Monday, 9 November 2020

ಭಕ್ತಿ ಪ್ರಧಾನ ಆಚರಣೆಗಳು ಮತ್ತು ಸವಾಲುಗಳು - ಫಾದರ್ ಮಾರ್ಸೆಲ್ ರೊಡ್ರಿಗಸ್ ಎಸ್ ಜೆ.


ಒಬ್ಬ ಕ್ರೈಸ್ತ  ಮಗು, ತನ್ನ ಕ್ರೈಸ್ತ ಹಿರಿಯರಿಂದ ಮೊದಲು ಕಲಿಯುವುದು ಬಾಹ್ಯ ಕ್ರೈಸ್ತ ಆಚಾರಗಳನ್ನು. ತನ್ನ ಬುದ್ಧಿ ಸಾಮರ್ಥ್ಯ ಬೆಳೆಯುತ್ತಿದ್ದಂತೆ ಆ ಮಗು ಪ್ರಾರ್ಥನೆ, ಧರ್ಮೋಪದೇಶ ಮುಂತಾದ ಆವಶ್ಯಕತೆಗಳನ್ನು ಕುರಿತು ಪೂಜಾ ಪ್ರಾರ್ಥನಾ ವಿಧಿಗಳಲ್ಲಿ ಇತರ ಮಕ್ಕಳಂತೆ ಕೈ ಜೋಡಿಸಿ, ಕಲಿತ ಪ್ರಾರ್ಥನೆಗಳನ್ನು ಪಟಪಟ ಪಠಿಸಿ ಪುಟಾಣಿ ಕ್ರೈಸ್ತನಾಗಿ ಬೆಳೆಯುತ್ತದೆ. ಕ್ರಮೇಣ ಸ್ವವಿಚಾರ - ಸಶಕ್ತತೆಯಲ್ಲಿ ಬೆಳೆದಾಗ, ಧರ್ಮಸಭೆ ಆತನಿಗೆ ಅಥವಾ ಆಕೆಗೆ ಪರಮಪ್ರಸಾದ, ಪಾಪ ಸಂಕೀರ್ತನೆ ಮುಂತಾದ ಸಂಸ್ಕಾರಗಳಲ್ಲಿ ಪಾಲ್ಗೊಳ್ಳಲು ಸಿದ್ಧಗೊಳಿಸುತ್ತದೆ. ಇದರೊಂದಿಗೆ ಪೂಜಾ ವಿಧಿಗಳಲ್ಲಿ ಆ ಮಗು ಸಂಪೂರ್ಣವಾಗಿ ಭಾಗಿಯಾಗಲು ಅನುವು ಮಾಡಿ ಕೊಟ್ಟಂತಾಗುತ್ತದೆ. ಹಾಗೆಯೇ ಮುಂದೆ ದೃಢೀಕರಣ ಹಾಗೂ ಪ್ರಾಪ್ತ ವಯಸ್ಸಿನಲ್ಲಿ ವಿವಾಹ ಸಂಸ್ಕಾರದಲ್ಲೂ ಭಾಗಿಯಾಗಲು ಧರ್ಮ ಸಭೆ ನೆರವು ನೀಡುತ್ತದೆ.

ಇಷ್ಟೆಲ್ಲಾ ಸಂಸ್ಕಾರ ಹಾಗೂ ವಿಧಿ ವಿಚಾರಗಳಲ್ಲಿ ಪಾಲ್ಗೊಳ್ಳುತ್ತಾ ಬಂದರೂ ಆ ವ್ಯಕ್ತಿಯ ವಿಶ್ವಾಸ ಯಾವ ರೂಪ ತಾಳಿದೆ? ಅದರ ಮಟ್ಟ ಆಳ ಏನು? ಎಂಬುದನ್ನು ಕೇಳುವವರು   ಇದ್ದಾರೆಯೇ? ಹಲವರಿಗೆ ಪ್ರತಿದಿನ ಕುಟುಂಬ ಪ್ರಾರ್ಥನೆ ಮಾಡಿದರೆ ಅಥವಾ ಜಪಮಾಲೆ ಪ್ರಾರ್ಥನೆಗಳನ್ನು ಪಠಿಸಿದರೆ ಅದಷ್ಟೆ ಪ್ರಾರ್ಥನೆ. ವಾರವಾರಕ್ಕೂ ಬಲಿಪೂಜೆಯಲ್ಲಿ ಭಾಗವಹಿಸಿದರೆ ಅದೂ ವಿಧಿಯಾಚಾರದಂತೆ ಮುಗಿದು ಹೋಗುತ್ತದೆ. ಅವುಗಳೊಂದಿಗೆ ವಿಶ್ವಾಸದ ಆಂತರ್ಯವನ್ನು ಪರೀಕ್ಷಿವವರೇ ವಿರಳ. ದಿನನಿತ್ಯದ ಜೀವನ ಎಷ್ಟೇ ಕೆಟ್ಟದ್ದುದಾದ್ದರೂ ಪರವಾಗಿಲ್ಲ. ಮಾಮೂಲಿ ಪ್ರಾರ್ಥನೆ ಪೂಜೆಗಳಲ್ಲಿ ಭಾಗವಹಿಸ್ದರೆ ಎಲ್ಲವೂ ಸರಿಹೋದಂತೆ. ಇನ್ನು ಕೆಲವರಿಗೆ ಒಟ್ಟಾಗಿ ಒಂದು ಭಕ್ತಿಗೀತೆಯನ್ನು ರಾಗವಾಗಿ ಹಾಡಿ ಮನಸ್ಸು ಹಗುರಾಗಿಸಿದರೆ ಅದೇ ಕ್ರಿಸ್ತೀಯತೆ ಇದ್ದಂತೆ. ಕಷ್ಟ-ಸಂಕಷ್ಟಗಳು ಹೆಚ್ಚುತ್ತಿದ್ದಂತೆ ಅವುಗಳನ್ನು ಎದುರಿಸುವ ಅಥವಾ ಬಾಳುವ ತಾಳ್ಮೆಯನ್ನೂ ಹಲವು ಕ್ರೈಸ್ತರು ಬೆಳೆಸಿದಕ್ಕಿಲ್ಲ. ಸಂಕಟ ಬಂದಾಗ ವೆಂಕಟರಮಣ ಎಂಬಂತೆ, ಕ್ರಮೇಣ ಹಲವು ಭಕ್ತಿಪ್ರಧಾನ ಆಚರಣೆಗಳಲ್ಲಿ ತೊಡಗಿ ತಮ್ಮದೇ ಆದ ಧಾರ್ಮಿಕ ನಿಲುವುಗಳನ್ನು ಪಡೆಯುತ್ತಾರೆ. ಹೀಗೆ ಎಷ್ಟೊ ಮಂದಿಯಲ್ಲಿ ಭಕ್ತಿಪ್ರಧಾನ ಆಚರಣೆಗಳು ರೂಢಿಯಲ್ಲಿರುವುದು ಸರ್ವೇ ಸಾಮಾನ್ಯ. ಕ್ರೈಸ್ತ ಮಗು ಬಾಲ್ಯಾವಸ್ಥೆಯಿಂದ ಪ್ರೌಢಾವಸ್ಥೆಗೆ ಬಂದಾಗ ಆತನ/ಆಕೆಯ ವಿಶ್ವಾಸವೂ ಪ್ರೌಢಾವಸ್ಥೆಗೆ ಬರುವಂತೆ ಕೈಹಿಡಿದು ಬೆಳೆಸುವ ಜವಾಬ್ದಾರಿ ಕುಟುಂಬದಿಂದ ಮೊದಲುಗೊಂಡು ಇಡೀ ಧರ್ಮಸಭೆ ತೆಗೆದುಕೊಳ್ಳಬೇಕಾಗುತ್ತದೆ.

ಹಲವು ಕ್ರೈಸ್ತರ ವಿಶ್ವಾಸವನ್ನು ತಮ್ಮ ಬಾಲ್ಯಾವಸ್ಥೆಯ ಮಟ್ಟದಿಂದ ಪರಿವರ್ತಿಸಿ ನಿಜವಾದ ವಿಶ್ವಾಸವನ್ನು ಮತ್ತು ಕ್ರಿಸ್ತೀಯ ಜೀವನವನ್ನು ಅವರಿಗೆ ತೋರಿಸಲು ಧರ್ಮಸಭೆ ಇನ್ನಷ್ಟು ಪ್ರೋತ್ಸಾಹಿಸಬೇಕಾಗಿದೆ. ಧಾರ್ಮಿಕ ಹಿರಿಯರೇ, ಕ್ರಿಸ್ತೀಯ ವಿಶ್ವಾಸ ಕೇಂದ್ರಿತ ಬಲಿಪೂಜೆಯಲ್ಲಿ ಸಕ್ರಿಯವಾಗಿ ಭಾಗವಹಿಸುವಂತೆ ಅನುವು ಮಾಡಿ, ಅವರನ್ನ ಹುರಿದುಂಬಿಸುವವರೇ ವಿರಳ. 

ನಮ್ಮ ಕ್ರೈಸ್ತರಿಗೆ ಭಕ್ತಿಪ್ರಧಾನ ಆಚರಣೆಗಳು ಬೇಕೇ? ಸಂತ ಭಕ್ತರ ಹಬ್ಬದಾಚರಣೆಗಳು, ಅವುಗಳಿಗೆ ಅಂಟಿಕೊಂಡಂತೆ ಬೆಳೆದಿರುವ ನವೇನ ಪ್ರಾರ್ಥನೆಗಳು, ಪರಮ ಪ್ರಸಾದದ ಆರಾಧನೆ, ಜಪಮಾಲೆ ಪ್ರಾರ್ಥನೆಗಳು, ಕ್ಯಾರಿಸ್ಮಾಟಿಕ್ ಪ್ರಾರ್ಥನಾ ಕೂಟಗಳು, ಕುಟುಂಬ ಪ್ರಾರ್ಥನೆಗಳು-ಇವೆಲ್ಲವೂ ಭಕ್ತಿ ಪ್ರಧಾನ ಆಚರಣೆಗಳಾಗಿದ್ದು, ನಮ್ಮ ಕ್ರೈಸ್ತ ಬದುಕಿನ ಅವಿಭಾಜ್ಯ ಅಂಗಗಳಾಗಿ ಮಾರ್ಪಟ್ಟಂತೆ. ನಮ್ಮ ವಿಶ್ವಾಸದ ಬೆಳವಣಿಗೆಯಲ್ಲಿ ಇವುಗಳು ಅವಶ್ಯಕ ಮತ್ತು ಪ್ರಮುಖ ಪಾತ್ರವನ್ನು ವಹಿಸುತ್ತವೆ. ಆದರೆ ನಮ್ಮ ಕ್ರೈಸ್ತ ಆಚರಣೆಗಳಲ್ಲಿ ಇವೆಲ್ಲಕ್ಕಿಂತಲೂ ಮಿಗಿಲಾದುದು ಮತ್ತೊಂದು. ಅದುವೇ ಪವಿತ್ರ ಬಲಿಪೂಜೆ. ಎಷ್ಟೊ ಮಂದಿಗೆ ಬಲಿಪೂಜೆಯಲ್ಲಿ ಭಾಗವಹಿಸುವುದೆಂದರೆ ಅಸಡ್ಡೆ, ಆಲಸ್ಯ. ಭಾನುವಾರ ಬಂತೆಂದರೆ ಅದೇ ಚರ್ಚು, ಅದೇ ಫಾದರ್, ಅದೇ ಪ್ರಬೋಧನೆ, ಅದೇ ರಾಗ ಅದೇ ತಾಳ ಎಂಬಂತೆ ರಾಗಾಲಾಪನೆ ಶುರುವಾಗುತ್ತದೆ. ಹಬ್ಬದಾಚರಣೆಗಳಿದ್ದರೆ ಅವುಗಳಲ್ಲಿ ಶೋಪೀಸುಗಳಂತೆ ಅಂಲಂಕೃತಗೊಂಡು ಚರ್ಚಿನ ಸುತ್ತಮುತ್ತ ಪರೇಡ್ ಮಾಡಿ ಮನೆಗೆ ಹೊರಟರೆಂದರೆ ಮತ್ತೆ ಚರ್ಚ್  ಮುಖ ನೋಡೋದು ಇನ್ನೊಂದು ಪ್ರಮುಖ ಹಬ್ಬ ಬಂದಾಗ. ಕ್ಯಾರಿಸ್ಮಾಟಿಕ್ ಧ್ಯಾನ ಕೂಟಗಳಿವೆ ಎಂದರೆ ಹಲವರು ಕೆಲಸ ಕಾರ್ಯಗಳನ್ನು ಬದಿಗೊತ್ತಿ ದಿನವಿಡೀ ಕಳೆಯಲು ತಯಾರಿರುತ್ತಾರೆ. ಪ್ರಬೋಧಕನ ತುಟಿಯಲ್ಲೆ ಜೋತಾಡುವಂತೆ ಗಂಟೆಕಟ್ಟಲೆ ಕುಳಿತು ಕೇಳುತಿರುತ್ತಾರೆ. ದಕ್ಷಿಣ ಭಾರತದ ಹಲವೆಡೆ ಮೇರಿಮಾತೆಯ ಹಬ್ಬಗಳು ಬಂದಾಗ ಎಲ್ಲಿಲ್ಲದ ಜನಸಂದಣಿ ದೇವಾಲಯಗಳ ಆವರಣ ಸೇರುತ್ತವೆ. ಪ್ರಸಿದ್ಧ ಸಂತರ ಹಬ್ಬಗಳಂತೂ ಚರಿತ್ರೆಗಳಂತಿರುತ್ತವೆ. ಎಲ್ಲಿ ನೋಡಿದರೂ ಮಾರಾಟಕ್ಕಿಟ್ಟ ವಸ್ತುಗಳೇ. ಹಲವರು ಪೂಜಾ ಸಮಯದಲ್ಲೂ ಅವುಗಳ ವಹಿವಾಟುಗಳಲ್ಲಿ ತೊಡಗಿರುತ್ತಾರೆ. ಮತ್ತೂ ಕೆಲವರು ಸಂತರ ಅಲಂಕೃತ ಸ್ವರೂಪಕ್ಕೆ ಗೌರವ ಸಲ್ಲಿಸುವುದರಲ್ಲಿ ತೊಡಗಿರುತ್ತಾರೆ. ದಕ್ಷಿಣ ಭಾರತದ ಹಲವೆಡೆ ಈ ಹಬ್ಬಗಳಂದು ಧ್ವಜಾರೋಹಣ ಸಮಾರಂಭವನ್ನು ಹಮ್ಮಿಕೊಳ್ಳುತ್ತಾರೆ. ತದನಂತರ ಬಲಿಪೂಜೆಗಳಿರುತ್ತವೆ. ಆದರೆ ಹಲವರು ಪೂಜೆಯಲ್ಲಿ ಭಾಗವಹಿಸದೆ ಧ್ವಜಕಂಬದ ಹಗ್ಗವನ್ನೂ ಮುಟ್ಟಿ ಅದರ ಮೂಲಕ ನಂತರ ಆಶಿರ್ವಾದ ಪಡೆವ ಸಾಹಸದಲ್ಲಿ ತೊಡಗಿರುತ್ತಾರೆ. ಇನ್ನೂ ಹಲವೆಡೆ ಪರಮಪ್ರಸಾದ ಆರಾಧನೆಗಾಗಿ ಸ್ಥಳಗಳನ್ನು ನಿಗದಿಪಡಿಸಲಾಗಿದೆ.      ದಿನವಿಡೀ ಈ ಆರಾಧನೆಯಲ್ಲಿ ಪಾಲ್ಗೊಳ್ಳಲು ಅವಕಾಶಗಳಿವೆ. ಒಂದೆಡೆ ಬಲಿಪೂಜೆ ನೆರವೇರುತ್ತಿದ್ದರೂ ಜನರ ಭಕ್ತಿಯೆಲ್ಲಾ ಪರಮಪ್ರಸಾದದ ಆರಾಧನೆಯ ಕಡೆಗೆ ಇರುತ್ತದೆ. ಹಲವರಿಗೆ ಯಾವುದು ಪ್ರಮುಖವಾದುದು ಎಂಬುದೇ ತಿಳಿಯದು!

ಕ್ಯಾರಿಸ್ಮಾಟಿಕ್ ಧ್ಯಾನಕೂಟಗಳು ಹಲವರ ಜೀವನಗಳನ್ನು ರೂಪಾಂತರಿಸಿವೆ. ಅವುಗಳ ಪ್ರಭಾವದಿಂದ ಸಹಸ್ರಾರು ಜನರು ದೇವರೆಡೆಗೆ ಹಿಂತಿರುಗಿದ್ದಾರೆ. ಅವುಗಳ ಮೂಲಕ ಅನೇಕ ಕ್ರೈಸ್ತೇತರಿಗೆ ತ್ರ್ಯೇಕ  ದೇವರ ಪ್ರೀತಿಯ ಅನುಭವವಾಗಿದೆ. ಈ ಧ್ಯಾನಕೂಟಗಳು ದೇವರಲ್ಲಿ ವಿಶ್ವಾಸ ಕಳಕೊಂಡವರಿಗೆ ಪುನಶ್ಚೇತನ ನೀಡುತ್ತೇವೆ. ಮತ್ತು ಆಧ್ಯಾತ್ಮಿಕತೆಯನ್ನು ದೃಢಪಡಿಸುತ್ತೇವೆ. ಇವು ಒಬ್ಬ ಕ್ರೈಸ್ತನನ್ನು ತನ್ನ ವಿಶ್ವಾಸ ಜೀವನ ಕೇಂದ್ರವಾದ ಪವಿತ್ರ ಬಲಿಪೂಜೆಯಲ್ಲಿ ಸಕ್ರಿಯವಾಗಿ ಮತ್ತು ಸಂಪೂರ್ಣವಾಗಿ ಭಾಗವಹಿಸುವಂತೆ ತಯಾರಿಸುತ್ತವೆ. ದಿನಂಪ್ರತಿ ವೈಯಕ್ತಿಕ ಪ್ರಾರ್ಥನೆ, ಕುಟುಂಬ ಪ್ರಾರ್ಥನೆ, ಜಪಸರ ಪ್ರಾರ್ಥನೆ, ಪರಮಪ್ರಸಾದ ಆರಾಧನೆ, ನವೇನ ಪ್ರಾರ್ಥನೆಗಳು ಮುಂತಾದವು ಪ್ರತಿ ಕ್ರೈಸ್ತನು ಪಾಲಿಸಬೇಕಾದ ಭಕ್ತಿಪ್ರಧಾನ ಆಚರಣೆಗಳು. ಇವುಗಳನ್ನು ಯಾವ ವ್ಯಕ್ತಿ ಕೂಡ ಸುಲಭವಾಗಿ ನೆರವೇರಿಸಿಕೊಂಡು ಹೋಗಬಹುದು. ಇವುಗಳ ಮೂಲಕ ಪ್ರತಿ ವ್ಯಕ್ತಿಯು ತನ್ನ ಅಂತರಾಳದ  ಶುದ್ಧಿಯೊಂದಿಗೆ ದಿನಂಪ್ರತಿ, ದೇವರ ಹೆಸರಿನಲ್ಲಿ ತುಸುಕಾಲ ಕಳೆಯಲು ಸಹಕಾರಿಯಾಗುತ್ತದೆ. ಇವುಗಳಿಂದ    ದೈನಂದಿನ ಅಥವಾ ಭಾನುವಾರದ ಬಲಿಪೂಜೆಗಳಲ್ಲಿ ಪೂರ್ಣ ಹೃದಯ ಮತ್ತು ಮನಸ್ಸಿನಿಂದ ಪಾಲ್ಗೊಳ್ಳಲು ಅನುವು ಮಾಡಿಕೊಟ್ಟಂತಾಗುತ್ತದೆ.

`ಎಲ್ಲಿ ಇಬ್ಬರು ಮೂವರು ನನ್ನ ನಾಮದಲ್ಲಿ ಸೇರಿರುತ್ತಾರೋ ಅಲ್ಲಿ ನಾನಿದ್ದೇನೆ ಎಂದ ಪ್ರಭು ಕ್ರಿಸ್ತರು, ತಮ್ಮ ಮರಣ ಮತ್ತು ಪುನರುತ್ಥಾನದ ನೆನಪಿಗಾಗಿ ಪವಿತ್ರ ಭೋಜನವನ್ನು ಸ್ಥಾಪಿಸಿದರು. ಅವರ ಈ ನೆನಪಿನ ಆಚರಣೆಯನ್ನು ನಾವು ಪ್ರತಿ ಬಲಿಪೂಜೆಯಲ್ಲಿ ಹಮ್ಮಿಕೊಳ್ಳುತ್ತೇವೆ. ಒಂದು ಬಲಿಪೂಜೆ ಕೇವಲ ರೊಟ್ಟಿ  ಮತ್ತು ರಸಗಳಿಗೆ ಸಂಬಂಧಪಟ್ಟಿದ್ದಲ್ಲ. ಅವುಗಳನ್ನು ಒಂದೇ ದೇಹವಾಗಿ ಸ್ವೀಕರಿಸುವ ಕ್ರಿಸ್ತನ ನೈಜ ಅಂಗಗಳಾದ ಪ್ರತಿ ಕ್ರೈಸ್ತನಿಗೆ ಮತ್ತು ಕ್ರಿಸ್ತನೊಂದಿಗೆ ಅವರ ಐಕ್ಯತೆಗೆ ಅವು ಸಂಬಂಧಪಟ್ಟಿವೆ. ಕ್ರಿಸ್ತರು ರೊಟ್ಟಿ ರಸಗಳಲ್ಲಿ ಇರುವರು ಮಾತ್ರವಲ್ಲ, ಅವುಗಳನ್ನು ಸೇವಿಸುವ ಪ್ರತಿ ಕ್ರೈಸ್ತನಲ್ಲ್ಲಿರುತ್ತಾರೆ ಎಂಬುದೇ ಬಲಿಪೂಜೆಯ ಸತ್ಯ. ಆದ್ದರಿಂದ ಬಲಿಪೂಜೆಯಲ್ಲಿ ಭಾಗವಹಿಸುವ ವ್ಯಕ್ತಿಗಳು ಪ್ರಮುಖ ಸ್ಥಾನವನ್ನು ಪಡೆಯಬೇಕು.  ಈ ಕಾರಣದಿಂದಲೇ ಅಲ್ಲಿ ನೆರೆದಿರುವ ಸಮುದಾಯ ಬಲಿಪೂಜೆಯ ಕೇಂದ್ರಬಿಂದುವಾಗುತ್ತದೆ. ಅಂದ ಮೇಲೆ ಬಲಿಪೂಜೆಯಿಂದ ಪಡೆದ ಕ್ರಿಸ್ತನ ನುಡಿಗಳನ್ನು ಪ್ರತಿ ವ್ಯಕ್ತಿಯಲ್ಲಿ ಮತ್ತು ಸಮುದಾಯದಲ್ಲಿ ಅಂತರ್ಗತಗೊಳಿಸ ಬೇಕಾಗುತ್ತದೆ. ಈ ಮೂಲಕ ನಾವು ನಮ್ಮ ಸಮುದಾಯದ ಪ್ರತಿ ಸದಸ್ಯನನ್ನು ಅರಿತು, ಅವನಲ್ಲಿ ಕ್ರಿಸ್ತನನ್ನು ಕಾಣುವ ಧ್ಯೇಯವನ್ನು ಹೊಂದಬೇಕಾಗುತ್ತದೆ. ಪೂಜಾ   ಔತಣದಲ್ಲಿ ಪಾಲ್ಗೊಂಡು, ಕ್ರಿಸ್ತರನ್ನು ನೆನೆಸಿ, ಅವರ `ಮುರಿದ ದೇಹವನ್ನು ಸೇವಿಸುವಾಗ ನಮ್ಮ ಸಮುದಾಯದ ಕಿರಿಯರನ್ನು ನಿಂದೆಗೊಳಗಾದವರನ್ನು, ತಿರಸ್ಕರಿಸಲ್ಪಟ್ಟವರನ್ನು ದಲಿತರನ್ನು, ಬಡವ ಬಲ್ಲಿದರನ್ನು, ಶೋಷಣೆಗೆ ಒಳಗಾದರವನ್ನು ಹಾಗೂ ಪಾಪಿಷ್ಠರನ್ನು ನೆನೆಸಿ, ಕ್ರಿಸ್ತನಂತೆ ಅವರನ್ನು ಸಮುದಾಯದ ಅಂತರಾಳದಲ್ಲಿ ಅಂಗೀಕರಿಸಬೇಕಾಗಿದೆ.

ಕ್ರೈಸ್ತ ಜೀವನದಲ್ಲಿ ನಮ್ಮ ಆಡಂಬರದ ಹಬ್ಬಗಳೂ ಅಗತ್ಯವಾದುಗಳೇ. ಆದರೆ ಸಂತ ಭಕ್ತರ ವಿಶೇಷವಾಗಿ ಮೇರಿಮಾತೆಯ ಹಬ್ಬಗಳನ್ನು ಆಚರಿಸಿ ಅವರನ್ನು ಗೌರವಿಸುವಾಗ ಅವರೂ ನಮ್ಮಂತೆ ಮತ್ತು ನಮ್ಮ ಹಿರಿಯರಂತೆ ಬದುಕಿ ಮಾದರಿ ವ್ಯಕ್ತಿಗಳಾಗಿ ಬಾಳಿದರು ಎಂಬುದನ್ನು ನೆನೆಸಿಕೊಳ್ಳಬೇಕು. ಮೇರಿ ಮಾತೆಯ ಪ್ರತಿ ಹಬ್ಬದ ಸಡಗರದಲ್ಲಿ ಆಕೆಗಿಂತ ಹೆಚ್ಚಾಗಿ ಆಕೆಯ ಮೂಲಕ ಮಾನವ ರೂಪ ತಾಳಿದ, ಪಾಪ ವಿಮೋಚಕ ಕ್ರಿಸ್ತರನ್ನು ಮತ್ತು ನಮ್ಮ ವಿಮೋಚನೆಗಾಗಿ ಅವರನ್ನು     ಧಾರೆಯೆರೆದ ಪಿತದೇವರನ್ನು ಸ್ಮರಿಸಿ ಕೊಂಡಾಡುವಂತಿರಬೇಕು. ಇಡೀ ವಿಶ್ವದ ಉದ್ಧಾರಕ್ಕಾಗಿ ದೇವರು ಮಾನವ ಜೀವಿಯನ್ನು ಆರಿಸಿಕೊಂಡರು. ಅವುಗಳಲ್ಲಿ ಮೇರಿಮಾತೆಯ ಆಯ್ಕೆ ಶ್ರೇಷ್ಠವಾದುದು. ಈ ಆಯ್ಕೆಯಲ್ಲಿ ಮೇರಿ ಮಾತೆಯ ಔದಾರ್ಯದ ಸಮರ್ಪಣಾ ಪಾತ್ರವನ್ನು ನಾವೆಲ್ಲರೂ ಸ್ಮರಿಸಿ ಪಾಲಿಸಬೇಕಾಗಿದೆ. ಧರ್ಮ ಸಭೆಯಲ್ಲಿ ಪ್ರತಿ ಹಬ್ಬವಿರುವುದು ದೇವರು ನೆರವೇರಿಸಿದ ವಿಮೋಚನ ಯೋಜನೆಯನ್ನು ಸ್ಮರಿಸುವುದಕ್ಕಾಗಿಯೇ. ಕ್ರಿಸ್ತ ಜಯಂತಿ ಹಬ್ಬದಂದು ಮಾನವನ ವಿಮೋಚನೆಗಾಗಿ ಮಾನವ ರೂಪ ತಾಳಿದ ದೇವ ಪುತ್ರ ಕ್ರಿಸ್ತನ ಜನನವನ್ನು ಸಂಭ್ರಮಿಸುತ್ತೇವೆ. ಪಾಸ್ಖ ಹಬ್ಬದಂದು, ಈ ವಿಮೋಚನೆಗಾಗಿ ತನ್ನ ಪ್ರಾಣತೆತ್ತು ಮರಣವನ್ನು ಗೆದ್ದು ಜೀವಂತರಾದ ಕ್ರಿಸ್ತರ ವಿಜಯವನ್ನು ಸ್ಮರಿಸುತ್ತೇವೆ, ಸ್ವರ್ಗಾರೋಹಣ ಹಬ್ಬದಂದು ವಿಮೋಚಕ ಯೇಸುವಿನ ಪುನಾರಗಮನವನ್ನು ಭರವಸೆಯಿಂದ ಕಾಯುತ್ತೇವೆ. ಪಂಚಾಶತ್ತಮ  ಹಬ್ಬದಂದು ತ್ರ್ಯೇಕ ದೇವರ ಶಕ್ತಿರೂಪವಾದ ಪವಿತ್ರಾತ್ಮರ ಬರುವಿಕೆಯನ್ನು ಮತ್ತು ಕ್ರಿಸ್ತನ ಮಹತ್ಕಾರ್ಯವನ್ನು ಸಾರುವ ಜವಾಬ್ದಾರಿ ಹೊತ್ತ  ಧರ್ಮಸಭೆಯ ಚೈತನ್ಯಗೊಳಿಸುವಿಕೆಯನ್ನು ಆಚರಿಸುತ್ತೇವೆ. ಉಳಿದ ಯಾವುದೇ ಹಬ್ಬವನ್ನು ಆಚರಿಸಿದರೂ ದೇವರು ನೆರವೇರಿಸಿದ ಈ ವಿಮೋಚನಾ     ಯೋಜನೆಗಳ ಅಪರಿಮಿತ ಪ್ರೀತಿಯನ್ನು ಸ್ಮರಿಸುವ ಆಚರಣೆಯಾಗಬೇಕು. 

ಪ್ರತಿ ಪ್ರಮುಖ ಹಬ್ಬವನ್ನು ಆಚರಿಸುವಾಗ ಆಡಂಬರದ ಬಲಿಪೂಜೆಯನ್ನು ಹಮ್ಮಿಕೊಳ್ಳುತ್ತೇವೆ. ಪೂಜೆಯ ಆರಂಭದಲ್ಲಿ ದೇವರಿಗೆ ಸ್ತುತಿಗೀತೆ ಹಾಡಿ ಮಹಿಮೆಪಡಿಸುತ್ತೇವೆ. ಇದು ದೇವರ ಮಾಡಿದ ರಕ್ಷಣಾ ಕಾರ್ಯವನ್ನು ನೆನೆಸಿ, ಮಾನವರಾದ ನಾವು ಅವರಿಗೆ ಸಲ್ಲಿಸುವ ಕಿರು ಸೇವೆಯಷ್ಟೆ. ಪ್ರತಿ ಸಂತರನ್ನು ಸ್ಮರಿಸಿ ಪೂಜೆಯನ್ನು ಅರ್ಪಿಸುವಾಗ ದೇವರ ಅಪರಿಮಿತ ಪ್ರೀತಿಯನ್ನು ನೆನೆಸಿ ಸಂಭ್ರಮಿಸುವ ಸಮಯ ಬಲಿಪೂಜೆಯಾಗಬೇಕು. ನಮ್ಮ ದಿನಂಪ್ರತಿಯ ಬಲಿಪೂಜೆ ಕೇವಲ ಕಟ್ಟುಪಾಡಿನ ಕಾರ್ಯವೈಖರಿಯಾಗಿರದೆ, ಅದು ನಮ್ಮ ನಮ್ರತೆಯ ದೈವೋದ್ಧಾರವಾಗಬೇಕು. ಈ ಬಲಿಯರ್ಪಣೆಗಳಲ್ಲಿ ಕೇಂದ್ರಬಿಂದುಗಳಾಗಿ ಪರಿವರ್ತಿಸುವ ಪ್ರತಿ ವ್ಯಕ್ತಿಯ ಭಕ್ತಿಪ್ರಧಾನ ಆಚರಣೆಗಳ ಮೂಲಕ ತಮ್ಮನ್ನೇ ಸಿದ್ಧಗೊಳಿಸಿ ಕ್ರಿಸ್ತನ ಒಂದೇ ದೇಹವಾಗಿ ಅವರನ್ನು ಜಗತ್ತಿಗೆ ಸಾರುವ ಸಾಧನಗಳಾಗಲು ಪ್ರಯತ್ನಿಸಬೇಕೆಂದು ಧರ್ಮಸಭೆ ಕರೆ ನೀಡುತ್ತದೆ.

**********



No comments:

Post a Comment

ಎತ್ತಿತೋರಿಸಲಾದ ಪೋಸ್ಟ್

ಅನ್ನಮ್ಮ’ಳಿಗೆ ೨೫೦ರ ಹಾಗೂ ಅತಿ.ವಂ.ಪೊತ್ತಕಮೂರಿಗೆ ೫೦ರ ಸ್ಮರಣೆಯ ಸಂಭ್ರಮ

ಬೆಂಗಳೂರಿನ ಉತ್ತರಹಳ್ಳಿಯ ಅನ್ನಮ್ಮನ ಬೆಟ್ಟ, ಅಲ್ಲಿನ ಅನ್ನಮ್ಮಳ ಸಮಾಧಿ, ಆ ಬೆಟ್ಟದ ಮೇಲಿನ ಶಿಲುಬೆ, ಅಲ್ಲಿ ಪ್ರತಿವರ್ಷ ತಪಸ್ಸು ಕಾಲದ ಐದನೇ ಭಾನುವಾರ ನಡೆಯುವ ಯೇಸು...