ಎಲ್ ಸಾಲ್ವಡಾರ್ ಮಧ್ಯಪ್ರಾಚ್ಯ ಅಮೆರಿಕಾ ಭಾಗದ ಒಂದು ದೇಶ.
ಇಂದಿಗೂ ಕಿತ್ತು ತಿನ್ನುವ ಬಡತನ, ಅಸಮಾನತೆ ಹಾಗೂ ಅಪರಾಧ- ಕ್ರೌರ್ಯಗಳಿಂದ ಬಳಲುತ್ತಿರುವ ಈ ದೇಶ ೧೯ ಹಾಗು ೨೦ನೇ ಶತಮಾನದ ಉದ್ದಕ್ಕೂ ರಾಜಕೀಯ ಹಾಗೂ ಸಾಮಾಜಿಕ ಅತಂತ್ರ ಸ್ಥಿತಿಯಲ್ಲೇ ಬಳಲುತ್ತಲೇ ನಲುಗಿದ ದೇಶ. ಇದರ ಉಚ್ಛ್ರಾಯ ಸ್ಥಿತಿ ತಲುಪಿದ್ದು ೧೯೭೯ರಿಂದ ೧೯೯೨ರ ತನಕ ನಡೆದ ಆಂತರಿಕ ಯುದ್ಧದ ಸಮಯದಲ್ಲಿ. ಆ ಸಮಯದಲ್ಲಿ ದೇಶವನ್ನು ಆಳುತ್ತಿದ್ದ ಸೇನಾಡಳಿತಕ್ಕೂ, ಅದರ ವಿರುದ್ಧ ದಂಗೆ ಎದ್ದ ದಂಗೆಕೋರ ಗುಂಪಿನಿಂದ ಸದಾ ಕಲಹದ ಸ್ಥಿತಿಯೇ. ಲೂಟಿ, ಕೊಲೆ, ಮಾರಣಹೋಮಗಳಿಂದ ಬೆಂದು ನಲುಗಿ ಹೋದ ಸ್ಥಿತಿಯಲ್ಲಿ ಅಲ್ಲಿನ ಕ್ರೈಸ್ತಧರ್ಮಸಭೆ ತನ್ನ ಸ್ಪಷ್ಟ ನಿಲುವುಗಳನ್ನು ತಿಳಿಸಲು ಹಿಂಜರಿಯುತ್ತಿತ್ತು. ದೇಶವನ್ನು ಆಳುತ್ತಿದ್ದ ಸೈನ್ಯಸರ್ಕಾರ ಹಾಗೂ ಅದರ ಬೆಂಬಲಕ್ಕೆ ನಿಂತ ಶ್ರೀಮಂತರ ಪಡೆ ಒಂದು ಕಡೆಯಾದರೆ, ಸರ್ಕಾರವನ್ನು ಹಿಂಸಾತ್ಮಕವಾದ ಮಾರ್ಗದಿಂದಲೇ ಎದುರಿಸಲು ನಿಂತ ಎಡಪಂಥೀಯ ದಂಗೆಕೋರರು ಇನ್ನೊಂದೆಡೆ. ಇವೆರಡರ ನಡುವೆ ಬಳಲುವ ಶಾಂತಿಪ್ರಿಯ, ಬಡ ಸಾಮಾನ್ಯ ಜನ.
ಕುರುಬನಿಲ್ಲದ ಕುರಿಗಳಂತಿಹ ಜನರ ನಡುವೆ ತನ್ನ ನಿಲುವು ಹೇಳಿಕೊಳ್ಳಲಾಗದೆ ವ್ಯಾಟಿಕನ್ನಿಗೆ ಬದ್ಧವಾದ ಯಾಜಕವರ್ಗ. ಈ ಯಾಜಕರಲ್ಲೂ ಕೆಲವರು ಸರ್ಕಾರದ ಪರ. ಈ ಎಲ್ಲಾ ಗೊಂದಲಗಳ ನಡುವೆ ತಟಸ್ಥವಾಗಿ ನಿಂತ ಆಸ್ಕರ್ ರೊಮೇರೊ ಎಂಬ ಪಾದ್ರಿ ಗಲಭೆಪೀಡಿತ ಸ್ಯಾನ್ ಸಾಲ್ವಡೊರ್ ನಗರಕ್ಕೆ ಧರ್ಮಾಧ್ಯಕ್ಷರಾಗಿ ಆಯ್ಕೆಯಾಗುತ್ತಾರೆ. ನಂತರ ಜನಪರ ಕಾಳಜಿಯಿಂದ ಸರ್ಕಾರದ ವಿರುದ್ಧವಾಗಿ ನಿಂತು ಇಡೀ ವಿಶ್ವದ ಗಮನ ಸೆಳೆದು ನಂತರ ಅದೇ ಕಾರಣಕ್ಕೆ ಪ್ರಾಣಬಿಟ್ಟ ರೊಮೇರೊರವರ ಜೆ.ಬಿ. ಕ್ಯಾಸ್ತಲಿನೋರವರು ಅನುವಾದಿಸಿರುವ ಕೆಲವೊಂದು ಮಾತುಗಳು...
ಲೋಕದಲ್ಲಿ ತಲ್ಲಣವನ್ನು ಉಂಟು ಮಾಡದೆ ದೇವರ ವಾಕ್ಯದ ಸೇವೆ ಮಾಡುವುದು ಸುಲಭ. ಇಲ್ಲಿ ದೇವರ ವಾಕ್ಯದ ಬೋಧನೆಯು ತೀರಾ ಅಮೂರ್ತವಾಗಿರುತ್ತದೆ. ಈ ಬೋಧನೆಯು ಮಾನವ ಚರಿತ್ರೆಗೆ ಯಾವುದೇ ಬದ್ಧತೆ ಪ್ರದರ್ಶಿಸುವುದಿಲ್ಲ. ಇದು ವಿಶ್ವದೆಲ್ಲೆಡೆ ಸಲ್ಲುವ ಬೋಧನೆಯಾಗಿರುತ್ತದೆ. ಈ ಬೋಧನೆಯು ಯಾವುದೇ ಸಮಸ್ಯೆಯನ್ನು ಉಂಟು ಮಾಡುವುದಿಲ್ಲ, ಯಾವುದೇ ಸಂಘರ್ಷವನ್ನು ಹುಟ್ಟುಹಾಕುವ ಬೋಧನೆ ಯಾವುದು? ಹಿಂಸೆಯನ್ನು ಆಹ್ವಾನಿಸುವ ಬೋಧನೆ ಯಾವುದು? ನೈಜ ಧರ್ಮಸಭೆಯನ್ನು ಕಟ್ಟುವ ದೇವರ ವಾಕ್ಯದ ಬೋಧನೆ ಯಾವುದು? ಅದು ಪ್ರವಾದಿಗಳ ಬೋಧನೆಯಂತಿರುವ ಉರಿಜ್ವಾಲೆಯನ್ನು ಹೊತ್ತಿಸುವ ಬೋಧನೆ. ಅಂತಹ ದೇವರ ವಾಕ್ಯದ ಬೋಧನೆಯು ಸಾರುತ್ತದೆ ಹಾಗೂ ಆಪಾದಿಸುತ್ತದೆ. ಆ ಬೋಧನೆಯು ಜನತೆಗೆ ದೇವರ ಮಹತ್ಕಾರ್ಯಗಳನ್ನು ಸಾರುತ್ತದೆ ಹಾಗೂ ಅವುಗಳನ್ನು ಅವರು ವಿಶ್ವಾಸಿಸುವಂತೆ ಮತ್ತು ಗೌರವಿಸುವಂತೆ ಪ್ರೇರೇಪಿಸುತ್ತದೆ. ಆ ಬೋಧನೆಯು ದೇವರ ರಾಜ್ಯಭಾರವನ್ನು ವಿರೋಧಿಸುವವರ ಪಾಪಗಳನ್ನು ಖಂಡಿಸುತ್ತದೆ.. ಮಾತ್ರವಲ್ಲದೆ ಅವರ ಹೃದಯಗಳಿಂದ, ಅವರ ಸಮಾಜದಿಂದ, ಅವರ ಕಾನೂನುಗಳಿಂದ, ಶೋಷಿಸುವ, ಕಾರಣ ಇಲ್ಲದೆ ಬಂಧಿಸುವ, ದೈವಿಕ ಮತ್ತು ಮಾನವ ಹಕ್ಕುಗಳನ್ನು ಧಮನಿಸುವ ಅವರ ಸಂಸ್ಥೆಗಳಿಂದ, ಪಾಪವು ತೊಲಗುವಂತೆ ನೋಡಿಕೊಳ್ಳುತ್ತದೆ. ಈ ಪರಿ ದೇವರ ವಾಕ್ಯದ ಸೇವೆ ಮಾಡುವುದು ಕಷ್ಟಕರ. ಆದರೆ ಇಲ್ಲಿ ದೇವರಾತ್ಮರು ಪ್ರವಾದಿಯೊಂದಿಗೆ ಹಾಗೂ ಬೋಧಕರೊಂದಿಗೆ ಇರುತ್ತಾರೆ. ಏಕೆಂದರೆ ಅವರೇ ದೇವರ ರಾಜ್ಯವನ್ನು ಸಮಸ್ತ ಜನತೆಗೆ ಸದಾ ಕಾಲಕ್ಕೂ ಸಾರುವ ಪ್ರಭು ಯೇಸುಕ್ರಿಸ್ತ. (ಆಸ್ಕರ್ ರೋಮೇರೊ, ದ ವಯಲೆನ್ಸ್ ಆಫ್ ಲವ್, ಪುಟ ೧೮)
No comments:
Post a Comment