ಈ ಶತಮಾನದ ಅತೀ ಕಷ್ಟಕರವಾದ ವರುಷಗಳಲ್ಲಿ 2020 ಅಗ್ರಸ್ಥಾನವನ್ನು ಆಕ್ರಮಿಸಿಕೊಳ್ಳುವುದರಲ್ಲಿ ಯಾವ
ಸಂಶಯವೂ ಇಲ್ಲ. ದಿಢೀರನೇ ಕಾಣಿಸಿಕೊಂಡ, ಕಣ್ಣಿಗೆ ಕಾಣದ ಕೊರೋನ
ವೈರಸ್ ಮಾನವ ಕುಲವನ್ನು ಕಲ್ಪನೆಗೆ ನಿಲುಕದಷ್ಟು ಘಾಸಿಗೊಳಿಸಿ, ತಲ್ಲಣಗೊಳಿಸಿದೆ. ಈ ವರ್ಷದ ಸಮಗ್ರ ಪ್ರಗತಿಗಳು ಕುಂಠಿತವಾಗಿವೆ. ಜನಜೀವನ ಕಂಡು
ಕೇಳರಿಯದಷ್ಟು ಅಸ್ತವ್ಯಸ್ಥಗೊಂಡಿದೆ. ರೈತರ,
ಕಾರ್ಮಿಕರ
ಹಾಗೂ ಬಡಜನತೆಯ ಗೋಳನ್ನು ಕೇಳುವವರಿಲ್ಲ! ಉದ್ಯಮದ ಯಾವ ಕ್ಷೇತ್ರವೂ ಕೂಡ ನಿರಾಳವಾಗಿ
ಸಾಗುತ್ತಿಲ್ಲ. ಶಿಕ್ಷಣಕ್ಷೇತ್ರ ತಲ್ಲಣಗೊಂಡಿದೆ. ವಿದ್ಯಾರ್ಥಿಗಳ ಹಾಗೂ ಶಿಕ್ಷಕ/ಕಿಯರ ಬದುಕು
ಅಯೋಮಯವಾಗಿದೆ. ಧಾರ್ಮಿಕ ಚಟುವಟಿಕೆಗಳೂ ಸಹ ತಟಸ್ಥವಾಗಿವೆ. ಜನರ ಮೊಗದಲ್ಲಿ ನಿರಾಶೆ, ಹತಾಶೆ, ಭಯದ ಕಾರ್ಮೋಡಗಳು ಕವಿದು, ಮಂದಹಾಸ ಮಾಯವಾಗಿದೆ. ಆದರೂ ಮಾನವಕುಲ ಧೃತಿಗೆಡದೆ ಭರವಸೆಯಿಂದ ಮುಂದೆ ಸಾಗುತ್ತಲಿದೆ. ಭರವಸೆ
ದೇವರು ಮಾನವನಿಗೆ ನೀಡಿರುವ ಅಂತರ್ ಸತ್ವ ಹಾಗೂ ಅನಂತ ಕೊಡುಗೆ. ಈ ಮಾನವ ಜೀವನ ಯಾತ್ರೆಯಲ್ಲಿ
ಭರವಸೆಯನ್ನು ಕಳೆದುಕೊಂಡರೆ ಸೂರ್ಯ ತನ್ನ ಪ್ರಕಾಶವನ್ನೇ ಕಳೆದುಕೊಂಡಂತೆ!
ಸರ್ವೇಶ್ವರ ಪ್ರಭು ದೇವರು ಪ್ರೀತಿಯಿಂದ ಸೃಷ್ಟಿಸಿದ ಈ
ಮಾನವಕುಲ ಶತಶತಮಾನಗಳಿಂದಲೂ ಅವಿಧೇಯತೆಯ ಕತ್ತಲೆಯ ಕೂಪದಲ್ಲಿ ಬಿದ್ದು ಬಿಡುಗಡೆಯ ಬೆಳಕಿಗಾಗಿ
ಭರವಸೆಯಿಂದ ಹಾತೊರೆಯುತ್ತಿತ್ತು. ಈ ಭರವಸೆಯ ಬೆಳಕು ನಂದಿಹೋಗುವ ಮುನ್ನ ಸರ್ವೇಶ್ವರರಾದ ಪ್ರಭು
ದೇವರು ಮಾನವ ಕುಲವನ್ನು ಉದ್ಧಾರಮಾಡಲೆಂದೇ ಅದರ ಅವಿಧೇಯತೆಯನ್ನು ಲೆಕ್ಕಿಸದೆ ಒಂದು ಸರ್ವಶ್ರೇಷ್ಠ
ಹಾಗೂ ಪರಿಪೂರ್ಣ ಯೋಜನೆಯನ್ನು ರೂಪಿಸಿದರು. ಏಕೆಂದರೆ ಸರ್ವೇಶ್ವರರಾದ ಪ್ರಭು ದೇವರು ಸೃಷ್ಠಿಯ
ಮುಕುಟವಾಗಿರುವ ಮಾನವ ಕುಲವನ್ನು ಎಲ್ಲೆಗಳಿಲ್ಲದೆ ಹಾಗೂ ನಿಬಂಧನೆಗಳಿಲ್ಲದೆ ಬಹಳವಾಗಿ
ಪ್ರೀತಿಸಿದರು. ಅವರ ಪ್ರೀತಿಯ ಅಂತರಾಳವನ್ನು ಗ್ರಹಿಸಿಕೊಳ್ಳುವುದರಲ್ಲಿ ಮಾನವಕುಲ ಇನ್ನೂ ಸಹ
ಸಫಲವಾಗಿಲ್ಲ. ಆದರೂ ಅವರಿಗಾಗಿ ನಂದಿಹೋಗದ,
ಶಾಶ್ವತ
ಬೆಳಕನ್ನೀಯಲು ಬೆಳಕಿನ ಮೂಲವಾದ ತಮ್ಮ ಒಬ್ಬನೇ ಮಗನನ್ನು ಲೋಕೋದ್ಧಾರಕ್ಕಾಗಿ ಕಳುಹಿಸಲು “ಇಗೋ, ಕನ್ಯೆಯೊಬ್ಬಳು ಗರ್ಭತಳೆದು ಪುತ್ರನೊಬ್ಬನನ್ನು ಪ್ರಸವಿಸುವಳು ಇಮ್ಮಾನುವೇಲ್ ಎಂದು ಆತನಿಗೆ
ಹೆಸರಿಡುವಳು” (ಯೆಶಾಯ 7:14; ಮತ್ತಾಯ 1:23) ಎಂಬ ಭರವಸೆಯನಿತ್ತರು. ಅದರಂತೆಯೇ “ಕಾಲವು
ಪರಿಪಕ್ವವಾದಾಗ ದೇವರು ತಮ್ಮ ಪುತ್ರನನ್ನೇ ಕಳುಹಿಸಿಕೊಟ್ಟರು. ಇವರು ಧರ್ಮಶಾಸ್ತ್ರಕ್ಕೆ ಅಧೀನರಾದವರನ್ನು ಬಿಡುಗಡೆ
ಮಾಡುವುದಕ್ಕಾಗಿಯೂ ದೇವಪುತ್ರರ ಪದವಿಯನ್ನು ನಮಗೆ ಒದಗಿಸಿಕೊಡುವುದಕ್ಕಾಗಿಯೂ ಒಬ್ಬ ಸ್ತ್ರೀಯಲ್ಲಿ
ಜನಿಸಿದರು. ಧರ್ಮಶಾಸ್ತ್ರಕ್ಕೆ ಅಧೀನರಾಗಿಯೇ ಹುಟ್ಟಿದರು” (ಗಲಾತ್ಯ 4:4).
ಪ್ರಭು ಯೇಸು ಕ್ರಿಸ್ತನ ಆಗಮನ ವಿಶ್ವದಲ್ಲಿ ಅಳಿಸಲಾರದ
ನವ ಇತಿಹಾಸವನ್ನು ಆರಂಭಿಸಿತು. ಅದು ಜನಮನದಲ್ಲಿ ನವೋಲ್ಲಾಸದ ಕಹಳೆಯನ್ನು ಮೊಳಗಿಸಿತು. ಸಮನತೆ, ಶಾಂತಿ, ಸೌಹಾರ್ದತೆಯ ಬಿತ್ತನೆ
ಆರಂಭವಾಯಿತು. ಅಂದು ಅರಂಭಗೊಂಡ ಆ ಆರದ ಬೆಳಕು ಕತ್ತಲೆಯೊಡನೆ ಸನ್ನದ್ಧವಾಗಿ ನಿರಂತರವೂ ಯುದ್ಧ
ಮಾಡುತ್ತಲೇ ಸಾಗಿದೆ. ಆದರೂ ಮಾನವನ ಅಂತರಂಗದಲ್ಲಿ ದ್ವೇಷ, ಸ್ವಾರ್ಥ, ಅಸೂಯೆ, ಮೋಸ, ವಂಚನೆಗಳೆಂಬ ಕತ್ತಲು
ಅವನ ಬುದ್ಧಿಯನ್ನು ಸಂಕುಚಿತಗೊಳಿಸಿ ಕತ್ತಲೆಯ
ಗಾಢಾಂಧಕಾರಕ್ಕೆ ದೂಡುತ್ತಲಿದೆ. ಆದರೂ ಈ ಪ್ರಜ್ವಲಿಸುವ ಆರದ ಬೆಳಕನ್ನು ನಿಗ್ರಹಿಸಲು
ಅವುಗಳಿಂದಾಗುತ್ತಿಲ್ಲ. ಈ ಲೋಕದ ಯಾವ ಶಕ್ತಿಯಿಂದಲೂ ಅದು ಸಾಧ್ಯವೇ ಇಲ್ಲ! ಈ ಕಾರಣ ಪ್ರಭು ಯೇಸು
ಕ್ರಿಸ್ತನ ಜನನ ಕತ್ತಲೆಯನ್ನು ಭೇದಿಸಿ ಬೆಳಕನ್ನು ಚೆಲ್ಲುತ್ತ ಮುನ್ನಡೆಯುತ್ತಿದೆ. ಮಾನವನನ್ನು
ಆವರಿಸಿರುವ ಸರ್ವಾಂಧಕಾರವನ್ನು ಸಂಪೂರ್ಣವಾಗಿ ನೀಗಿಸುವುದೇ ಈ ಬೆಳಕಿನ ಪರಮ ಗುರಿ. “ಆ ಜ್ಯೋತಿ
ಕತ್ತಲಲ್ಲಿ ಪ್ರಕಾಶಿಸುತ್ತದೆ” (ಯೊವಾನ್ನ 1:5)
ಎಂದು ಹೇಳಿದ ಯೊವಾನ್ನನ
ಮಾತು ಆಕ್ಷರ ಸಹ ಸತ್ಯವಾಗಿದೆ.
ಈ
ಸತ್ಯದ ಬೆಳಕು ಜನಮನದಲ್ಲಿ ನಿರಂತರವೂ ರಾರಾಜಿಸುತ್ತಿದೆ. ಮಾನವನ ಅಂತರಂಗವನ್ನು ಆವರಿಸಿರುವ
ಅವಿಧೇಯತೆಯ, ಅಹಂಕಾರದ ಕತ್ತಲೆಯನ್ನು
ದಮನಗೊಳಿಸಿ ನೀತಿ-ನ್ಯಾಯದ ಬೆಳಕನ್ನು ಚೆಲ್ಲುತ್ತಿದೆ. ಸ್ವಾರ್ಥವನ್ನು ನೀಗಿಸಿ ಸೌಹಾರ್ದತೆಯನ್ನು
ಕಟ್ಟಿ ಬೆಳೆಸುತ್ತಿದೆ. ಸರ್ವರೂ “ದೇವರ ಮಕ್ಕಳಾಗುವ ಹಕ್ಕನ್ನು” (ಯೊವಾನ್ನ 1:12) ಆ ಬೆಳಕು ನೀಡುತ್ತಿದೆ. ಅಂದು ಬೆತ್ಲಹೇಮಿನಲ್ಲಿ ಪ್ರಭು
ಯೇಸು ಕ್ರಿಸ್ತನ ಜನನವಾದಾಗ ಸ್ವರ್ಗದ ದೂತರು ಸಾರಿದ “ಮಹೋನ್ನತದಲ್ಲಿ ದೇವರಿಗೆ ಮಹಿಮೆ; ಭೂಲೋಕದಲ್ಲಿ ದೇವರೊಲಿದ ಮಾನವರಿಗೆ ಶಾಂತಿ” (ಲೂಕ 2:14) ಎಂಬ ಸಂದೇಶವನ್ನು ಕೇಳಿದೊಡನೆ
ಸ್ವಾರ್ಥರಹಿತರಾಗಿದ್ದ ಮುಗ್ಧ ಕುರುಬರು “ಬನ್ನಿ, ಸರ್ವೇಶ್ವರ ನಮಗೆ ತಿಳಿಸಿದ ಘಟನೆಯನ್ನು ನೋಡಲು ಈಗಲೇ ಬೆತ್ಲೆಹೇಮಿಗೆ ಹೋಗೋಣ ಎಂದು
ಒಬ್ಬರಿಗೊಬ್ಬರು ಹೇಳಿಕೊಂಡರು. ಅಲ್ಲಿಂದ ತ್ವರೆಯಾಗಿ ಹೋಗಿ, ಮರಿಯಳನ್ನೂ ಜೋಸೆಫನನ್ನೂ, ಗೋದಲಿಯಲ್ಲಿ ಮಲಗಿದ್ದ
ಶಿಶುವನ್ನೂ ಕಂಡರು” (ಲೂಕ 2:15). ಅವರು ಪ್ರಭುವನ್ನು ಕಂಡು
ಪುಳಕಗೊಂಡು ಪಾವನರಾಗಿ “ದೇವರ ಮಹಿಮೆಯನ್ನು ಸಾರುತ್ತಾ, ಕೊಂಡಾಡುತ್ತಾ ಹಿಂದಿರುಗಿದರು” (ಲೂಕ 2:20).
ಅವರಲ್ಲಿ
‘ಅಹಂ’ ಇರಲಿಲ್ಲ. ಕಾರಣ ಕತ್ತಲೆಗೆ ಅವರಲ್ಲಿ ಸ್ಥಳವಿರಲಿಲ್ಲ. ಅವರಲ್ಲಿ ಕಿತ್ತು ತಿನ್ನುವ
ಮನಸ್ಸಿರಲಿಲ್ಲ. ಮೋಸಮಾಡುವ ಅರಿವಿರಲಿಲ್ಲ. ಸತ್ಯದ ಬೆಳಕು ಅವರನ್ನು ಆವರಿಸಿತ್ತು. e್ಞÁನದ ಬೆಳಕು ಅವರನ್ನು
ಪ್ರೇರೇಪಿ¸ತ್ತಿತ್ತು. ಈ ಕಾರಣ ಅವರಲ್ಲಿ
ಲೌಕಿಕ ಆಶೆಆಕಾಂಕ್ಷೆಗಳಿಗೆ ಇತಿಮಿತಿಯಿತ್ತು. ಅವರಲ್ಲಿ ಅಷ್ಟೈಶ್ವರ್ಯವಿರಲಿಲ್ಲ. ಆದರೆ ಅವರ
ಬದುಕು ನಿಷ್ಕಲ್ಮಶವಾಗಿತ್ತು. ಅದು ಪ್ರಭು ಯೇಸು ಕ್ರಿಸ್ತನ ಬೆಳಕಿನ ಆಶ್ರಯದಲ್ಲಿ ಸುಗಮವಾಗಿ
ಸಾಗುತ್ತಿತ್ತು.
ಸದ್ಭಾವನೆ,
ಸನ್ಮಾರ್ಗ, ಸದಾಭಿಲಾಷೆಯುಳ್ಳ ಬದುಕು ಸಂಪದ್ಭರಿತವಾಗುತ್ತದೆ. ನ್ಯಾಯ-ನೀತಿ, ಪ್ರೀತಿ-ಪ್ರೇಮ, ಸಮಾನತೆ ಅಲ್ಲಿ
ರಾರಾಜಿಸುತ್ತದೆ. ಅಲ್ಲಿ ಈರ್ಷ್ಯೆ, ಅಸಮಾನತೆಗೆ, ಅನೀತಿಗೆ ಹಾಗೂ ದುರಾಸೆಯ ಕತ್ತಲಿಗೆ ಅವಕಾಶವಿರುವುದಿಲ್ಲ. ಅಲ್ಲಿ ಸೌಹಾರ್ದತೆಯ ಬೆಳಕು
ಮನೆಮಾಡುತ್ತದೆ. ಏಕೆಂದರೆ ಪ್ರಭು ಕ್ರಿಸ್ತನ ಬೆಳಕು ಸಾಮರಸ್ಯದ, ಸಮಾನತೆಯ, ಸಹಬಾಳ್ವೆಯ ಬದುಕಿಗೆ
ಕರೆನೀಡಿ ದ್ವೇಷದ ಕತ್ತಲೆಯನ್ನು ದೂರಸರಿಸಿ ನ್ಯಾಯ-ನೀತಿಯ, ಪ್ರೀತಿ-ಪ್ರೇಮದ ಬೆಳಕಿನ ಬೆಸುಗೆಯನ್ನು ಹಾಕುತ್ತದೆ. ಅಲ್ಲಿ ಕತ್ತಲೆಯ ಅಸಮಾನತೆ ತೊಲಗಿ, ಸಮಾನತೆಯ ಬೆಳಕು ಹರಿದು ಮಾನವ ಧನ್ಯನಾಗುತ್ತಾನೆ. ಆ ಆರದ ಬೆಳಕು ಇಡೀ ವಿಶ್ವವನ್ನು ಹೊತ್ತು
ಉರಿಯಲಾರಂಭಿಸಿದರೆ ಅe್ಞÁನದ ಕತ್ತಲು ಸರಿದು ಸುe್ಞÁನದ ಬೆಳಕು ಉರಿಯಲಾರಂಬಿಸುತ್ತದೆ. ಪ್ರಭು ಯೇಸು ಕ್ರಿಸ್ತನ ಜನನದ ಮೂಲ ಆಶಯÀವೇ ಇದು. ಇದು ಸಫಲಗೊಳಿಸಲು ಮಾನವ ಸಹಕರಿಸಿದರೆ ಅವನ ಅಂತರಂಗದ ಗಾಢ ಕತ್ತಲೆ ಸರಿದು ಬೆಳಕು
ಹರಿದಂತೆಯೇ! ಹಾಗಾದಾಗ ಯಾವ ಕೊರೋನ ಬಂದರೇನಂತೆ?
ಅದನ್ನು
ಸದೆಬಡಿದು ಮನ್ನಡೆಯಲು ಭರವಸೆ ತುಂಬಿದ ಆ ಆರದ ಬೆಳಕು ಮಾನವಕುಲಕ್ಕೆ ಸ್ಥೈರ್ಯವನ್ನು
ನೀಡುವುದರಲ್ಲಿ ಯಾವ ಸಂಶಯವೂ ಇಲ್ಲ!
No comments:
Post a Comment