ಧರ್ಮ ಅಫೀಮು ಇದ್ದಂತೆ ಎಂಬ ಮಾತಿದೆ. ಅದೇನೇ ಇರಲಿ, ಭಾರತೀಯರಿಗೆ ತಮ್ಮ ಕಣ್ಣೆದುರಲ್ಲಿಯೇ ಇರುವ, ತಾವು ಮೆಚ್ಚುವ ತಮ್ಮ ನಾಯಕ, ನಾಯಕಿಯರಲ್ಲಿ ದೇವರನ್ನು ಕಂಡು, ಅವರನ್ನು ದೇವರೆಂದು ಆರಾಧಿಸುವ ಪರಿಪಾಠ ಹೊಸದೇನಲ್ಲ.
ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರ ಮಂದಿರವೊಂದು ತೆಲಂಗಾಣದಲ್ಲಿ ಇದ್ದುದನ್ನು, ಹೈದರಾಬಾದಿನಲ್ಲಿ ವಿಸಾ ಕೊಡಿಸುತ್ತದೆ ಎಂದು ನಂಬಲಾಗುವ ದೇವಸ್ಥಾನವೊಂದು ಮತ್ತು ಖ್ಯಾತ ನಟ ಅಮಿತಾಬ್ ಬಚ್ಚನ್ ಅವರ ದೇವಾಲಯವೊಂದು ಕೋಲ್ಕತ್ತಾದಲ್ಲಿ ಇರುವುದನ್ನು ನೋಡಿದ್ದೇವೆ.
ಈಗ ನಮಗೆ ಇನ್ನೊಂದು ಅಚ್ಚರಿ ಕಾದಿದೆ. ಈಗ ಒಬ್ಬ ಅಂತರ್ ರಾಷ್ಟ್ರೀಯ ಖ್ಯಾತ ವ್ಯಕ್ತಿಯ ಮಂದಿರವೊಂದನ್ನು ನಮ್ಮ ದೇಶದಲ್ಲಿ ಕಟ್ಟಲಾಗಿದೆ. ಹೈದರಾಬಾದಿನಿಂದ ೧೧೦ ಕಿ ಮೀ ದೂರದಲ್ಲಿರುವ ಒಂದು ಊರಿನಲ್ಲಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಮಂದಿರ ಅಸ್ತಿತ್ವದಲ್ಲಿ ಬಂದಿದೆ. ತೆಲಂಗಾಣದ ಜನಗಾವ ಜಿಲ್ಲೆಯ ಬಚ್ಚನ್‌ಪೇಟ್ ಹೋಬಳಿಯ ಕೊಣ್ಣೆ ಗ್ರಾಮದಲ್ಲಿ ಈ ಮಂದಿರವನ್ನು ಕಟ್ಟಲಾಗಿದೆ.
ಟ್ರಂಪ್ ಅವರ ಭಕ್ತನಾಗಿರುವ ಬುಸ್ಸಾ ಕೃಷ್ಣ ಎಂಬುವವರು ಈ ಡೊನಾಲ್ಡ್ ಟ್ರಂಪ್ ಅವರ ಮಂದಿರವನ್ನು ನಿರ್ಮಿಸಿದ್ದಾರೆ. ನಾಲ್ಕು ವರ್ಷಗಳ ಹಿಂದೆ ಇದರ ನಿರ್ಮಾಣವಾಗಿದೆ.
ಕಳೆದ ೨೦೧೯ರ ಸಾಲಿನ ಫೆಬ್ರುವರಿ ತಿಂಗಳ ೨೪ ರಂದು ಟ್ರಂಪ್ ಅವರ ಭಾರತದ ಭೇಟಿಯ ಸಂದರ್ಭದಲ್ಲಿ ತಮ್ಮ ಜೀವಂತ ದೇವರನ್ನು ಕಾಣುವ ಕನಸು ಕಂಡಿದ್ದರು. ಅಹiದಾಬಾದಿಗೆ ಹೋಗಿ ಟ್ರಂಪ್ ಅವರನ್ನು ಕಾಣುವುದಕ್ಕಾಗಿ ೮೦ ಸಾವಿರ ಖರ್ಚು ಮಾಡಿದ್ದರು.
ಕನಸಿನಲ್ಲಿ ದರ್ಶನಕೊಟ್ಟ ಟ್ರಂಪ್ :
ಕೃಷ್ಣ ಅವರು ಡೊನಾಲ್ಡ್ ಟ್ರಂಪ್ ಅವರ ಭಕ್ತರಾಗುವುದಕ್ಕೆ ಒಂದು ಕಾರಣವೂ ಇದೆ. ಒಂದು ಬಾರಿ ನಸುಕಿನಲ್ಲಿ ಅವರಿಗೆ ಡೊನಾಲ್ಡ್ ಟ್ರಂಪ್ ಅವರು ಕಾಣಿಸಿಕೊಂಡು ದರ್ಶನ ಕೊಟ್ಟರಂತೆ. ನಸುಕಿನಲ್ಲಿ ಕಂಡ ಕನಸಿಗೆ ವಿಶೇಷ ಮನ್ನಣೆ ಇದೆ ಮತ್ತು ನಸುಕಿನಲ್ಲಿ ಕಂಡ ಕನಸು ನಿಜವಾಗುವುದು ಎಂಬುದು ನಾವು ಭಾರತೀಯರು ನಂಬಿಕೊಂಡು ಬಂದಿರುವ ಸಂಪ್ರದಾಯ. ಅದಕ್ಕೆ ಹೊರತಾಗದ ಕೃಷ್ಣ ಅವರು, ಡೊನಾಲ್ಡ್ ಡ್ರಂಪ್ ಅವರು ಕನಸಿನಲ್ಲಿ ಕಂಡ ದಿನದಿಂದ, ಅವರ ಭಕ್ತರಾಗಿಬಿಟ್ಟರು!
ಕನಸಿನಲ್ಲಿ ದೇವರಂತೆ ದರ್ಶನ ಕೊಟ್ಟ ಡೊನಾಲ್ಡ್ ಟ್ರಂಪ್ ದೇವರಿಗೆ ಒಂದು ಮಂದಿರ ಕಟ್ಟುವ ನಿರ್ಧಾರ ಕೈಗೊಂಡ ಕೃಷ್ಣ ಸುಮಾರು ಎರಡು ಲಕ್ಷ ರೂಪಾಯಿ ಖರ್ಚುಮಾಡಿ, ಡೊನಾಲ್ಡ್ ಟ್ರಂಪ್ ಅವರ ವಿಗ್ರಹವನ್ನು ಮಾಡಿಸಿ ಅದಕ್ಕೊಂದು ದೇವಸ್ಥಾನವನ್ನೂ ಕಟ್ಟಿಸಿಬಿಟ್ಟಿದ್ದರು. ಮನೆಯ ಪಕ್ಕದ ಜಾಗದಲ್ಲಿ ಕಟ್ಟೆ ಕಟ್ಟಿ ಅದರ ಮೇಲೆ ಟ್ರಂಪ್ ಅವರ ವಿಗ್ರಹವನ್ನು ಪ್ರತಿಷ್ಠಾಪಿಸಿದ್ದರು. ಹಿಂದೆ ಎರಡು ಕಬ್ಬಿಣದ ಕಂಬಗಳ ನೆಟ್ಟು, ಅವು ಮುಂದೆ ಚಾಚಿದ ಕಂಬಿಗಳ ಮೇಲೆ ತಗಡನ್ನು ಕೂಡಿಸಿ, ವಿಗ್ರಹಕ್ಕೆ ನೆರಳು ಕಲ್ಪಿಸಿದ್ದರು.
ಆ ದೇವಸ್ಥಾನದಲ್ಲಿ ಇರುವ ಡೊನಾಲ್ಡ್ ಟ್ರಂಪ್ ಅವರ ೬ ಅಡಿ ಎತ್ತರದ ವಿಗ್ರಹಕ್ಕೆ ಪ್ರತಿದಿನವೂ ಪೂಜೆ ಸಲ್ಲಿಸುತ್ತಾ ಬಂದಿದ್ದರು. ಆ ವಿಗ್ರಹಕ್ಕೆ ದಿನವೂ ಅಭಿಷೇಕಿಸುತ್ತಿದ್ದರು. ಒಟ್ಡು ಹದಿನೈದು ಜನ ಶಿಲ್ಪಿಗಳು ಒಂದು ತಿಂಗಳು ಶ್ರಮಿಸಿ ಈ ವಿಗ್ರಹವನ್ನು ನಿರ್ಮಿಸಿಕೊಟ್ಟಿದ್ದಾರೆ. ಈ ವಿಗ್ರಹದಲ್ಲಿ ಟ್ರಂಪ್ ಅವರು ನೀಲಿ ಬಣ್ಣದ ಸೂಟು ತೊಟ್ಟಿದ್ದಾರೆ. ಕೊರಳಲ್ಲಿ ಕೆಂಪು ಬಣ್ಣದ ಕೊರಳಪಟ್ಟಿ (ಟೈ) ಇದೆ. ವಿಗ್ರಹದ ಬಲ ಗೈ ಉದ್ದಕ್ಕೆ ಚಾಚಿ ಗೆಲುವಿನ ಸೂಚಕವಾಗಿ ಮುಷ್ಟಿಕಟ್ಟಿ ಹೆಬ್ಬೆರಳನ್ನು ಎತ್ತಿ ತೋರಿಸಲಾಗಿದೆ. ಟ್ರಂಪ್ ಅವರ್ ಮೈ ಬಣ್ಣ ಗುಲಾಬಿ ಬಣ್ಣದಲ್ಲಿದೆ. ಹಣೆಗೆ ಉದ್ದಕ್ಕೆ ಸಿಂಧೂರ ಬಳೆಯಲಾಗುತ್ತದೆ.
ಓದು ಬರಹ ತಲೆಗೆ ಹತ್ತದೇ ಕೃಷಿಯಲ್ಲಿ ತೊಡಗಿಸಿಕೊಂಡಿದ್ದ ಕೃಷ್ಣ, ಸಣ್ಣಪುಟ್ಟ ವ್ಯವಹಾರದಲ್ಲಿ ತೊಡಗಿಸಿಕೊಂಡಿದ್ದರು ಅವರು ಸಾಕಷ್ಟು ಪ್ರಪಂಚ ಜ್ಞಾನ ಪಡೆದಿದ್ದರು. ಟ್ರಂಪ್ ಮಂದಿರಕ್ಕಾಗಿ ಇದುವರೆಗೂ ಲಕ್ಷಾಂತರ ರೂಪಾಯಿ ಖರ್ಚು ಮಾಡಿದ್ದರು.
ಕೃಷ್ಣ ಅವರ ಪಾಲಿನ ಕಾಲಜ್ಞಾನಿ ಟ್ರಂಪ್ :
ಕೃಷ್ಣ ಅವರ ಪಾಲಿಗೆ ಡೊನಾಲ್ಡ ಟ್ರಂಪ್ ಅವರು ದೇವರ ಅಪರಾವತಾರವಲ್ಲ, ಬೇಡಿಕೊಂಡದ್ದನ್ನು ಕರುಣಿಸುವ ಸಾಕ್ಷಾತ್ ದೇವರು. ಹೀಗಾಗಿಯೇ ಆತ ತಾನು ನಂಬಿದ ದೇವರ ಹೆಸರಿನಲ್ಲಿ ಮಂದಿರ ಕಟ್ಟಿಸಿದ್ದರು.
ಕನಸಿನಲ್ಲಿ ಕಾಣಿಸಿಕೊಳ್ಳುವ ಡೊನಾಲ್ಡ್ ಟ್ರಂಪ್ ದೇವರು, ಕೃಷ್ಣನ ಪಾಲಿಗೆ ಕಾಲಜ್ಞಾನಿಯೂ ಆಗಿದ್ದನು. ಕನಸಿನಲ್ಲಿ ಕಾಣಿಸಿಕೊಂಡ ಡೊನಾಲ್ಡ್ ಟ್ರಂಪ್ ದೇವರು, ೨೦೧೯ರ ಸಾಲಿನ ಭಾರತ ಪಾಕಿಸ್ತಾನ್ ಗಳ ನಡುವೆ ನಡೆದ ವಿಶ್ವಕಪ್ ಕ್ರಿಕೆಟ್ ಪಂದ್ಯದಲ್ಲಿ ಭಾರತದ ತಂಡ ಜಯಗಳಿಸುತ್ತದೆ ಕೃಷ್ಣನಿಗೆ ತಿಳಿಸಿದ್ದರಂತೆ. ಅದರಂತೆಯೇ, ಭಾರತೀಯ ತಂಡ ಕ್ರಿಕೆಟ್ ಪಂದ್ಯದಲ್ಲಿ ಜಯಗಳಿಸಿದಾಗ, ಕೃಷ್ಣನಿಗೆ ಟ್ರಂಪ್ ದೇವರಲ್ಲಿ ಮತ್ತಷ್ಟು ವಿಶ್ವಾಸ ಮೂಡಿತಂತೆ.
ಇದು ನನ್ನ ವಿಶ್ವಾಸ, ನಾನು ಪೂಜಿಸುವೆ :
ಮೊದಮೊದಲು ಟ್ರಂಪ್ ಮಹಾಶಯರ ಗುಡಿ ಕಟ್ಟಿದಾಗ ಊರವರು ಕಟುವಾದ ಟೀಕೆಗಳನ್ನು ಮಾಡಿದರಂತೆ. ಮನೆಯವರು, ಊರಲ್ಲಿ ತಲೆ ಎತ್ತಲಾಗದಂತೆ ಮಾಡಿದೆ, ಸಮಾಜಕ್ಕೆ ಕಳಂಕ ಎಂದು ಹಿಯಾಳಿಸಿದರಂತೆ. ಕೆಲವರು ಅವನು ಮಾಡುವುದನ್ನು ಕಂಡು ಮೋಜು ಮಾಡಿದರಂತೆ. ಮತ್ತೆ ಕೆಲವರು ಅವನ ನಡೆಯನ್ನು ಲಘುವಾಗಿ ಕಂಡರಂತೆ.
ತನ್ನನ್ನು ನಿಂದಿಸುತ್ತಿದ್ದವರಿಗೆ `ನೀವು ರಾಮ, ಕೃಷ್ಣ, ಶಿವ ಮುಂತಾದ ದೇವರನ್ನು ಪೂಜಿಸುವ ಹಾಗೆಯೇ ನಾನು ಟ್ರಂಪ್ ನನ್ನು ಪೂಜಿಸುತ್ತಿರುವೆ. ಇದು ನನ್ನ ನಂಬಿಕೆ, ನಾನು ಪೂಜಿಸುವೆ ಎಂದು ವಾದಿಸುತ್ತಿದ್ದ ಕೃಷ್ಣ ಅವರು ತಮ್ಮ ಮನೆಯ ಗೋಡೆಗಳ ಮೇಲೆ ಎಲ್ಲಾ ಕಡೆಗಳಲ್ಲೂ ಟ್ರಂಪ್ ಹೆಸರನ್ನು ಬರೆಯಿಸಿದ್ದರು.
ನಿಧಾನವಾಗಿ ಊರವರು ಮನಸ್ಸು ಬದಲಿಸಿ ಅವರೊಂದಿಗೆ ಸಹಕರಿಸಲು ಆರಂಭಿಸಿದ್ದರಂತೆ. ಜಗತ್ತಿನಲ್ಲಿ ಟ್ರಂಪ್ ಹೆಸರಿನಲ್ಲಿ ಇರುವ ಒಂದೇ ಒಂದು ದೇವಸ್ಥಾನ ಎಂಬುದು ಊರವರಿಗೆ ಮನದಟ್ಟಾಗಿದೆ. ಆಗ, ಹೆಮ್ಮೆ ಅವರಲ್ಲಿ ಮೂಡಿತಂತೆ.
ಪ್ರತಿದಿನವೂ ಡೊನಾಲ್ಡ್ ಟ್ರಂಪ್ ವಿಗ್ರಹದ ಮುಖಕ್ಕೆ ಅರಿಷಣ ಬಳಿದು, ಹಣೆಗೆ ತಿಲಕವಿಟ್ಟು ಆರತಿ ಮಾಡುವ ಪೂಜಾಕ್ರಮವನ್ನು ಕೃಷ್ಣನ ಕುಟುಂಬದ ಸದಸ್ಯರು ಆರಂಭಿಸಿದ್ದಾರೆ. ಕೃಷ್ಣ ತನ್ನ ದೇವರಾದ ಡೊನಾಲ್ಡ್ ಟ್ರಂಪ್ ಅವರ ಚಿತ್ರವನ್ನು ಸದಾ ತನ್ನ ಬಳಿಯಲ್ಲಿ ಇರಿಸಿಕೊಂಡಿರುತ್ತಿದ್ದರು. ಕೃಷ್ಣ ಹೊರಗಡೆ ಹೋದಾಗ, ತೊಡುವ ಟಿ ಷರ್ಟ ಮೇಲೆ ಟ್ರಂಪ್ ಮಹಾಶಯನ ಚಿತ್ರವು ಇದ್ದೇ ಇರುತ್ತಿತ್ತು.
ಪ್ರತಿವರ್ಷ ಜೂನ್ ೧೪ ಟ್ರಂಪ್ ಮಹಾಶಯನ ಜನ್ಮ ದಿನದಂದು ವಿಶೇಷ ಪೂಜೆ ಮಾಡುತ್ತಿದ್ದ ಅವರು, ಅಂದು ಊರವರಿಗೆ ಅನ್ನಸಂತರ್ಪಣೆ ಮಾಡುತ್ತಿದ್ದರು. ಜೊತೆಗೆ ಹಣ್ಣುಹಂಪಲುಗಳನ್ನು, ಸಿಹಿ ಮಿಠಾಯಿಯನ್ನು ಹಂಚುತ್ತಿದ್ದರು.
ಅಂತರ್ ರಾಷ್ಟ್ರೀಯ ಸುದ್ದಿಯಾದ `ಟ್ರಂಪ್ ಕೃಷ್ಣನ ಸಾವು :
ಪ್ರತಿದಿನವೂ ಟ್ರಂಪ್ ಮಹಾಶಯನನ್ನು ಪೂಜೆ ಮಾಡುತ್ತಿದ್ದ. ಈ ಕೃಷ್ಣ ಅವರನ್ನು ಊರ ಜನರು `ಟ್ರಂಪ್ ಕೃಷ್ಣ ಎಂದೇ ಗುರುತಿಸುತ್ತಿದ್ದರು.
ಡೊನಾಲ್ಡ್ ಟ್ರಂಪ್ ಅವರು, ಕೋವಿಡ್ ೧೯ ಕಾಯಿಲೆಗೆ ತುತ್ತಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂಬ ಸುದ್ದಿ, ಟ್ರಂಪ್ ನನ್ನು ದೇವರೆಂದು ಬಗೆದು ಆರಾಧಿಸುತ್ತಿದ್ದ ಕೃಷ್ಣ ಅವರಿಗೆ ಬರಸಿಡಿಲು ಬಡಿದಂತಾಗಿತ್ತು. ತುಂಬಾ ಬೇಸರ ಮಾಡಿಕೊಂಡ ಕೃಷ, ನೊಂದುಕೊಂಡು ಊಟ ತಿಂಡಿ ಬಿಟ್ಟುಬಿಟ್ಟರು. ಚಿಂತೆಯಿಂದ ನಿದ್ರೆ ಮಾಡುತ್ತಿರಲಿಲ್ಲ. ಹಗಲು ರಾತ್ರಿ ಅದೇ ಚಿಂತೆಯಲ್ಲಿ ಮುಳುಗಿರುತ್ತಿದ್ದರು. ಮಾನಸಿಕವಾಗಿ ಕುಸಿದುಹೋಗಿದ್ದರು.
ಹೆರಿಗೆಯ ಸಂದರ್ಭದಲ್ಲಿ ಹೆಂಡತಿ ತೀರಿಕೊಂಡಿದ್ದಳು. ಈಚೆಗೆ ಅವರು ಮೇಡಕ ಜಿಲ್ಲೆಯ ತೂಪ್ರನ್ ಎಂಬ ಹಳ್ಳಿಗೆ ಹೋಗಿದ್ದರು. ಅಲ್ಲಿ ಅವರ ತಾಯಿಯ ಕಡೆಯ ಸಂಬಂಧಿ ಅಜ್ಜಿಯ ಮನೆಯಲ್ಲಿ ತಂಗಿದ್ದರು. ನಿತ್ರಾಣಗೊಂಡಿದ್ದ ಅವರು, ಅಕ್ಟೋಬರ್ ೧೧ರಂದು ಮನೆಯಲ್ಲಿಯೇ ಕುಸಿದುಬಿದ್ದು ತೀರಿಕೊಂಡರೆಂದು ಅವನ ಕುಟುಂಬದವರು ಹೇಳುತ್ತಾರೆ.
ಟ್ರಂಪ್ ಭಕ್ತ ಕೃಷ್ಣ ತಮ್ಮ ೩೮ ನೇ ವಯಸ್ಸಿನಲ್ಲಿ ಅಕ್ಟೋಬರ್ ೧೧ ತೀರಿಕೊಂಡರೆ, ಅದು ಅಕ್ಟೋಬರ್ ೧೪ರಂದು ನ್ಯೂಯಾರ್ಕ್ ಟೈಮ್ಸ್ ಪತ್ರಿಕೆಯಲ್ಲೂ ಸುದ್ದಿಯಾಯಿತು. ಸಾಮಾನ್ಯರಲ್ಲಿ ಸಾಮಾನ್ಯರಾಗಿದ್ದ ಅವರ ಸಾವು ದೊಡ್ಡ ಸುದ್ದಿಯಾಗುವ ಯಾವ ಸಾಧ್ಯತೆಗಳೇ ಇರಲಿಲ್ಲ. ಅವರು ಡೊನಾಲ್ಡ್ ಟ್ರಂಪ್ ಹೆಸರಿನಲ್ಲಿ ಗುಡಿ ಕಟ್ಟಿಸಿ, ಡೊನಾಲ್ಡ್ ಟ್ರಂಪ್ ಅವರನ್ನು ದೇವರೆಂದು ಆರಾಧಿಸುತ್ತಿದ್ದರು ಎಂಬ ಏಕೈಕ ಕಾರಣದಿಂದ ಅವರ ಸಾವು ಸುದ್ದಿಯಾಯಿತು, ಅದೂ ವಿಶ್ವ ಮಾನ್ಯತೆ ಪಡೆದಿರುವ ಪತ್ರಿಕೆಗಳಲ್ಲಿ.
ಪ್ರಸಕ್ತ ೨೦೨೦ರ ಸಾಲಿನ ಅಮೆರಿಕದ ಆದ್ಯಕ್ಷೀಯ ಚುನಾವಣೆಯಲ್ಲಿ `ಡೊನಾಲ್ಡ್ ಟ್ರಂಪ್ ಗೆದ್ದು ಚೀನಾವನ್ನು ಹೆಡಮುರಿ ಕಟ್ಟಬೇಕು ಎಂಬುವುದು ಅವರ ಹೆಬ್ಬಯಕೆ ಆಗಿತ್ತು. ಡೊನಾಲ್ಡ್ ಟ್ರಂಪ್ ಅವರನ್ನು, ಅವರು ಇರುವ ವೈಟ್ ಹೌಸ್ ನಲ್ಲಿ ಕಾಣಬೇಕೆಂಬ ಅವರ ಬಯಕೆ ಈಡೇರಲೇ ಇಲ್ಲ.
ವಿಶ್ವದ ಇತರೆಡೆಯ ಟ್ರಂಪ್ ವಿಗ್ರಹಗಳು:
ಕಳೆದ ೨೦೧೬ರಲ್ಲಿ ಅಮೆರಿಕದ ಅಧ್ಯಕ್ಷೀಯ ಚುನಾವಣೆಯ ಸಂದರ್ಭದಲ್ಲಿ ಸ್ಕಾಟ್ ಲಬೈಡೊ ಎಂಬ ಕಲಾವಿದ ಡೊನಾಲ್ಡ್ ಟ್ರಂಪ್ ಅವರನ್ನು ಬೆಂಬಲಿಸಿ ಸ್ಟಟೆನ್ ನಡುಗಡ್ಡೆಯಲ್ಲಿ ಭಾರಿ ಗಾತ್ರದ ಇಂಗ್ಲಿಷ್ ಟಿ ಅಕ್ಷರವನ್ನು ರಚಿಸಿದ್ದ.
ಅದೇ ಬಗೆಯಲ್ಲಿ ಸ್ಲೊವಿನಿಯದ ಹಳ್ಳಿಯಲ್ಲಿ ಅಮೆರಿಕದ ಲಿಬರ್ಟಿ ವಿಗ್ರಹದ ಮಾದರಿಯಲ್ಲಿ ವಿಚಿತ್ರ ಬಗೆಯಲ್ಲಿ ಕಟ್ಟಿಗೆ, ಹಲಗೆಗಳಿಂದ ಟ್ರಂಪ್ ಪ್ರತಿಕೃತಿಯನ್ನು ರಚಿಸಲಾಗಿತ್ತು.
ವಿವಾದಿತ ನಾಯಕ ಡೊನಾಲ್ಡ್ ಟ್ರಂಪ್ ಅವರ ಈ ವಿಗ್ರಹಗಳ ಕುರಿತು ಆಕ್ಷೇಪಗಳು ಬಂದ ಕಾರಣ, ನಂತರ ಮುಂದೊಂದು ದಿನ ಅವರೆಡೂ ಕಲಾಕೃತಿಗಳನ್ನು ಬೆಂಕಿ ಹಚ್ಚಿ ನಾಶಪಡಿಸಲಾಯಿತು. ಆದರೆ, ಕಲಾವಿದ ಲಬೈಡೋ, ಲಿಬರ್ಟಿ ವಿಗ್ರಹದ ಮಾದರಿಯ ವಿನೂತನ ಬಗೆಯ ಟ್ರಂಪ್ ಪ್ರತಿಕೃತಿಯ ಕಾಷ್ಠಕೃತಿಯನ್ನು ಮತ್ತೆ ದೊಡ್ಡ ಪ್ರಮಾಣದಲ್ಲಿ ಕಡೆದು ನಿಲ್ಲಿಸಿದ್ದಾನೆ.
-----------------------------------
ಫ್ರಾನ್ಸಿಸ್ ನಂದಗಾವ
ಹಿರಿಯ ಪತ್ರಕರ್ತ, ಸಾಹಿತಿ, ಬೆಂಗಳೂರು
------------------------------------
No comments:
Post a Comment