ಪೋಪ್ ಫ್ರಾನ್ಸಿಸರು 2013ರಲ್ಲಿ ವಿಶ್ವಗುರುವಾಗಿ ಆಯ್ಕೆಯಾದಾಗ ಅವರ ವಯಸ್ಸು 76ವರ್ಷ. ಅವರು ಲ್ಯಾಟಿನ್ ಅಮೆರಿಕದಿಂದ ಆಯ್ಕೆಯಾದ ಮೊದಲ ಪೋಪ್. ಅಲ್ಲದೆ ಪೋಪರಾಗಿ ಆಯ್ಕೆಯಾದ
ಮೊದಲ ಯೇಸುಸಭೆಯ ಗುರುವೂ ಕೂಡ. ಅವರು ತಮ್ಮ ವಿಶ್ವಗುರುಪೀಠದಿಂದ ಇದುವರೆಗೆ ಐದು ಪರಿಪತ್ರಗಳನ್ನು
ಹೊರಡಿಸಿದ್ದಾರೆ. ಇವೆಲ್ಲವೂ ಪವಿತ್ರಾತ್ಮರ ಪ್ರೇರಣೆಯಿಂದ ಅವರೇ ಸ್ವತಃ ಪಡಿಮೂಡಿಸಿದ ಅಂತರಾಳದ
ನುಡಿಗಳಾಗಿವೆ, ಹಾಗೂ ಆದರ್ಶ
ತತ್ತ್ವಗಳನ್ನೊಳಗೊಂಡಿವೆ. ತಾವು ಪೋಪರಾಗಿ ಆಯ್ಕೆಯಾದ ಮೊದಲ ವರ್ಷದಲ್ಲೇ ಅವರು ಎರಡು
ಪರಿಪತ್ರಗಳನ್ನು ಹೊರಡಿಸಿದರು. ಅವು ಲ್ಯೂಮೆನ್ ಫಿದೇಯಿ (ವಿಶ್ವಾಸದ ಬೆಳಕು) ಮತ್ತು ಇವಾಂಜೆಲೀ
ಗವುದಿಯುಮ್ (ಸುವಾರ್ತಾ ಪ್ರಚಾರದ ಸಡಗರ). ಇವಲ್ಲದೆ ಅವರು 2015ರಲ್ಲಿ ಲಾವುದಾತೊ ಸಿ (ನಮ್ಮ ಸಹಜ ಮನೆಯ ಕಾಳಜಿ), 2016ರಲ್ಲಿ ಆಮೋರಿಸ್ ಲೆಟೀಶಿಯ (ಪ್ರೀತಿಯೆಂಬ ಸಂಭ್ರಮ) ಹಾಗೂ 2018ರಲ್ಲಿ ಗವುದೇತೆ ಎತ್ ಎಕ್ಸುಲ್ತಾತೆ (ಇಂದಿನ
ಜಗತ್ತಿನಲ್ಲಿ ಪಾವಿತ್ರ್ಯಕ್ಕೆ ಕರೆಯೋಲೆ) ಎಂಬುವು. ಇದೀಗ ಅಂದರೆ 2020 ಅಕ್ಟೋಬರ್ ಮೂರರಂದು ಅವರು ಹೊರಡಿಸಿದ ಪರಿಪತ್ರ
‘ಫ್ರಾತೆಲ್ಲಿ ತುತ್ತಿ’ (ಎಲ್ಲರೂ ಒಡಹುಟ್ಟಿದವರು). ಅಸಿಸಿಯ ಸಂತ ಫ್ರಾನ್ಸಿಸರ ಸಮಾಧಿಗುಹೆಯಲ್ಲಿ
ಅಂದು ಪೋಪ್ ಫ್ರಾನ್ಸಿಸರು ಈ 84 ಪುಟಗಳ ದೀರ್ಘ
ಪರಿಪತ್ರಕ್ಕೆ ರುಜು ಮಾಡುವ ಮೂಲಕ ಅದನ್ನು ಲೋಕಾರ್ಪಣೆ ಮಾಡಿದರು. ಈ ಲೇಖನದಲ್ಲಿ ಫ್ರಾತೆಲ್ಲಿ
ತುತ್ತಿಯ ಸಾರಾಂಶವನ್ನು ಕೊಡುವ ಪ್ರಯತ್ನ ಮಾಡಲಾಗಿದೆ.
ಪೋಪ್ ಫ್ರಾನ್ಸಿಸ್ ಅವರ ನೂತನ ಪರಿಪತ್ರದ ಸಾರ
ಜನರು ಮತ್ತು ಸಂಸ್ಥೆಗಳು ಹೀಗೆ ಎಲ್ಲರ ಕೊಡುಗೆಯೊಂದಿಗೆ
ಒಂದು ಸುಂದರ, ನ್ಯಾಯಯುತ ಮತ್ತು ಶಾಂತಿಯುತ
ಜಗತ್ತನ್ನು ನಿರ್ಮಿಸಲು ಜಗದ್ಗುರುಗಳು ಸಹೋದರತ್ವ ಮತ್ತು ಸಾಮಾಜಿಕ ಸ್ನೇಹ ಎಂಬ ಎರಡು
ಮಾರ್ಗಗಳನ್ನು ಸೂಚಿಸುತ್ತಾರೆ. ಯುದ್ಧಕ್ಕೆ ಮತ್ತು ಎಲ್ಲೆಡೆ ಹಬ್ಬಿ ಹರಡಿರುವ ಔದಾಸೀನ್ಯಕ್ಕೆ ಪೋಪ್
ಜಗದ್ಗುರುಗಳು ತೋರುವ ತಿರಸ್ಕಾರವೇ ಈ ಪರಿಪತ್ರದಲ್ಲಿ ಸ್ಥೂಲವಾಗಿ ಎದ್ದು ಕಾಣುತ್ತದೆ.
ತಮ್ಮ ಸಾಮಾನ್ಯ ನೆಂಟಸ್ತಿಕೆಯಲ್ಲಿ, ಸಾಮಾಜಿಕ ಜೀವನದಲ್ಲಿ, ರಾಜಕೀಯದಲ್ಲಿ ಮತ್ತು
ಸಂಸ್ಥೆಗಳಲ್ಲಿ ನ್ಯಾಯಯುತ ಮತ್ತು ಸೋದರತ್ವದ ವಾತಾವರಣವನ್ನು ರಚಿಸಲು ಬಯಸುವವರಿಗೆ ಉತ್ತಮ
ಆದರ್ಶಗಳು ಅದರಲ್ಲೂ ಸ್ಪಷ್ಟವಾದ ಮಾರ್ಗಗಳು ಯಾವುವು?
‘ಫ್ರಾತೆಲ್ಲಿ
ತುತ್ತಿ’ ಯಲ್ಲಿ ಇವೆಕ್ಕೆಲ್ಲ ಸ್ಪಷ್ಟವಾದ ಉತ್ತರವಿದೆ: ಜಗದ್ಗುರುಗಳು ಇದನ್ನು ‘ಸಾಮಾಜಿಕ
ವಿಶ್ವಕೋ±’ವೆಂದೇ ಉದ್ಗರಿಸುತ್ತಾರೆ, ಅಸ್ಸಿಸಿಯ ಸಂತ ಫ್ರಾನ್ಸಿಸರ ‘ಉಪದೇಶಗ¼’
(ಅಡ್ಮಾನಿಶನ್ಸ್)
ತಲೆಬರಹವನ್ನೇ ಇದು ಎರವಲಾಗಿ ಪಡೆದಿದೆ, ಇವೇ ಪದಗಳಿಂದ ಅವರು ತಮ್ಮ
ಸಹೋದರ ಸಹೋದರಿಯರನ್ನು ಮಾತಾಡಿಸಿದ್ದರು ಹಾಗೂ ಸುವಾರ್ತೆಯ ಸುವಾಸನೆಯುಕ್ತ ಜೀವನ ವಿಧಾನವನ್ನು
ಅವರಿಗೆ ಪರಿಚಯಿಸಿದರು. ಆ ಬಡವರಬಂಧು ‘ಸಿದ್ಧಾಂತಗಳನ್ನು ಹೇರುವ ಹುನ್ನಾರದ ವಾಕ್ಚಾತುರ್ಯ ತೋರುವ
ಬದಲಿಗೆ ದೇವರ ಪ್ರೀತಿಯನ್ನು ಸರಳವಾಗಿ ಹಂಚುವ ಮೂಲಕ ಎಲ್ಲರಿಗೂ ಪಿತೃಸ್ವರೂಪಿಯಾದರು ಮತ್ತು
ಎಲ್ಲರೂ ಅಣ್ಣತಮ್ಮ ಎಂಬ ಸಮಾಜದ ದೃಷ್ಟಿಗೆ ಪ್ರೇರಣೆ ನೀಡಿದರು’ ಎಂದು ಪೋಪ್ ಬರೆಯುತ್ತಾರೆ.
ಈ ಪರಿಪತ್ರವು ಎಲ್ಲಾ ಕಾಲದೇಶಗಳಲ್ಲಿ ಸೋದರತ್ವ ಮತ್ತು
ಸಾಮಾಜಿಕ ಸ್ನೇಹವನ್ನು ಉತ್ತೇಜಿಸುವ ಮಹತ್ವಾಕಾಂಕ್ಷೆ ಹೊಂದಿದೆ. ಮಾನವ ಸಂಕುಲದಲ್ಲಿನ ನಮ್ಮ
ಒಬ್ಬೊಬ್ಬರ ಸಾಮಾನ್ಯ ಸದಸ್ಯತ್ವದಿಂದ ಪ್ರಾರಂಭಿಸಿ,
ನಾವೆಲ್ಲರೂ
ಒಬ್ಬನೇ ಸೃಷ್ಟಿಕರ್ತನ ಮಕ್ಕಳು ಎಂಬುದನ್ನು ಒಪ್ಪುವ ಮೂಲಕ ನಾವೆಲ್ಲ ಒಡಹುಟ್ಟಿದವರಾಗಿದ್ದೇವೆ, ಎಲ್ಲರೂ ಒಂದೇ ದೋಣಿಯಲ್ಲಿದ್ದೇವೆ ಮತ್ತು ಜಗದಗಲ ಮುಗಿಲಗಲ ಪರಸ್ಪರ ಹೆಣೆದುಕೊಂಡ ಈ
ಪ್ರಪಂಚದಲ್ಲಿ ನಾವು ಒಟ್ಟಾದಾಗ ಮಾತ್ರ ಉಳಿಯುತ್ತೇವೆ ಇಲ್ಲದಿದ್ದರೆ ನಾಶವಾಗುತ್ತೇವೆ.
ಇಂದು ಜಗತ್ತು ಒಂದು ಐತಿಹಾಸಿಕ ಒಪ್ಪಂದಕ್ಕೆ
ಸಾಕ್ಷಿಯಾಗಿದೆ. 2019 ಫೆಬ್ರವರಿಯಲ್ಲಿ ಅಲ್ ಅಝರ್
ನ ದೊಡ್ಡ ಇಮಾಮರು ಮತ್ತು ಜಗದ್ಗುರು ಫ್ರಾನ್ಸಿಸರು ಒಟ್ಟಿಗೆ ರುಜು ಹಾಕಿದ ಸೋದರತ್ವದ
ದಸ್ತಾವೇಜನ್ನು ಸ್ಫೂರ್ತಿದಾಯಕ ಸಂಕೇತವಾಗಿ ಪದೇ ಪದೇ ಉಲ್ಲೇಖಿಸಲಾಗುತ್ತಿದೆ. ನಾವೆಲ್ಲರೂ
ಅಣ್ಣತಮ್ಮ ಎಂಬುದನ್ನು ಬರಿ ಶಬುದಗಳಿಂದ ಅಲ್ಲ ಕ್ರಿಯೆಗಳಿಂದ ಪೆÇ್ರೀತ್ಸಾಹಿಸಬೇಕು. ಕ್ರಿಯೆಗಳು ಸ್ಪಷ್ಟವಾಗುವುದು ‘ಉತ್ತಮ ರಾಜಕಾರಣದಲ್ಲಿ’, ಆರ್ಥಿಕ ಹಿತಾಸಕ್ತಿಯು ಅದನ್ನು ಅದುಮಬಾರದು,
ಸರ್ವರ
ಒಳಿತಿಗಾಗಿ ಅದು ಶ್ರಮಿಸಬೇಕು, ಪ್ರತಿ ಮನುಷ್ಯಜೀವಿಯ ಘನತೆಯ
ಸುತ್ತಲೇ ಕೆಲಸ ಮಾಡುವ ಮತ್ತು ಎಲ್ಲರಿಗೂ ಕೆಲಸವನ್ನು ಖಾತ್ರಿಗೊಳಿಸುವ ಮೂಲಕ ಪ್ರತಿಯೊಬ್ಬರೂ
ತಮ್ಮನ್ನು ಬೆಳೆಸಿಕೊಳ್ಳಬೇಕು. ರಾಜಕೀಯವು ಜನಪ್ರಿಯತೆಯಿಂದ ಹೊರಬಂದಲ್ಲಿ, ಮಾನವ ಹಕ್ಕುಗಳ ಮೇಲಿನ ದಾಳಿಗಳಿಗೆ
ಪರಿಹಾರಗಳನ್ನು ಕಂಡುಹಿಡಿಯಲು ಸಾಧ್ಯ, ಅದರಿಂದ ಹಸಿವು ಮತ್ತು
ಕಳ್ಳಸಾಗಣೆಯನ್ನು ನಿವಾರಿಸುವ ಖಚಿತ ಗುರಿಯನ್ನು ಪಡೆಯುತ್ತದೆ. ಅದೇ ವೇಳೆಯಲ್ಲಿ, ಶಾಂತಿಯನ್ನು ಎತ್ತಿಹಿಡಿಯುವುದರಿಂದ ನಿಯತ್ತಿನ ಜಗತ್ತನ್ನು ಕಾಣಬಹುದು, ಶಾಂತಿಯೆಂದರೆ ಯುದ್ಧವಿಲ್ಲದ ಜಗ ಮಾತ್ರವಲ್ಲ,
ಅದೊಂದು
ಕುಸುರಿಕೆಲಸ, ಅದಕ್ಕೆ ಎಲ್ಲರ
ಒಳಗೊಳ್ಳುವಿಕೆ ಬಹುಮುಖ್ಯ ಎಂದು ಪೋಪ್ ಜಗದ್ಗುರುಗಳು ಒತ್ತಿ ಹೇಳುತ್ತಾರೆ. ಶಾಂತಿ ಮತ್ತು
ಸಂಧಾನಗಳು ಸತ್ಯದೊಂದಿಗೆ ಮಿಳಿತವಾಗಿ ಕ್ರಿಯಾಶೀಲವಾಗಬೇಕು. ಅವು ಪರಸ್ಪರ ಅಭಿವೃದ್ಧಿಯ ನೆವದಲ್ಲಿ ಮಾತುಕತೆಯತ್ತ ಮುನ್ನುಗ್ಗಬೇಕು,
ವಿಶ್ವಗುರುಗಳು ಯುದ್ಧವನ್ನು ಖಂಡಿಸುತ್ತಾರೆ. ಯುದ್ಧವು
‘ಎಲ್ಲಾ ಹಕ್ಕುಗಳನ್ನು ನಿರಾಕರಿಸುತ್ತದೆ’. ಕಾಲ್ಪನಿಕವಾಗಿ ‘ಸಮರ್ಥಿಸಲ್ಪಟ್ಟ’ ರೂಪದಲ್ಲಿಯೂ ಸಹ
ಅದನ್ನು ಪರಿಭಾವಿಸಬಾರದು, ಏಕೆಂದರೆ ಪರಮಾಣು, ರಾಸಾಯನಿಕ ಮತ್ತು ಜೈವಿಕ ಶಸ್ತ್ರಾಸ್ತ್ರಗಳು ಈಗಾಗಲೇ ಮುಗ್ಧ ನಾಗರಿಕರ ಮೇಲೆ ಅಗಾಧ
ಪರಿಣಾಮಗಳನ್ನು ಉಂಟುಮಾಡಿವೆ.
ವಿಶ್ವಗುರುಗಳು ಮರಣದಂಡನೆಯನ್ನೂ ವಿರೋಧಿಸುತ್ತಾರೆ.
ಕ್ಷಮೆಯು ನ್ಯಾಯದೊಂದಿಗೆ ತಳುಕು ಹಾಕಿಕೊಂಡಿದೆ. ಕ್ಷಮೆಯೆಂಬುದು ಒಬ್ಬನನ್ನು ತೊರೆದುಬಿಡುವುದಲ್ಲ, ಅವನ ಘನತೆಯನ್ನು ಎತ್ತಿಹಿಡಿಯುವುದು,
ಹಕ್ಕುಗಳನ್ನು
ಕೊಡಮಾಡುವುದು. ಏಕೆಂದರೆ ಘನತೆ ಮತ್ತು ಹಕ್ಕುಗಳು ದೇವರ ಕೊಡುಗೆಯಾಗಿವೆ.
ಈ ಪರಿಪತ್ರವನ್ನು ಸಿದ್ಧಪಡಿಸುತ್ತಿರುವಾಗಲೇ
ಅನಿರೀಕ್ಷಿತವಾಗಿ ಕರೋನಾ ಎಂಬ ಸಾಂಕ್ರಾಮಿಕ ತಲೆದೋರಿದೆ. ಆದರೆ ಯಾರೂ ಬದುಕನ್ನು ಒಂಟಿಯಾಗಿ
ಎದುರಿಸಲಾಗದು, ಆದ್ದರಿಂದ ಒಂದೇ ವಿಶ್ವಮಾನವ
ಕುಟುಂಬದ ಕನಸು ಕಾಣೋಣ, ಅದರಲ್ಲಿ ಎಲ್ಲರೂ
ಅಣ್ಣತಮ್ಮಂದಿರು ಅಕ್ಕತಂಗಿಯರು.
No comments:
Post a Comment