ಮ ಲಕ್ಷ್ಮಣಗ ಅತ್ತಿಗೆ ಆಗಬೇಕು' ಅಂತ್ಹೇಳಿ ತನ್ನ ಶ್ಯಾಣನ ತೋರಸಾಕಿ.

 ಚೋಟುದ್ದ ಸಣ್ಣ ಹುಡುಗಿ ಮಾತಂದ್ರ ಮಾರುದ್ದದ ಮಾತು. ವಯಸ್ಸಿಗಿ ಮೀರಿದ್ದ ಶ್ಯಾಣ್ಯಾಕಿ. ಆಕಿ ಒಂದೊಂದ ಮಾತ, ಒಮ್ಮೊಮ್ಮಿ ಮಲ್ಲವ್ವ ಖಜೀಲ ಆಗುವಂಗ ಮಾಡತಿದ್ದವು.

 ಅಂದ ಮೂರುಸಂಜಿ ಮುಂದ ಮನಿಮುಂದ ಕಟ್ಟಿಮ್ಯಾಲ ಕುತಗೊಂಡಿದ್ದರು. ಮಲ್ಲವ್ವ ಮತ್ತ ಮಗ್ಗಲ ಮನಿ ಕುಲಕಣ್ರ್ಯಾರ ಕಾಶಿಬಾಯಿ. ಅದು ಇದು ಮಾತಾಡ್ತ ಚವಳಿಕಾಯಿ ಸುಲಕೋತ ಕೂತಿದ್ದರು. ಕಾಶೀಬಾಯೀದು ಒಂದ ಕತೀನ. ಅಕ್ಕನ ಮಗಾ ಅನಂತಗ ಮದವಿ ಮಾಡಿ ಕೊಟ್ಟಿದ್ದರು. ಒಂದ ಬ್ಯಾಸಗಿ ದಿನಾ. ಗೆಳ್ಯಾರ ಜೋಡಿ ವೀರನಗೌಡರ ತ್ವಾಟದ ಬಾವಿಗೆ ಈಸಾಕ ಹ್ವಾದಾಂವ ಹೆಣಾ ಆಗಿ ಮನಿಗೆ ಬಂದಿದ್ದ. ತಲಿ ತಳಗ ಮಾಡಿ ಮ್ಯಾಲಿಂಗ ನೀರಾಗ ಜಿಗದಾಗ, ತಳಗ ಬಾವಿ ಕಲ್ಲಿಗೆ ನೆತ್ತಿ ಬಡದ ದೊಡ್ಡ ಪೆಟ್ಡಾಗಿತ್ತು. ಕಡೀಕ ಆಕಿಗೆ ತಲಾಟಿ ಆಗಿದ್ದ ತಮ್ಮನ ಮನೀನ ನೆಲಿ ಕೊಟ್ಟಿತ್ತು.

 ಸಾಲ್ಯಾಗ ಅದೇನ್ ಮಾತ ಬಂತೋ ಏನೋ? ಮಠಪತಿ ಮಾಸ್ತರು ಮತ್ತ ಸಂಗೀತದ ಮಸೂತಿ ಮಾಸ್ತರರು ಮಾತಾಡು ಮುಂದ `ಅಕ್ಕ ಸತ್ರ ಅಮಾಸಿ ನಿಲ್ಲಂಗಿಲ್ಲ', `ರಂಡಿ ಮನ್ಯಾಗ ಉಂಡವನ ಜಾಣ' ಅಂದಿದ್ರಂತ ಕಾಣ್ತದ.

 ಆ ಲೋಕಾರೂಢಿ ಮಾತ ಕೇಳಿಸಿಕೊಂಡ ಶೈಲಾ ``ಅಕ್ಕ ಸತ್ರ ಅಮಾಸಿ ನಿಲ್ಲಂಗಿಲ್ಲ, ಅಂದ್ರ ಏನು?'' ಅಂದಾಗ ಮಲ್ಲವ್ವ, ಹಂಗದ್ರ ಏನು ಅನ್ನೂದನ್ನ ತನಗ ತಿಳಿದಮಟ್ಟಿಗೆ ತಿಳಿಸಿ ಹೇಳಿದ್ದಳು. ಆದರ, `ರಂಡಿ ಮನ್ಯಾಗ ಉಂಡವನ ಜಾಣ'ದ ಅರ್ಥ ಹೇಳೂದಕ್ಕ ಕುರಿಕ್ವಾಣ ಬಿದ್ದಹೋಗಿತ್ತು.

 ಮತ್ತ ಇನ್ನೊಂದ ಸರ್ತಿ, ಮಣಿಯಾರ ಹುಸೇನಪ್ಪನ ತಂಗಿ ಮಗ ಸಿಕಂದರನ ಸುಂಟಿ ಕಾರ್ಯ ಮಾಡಿದಾಗ, ಪಾಪ ಹುಡುಗ ವಾರಗಟ್ಲೆ ನರ್ಮ ಆಗಿದ್ದ. ಸುಂಟಿ ಕಾರ್ಯಾ ಮಾಡು ಮುಂದ, ಹುಸೇನಪ್ಪ ಮನಿ ಮಂದ ಚಪ್ಪರ ಹಾಕಿ ಬಂಧುಬಳಗಕ್ಕ ಊಟ ಹಾಕಿಸಿದ್ದ. ಓಣ್ಯಾನ ಮಂದಿನ್ನೂ ಸಿಹಿ ಊಟಕ್ಕ ಕರಿದಿದ್ದ. ಶ್ರಾವಣ ಸೋಮವಾರ, ಎಲ್ಲಾರೂ ರಾಮತೀರ್ಥ ಜಾತ್ರಿಗೆ ಹೋಗಿದ್ದರು. ಸಂಜಿ ಮುಂದ ಜಾತ್ರಿಗೆ ಹೋದ ಮಂದಿ ಮನೀಗೆ ಬಂದಾಗ, ಸಿಹಿ ಇಟ್ಟ ತಾಟ ಕಳಿಸಿದ್ದಳು ಜೈತುನಬಿ.

 ``ಅಪ್ಪಾ ಅಪ್ಪಾ, ಸುಂಟಿ ಅಂದ್ರ ಏನು''.

 ತೂರಿಬಂದ ಶೈಲಾಳ ಪ್ರಶ್ನೆಗೆ, ಅವರಪ್ಪ ಸಿದ್ದಪ್ಪಗ ಉತ್ತರಿಸೂದ ಭಾಳ ಭಿರಿ ಆಗಿತ್ತು.

***

 ಬನ್ನಿ ಬಂಗಾರದ ಮಾತು ಎಲ್ಲೆಲ್ಲೋ ಹೋಯ್ತು. ಅಂದಂಗ ಬನ್ನಿ ಬಂಗಾರ ಅಂದ್ರ ಏನು? ಚಳಿಗಾಲ ಶರದ್ರುತು ಶುರೂ ಆಗೂ ಮುಂದ ಆಶ್ವೀಜ ಮಾಸದಾಗ ಬನ್ನಿ ಹಬ್ಬ ಬರ್ತದ. ಬರೊಬ್ಬರಿ ಹತ್ತ ದಿನ ನಡಿಯೂ ಈ ಹಬ್ಬಕ್ಕ ವಿಜಯ ದಶಮಿ, ಮಹಾನವಮಿ, ನವರಾತ್ರಿ, ದಸರಾ, ಶರನ್ನವರಾತ್ರಿ ಅಂತ್ಲೂ ಕರಿತಾರ. ಆಶ್ವೀಜ ಶುದ್ಧ ಪಾಡ್ಯಮಿ ದಿನದಿಂದ ದಶಮಿತನ ಹಬ್ಬ ಇರ್ತದ. ಮನೋಮಿ ಅಮಾಸಿ ನಂತ್ರ ಪ್ರತಿಪದೆ, ದ್ವಿತಿಯಾ, ತ್ರಿತಿಯಾ ಮೂರೂ ದಿನಾ ದುರ್ಗಾ ಪೂಜಿ, ಚತುರ್ಥಿ, ಪಂಚಮಿ, ಷಷ್ಠಿ ಮೂರೂ ದಿನಾ ಲಕ್ಷ್ಮಿ ಮತ್ತ ಸಪ್ತಮಿ, ಅಷ್ಟಮಿ, ನವಮಿ ದಿನಾ ಸರಸ್ವತಿ ಪೂಜಿ ನಡಿತದ. ಅದ ಕಾಲಕ್ಕ ಆಯುಧಗಳ, ವೃತ್ತಿ ಸಂಬಂಧಿ ಸಾಧನಗಳ, ವಾಹನಗಳ ಪೂಜೀನೂ ಇರ್ತದ. ಅದು ಖಂಡೆ ಪೂಜಿ. ದಶಮಿ ದಿನಾ ವಿಜಯದಶಮಿ ಹಬ್ಬ, ಬನ್ನಿ ಹಬ್ಬ. ಅಂದ ಹೊಲದಾಗ ಜ್ವಾಳದ ತೆನಿ, ರಂಟಿ ಇಟ್ಟ ಪೂಜಿ ಮಾಡ್ತಾರ. ಹೊಲದಾಗ ಬನ್ನಿ ಗಿಡ ಇದ್ರ ಲಕ್ಷ್ಮಿ ಇದ್ದಂಗ. ಪಾಂಡವರು ವನವಾಸಕ್ಕ ಹೊಂಟಾಗ, ತಮ್ಮ ತಮ್ಮ ಹತ್ಯಾರಗಳ್ನ ಕಾಪಾಡಾಕ್ಕ ಬನ್ನಿ ಗಿಡಕ್ಕ ಒಪ್ಪಿಸಿದ್ರಂತ. ಅಂಥಾ ಬನ್ನಿ ಗಿಡದ ಎಲೀನ್ನ ಒಬ್ಬರಿಗೊಬ್ಬರು ಕೊಟಗೊಂಡ `ನಾವೂ ನೀವೂ ಬಂಗಾರದಂಗೀರೂಣು, ಬಂಗಾರ ಕೊಟ್ಟ ಬಂಗಾರದಂಗೀರೂಣು' ಅನಕೋತ ಹಳೇದೆಲ್ಲಾ ಮರ್ತ ಒಂದಾಗೂ ಹಬ್ಬ.

 

   ಬನ್ನಿ ಮುಡಿಯೂದ ಬಂತು

   ಬಂಗಾರ ಕೊಡುವುದ ಬಂತು

   ಬಣ್ಣ, ಬಡಿವಾರ ಇಲ್ಲಾತೋ

 

 ಬನ್ನಿ ಗಿಡಕ್ಕ ಶಮೀ ಗಿಡಾನು ಅಂತಾರ. ಬನ್ನಿ ಗಿಡಾ ಇಲ್ಲದ ಕಡೆ ಆರಿ ಗಿಡದ ಎಲೀನೂ ಪೂಜಿಗೆ ಬಳಸ್ತಾರ. ಈ ಎರಡೂ ಗಿಡ ಇಲ್ಲದ ಕಡೆ ಹತ್ತಾರು ದಿನದ ಭತ್ತ, ಗೋಧಿ ಇಲ್ಲ ಜ್ವಾಳದ ಹುಲ್ಲನ್ನ `ಬಂಗಾರ, ಬನ್ನಿ' ಅಂತ ಒಬ್ಬರಿಗೊಬ್ಬರು ಹಂಚಿಕೊಳ್ಳೂ ಪದ್ಧತಿನೂ ಐತಿ. ಮಣ್ಣಿನ ಮುಚ್ಚಳದಾಗ ಬೆಳಿಯೂ ಸಸಿಗೆ ಬೋಗೋಣಿ ಡಬ್ಬ ಹಾಕಿದರ ಅವು ಹಳದಿ ಬಣ್ಣದಾಗ ಖರೆ ಖರೆ ಬಂಗಾರದ ಎಸಳಿನಂಗ ಮಿರಿಮಿರಿ ಮಿಚತಾವ. ಅವುಗಳದ್ದ ಸೊಗಸ ಸೊಗಸ.

 ಈ ಹಬ್ಬದಾಗ ಮನ್ಯಾಗ ಗೊಂಬಿ ಇಡೂ ಪದ್ಧತಿನೂ ಅದ. ಅದರಾಗ ಓಣ್ಯಾಗಿನ ಘೋರ್ಪಡೆ ಅವರ ಮನ್ಯಾನ ಗೊಂಬಿ ಇಡೂದೂ ಇನ್ನೊಂದ ನಮೂನಿ ಹಬ್ಬ ಇದ್ದಂಗ ಇರ್ತದ. ಒಂದ ಸಾರಿ ಶಿವಾಜಿ ಮಹರಾಜರ ಕಿಲ್ಲೆ ಮಾಡೂದು, ಇನ್ನೊಂದ ದಾರಿ ಕೊಯ್ನಾ ಡ್ಯಾಂ ಕಟ್ಟೋರು, ಮತ್ತೊಮ್ಮೆ ಕನ್ನಂಬಾಡಿ ಕಟ್ಟಿ ಬೃಂದಾವನ ಕಟ್ಟೋದು ಮಾಡೋರು ಅವರ ಮನ್ಯಾನ ಹುಡುಗರು.

 ಆಗಿನ್ನೂ ಅಟೋಮ್ಯಾಟಿಕ ಆಟಿಗಿಗಳ ಕಾಲ ಶುರು ಆಗಿತ್ತು. ಬೃಂದಾವನದಾನ ಕಾರಂಜಿ ಮಾಡಾಕ, ಸರ್ಕಾರಿ ದವಾಖಾನಿಯಿಂದ ತಂದ ಗುಲ್ಕೋಸ ಬಾಟಲಿ ಮತ್ತ ಪೈಪ್ ಬಳಸಿದ್ದರು. ಸಣ್ಣ ಸೂಜಿ ನೀರ ಚಿಮ್ಮಸ್ತಿತ್ತು. ನೀರು ಚಿಮ್ಮ ಕಾರಂಜಿ ನೋಡಬೇಕಂದರ ದೊಡ್ಡವರ್ನ ಜೋಡಿ ಮಾಡಕೊಂಡ ಹೋಗಬೇಕಿತ್ತು. ಸಣ್ಣವರ ಹ್ವಾದರ ಕಾರಂಜಿ ಚಾಲು ಮಡ್ತಿರಲಿಲ್ಲ. ತಹರೆವಾರಿ ಗೊಂಬಿ ಆಟಗಿ ಜೋಡಸಿ ಇಡ್ತಿದ್ದರು. ಅದೆಲ್ಲಾದರಾಗೂ ಶಿವಾಜಿ ಮಹಾರಾಜನ ಕುದುರಿ ಮತ್ತ ಶಿವಾಜೀನ ಎದ್ದ ಕಾಣ್ತಿದ್ದ.

 ಇದಲ್ಲದ ನಾಗರ ಪಂಚಮಿಗೂ ಇಂಥಾ ಎಳಿ ಸಸಿಗಳ್ನ ಬೆಳಸ್ತಾರ. ನಾಗರ ಪಂಚಮಿ ದಿನಾ ಅವನ್ನ ಕತ್ತರಿಸಿ ನಾಗಪ್ಪಗ ಏರಿಸಿ ಪೂಜಿ ಮಾಡ್ತಾರ. ಹಾಲ ಎರಿತಾರ. ಉಳಿದ ಸಸಿಗಳ್ನ ಮನಿ ಹೆಣ್ಮಕ್ಕಳು ಮುಡಕೊಳ್ತಾರ.

***

 ಹೆಡ್ಡಕ್ಕೋರು ಕ್ರೈಸ್ತರು ಅನ್ನೋದು ಸಾಲ್ಯಾಗ ಮೊದಲ ದೊಡ್ಡ ಸುದ್ದಿ ಆದಂಗ, ಅನ್ನವ್ವಕ್ಕೋರು ಕ್ರಿಸ್ಮಸ್ ಹಬ್ಬಕ್ಕ ಗೊಂಬಿ ಕೂಡಸ್ತಾರ ಅನ್ನೋದು ಮಣಿಯಾರ ಓಣ್ಯಾಗ ದೊಡ್ಡ ಸುದ್ದಿ ಆಗಿತ್ತು.

 ವಾರಗಿ ಮಕ್ಕಳ ಜೋಡಿ ಆಟಾ ಆಡೂ ಮುಂದ ಅಕ್ಕೋರ ಮಕ್ಕಳು, `ನಮ್ಮ ಮನ್ಯಾಗೂ ಗೊಂಬಿ ಅದಾವು. ನಾತಾಳ ಸೂಟ್ಯಾಗ, ಕ್ರಿಸ್ಮಸ್ ಹಬ್ಬಕ್ಕ ಗೊಂಬಿ ಕೂಡಸ್ತೀವಿ' ಅಂತ್ಲೂ ಹೇಳಿಕೊಂಡಿದ್ರು. ದೀಪಾವಳಿ ಮುಂದ ಓಣ್ಯಾಗ ಎಲ್ಲಾರ ಮನಿ ಮುಂದ ಹಣತಿ ಇಡೂದು, ಆಕಾಶ ಬುಟ್ಟು ಕಟ್ಟೂದ ನೋಡಿ `ನಾವೂ, ನಮ್ಮ ಹಬ್ಬದಾಗ ನಕ್ಷತ್ರ ತೂಗ ಬಿಡ್ತೀವಿ' ಅಂತ ಎದಿ ಉಬ್ಬಿಸಿ ಟಾಂ ಟಾಂ ಮಾಡಿದ್ದರು.

 ಕಿಸ್ಮಸ್ ಹಬ್ಬ ಬಂದಿತ್ತು. ಅನ್ನವ್ವಕ್ಕೋರ ಮನಿ ಸುಣ್ಣಾ ಬಣ್ಣಾ ಕಂಡಿತ್ತು. ಕ್ರಿಸ್ಮಸ್ ಹಬ್ಬದ ಹಿಂದಿನ ದಿನಾನ, ಅವರ ಮನಿ ಮುಂದ ಕೋಲ ಕಟ್ಟಿ ಬಿಳಿ ಬಣ್ಣದ ನಕ್ಷತ್ರ ಜೋತ ಬೀಟ್ಟಿದ್ದರು. ಸಂಜಿ ಮುಂದ ಮರಿಲಾರದ ಎಣ್ಣಿ ದೀಪಾ ಹಣತಿ ಹಚ್ಚಬೇಕು ಅಂತ ಮಗ್ಗಲಮನಿ ಹುಸೇನಿಗೆ ತಾಕೀತ ಮಾಡಿ ಹೇಳಿದ್ದರು. ಮನೇಸ ಮಂದೆಲ್ಲಾ ಹಬ್ಬದ ಪೂಜಿ ಅಂತ ಒಂದ ದಿನಾ ಮೊದಲ ವಿಜಾಪೂರದ ಚರ್ಚಿಗೆ ಹೋಗಿದ್ದರು. ಮರುದಿವಸ ಮಧ್ಯಾಹ್ನ ಬಂದ ಕೂಡ್ಲೆ, ಪಂಚಮ್ಯಾಗ ಹೆಡ್ಡಕ್ಕೋರ ಮನಿಗೆ ನೆರಮನಿಗಳಿಂದ ಉಂಡಿ, ಚಕ್ಕಲಿ, ಕರ್ಚಿಕಾಯಿ ಫರಾಳ ಬಂದಂಗ, ಹೆಡ್ಡಕ್ಕೋರ ಮನಿಯಿಂದ ಓಣ್ಯಾಗಿದ್ದವರ ಮನಿಗೆ ಕೇಕು, ಉಂಡಿ, ಚಕ್ಕಲಿ ಕರ್ಚಿಕಾಯಿ ಫರಾಳ ತಾಟ ಹೋಗಿ ಬಂದವು. ಅವಸರ ಅವಸರದಾಗ ಎಡತಾಕು ಹುಡುಗರ್ನ ತರಬಿ `ಏನದು?' ಅನ್ನವರು. ಓಣ್ಯಾನ ಮಂದೆಲ್ಲಾ ಫರಾಳ ತಾಟ ಇಸಗೊಂಡ, ಹೊಳ್ಳಿಕೊಡು ಮುಂದ, ಅದರಾಗ ಒಂದ ಹಿಡಿ ಅಕ್ಕಿ ಹಾಕಿ, ಎರಡ ಬಾಳಿ ಹಣ್ಣ ಇಟ್ಟ ವಾಪಾಸ ಕೊಡಕೋತ ``ಏನ್ ಹಬ್ಬದ ಗೊಂಬಿ ಇಟ್ಟೀರಿ?'' ಅಂತ ಪ್ರತಿಯೊಬ್ಬರೂ ಕೇಳಾವರ ಆಗಿದ್ದರು.

 ``ಸಂಜಿ ಮುಂದ ತಪ್ಪದ ಬರ್ರಿ. ಯಾಕಂದ್ರ ರಾತ್ರಿ ಬೆಳಕಿನ್ಯಾಗ ದನದ ಕೊಟ್ಟಿಗಿ, ಗೊಂಬಿಗಳು ಮತ್ತ ಗೋದಲಿ ಛಂದ ಕಾಣಸ್ತಾವ'' ಅಂತ ಹೇಳಕೋತ ಮಕ್ಕಳು, ಓಣ್ಯಾನ ಮಂದಿ ಎಲ್ಲಾರೂ ಸಂಜಿ ಮುಂದ ಅನ್ನವ್ವಕ್ಕೋರ ಮನಿಗೆ ಬರೂಹಂಗ ಮಾಡಿದ್ದರು. ಒಬ್ಬೊಬ್ಬರ ಅನ್ನವ್ವಕ್ಕೋರ ಮನಿಗೆ ಬರಾಕಹತ್ತಿದ್ದರು. ಹಂಗ ಮಲ್ಲವ್ವನ ಜೋಡಿ ಬಂದ ಶೈಲಾಗ ಜೋಡಿಸಿಟ್ಟ ಕೊಟ್ಡಗಿ, ಗೊಂಬಿಗಳ ಜೋಡಿ ಮಣ್ಣಿನ ತಾಟೊಳಗ ಬೆಳಸಿದ ಹತ್ತಾರ ದಿನಗಳ ಜ್ವಾಳದ ಬೆಳಿ ಕಣ್ಣಿಗೆ ಬಿದ್ದಿತ್ತು.

 ``ಅಯ್ಯ... ಇವರೂ ಬನ್ನಿ ಬಂಗಾರ ಬೆಳೆಸ್ಯಾರ'' ಅಂತ ಉದ್ಗಾರ ತಗದಿದ್ದಳು. ಮೂಲಿ ಮನಿ ಮಲ್ಲವ್ವ, ಶೈಲಾ ಅವರು ಬರೂದುಕ್ಕ ಮೊದಲ ಕಂಬಿ ವಿರುಪಾಕ್ಷರ ಮನಿಯಿಂದ ಕಲ್ಲೇಶಿ ಒಬ್ಬನ ಬಂದಿದ್ದ. ಉಡುಪಿ ಭಟ್ಟರ ಹೊಟೇಲಿನಮನಿ ರಮಾಬಾಯಿ ಮತ್ತ ಮಂಜು ಬಂದಿದ್ದರು. ಮಾರೋಡ್ಯಾರ ಭೂತೆ ಅವರ ಮನಿಯಿಂದ ಸತೀಶ್ ಬಂದಿದ್ದ. ಘೋರ್ಪಡೆ ಅವರ ಮನಿಯಿಂದ ವೈನಿ ಮತ್ತ ರವಿ ಮೊದಲ ಬಂದ ಕುಂತಿದ್ದರು. ಸಿಕಂದರ ಅಂತೂ ಅಲ್ಲೇ ಇದ್ದ.

 

    ಬಾಲಸ್ವಾಮಿ ಕಿರುನಗಿ ಸೂಸೂದ ನೋಡ

    ಬಾಲನರಸಿ ಕುರುಬರು ಬಂದಾರ ನೊಡ

   ಮೂರು ರಾಯರು ಬಂದು ನಮಿಸ್ಯಾರ ನೋಡ

 

 ಅನ್ನವ್ವಕ್ಕೋರ ಮಕ್ಕಳು - ರೋಜಿ, ಮೇರಿ, ಜಾರ್ಜಿ, ಫ್ರೆಂಚಿ- ಕಲ್ಲೇಶಿ, ಮಂಜು, ರವಿ, ಸಿಕಂದರ, ಕುಲಕಣ್ರ್ಯಾರ ಪ್ರಲ್ಹಾದ- ಎಲ್ಲರನ್ನೂ ಕರಕೊಂಡ, ಗೊಂಬಿಗೋಳ್ನ ಇಟ್ಟ ಸಣ್ಣ ಟೇಬಲ್ ಮುಂದ ನಿಲ್ಲಿಸಿಕೊಂಡ, ದನದ ಕೊಟ್ಟಗಿ, ಅದರಾಗಿನ ಗೊಂಬಿಗೋಳ್ನ ತೋರಸಾಕ ಹತ್ತಿದರು. `ಅದು ತಾಯಿ ಮರಿಯವ್ವನ ಗೊಂಬಿ, ಈ ಕಡೆ ಅದಲಾ, ಅದು ತಂದಿ ಜೋಸೆಫಪ್ಪನ ಗೊಂಬಿ. ನಡವಿಂದು ಬಾಲಯೇಸು ಸ್ವಾಮೀದು...' ಅಂತ ತೋರಸು ಮುಂದ ಶೈಲಾ ಈ ಉದ್ಗಾರ ತಗದಿದ್ದಳು.

 ಕೊಟ್ಟಿಗಿ ಗೊಂಬಿಗೋಳ ಜೋಡಿ ಮಣ್ಣಿನ ತಾಟೊಳಗ ಬೆಳಸಿದ ಬಿಳಿ ಮಿರಿಮಿರಿ ಮಿಂಚಾಕ ಹತ್ತಿತ್ತು.

 ``ಈ ಬನ್ನಿ ಗಿಡಾ ಇಲ್ಯಾಕ ಇಟ್ಟೀರಿ?'' ಅಂತ ಕೇಳಿದರ, ಅಕ್ಕೋರ ಮಕ್ಕಳು ಒಬ್ಬರ ಮುಖಾ ಒಬ್ಬರು ನೋಡಾಕ್ಹತ್ತಿದರು. ಅದ ಹೊತ್ತಿನ್ಯಾಗ ಒಳಗಿಂದ ಪರಾತದೊಳಗ ಎಲ್ಲಾರಿಗೂ ಫರಾಳ ತಂದ ಅನ್ನವ್ವಕ್ಕೋರು, ಮಕ್ಕಳ ಕಡೆ ನೋಡಕೋತ ``ಅದಕ್ಕೂ ಒಂದ ಕತಿ ಐತಿ'' ಅಂದ್ರು.

 ಕತಿ ಅಂದಕೂಡ್ಲೇ ಮಕ್ಕಳ ಕಿವಿ ನಿಮಿರಿದವು. ``ಅಕ್ಕೋರ, ಆ ಕತಿ ಹೇಳರಿ'' ಅಂತ ಮಕ್ಕಳು ಗಂಟಬಿದ್ದರು. ``ತಾಟೊಳಗ ಬೆಳಿ ಬೆಳಸೂದುಕ್ಕ ಕತಿ ಅದ?'' ಇನ್ನೊಂದು ಪ್ರಶ್ನೆ ತೂರಿ ಬಂತು ಶೈಲಾ ಕಡೆಯಿಂದ. ``ಹೌದವಾ, ಹತ್ತ ದಿನದ ಬೆಳಿ ಬೆಳಿಯೂ ಕತಿ ಅದ. ಈ ಹತ್ತ ದಿನದ ಬೆಳಿ ಕತಿ ಅಂದ್ರ, ಅದೇನ ಬ್ಯಾರೆ ಕತಿ ಅಲ್ಲ. ಬಾಲಯೇಸು ಸ್ವಾಮೀದ ಕತಿ'' ಅನಕೋತ ಹೆಡ್ಡಕ್ಕೋರು ಎಲ್ಲಾರ ಜೋಡಿ ಜಮಖಾನಿ ಮ್ಯಾಲ ಕೂತರು. ``ಎಲ್ಲಾರೂ ಫರಾಳ ತಗೋತಿರ್ರಿ, ನಾ ಕತಿ ಹೇಳತೀನಿ'' ಅಂತ ಮಕ್ಕಳ್ನ ಕರದ ಕೂಡಿಸಿಕೊಂಡ ಕತಿ ಹೇಳಾಕ ಶುರು ಮಾಡಿದರು.

 ***

 ಮೊದಲನೇ ಶತಮಾನದ ಆದಿ ಭಾಗ. ಆವಾಗ, ಯುರೋಪ ಖಂಡದ ರೋಮ ಸಾಮ್ರಾಜ್ಯದ ಮಹಾಚಕ್ರವರ್ತಿ ಆಗಸ್ಟಸ್ ಸೀಜರನ ಆಳಿಕಿ ನಡೀತಿತ್ತು. ಅಂವಾ ತನ್ನ ಸಾಮ್ರಾಜ್ಯದೊಳಗ ಖಾನೆಸುಮಾರಿ, ಅದ ಜನಗಣತಿ ನಡಸಬೇಕು ಅಂತ ಅಪ್ಪಣಿ ಕೊಡಿಸಿದ್ದ. ಆ ಕಾಲಕ್ಕ ರೋಮ ಸಾಮ್ರಾಜ್ಯಕ್ಕ ಸೇರಿದ ಸಿರಿಯಾ ನಾಡಿಗೆ ಕುರೇನ್ಯ ಅಧಿಪತಿ ಆಗಿದ್ದರ, ಹೆರೋದ ನಜರೇತಿನ್ಯಾಗ ಪ್ರಾಂತಾಧಿಕಾರಿ ಆಗಿದ್ದ. ಯೆಹೂದ್ಯರ ಅರಸ ದಾವಿದನ ಮನೆತನಕ್ಕ ಸೇರಿದ ಜೋಸೆಫಪ್ಪ, ತನ್ನ ಹಿರ್ಯಾರ ಊರು ಬೆತ್ಲೆಹೇಮನ್ಯಾಗ ತನ್ನ ಹೆಸರು, ಕುಟುಂಬದ ಸದಸ್ಯರ ಹೆಸರು ಬರಸಾಕ ನಜರೇತಿನಿಂದ ಬಂದಿದ್ದ. ಹೊಟ್ಟಿಲಿದ್ದ ತಾಯಿ ಮರಿಯವ್ವಗ ದಿನಾ ತುಂಬಿದ್ದವು.

 ಯಾವುದೋ ಕಾಲದಾಗ ಊರ ಬಿಟ್ಟಹ್ವಾದ ಎಲ್ಲಾ ಮಂದಿ, ಊರಿಗೆ ಹೊಳ್ಳಿ ಬಂದ ಕೂಡ್ಲೆ ಊರಾಗ ನಿಲ್ಲಾಕ, ಕೂಡಾಕ ತ್ರಾಸಾಗೂ ಪರಿಸ್ಥಿತಿ ಬಂದಿತ್ತು. ರಾತ್ರಿ ಎಲ್ಲೆರೆ ಮಲಗಾಕ ಒಂದೀಟ ಜಾಗ ಸಿಗ್ತದೇನೋ ಅಂತ ಊರೆಲ್ಲಾ ಹುಡುಕಾಡಿದ ಜೋಸೆಫಪ್ಪಗ, ಯಾವ ಛತ್ರಾನೂ ಸಿಗಲಿಲ್ಲ. ಯಾವ ಮನಿಯವರೂ ಒಳಗ ಸೇರಿಸಿಕೊಳ್ಳಲಿಲ್ಲ. ಕಡೀಕ, ಒಬ್ಬ ಕುಂಟ ಹುಡುಗ, ದೈನಾಸಪಟ್ಟಗೊಂಡ ತಮ್ಮ ಮನಿ ಹಿತ್ತಿಲದಾನ ದನಗಳ ಕೊಟ್ಡಿಗ್ಯಾಗ ಜಾಗಮಾಡಿಕೊಟ್ಟ. ಕೂಸ ಹುಟ್ಟಿದ್ದ ನೋಡಿ, ಕಕ್ಕಲಾತೀಲೆ ಕೂಸಿಗಂತ ಸಣ್ಣ ಗೋದಲಿ ತಂದ ಕೊಟ್ಟ. ಕೂಸಿನ ನೋಡಾಕ ಕುರುಬರು ಬಂದ್ರು. ಮೂಡಣ ದಿಕ್ಕಿನ ಮೂರ ರಾಯರು ಬಂದ್ರು. ಕೊಟ್ಟಿಗಿ ಮ್ಯಾಲ ನಕ್ಷತ್ರ, ಅದ ಚುಕ್ಕಿ ನಿಂತಗೊತು. ಸಮ್ಮನಸ್ಸುಗಳು ಅಂದ್ರ ದೇವದೂತರು ಆಕಾಶದಾಗ ನಿಂತ `ದೇವರಿಗೆ ಮಹಿಮೆ', `ಜಗದ್ರಕ್ಷಕ ಹುಟ್ಯಾನ' ಅಂತ ಸಾರಿದರು. ಸಮ್ಮನಸ್ಸುಗಳು ಕುರುಬರಿಗೆ ಮೊದಲ ಕಾಣಿಸಿಕೊಂಡಿದ್ರಂತ. ಮೂರು ರಾಯರಿಗೆ ನಕ್ಷತ್ರ ದಾರಿ ತೋರಿಸ್ತಂತ.

 ``ಅದಕ್ಕ ಕ್ರಿಸ್ಮಸ್ ಹಬ್ಬದ ವ್ಯಾಳ್ಯಾಕ ಕೊಟ್ಟಗಿ ಮಾಡಿ, ಅದರಾಗ ಗೋದಲಿಯೊಳಗ ಬಾಲಯೇಸು ಸ್ವಾಮೀನ ಇಡ್ತೀವಿ. ಮತ್ತ ಅವರ ಜೋಡಿ ತಾಯಿ ಮರಿಯವ್ವ, ತಂದಿ ಜೋಸೆಫಪ್ಪ ಅವರ ಗೊಂಬಿ ಇರ್ತಾವ. ಅಷ್ಟ ಅಲ್ಲ ಹಂಗ ಕುರುಬರವು, ಮೂರು ರಾಯರ ಗೊಂಬಿ ಕೂಡಸ್ತೀವಿ. ದನಾಕರುಗಳದ್ದು ಗೊಂಬಿ ಇರ್ತಾವು ಮನಿ ಮುಂದ ನಕ್ಷತ್ರ ಕಟ್ತೀವಿ''.

 ಇಷ್ಟ ಹೇಳಿ ಅನ್ನವ್ವಕ್ಕೋರು ಒಂದೆರಡ ತಂಬಿಗ್ಯಾಗ ನೀರು, ಕುಡಿಲಿಕ್ಕ ಅನುವಾಗಲೆಂತ ನಾಲ್ಕಾರ ವಾಟೆ ತರಾಕ ಒಳಗ ಅಡಿಗಿ ಮನಿಗೆ ಹ್ವಾದರು.

 ಅವರು ಬರೂದನ್ನ ಕಾಯಕೋತ ಕೂತವರಂಗ, ಮಲ್ಲವ್ವನ ತೊಡಿ ಮ್ಯಾಲ ಕೂತ ಕೇಕ್ ತಿನ್ನಾಕ್ಹತ್ತಿದ್ದ ಶೈಲಾ, ``ಅಕ್ಕೋರ ಅಕ್ಕೋರ, ಕತ್ಯಾಗ ಎಲ್ಲಿ ಬನ್ನಿ ಬಂಗಾರ ಬರೇ ಇಲ್ಲ?'' ಅಂತ ಕೇಳೇಬಿಟ್ಲು.

 ಮಲ್ಲವ್ವ ಮತ್ತ ಮೆತ್ತಗ ಮಗಳ ಕುಂಡಿ ಚಿವುಟಿದಂಗಾಯ್ತು.

 ``ಭಪ್ಪರೆ ಮಗಳ, ಇನ್ನೂ ಎಲ್ಲಿ ಕತಿ ಮುಗಿಸೀನಿ? ಕತಿ ಮುಗೀತು ಅಂತ ಯಾರ ಹೇಳಿದರ ನಿನಗ?'' ಅನಕೋತ, ಆಕಿ ಗಲ್ಲಾ ಚಿವುಟಿದಂಗ ಮಾಡಿದ ಅನ್ನವ್ವಕ್ಕೋರು, ``ಇನ್ನೂ ಕತಿ ಮುಗಿದಿಲ್ಲ ನನ್ನವ್ವ. ಒಣಾ ಫರಾಳ... ನಿಮಗ ಗಂಟ್ಲಿಗೆ ತ್ರಾಸ ಆದೀತು ಅಂತ ನೀರ ತರಾಕ ಅಡಿಗಿ ಮನಿಗೆ ಹೊಗಿದ್ದೆ. ಗೋದಿ ಹುಲ್ಲಿನ ಕತಿ ಮುಂದ ಬರ್ತದ ತಡಿ'' ಅಂತ ಅಪೂಪರ ಮಾಡಿದರು.

 ***

ಆಕಾಶದಾಗ ಹೊಸಾ ನಕ್ಷತ್ರ ಮೂಡಿದ್ದನ್ನ ನೋಡಿದ್ದ ಮೂರು ರಾಯರು, ಲೆಕ್ಕಾಚಾರ ಹಾಕಿ ಇದು ಯೆಹೂದಿಗಳು ಭಾಳ ದಿನದಿಂದ ಕಾಯ್ತಿದ್ದ ಅರಸ ಅಂದ್ರ ಪ್ರವಾದಿಯೋ, ಜಗದ್ರಕ್ಷಕನೋ ಹುಟ್ಟಿಬರೂ ಗಳಿಗಿ ಹೇಳ್ತದ ಅಂತ ಅನಕೊಂಡರು. ಆ ಜಗದ್ರಕ್ಷಕನಿಗೆ ಕಾಣಕಿ ಒಪ್ಪಿಸಿ ಬರೂಣು ಅಂತ ಹೊಂಟ ಅವರು ದಾರಿ ತಪ್ಪಿ ಜೆರುಸಲೇಮಿಗೆ ಮುಟ್ಟಿದ್ದರು. ``ಹೊಸ ಅರಸ ಹುಟ್ಯಾನ'' ``ಹೊಸ ಅರಸ ಹುಟ್ಯಾನ''. ``ಅವನ್ನ ಹುಡಕೊಂಡ ಇಲ್ಲಿ ಬಂದೀವಿ'' ಅನ್ನೂ ಅವರ ಮಾತಗಳ್ನ ಗೂಢಚಾರರಿಂದ ತಿಳ್ಕೊಂಡ ಅರಸ ಹೆರೋದ, ಅವರು ತನ್ನ ಅರಮನಿಗೆ ಬರೂ ಹಂಗ ಮಾಡಿದ. ಅವರು ಬರುದರಾಗ, ರಾಜಪುರೋಹಿಯರನ್ನ, ಜೋತಿಷಿಗಳ್ನ ಮತ್ತ ಧರ್ಮ ಶಾಸ್ತ್ರಜ್ಞರನ್ನ ಕರಿಸಿಕೊಂಡ, ``ಇದೇನ ಇವರು ಹೇಳೂದು? ಏನಿದ ಹಕಿಕತ್ತು?'' ಅಂತ ಎಲ್ಲಾ ವಿಚಾರ ಮಾಡಿದ. ಅವರೆಲ್ಲಾರೂ. `ಮೂರು ರಾಯರು ಹೇಳೂ ಮಾತು ಶಮಬೋರದಷ್ಟ ಖರೆ' ಅಂತ ಹೇಳಿದರು. ಹೆರೋದನ ಹೊಟ್ಯಾಗ ಖಾರಾ ಅರದಂಗಾತು. `ಆ ಕೂಸಿನ್ನ ಹುಡುಕಿ ಸಾಯಿಸಬೇಕು' ಅನಕೊಂಡ. ಮೊದಲ ಕೆಟ್ಟ ಮನಷ್ಯಾ ಈ ಹೆರೋದ ಅರಸ, ಆ ಸುದ್ದಿ ಕೇಳಿ ಸುಮ್ನ ಕೂತಾನ?

   ಪಟ್ಡಣದ ಎಲ್ಲ ಜೋಯಿಸರ ಬರಹೇಳಿ

   ಪಟ್ಟಣದರಸ ಹುಟ್ಟಿದನೆಂಬುದನ ಕೇಳಿ

   ಪಟ್ಟಣದ ದೊರೆ ಹೆರೋದ ಕಂಗಾಲು ಕೇಳಿ

 ಮಣಿ ಕಾಕಿಸಿ, ಮೂರು ರಾಯರನ್ನ ತನ್ನ ಮುಂದ ಕೂಡಿಕೊಂಡ. ``ನಾನೂ ಆ ಹೊಸ ಅರಸಗ ಕಪ್ಪ, ಕಾಣ್ಕಿ ಒಪ್ಪಸ್ತೀನಿ. ನಿಮಗ ಅಂವಾ ಎಲ್ಲಿರೂದು ಗೊತ್ತಾದರ, ನಮಗ ತಿಳಸ್ರಿ''ಅಂತ ಬೇಡಿಕೊಂಡಂಗ ಮಾಡಿದ. ಅವರು ಹೊಂಟ ಕೂಡ್ಲೆ, ಅವರ ಹಿಂಬಾಲ ಗೂಢಚಾರರು ಹ್ವಾದರು. ಮೂರ ರಾಯರಿಗೆ ಕಾಣಿಸಿಕೊಂಡ ನಕ್ಷತ್ರ ಮತ್ತ ದಾರಿ ತೋರಿಸ್ತು. ಯೆಹೂದ್ಯರ ಅರಸು ಬಾಲಯೇಸು ಸ್ವಾಮೀನ್ನ ಕಂಡ ಕಾಣ್ಕಿ ಒಪ್ಪಿಸಿ ಸಮ್ಮನಸ್ಸುಗಳ ಹೇಳಿದಂಗ ತಮ್ಮ ಪಾಡಿಗೆ ತಾವು ತಮ್ಮ ಹಾದಿ ಹಿಡಕೊಂಡು ಅವರು ತಮ್ಮ ತಮ್ಮ ಊರಿಗೆ ಹ್ವಾದರು, `ಯೆಹೂದ್ಯರ ಅರಸು' ಅಂತ ಮೂರು ರಾಯರು ಹುಡಕೊಂಡ ಬಂದ ಕೂಸು, ಹೆರೋದ ಅರಸನ ಗೂಢಚಾರರಿಗೆ ಸಿಗಲೇ ಇಲ್ಲ. ಕಡೀಕ ``ಆರ ತಿಂಗಳೊಳಗ ಇರೂ ಎಲ್ಲಾ ಮಕ್ಕಳ್ನ ಸಾಯಿಸಿ ಬಿಡ್ರಿ. ಎಲ್ಲಾ ನಿರಾಳ ಆಗ್ತದ'' ಅಂತ ಅರಸ ಹೆರೋದ ಸೈನಿಕರಿಗೆ ಅಪ್ಪಣಿ ಕೊಡಿಸಿದ.

 ``ಮೊನ್ನಿ ಹಡಗಲಿ ಮೈಲಾರಲಿಂಗೇಶ್ವರನ ಜಾತ್ರಿ ಕಾರ್ಣಿಕೋತ್ಸವದಾಗ, ಡೆಂಕನಮರಡಿ ಮೈದಾನದಾಗ ಕುದರಿ ಏರಿ ಬಂದ ಗೊರವಪ್ಪ ಬಿಲ್ಲ ಏರಿ `ಹುಟ್ಟಿದ ಕಂದ ಕಷ್ಟಪಟ್ಟಿತಲೇ'- ಕಾರ್ಣಿಕ ನುಡಿದಂಗ ಅಲ್ಲಿ ಯಾರೂ ಕಾರ್ಣಿಕ ನುಡಿಲಿಲ್ಲ ಕಾಣ್ತದ'' ಅಂದ ಘೋರ್ಪಡೆ ಗೋದುತಾಯಿ ವೈನಿ ಅವರು, `ತೋಬಾ ತೋಬಾ' ಅನಕೋತ ಗಲ್ಲಾ ಬಡಕೊಂಡರು.

 ``ದೇವಕಿ ವಸುದೇವರಿಗೆ ಗಂಟಬಿದ್ದ ಕಂಸನಂಥವರೂ ಅಲ್ಯ್ಲೂ ಇದ್ದರ ಹಂಗಾರ?'' ಶೈಲಾಳ ಪ್ರಶ್ನೆ ತೂರಿಬಂದಾಗ ``ಗಪ್ಪಿರಬೇ'' ಎಂದು ಮಲ್ಲವ್ವ ಗದರಿಸಿ ಸುಮ್ಮನಿಸಿರಿದಳು. ``ಹೌದ ನೋಡವಾ, ಕೆಟ್ಟ ಮಂದಿ ಎಲ್ಲಾ ಕಡೆನೂ ಇರ್ತಾರ'' ಅನಕೋತ ಶೈಲಾನ ಮಾತ ಸಂಭಾಳಿಸಿಕೊಂಡ ಅನ್ನವ್ವಕ್ಕೋರು ಕತಿ ಮುಂದವರಿಸಿದರು.

 ಈ ಸುಡಗಾಡ ಸುದ್ದಿ ಹಬ್ಬುತ್ಲೇ ಹಸುಗೂಸುಗಳು ಮನೇಲಿದ್ದವರು ಹೌಹಾರಿದರು. ಅಂಥವರೆಲ್ಲಾ ಊರು ಸೀಮಿ ಬಿಟ್ಟ ದಿಕ್ಕಪಾಲಾಗಿ ಓಡಿದರು. ಕಾಡ ಸೇರಿದರು. ಕೆಲವರು ಪರದೇಶಕ್ಕ ಓಡಿ ಹ್ವಾದರು. ತಂದಿ ಜೋಸೆಫಪ್ಪ ಮತ್ತ ಬಾಣಂತಿ ತಾಯಿ ಮರಿಯವ್ವ ಬಾಲಯೇಸು ಸ್ವಾಮಿ ಕೂಸಿನ ಜೋಡಿ ಇಜಿಪ್ತ ದೇಶಕ್ಕ ಓಡಿ ಹ್ವಾದರು. ಹೆಂಗೋ ಏನೋ, ಅವರ ಓಡಿ ಹೋದದ್ದ ವಾಸನಿ ಹಿಡದ ಸ್ವಲ್ಪ ಮಂದಿ ಸೈನಿಕರು, ಅವರ ಬೆನ್ನ ಹತ್ತಿದರು. ಅವರು ಮುಂದ ಮುಂದ ಹ್ವಾದರ, ಇವರು ಸೈನಿಕರು ಅವರಿವರನ್ನ ಕೇಳಕೋತ ಅವರ ಹಿಂದ ಬರ್ತಿದ್ದರು. ಜೋಸೆಫಪ್ಪ, ಮರಿಯವ್ವ ಮತ್ತ ಬಗಲಾನ ಬಾಲಯೇಸು ಸ್ವಾಮಿ, ಇನ್ನೊಂದ ಹತ್ತ ಹೊಲಾ ದಾಟಿದ್ದರ, ಇಜಿಪ್ತ ದೇಶದ ಗಡಿಯೊಳಗ ಸೇರ್ಕೊತಿದ್ದರು. ಹೊತ್ತ ಹೊತ್ತಿಗೆ ನೀರುನಿಡಿ ಇಲ್ಲದ ನಿತ್ರಾಣ ಆಗಿತ್ತು. ಹೊಲದ ಒಡ್ಡಿನ ಮ್ಯಾಲ ಕೂತರು. ಎಲ್ಲೆರೆ ಅಡಕೊಳ್ಳೂಣು ಅಂದ್ರ ಸುತ್ತ ಬಟಾಬಯಲಿನ ಜಾಗ. ದೂರ ದೂರ ಹೊಲದಾಗ, ಒಡ್ಡಿನ ಗುಂಟ ಇದ್ದರ ಒಂದೊಂದ ಗಿಡಗಂಟಿ ಇದ್ದವು, ಅವೂ ಜಾಲಿಗಿಡದಂಥವು.

 ಬಟಾ ಬಯಲಿದ್ದರೂ ಜನರ ಉಲುವು ಇತ್ತು. ರೈತರು ತಮ್ಮ ತಮ್ಮ ಹೊಲಾ ಹರಗಾಕ ಹತ್ತಿದ್ದರು. ಜ್ವಾಳಾ ಬಿತ್ತಾಕ ಬೀಜಾ ಇಟಗೊಂಡ ಸಜ್ಜಾಗಿದ್ದರು. ತಂದಿ ಜೋಸೆಫಪ್ಪಗ ಒಂದ ವಿಚಾರ ಹೊಳೀತು. `ಈಗ ಹೊಲದಾಗ ಏನರೆ ತುಂಬಿದ ಬೆಳಿ ಇದ್ರ ಗಾಂವ ಆಗತಿತ್ತು' ಅನಕೊಂಡ. ರೈತರ ಹತ್ಯಾಕ ಹೋಗಿ ತತ್ರಾಣಿ ಇಸಗೊಂಡ ನೀರ ಕುಡದ. ಯಾಕೋ ಕಣ್ಣ ಮಂಜಾದಂಗಾಯಿತು.

 ಜೋಸೆಫಪ್ಪಗ ಮರಿಯವ್ವಳ ಜೋಡಿ ಮದವಿ ಗೊತ್ತಾದ ದಿನಾ ಹಿಡದ ಇಲ್ಲಿತನಕ ನಡದದ್ದು ಎಲ್ಲಾ ನೆಪ್ಪಿಗೆ ಬಂತು. ಅದರ ಹಿಂದ ಪ್ರವಾದಿ ಇಸಯಸನ `ಸರ್ವೇಶ್ವರನ ನಿಮಗೊಂದ ಸೂಚನಿ ಕೊಡ್ತಾನ. ಒಬ್ಬ ಕುಮಾರಿ ಕನ್ಯೆ ಬಸರಾಗಿ ಗಡ ಕೂಸಿನ್ನ ಹಡಿತಾಳ' ಅನ್ನೂ ಕಣಿ ಹೇಳಿದ ಪ್ರವಾದನೆ ನೆಪ್ಪಗೆ ಬಂತು. ಗಾಬ್ರೆಲಪ್ಪ ಸಮ್ಮನಸ್ಸು ಮರಿಯವ್ವಳಿಗೆ ಭೆಟ್ಟಿ ಆದದ್ದು, ಮರಿಯವ್ವಳು ಪವಿತ್ರಾತ್ಮರಿಂದ ಬಸರಾದದ್ದು ಮತ್ತ ದೇವರು ಮಾತಕೊಟ್ಟಂಗ, ಆಕಿ ರಕ್ಷಕನ ತಾಯಿ ಆಗೂದನ್ನ ಮೊದಲ ತಿಳಿಸಿದ್ದು.. ಕಣ್ಣಿಗೆ ಕಟ್ಟಿದಂಗಗಾಗಿತ್ತು.

 ಒಮ್ಮಿಲೆ ಮಾಡ ಕವಿದಂಗಾತು. ಮಾಡದ ನಡಬರಕ ಒಂದ ದೀಪಾ ಹೊತ್ತಗೋತು. ಅದು ಸಾವಕಾಶ ಮನಷ್ಯಾನ ಅವತಾರ ತಾಳಿತು. ಅದರ ಬೆನ್ನ ಹಿಂದ, ಅಗಲ ಬಿಳಿ ರೆಕ್ಕಿ ಇದ್ದವು. ಮುಂದ ಅದು ಅವರ ಕಡೀನ ಬರಾಕ್ಹತ್ತು. ಅದು ಗಾಬ್ರೇಲಪ್ಪ ಸಮ್ಮನಸ್ಸು. ಅವರ ಸನೇಕ ಬಂದದ್ದ ತಲಿ ತಗ್ಗಿಸಿತು. ``ಪವಿತ್ರ ಕುಟುಂಬಕ್ಕ ನಮಸ್ಕಾರ. ಅವ್ವ ಮರಿಯವ್ವ ನಿನಗ ಶುಭಾ ಆಗಲಿ. ಸರ್ವೇಶ್ವರನ ಮಗ- ಜಗದ್ರಕ್ಷಕ ಬಾಲಯೇಸು ನಿನಗೆ ಅಡ್ಡ ಬಿದ್ದೆ'' ಅನ್ನೂ ಮಾತ ಕೇಳಿಸಿದವು.

 ಅದರ ಹಿಂದ ನಿಗಿನಿಗಿ ಕೆಂಡದ ದೊಡ್ಡ ಬೆಳಕಿನ ಬಡಗಿ ಸುಳಿದಾಡಿತು. ``ನನ್ನ ಮಾತು ಹೇಳೂ, ಪ್ರವಾದಿಗಳ ಮಾತು ನಡಿಬೇಕು'' ಅನ್ನೂ ಮಾತುಗಳು ಕಿವ್ಯಾಗ ಬಿದ್ದವು.

 ``ದೇವರ ಚಿತ್ತ'' ಎಂದ ಗಾಬ್ರೇಲಪ್ಪ ಸಮ್ಮನಸ್ಸು, ``ದೇವರ ಚಿತ್ತದಂಗ ಎಲ್ಲಾ ಆಗ್ತದ. ಸರ್ವಶಕ್ತ ದೇವರು ಸರ್ವೇಶ್ವರನಿಗೆ ಸ್ತೋತ್ರ'' ಅಂತ ಸ್ತೋತ್ರ ಹೇಳಿದ.

 ``ಜೋಸೆಫಪ್ಪ, ಹೆರೋದನ ಸೈನಿಕರಿಗೆ ಹೆದರಬ್ಯಾಡ. ಪ್ರವಾದಿ ಮೋಸೆಸನ ಮೂಲಕ ಇಸ್ರೇಲರನ್ನ- ಅದ ಯೆಹೂದಿಗಳ್ನ, ಇಜಿಪ್ತಿನ ಅರಸರ ಜೀತದಿಂದ ಪಾರಮಾಡಿ, ಅವರಿಗೆ ಮಾತಕೊಟ್ಟ ಸೀಮಿಗೆ ಕರಕೊಂಡ ಬಂದ ಅಬ್ರಹಾಮನ ದೇವರು- ಸರ್ವೆಶ್ವರ ನಿಮ್ಮ ಜೋಡಿ ಅದಾನ''. ಗಾಬ್ರೇಲಪ್ಪ ಸಮ್ಮನಸ್ಸು ಅವರಿಗೆ ಧೈರ್ಯ ಹೇಳಿದ.

 ``ಜೋಸೆಫಪ್ಪ, ಸರ್ವಶಕ್ತ ದೇವರು ಸರ್ವೇಶ್ವರನ ಹೆಸರಿನ್ಯಾಗ ರೈತರು ಬಿತ್ತಾಕ ಸಜ್ಜ ಮಾಡಿರೂ ಬಿತ್ತನಿ ಬೀಜಾ ಮುಟ್ಟು. ಅದಾದ ಮ್ಯಾಲ, ಆ ಬೀಜಾನ ರೈತರು ಬಿತ್ತಲಿ. ಆಗ ದೇವರ ಮಹಿಮಾ ನಡೀತದ'' ಹಿಂಗ ಹೇಳಕೋತ ಗಾಬ್ರೇಲಪ್ಪ ಸಮ್ಮನಸ್ಸು ಹಿಂದಕ್ಕೆ ಹೆಜ್ಜೆ ಇಟ್ಟ. ದೀಪ ಸಣ್ಣಗಾಕೋತ ಹೋತು. ಮುಚಗೊಂಡಿದ್ದ ಮಾಡ ದೂರ ದೂರ ಸರದ ಬಯಲಾತು.

 ಇಷ್ಟೆಲ್ಲಾ ಆಗೂ ಮುಂದ, ರೈತರು ಅಯೋಮಯ ಸ್ಥಿತಿಯಲ್ಲಿದ್ದರು.

 ಗಾಬ್ರೇಲಪ್ಪ ಸಮ್ಮಸನಸ್ಸು ಹೇಳಿದಂಗ ಜೋಸೆಫಪ್ಪ `ಸರ್ವೇಶ್ವರನಿಗೆ ಸ್ತೋತ್ರ' ಅನಕೋತ ರೈತರು ಬಿತ್ತಾಕ ಸಜ್ಜ ಮಾಡಿದ್ದ ಬೀಜಗಳ್ನ ಮುಟ್ಟಿದ. ``ಈಗ ಸರ್ವೇಶ್ವರನ ಹೆಸರೀಲೆ ಬೀಜಾ ಬಿತ್ತರಿ'' ಅಂದ. ಕೈಯಾನ ಬೀಜಾ ಚರಗಾ ಚೆಲ್ಲಿದಂಗ ಹೊಲಕ್ಕ ಚೆಲ್ಲಿದ, `ಕೂರಗೀಲೆ ಬಿತ್ತೂದ ಬ್ಯಾಡ, ತೂರೂನು ನಡೀರಿ ಅಂದ'. ಅವರ ಜೋಡಿ ಅವನೂ ಒಂದ ಹೊಲಕ್ಕ ಮತ್ತೊಮ್ಮೆ ಬೀಜಾ ತೂರಿದ. ಅಲ್ಲಿದ್ದ ರೈತರೂ ಸುಮ್ಮನ ಅಂವಾ ಹೇಳಿದಂಗ ಮಾಡಿದರು.

 ನೋಡ ನೋಡುತ್ತಲೇ ಕಾಳು ಮೊಳಕಿ ಒಡದವು. ಜ್ವಾಳದ ಬೆಳಿ ಭರಾ ಭರಾ ಬೆಳದ ನಿಂತು. ಸುತ್ತಲ್ಲಾ ಹಸರ ತುಂಬಿತು. ಮುಂದ ತೆನಿ ಹೊಡಿ ಒಡದವು. ಕಾಳ ತುಂಬಿಕೊಂಡವು. ಕಡ್ಲಿ ಗಿಡಾ ಕಾಳ ಕಟ್ಟಿದವು. ತಂದಿ ಜೋಸೆಫಪ್ಪ, ತಾಯಿ ಬಾಣಂತಿ ಮರಿಯವ್ವ ಬಾಲಯೇಸುಸ್ವಾಮಿ ಕೂಸಿನ ಜೋಡಿ, ಆಳೆತ್ತರ ಬೆಳದ ನಿಂತ ಹೊಲದಾಗ ಮರಿ ಅಗಿಬಿಟ್ಟರು. ಬೆಳಿ ಒಳಗ ಅವರು ಅಡಕೊಂಡಂಗಾತು. ಎಲ್ಲಾ ದೇವರಾಟ. ಬೆಳದ ನಿಂತ ಬೆಳಿ ಗಾಳಿಗೆ ಅತ್ತಿತ್ತ ಹೊಳ್ಳಿದರ, ಆಗ ಬಾಲಯೇಸು ಸ್ವಾಮಿಗೆ ಚಾಮರ ಬೀಸಿದಂಗಾಗೋದು.

   ತಂದಿ ಜೋಸೆಫಪ್ಪ, ಅವ್ವ ಮರಿಯವ್ವ

   ಕಂದನ ಜತಿ ಸೇರಿ ಮರೆಯಾದರೊ

   ತುಂಬಿದ ಹೊಲದಾಗ ಮರೆಯಾದರೊ

 

   ದಿನ್ನಿ ಮ್ಯಾಲಿನ ಬನ್ನಿ ಹೊಲದಾಗ

   ಬಾಲಸ್ವಾಮಿ ಮಲಗ್ಯಾನ, ಬಾಲಸ್ವಾಮಿಗೆ

   ತೆನಿಗಳು ತೂಗಿ ಚಾಮರವ ಬಿಸ್ಯಾವೊ

 ಈ ಅದ್ಭುತ ತಮ್ಮೆದುರ ನಡದದ್ದನ್ನ ನೋಡಿ ರೈತರಿಗೆ ದಿಗ್ಭ್ರಮೆ ಆಗಿತ್ತು. ದೇವರ ಮಹಿಮೆಗೆ ಅವರು ಸಾಕ್ಷಿ ಆದರು.

 ಅಲ್ಲಲ್ಲಿ ಹೊಲದಾಗ ಬೆರ್ಚಪ್ಪಗೋಳು ನಿಂತಿದ್ದರು. ಅಷ್ಟೂ ಮೀರಿ ಹಕ್ಕಿ ಬಂದ್ರ, ಕಾವಲ ನಾಯಿ ಬೌ ಬೌ ಅಂತಿದ್ವು. ``ದೇವರ ಚಿತ್ತ, ಬಿತ್ತೋ ಆಟ- ಒಕ್ಕಲಾಟ, ಬಿತ್ತೊ ಕಾಲ ಸುಗ್ಗಿ ಕಾಲ, ಎಲ್ಲಾ ಒಂದ ಆತೋ ಅಣ್ಣ'' ಅಂತ ಅನಕೊಂಡ್ರು ರೈತರು. ``ಶೀಗಿ ಹುಣ್ಣಮಿಗೆ ಮುಂಗಾರಿ ಚರಗಾ ಇದ್ರ, ಎಳ್ಳಮಾಸ್ಸಿ ದಿನಾ ಹಿಂಗಾರಿ ಚರಗ. ಇದರ ನಡವ ಹೊಸದಾಗಿ ಮೊತ್ತೊಂದ ಚರಗ ಚೆಲ್ಲೂದ ಬಂತು'' ಅನಕೋತ ಒಂದಿಷ್ಟ ಮಂದಿ ರೈತರು ಹೊಲದಾಗ ಚರಗಾ ಚೆಲ್ಲಿ ಹಬ್ಬಾ ಮಾಡಿದರು. ಸೀತನಿ ಸುಲಗಾಯಿ ಸುಟಗೊಂಡ ತಿನ್ನಾಕ ಹತ್ತಿದರು.

 ಅಷ್ಟರಾಗ ಹೆರೋದನ ಸೈನಿಕರು ಬೆಳಿ ಬೆಳದ ನಿಂತ ಹೊಲಗೋಳ ಕಡಿ ಬಂದ್ರು. ಸೀತನಿ ಸುಲಗಾಯಿ ತಿನ್ನಾವರನ್ನ ನೋಡಕೋತ ``ಈ ಕಡಿ ಒಂದ ಕೂಸಿನ್ನ ಹಿಡಕೊಂಡ ಗಂಡ, ಹೆಂಡತಿ ಯಾರರೆ ಬಂದಿದ್ರು?'' ಅಂತ ಜಬರಿಸಿ ಕೇಳಿದರು. ಸೀತನೀನ ಸೈನಿಕರಿಗೂ ತಿನ್ನಾಕ ಕೊಟ್ಟ ರೈತರು, ``ಹೌದ್ರಿ ಯಪ್ಪಾ ಬಂದಿದ್ರು'' ಅಂದ್ರು. ``ಮತ್ತ.. ಯಾವಾಗ ಅವರು ಇಲ್ಲಿ ಬಂದಿದ್ರು ಅಂದ್ರಿ?'' ಅಂತ ಮತ್ತ ಟಬರಿಲೇ ಕೇಳಿದರು.

 ``ಈ ಹೊಲಗೋಳ ಬಿತ್ತು ಮುಂದ ಬಂದಿದ್ರ ಯಪ್ಪಾ. ಈಗ ಸೀತನಿ ಸುಲಗಾಯಿ ತಿನ್ನಾಕ್ಹತ್ತೀವಿ'' ಅಂದ್ರು.

     ಇತ್ತ ಬಂದಿದ್ದರಲ್ಲ, ಎತ್ತ ಹೋದರವರು?

   ಬೆಚ್ಚಿಬಿದ್ದರೊ ಹೊಲದ ರೈತರೆಲ್ಲಾ,

   ಜ್ವಾಳ ಬಿತ್ತಾಗ ಅಂದಾಗ, ಭಯ ಕಳದಿತ್ತೊ

   ಹಕ್ಕಿ ಓಡಿಸಿಕೊಂಡ ಹೊಂಟ ನಾಯಿಗಳು

   ನಿಕ್ಕಿ ಹೇಳುವವೆಂದು ಬೆನ್ನ ಹಿಡದರು ಸೈನಿಕರು

   ನಿಕ್ಕಿ ದಾರಿ ತಪ್ಪಿದರೊ, ದಾರಿ ತಪ್ಪಿದರೊ

 ``ಹಂಗಾರ ಅವರಿಲ್ಲಿಂದ ದಾಟಿಹೋಗಿ ಮೂರ್ನಾಲ್ಕ ತಿಂಗಳ ಆಗಿರಲಾಕ ಬೇಕು'' ಅನಕೋತ ರೈತರು ಕೊಟ್ಟ ಸೀತನಿ ಸುಲಗಾಯಿ ತಿನಕೋತ ಸೈನಿಕರು, ಕೂಸ ಹೊತಗೊಂಡ ಹ್ವಾದ ಗಂಡಾಹೆಂಡತಿ ಹುಡಕೊಂಡ ಮುಂದ ನಡದ್ರು.

 ದೇವರ ಮಹಿಮಾ, ಭರಾ ಭರಾ ಬೆಳದ ನಿಂತ ಬೆಳಿ ಜೋಸೆಫಪ್ಪ ಮತ್ತ ಬಾಣಂತಿ ಮರಿಯವ್ವ ಮತ್ತ ಬಾಲಯೇಸು ಸ್ವಾಮಿ ಅವರು ಹೆರೋದ ಅರಸನ ಸೈನಿಕರಿಗೆ ಸಿಗದಂಗ, ಕಾಣಸದಂಗ ಮಾಡಿತ್ತು.

 ``ಈ ಅದ್ಭುತ ಮಹಿಮಾದ ನೆಪ್ಪೀಲೆ ಕ್ರಿಸ್ಮಸ್ ಹಬ್ಬದ ಗೊಂಬಿ ಕೂಡಸೂ ಬಾಲಯೇಸುಸ್ವಾಮಿ ಗೋದಲಿ ಇಡೂ ದನದ ಕೊಟ್ಟಿಗಿ ಹತ್ತರ ಬೆಳಿ ಬೆಳದ ಮಣ್ಣಿನ ತಾಟ ಇರ್ತದ. ಮತ್ತ ಊರಾಗಿನ ಪ್ರತಿಯೊಂದ ಮನಿಯವರೂ ಒಂದೆರಡ ಮಣ್ಣಿನ ತಾಟೊಳಗ ಬೆಳಿ ಬೆಳದ ಚರ್ಚಿಗೆ ಒಪ್ಪಿಸಿಕೊಡ್ತಾರು. ಅಲ್ಲಿ ಕಟ್ಟೂ ದೊಡ್ಡ ಕೊಟ್ಟಗಿ ಅಲಂಕಾರಕ್ಕ ಅದನ್ನ ಬಳಸ್ತಾರು. ಇದ ಇದರ ಹಿಂದಿನ ಕತಿ ನೋಡರಿ'' ಅಂದ ಅನ್ನವ್ವಕ್ಕೋರು ಕತಿ ಮುಗಿಸಿದರು.

 

   ಬಾಲನ ನೆಪ್ಪಿಲೆ ಎಲ್ಲಾರು

   ಬಂಗಾರ ಬೆಳಿ ಬೆಳಿಸ್ಯಾರು

   ಬಂಗಾರ ಬೆಳಿ ಬೆಳಿಸ್ಯಾರು

 ಮಕ್ಕಳ ಕುತೂಹಲ ತಣಿಸಿದ ಕತಿ, ಮನ್ಯಾಗ ಗಂಭೀರ ವಾತಾವರಣ ಮೂಡಿಸಿತ್ತು. ದೇವರ ಪವಾಡ ಮೆರೆದಿದ್ದ ಕತಿ, ದೇವರ ಮ್ಯಾಲಿನ ವಿಶ್ವಾಸ ಮತ್ತಷ್ಟ ಹೆಚ್ಚ ಮಾಡಿತು.

 ``ಇಲ್ಲಿ ಸೆರೆಮನ್ಯಾಗಿದ್ದ ವಸುದೇವನ್ನ, ಹಸುಗೂಸು ಕೃಷ್ಣನ್ನ ನಮ್ಮ ಹೊಳಿ ಗಂಗವ್ವ ಉಳಿಸಿಕೊಂಡಳು. ಅಲ್ಲಿ ಭೂತಾಯಿ ಬೆಳಿ ಬೆಳದ ಬಾಲಯೇಸುಸ್ವಾಮೀನ್ನ ಉಳಿಕೊಂಡಾಳ ನೋಡ್ರಿ''.

 ರಮಾಬಾಯಾರ ಮಾತಿಗೆ ಎಲ್ಲಾರೂ ತಲಿ ತೂಗಿದರು.

 ಅನ್ನವ್ವಕ್ಕೋರು, ``ಈ ಕತೀದ ಒಂದ ಒಡಪಾನೂ ಅದ'' ಅಂದಾಗ, ಮಕ್ಕಳು ``ಹೇಳಕೊಡ್ರಿ ಅಕ್ಕೋರ ಅದನ್ನ'' ಅಂತ ಗಂಟ ಬಿದ್ದವು.

 

 ``ಒಂದ ಕಾಲಲಿ ಹುಟ್ಟೋದು, ಒಂದ ಕಾಲಲಿ ಬೆಳಿಯೋದು,

 ನಮ್ಮ ಬಾಲಯೇಸು ಸ್ವಾಮಿಗೆ ಚಾಮರವ ಬೀಸೂದು,

 ನಮ್ಮ ಜಾಣಜಾಣೇರ ನೀವ ಬಲ್ಲಿರೇನ?''

 

 ಈ ಒಡಪಾ ಹೇಳಿದ ಅನ್ನವ್ವಕ್ಕೋರು, ಅದನ್ನ ಬಿಡಿಸೀನೂ ಹೇಳಿದರು.

 

 ``ಒಂದ ಕಾಲಲಿ ಹುಟ್ಟೋದು, ಒಂದ ಕಾಲಲಿ ಬೆಳೆಯೋದು,

  ನಮ್ಮ ಬಾಲಯೇಸು ಸ್ವಾಮಿಗೆ ಚಾಮರವ ಬೀಸೂದು

  ನಮ್ಮ ಹೊಲದಾನ ಜ್ವಾಳದ ಬೆಳಿ ಅಲ್ಲೇನ?''

 

 ಹಬ್ಬ ಆಗಿ ಒಂದ ವಾರದಮಟಾ, ಈ ಒಡಪ ಓಣ್ಯಾನ ಹುಡುಗ್ರ ಬಾಯಾಗ ಕುಂತಿತ್ತು.

 

============

No comments:

Post a Comment

ಎತ್ತಿತೋರಿಸಲಾದ ಪೋಸ್ಟ್

ಅನ್ನಮ್ಮ’ಳಿಗೆ ೨೫೦ರ ಹಾಗೂ ಅತಿ.ವಂ.ಪೊತ್ತಕಮೂರಿಗೆ ೫೦ರ ಸ್ಮರಣೆಯ ಸಂಭ್ರಮ

ಬೆಂಗಳೂರಿನ ಉತ್ತರಹಳ್ಳಿಯ ಅನ್ನಮ್ಮನ ಬೆಟ್ಟ, ಅಲ್ಲಿನ ಅನ್ನಮ್ಮಳ ಸಮಾಧಿ, ಆ ಬೆಟ್ಟದ ಮೇಲಿನ ಶಿಲುಬೆ, ಅಲ್ಲಿ ಪ್ರತಿವರ್ಷ ತಪಸ್ಸು ಕಾಲದ ಐದನೇ ಭಾನುವಾರ ನಡೆಯುವ ಯೇಸು...