ಈ ನಂಬಿಕೆಯೇನೂ ಇದ್ದಕಿದ್ದ ಹಾಗೇ ಹಠಾತ್ತನೆ ಜಗದ್ಗುರುಗಳಿಗೆ ಹೊಳೆದುದಲ್ಲ; ಬದಲಿಗೆ ಆದಿ ಧರ್ಮಸಭೆಯಿಂದಲೂ ಕ್ರೈಸ್ತರ ವಿಶ್ವಾಸಕ್ಕೆ ಪುಷ್ಟಿ ನೀಡುತ್ತಿದ್ದು, ಈಗಾಗಲೇ ಪ್ರಚಲಿತದಲ್ಲಿದ್ದ ಒಂದು ನಂಬಿಕೆ. ಇದನ್ನೇ ಜಗದ್ಗುರುಗಳು, ಹಲವು ಧರ್ಮಾಧ್ಯಕ್ಷರು, ದೈವಶಾಸ್ತ್ರಜ್ಞರು ಮತ್ತು ಸಾಮಾನ್ಯ ಕ್ರೈಸ್ತ ಪ್ರಜೆಗಳೊಂದಿಗೆ ಸಂಪರ್ಕಿಸಿ ನೈಜ ಘಟನೆಯಾಗಿ ಘೋಷಿಸಿ, ಆಚರಣೆಗೆ ಒಳಪಡಿಸಿದರು.
ಮಾತೆ ಮರಿಯಳ ಸ್ವರ್ಗಾರೋಹಣದ ಬಗ್ಗೆ ಹೊಸ ಒಡಂಬಡಿಕೆ ಸ್ವಷ್ಟವಾಗಿ ಹೇಳದಿದ್ದರೂ, ಆದಿ ಧರ್ಮಸಭೆಯಿಂದಲೂ ಕ್ರೈಸ್ತರ ಸಂಪ್ರದಾಯದಲ್ಲಿ ಈ ವಿಶ್ವಾಸ ಹಾಸುಹೊಕ್ಕಾಗಿದ್ದ ಕಾರಣ ಮತ್ತು ದೈವಶಾಸ್ತ್ರದ ತರ್ಕಾಧಾರಗಳಿಂದ, ಈ ಸತ್ಯದ ಬಗ್ಗೆ ಪವಿತ್ರ ಗ್ರಂಥದಲ್ಲಿ ಕೆಲವು ಅವ್ಯಕ್ತ ಉಲ್ಲೇಖಗಳು ಇರುವುದನ್ನು ನಾವು ಕಾಣಬಹುದು.
ಆದಿಕಾಂಡದಲ್ಲಿ ಒಬ್ಬ ಮಹಿಳೆಯ ಮೂಲಕ ರಕ್ಷಕರ ಆಗಮನದ ಮುನ್ಸೂಚನೆ (ಆದಿಕಾಂಡ ೩:೧೫); ಹೊಸ ಒಡಂಬಡಿಕೆಯಲ್ಲಿ ರಕ್ಷಕರ ತಾಯಿಯಾಗುವ ಸೌಭಾಗ್ಯ ಕೃಪಾಪೂರ್ಣೆಯಾದ ಮರಿಯಳಿಗೆ ದೊರೆತದ್ದು; - ಈ ಉದಾಹರಣೆಗಳು, ಮರಿಯ ದೇವರ ವರದಾನದಿಂದ ಅವಿನಾಶಿಯಾಗಿದ್ದರಿಂದಲೇ ರಕ್ಷಕನನ್ನು ಈ ಭುವಿಗೆ ತರಲು ಪರಿಪೂರ್ಣ ಮಹಿಳೆಯೆನಿಸಿದ್ದು ಎಂಬುದನ್ನು ಸ್ಪಷ್ಟಪಡಿಸುತ್ತವೆ.
ಪವಿತ್ರ ಗ್ರಂಥದ ಈ ಸೂಚ್ಯಗಳ ಜೊತೆಗೆ ಆದಿ ಧರ್ಮಸಭೆಯಲ್ಲಿ ಪ್ರಚಲಿತದಲ್ಲಿದ್ದ ಕೆಲವು ಕಥೆಗಳು ಕುತೂಹಲಕಾರಿಯಾಗಿದ್ದು, ಕೆಲವೊಂದು ಈ ಸತ್ಯಕ್ಕೆ ಪುಷ್ಟಿ ನೀಡುವಂತಿವೆ. ಮಾತೆ ಮರಿಯಳು ತನ್ನ ಕೊನೆಯುಸಿರೆಳೆದ ಕ್ಷಣದಲ್ಲಿ ಸಂತ ತೋಮಾಸರು ಜೆರುಸಲೇಮಿನಿಂದ ದೂರವಿದ್ದು, ತಾಯಿ ಮರಿಯಳ ನಿಧನದ ವಿಷಯ ತಿಳಿದು ತಾವು ಬರುವುದರೊಳಗಾಗಲೇ ಆಕೆಯ ದೇಹವನ್ನು ಸಮಾಧಿ ಮಾಡಲ್ಪಟ್ಟಿದ್ದನ್ನು ಕಂಡು, ಅತೀವ ದುಃಖದಿಂದ ಅವರ ಅಂತಿಮ ದರ್ಶನ ಪಡೆಯಲೇಬೇಕೆಂದು ಒತ್ತಾಯ ಮಾಡಿದ್ದರಿಂದ, ಬೇರೆ ದಾರಿ ಕಾಣದೆ ಇದಕ್ಕೆ ಮಣಿದು ಸಮ್ಮತಿಸಿದ ಶಿಷ್ಯ ಸಮೂಹ ಸಮಾಧಿಯನ್ನು ತರೆಯಲಾಗಿ ಕಂಡದ್ದು ಅದ್ಭುತ ಘಟನೆಯೊಂದನ್ನು ಬರಿದಾಗಿದ್ದ ಸಮಾಧಿ! ಇದೊಂದು ಕಥೆಯಷ್ಟೇ! ಆದರೆ ಇಂತಹ ಕಥೆಗಳ ಹಿಂದಿರುವ ಸತ್ಯ ದೇವಸುತನಾದ ಯೇಸುವಿಗೆ ಜನ್ಮ ನೀಡಿದ ಮಾತೆ ಮರಿಯಳ ದೇಹವನ್ನು ದೇವರು ಮಣ್ಣು ಪಾಲಾಗಲು ಬಿಡಲಿಲ್ಲ ಎಂಬುದಾಗಿ.
ಐದನೇ ಶತಮಾನದಲ್ಲಿ, ಬೈಜಂಟೈನ್ ಸಾಮ್ರಾಜ್ಯದಲ್ಲಿ ಉದ್ಭವವಾದ ಈ ಸ್ಮರಣೆ, ಮೊದಲಿಗೆ ಮರಿಯಳ ನಿದ್ರಾವಸ್ಥೆ (ಡೊರ್ಮಿಶನ್/ಫಾಲಿಂಗ್ ಅಸ್ಲೀಪ್)ಎಂದು ಕರೆಯಲ್ಪಡುತ್ತಿದ್ದು ಪಾಶ್ಚಾತ್ಯ ಧರ್ಮಸಭೆಯಲ್ಲಿ ಮರಿಯಳ ಸ್ವರ್ಗಾರೋಹಣ ಎಂದು ಬದಲಾಯಿತು.
೭೪೯ರಲ್ಲಿ ಸಂತ ಜಾನ್ ಡಮಾಸಿನ್, ಮರಿಯಳ ಸ್ವರ್ಗಾರೋಹಣವನ್ನು ಕ್ರೈಸ್ತ ಸಂಪ್ರದಾಯದ ಭಾಗವಾಗಿಸಿದ್ದರು ಎಂದು ತಿಳಿದುಬಂದಿದೆ. ಜಗದ್ಗುರು ೩ನೇ ಅಲೆಕ್ಸಾಂಡರ್ (೧೧೫೯-೧೧೮೧), ತಮ್ಮ ಬರಹದಲ್ಲಿ ದೇವರು ದೂತನ ಮೂಲಕ ಮರಿಯಳನ್ನು ಕೃಪಾಪೂರ್ಣೆಯೇ ಎಂದಂತೆ, ಮರಿಯ ತನ್ನ ಕನ್ಯಾವಸ್ಥೆಗೆ ಹಾನಿಯಾಗದಂತೆ ಗರ್ಭಧರಿಸಿದಳು, ವೇದನೆಯಿಲ್ಲದೆ ತನ್ನ ಮಗನನ್ನು ಹಡೆದಳು, ಅವಿನಾಶಿಯಾಗಿ ಈ ಭೂಮಿಯಿಂದ ಕಣ್ಮರೆಯಾದಳು. ಇಲ್ಲಿ ಆಕೆಗೆ ದೊರೆತ ಕೃಪೆ ಪರಿಪೂರ್ಣವಾಗಿತ್ತೇ ಹೊರತು ಅದರಲ್ಲಿ ಯಾವ ಕೊರತೆಯಿರಲಿಲ್ಲ ಎಂದು ಅರ್ಥೈಸಿರುವುದೂ ಸಹ ಇಂದಿನ ಆಚರಣೆಯ ಕಾರಣಕ್ಕೆ ಪೂರಕವಾಗಿದೆ.
೧೫೬೮ರಲ್ಲಿ ಜಗದ್ಗುರು ೫ನೇ ಭಕ್ತಿನಾಥರು, ಮರಿಯಳ ಸ್ವರ್ಗಾರೋಹಣದ ಈ ಹಬ್ಬವನ್ನು ಕೈಸ್ತ ಧರ್ಮಸಭೆಯಾದ್ಯಂತ ಪವಿತ್ರ ದಿನವನ್ನಾಗಿ ಆಚರಿಸಲು ಕರೆನೀಡಿದ್ದರು.
ಈ ಎಲ್ಲ ಬೆಳವಣಿಗೆಗಳಲ್ಲಿ ನಿಖರವಾಗಿ ಗೋಚರಿಸುವ ಸತ್ಯ,- ಕ್ರೈಸ್ತರು ಮಾತೆ ಮರಿಯಳ ಪರಿಶುದ್ಧತೆಯಲ್ಲಿ ನಂಬಿಕೆ ಇಟ್ಟಿದ್ದರು ಎಂಬುದಾಗಿ. ಮರಿಯ ದೇವರ ತಾಯಿ, ಮನುಕುಲಕ್ಕೆ ರಕ್ಷಕರನ್ನು ಕೊಟ್ಟ ಪುಣ್ಯವತಿ, ರಕ್ಷಣಾ ರಹಸ್ಯದಲ್ಲಿ ತನ್ನ ಪುತ್ರನ ನಂತರ ಮಹತ್ತರ ಪಾತ್ರ ವಹಿಸಿದ ಸಾಧ್ವಿ, ಜೀವ, ಮಾರ್ಗ, ಸತ್ಯವೂ ಆದ ಯೇಸು ನಾನಿರುವಲ್ಲಿಯೇ ನನ್ನ ಸೇವಕನೂ ಇರುತ್ತಾನೆ (ಯೊವಾನ್ನ ೧೨:೨೬), ಎಂದು ನುಡಿದಂತೆ, ತನ್ನ ಸ್ವಂತ ತಾಯಿ ತನ್ನ ದೇಹಾತ್ಮಗಳೊಂದಿಗೆ ತನ್ನ ಮಗನನ್ನು ಸೇರುವ ಸೌಭಾಗ್ಯವನ್ನು ಕರುಣಿಸಲಾರನೇ? ಹೀಗೆ ಈ ಎಲ್ಲಾ ಭಾವನೆಗಳ ಪರಿಣಾಮವಾಗಿ, ಜಗದ್ಗುರು ೧೨ನೇ ಭಕ್ತಿನಾಥರು, ಈಗಾಗಲೇ ಪ್ರಚಲಿತದಲ್ಲಿದ್ದ ಆಚರಣೆಯನ್ನು, ತಮ್ಮ ವಿಶ್ವಪರಿಪತ್ರ ಮುನಿಫಿಚೆಂತಿಸ್ಸಿಮುಸ್ ದೇಯುಸ್ನಲ್ಲಿ ಅಧಿಕೃತವಾಗಿ ಸಮ್ಮತಿಸಿ, ಆಗಸ್ಟ್ ೧೫ರಂದು ಈ ಸ್ಮರಣೆಯನ್ನು ಹಬ್ಬವಾಗಿ ಆಚರಿಸಲು ಚಾಲನೆ ನೀಡಿದರು.
ಭಾರತೀಯ ಕಥೋಲಿಕರಿಗೆ ತಾಯಿ ಮರಿಯಳ ಸ್ವರ್ಗಾರೋಹಣವಾದ ಸ್ಮರಣೆ ಮತ್ತು ತಾಯ್ನಾಡಿನ ೭೩ನೇ ವರ್ಷದ ಸ್ವಾತಂತ್ರ್ಯದ ಸ್ಮರಣೆಯ ಅವಳಿ ಹಬ್ಬ. ಎರಡೂ ಹಬ್ಬಗಳು ಸ್ವಾತಂತ್ರ್ಯವನ್ನು ಸೂಚಿಸುತ್ತವೆ. ಒಂದು ಬಾಹ್ಯ ಹೋರಾಟದ ಫಲವಾಗಿ ಪರಕೀಯರ ದಾಸ್ಯದಿಂದ ದೊರೆತ ಮುಕ್ತಿಯ ಸ್ವಾತಂತ್ರ್ಯವಾದರೆ; ಇನ್ನೊಂದು, ಉತ್ಕೃಷ್ಟ ಜೀವನವನ್ನು ಬಾಳಿದ್ದಲ್ಲಿ ಪಾಪದ ಬಂಧನದಿಂದ ದೊರೆಯಬಹುದಾದ ಆತ್ಮಿಕ ಸ್ವಾತಂತ್ರ್ಯ. ಆದರೆ, ಸ್ವಾತಂತ್ರ್ಯ ಬಂದು ೭೩ ವರ್ಷಗಳು ಕಳೆದಿದ್ದರೂ, ಅಸಮಾನತೆ, ಬಡತನ, ನಿರುದ್ಯೋಗ, ಅನಭಿವೃದ್ಧಿ, ಅನಕ್ಷರತೆಯ ಸಮಸ್ಯೆಗಳು ಇನ್ನೂ ನಿವಾರಣೆಯಾಗದ ನಮ್ಮ ದೇಶದ ಕುಂಠಿತ ಬೆಳವಣಿಗೆಯನ್ನು ಕಂಡು, ನಾವು ನಿರಾಶಾವಾದಿಗಳಾಗುವುದು ಇದ್ದದ್ದೇ, ನಿಜವಾದ ಸ್ವಾತಂತ್ರ್ಯ ಎಂದರೇನು ಎಂಬ ಪ್ರಶ್ನೆ ಮೂಡುವುದೂ ಸಹಜವೇ. ಮಾತೆ ಮರಿಯಳನ್ನು ಕಂಡಾಗ ನಮ್ಮ ಈ ಪ್ರಶ್ನೆಗೆ ಖಂಡಿತ ಉತ್ತರ ದೊರೆಯಬಹುದು. ಮಂಗಳವಾರ್ತೆಯಿಂದ ಸ್ವರ್ಗಾರೋಹಣದವರೆಗಿನ ಕಾಲಘಟ್ಟದವರೆಗೆ ದೇವರ ಚಿತ್ತದಲ್ಲಿ ತಮ್ಮ ಚಿತ್ತವನ್ನು ಕಂಡುಕೊಂಡಿದ್ದನ್ನೇ ಆಕೆ ನೈಜ ಸ್ವಾತಂತ್ರ್ಯವೆಂಬುದಾಗಿ ಬಿಂಬಿಸುತ್ತಾಳೆ. ಸ್ವಾತಂತ್ರ್ಯ, ನನ್ನ ಜನ್ಮಸಿದ್ಧ ಹಕ್ಕು ಅದನ್ನು ಪಡೆದೇ ತೀರುವೇ ಎನ್ನುವುದು-ಸ್ವಾತಂತ್ರ್ಯ ಹೋರಾಟಗಾರ ತಿಲಕರ ಮಾತಾದರೆ, ಸ್ವಾತಂತ್ರ್ಯ, ದೇವರ ಅತ್ಯಂತ ಶ್ರೇಷ್ಠ ಕೊಡುಗೆ, ಅದನ್ನು ಪರರ ಪ್ರೀತಿ ಮತ್ತು ಸೇವೆಗಾಗಿ ನಾನು ಸದುಪಯೋಗಿಸುವೆ ಎನ್ನುವುದು ಮಾತೆ ಮರಿಯಳ ಬದುಕಿನಿಂದ ಕಲಿಯಬಹುದಾದ ಪಾಠವಾಗಿದೆ.
ಮಾತೆ ಮರಿಯಳಂತೆ ನಮ್ಮ ಬದುಕು ಭಗವಂತನ ಶ್ರೀಮಂತ ಕೊಡುಗೆಯೆಂದರಿತು ಪರರ ಸಂಕಷ್ಟಗಳಲ್ಲಿ ಒಂದಾಗೋಣ. ಅನ್ಯೋನತೆ ಸೃಷ್ಟಿಸಲು ಮುಂದಾಗೋಣ, ನಮ್ಮನ್ನು ಸಂಬಂಧಗಳಿಂದ ಬೇರ್ಪಡಿಸುವ ಗೋಡೆಗಳನ್ನು ಕೆಡವಿ ಪ್ರೀತಿ, ವಿಶ್ವಾಸ, ಸ್ನೇಹ ಸೌಹಾರ್ದದ ಬಾಳನ್ನು ಕಟ್ಟಿಕೊಳ್ಳೋಣ. ಆಗ ತಾನೇ ಹೃದಯ ಮನಸ್ಸುಗಳು ತಣ್ಣಗಿರಲು ಸಾಧ್ಯ, ಮುಗುಳುನಗೆಯೊಂದು ನಮ್ಮ ಮನದುಂಬಿ ಮಂದಹಾಸವಾಗಲು ಸಾಧ್ಯ. ನಮ್ಮ ಸಹಕಾರದೊಂದಿಗೆ ಬೇರೆಯವರೂ ತಮ್ಮ ಕೊರತೆಗಳಲ್ಲಿ ನಿರಾಳತೆಯನ್ನು ಅನುಭವಿಸಲು ಸಾಧ್ಯ. ಅದುವೆ ಸ್ವಾತ್ಮಂತ್ರ್ಯ, ನಿಜವಾದ ಸ್ವಾತಂತ್ರ್ಯ, ಅಡೆತಡೆಗಳಿಲ್ಲದ ಸ್ವಾತಂತ್ರ್ಯ.
ನಾಡಿನ ಸ್ವಾತಂತ್ರ್ಯದ ಸ್ಮರಣೆಯಲ್ಲಿ, ಎಲ್ಲರಿಗೂ ಬೇಕಾದ ಸಾಮಾಜಿಕ ಸ್ವಾತಂತ್ರ್ಯ, ಧಾರ್ಮಿಕ ಸ್ವಾತಂತ್ರ್ಯ, ಮಾನಸಿಕ ಸ್ವಾತಂತ್ರ್ಯಗಳನ್ನು ಗಳಿಸುವತ್ತ ಕಾರ್ಯಪ್ರವೃತ್ತರಾಗಲು ಸ್ವರ್ಗಾರೋಹಣ ಮಾತೆಯಲ್ಲಿ ಪ್ರಾರ್ಥಿಸೋಣ.
**********
No comments:
Post a Comment