Tuesday, 10 November 2020

ಕಣ್ಣು ಹನಿಗೂಡಿತು...


ನೋಡಿದ್ದು ಒಂದು ಅದ್ಭುತವಾದ ಕಿರುಚಿತ್ರ. ಕೆಲವೇ ನಿಮಿಷಗಳೇ ಜೀವನದ ಅತೀ ಮುಖ್ಯ ಮೌಲ್ಯವಾದ ಅನುಭೂತಿಯ ಬಗ್ಗೆ ತಿಳಿ ಹೇಳುವ ಚಿತ್ರವಿದು. ಬರಹಗಾರರಾದ ಪುರುಷೋತ್ತಮರವರ ಯುಟೂಬ್ ಚಾನೆಲ್‌ನ್ನು ಕಣ್ಣಾಯಿಸುವಾಗ ಕಣ್ಣು ಹನಿಗೂಡಿತು ಎಂಬ ತಲೆಬರಹದೊಂದಿಗೆ ಕಂಡಂತಹ ಚಿತ್ರವಿದು. 

ಒಬ್ಬ ವಿದ್ಯಾರ್ಥಿಯು ಶಾಲೆಗೆ ತಡವಾಗಿ ಬರುವ ದೃಶ್ಯದಿಂದ ಆರಂಭವಾಗುತ್ತದೆ ಈ ಚಿತ್ರ. ಶಾಲೆಗೆ ತಡವಾಗಿ ಬಂದ ವಿದ್ಯಾರ್ಥಿ ಬಾಗಿಲನ್ನು ತಟ್ಟಿ, ಶಿಕ್ಷಕರ ಅಪ್ಪಣೆ ಪಡೆದು ತರಗತಿಯ ಒಳಗೆ ಹೋಗಿ ಟೀಚರ್ ಮುಂದೆ ನಿಲ್ಲುತ್ತಾನೆ. ಟೀಚರ್,  ಕುಪಿತನಾಗಿ ಕಾರಣಕ್ಕೆ ಕಾಯದೆ, ಕೈಯನ್ನು ಮುಂದು ಮಾಡಲು ವಿದ್ಯಾರ್ಥಿಗೆ ಹೇಳಿ, ಸ್ಕೇಲ್‌ನಿಂದ ಹೊಡೆದು ತರಗತಿಯಲ್ಲಿ ಕೂರಲು ಅನುಮತಿಸುತ್ತಾನೆ. ಪೆಟ್ಟನ್ನು ತಿಂದ ವಿದ್ಯಾರ್ಥಿ ಅತೀವ ನೋವಿನಿಂದ ತನಗೆ ಮೀಸಲಿಟ್ಟ ಸ್ಥಳಕ್ಕೆ ಹೋಗಿ ಕುಳಿತುಕೊಳ್ಳುತ್ತಾನೆ. ಹೀಗೆ ಇದು ಪ್ರತಿದಿನದ ದೃಶ್ಯವಾಗಿ ಚಿತ್ರ ಮುಂದುವರೆಯುತ್ತದೆ. 

ಒಂದು ದಿನ ಟೀಚರ್ ತನ್ನ ಸೈಕಲ್ ತುಳಿಯುತ್ತಾ ಶಾಲೆಗೆ ಬರುವಾಗ, ಪ್ರತಿದಿನ ಶಾಲೆಗೆ ತಡವಾಗಿ ಬರುವ ವಿದ್ಯಾರ್ಥಿಯನ್ನು ಕಾಣುತ್ತಾನೆ. ಅವನು ಕಾಣುವ ದೃಶ್ಯದಿಂದ ದಂಗಾಗುತ್ತಾನೆ. ಪಾಪಪ್ರಜ್ಞೆ ಅವನಲ್ಲಿ ತುಂಬಿ ತುಳುಕುವಷ್ಟು ಅವನು ತಳಮಳಗೊಳ್ಳುತ್ತಾನೆ. ಹೌದು, ಶಾಲೆಗೆ ತಡವಾಗಿ ಬರುತ್ತಿದ್ದ ಹುಡುಗ ಕಾಲಿಲ್ಲದ ಇನ್ನೊಬ್ಬ ವಿದ್ಯಾರ್ಥಿಯನ್ನು ವೀಲ್‌ಚೈರ್‌ನಲ್ಲಿ ಕೂರಿಸಿಕೊಂಡು ನೂಕುತ್ತಾ ಅವನನ್ನು ಅವನ ಶಾಲೆಗೆ ಮುಟ್ಟಿಸಿ ಶಾಲೆಗೆ ತಡವಾಯಿತ್ತೆಂದು ಓಡುವ ದೃಶ್ಯ. ಈ ದೃಶ್ಯವನ್ನು ಕಂಡ ಶಿಕ್ಷಕ ಭಾರವಾದ ಹೃದಯದಿಂದ ಶಾಲೆಯ ಕಡೆ ಸೈಕಲ್ ಅನ್ನು ನೂಕ್ಕುತ್ತಾ ನಡೆಯುತ್ತಾನೆ. 

ವಿದ್ಯಾರ್ಥಿ ಯಥಾಪ್ರಕಾರ ತರಗತಿಗೆ ತಡವಾಗಿ ಬಂದು ಬಾಗಿಲನ್ನು ತಟ್ಟಿ ಟೀಚರ್ರವರ ಅನುಮತಿ ಪಡೆದು ತರಗತಿ ಒಳಗೆ ಬಂದು ಶಿಕ್ಷಕನ ಮುಂದೆ ನಿಂತು ಶಿಕ್ಷೆಗಾಗಿ ತನ್ನ ಕೈಯನ್ನು ಮುಂದೆ ಮಾಡುತ್ತಾನೆ. ಶಿಕ್ಷಕ ನೋವಿನಿಂದ ವಿದ್ಯಾರ್ಥಿಯ ಮುಂದೆ ಮಂಡಿಯೂರಿ, ತನ್ನ ಕೈಯಲ್ಲಿದ್ದ ಸ್ಕೇಲ್‌ನ್ನು ವಿದ್ಯಾರ್ಥಿಗೆ ನೀಡಿ, ಅವನ ಕೈ ಮುತ್ತಿಕ್ಕಿ ಕೊನೆಗೆ ಅಳುತ್ತಾ ವಿದ್ಯಾರ್ಥಿಯನ್ನು ತಬ್ಬಿಕೊಳ್ಳುತ್ತಾನೆ. ಇದು ಕಿರುಚಿತ್ರದ ಕಥೆ. ಈ ಚಿತ್ರವನ್ನು ವೀಕ್ಷಿಸಿದ ಅನೇಕರು ಈ ರೀತಿಯಾಗಿ ಕಮೆಂಟ್ ಮಾಡಿದ್ದಾರೆ:

ನಿಜ ಬಿಳಿಮಲೆ, ಕಣ್ಣು ಹನಿಗೂಡಿತು. ಬೇಸಾಯದ ದಿನಗಳಲ್ಲಿ ಬೆಳಗ್ಗೆ ಎದ್ದು ಗದ್ದೆ ಉತ್ತು ಶಾಲೆಗೆ ಹೋದಾಗ ತಡವಾದದ್ದಕ್ಕೆ ಹಲವು ಬಾರಿ ಪೆಟ್ಟು ತಿಂದದ್ದು ನೆನಪಿಗೆ ಬಂತು. ಯಾಕೆ ತಡ ಅಂತ ಕೇಳದೆ ಮೇಷ್ಟ್ರು ಹೊಡೆದದ್ದು, ಕಾರಣ ಹೇಳಲು ಆಗದೆ ಇದ್ದದ್ದು ಇತ್ಯಾದಿ.. ಆದರೆ ನಿಮ್ಮ ವೀಡಿಯೋ ದೃಶ್ಯ ಅತೀವ ನೋವು ಉಂಟುಮಾಡುವಂಥದ್ದು.. ಉಳುವಾಗ ಎತ್ತುಗಳಿಗೆ ಹೊಡೆದದ್ದಕ್ಕೆ ಶಾಲೆಯಲ್ಲಿ ಪೆಟ್ಟು ತಿನ್ನಬೇಕು ಎಂಬ ಲೆಕ್ಕಾಚಾರ ನನ್ನದಾಗಿತ್ತು!!

ಒಮ್ಮೆ ನಗರದ ಶಾಲೆಯೊಂದರಲ್ಲಿ ಕನ್ನಡ ಅಧ್ಯಾಪಕನಾಗುವ ಅವಕಾಶ ದೊರೆಯಿತು. ಹುಡುಗನೊಬ್ಬ ಉಳಿದವರಿಗೆ ದಿನಾ ತರಗತಿಯಲ್ಲಿ ಪಾಠದ ಸಂದರ್ಭದಲ್ಲಿ ತೊಂದರೆ ಕೊಡುತ್ತಿದ್ದ. ನೋಡಿ ನೋಡಿ ತಾಳ್ಮೆ ಹಾರಿ ಹೋಗಿ ಅವನಿಗೆ ಸ್ಕೇಲಲ್ಲಿ ನಾಲ್ಕು ಪೆಟ್ಟು ಕೊಟ್ಟೆ. ಹುಡುಗ ಈಗ ಹೇಗಿದ್ದಾನೋ. ಆದರೆ ಅವನನ್ನು ಹೊಡೆದ ನೋವು ಇಂದೂ ನನ್ನ ಕಾಡುತ್ತಿದೆ. ಈ ಚಿತ್ರ ನೋಡಿ ಕಣ್ಣುಗಳಲ್ಲಿ ನೀರು ತುಂಬಿತು. ನಿಜಕ್ಕೂ ಮಕ್ಕಳೆಂದರೆ ದೇವರ ಸಮಾನ ಎಂದು ಹಿರಿಯರು ಹೇಳುವುದು ಇದಕ್ಕೆ ಇರಬೇಕು.

ಇದು ಪ್ರತಿಯೊಬ್ಬ ಶಿಕ್ಷಕನೂ ನೋಡಲೇ ಬೇಕಾದ ವಿಡಿಯೋ. ನಾನೂ ಶಿಕ್ಷಕಿಯಾಗಿದ್ದಾಗ ಹೀಗೆ ಏನಾದ್ರು ಮಾಡಿರಬಹುದೇ....

ಸನ್ನಿವೇಶವನ್ನು Empathy ಯಿಂದ ನೋಡಬೇಕೆನ್ನುವುದರ ಅದ್ಭುತ ದೃಶ್ಯ ಇದು..ಸಮಸ್ಯೆಯನ್ನು ಇನ್ನೊಬ್ಬರ ದೃಷ್ಟಿಕೋನದಿಂದ ಅವಲೋಕನ ಮಾಡುವುದೇ ಎಂಪಥಿ..

ನಾನಿದನ್ನು ಎರಡನೆ ಸಲ ನೋಡಿದ್ದು. ಆದರೂ ಕಣ್ಣೀರು ಇಳಿಯಿತು.

ಈ ಮೊದಲೊಮ್ಮೆ ನೋಡಿದ್ದೆ. ಶಿಕ್ಷಕರ ಮನಸ್ಸನ್ನು ಎಚ್ಚರಿಸುವ ವೀಡಿಯೋ.

ನೀವು ಈ ಚಿತ್ರವನ್ನು ನೋಡಿ ಕಮೆಂಟ್ ಮಾಡಲು ಮರೆಯಬೇಡಿ. («rAiÉÆÃ °APï - https://www.facebook.com/purushothama.bilimale.9 vid os/10158633565744034)

 ಮಕ್ಕಳ ದಿನಾಚರಣೆಯ ಶುಭಾಶಯಗಳು

ಆನಂದ್


 

No comments:

Post a Comment

ಎತ್ತಿತೋರಿಸಲಾದ ಪೋಸ್ಟ್

ಅನ್ನಮ್ಮ’ಳಿಗೆ ೨೫೦ರ ಹಾಗೂ ಅತಿ.ವಂ.ಪೊತ್ತಕಮೂರಿಗೆ ೫೦ರ ಸ್ಮರಣೆಯ ಸಂಭ್ರಮ

ಬೆಂಗಳೂರಿನ ಉತ್ತರಹಳ್ಳಿಯ ಅನ್ನಮ್ಮನ ಬೆಟ್ಟ, ಅಲ್ಲಿನ ಅನ್ನಮ್ಮಳ ಸಮಾಧಿ, ಆ ಬೆಟ್ಟದ ಮೇಲಿನ ಶಿಲುಬೆ, ಅಲ್ಲಿ ಪ್ರತಿವರ್ಷ ತಪಸ್ಸು ಕಾಲದ ಐದನೇ ಭಾನುವಾರ ನಡೆಯುವ ಯೇಸು...