Monday, 9 November 2020

ಚಾರ್ವಾಕನೂ... ಆಟದ ಆಚಾರ್ಯರೂ... ಡಾ. ದಿನೇಶ್ ನಾಯಕ್

1

ಜನ್ರ ಅತ್ರಾಣ ಜಾಸ್ತಿಯಾಯ್ತು, ಕಾಲ ಕೆಟ್ಟು ಹೋಯ್ತು. ಇಲ್ಲಾಂದ್ರೆ ಮಾವು, ಗೇರು ಮರಗಳಲ್ಲಿ ಹೂ ಬಿಟ್ಟು ಮಿಡಿ, ಹಣ್ಣು ಆಗೋ ಈ ಹೊತ್ತಿಗೆ ಆಟಿ ತಿಂಗಳಲ್ಲಿ ಹೊಡೆಯೋ ಹಾಗೆ ಹೀಗೆ ಮಳೆ ಬರೋದುಂಟಾ? ಅಂತ ರಿಕ್ಷಾದ ಕಾಂತಣ್ಣ ಹಾಜಿಯಬ್ಬರ ಹತ್ತಿರ ಕಳೆದ ಎರಡು ದಿನಗಳಿಂದ ರಾತ್ರಿ ವೇಳೆಗೆ ಮಾತ್ರ ಸುರಿಯುತ್ತಿರುವ ಭಾರೀ ಮಳೆಯ ಬಗ್ಗೆ ಬೆಳ್ಳಂಬೆಳಗ್ಗೆ ಮಾತಿಗೆ ಶುರು ಹಚ್ಚಿದ್ದರು. ಈ ವರ್ಷ ಗದ್ದೆ, ತೋಟ, ವ್ಯಾಪಾರ ಎಲ್ಲಾ ಹಾಳಾಗಿ ಹೋಯಿತು, ಪ್ರಳಯ ಇನ್ನು ಹೆಚ್ಚು ದೂರ ಇಲ್ಲ ಎಂಬುದು ಕಾಂತಣ್ಣನ ಒಟ್ಟು ಮಾತಿನ ಧ್ವನಿಯಾಗಿತ್ತು. ಕಾಂತಣ್ಣ ಹೇಳೋದ್ರಲ್ಲೂ ಯಥಾರ್ಥ ಇದೆ. ಹಿಂದೆ ಯಾವತ್ತೂ ಧನುರ್ಮಾಸದ ಮಾಗಿಯ ಕಾಲದಲ್ಲಿ ಹೀಗೆ ಆದದ್ದಿಲ್ಲ. ಈ ವರ್ಷ ಬಹಳ ವಿಚಿತ್ರ. ಬೆಳಗ್ಗೆ ಕೊರೆಯುವ ಚಳಿ, ಮಧ್ಯಾಹ್ನ ಮೈ ಮೇಲೆ ಬೊಕ್ಕೆ ಏಳುವಂಥಾ ಸುಡು ಬಿಸಿಲು, ಸಂಜೆಗೆ ಮೋಡ ಮುಸುಕಿ ಸಿಡಿಲು-ಗುಡುಗು-ಮಿಂಚು ಸಮೇತ ಜೋರು ಮಳೆ.

ಈ ದೇಶಕ್ಕೆ ಏನು ಮಾರಿ ಹೊಡೆದಿದೆಯೋ ಏನೋ ಅಂತ ಯೋಚಿಸುತ್ತಿದ್ದ ಹಾಜಿಯಬ್ಬರು, ಒಂದು ಪಾಟೆಯಲ್ಲಿರುವ ಬಿಸಿ ಬಿಸಿ ಚಹವನ್ನು ಇನ್ನೊಂದು ಪಾಟೆಗೆ ಮೇಲಿನಿಂದ ಹೊಡೆಯುತ್ತಾ ಹೌದು ಕಾಂತಣ್ಣ ಈಗೀಗ ಮಳೆ, ಚಳಿ, ಬೇಸಿಗೆ ಎಲ್ಲ ಕಾಲಗಳನ್ನು ಒಂದೇ ದಿನದಲ್ಲಿ ನೋಡುವಂತಾಗಿದೆ, ಏನು ದುರವಸ್ಥೆ ಕಾದಿದೆಯೋ ಏನೋ, ನಮ್ಮನ್ನ ಮೇಲಿರುವ ಅಲ್ಲಾನೇ ಕಾಪಾಡ್ಬೇಕು ಅಂತ ಉಸುರುತ್ತಾ ಚಾ ಕೇಳಿದವರ ಟೇಬಲ್‌ನ ಮೇಲೆ ಚಹದ ಲೋಟವನ್ನು ತಂದಿಟ್ಟರು. ಅದೇ ವೇಳೆಗೆ ದೇವಪುರದ ಪ್ರಸಿದ್ಧ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ದೇವರ ಪರಿಚಾರಿಕೆ ಕೆಲಸವನ್ನು ಮಾಡುತ್ತಿರುವ ರಾಮಚಂದ್ರ ರಾಯರು ವೇಗ ವೇಗವಾಗಿ ಹೆಜ್ಜೆ ಹಾಕುತ್ತಾ ಹೊಟೇಲ್ ಕಡೆಗೆ ಬರುತ್ತಿರುವುದನ್ನು ಕಂಡರು. ಯಾವತ್ತೂ ನನ್ನ ಹೊಟೇಲ್ ಕಡೆಗೆ ಕಾಲಿಡದಿದ್ದ ಈ ರಾಯರ ಸವಾರಿ ಇವತ್ತು ಏನು ಈ ಕಡೆಗೆ ಎಂದು     ಯೋಚಿಸಿ, ದೂರದಿಂದಲೇ ಕರೆದು, ಓಯ್ ರಾಯರೇ.., ಅಪರೂಪದವರು.., ಏನು ಈ ಕಡೆ?, ಬನ್ನಿ ಕೂತ್ಕೊಳ್ಳಿ ಎಂದು ವಿಶೇಷವಾಗಿ ಉಪಚರಿಸಿದರು.

ದೇವರ ಕೈಂಕರ್ಯದಲ್ಲಿ ಸದಾ ಕಾಯಾ ವಾಚಾ ಮನಸಾ ತಮ್ಮನ್ನು ತೊಡಗಿಸಿಕೊಂಡು ಒಂದು ಕ್ಷಣವೂ ಬಿಡುವಿಲ್ಲದೆ ಇರುತ್ತಿದ್ದ ರಾಯರು, ಮುಂಜಾನೆ ಎದ್ದು, ಕೊರೆಯುವ ಚಳಿಯಲ್ಲಿ ನದಿಯಲ್ಲಿ ಸ್ನಾನ ಮಾಡಿ, ದೇವಸ್ಥಾನದಲ್ಲಿ ಪೂಜೆ ಮುಗಿಸಿ ಹಾಜಿಯಬ್ಬರ ಹೊಟೇಲ್ ಕಡೆಗೆ ಬಂದಿದ್ದರು. ಆದ್ರೆ ರಾಯರ ಮುಖದಲ್ಲಿ ಆತಂಕ ಮನೆ ಮಾಡಿತ್ತು. ಸ್ವಲ್ಪ ಮಟ್ಟಿಗೆ ವಿಚಲಿತರಾಗಿದ್ದರು ಕೂಡಾ. ಹಾಜಿಯಬ್ಬರಿಂದ ತಕ್ಕೊಂಡ ಬೀಡವನ್ನು ಬಿಚ್ಚಿ ಅಡಿಕೆ ತುಂಡು ಬಾಯಿಗೆ ಹಾಕಿ, ಎಲೆಗೆ ನಿಧಾನಕ್ಕೆ ಸುಣ್ಣ ಹಚ್ಚುತ್ತಾ, ಆಚೀಚೆ ನೋಡುತ್ತಾ ಮಡಚಿದ ವೀಳ್ಯವನ್ನು ಬಾಯೊಳಗೆ ಹಾಕಿದರು. ಅವರು ಕೂತಲ್ಲಿ ಕೂರುತ್ತಿರಲಿಲ್ಲ, ನಿಂತಲ್ಲಿ ನಿಲ್ಲುತ್ತಿರಲಿಲ್ಲ, ಮಾತಲ್ಲಿ ಹೊಂದಾಣಿಕೆ ಕಾಣಿಸುತ್ತಿರಲಿಲ್ಲ. ಆಗಾಗ ಯೋಚನೆಗೆ ಬೀಳುತ್ತಿದ್ದರು. `ನಮ್ಮ ಚಾರ್ವಾಕ ಎಲ್ಲೋ ಹೋಗಿದ್ದಾನೆ, ಸಾಹೇಬ್ರೆ? ನಿಮ್ಮ ಹತ್ರ ಏನಾದ್ರೂ ಹೇಳಿದ್ದಾನಾ ಮತ್ತೆ?ಎರಡು ದಿನಗಳಿಂದ   ಮನೆಯಲ್ಲಿರದ ತಮ್ಮ ಅಳಿಯನ ಬಗ್ಗೆ ರಾಯರು ವಿಚಾರಿಸತೊಡಗಿದರು. ರಾಯರ ಮಾತು ಕೇಳಿ ಹಾಜಿಯಬ್ಬರು ಸ್ವಲ್ಪ ಟೆನ್ಶನ್ ಮಾಡಿಕೊಂಡು, `ಅರೆ ಎಲ್ಲಿ ಹೋದ ನಮ್ಮ ಹುಡುಗ? ಎಂದು ಚಿಂತಿಸುತ್ತಾ ಕಾಂತಣ್ಣನ ಮುಖ ನೋಡಿದರು. ಅಲ್ಲಿ ಯವರೆಗೆ ಪರಿಸರ, ವಾತಾವರಣ-ಹವಾಗುಣ, ದೇಶ ಅಂತ ಉತ್ಸಾಹದಲ್ಲಿದ್ದ ಕಾಂತಣ್ಣ ಕೂಡಾ ಒಮ್ಮೆಲೆ ಮುಖ ಸಪ್ಪೆ ಮಾಡಿಕೊಂಡರು.

ಹಾಗೆ ನೋಡಿದ್ರೆ ರಾಮಚಂದ್ರ ರಾಯರು ಚಾರ್ವಾಕನಿಗೆ ಹೆಣ್ಣು ಕೊಟ್ಟ ಮಾವನೂ ಅಲ್ಲ, ಸೋದರ ಮಾವನೂ ಅಲ್ಲ. ಅಣ್ಣನ ಹೆಂಡತಿಯ ತಂದೆ. ರಾಯರು ಆ ದಿನ ರಾತ್ರಿ ಮತ್ತೆ ದೇವಸ್ಥಾನದಲ್ಲಿ ಭಜನೆ, ಪೂಜೆ ಎಂದೆಲ್ಲ ವ್ಯವಸ್ಥೆ ಮಾಡಿದ್ದರು. ಶುಕ್ರವಾರದ ಆ ವಿಶೇಷ ಪೂಜೆ ಬೇರೆ ಯಾವ ಕಾರಣಕ್ಕಾಗಿಯೂ ಏರ್ಪಡಿಸಿದ್ದಲ್ಲ. ಮನೆ-ಮಠ-ಊರು ಬಿಟ್ಟ ಚಾರ್ವಾಕ ಮರಳಿ ಮನೆಗೆ ಬರಲೆಂದು ದೇವರಿಗೆ ಹರಕೆ ಹೊತ್ತಿದ್ದರು ಚಾರ್ವಾಕನ ಕುಟುಂಬಸ್ಥರು. ಅದರ ಉಸ್ತುವಾರಿ ಕುಟುಂಬದ ಹಿರಿಯರಾದ ರಾಮಚಂದ್ರ ರಾಯರ ಹೆಗಲ ಮೇಲಿತ್ತು. ಮಾತ್ರವಲ್ಲದೇ ಎಲ್ಲ ಬಿಟ್ಟು ಹೊರಟು ಹೋದ ತಂದೆಯಿಲ್ಲದ ಅಳಿಯನ ಮೇಲೆ ಸ್ವಲ್ಪ ಹೆಚ್ಚು ಎನ್ನುವಷ್ಟು ಮಮತೆ-ಮಮಕಾರವೂ ರಾಯರಿಗಿತ್ತು. ಹಾಗಾಗಿ ಬೆಳಗ್ಗೆ ಸೂರ್ಯೋದಯ ಕಳೆದು ಒಂದು ಗಂಟೆಯ ಬಳಿಕ ನೇರವಾಗಿ ದೇವಪುರದ ಹಾಜಿಯಬ್ಬರ ಹೊಟೇಲ್ ಕಮ್ ಅಂಗಡಿಯಲ್ಲಿ ಸೇರಿದ ನೆರೆಕರೆಯವನ್ನು ಆಹ್ವಾನಿಸಲು ಮತ್ತು ತನ್ನ ಅಳಿಯನ ಬಗ್ಗೆ ಏನಾದರೂ ಸುದ್ದಿ ಸಿಕ್ಕೀತೇ ಎಂದು ನೋಡಲು ರಾಯರು ಅಂಗಡಿ ಕಡೆಗೆ ಬಂದಿದ್ದರು. ಆದರೆ ರಾಯರು ಹೊತ್ತು ತಂದ ಸುದ್ದಿಯಿಂದ ಸ್ತಬ್ಧರಾದ ಜನ ಯಾರೂ ಹೆಚ್ಚು ಏನನ್ನೂ ರಾಯರಲ್ಲಿ ಕೇಳುವ ಗೋಜಿಗೆ ಹೋಗಲಿಲ್ಲ. ಎಲ್ಲರೂ ರಾಯರನ್ನು ಸಹಾನುಭೂತಿಯಿಂದ ನೋಡಿದ್ದು ಬಿಟ್ರೆ ಬೇರೇನನ್ನೂ ಹೇಳಲಿಲ್ಲ. ರಾಯರಿಗೆ ಯಾವ ಹೊಸ ಸುದ್ದಿಯೂ ಸಿಗಲಿಲ್ಲ. ಅಲ್ಲಿದ್ದವರಿಗೆಲ್ಲ ಹೇಳುವುದನ್ನು ಹೇಳಿ ಮನೆ ಹಾದಿ ಹಿಡಿದರು.

ರಾತ್ರಿ ಊರ ಹುಡುಗರೆಲ್ಲ ಸೇರಿ ಭಜನೆ ಶುರುವಾಗಿತ್ತು. ಮೈಕಲ್ಲಿ ತಮ್ಮ ಧ್ವನಿ ಲೋಕಕ್ಕೆ ಕೇಳಬೇಕೆಂಬ ಅಸೆಯಿಂದಲೋ ಅಥವಾ ನಿಜ ಭಕ್ತಿಯಿಂದಲೋ ಗೊತ್ತಿಲ್ಲ, ಅಂತೂ ಸಂಗೀತದ ಯಾವ ಗಂಧ ಗಾಳಿ ಗೊತ್ತಿಲ್ಲದಿದ್ದರೂ ತಮ್ಮದೇ ರಾಗ-ತಾಳದಲ್ಲಿ ಜೋರಾಗಿ ಹಾಡತೊಡಗಿದ್ದರು. ರಿಕ್ಷಾದ ಕಾಂತಣ್ಣ ಪಕ್ಕದ ಮನೆಯ ಗಿರಿಯಪ್ಪಣ್ಣನನ್ನು ರಸ್ತೆ ಬದಿಗೆ ಎಳೆದುಕೊಂಡು ಹೋಗಿ ಏನೋ ಗುಸು ಗುಸು ಮಾತಾಡುತ್ತಿದ್ದರು. ಈ ಕಾಂತಣ್ಣನಿಗೆ ಯಾವಾಗಲೂ ಎಲ್ಲರಲ್ಲಿ ಯೂ ಎಲ್ಲದರಲ್ಲೂ ಅನುಮಾನವೇ ಅಂತ ಗಿರಿಯಪ್ಪಣ್ಣ ಹೆಚ್ಚು ತಲೆಕೆಡಿಸಿಕೊಳ್ಳದೆ ಯಾಂತ್ರಿಕವಾಗಿ ತಲೆಯಾಡಿಸುತ್ತಿದ್ದರು. ಅಲ್ಲಿ ಸೇರಿದ್ದ ಜಾತಿ ಬಾಂಧವರ ಬಾಯಲ್ಲಿ ಚಾರ್ವಾಕನದ್ದೇ ವಿಷಯ. ಚಾರ್ವಾಕ ಹೇಳದೇ ಕೇಳದೆ ಊರು ಬಿಟ್ಟು ಹೋದದ್ದಕ್ಕೆ ಚಾರ್ವಾಕನ ತಾಯಿ ಮತ್ತು ಹೆಂಡತಿ ಮಕ್ಕಳ ಮೇಲೆ ಅನುಕಂಪ ಸೂಚಿಸಿದ ಒಂದು ಗುಂಪು ಒಂದೆಡೆ, ಮತ್ತೊಂದೆಡೆ ಇನ್ನು ಕೆಲವರು ಏನೇನೋ ಕಥೆ ಕಟ್ಟುತ್ತಿದ್ದರು. ಕೆಲವರ ಮಾತಲ್ಲಂತೂ ಬರೇ ಕುಹಕ, ಕೊಂಕು ಮಾತ್ರ ತುಂಬಿತ್ತು. ಏನೇ ಇದ್ದರೂ ಮಾತಾಡಿ ಸರಿ ಮಾಡಬಹುದಿತ್ತು, ಹೀಗೆ ಹೇಳದೆ ಕೇಳದೆ ಎದ್ದು ಹೋದ್ರೆ ಹೆಂಡತಿ ಮಕ್ಕಳನ್ನು ನೋಡಿಕೊಳ್ಳೋರು ಯಾರು? ಸ್ವಲ್ಪಾನು ಜವಾಬ್ದಾರಿ ಇಲ್ಲ ಈ ಮನುಷ್ಯನಿಗೆ ಹೆಣ್ಣು ಕೊಟ್ಟ ಅತ್ತೆ-ಮಾವಂದಿರು ಭುಸುಗುಟ್ಟುತ್ತಿದ್ದರು. ಅದಕ್ಕೆ ಇನ್ನೂ ಕೆಲವು ಹೆಂಗಸರು ತುಪ್ಪ ಸುರಿಯುತ್ತಿದ್ದರು. ಮದ್ದಿಗೆ ಕಾಸು ಇನ್ನು ಯಾರಲ್ಲಿ ಕೇಳಲಿ? ಎಲ್ಲಿಗೆ ಹೋದ್ನೋ ಏನಾದ್ನೋ? ಮೊದ್ಲಿಂದಲೂ ಹಾಗೆ. ಹೇಳಿದ್ದನ್ನು ಕೇಳ್ತಾನೂ ಇರ್ಲಿಲ್ಲ, ಯಾವುದನ್ನೂ ಹೇಳ್ತಾನೂ ಇರ್ಲಿಲ್ಲ, ಯಾರ ಬಗ್ಗೆಯೂ, ಯಾವುದರ ಬಗ್ಗೂ ತಲೆಕೆಡಿಸಿಕೊಳ್ತಿರಲಿಲ್ಲ ಅಂತ ಹೆತ್ತ ತಾಯಿ ಗೋಗರೆಯುತ್ತಿದ್ದಳು.

ಅವಳ ಗೋಳಾಟ ಇನ್ನೂ ವಿಪರೀತಕ್ಕೆ ಹೋಗುವುದು ಬೇಡ ಅಂತ ಚಾರ್ವಾಕನ ಅಕ್ಕಂದಿರು ಸಮಾಧಾನಿಸುವ ರೀತಿಯಲ್ಲಿ ಆಕೆಯನ್ನು ಗದರಿಸುತ್ತಿದ್ದರು. ಈ ಕಲ್ತವ್ರೇ ಹೀಗೆ. ಒಂದೂ ನಂಬಲ್ಲ, ಏನೂ ಮಾಡಲ್ಲ, ಕೇಳಲ್ಲ. ಎಲ್ಲದರಲ್ಲೂ ಎಲ್ಲದಕ್ಕೂ ತಕರಾರು, ಆಕ್ಷೇಪ. ಅವರಿಗೆ ಅವರದ್ದೇ ಪ್ರಪಂಚ ಅಂತ ಚಾರ್ವಾಕನ ಅಣ್ಣನೊಬ್ಬ ಗೊಣಗುತ್ತಿದ್ದ. ಅಷ್ಟಾಗುವಾಗ ಈಗೆಲ್ಲ ಈ ಗಂಡಸರನ್ನೆಲ್ಲ ನಂಬುವ ಹಾಗಿಲ್ಲಪ್ಪ. ಎಲ್ಲೆಲ್ಲಿ ಯಾರ್ಯಾರಿಗೆ ಏನೇನು ಮಾತು ಕೊಟ್ಟಿರ್ತಾರೆ ಅಂತ ಹೇಳೋದೇ ಕಷ್ಟ ಅಂತ ಚಾರ್ವಾಕನ ವೈವಾಹಿಕೇತರ ಸಂಬಂಧದ ಬಗ್ಗೆ ಅನುಮಾನಿಸುತ್ತ ದೂರದ ಬಾಯಿ ಬಡುಕಿ ಸಂಬಂಧಿ  ಯೊಬ್ಬಳು ಬಾಯಿ ಬಿಡುವ ವೇಳೆಗೆ ಸರಿಯಾಗಿ ರಾಮಚಂದ್ರ ರಾಯರು ಬಂದು, `ಎಲ್ಲ ಸ್ವಲ್ಪ ಮಾತು ನಿಲ್ಸಿ ಪೂಜೆಗೆ ಬನ್ನಿ ಅಂತ ಖಡಕ್ ಆಗಿ ಹೇಳಿ ಸರ್ವರ ಅಭಿಪ್ರಾಯ ಹಂಚಿಕೆಯ ಕಾರ್ಯಕ್ರಮಕ್ಕೆ ತಾತ್ಕಾಲಿಕ ವಿರಾಮವನ್ನು ತಂದರು. ಪೂಜೆ ಏನೋ ಮುಗಿಯಿತು. ಪುರೋಹಿತರು ಸ್ವಲ್ಪ ಕಾಸು ದುಡ್ಡು, ಅದು ಇದು ಸಾಮಾನು ವಸ್ತು ಅಂತ ಜೇಬಿಗೆ ಮತ್ತು ಜೋಳಿಗೆಗೆ ಇಳಿಸಿಕೊಂಡ್ರು. ಜನ್ರೂ ದೇವರ ಪ್ರಸಾದ ತಕ್ಕೊಂಡು ಮನೆಗೆ ಹೊರಟ್ರು. ಆದ್ರೆ ಆದ ಪೂಜೆ, ಭಜನೆಯ ಮಹಾತ್ಮೆಯಿಂದ ಹೋದವನು ವಾಪಾಸ್ ಬರುತ್ತಾನೆ ಅನ್ನುವ ಗ್ಯಾರಂಟಿ ಭಯಂಕರ ದೈವಭಕ್ತರಾದ ರಾಮಚಂದ್ರರಾಯರಿಗೆ ಇದ್ದಂತೆ ಕಾಣಲಿಲ್ಲ. ಏನೊಂದೂ ತೋಚದೆ ದೇವಸ್ಥಾನದ ಒಂದು ಮೂಲೆಯಲ್ಲಿ ಕೂತು ಯೋಚನೆಗೆ   ಬಿದ್ದಿದ್ದ ಚಾರ್ವಾಕನ ತಾಯಿಯ ಬಳಿ ಸಾರಿದ ಅವರು `ನೋಡೋಣ ಸ್ವಲ್ಪ ದಿನ ಕಳೆಯಿಲಿ ಅಂತ ಸಮಾಧಾನ ಹೇಳಿ ಅಲ್ಲಿಂದ ಹೊರಟರು. 

ವಾಟ್ಸಾಪ್, ಟ್ವಿಟರ್, ಇನ್ಸ್ಟಾಗ್ರಾಮ್ ಕಾಲದಲ್ಲೂ ಹಾಜಿಯಬ್ಬರ ಅಂಗಡಿಯಲ್ಲಿ ಇಷ್ಟೊಂದು ಸಂಖ್ಯೆಯಲ್ಲಿ ಜನ ಸೇರ್ತಾರೆ ಅಂದರೆ ಅದೊಂದು ಸೋಜಿಗವೇ ಸರಿ. ಆಧುನಿಕತೆಯ ವಿಪರೀತ ಆಕರ್ಷಣೆ ಇರುವ ಇಂದಿನ ದಿನಗಳಲ್ಲೂ ಹಾಜಿಯಬ್ಬರ ಅಂಗಡಿ ಕಮ್ ಹೊಟೇಲ್ ಆಕರ್ಷಣೆಯ ಕೇಂದ್ರವಾಗಿ ಸೂಜಿಗಲ್ಲಿನಂತೆ ಜನರನ್ನು ತನ್ನೆಡೆಗೆ ಸೆಳೆಯಲು ಸಾಧ್ಯವಾಗಿದೆ ಅಂದರೆ ಅದಕ್ಕೆ ಅವರ ಒಳ್ಳೆಯತನವೂ ಕಾರಣವಿರಬಹುದು. ಊರ ಎಲ್ಲ ಜಾತಿ-ಧರ್ಮದ ಜನರು ಹಾಜಿಯಬ್ಬರ ಖಾಯಂ ಗಿರಾಕಿಗಳು. ವಯಸ್ಸಾದವರು, ಮಧ್ಯವಯಸ್ಸಿನವರು, ಹೆಂಗಸರಿಂದ ಹಿಡಿದು ಅಂಡ್ರ್ಯಾಯ್ಡ್ ಮೊಬೈಲಿನಲ್ಲಿ ಬಿದ್ದು ಪಬ್ಜಿ ಆಡುತ್ತಾ, ಫೇಸ್‌ಬುಕ್‌ಲ್ಲಿ ಹೊರಳಾಡುತ್ತಾ, ಜಗತ್ತನ್ನೇ ಮರೆಯುವ ಹೊಂತಕಾರಿ ಪಡ್ಡೆ ಹುಡುಗರಿಗೂ ಇಲ್ಲಿ ಏನೇನೋ ಕೆಲಸಗಳು. ಬೀಡಿ-ಸಿಗರೇಟ್ ಸೇದುವವರಿಗೆ, ದೇಸೀ ಬೀಡ ಮೆಲ್ಲುವವರಿಗಂತೂ ರಾತ್ರಿ ೧೧ ಗಂಟೆಯಾದರೂ ಮನೆಗೆ ಹೋಗಲು ನೆನಪಾಗುವುದಿಲ್ಲ.

ಕೊನೆಗೆ ಹಾಜಿಯಬ್ಬರೆ, ಅಣ್ಣೆರೆ ಎಂಕ್ ಇಲ್ಲ್ ಉಂಡ್, ಒರ್ತಿ ಬೊಡೆದಿ ಉಲ್ಲಲ್, ಜೋಕ್ಲ್ ಉಲ್ಲೆರ್, ಎನನ್ ಕೇನ್‌ನಕ್ಲು ಉಲ್ಲೆರ್ (ಅಣ್ಣಂದಿರೇ ನನಗೂ ಮನೆ ಎಂಬುದೊಂದು ಇದೆ, ಒಬ್ಬಳು ಹೆಂಡತಿ ಇದ್ದಾಳೆ, ಮಕ್ಳು ಇದ್ದಾರೆ, ನನ್ನನ್ನೂ ಕೇಳುವವರು ಇದ್ದಾರೆ) ಎನ್ನುತ್ತ ಎಲ್ಲರನ್ನು ಒತ್ತಾಯದಲ್ಲಿ ಕಳುಹಿಸಿ ಅಂಗಡಿ ಮುಚ್ಚಿದ್ದುಂಟು. ಹಾಜಿಯಬ್ಬರ ಅಂಗಡಿ ಅಂದ್ರೆ ಅದು ಬರೇ ಅಂಗಡಿ ಅಲ್ಲ. ಚಹದ ಚಟವನ್ನು ಅಂಟಿಸಿಕೊಂಡಿದ್ದ ಹಾಜಿಯಬ್ಬರಿಗೆ ಆಗಾಗ ಕುಡಿಯಲು ನೀರಿನ ಬದಲಿಗೆ ಚಹವೇ ಬೇಕು. ಹಾಗಾಗಿ ದೂರದ ಸಾಹೇಬ್ ನಗರದಿಂದ ಹೊಟ್ಟೆಪಾಡಿಗೆಂದು ದೇವಪುರಕ್ಕೆ ವಲಸೆ ಬಂದ ಶುರುವಿಗೆ ತಮ್ಮ ಚಹದ ದಾಹಕ್ಕಾಗಿ ಒಂದು ಗ್ಯಾಸ್ ಸಿಲಿಂಡರ್ ಮತ್ತು ಸ್ಟೌ ಹೊತ್ತು ತಂದಿದ್ದರು. ಹಾಜಿಯಬ್ಬರಿಗೆ ತಾವು ಚಹ ಕುಡಿಯುತ್ತಿರುವಾಗ ಯಾರಾದರೂ ಗಿರಾಕಿಗಳು ಬಂದ್ರೆ ಅವರಿಗೂ ಚಹ ಕೊಡುವಷ್ಟು ಉದಾರ ಮನಸ್ಸು. ಕ್ರಮೇಣ ಚಹದ ಅತಿಥಿಗಳು ಹೆಚ್ಚಾಗುತ್ತಾ ಹೋದ್ರು. ಕೊನೆಗೊಂದು ದಿನ ತಾನೇ ಯಾಕೆ ಇಲ್ಲೇ ಒಂದು ಸಣ್ಣ ಕ್ಯಾಂಟೀನ್ ಶುರು ಮಾಡಬಾರದು ಎಂಬ ಯೋಚನೆ ಬಂದು ಅದನ್ನೇ ಕಾರ್ಯರೂಪಕ್ಕೆ ತಂದರು. ಗಿರಾಕಿಗಳ ಸಂಖ್ಯೆ ಹೆಚ್ಚಾಗುತ್ತಾ ಹೋದಂತೆ ಹಾಜಿಯಬ್ಬರು, ಅಂಗಡಿಯ ಗೋಡೆಗೊಂದು ಅಡಿಕೆ ಸೋಗೆಯ ಮಾಡು ಮಾಡಿ ಬಿದಿರಿನ ತಟ್ಟಿ ಕಟ್ಟಿ ಸಣ್ಣ ರೂಮ್ ಮಾಡಿಯೇ ಬಿಟ್ರು. ಊರ ಜನರಿಗೆ ಬಂದು ನಿಲ್ಲೋದಕ್ಕೆ, ನಿಂತು ಮಾತಾಡೋದಕ್ಕೆ ಈ ಅಂಗಡಿ ಕಮ್ ಹೊಟೇಲ್ ಒಂದು ನೆಮ್ಮದಿಯ ತಾಣವಾಗಿ ಬಿಟ್ಟಿತು. ಬಂದ ಜನ ಸುಮ್ನೆ ಇರ್ತಾರೆಯೇ..? ಮನಸ್ಸಿಗೆ ತೋಚಿದ ಹಾಗೆ ಮಾತಾಡ್ತಾರೆ. ಬಾಯಿಗೆ ಬಂದುದನ್ನು ಬಂದ ಹಾಗೆ ಹೊರಹಾಕ್ತಾರೆ. ಈ ದೇಶದಲ್ಲಿ ಎಲ್ಲಾ ಕಡೆ ನಡೆಯುವ ಹಾಗೆ ಜಗತ್ತಿನ ಕುರಿತ ಕಥೆ ಕಲಾಪಗಳು ಇಲ್ಲೂ ನಿತ್ಯ ನಡೆಯುತ್ತಲೇ ಇವೆ. ಸ್ವಾತಂತ್ರ್ಯ ಹೋರಾಟದಿಂದ ಹಿಡಿದು ಮೊನ್ನೆ ಮೊನ್ನೆಯವರೆಗಿನ ಪೌರತ್ವ ತಿದ್ದುಪಡಿ ಕಾಯ್ದೆಯವರೆಗೂ ಇವರು ಮಾತಾಡುವವರೆ. ಮಾತುಕತೆ, ಚರ್ಚೆ, ವಾದ-ವಿವಾದ, ಹರಟೆ ಮುಂದುವರಿದು ತಾರಕಕ್ಕೇರಿ ಕೆಲವೊಮ್ಮೆ ಎಲ್ಲ ಸೇರಿ ದೇಶವನ್ನು ಬದಲಾಯಿಸುವ ಮಟ್ಟಿಗೆ ಅವರ ಉತ್ಸಾಹ ಏರಿ ಹೋಗುವುದೂ ಇದೆ. ಕೊನೆಗೆ ಎಲ್ಲವೂ ಒಮ್ಮಿಂದೊಮ್ಮೆಲೆ ನಿಂತುಹೋಗಿ ಸ್ತಬ್ಧವಾಗುವುದೂ ಉಂಟು. ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳದ ಹಾಜಿಯಬ್ಬರು ತಾವಾಯ್ತು ತಮ್ಮ ಕೆಲಸವಾಯ್ತು ಅಂತ ತಮ್ಮ ಪಾಡಿಗೆ ತಮ್ಮ ಕಾಯಕದಲ್ಲಿ ಮುಳುಗಿರುತ್ತಿದ್ದರು.

ಕರಾವಳಿಯ ಜನರಿಗೆ ಬೆಳಗ್ಗೆ ಎದ್ದು ಕಾಫಿ ಕುಡಿಯದಿದ್ದರೂ ಪರವಾಗಿಲ್ಲ ಆದ್ರೆ ಉದಯವಾಣಿ ದಿನಪತ್ರಿಕೆಯನ್ನು ಓದದಿದ್ರೆ ಏನೋ ಕಳಕೊಂಡ ಹಾಗೆ. ಅಷ್ಟರ ಮಟ್ಟಿಗೆ ಈ ಪತ್ರಿಕೆ ಊರ ಎಲ್ಲ ಜಾತಿಧರ್ಮದವರಿಗೆ ಹುಚ್ಚು ಹಿಡಿಸಿದೆ. ಈ ಊರಿನ ಜನರಿಗೆ ಉದಯವಾಣಿ ಪತ್ರಿಕೆಯಲ್ಲಿ ಬಂದುದೆಲ್ಲವೂ ಪರಮ ಸತ್ಯ. ಹಾಜಿಯಬ್ಬರ ಅಂಗಡಿಗೆ ಬರುತ್ತಿದ್ದದ್ದು ಇದೊಂದೇ ಪತ್ರಿಕೆ. ಈ ಪತ್ರಿಕೆಯ ಖಾಯಂ ಓದುಗ ರಿಕ್ಷಾದ ಕಾಂತಣ್ಣ ಪತ್ರಿಕೆ ಓದಿ ಓದಿ ತಾನು ಈ ದೇಶ, ಸಂವಿಧಾನ ಎಲ್ಲವನ್ನೂ ಸಾಕಷ್ಟು ತಿಳಿದುಕೊಂಡಿದ್ದೇನೆ, ಈ ಅಂಗಡಿಗೆ ಬರುವವರಲ್ಲಿ ತಾನೊಬ್ಬ ಮಾತ್ರ ಉಳಿದವರಿಗಿಂತ ಹೆಚ್ಚು ವಿಚಾರವಂತ ಎಂಬ ಅಹಮಿಕೆಯಲ್ಲಿ ಮಾತಾಡುವುದನ್ನು ಕಂಡು ಅಲ್ಲೇ ಇದ್ದ ದೇವಪುರದ ದಿವಂಗತ ಗೋವಿಂದರಾಯರ ಮಗ ಚಾರ್ವಾಕ ಒಮ್ಮೆ ಮೇಲಿಂದ ಮೇಲೆ ಪ್ರಶ್ನೆ ಕೇಳಿ ಅವರನ್ನು ಕಕ್ಕಾಬಿಕ್ಕಿಗೊಳಿಸಿ ಬಾಯಿ ಮುಚ್ಚಿಸಿದ್ದ. ಚಾರ್ವಾಕನ ತಂದೆ ಗೋವಿಂದ ರಾಯರು ತಾವು ಮಾಡುತ್ತಿದ್ದ ಬಾಚಾಣಿಕೆಯ ಕೆಲಸವನ್ನು ಭಾರೀ ಶ್ರದ್ಧೆಯಿಂದ ತಮ್ಮ ಕೊನೆಯ ಉಸಿರಿನವರೆಗೂ ಮಾಡಿದವರು. ಅವರು ಮಾಡುವ ಬಾಚಾಣಿಕೆ ಕೆಲಸ ಗಾಂಧಿಯ ನೂಲುವ ಕೆಲಸಕ್ಕೆ ಸಮಾನ ಎಂಬ ಗೌರವ, ಅಭಿಮಾನ ಅವರಲ್ಲಿತ್ತು ಎಂದು ಊರ ಜನ ಹೇಳುತ್ತಿದ್ದರು. ಆಗೆಲ್ಲ ಪ್ರಾಣಿಗಳ ಕೊಂಬಿನಿಂದ ಮಾಡುವ ಬಾಚಾಣಿಕೆಗಳನ್ನೇ ತಲೆ ಬಾಚಲು ಬಳಸುತ್ತಿದ್ದರು. ಅಂಥಾ ಸಂದರ್ಭದಲ್ಲಿ ಗೋವಿಂದ ರಾಯರು ತಮ್ಮ ಬಡತನದಲ್ಲೂ ಕೊನೆಯ ಒಬ್ಬ ಮಗನಿಗಾದರೂ ಡಾಕ್ಟರ್ ಓದಿಸಿಬೇಕೆಂಬ ಆಸೆಯೋ ಅಥವಾ ಬಾಪು ಗಾಂಧಿಯ ಮೇಲೆ ಪ್ರೀತಿಯೋ ಏನೋ ತಿಳಿಯದು. ಯಾಕೋ ಮಗನಿಗೆ ಚರಕ ಎಂಬ ಹೆಸರಿಟ್ಟಿದ್ದರು. ಆದರೆ ಈ ಚರಕನ ವರ್ತನೆ ನೋಡುವವರ ಕಣ್ಣಿಗೆ ಉಳಿದ ಹುಡುಗರಿಗಿಂತ ಬೇರೆಯಾಗಿ ಕಾಣುತ್ತಿತ್ತು. ಅವನ ಮಾತು ಅನೇಕರಿಗೆ ತಲೆಗೆ ಹೋಗುತ್ತಿರಲಿಲ್ಲ. ಏನೋ ವಿಚಿತ್ರ, ವಕ್ರ ಅಂತ ಭಾವಿಸುತ್ತಿದ್ದರು. ಊರ ಜನರಿಗೆ ಚರಕ ತೀರಾ ಅಧಾರ್ಮಿಕನಾಗಿ ಕಂಡುದರಿಂದಲೋ ಅಥವಾ ಚರಕ ಹೆಸರನ್ನು ಉಚ್ಚರಿಸಲು ಕಷ್ಟವಾಗುತ್ತಿದ್ದುದರಿಂದಲೋ ಏನೋ ಅವರ ಬಾಯಲ್ಲಿ ಚರಕ ಹೋಗಿ ದೇವರನ್ನು ನಂಬದ ಚಾರ್ವಾಕ್ ಎಂದಾಯಿತು. ಅಲ್ಲಿಂದ ಹಾಜಿಯಬ್ಬರ ಅಂಗಡಿಯಲ್ಲಿ ಬಂದು ಸೇರುವವರೆಲ್ಲ ಚರಕನನ್ನು ಚಾರ್ವಾಕ ಅಂತಲೇ ಕರೆಯಲು ಶುರುಮಾಡಿ ಆ ಹೆಸರೇ ಅವನಿಗೆ ಪರ್ಮನೆಂಟ್ ಆಯಿತು.

ಜನರ ಚಪಲಕ್ಕೊಂದು ಎಡೆ ಬೇಕು, ಕುಂಡೆ ಊರಲು ಒಂದು ನೆಲೆ ಬೇಕು ಎನ್ನುವಂತೆ ಜನ ಸದಾ ಹಾಜಿಯಬ್ಬರ ಅಂಗಡಿ ಕಮ್ ಹೊಟೇಲಲ್ಲಿ ಬಂದು ಸೇರುತ್ತಿದ್ದರು. ದೇವಪುರಕ್ಕೆ ಅದೊಂದು ಪ್ರಮುಖ ಹೊಟೇಲ್ ಕಮ್ ಅಂಗಡಿ ಎನ್ನಲು ಯಾವುದೇ ಅಡ್ಡಿ ಇಲ್ಲ. ಭಾನುವಾರ ಎಂದರೆ ಶಾಮಣ್ಣನ ಮಗ ಅಭಿಷೇಕ್‌ಗೆ ಬಹಳ ಖುಷಿ. ವಾರದ ಆರು ದಿನಗಳೂ ಬೆಳಗ್ಗೆ ಬೇಗನೆ ಎದ್ದು ದೂರದ ಪಾಂಡವಪುರಕ್ಕೆ ಕೆಲಸಕ್ಕೆ ಹೋಗುವುದರಿಂದ ಅದೊಂದು ದಿನ ಅವನಿಗೆ ತಡವಾಗಿ ಏಳುವುದಕ್ಕೆ ಇರುವ ದಿನ. ರವಿವಾರ ಹೆಚ್ಚಾಗಿ ತಡವಾಗಿಯೇ ಏಳುವ ಆತ ಆ ಭಾನುವಾರ ಮಾತ್ರ ಸ್ವಲ್ಪ ಬೇಗನೆ ಎದ್ದು ಹಾಜಿಯಬ್ಬರ ಅಂಗಡಿಯಲ್ಲಿ ಎಲ್ಲರ ಅಚ್ಚುಮೆಚ್ಚಿನ ಉದಯವಾಣಿ ಪೇಪರ್ ಓದುತ್ತಾ ತನ್ನ ಗೆಳೆಯ ಚಾರ್ವಾಕನ ಬರವಿಗಾಗಿ ಕಾಯುತ್ತಿದ್ದ. ಚಾರ್ವಾಕ ಹಾಜಿಯಬ್ಬರ ಅಂಗಡಿಗೆ ಬಂದಾಗಲೆಲ್ಲಾ ಏನಾದರೂ ಸುದ್ದಿ ಹೊತ್ತು ತಂದು ಒಂದಷ್ಟು ಮಾತಾಡುವುದು ರೂಢಿ. ಸಿನೆಮಾ, ನಾಟಕ, ಯಕ್ಷಗಾನ, ಕ್ರಿಕೆಟ್, ರಾಜಕೀಯದ ಬಗ್ಗೆ ಯಾವಾಗಲೂ ಒಂದಷ್ಟು ಹೊಸ ಹೊಸ ವಿಷಯಗಳನ್ನು ಹೇಳುತ್ತಿದ್ದುದರಿಂದ ಚಾರ್ವಾಕನೆಂದರೆ ಹಾಜಿಯಬ್ಬರಿಂದ ಹಿಡಿದು ಅಂಗಡಿಯಲ್ಲಿ ಜಮಾಯಿಸುವ ಎಲ್ಲರಿಗೂ ಕುತೂಹಲ, ಕೆಲವೊಮ್ಮೆ ಮತ್ಸರವೂ. ದಿನಾ ಬೆಳಗಾದರೆ ಸಾಕು ಏನಾದರೂ ಒಂದು ವಿಷಯ ಎತ್ತಿಕೊಂಡು ಒಂದಷ್ಟು ಚರ್ಚೆ ನಡೆಸುತ್ತಿದ್ದ. ಏನೂ ಇಲ್ಲದಾಗ ಲೋಕಾಭಿರಾಮ ಮಾತಾಡುತ್ತಿದ್ದ. ಕೆಲವೊಮ್ಮೆ ಮಾತಿನ ಭರದಲ್ಲಿ ಏನಾದರೂ ಎಡವಟ್ಟು ಮಾಡಿಕೊಂಡು ತನಗೆ ತಾನೆ ಇರಿಸು ಮುರಿಸು ತಂದುಕೊಳ್ಳುತ್ತಿದ್ದ. ಆಗೆಲ್ಲ ತಾನಾಡಿದ ಮಾತುಗಳ ಬಗ್ಗೆ ತಾನೇ ವಿಮರ್ಶೆ ಮಾಡಿಕೊಳ್ಳುತ್ತಾ ಎಲ್ಲೋ ಎಡವಿದೆ ಎಂದು ಭಾವಿಸಿಕೊಂಡು ಮೂಡ್‌ಆಫ್ ಮಾಡಿಕೊಂಡು ಖಿನ್ನನಾಗುತ್ತಿದ್ದ.

ತಮ್ಮದೇ ಕಷ್ಟ ಕಾರ್ಪಣ್ಯಗಳಿಂದ ಬಸವಳಿದ ಜನರಿಗೆ ಚಾರ್ವಾಕನಲ್ಲಾಗುತ್ತಿದ್ದ ಸೂಕ್ಷ್ಮ ಬದಲಾವಣೆಗಳನ್ನು ಗಮನಿಸಲು ಸಮಯವುಂಟೆ ಅಥವಾ ವ್ಯವಧಾನವುಂಟೇ..? ಆದ್ರೆ ಇತ್ತೀಚಿನ ಕೆಲವು ದಿನಗಳಿಂದ ಚಾರ್ವಾಕ್ ಅಂಗಡಿಗೆ ಬರುತ್ತಿಲ್ಲ ಮತ್ತು ತನಗೂ ಮಾತಿಗೆ ಸಿಗದ್ದನ್ನು ಮನಸ್ಸಿಗೆ ಇಳಿಸಿಕೊಂಡ ಅಭಿ, `ಏನಾಯ್ತು ಇವನಿಗೆ? ಕಾಣ್ತಾನೆ ಇಲ್ವಲ್ಲ? ಅಂತ ಯೋಚಿಸುತ್ತಾ, ಒಂದು ಫೋನ್ ಮಾಡ್ತೇನೆ ಎಂದು ಮೊಬೈಲ್ ಕೈಗೆತ್ತಿಕೊಂಡ. ನೀವು ಕರೆ ಮಾಡಿದ ಚಂದಾದಾರರು ವ್ಯಾಪ್ತಿಪ್ರದೇಶದಿಂದ ಹೊರಗಿದ್ದಾರೆ, ಸ್ವಲ್ಪ ಸಮಯದ ಬಳಿಕ ಕರೆ ಮಾಡಿ.. ಎಂಬ ಹೆಣ್ಣಿನ ಧ್ವನಿ ಕೇಳುತ್ತಿದ್ದಂತೆ ಅಭಿಷೇಕ್ ನಿರಾಶನಾದ. ಮತ್ತೆ ಗೆಳೆಯನ ಬಗ್ಗೆ ಯೋಚನಾ ಲಹರಿ ಮುಂದುವರಿಯಿತು. ಸದಾ ಚಿನಕುರುಳಿಯಂತೆ, ಎಣ್ಣೆಯಲ್ಲಿ ಹೊಟ್ಟುವ ಸಾಸಿವೆಯಂತೆ ಪಟಪಟ ಎಂದು ಹೊಟ್ಟುತ್ತಿದ್ದ ಇವನನ್ನು ನಾನು ಸರಿಯಾಗಿ ಗಮನಿಸಿಯೇ ಇಲ್ಲ ಎಂದು ಭಾವಿಸತೊಡಗಿದ ಅಭಿ, ಈಗ ಕಳೆದ ಕೆಲವು ದಿನಗಳನ್ನು ನೆನಪಿಗೆ ತಂದುಕೊಳ್ಳುತ್ತಿದ್ದಾನೆ. `ಹೌದು, ಇವನಲ್ಲಿ ಏನೋ ಒಂದು ಸಂಚಲನ ಉಂಟಾಗಿದೆ, ಇವನ ತಲೆಯಲ್ಲಿ ಏನೋ ಓಡುತ್ತಿದೆ, ಇವನೊಳಗೆ ಏನೋ ತುಂಬಿದೆ, ಎಂದು ಬಲವಾಗಿ ಅನ್ನಿಸಲು ಶುರುವಾಯಿತು. ಯಾರನ್ನೂ ಯಾವತ್ತೂ ಗಂಭೀರವಾಗಿ ಪರಿಗಣಿಸುವ ಜಾಯಮಾನದವನೇ ಅಲ್ಲದ ಈ ಅಭಿಗೆ ಯಾರ ಭಾವಪ್ರಪಂಚದ ಪರಿಚಯವಿರಲಿಲ್ಲ. ಯಾವ ಮನಸ್ಸಿನ ಒಳಗುದಿಯನ್ನು ಅರ್ಥೈಸಲು ಕಿಂಚಿತ್ ಸಾವಧಾನಿಸಿ ಗೊತ್ತಿಲ್ಲದ ಅವಸರದ ಈ ಮನುಷ್ಯ ಜೀವಿಗೆ ಈಗ ಮಾತ್ರ ಏನೋ ಅನ್ನಿಸಲು ಶುರುವಾಗಿದೆ. ಗೆಳೆಯನ ವಿಲಕ್ಷಣ ನಡವಳಿಕೆ ಕೊರೆಯಲು ಶುರುವಾಗಿ ಅದರ ತೀವ್ರತೆ ಹೆಚ್ಚುತ್ತಿದ್ದಂತೆ ಮತ್ತೆ ಮೊಬೈಲ್ ಕೈಗೆತ್ತಿಕೊಂಡು ನಂಬರ್‌ಗೆ ಕ್ಲಿಕ್ ಮಾಡಿ ಕಿವಿಗಿಡುತ್ತಿರಬೇಕಾದ್ರೆ, ದೂರದಲ್ಲಿ ಚಾರ್ವಾಕ ಗಾಡಿಯಲ್ಲಿ ಹೋಗುತ್ತಿರುವುದನ್ನು ಗಮನಿಸಿದ. `ಅರೆ ಇಂವ ಈಗೆಲ್ಲಿಗೆ ಹೊರಟಿದ್ದಾನೆ? ಎಂದು ಯೋಚಿಸುವಾಗಲೇ ಚಾರ್ವಾಕ ದೇವಪುರದ ಮೊದಲ ತಿರುವನ್ನು ದಾಟಿ ಮುಂದೆ ಸಾಗಿಯಾಗಿತ್ತು. ಅಭಿ ನೋಡು ನೋಡುತ್ತಿದ್ದಂತೆಯೇ ಚಾರ್ವಾಕ ಮೇರೆಮಜಲ್ ಸರ್ಕಲ್‌ನಿಂದ ಮುಂದೆ ಹೋಗಿ ರಾಷ್ಟ್ರೀಯ ಹೆದ್ದಾರಿ ಸೇರಿಯಾಗಿತ್ತು. ಇನ್ನು ಇವನನ್ನು ಕೂಗಿ        ಪ್ರಯೋಜನವಿಲ್ಲ ಅಂದುಕೊಂಡು ತನ್ನ ಗಾಡಿ ಹಿಡಿದು ಅವನನ್ನು ಕುತೂಹಲದಿಂದ ಹಿಂಬಾಲಿಸಿದ.

ರೈಲ್ವೆ ಟ್ರ್ಯಾಕ್ ದಾಟಿ ಮುಂದೆ ದೂರದಲ್ಲಿ ಒಂದು ಗುಡಿ. ಸುತ್ತ ಬೆಳೆದು ನಿಂತ ಎತ್ತರದ ವಿಶಾಲವಾದ ಮರಗಳ ದಟ್ಟವಾದ ನೆರಳಲ್ಲಿ ಚಾರ್ವಾಕ್‌ನ ನೀಲಿ ಬಣ್ಣದ ಗಾಡಿಯನ್ನು ಕಂಡ ಅಭಿ, ಸ್ವಲ್ಪ ದೂರದಲ್ಲಿ ತನ್ನ ಗಾಡಿಯನ್ನು ನಿಲ್ಲಿಸಿ ಮುಂದೆ ಮುಂದೆ ಬಂದ. ಎಲ್ಲರಂತೆ ದೇವಸ್ಥಾನಕ್ಕೆ ಹೋಗುವುದು, ಮೂರ್ತಿಗೆ ಕೈಮುಗಿಯುವುದು ಇವ್ಯಾವುದನ್ನು ಬಹಿರಂಗವಾಗಿ ರಾಜಾರೋಷವಾಗಿ ಎಂದೂ ಮಾಡದಿದ್ದ ಚಾರ್ವಾಕ ತನ್ನ ಹೆಸರಿಗೆ ಅನ್ವರ್ಥದಂತೆ ಎಲ್ಲರ ಕಣ್ಣಲ್ಲೂ ನಾಸ್ತಿಕನಾಗಿದ್ದ. ಆದರೆ ಈಗ ಗುಡಿ ಸೇರಿದ್ದಾನಲ್ಲ ಎಂದು ಬೆರಗಾದ ಅಭಿ, ಏನು ಮಾಡುವುದೆಂದು ಗೊಂದಲಕ್ಕೀಡಾದ. ಅನಿರ್ವಚನೀಯವಾದ ಆಧ್ಯಾತ್ಮಿಕ ಭಾವ ಹುಟ್ಟಿ ತನ್ಮಯರಾಗಬಹುದಾದ ಪ್ರಶಾಂತವಾದ ಆ ವಾತಾವರಣದಲ್ಲಿ ಮಿಂದೇಳುತ್ತಿದ್ದ ಅಭಿ, ತಾನು ಈ ಹಿಂದೆ ಎಂದೂ ಕಾಲಿಡದ ಈ ಗುಡಿಯೊಳಗೆ ನಿಧಾನಕ್ಕೆ ಹೆಜ್ಜೆ ಇಟ್ಟ. ಜಾತ್ರೆ ಮತ್ತು ವಿಶೇಷ ಕಾರ್ಯಕ್ರಮದ ಸಂದರ್ಭದಲ್ಲಿ ಬ್ರಾಹ್ಮಣೇತರರಿಗೆ ಊಟ ಹಾಕುವ, ದೇಗುಲದ ಪ್ರಾಂಗಣಕ್ಕೆ ತಾಗಿಕೊಂಡಿರುವ ಸಭಾಂಗಣದ ಮೋಟು ಗೋಡೆಯ ಮರೆಯಲ್ಲಿ ಒಂದು ಕ್ಷಣ ನಿಂತ. ಒಂದು ಬಗೆಯ ವಿಸ್ಮಯ ಮತ್ತು ಸಂಕಟದಲ್ಲಿ `ಇಂವ ಇಲ್ಲಿಗ್ಯಾಕೆ ಬಂದ? ಎಂದು    ಯೋಚಿಸುತ್ತಾ ಸಭಾಂಗಣದ ಸುತ್ತಲೂ ನೋಡಿದಾಗ ಗಾಳಿಯಾಡಲು ಮತ್ತು ಬೆಳಕಿಗಾಗಿ ಹಾಕಲಾದ ಗೆದ್ದಲು ಹಿಡಿದ ಹಳೆ ಕಾಲದ ಮರದ ಕಿಟಕಿಯೊಂದನ್ನು ಕಂಡ. ತಡ ಮಾಡದೆ ಕಿಟಕಿಯ ಬಳಿ ಸಾರಿದ ಅಭಿ, ಧೂಳು ಹಿಡಿದು ಕೆಂಪಾಗಿದ್ದ, ಪಳೆಯುಳಿಕೆಯಂತಿದ್ದ ಆ ಕಿಟಕಿಯ ಮೂಲಕ ಕತ್ತು ಬಾಗಿಸಿ ಕಣ್ಣು ಹಾಯಿಸಿದ. ತಾನು ಯಾವತ್ತೂ ಕಲ್ಪಿಸಿದ ದೃಶ್ಯವೊಂದನ್ನು ಅಲ್ಲಿ ಅಭಿ ಕಂಡ. ಕಾಣುತ್ತಿರುವುದು ವಾಸ್ತವವೇ ಅಥವಾ ಕನಸೇ ಎಂದು ತನ್ನನ್ನು ತಾನೇ ಚಿವುಟಿ ನೋಡಿದ. ತನ್ನ ಕಣ್ಣನ್ನು ತಾನೇ ನಂಬದಾದ. ತನ್ನ ಗೆಳೆಯ ಹತ್ತಾರು ಮಕ್ಕಳ ಮಧ್ಯದಲ್ಲಿ ಕಾಲುಗಳನ್ನು ಅಗಲಿಸಿ, ದೇಹವನ್ನು ಕುಗ್ಗಿಸಿ ಮಂಡಲ ಸ್ಥಿತಿಯಲ್ಲಿ ನಿಂತಿದ್ದಾನೆ. ಬಾಯಿತಾಳವನ್ನು ಹೇಳುತ್ತಿದ್ದಾನೆ. ನಿಧಾನಕ್ಕೆ ಒಂದೊಂದೇ ಹೆಜ್ಜೆಯನ್ನು ಎತ್ತಿ ಎತ್ತಿ ಇಡುತ್ತಿದ್ದಾನೆ. ತಕ್ಷಣಕ್ಕೆ ಇದು ಏನು ಎಂಬುದನ್ನು ಅರ್ಥಮಾಡಿಕೊಳ್ಳಲು ಕಷ್ಟಪಟ್ಟ ಅಭಿ, ದಂಗಾಗಿ ಅಲ್ಲಿ ಹಾಗೆ ನಿಂತು ಬಿಟ್ಟ. ಮಕ್ಕಳ ಬಾಯಿತಾಳದ ಧ್ವನಿಯೊಂದಿಗೆ ಚಾರ್ವಾಕನ ಹೆಜ್ಜೆಯ ಸದ್ದು ಕೇಳುತ್ತಲೇ ಇತ್ತು.

ಧೀಂ, ಧಿತ್ತ, ತಕಿಟ, ತಕಧಿಮಿ, ತಕ ತಕಿಟ, ತಕಿಟ ತಕಧಿಮಿ

ಧೀಂ ಕಿಟ ಕಿಟತಕ ತರಿಕಿಟ ಕಿಟತಕ

ಎಲ್ಲವನ್ನು ನೋಡುವ ತವಕದಲ್ಲಿ ಆತ ಅಲ್ಲೇ ಆ ಕಿಟಿಕಿಗೆ ಮತ್ತಷ್ಟು ಹತ್ತಿರವಾಗಿ ಒರಗಿದ. ಒರಗಿದನೆಂದರೆ ಬರೇ ಒರಗಿದ್ದಲ್ಲ. ಯೋಚನಾಮಗ್ನನಾದ. ಮೊನ್ನೆ ಮೊನ್ನೆ ಕ್ರಿಸ್‌ಮಸ್ ರಜೆಯವರೆಗೂ ಸರಿಯಾಗಿಯೇ ಇದ್ದ. ಯಾವಾಗ ಕೇಳಿದ್ರು ಓದು-ಬರಹ, ಸೆಮಿನಾರ್, ನಾಟಕ ಅದು ಇದು ಕಾರ್ಯಕ್ರಮ, ಒಂದು ಗಳಿಗೆ ಪುರ್ಸೋತು ಇಲ್ಲ ಅಂತ ಹೇಳ್ತಿದ್ದ ಇವ್ನಿಗೆ ಏನೋ ಆಗಿದೆ. ಇವನೊಳಗೆ ಯಾರೋ ಬಂದಿದ್ದಾರೆ. ಇಲ್ಲದಿದ್ರೆ ಈ ಆಟದ ಹೆಜ್ಜೆಯಲ್ಲಿ ಇವ್ನಿಗೆ ಈಗ ಒಮ್ಮಿಂದೊಮ್ಮೆಗೆ ಮನಸ್ಸಾಗಲು ಸಾಧ್ಯವೇ ಇಲ್ಲ ಎಂದುಕೊಳ್ಳುತ್ತಾ ಇವನು ಯಾವಾಗ ಹೊರಬರುತ್ತಾನೆ ಎಂದು ಕಾಯುತ್ತಾ ನಿಂತ. ಎಷ್ಟೋ ಸಮಯ ಕಳೆದ ಮೇಲೆ ಮಕ್ಕಳೆಲ್ಲ ಗುಡಿಯ ಪ್ರಾಂಗಣದಿಂದ ಹೊರಬರುತ್ತಿರುವುದನ್ನು ಕಂಡ. ಚಾರ್ವಾಕನು ದೃಢ ಕಾಯದ, ತುಂಬು ಕೂದಲಿನ, ನಡುವಯಸ್ಸಿನ ವ್ಯಕ್ತಿಯೊಬ್ಬರ ಹತ್ತಿರ ಏನೋ ಉತ್ಸಾಹದಿಂದ ಮಾತಾಡುತ್ತಾ, ನಗುತ್ತಾ ನಿಧಾನಕ್ಕೆ ಬರುತ್ತಿದ್ದ. ಇವನಿಗೆ ನಾಟ್ಯವನ್ನು ಕಲಿಸುವ ಗುರುಗಳು ಅವರಿರಬೇಕೆಂದು ಭಾವಿಸಿದ ಅಭಿ ಕೂಡಲೇ ಸಭಾಂಗಣದಿಂದ ಹೊರಬಂದು ಚಾರ್ವಾಕನ ಮುಂದೆ ಪ್ರತ್ಯಕ್ಷನಾಗಿ ದೇಶಾವರಿ ನಗೆ ಬೀರಿದ. ಚಾರ್ವಾಕನಿಗೂ ಕಸಿವಿಸಿ. ಒಮ್ಮೆ ಗಂಟಲು ಒಣಗಿದಂತಾಯಿತು. ತಾನು ದೇವಸ್ಥಾನಕ್ಕೆ ದೇವರ ದರ್ಶನಕ್ಕೆ ಬಂದೆನೆಂದು ಸುಳ್ಳು ಹೇಳಲು ಚಡಪಡಿಸುತ್ತಿರುವ ಅಭಿಯನ್ನು ಗಮನಿಸಿದ ಚಾರ್ವಾಕ ಮನಸ್ಸಲ್ಲೇ ಏನೋ ಹೇಳತೊಡಗಿದ.

ಅಭಿ ಸ್ವಲ್ಪಮಟ್ಟಿಗೆ ವಿಚಲಿತನಾಗಿ ಸರಿಯಾಗಿ ಏನು ಕೇಳಬೇಕೆಂದು ತೋಚದೆ, ಚಾರ್ವಾಕ ನೀನೇನು ಇಲ್ಲಿ..? ಇದೆಲ್ಲ ಏನು? ಏನಾಗಿದೆ ನಿನಗೆ? ಇತ್ತೀಚಿಗೆ ಮಾತಿಗೇ ಸಿಗುತ್ತಿಲ್ಲ? ಎಂದು ಅವಸರ ಅವಸರವಾಗಿ ಒಂದೇ ಉಸುರಿಗೆ ಕೇಳಿಯೇ ಬಿಟ್ಟ. ಚಾರ್ವಾಕ ಅಭಿಯನ್ನು ಗುಡಿಯಲ್ಲಿ ನೋಡಿದ್ದು ಅನಿರೀಕ್ಷಿತ. ಅವನ ಪ್ರಶ್ನೆಗಳು ಮಾತ್ರ ಅವನಿಗೆ ಅನಿರೀಕ್ಷಿತ ಎನಿಸಲಿಲ್ಲ. ಆದರೆ ಅದು ಅನಪೇಕ್ಷಿತವಾಗಿತ್ತು. ಏನು ಉತ್ತರ ನೀಡಬೇಕೆಂದು ಗೊತ್ತಾಗದೇ ವನದುರ್ಗೆ ಮೂರ್ತಿಯ ಕಡೆಗೆ ಮುಖ ತಿರುಗಿಸಿ ಮೌನದ ಸಾಕಾರ ಮೂರ್ತಿಯಂತೆ       ನಿರ್ಲಿಪ್ತನಾಗಿ ನಿಂತುಬಿಟ್ಟ. ಅಭಿ, ಅವನು ಕಲ್ಲಾಗಿದ್ದಾನೆಯೇ ಅಥವಾ ಇದು ಕಲ್ಲು ಕರಗುವ ಸಮಯವೇ ಎಂದು ಗೊಂದಲಕ್ಕೊಳಗಾಗಿ ಮೊದಲ ಮಳೆಗೆ ಕಾಯುವ ಚಾತಕ ಪಕ್ಷಿಯಂತೆ ಅವನ ಹಿಂದೆ ಉತ್ತರಕ್ಕಾಗಿ ಕಾಯುತ್ತ ನಿಂತ. ಕೆಲವೊಮ್ಮೆ ತಾನು ಹೋಗುತ್ತಿರುವ ದಾರಿ ಮತ್ತು ಮಾಡುತ್ತಿರುವ ಕೆಲಸ ಸರಿಯೋ ತಪ್ಪೋ ಎಂದು ನಿರ್ಧಾರಕ್ಕೆ ಬರಲಾಗದೇ, ಇವುಗಳ ಬಗ್ಗೆ ಹೇಳಲು ಧೈರ್ಯ ಸಾಕಾಗದೇ, ನಾಚುವ, ಅಂಜುವ ಸ್ವಭಾವದ ಚಾರ್ವಾಕ ತನ್ನನ್ನು ವಿಚಾರಿಸುತ್ತಿರುವ ಪ್ರೀತಿಯ ಗೆಳೆಯನಿಗೆ ಉತ್ತರಿಸಲಾಗದೇ ಚಡಪಡಿಸುತ್ತಿದ್ದಾನೆ. ಅಲ್ಲಿಯವರೆಗೂ ನವಚೈತನ್ಯದಲ್ಲಿ ತುಂಬಿ ತುಳುಕಾಡುತ್ತಿದ್ದ ಆತ ಈಗ ಏನು ಮಾತಾಡಲಿ? ಯಾರಲ್ಲಿ ಮಾತಾಡಲಿ?, ನನ್ನ ಬೆನ್ನು ಹತ್ತಿ ಬಂದು ಪ್ರಶ್ನಿಸುತ್ತಿರುವ ಇವನಲ್ಲೇ ಅಥವಾ ಲೋಕದ ಜನರಲ್ಲಿ ತಾನು ಕಾಯುವವಳು ಎಂದು ನಂಬಿಕೆ ಹುಟ್ಟಿಸಿ ಇಲ್ಲೇ ಕಲ್ಲಾಗಿ ನೆಲೆ ನಿಂತಿರುವ ಈ ಜಡ ಮೂರ್ತಿಯಲ್ಲೇ? ಎಂದು ಚಿಂತಿಸುತ್ತಾ ತನ್ನಲ್ಲೇ ಮಾತಾಡಲು ತೊಡಗಿದ.

(ಮುಂದುವರಿಯುವುದು)

**********




No comments:

Post a Comment

ಎತ್ತಿತೋರಿಸಲಾದ ಪೋಸ್ಟ್

ಅನ್ನಮ್ಮ’ಳಿಗೆ ೨೫೦ರ ಹಾಗೂ ಅತಿ.ವಂ.ಪೊತ್ತಕಮೂರಿಗೆ ೫೦ರ ಸ್ಮರಣೆಯ ಸಂಭ್ರಮ

ಬೆಂಗಳೂರಿನ ಉತ್ತರಹಳ್ಳಿಯ ಅನ್ನಮ್ಮನ ಬೆಟ್ಟ, ಅಲ್ಲಿನ ಅನ್ನಮ್ಮಳ ಸಮಾಧಿ, ಆ ಬೆಟ್ಟದ ಮೇಲಿನ ಶಿಲುಬೆ, ಅಲ್ಲಿ ಪ್ರತಿವರ್ಷ ತಪಸ್ಸು ಕಾಲದ ಐದನೇ ಭಾನುವಾರ ನಡೆಯುವ ಯೇಸು...