ಸಾಮಾನ್ಯವಾಗಿ ಮಗುವು ತನ್ನ ಓರಗೆಯವರ ಸಹವಾಸದ ಸೆಳೆತದಿಂದ ತಾನೇ ಕೆಲವು ಕೆಲಸಗಳಲ್ಲಿ ತೊಡಗಿಕೊಳ್ಳುವ ಉತ್ಸಾಹ ತೋರಿಸುತ್ತದೆ. ಶಾಲೆಯಲ್ಲಿ ತನ್ನ ಪಕ್ಕದಲ್ಲಿ ಯಾವಾಗಲೂ ಕುಳಿತುಕೊಳ್ಳುವ ಹುಡುಗನ ಜೊತೆಗಿನ ಸಂಬಂಧ ಆ ಮಗುವಿಗೆ ಆಪ್ತವೂ, ಆತ್ಮೀಯವೂ ಆಗಿರುತ್ತದೆ. ಮೈದಾನದಲ್ಲಿ ಆಡುವ ಗೆಳೆಯನ ಅಥವಾ ಗೆಳತಿಯ ಜೊತೆಗಾರಿಕೆ ಮಗುವಿಗೆ ಖುಷಿ ಕೊಡುತ್ತದೆ. ಒಟ್ಟಿಗೆ ಕುಳಿತುಕೊಂಡು ತರಗತಿಯಲ್ಲಿ ಕಲಿಯುವ, ಮೈದಾನದಲ್ಲಿ ಕಲೆಯುವ ಆಚೆಗೂ ಅವರಿಗೆ ಹಂಚಿಕೊಳ್ಳಲು ವಿಷಯಗಳಿರುತ್ತವೆ, ವಸ್ತುಗಳಿರುತ್ತವೆ, ಸ್ಥಳಗಳಿರುತ್ತವೆ. ಆದರೆ ಪೋಷಕರಿಗೆ ಮಗುವು ಶಾಲೆಗೆ ಹೋಗುವುದು ಎಂದರೆ ಓದುವುದಕ್ಕಷ್ಟೇ ಎಂಬ ಧೋರಣೆ. ಹೆಚ್ಚೆಂದರೆ ಶಾಲೆಯವರು ಏರ್ಪಡಿಸುವ ಕಾರ್ಯಕ್ರಮಗಳಲ್ಲಿ, ಕ್ರೀಡೆಗಳಲ್ಲಿ ಭಾಗವಹಿಸುವುದು. ಅದನ್ನು ಬಿಟ್ಟರೆ ಹೆಚ್ಚಿಗೇನೂ ಮಾಡುವ ಅಗತ್ಯವಿಲ್ಲ! ಆದರೆ ಮಕ್ಕಳಿಗೆ ಕೆಲವರ ಬಗ್ಗೆ ಆತ್ಮೀಯತೆ, ಸಲುಗೆ ಇರುತ್ತದೆ. ಅದನ್ನು ಪೋಷಕರ ಬಳಿ ಹೇಳಿಕೊಳ್ಳುವುದಕ್ಕೆ ಅವರಿಗೆ ಅಷ್ಟೇನೂ ಅವಕಾಶಗಳಿರುವುದಿಲ್ಲ. ಹೇಳುವವರು ಬಹಳ ಕಡಿಮೆ. ಹಾಗಾಗಿ ಕೆಲವರ ಮನೆಯಲ್ಲಿ ಕೆಲವೊಂದು ಮಾತುಗಳು ಧ್ವನಿಸುತ್ತಿರುತ್ತವೆ.
೧. ಅವನ/ಅವಳ ಜೊತೆ ನೀನ್ಯಾಕೆ ಹೋಗಿದ್ದೆ. ಅದರಿಂದ ನಿನಗೇನು ಲಾಭ?
೨. ಅವನಿಗೆ/ಅವಳಿಗೆ ಬೇಕಾದರೆ ಅವನೇ/ಅವಳೇ ಮಾಡಿಕೊಳ್ಳಲಿ. ನಿನ್ನ ಕೆಲಸ ನೀನು ನೋಡಿಕೋ.
೩. ಅವರದು ಇವರದು ಕತೆಗಳನ್ನೆಲ್ಲಾ ನನಗೆ ಹೇಳಬೇಡ. ನಿಂದೆಷ್ಟೋ ಅಷ್ಟು ನೋಡಿಕೋ.
೪. ನಿನಗ್ಯಾಕೆ ಊರವರ ಉಸಾಬರಿ?
೫. ನೀನು ಸ್ಕೂಲಿಗೆ ಹೋಗೋದು ಯಾಕೆ? ನೆಟ್ಟಗೆ ಸ್ಕೂಲಿಗೆ ಹೋಗಿ ಮನೆಗೆ ಬಾ.
೬. ಯಾರ್ಯಾರು ಹ್ಯಾಗ್ಯಾಗೆ ಇರ್ತಾರೋ ಏನೋ. ಸುಮ್ಮನೆ ಅವರಿವರ ಸಹವಾಸದಲ್ಲಿ ಬಿದ್ದು ಹಾಳಾಗಬೇಡ.
೭. ಎಷ್ಟುಬೇಕೋ ಅಷ್ಟು ಇಟ್ಟಿಕೊ. ಅತಿಯಾಗಿ ಹೋಗಬೇಡ.
ಇತ್ಯಾದಿ ಅತಿ ಮತ್ತು ಮಿತಿಗಳನ್ನು ಪೋಷಕರು ನಿರ್ಧರಿಸುತ್ತಿರುತ್ತಾರೆ. ವಾಸ್ತವವಾಗಿ ಅವರು ತಮ್ಮ ಬಾಲ್ಯವನ್ನು ಮರೆತಿರುತ್ತಾರೆ. ಅವರಿಗೂ ಇಂತಹ ಆತ್ಮೀಯತೆಯ ಸೆಳೆತಗಳಿದ್ದವು. ಆಪ್ತತೆಯ ಸ್ಪರ್ಶಕ್ಕೆ ಹಾತೊರೆಯುತ್ತಿದ್ದರು. ಅವರ ಮನೆಯಲ್ಲೂ ಅವರ ಅಪ್ಪ ಅಥವಾ ಅಮ್ಮ ಹೀಗೆ ಹೇಳುತ್ತಿದ್ದರು. ಅವರಿಗಾಗ ಬೇಸರವಾಗುತ್ತಿತ್ತು. ಆದರೆ ಮನೆಯವರ ಒತ್ತಡಕ್ಕೆ ಸಿಕ್ಕಿ ಅವರು ಹೇಳಿದಂತೆ ಕೇಳುವ ಅನಿವಾರ್ಯತೆ ಉಂಟಾಗಿರುತ್ತಿತ್ತು. ಅದೇ ಅವರ ಮಕ್ಕಳಿಗೂ ಮುಂದುವರಿಯುತ್ತದೆ. ಇದನ್ನೇ ಪದೇ ಪದೇ ಕೇಳುತ್ತಾ, ಅನಿವಾರ್ಯವಾಗಿ ರೂಢಿಸಿಕೊಳ್ಳುವ ಮಕ್ಕಳು ಊರಿನ ಉಸಾಬರಿ ಏಕೆ ಹೊರುತ್ತಾರೆ? ಸಮಾಜ ಮತ್ತು ಪರಿಸರದ ಬಗ್ಗೆ ಹೇಗೆ ಕಾಳಜಿ ಹೊಂದುತ್ತಾರೆ?
ಮನೆಯಿಂದ ಸಮಾಜಕ್ಕೆ
ಒಂದು ದೇಶದ ಅಪರಾಧದ ಚಟುವಟಿಕೆಗಳು ಅನೇಕ ಅಂಶಗಳನ್ನು ಅವಲಂಬಿಸಿರುತ್ತದೆ. ಆದರೆ ಸಾಮಾನ್ಯವಾಗಿ ದೇಶದ ಕಾನೂನು ಮತ್ತು ಪೋಲಿಸ್ ವ್ಯವಸ್ಥೆಯು ಸದೃಢವಾಗಿಲ್ಲ ಅಥವಾ ಸಮರ್ಪಕವಾಗಿಲ್ಲ ಎಂಬುದನ್ನು ಮೊದಲನೆಯದಾಗಿ ಕಾಣಿಸುತ್ತಾರೆ. ಆದರೆ ನಮ್ಮ ದೇಶದ ಕಾನೂನು ಮತ್ತು ರಕ್ಷಣಾವ್ಯವಸ್ಥೆಯಲ್ಲಿ ನಾವ್ಯಾರೂ ಸಮಗ್ರವಾಗಿ ಮೌಲ್ಯ ಮಾಪನ ಮಾಡಿ ಇದು ಹೀಗೆ ಎಂದು ನಿರ್ಧರಿತವಾಗಿ ಫಲಿತಾಂಶವನ್ನು ಹೇಳಲಾಗುವುದೇ ಇಲ್ಲ. ಏಕೆಂದರೆ ಇಡೀ ದೇಶದಲ್ಲಿ ವ್ಯವಸ್ಥೆಯ ಹೊರಗೂ ಮತ್ತು ಒಳಗೂ ಎಲ್ಲಾ ತರಹದ ಜನರಿದ್ದಾರೆ. ಕಾನೂನು ಪಾಲಕರೇ ಅಥವಾ ಕಾನೂನು ರಕ್ಷಕರೇ ಶಿಕ್ಷೆಗೆ ಒಳಪಡದಂತಹ ಅಪರಾಧಿಗಳಾಗಿರುತ್ತಾರೆ. ಅದೇ ರೀತಿ ವ್ಯವಸ್ಥೆಯ ಹೊರಗಿರುವ ಸಾಮಾನ್ಯ ನಾಗರಿಕ ವ್ಯಾಪ್ತಿಗೆ ಬರುವ ಜನರಲ್ಲೂ ಕೂಡಾ ಅಪರಾಧಿಗಳು ಇದ್ದಾರೆ.
ಗುಂಪು ಗಲಭೆಗಳಾದಾಗ ಬಸ್ಸಿಗೆ ಬೆಂಕಿ ಹಚ್ಚುವವರು, ಅಂಗಡಿಗಳಿಗೆ ಕಲ್ಲು ಹೊಡೆಯುವವರು, ಸಾರ್ವಜನಿಕ ಆಸ್ತಿಪಾಸ್ತಿಯನ್ನು ಹಾಳುಗೆಡವುವವರು ಜವಾಬ್ದಾರಿಯುತ ಹುದ್ದೆಗಳಲ್ಲಿ, ಕೆಲಸಗಳಲ್ಲಿ ಇರುವವರಲ್ಲ. ತಮ್ಮ ಸಂಪಾದನೆಯಲ್ಲಿ ತೆರಿಗೆ ಕಟ್ಟುವವರಂತೂ ಅಲ್ಲವೇ ಅಲ್ಲ. ಅದೊಂದು ವರ್ಗ. ಅದರಲ್ಲಿ ಜಾತಿ, ಧರ್ಮ, ಸಂಸ್ಕೃತಿಯ ಭೇದವಿಲ್ಲ. ಕೆಲವೊಮ್ಮೆ ವಯಸ್ಸಿನ ಭೇದವೂ ಇರುವುದಿಲ್ಲ. ಅದೊಂದು ವೈಯಕ್ತಿಕ ಮನಸ್ಥಿತಿ ಮತ್ತು ಸಾಮಾಜಿಕ ಪರಿಸ್ಥಿತಿಯಲ್ಲಿರುವವರೇ ಹಾಗೆ ಮಾಡುವವರು. ಅಂತಹ ಕೆಲಸಗಳಿಗೆ ತಮ್ಮ ಸಮಯ, ಶ್ರಮವನ್ನು ವ್ಯಯಿಸುವವರು. ಇದು ಹೇಗೆ ಮತ್ತು ಏಕೆ?
ಹೇಗೆ ಎಂಬುದರ ಕಾರಣ ತಿಳಿದರೆ ಏಕೆ ಎಂಬುದು ಕೂಡಾ ತಿಳಿಯುತ್ತದೆ.
೧. ಸಾಮಾನ್ಯವಾದ ನೈತಿಕತೆ ಎಲ್ಲಾ ಜನಸಾಮಾನ್ಯರಲ್ಲಿ ಸಾಮಾನ್ಯವಾಗಿಲ್ಲ.
೨. ಇತರರ ಕಂಡು ಅಸೂಯೆ, ಅಸಹನೆ ಉಂಟಾಗದೇ ತನ್ನ ಬದುಕಿನ ಆನಂದ, ಅನುಭವ, ಸುಖವನ್ನು ಪಡುವಷ್ಟು ಆರ್ಥಿಕ ಸಬಲತೆ ಮತ್ತು ಅರಿವಿನ ಹಿನ್ನೆಲೆ ಎಲ್ಲರಲ್ಲೂ ಇಲ್ಲ.
೩. ತನ್ನ ಸಾಧಿಸಬೇಕಾದ ಗುರಿ ಮತ್ತು ತನ್ನದೇ ಕುಟುಂಬದ ಜವಾಬ್ದಾರಿಯೂ ಇಲ್ಲ.
೪. ಕಾನೂನಾತ್ಮಕವಾಗಿ ಕಳಂಕಿತವಾದರೆ ಕಳೆದುಕೊಳ್ಳುವಂತಹುದೇನಿರುವುದಿಲ್ಲ. (ಉದ್ಯೋಗ, ಹುದ್ದೆ, ಸ್ಥಾನ, ಧನ ಇತ್ಯಾದಿ)
೫. ತಮ್ಮ ಸೀಮಿತ ಪರಿಧಿಯಾಚೆಗಿನ ವಿಷಯಗಳ ಅರಿವೂ ಇರುವುದಿಲ್ಲ ಮತ್ತು ಅವರಿಗೆ ಜಾಗತಿಕ ಮಟ್ಟಕ್ಕೆ ಹೋಗುವುದಿರಲಿ ಹಾಗೊಂದು ಇದೆ ಎಂಬ ಅರಿವೂ ಇರುವುದಿಲ್ಲ.
೬. ತಮ್ಮಂತದ್ದೇ ಮನಸ್ಥಿತಿಯ ಕಾನೂನು ಪಾಲಕರು ಅಥವಾ ರಕ್ಷಕರ ಅಪವಿತ್ರ ಮೈತ್ರಿಗಳಿರುತ್ತವೆ. ಉದಾಹರಣೆಗೆ ಕಳ್ಳ ದಂಧೆಗಳಲ್ಲಿ ಇವರ ಭಾಗವಹಿಸುವಿಕೆ ವ್ಯವಸ್ಥೆಯಲ್ಲಿರುವವರಿಗೆ ಬೇಕಾಗಿರುತ್ತದೆ. ಅವರು ಮಾಡಲಾಗದ ರಹಸ್ಯ ಕಾರ್ಯಾಚರಣೆಗಳಲ್ಲಿ ಇವರು ಕೆಲಸ ಮಾಡಬೇಕಾಗುತ್ತದೆ. ಅಂದರೆ ತಮ್ಮ ಕೈಗಳಿಗೆ ಕಳಂಕ ಹತ್ತದಿರಲು ಇವರ ಕೈಗಳನ್ನು ಅವರು ಬಳಸಿಕೊಳ್ಳುತ್ತಾರೆ. ಹಾಗೆಯೇ ಇವರನ್ನು ರಕ್ಷಿಸುವ ಒಡಂಬಡಿಕೆ ಕೂಡ ಅವರ ನಡುವೆ ಆಗಿರುತ್ತದೆ.
೭. ಈ ಹಿಂದೆ ನಡೆದ ಸಣ್ಣಪುಟ್ಟ ಅಪರಾಧಗಳಲ್ಲಿ, ಗಲಾಟೆಗಳಲ್ಲಿ ಯಶಸ್ವಿಯಾಗಿರುತ್ತಾರೆ.
೮. ಇವರೇ ಯಾವಾಗಲೂ ಸಮಸ್ಯೆಗಳಲ್ಲಿ ಇರುವ ಕಾರಣದಿಂದ ಇತರರಿಗೆ ಸಮಸ್ಯೆಗಳಾಗುವುದರ ಬಗ್ಗೆ ಕಾಳಜಿ ಇರುವುದಿಲ್ಲ. ಇವರಿಗೆ ಕೊರತೆಗಳಿರುವುದರಿಂದ ಇತರರ ಬಗ್ಗೆ ಯಾವ ವಿಷಯದಲ್ಲಿಯೂ ಔದಾರ್ಯವಿರುವುದಿಲ್ಲ.
೯. ಕೆಲವು ಅಧ್ಯಯನಗಳು ಹೊರಗೆಡವಿದಂತೆ ತಂದೆಯಿಂದ ತಿರಸ್ಕೃತರಾದಂತಹ ಮಗುವು ಅಥವಾ ಸಣ್ಣ ಕುಟುಂಬವು ಅದರ ಇತರ ಪೋಷಕ ಕುಟುಂಬಗಳಿಂದ ತಿರಸ್ಕೃತರಾಗಿದ್ದರೆ, ಘೋಷಿತವಾಗಿ ಅಥವಾ ಅಘೋಷಿತವಾಗಿ ಸಾಮಾಜಿಕವಾಗಿ ಅಥವಾ ಕೌಟುಂಬಿಕವಾಗಿ ಬಹಿಷ್ಕೃತರಾಗಿದ್ದರೆ, ಆ ಕುಟುಂಬದ ಮಗುವು ಒಂದೋ ಕ್ರೌರ್ಯ ಮತ್ತು ಹಿಂಸೆಯ ಮನೋಭಾವವನ್ನು ರೂಢಿಸಿಕೊಂಡು ಸಮಾಜಘಾತುಕ ಶಕ್ತಿಯಾಗಿ ಬೆಳೆಯುತ್ತದೆ, ಇಲ್ಲವೇ ಖಿನ್ನತೆಯಿಂದ ತನ್ನದೇ ವ್ಯಸನದ ಪ್ರಪಂಚದಲ್ಲಿ ತಲ್ಲೀನವಾಗಿರುತ್ತದೆ. ಇದು ತಕ್ಷಣಕ್ಕೆ ಕಾಣಲು ಪ್ಯಾಸಿವ್ ಅಥವಾ ಜಡವಾಗಿದೆ ಎನಿಸಿದರೂ ಅದು ಯಾವುದೇ ಸಮಯಕ್ಕೆ ಘಾತುಕ ಶಕ್ತಿಯಾಗಿ ಸ್ಫೋಟಗೊಳ್ಳುತ್ತದೆ.
೧೦. ಪುನರಾವರ್ತಿತವಾಗುವಂತಹ ಒಂದೇ ಬಗೆಯ ಪರಿಸ್ಥಿತಿ, ಸನ್ನಿವೇಶ ಮತ್ತು ಪರಿಸರಗಳನ್ನು ನೋಡುತ್ತಿರುವುದರಿಂದ ಮನಸ್ಥಿತಿಯೇ ಆ ರೀತಿ ನಿರ್ಮಿತವಾಗಿರುತ್ತದೆ. ಹಾಗೆ ಇರುವುದು ತಮಗೆ ಸಹಜವೇನೋ ಎಂಬಂತೆ ಯೋಚನೆ ಕೂಡಾ ಮಾಡದಿರುವಷ್ಟು ರೂಢಿಯಾಗಿಬಿಟ್ಟಿರುತ್ತದೆ.
ಇಷ್ಟೇ ಅಲ್ಲ. ಪರಿಸರ ಮತ್ತು ಕುಟುಂಬಗಳು ಯಾವುದೇ ಇರಲಿ ಕೆಲವೊಂದು ಬಗೆಯ ಬೇರೆಯೇ ಕಾರಣಗಳು ಕೂಡಾ ಇರುತ್ತವೆ. ಆರ್ಥಿಕವಾಗಿ, ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಶ್ರೇಣಿಯಲ್ಲಿ ಕೆಳಗಿರುವವರೇ ಸಮಾಜಘಾತುಕರಾಗುವರು ಎಂಬ ಆತುರದ ನಿರ್ಧಾರ ಬೇಡ. ಈ ಸಂಕೀರ್ಣ ಸಮಾಜಕ್ಕೆ ಇನ್ನೂ ಬೇರೆ ಬೇರೆ ಮೂಲದ ತಲೆನೋವುಗಳಿವೆ.
**********
No comments:
Post a Comment