===================
ಹಿಂದಿನ ಸಂಚಿಕೆಯಲ್ಲಿ ಕನ್ನಡ ಸಾಹಿತ್ಯಕ್ಕೆ ಕ್ರೈಸ್ತ ಸಾಹಿತಿಗಳ ಕೊಡುಗೆಗಳು ಎಂಬ ವಿಷಯದಡಿಯಲ್ಲಿ ಸ್ವಾತಂತ್ರ್ಯೋತ್ತರದ ಪ್ರಮುಖ ಕನ್ನಡ ಕ್ರೈಸ್ತ ಸಾಹಿತಿಯಾದ ರೆವರೆಂಡ್ ಫಾದರ್ ಐ. ಅಂತಪ್ಪರವರ ಸಾಹಿತ್ಯಿಕ ವಿಚಾರಗಳ ಬಗ್ಗೆ ವಿವೇಚಿಸಿದ್ದೇವೆ. ಈ ಪ್ರಸ್ತುತ ಸಂಚಿಕೆಯಲ್ಲಿ ಮತ್ತೋರ್ವ ಕನ್ನಡ ಸಾಹಿತಿ ಎ.ಎಂ ಜೋಸೆಫ್‌ರವರನ್ನು ಪರಿಚಯಿಸುವ ಪುಟ್ಟ ಪ್ರಯತ್ನ ಮಾಡಿರುತ್ತೇನೆ.
===================
ಸಾಹಿತ್ಯ ಸಾಧಕ ಎ.ಎಂ ಜೋಸೆಫ್:
ಎ.ಎಂ.ಜೋಸೆಫ್‌ರವರು ೧೯ನೇ ಶತಮಾನದಲ್ಲಿ ಬದುಕಿದ್ದ ಒಬ್ಬ ಹಿರಿಯ ಕ್ರೈಸ್ತ ಸಾಹಿತಿಗಳಲ್ಲಿ ಒಬ್ಬರು. ಕನ್ನಡದಲ್ಲಿ ಮಾತಾನಾಡಲು ಬೆಚ್ಚಿಬೀಳುತ್ತಿದ್ದಂತಹ ಸಮಯದಲ್ಲಿ ಅಂಜದೆ ಅಳುಕದೆ ಕನ್ನಡ ಕ್ರೈಸ್ತ ಸಾಹಿತ್ಯವನ್ನು ಬೆಳೆಸಲು ಮುಂದಾದವರು. ದಿವಂಗತ ಶ್ರೀ. ಎಂ. ಜೋಸೆಫರ ಪೂರ್ವಜರು ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲ್ಲೂಕಿನ ನುಗ್ಗೆಹಳ್ಳಿಯವರು. ಜಾತಿಯಲ್ಲಿ ಬ್ರಾಹ್ಮಣರು ವೃತ್ತಿಯಲ್ಲಿ ಶ್ಯಾನುಭೋಗರು. ಆ ಕಾಲದಲ್ಲಿ ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ನುಗ್ಗೆಹಳ್ಳಿಯ ಬಳಿ ಇರುವ ಮೂಡಲ ದಾಸಾಪುರದಲ್ಲಿ ಕ್ರೈಸ್ತ ಮಕ್ಕಳಿಗೆ ಶಾಲೆಯೊಂದನ್ನು ತೆರೆಯಲಾಯಿತು. ಶಾಲೆಗೆ ಉಪಾಧ್ಯಾಯರೊಬ್ಬರು ಬೇಕೆಂದು ಹುಡುಕಾಡಿ, ನುಗ್ಗೇಹಳ್ಳಿಯ ಶಾನುಭೋಗರಾಗಿದ್ದ ತಮ್ಮಯ್ಯ ಎಂಬ ಬ್ರಾಹ್ಮಣರ ಮಗ, ೧೨ ವರ್ಷದ ಕೃಷ್ಣಪ್ಪರನ್ನು ಮಕ್ಕಳಿಗೆ ಪಾಠ ಹೇಳಿಕೊಡಲು ನೇಮಿಸಿದರು. ಕೃಷ್ಣಪ್ಪ ಹಿಂದೂ ಧರ್ಮದವನೆಂದು ಊರಿನ ಕ್ರೈಸ್ತರು ಸ್ವಲ್ಪ ಹಿಂದೇಟು ಹಾಕಿದರೂ, ಮಕ್ಕಳಿಗೆ ಧರ್ಮೋಪದೇಶ ಕಲಿಸಲೇಬೇಕೆಂದು ಕಡ್ಡಾಯ ಮಾಡಿದರು. ಆ ಯುವಕ ಒಪ್ಪಿಕೊಂಡು ಕ್ರೈಸ್ತ ಸಂಬಂಧಿ ವಿಚಾರಗಳನ್ನು ತಿಳಿದುಕೊಳ್ಳುವ ಸಲುವಾಗಿ ಕ್ರೈಸ್ತಧರ್ಮ ಕುರಿತ ಅನೇಕ ಕೃತಿಗಳನ್ನು ಓದಿದನು. ಶುಭಸಂದೇಶಕ್ಕೆ ಮನಸೋತು ಕ್ರೈಸ್ತನಾಗಲು ನಿರ್ಧರಿಸಿದನು. ತಂದೆ-ತಾಯಿಯರಿಗೆ ಹೇಳದೆ ಕೇಳದೆ ಆತ ಒಂದು ದಿನ ಮನೆ ಬಿಟ್ಟು ಬೆಂಗಳೂರಿಗೆ ಬಂದ. ಅಲ್ಲಿ ದಾಸಾಪುರದವರೇ ಆದ ಫಾದರ್ ಶಾಂತಪ್ಪರವರಿಂದ ಜ್ಞಾನಸ್ನಾನ ಪಡೆದು ಚೌರಣ್ಣ ಎಂದು ಕರೆದುಕೊಂಡ. ಫಾ.ಶಾಂತಪ್ಪರವರ ಸಹಾಯದಿಂದ ಗುರುಮಠದಲ್ಲಿ ಕಲಿತು, ಹಾಸನ ಜಿಲ್ಲೆಯ ಶೆಟ್ಟಿಹಳ್ಳಿ ಶಾಲೆಯಲ್ಲಿ ಮುಖ್ಯೋಪಧ್ಯಾಯನಾಗಿ ಕೆಲಸ ಮಾಡಿದ. ಆತ ಬೆಂಗಳೂರಿನ ಗುಡ್‌ಷಫರ್ಡ್ ಶಾಲೆಯ ಅನಾಥ ಹುಡುಗಿಯೊಡನೆ (ಬ್ರಾಹ್ಮಣ ಜಾತಿಯಿಂದ ಕ್ರೈಸ್ತಳಾದ) ಮದುವೆಯಾಯಿತು.
ಈ ಕೃಷ್ಣಪ್ಪ ಬೇರೆ ಯಾರು ಅಲ್ಲ ಸಾಹಿತ್ಯ ಸಾಧಕ ಜೋಸೆಫರ ತಂದೆ. ೧೮೭೬-೭೮ರಲ್ಲಿ ಕರ್ನಾಟಕದಾದ್ಯಂತ ಬರಗಾಲ ವ್ಯಾಪಿಸಿತ್ತು. ಈ ಬರಗಾಲದ ಬಾಯಿಗೆ ಸಿಕ್ಕಿದವರು ಸಾವಿರಾರು, ಈ ಸಾವಿರಾರು ಕುಟುಂಬಗಳಲ್ಲಿ ಕೃಷ್ಣಪ್ಪರದು ಒಂದು. ಅಂದಿನ ಪರಿಸ್ಥಿತಿಗೆ ಸಿಲುಕಿ ತಮ್ಮ ಮಕ್ಕಳೊಂದಿಗೆ ಬೆಂಗಳೂರಿಗೆ ಬಂದು ಮಕ್ಕಳ ಅಭ್ಯುದಯಕ್ಕಾಗಿ ಶ್ರಮಿಸುವಾಗಲೇ ಮಕ್ಕಳನ್ನು ಅನಾಥರನ್ನಾಗಿಸಿ ಕೃಷ್ಣಪ್ಪ ದಂಪತಿಗಳು ಪರಲೋಕ ವಾಸಿಗಳಾದರು. ಅನಾಥ ಬಾಲಕರು ಕ್ರೈಸ್ತ ಮಿಶನರಿ ಗುರುಗಳ ಆಶ್ರಯದಿಂದ ಬೆಳೆದರು. ಆಗ ಜೋಸೆಫರಿಗೆ ಹತ್ತು ವರ್ಷಗಳಿರಬೇಕು. ಈ ಸಹೋದರರು ಫ್ರೆಂಚ್ ಫಾದರ್‍ಸ್ ನೋಡಿಕೊಳ್ಳುತ್ತಿದ್ದ ಅನಾಥಾಲಯದಲ್ಲಿದ್ದುಕೊಂಡು ವಿದ್ಯಾಭ್ಯಾಸ ಮಾಡಿದರು. ಅಲ್ಲದೆ ತಮ್ಮ ಮುಂದಿನ ವಿದ್ಯಾಭ್ಯಾಸಕ್ಕಾಗಿ ಮಲ್ಲೇಶ್ವರದಲ್ಲಿರುವ ಸಂತ ರಾಯಪ್ಪರ ಗುರುಮಂದಿರದಲ್ಲಿಯೂ ಕೆಲಕಾಲ ಉಳಿದು ಭಾಷೆಗಳ ಮೇಲೆ ಪ್ರಭುತ್ವವನ್ನು ಸ್ಥಾಪಿಸಿಕೊಂಡರು ಹೀಗೆ ಬಾಲ್ಯಾವಸ್ಥೆಯಲ್ಲೆ ಹಲವಾರು ಸಮಸ್ಯೆಗಳ ದವಡೆಗೆ ಸಿಲುಕಿ, ಕಲಿತು ಹೈಯರ್ ಸೆಕೆಂಡರಿ ಪರೀಕ್ಷೆಯನ್ನು ಪಾಸು ಮಾಡಿಕೊಂಡರು. ಅಣ್ಣ-ತಮ್ಮ ಇಬ್ಬರು ಅಂದಿನ ಗುರುಗಳ ಆಶ್ರಯದಿಂದ ಬೆಂಗಳೂರಿನಲ್ಲಿ ವಾಸ್ತವ್ಯ ಹೂಡಿದರು. ಈ ಇಬ್ಬರು ಸಹೋದರರು ಸೆಂಟ್ ಅಲೋಶಿಯಸ್ ಶಾಲೆಯಲ್ಲಿ ಉಪಾಧ್ಯಾಯರಾಗಿ ಕೆಲಸಕ್ಕೆ ಸೇರಿಕೊಂಡರು. ಗುರುಗಳ ಆಶ್ರಯದಲ್ಲಿ ತಮ್ಮ ಪ್ರತಿಭೆಗೆ ಒತ್ತಾಸೆ ಅಥವಾ ಪ್ರತಿಫಲ ದೊರೆಯದಿದ್ದನ್ನು ಅರಿತ ಜೋಸೆಫರು ಕ್ರಮೇಣ ತಮ್ಮ ಉಪಾಧ್ಯಾಯ ವೃತ್ತಿಗೆ ರಾಜಿನಾಮೆ ಕೊಟ್ಟು, ಬೆಂಗಳೂರಿನಲ್ಲಿ ಮುನಿಸಿಫಲ್ ಆಫೀಸಿನಲ್ಲಿ ಟೈಪಿಸ್ಟ್ ಆಗಿ ಕೆಲಸಕ್ಕೆ ಸೇರಿದರು. ಅಲ್ಲಿಯೇ ಉಗ್ರಾಣಾಧಿಕಾರಿಯಾಗಿ ಮುಂಬಡ್ತಿ ಪಡೆದು ೨೮.೫.೧೯೪೯ರಲ್ಲಿ ನಿವೃತ್ತರಾದ ಶ್ರೀಯುತರು ಸಾಯುವ ತನಕ ಪುಸ್ತಕ ಬರೆದು, ಮುದ್ರಿಸಿ ಮಾರಾಟ ಮಾಡಿಕೊಂಡು, ಜಾಬ್ ಟೈಪಿಸ್ಟಾಗಿ ಜೀವನ ಸಾಗಿಸಿದರು.
ಬಾಲ್ಯ:
ಬಾಲ್ಯದಲ್ಲಿಯೇ ತಂದೆ-ತಾಯಿಯರನ್ನು ಕಳೆದುಕೊಂಡು ಅನಾಥರಾಗಿದ್ದ ಎ.ಎಂ. ಜೋಸೆಫ್‌ರವರಿಗೆ ಕೇವಲ ಪ್ರೌಢ ಶಿಕ್ಷಣ ಹೊರತು ಕಾಲೇಜ್ ಶಿಕ್ಷಣ ದಕ್ಕಲಿಲ್ಲ. ಆದರೆ ಅವರಲ್ಲಿ ಗುಪ್ತವಾಗಿದ್ದ ಜ್ಞಾನ ತೃಷೆ ಅವರನ್ನು ಕಾಲೇಜು ಶಿಕ್ಷಣವನ್ನು ಮೀರಿಸುವಷ್ಟು ಉತ್ಕೃಷ್ಟವಾಗಿತ್ತು. ಬಾಲ್ಯದಿಂದಲೂ ಕೈಗೆ ಸಿಕ್ಕ ಪುಸ್ತಕಗಳನ್ನೆಲ್ಲ ಬಹು ಆಸಕ್ತಿಯಿಂದ ಓದುತ್ತಿದ್ದರು. ಆಗಲೇ ಅವರು ಮುದ್ದಣ್ಣನ ಅದ್ಭುತ ರಾಮಾಯಣ, ರಾಮಾಶ್ವಮೇಧಗಳನ್ನೋದಿ ಸವಿದು ಆನಂದಿಸುತ್ತಿದ್ದರು. ಪಂಪ, ಕುಮಾರವ್ಯಾಸ ಹಾಗೂ ಲಕ್ಷ್ಮೀಶನನ್ನು ಅದೆಷ್ಟು ಬಾರಿ ಓದಿದರೊ? ಜೊತೆಗೆ ಇಂಗ್ಲೀಷ್ ಕಾದಂಬರಿಗಳನ್ನೂ, ಸಂತರ ಜೀವನ ಚರಿತ್ರೆಗಳನ್ನೂ ಓದಿದರು. ಲಯೋಲಾದ ಇಗ್ನೇಷಿಯಸ್ ಮಹಾಶಯನ ಜೀವನವನ್ನೇ ಬದಲಾಯಿಸಲು ಕಾರಣವಾದ ಲೈಫ್ ಆಫ್ ಸೈಂಟ್ಸ್ ಕೃತಿಯು ಸಾಹಿತ್ಯ ಸಾಧಕ ಎ.ಎಂ. ಜೋಸೆಫರ ಜೀವನವನ್ನು ರೂಪಿಸಲು ಕಾರಣವಾಯಿತು. ತಮಿಳು, ತೆಲುಗು, ಲತೀನ್ ಭಾಷೆಗಳನ್ನು ಕಲಿತು ಆಯಾ ಭಾಷೆಗಳ ಪುಸ್ತಕಗಳನ್ನು ಓದಿದ್ದರು. ಸುಸಂದೇಶದ ಇಂಗ್ಲೀಷ್ ಪ್ರತಿಯನ್ನು ಓದಿ ಅನೇಕ ಅಧ್ಯಾಯಗಳನ್ನು ಬಾಯಿಪಾಠ ಮಾಡಿದ್ದರು. ಆಗಾಗಲೇ ಮಂಗಳೂರಿನ ಪ್ರಕಾಶನಾಲಯದವರು ಪ್ರಕಟಿಸಿದ್ದ ಅನೇಕ ಕನ್ನಡ ಕಿರು ಪುಸ್ತಕಗಳನ್ನು ಓದಿ ವಿಚಾರಗಳನ್ನು ತಮ್ಮ ಮನಸ್ಸಿನ ಬತ್ತಳಿಕೆಯಲ್ಲಿ ತುಂಬಿಕೊಂಡರು. ಓದಿದ್ದನ್ನೆಲ್ಲಾ ನೆನೆಪಿಟ್ಟುಕೊಂಡು ಮನಸ್ಸಿನಲ್ಲೇ ಲೆಕ್ಕ ಹಾಕುತ್ತಾ ಸರಿ ತಪ್ಪುಗಳನ್ನು ತೂಗಿ ನೋಡುವ ಚಿಕಿತ್ಸಕ ಬುದ್ಧಿಯನ್ನು ಬೆಳೆಸಿಕೊಂಡಿದ್ದರು.
ಶ್ರೀ ಜೋಸೆಫರಿಗೆ ಸುಮಾರು ೩೦ ವರ್ಷಗಳಿರುವಾಗ ಮರಿಯಾಪುರದ ಉಪದೇಶಿ-ಉಪಾಧ್ಯಾಯರಾಗಿದ್ದ ಶ್ರೀಮರಿಯಪ್ಪನವರ ಮಗಳು ಶ್ರೀಮತಿ ಜೋಸೆಫಿನ್ ಎಂಬಾಕೆಯೊಂದಿಗೆ ವಿವಾಹವಾಯಿತು. ಸುಖ ಸಂಸಾರದ ಫಲವಾಗಿ ಆ ಸಾತ್ವಿಕ ದಂಪತಿಗಳ ಸ್ನೇಹ ದಾಂಪತ್ಯದ ಕುಡಿಗಳಾಗಿ ಮರಿಯಾ ಲೀಲಾ (೧೦.೪.೨೨) ಮತ್ತು ಪ್ರೇಮಲತಾ (೨೧.೩.೩೫) ಎಂಬ ಇಬ್ಬರು ಹೆಣ್ಣು ಮಕ್ಕಳು, ಆನಂದ್ (೩೧-೮-೪೭) ಎಂಬ ಗಂಡು ಮಗನೂ ಜನಿಸಿದರು. ತಂದೆ ತಾಯಿಯರ ಆಶ್ರಯದಲ್ಲಿ ಬೆಳೆದ ಈ ಮಕ್ಕಳು ಅವರ ಸಾತ್ವಿಕ ಮನೋಭಾವವನ್ನು ಬೆಳೆಸಿಕೊಂಡು ಉತ್ತಮ ಜೀವನವನ್ನು ಸಾಗಿಸಿರುವರು.
===============================
ಮುಂದಿನ ಸಂಚಿಕೆಯಲ್ಲಿ ಸಾಹಿತ್ಯ ಸಾಧಕ ಎ.ಎಂ ಜೋಸೆಫ್‌ರವರ ಸಾಹಿತ್ಯಿಕ ಸೇವಾ ವಿಚಾರಗಳ ಬಗ್ಗೆ ತಿಳಿಸಲಾಗುವುದು.
==========================
No comments:
Post a Comment