ಸೆಪ್ಟೆಂಬರ್ ಎಂಟು ಮತ್ತೆ ಬಂದಿದೆ. ಅನಾರೋಗ್ಯದಿಂದ ನೊಂದು ಸಾಂತ್ವನ ಬಯಸಿ ಬರುವ ಭಕ್ತರಿಗೆ ಆರೋಗ್ಯ ಭಾಗ್ಯ ಕರುಣಿಸುವ ಆರೋಗ್ಯ ಮಾತೆ ಮರಿಯಳ ಜನ್ಮದಿನ ಮತ್ತೆ ಮರಳಿ ಬಂದಿದೆ. `ಯುಗ ಯುಗಾದಿ ಕಳೆದರೂ ಯುಗದಿ ಮರಳಿ ಬರುತಿದೆ, ಹೊಸ ವರುಷಕೆ ಹೊಸ ಹರುಷವ ಹೊಸತು ಹೊಸತು ತರುತಿದೆ ಎಂಬ ವರಕವಿ ದ ರಾ ಬೇಂದ್ರೆ ವಿರಚಿತ, ಮನೆಮಾತಾದ ಸಂಭ್ರಮದ ಯುಗಾದಿ ಹಾಡಿನಂತೆಯೇ, ಇದು ಬೆಂಗಳೂರಿನ ಜನಪದರು ಆದರದಿಂದ ಪ್ರತಿ ವರ್ಷವೂ ಎದುರು ನೋಡುವ ಮೆಚ್ಚಿನ ಸಂಭ್ರಮದ ಹಬ್ಬವಾಗಿದೆ.
ಸಂತ ಮಾತೆ ಮೇರಿ, ಶಿವಾಜಿನಗರದ ಚರ್ಚಿನ- ಬೆಸಿಲಿಕಾದ-ಪುಣ್ಯಕ್ಷೇತ್ರದ ಪಾಲಕ ಸಂತಳೂ ಹೌದು. ಹೀಗಾಗಿ ಈಗ ಈ ಬೆಸಿಲಿಕಾಕ್ಕೆ ವಾರ್ಷಿಕ ಹಬ್ಬದ ಸಂಭ್ರಮದ ಸಡಗರ ಬಂದು ಕಳೆಕಟ್ಟುತ್ತದೆ. ಶತಮಾನಗಳ ಇತಿಹಾಸದ ಈ ಬೆಸಿಲಿಕಾಗೆ ಧರ್ಮ, ಜಾತಿ ಮತಗಳ ಕಡಿವಾಣದ ಸಂಕೋಲೆಗಳ ಸೋಂಕಿಲ್ಲ. ಅದು, ಸಕಲರಿಗೂ ಮಾನ್ಯವಾದ ಪವಿತ್ರ ತೀರ್ಥಕ್ಷೇತ್ರವಾಗಿ ಭಕ್ತರನ್ನು ತನ್ನತ್ತ ಸೆಳೆಯುತ್ತಲಿದೆ.
ಶಿವಾಜಿನಗರ ನಿಧಾನವಾಗಿ ಈ ವಾರ್ಷಿಕ ಜಾತ್ರೆಗೆ ಸಜ್ಜಾಗುತ್ತಿದೆ. ಹರಕೆ ಹೊತ್ತ ಕಾವಿಧಾರಿ ಭಕ್ತರ ಮಹಾಪೂರದ ದೆಸೆಯಿಂದ ಅಲ್ಲಿನ ಬಸ್ ನಿಲ್ದಾಣದ ಆಸುಪಾಸಿನ ಪ್ರದೇಶಕ್ಕೆಲ್ಲಾ ಸಹಜವಾಗಿ ಕಾವಿಯ ಖದರು ಬಂದೇ ಬರುತ್ತದೆ. ಸರ್ವಸಂಗ ಪರಿತ್ಯಾಗಿ ಸನ್ಯಾಸಿಗಳ ಬಟ್ಟೆಯಾದ ಕಾವಿ ಬಣ್ಣದ ಬಟ್ಟೆಯು ಸ್ವಯಂ ನಿಯಂತ್ರಣದ ವ್ರತದ ಪ್ರತೀಕ. ಹೀಗಾಗಿ ಹರಕೆ ಹೊತ್ತು, ಕಾವಿ ಬಣ್ಣದ ಅಂಗಿ, ಚೊಣ್ಣ ತೊಟ್ಟ ಗಂಡಮಕ್ಕಳು, ಕಾವಿ ಬಣ್ಣದ ಸೀರೆ ಕುಪ್ಪುಸ, ಸಲ್ವಾರ ಕಮೀಜ್ ತೊಡುವ ಹೆಂಗಸರು ಮತ್ತು ಕಾವಿ ಬಣ್ಣದ ಬಟ್ಟೆ ತೊಡುವ ಮಕ್ಕಳೊಡಗೂಡಿದ ಭಕ್ತಾದಿಗಳಿಂದ ಅಲ್ಲಿನ ಪರಿಸರದಲ್ಲಿ ಭಕ್ತಾದಿಗಳ ಭಕ್ತಿಯ ಬೆಡಗು ಅರಳತೊಡಗುತ್ತದೆ.
ಪ್ರಭು ಯೇಸುಕ್ರಿಸ್ತರ ತಾಯಿ ಮರಿಯಳ ಜನ್ಮದಿನ ಸೆಪ್ಟಂಬರ್ ಎಂಟನೇ ತಾರೀಖಿನಂದು ಬರುತ್ತದೆ. ಅಂದಿನ ರಥೋತ್ಸವದ ಪೂರ್ವಭಾವಿಯಾಗಿ ಒಂಬತ್ತು ದಿನಗಳ ಮೊದಲೇ ಧ್ವಜಾರೋಹಣ, ವಿಶೇಷ ಪೂಜೆಗಳು ನಡೆಯುತ್ತವೆ. ಒಂಬತ್ತು ದಿನಗಳ ಧ್ಯಾನದ ನವೇನಾ ಕಾರ್‍ಯಕ್ರಮಗಳಿಗೆ ಚಾಲನೆ ಸಿಗುತ್ತದೆ. ಹೀಗೆ ಹಬ್ಬದ ಉತ್ಸಾಹಕ್ಕೆ ಆಗ ನಾಂದಿಯ ಮಂಗಳ ನಾದ ಮೊಳಗುತ್ತದೆ.
ಜಾತಿ ಮತಗಳ ಭೇದ ಮರೆತು ಸಕಲ ಆಸ್ತಿಕ ಭಕ್ತ ಜನರು ಉತ್ಸವದ ಸಂದರ್ಭದಲ್ಲಿ, ಬೊಗಸೆಗಳಲ್ಲಿ ಹೂವು ತುಂಬಿಕೊಂಡು ಮೇಣದ ಬತ್ತಿಗಳನ್ನು ಉರಿಸುತ್ತಾ, ಪ್ರಾರ್ಥನೆ ಸಲ್ಲಿಸುತ್ತಾ, ಮೊಣಕಾಲಿನಲ್ಲಿ ಸಾಗುತ್ತಾ, ಆರೋಗ್ಯ ಮಾತೆಯ ದರ್ಶನ ಪಡೆದು ಪುನೀತರಾಗುತ್ತಾರೆ. ಹರಕೆ ತೀರಿಸುತ್ತಾರೆ; ಕೊನೆಯ ದಿನದ ತೇರಿನ ಮೆರವಣಿಗೆಯಲ್ಲಿ ಭಾಗವಹಿಸಿ ಧನ್ಯತೆ ಕಾಣುತ್ತಾರೆ.
ಹಾದಿಬೀದಿಗಳಲ್ಲಿನ ಮಾತೆ ಮರಿಯಳ ಮೋಹಕ ಮಂಟಪಗಳು:
ಕೆಲವು ಭಕ್ತರು ಶಿವಾಜಿನಗರದ ಹಾದಿ ಬೀದಿಗಳಲ್ಲಿ, ಕೂಡು ರಸ್ತೆಗಳಲ್ಲಿ ಸಂತ ಮರಿಯಳಿಗಾಗಿ ಮೋಹಕವಾದ ಪುಟ್ಟ ಪುಟ್ಟ ಮಂಟಪಗಳನ್ನು ಕಟ್ಟಿದ್ದಾರೆ. ಬೆಸಿಲಿಕಾದ ವಾರ್ಷಿಕ ಹಬ್ಬದ ದಿನಗಳು ಎಂದರೇ, ಮಾತೆ ಮರಿಯಳ ಈ ಮೋಹಕ ಮಂಟಪಗಳಿಗೂ ಸಡಗರ ಸಂಭ್ರಮದ ದಿನಗಳು.
ಬೆಸಿಲಿಕಾದಲ್ಲಿ ಮಾತೆ ಮರಿಯಳ ಚಿತ್ರಗಳಿರುವ ಧ್ವಜಗಳನ್ನು ಹಾರಿಸಿದಂತೆ, ಆಸ್ತಿಕರು ಮಾತೆ ಮರಿಯಳ ಸ್ವರೂಪವನ್ನು ಕೂಡಿಸಿರುವ ಈ ಪುಟ್ಟ ಮಂಟಪಗಳ ಹತ್ತಿರವೂ ಸಾಧಾರಣ ಗಾತ್ರದ ಎತ್ತರದ ಧ್ವಜಗಳನ್ನು ಹಾರಿಸಿ ಭಕ್ತಿಯ ಪ್ರದರ್ಶನ ನಡೆಸುತ್ತಾರೆ.
ಕ್ರೈಸ್ತರೇ ಅಧಿಕ ಸಂಖ್ಯೆಯಲ್ಲಿರುವ ಬಡಾವಣೆಗಳಲ್ಲೂ ಆರೋಗ್ಯ ದಾತೆ- ಆರೋಗ್ಯ ಮಾತೆ ಮರಿಯಳ ಮೋಹಕ ಮಂಟಪಗಳನ್ನು ಕಾಣಬಹುದು. ಅಲ್ಲೂ ಮಾತೆ ಮರಿಯಳ ಹುಟ್ಟು ಹಬ್ಬದ ಸಂದರ್ಭದಲ್ಲಿ ಹಬ್ಬದ ಸಡಗರ ಮನೆಮಾಡಿರುತ್ತದೆ.
ಕೆಲವು ಭಕ್ತರು, ತಮ್ಮ ತಮ್ಮ ಮನೆಗಳ ಮುಂದಿನ ಅಂಗಳಗಳಲ್ಲಿ ಮಾತೆ ಮರಿಯಳ ಮಂಟಪಗಳನ್ನು ಕಟ್ಟಿಕೊಂಡಿರುವುದನ್ನು ನೋಡಬಹುದು.
ಶಿವಾಜಿನಗರದ ಚರ್ಚಿನ ವಾರ್ಷಿಕ ಹಬ್ಬದ ಸಂಭ್ರಮ ಕೆಲವು ಬಡಾವಣೆಗಳಿಗೂ ಹಬ್ಬಿಕೊಂಡಿರುತ್ತದೆ. ಮಾತೆ ಮರಿಯಳ ಮೋಹಕ ಮಂಟಪಗಳು ಇಲ್ಲದ ಕಡೆಗಳಲ್ಲಿ, ಕ್ರೈಸ್ತರೇ ಅಧಿಕ ಸಂಖ್ಯೆಯಲ್ಲಿ ಇರುವ ಬಡಾವಣೆಗಳಲ್ಲಿನ ಕೂಡು ರಸ್ತೆಗಳಲ್ಲಿ, ಬಯಲಲ್ಲಿ ಒಂದು ಧ್ವಜಸ್ತಂಬವನ್ನು ನೆಟ್ಟು, ಅಲ್ಲೊಂದು ಕುರ್ಚಿಯನಿಟ್ಟು, ಅದರಲ್ಲಿ ಆರೋಗ್ಯ ಮಾತೆ ಮರಿಯಳ ಪಟವನ್ನೋ, ಸ್ವರೂಪವನ್ನೋ (ಪ್ರತಿಮೆ) ಇಟ್ಟು, ಪ್ರತಿದಿನವೂ ಸಂಜೆ ಪ್ರಾರ್ಥನೆ ಸಲ್ಲಿಸುತ್ತಾರೆ.
ಆಯಾ ಬಡಾವಣೆಗಳಲ್ಲಿರುವ ಸಕಲ ಕೋಮಿಗೆ ಸೇರಿದ ಜನರೂ ಒಂಬತ್ತು ದಿನಗಳ ಕಾಲ ಪ್ರತಿದಿನವೂ ಸಂಜೆ ನಡೆಯುವ ಜಪಸರದ ಪ್ರಾರ್ಥನೆಯ ಭಕ್ತಿಯ ಅಭಿವ್ಯಕ್ತಿಯಲ್ಲಿ ಆಪ್ತವಾಗಿ ಭಾಗವಹಿಸುತ್ತಾರೆ. ಈ ಆಚರಣೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವ ಭಕ್ತಾದಿಗಳು, ಪ್ರಾರ್ಥನೆಗೆ ನೆರೆಯುವ ಆಸ್ತಿಕರಿಗೆ ಬ್ರೆಡ್, ಬನ್, ಇಲ್ಲವೆ ತಿಂಡಿ ಜೊತೆಗೆ ಚಹಾ ಅಥವಾ ಕಾಫಿ ಹಂಚುವುದಕ್ಕಾಗಿ ನಾಮುಂದು ತಾಮುಂದು ಎಂದು ಸಹಾಯ ಮಾಡುವಲ್ಲಿ, ದೇಣಿಗೆ ನೀಡುವುದರಲ್ಲಿ ಪೈಪೋಟಿ ನಡೆಸುತ್ತಿರುತ್ತಾರೆ.
ಕ್ರೈಸ್ತ ಜನಪದರು ರೂಢಿಸಿರುವ ಸಂಪ್ರದಾಯಗಳು :
ವಾರ್ಷಿಕ ಹಬ್ಬದ ಸಂದರ್ಭದಲ್ಲಿ ವಿಶೇಷವಾಗಿ ಶಿವಾಜಿನಗರದ ಬೆಸಿಲಿಕಾದಲ್ಲಿನ ಮಾತೆ ಮರಿಯಳ ಸ್ವರೂಪಕ್ಕೆ ಪ್ರತಿದಿನವೂ ವಿಶೇಷ ಅಲಂಕಾರದಲ್ಲಿ ಹರಕೆಯ ಸೀರೆಗಳನ್ನು ಉಡಿಸುವಂತೆ ಮಂಟಪಗಳಲ್ಲಿನ ಸ್ವರೂಪಗಳಿಗೂ ಪ್ರತಿದಿನವೂ ಹರಕೆಯ ಸೀರೆಗಳನ್ನು ಉಡಿಸಿ ಅಲಂಕಾರ ಮಾಡಲಾಗುತ್ತದೆ.
ಸ್ವರೂಪಗಳ ಮುಂದೆ ಮೇಣದ ಬತ್ತಿಯ ದೀಪದ ಜೊತೆಗೆ ಧೂಪವನ್ನು ಉರಿಸಲಾಗುತ್ತದೆ. ನಮಿಸುವ ಭಕ್ತಾದಿಗಳಿಗೆ ಪ್ರಸಾದ ರೂಪದಲ್ಲಿ ಪ್ರತಿಮೆಯ ಮುಂದಿನ ತಟ್ಟೆಯಲ್ಲಿ ಮೆಣಸು ಬೆರೆಸಿದ ಉಪ್ಪನ್ನು ಇರಿಸಲಾಗುತ್ತದೆ. ಕೆಲವೊಂದು ಕಡೆಗಳಲ್ಲಿ ಕುಂಕುಮದ ಸೌಭಾಗ್ಯವೂ ಇದೆ.
ಕೊನೆಯ ದಿನ ಶಿವಾಜನಗರದ ಆರೋಗ್ಯಮಾತೆ ಮರಿಯಳ ತೇರು ಸಾಗುವಾಗ ಅದಕ್ಕೆ ಮೆಣಸು ಉಪ್ಪು ತೂರುವ ಪರಿಪಾಠವಿದೆ. ಮೆರವಣಿಗೆಯ ತೇರನ್ನು ಹಿಂದಿರುಗಿ ತಂದು ಬೆಸಿಲಿಕಾ ಆವರಣದಲ್ಲಿ ಕೆಲವು ದಿನ ನಿಲ್ಲಿಸಲಾಗುತ್ತದೆ. ಆಗ, ಬೆಸಿಲಿಕಾಗೆ ಭೇಟಿ ಕೊಡುವ ಭಕ್ತರು ಅದರ ಮೇಲೂ ಉಪ್ಪು ಮೆಣಸು ತೂರುತ್ತಾರೆ. ಇದು ಈ ನಾಡಿನ ನೆಲದ ಸಂಸ್ಕೃತಿಯಲ್ಲಿ ಬೇರು ಹೊಂದಿರುವ ಕ್ರೈಸ್ತ ಜನಪದರ ಸಹಜ ನಡವಳಿಕೆಗಳು.
ಸಾಮಾನ್ಯ ಸಮಯಗಳಲ್ಲೂ ಈ ಮಾತೆ ಮರಿಯಳ ಮಂಟಪಗಳ ಮುಂದೆ ಸಾಗುವಾಗ ಆಸ್ತಿಕರು, ಪಾದರಕ್ಷೆಗಳನ್ನು ಅಂದರೆ ಅವರು ತೊಟ್ಟ ಚಪ್ಪಲಿ, ಬೂಟು ಮುಂತಾದವನ್ನು ತೆಗೆದಿಟ್ಟು ನಮಿಸುವುದನ್ನು ಕಾಣುತ್ತೇವೆ. ಹರಕೆ ಹೊತ್ತವರು ಶನಿವಾರದಂದು ವಿಶೇಷವಾಗಿ ಈ ಮಾತೆ ಮರಿಯಳ ಮಂಟಪಗಳಲ್ಲಿ ಮೇಣದ ಬತ್ತಿಗಳನ್ನು ಉರಿಸುವುದನ್ನು, ಧೂಪ ಹಾಕುವುದನ್ನು ಕಾಣುತ್ತೇವೆ.
ಕೆಲವೊಮ್ಮೆ ಶನಿವಾರದ ಈ ಭಕ್ತಿಯ ಪ್ರದರ್ಶನದಲ್ಲಿ, ಅಲ್ಲಿ ನೆರೆದ ಆಸ್ತಿಕರಿಗೆ ಅಂದರೆ ಶ್ರದ್ಧಾವಂತ ಭಕ್ತರಿಗೆ ಬ್ರಡ್ ಮತ್ತು ಬನ್‌ಗಳನ್ನು ಹಂಚಲಾಗುತ್ತದೆ. ಈ ಹೊಸ ಅವತಾರಗಳಲ್ಲಿನ ಮಾತೆ ಮರಿಯಳ ಈ ಮೋಹಕ ಮಂಟಪಗಳು, ಶ್ರದ್ಧಾಭಕ್ತಿಯ ಕೇಂದ್ರಗಳು ಎಂಬುದು ನಿರ್ವಿವಾದದ ಸಂಗತಿ.
ಶಿವಾಜಿನಗರದ ಸಂತ ಮಾತೆ ಮರಿಯಳ ತೀರ್ಥಕ್ಷೇತ್ರವೆಂದು ಗುರುತಿಸಲಾಗುವ ಬೆಸಿಲಿಕಾದಲ್ಲಿ ಪ್ರತಿ ಶನಿವಾರವೂ ಹರಕೆಹೊತ್ತ ಭಕ್ತಾದಿಗಳಿಂದ ಬನ್, ಬ್ರಡ್ ತುಂಡುಗಳ ಹಂಚಿಕೆ ಇದ್ದೇ ಇರುತ್ತದೆ. ಸೆಪ್ಪೆಂಬರ್ ಮೊದಲ ವಾರದಲ್ಲಂತೂ `ಅಪಾರ ಸಂಖ್ಯೆಗಳಲ್ಲಿ ಬರುವ ಭಕ್ತರಿಗೆ ಅನ್ನದಾನ ಎನ್ನುವಂತೆ, ಹರಕೆ ಹೊತ್ತವರು ಬ್ರೆಡ್, ಬನ್, ಚಿತ್ರಾನ್ನ, ಮೊಸರನ್ನ ಮುಂತಾದವನ್ನು ಹುಮ್ಮನಸ್ಸಿನಿಂದ ಹಂಚಿ ಹರಕೆ ತೀರಿಸುವ ಜನಪದರ ಸಂಪ್ರದಾಯ ನಿರಾತಂಕವಾಗಿ ನಡೆಯುತ್ತಿರುತ್ತದೆ.
ಮಾತೆ ಮರಿಯಳ ಮಂಟಪಗಳಿಗೆ ಸ್ಪೂರ್ತಿ ಯಾವುದಿದ್ದೀತು?:
ಕಥೋಲಿಕ ಕ್ರೈಸ್ತರಲ್ಲಿ ಮಾತೆ ಮರಿಯಳ `ಮರಿಯಾ ಸೇನೆಗಳು ಇರುವಂತೆ, ಈಚೆಗೆ ಶ್ರೀ ರಾಮನ ಪರಮ ಭಕ್ತ ಹನುಮಂತನ ಹೆಸರಿನ `ಭಜರಂಗ ದಳ, ಶ್ರೀರಾಮ ಸೇನೆಯಂಥ ಸಂಘಟನೆಗಳು ಅಸ್ತಿತ್ವಕ್ಕೆ ಬಂದಿರುವುದನ್ನು ಕಾಣುತ್ತೇವೆ.
ಅದೇ ರೀತಿಯಲ್ಲಿ, ಬಡಾವಣೆಗಳ ಕೂಡು ರಸ್ತೆಗಳಲ್ಲಿ ಶಿವ ಪಾರ್ವತಿಯರ ಮಗ- ಗಣೇಶನ ಹಬ್ಬದ ಸಂದರ್ಭದಲ್ಲಿ ಕಾಣಿಸಿಕೊಳ್ಳುವ ಗಣೇಶನ ಮಂಟಪಗಳು ಮತ್ತು ನವರಾತ್ರಿ ಸಂದರ್ಭಗಳಲ್ಲಿ ಬಂಗಾಳದಲ್ಲಿನ ಕಾಳಿ ಮಾತೆಯ ಮಂಟಪಗಳು ಮಾತೆ ಮರಿಯಳ ಮಂಟಪಗಳಿಗೆ ಸ್ಪೂರ್ತಿ ನೀಡಿರಬಹುದೆ?
ಹಬ್ಬದ ಸಂದರ್ಭದಲ್ಲಿ ತಾತ್ಕಾಲಿಕವಾಗಿ ಕೂಡು ರಸ್ತೆಗಳಲ್ಲಿ ಕೂಡುವ ಗಣೇಶ ಭಕ್ತಾದಿಗಳ ಒತ್ತಾಸೆಯಿಂದ ಅಲ್ಲೇ ನೆಲೆ ನಿಂತಾಗ ಗಣೇಶನ ಮಂಟಪಗಳು ಪುಟಾಣಿ ಗಣೇಶ ಮಂದಿರಗಳಾಗಿದ್ದುದು ಉಂಟು. ಶಿವಾಜಿ ನಗರದ ಸುತ್ತಮುತ್ತಲಿನ ಮಾತೆ ಮರಿಯಳ ಕಾಯಂ ಮಂಟಪಗಳ ಅಸ್ತಿತ್ವಕ್ಕೆ, ಕ್ರೈಸ್ತ ಜನಪದರ, ಭಕ್ತರ ಇಂಥ ನಡವಳಿಕೆಗಳು ಕಾರಣ ಆಗಿರಬಹುದಾದ ಸಾಧ್ಯತೆಯನ್ನು ಸುಲಭದಲ್ಲಿ ಅಲ್ಲಗಳೆಯಲಾಗದು.
ಗಣೇಶ ಚತುರ್ಥಿ ಹಬ್ಬದ ಆಚರಣೆಯಲ್ಲಿ ದೇಶದ ಎಲ್ಲೆಡೆ ವಿವಿಧ ಬಡಾವಣೆಗಳಲ್ಲಿ, ಕೂಡು ರಸ್ತೆಗಳಲ್ಲಿ, ಮನೆಮನೆಗಳಲ್ಲಿ ಗಣೇಶನನ್ನು ಕೂಡಿಸುವ ಮಂಟಪಗಳಿಗೆ, ಬಂಗಾಳದಲ್ಲಿ ನವರಾತ್ರಿಯ ಉತ್ಸವದ ಸಂದರ್ಭ ಎಲ್ಲೆಡೆಯೂ ಮಂಟಪಗಳಲ್ಲಿ ಕಾಳಿ ಮಾತೆಯನ್ನು ಪ್ರತಿಷ್ಠಾಪನೆ ಮಾಡುವ ಮಂಟಪಗಳನ್ನು ಅಲಂಕರಿಸಿದಂತೆ ಈ ಮಾತೆ ಮರಿಯಳ ಮಂಟಪಗಳಿಗೂ ಅಲಂಕಾರವನ್ನು ಮಾಡಲಾಗುತ್ತದೆ.
ರಾತ್ರಿಯ ವಿದ್ಯುತ್ ದೀಪಗಳ ಅಲಂಕಾರ ಕಣ್ಮನ ಸೆಳೆಯುತ್ತದೆ. ಬೆಳಿಗ್ಗೆ ಮತ್ತು ಸಂಜೆ ಈ ಪುಟ್ಟ ಮಂಟಪಗಳ ಎದುರು ಪ್ರಾರ್ಥಿಸುವ ಪರಿಪಾಠ ಇದೆ. ಈ ಪ್ರಾರ್ಥನೆ ಭಕ್ತರನ್ನು ಮಂಟಪಗಳತ್ತ ಸೆಳೆಯುವಂತೆ ಮಾಡುತ್ತದೆ. ಅಂತೂ ಇಂತೂ ಸೆಪ್ಟೆಂಬರ್ ಮೊದಲ ವಾರ ಬಂದರಂತೂ ಶಿವಾಜಿನಗರ ಮತ್ತು ಕ್ರೈಸ್ತರಿರುವ ಪ್ರದೇಶಗಳಲ್ಲಿ, ಮಾತೆ ಮರಿಯಳಲ್ಲಿ ಭಕ್ತಿ ಹೊಂದಿರುವ ಜನರಿರುವ ಜಾಗಗಳಲ್ಲಿ ಬೆಂಗಳೂರು ನಗರದಲ್ಲೆಲ್ಲಾ ಆರೋಗ್ಯ ಮಾತೆ ಮರಿಯಳ ಹುಟ್ಟು ಹಬ್ಬದ ಸಂಭ್ರಮ, ಸಡಗರದೇ ಸುದ್ದಿ.
ಅಲ್ಪಸಂಖ್ಯಾತರು ಎನ್ನುವ ಸಾಮಾಜಿಕ ವಿಭಾಗಕ್ಕೆ ಸೇರಿದ ಕ್ರೈಸ್ತರ ಆರಾಧನಾ ಸಂತಳ ಸುತ್ತ ಗಿರಕಿಹೊಡೆಯುವ ಈ ಆಚರಣೆಗೆ ಧಾರ್ಮಿಕ ಆಯಾಮದ ಜೊತೆ ಜೊತೆಗೆ ಸಾಮಾಜಿಕ ಆಯಾಮವೂ ಉಂಟು. ಸಾಂಸ್ಥಿಕವಾದ ಚರ್ಚಿನ ಧರ್ಮಸಭೆಯ ಆಣತಿಯಂತೆ ಒಳಗಡೆ ಬೆಸಿಲಿಕಾ/ ಪುಣ್ಯಕ್ಷೇತ್ರದಲ್ಲಿ ನಡೆಯುವ ಆಚರಣೆಗಳಲ್ಲಿ ಕಥೋಲಿಕ ಕ್ರೈಸ್ತ ಸಮುದಾಯದ ಭಕ್ತರಿಗಷ್ಟೇ ಅವಕಾಶವಿದ್ದರೂ, ಹೊರಗಡೆಯ ಆಚರಣೆಗಳಿಗೆ ಯಾವುದೇ ಬಗೆಯ ನಿರ್ಬಂಧಗಳಿಲ್ಲ.
ಅಲ್ಲೆಲ್ಲಾ ಕಥೋಲಿಕ ಕ್ರೈಸ್ತ ಸಮುದಾಯಕ್ಕೆ ಹೊರತಾದ ಸಮಾಜದ ಇತರ ಸಮುದಾಯದವರೂ ಮುಕ್ತವಾಗಿ ಪಾಲ್ಗೊಳ್ಳುವುದು ಸಹಜ ನಡವಳಿಕೆಯಾಗಿದೆ. ಇದು ಬೆಸಿಲಿಕಾದ ಆವರಣದ ಮಾತಾಯಿತು. ಆದರೆ, ಹೊರಗೆ ಬೀದಿ ಬೀದಿಗಳಲ್ಲಿನ, ಕೂಡು ರಸ್ತೆಗಳಲ್ಲಿನ, ಆಯಾ ಮನೆಗಳ ಆಸ್ತಿಕರು ಮನೆಗಳ ಮುಂದೆ ಕಟ್ಟಿಕೊಂಡ ಮರಿಯ ಮಂಟಪಗಳು ಸಾರ್ವಜನಿಕರಿಗೆ ಸದಾ ಕಾಲವೂ ಮುಕ್ತವಾಗಿರುತ್ತವೆ. ಯಾವುದೇ ಆಚರಣೆಗಳಿಗೂ ಅಲ್ಲಿ ಪಾದ್ರಿಗಳ ಹಂಗೂ ಇರುವುದೇ ಇಲ್ಲ.
ಸನಿಹದಲ್ಲೇ ದೂರದ ಪುಣ್ಯಕ್ಷೇತ್ರದ ದರ್ಶನ :
ಉತ್ತರದ ತಪ್ಪಲಿನ ಭೂಮಿಗೆ ನೀರುಣೀಸುವ ಬಹುತೇಕ ನದಿಗಳು ಹಿಮಾಲಯದಲ್ಲಿಯೇ ಹುಟ್ಟುತ್ತವೆ. ವಾತಾವರಣದಲ್ಲಿನ ಆಮ್ಲಜನಕದಂತೆಯೇ ನೀರೂ ಸಹ ಸಕಲ ಜೀವಿಗಳಿಗೆ ಜೀವದಾಯಕ. ಹೀಗಾಗಿ ನೀರು ಪವಿತ್ರವಾದ ವಸ್ತವಾಗಿದೆ. ಅಂತೆಯೇ ಹಿಂದೂ ಪುರಾಣಗಳ ಪ್ರಕಾರ ಪರಮಾತ್ಮ ಶಿವನ ಹೆಂಡತಿ ಪಾರ್ವತಿಯ ಸವತಿ ಗಂಗೆಯ ಅವನ ಶಿರದಲ್ಲಿ ಹುಟ್ಟಿ ಧರೆಗೆ ಇಳಿದು ಬರುತ್ತಾಳೆ. ನೀರನ್ನು ಗಂಗೆ ಎಂದೂ ಕರೆಯಲಾಗುತ್ತದೆ. ಗಂಗಾ ನದಿ ಪವಿತ್ರ ನದಿ, ಪಾಪ ಪರಿಹಾರಿಣಿ ಎಂಬುದು ನಂಬುಗೆ. ಅಂತಿಮ ಗಳಿಗೆಯಲ್ಲಿ ರುವವರ ಬಾಯಿಗೆ ಗಂಗಾಜಲ ಬಿಡುವುದು ಸಂಪ್ರದಾಯ.
ನಮ್ಮ ನಾಡ ನುಡಿ ಕನ್ನಡದಲ್ಲಿ `ಗಂಗಾ ಸ್ನಾನ, ತುಂಗಾ ಪಾನ ಎಂಬ ಮಾತಿದೆ. ದೂರದ ಗಂಗಾ ನದಿಗೆ ಹೋಗದವರು ಇಲ್ಲೇ ಸಮೀಪದ ತುಂಗಾ ನದಿಯ ನೀರು ಕುಡಿದರೆ ಸಾಕು ಎಂಬುದು ಈ ಮಾತಿನ ತಾತ್ಪರ್ಯ. ದೂರದಲ್ಲಿರುವ ಪವಿತ್ರ ಸ್ಥಳದಲ್ಲಿರುವ ದೇವರ ಸನ್ನಿಧಾನವನ್ನು ತಲುಪಲಾರದವರು ಸಮೀಪದಲ್ಲಿ ಅಂಥ ದೇವರನ್ನು ಹುಡುಕಿಕೊಳ್ಳುತ್ತಾರೆ. ದೂರದ ತಿರುಪತಿ ತಿಮ್ಮಪ್ಪನ ಬಳಿಗೆ ಹೋಗಲು ಆಗದ ಬೆಂಗಳೂರು ಸೀಮೆಯ ಭಕ್ತರು, ತಮ್ಮ ಸಮೀಪದಲ್ಲಿ ಇರುವ ಹೊಸಕೋಟೆ ಹತ್ತಿರದ ಚಿಕ್ಕ ತಿರುಪತಿಗೆ ಹೋಗಿ ಹರಕೆ ತೀರಿಸುತ್ತಾರೆ.
ಇಂಥ ಬಗೆಯ ನಡಿಗೆಗೆ ಕನ್ನಡ ನಾಡಿನ ಕ್ರೈಸ್ತರೂ ಹೊರತಲ್ಲ.
ದಕ್ಷಿಣ ಭಾರತದಲ್ಲೆಲ್ಲಾ ಮಾತೆ ಮರಿಯಳ ಜಯಂತಿಯನ್ನು ಆರೋಗ್ಯ ಮಾತೆಯ ಹೆಸರಿನಲ್ಲಿ ಆಚರಿಸುವುದಕ್ಕೆ ತಮಿಳುನಾಡಿನ `ವೆಲಾಂಗಣಿಯ ಆರೋಗ್ಯ ಮಾತೆಯ ಆರಾಧನೆಯೇ ಮೂಲ ಎನ್ನಲಾಗುತ್ತದೆ. ವೆಲಾಂಗಣಿಯ ಇತಿಹಾಸ ಹದಿನೈದನೇ ಶತಮಾನದಲ್ಲಿ ಡಚ್ ಮತ್ತು ಪೋರ್ಚುಗೀಸ್ ನಾವಿಕರು ತಮಿಳುನಾಡಿನ ತೀರಕ್ಕೆ ಬರುವುದರೊಂದಿಗೆ ಆರಂಭವಾಗುತ್ತದೆ.
ಸಮುದ್ರದಲ್ಲಿ ನೌಕೆಯೊಂದು ಬಿರುಗಾಳಿಯಿಂದ ಅಪಾಯಕ್ಕೆ ಸಿಲುಕಿದಾಗ ನೌಕಾ ಸಿಬ್ಬಂದಿ ಮತ್ತು ಪ್ರಯಾಣಿಕರು ಮಾತೆ ಮರಿಯಳ ಸಹಾಯ ಯಾಚಿಸಿದರಂತೆ. ಬಿರುಗಾಳಿ ತಗ್ಗಿ ನೌಕೆ ಸುರಕ್ಷಿತವಾಗಿ ದಡ ಸೇರುತ್ತದೆ. ದಡದಲ್ಲಿ ಅವರಿಗೆ `ಅರ್ಧ ಚಂದ್ರನ ಮೇಲೆ ನಿಂತ ಭಂಗಿಯಲ್ಲಿ ಬಾಲ ಯೇಸುವನ್ನು ಹೊತ್ತ ಮಾತೆ ಮರಿಯಳ ಸ್ವರೂಪವೊಂದು ಸಿಗುತ್ತದೆ. ಒಂದು ಗುಡಿ ಕಟ್ಟಿ ಅದರ ಪ್ರತಿಷ್ಠಾಪನೆ ಮಾಡಿದ ಬಳಿಕ ನೌಕೆಯಲ್ಲಿದ್ದವರು ಪ್ರಯಾಣ ಮುಂದುವರಿಸುತ್ತಾರೆ.
ಸಂತ ಮಾತೆ ಮರಿಯ, ಕರ್ನಾಟಕ ಮಾತೆ:
ಶಿವಾಜಿನಗರದ ಮಾತೆ ಮರಿಯಳನ್ನು ಕೆಲವೊಮ್ಮೆ ಕರ್ನಾಟಕ ಮಾತೆ, ಕರ್ನಾಟಕ ಭುವನೇಶ್ವರಿ ಎಂದು ಸಂಬೋಧಿಸಿದ್ದೂ ಉಂಟು. ಶಿವಾಜಿನಗರದ ವಾರ್ಷಿಕ ಹಬ್ಬದ ಸಂದರ್ಭದಲ್ಲಿ, ಒಂಬತ್ತು ದಿನಗಳ ಮೊದಲ ಆರಂಭವಾಗುವ ಒಂಬತ್ತು ದಿನಗಳ ನವೇನಾ ಪ್ರಾರ್ಥನೆಗಳ ಆರಂಭದ ದಿನದಂದು ಧ್ವಜವನ್ನು ಹಾರಿಸಲಾಗುತ್ತದೆ. ಆಗ, ಆಶೀರ್ವಚನ ನೀಡಲು ಬರುವ ಬೆಂಗಳೂರು ಮಹಾಧರ್ಮಕ್ಷೇತ್ರದ ಮಹಾಧರ್ಮಾಧ್ಯಕ್ಷರು ಮಾತೆ ಮರಿಯಳನ್ನು ಕರ್ನಾಟಕ ಮಾತೆ ಎಂದು ಸಂಬೋಧಿಸುವ ಪರಿಪಾಠವನ್ನು, ಬೆಂಗಳೂರು ಧರ್ಮಕ್ಷೇತ್ರದ ಹಿಂದಿನ ಮಹಾಧರ್ಮಾಧ್ಯಕ್ಷರಾದ ವಂದನೀಯ ಡಾ. ಬರ್ನಾಡ್ ಮೊರಾಸ್ ಅವರು ಆರಂಭಿಸಿಬಿಟ್ಟಿದ್ದಾರೆ.
ಹಿಂದಿನ ಅಭಿಜಿತ ಬಂಗಾಳದ ಖ್ಯಾತ ಸಾಹಿತಿ ಬಂಕಿಮಚಂದ್ರ ಚಟ್ಟೊಪಾಧ್ಯಾಯರು, ತಮ್ಮ `ಆನಂದ ಮಠ ಕಾದಂಬರಿಯಲ್ಲಿ ಜನ್ಮಭೂಮಿಯನ್ನು ದೇವತೆಯಂತೆ ಕಂಡು ಸಂಭ್ರಮಿಸಿದ್ದಾರೆ. ಹೀಗಾಗಿ ಜನ್ಮ ಭೂಮಿಯನ್ನು ದೇವತೆಯಂತೆ ಕಲ್ಪಿಸಿಕೊಳ್ಳುವ ಚಿಂತನೆ ಇಪ್ಪತ್ತನೇ ಶತಮಾನದಲ್ಲಿ ಆರಂಭವಾಯಿತು ಎಂದು ಹೇಳಲಾಗುತ್ತದೆ. ಬಂಕಿಮಚಂದ್ರ ಚಟ್ಟೊಪಾಧ್ಯಾಯರ ಮೊದಲು, ಅದೇ ಬಂಗಾಳದ ನೋಬಲ್ ಪ್ರಶಸ್ತಿ ಪುರಸ್ಕೃತ ಕವಿ ರವೀಂದ್ರನಾಥ ಟಾಗೋರ್ ಮತ್ತು ಕಳೆದ ಶತಮಾನದ ಆಧ್ಯಾತ್ಮಿಕ ಗುರು ಶ್ರೀ ಅರವಿಂದೊ ಅವರು ಈ ಚಿಂತನೆಯನ್ನು ಹರಿಬಿಟ್ಟವರು ಎಂದು ಇತಿಹಾಸದ ಪುಟಗಳು ತಿಳಿಸುತ್ತವೆ.
ಜನ್ಮ ಭೂಮಿಯನ್ನು ಪುರುಷ ಪ್ರಧಾನವಾಗಿ ಪಿತೃ ಭೂಮಿ ಜೊತೆಗೆ ಪುಣ್ಯ ಭೂಮಿ ಎಂದೂ ಕರೆದುಕೊಳ್ಳುವ ಪ್ರಯತ್ನಗಳು ಅದೇ ಸಂದರ್ಭದಲ್ಲಿ ನಡೆದಿವೆ. ಅಂತಿಮವಾಗಿ, ಮಾತೃಭೂಮಿಯೇ ಮೇಲುಗೈ ಸಾಧಿಸಿದೆ.
ಜಗತ್ತಿನ ಬಹುತೇಕ ಸಂಸ್ಕೃತಿ, ಸಮುದಾಯಗಳಲ್ಲಿ ತಾಯಿಯ ಅಥವಾ ಮಾತೆಯ ಆರಾಧನೆ ಅನೂಚಾನವಾಗಿ ನಡೆದುಕೊಂಡು ಬಂದಿದೆ. ಭರತ ಖಂಡದ ಮಟ್ಟಿಗೆ ಬರುವುದಾದರೆ, ಮಾತೆ, ಜಗನ್ಮಾತೆ ಎಂದು ತಾಯಿಯನ್ನು, ಮಾತೆಯನ್ನು ಆರಾಧಿಸುವ ಪದ್ಧತಿ ಅನಾದಿಕಾಲದಿಂದಲೂ ಇದೆ. ಅವಳನ್ನು ಚಾಮುಂಡಿ, ಕಾಳಿ ಮುಂತಾದ ರೌದ್ರಾವತಾರಗಳಲ್ಲಿ ಆರಾಧಿಸಲಾಗುತ್ತದೆ.
ಮನುಕುಲಕ್ಕೆ ಕಂಟಕಪ್ರಾಯವಾಗಿದ್ದ, ಸೀತಾಳ ಸಿಡುಬು, ಮೈಲಿ ಬೇನೆ, ಕಾಲರ, ಪ್ಲೇಗು ಮುಂತಾದವನ್ನು ಬರಮಾಡುವ, ಬೇಡಿಕೊಂಡರೆ ಅವುಗಳಿಂದ ಮುಕ್ತಿಕೊಡುವ ದೇವತೆಗಳೆಂದು- ಸೀತಾಳಮ್ಮ, ಪ್ಲೇಗಮ್ಮ, ದುರ್ಗಮ್ಮ, ದ್ಯಾಮವ್ವ, ಶೆಟಿಗೆವ್ವ ಮೊದಲಾದವುಗಳನ್ನು ಆದರಿಸಲಾಗುತ್ತದೆ.
ಉತ್ತರ ಭಾರತದಲ್ಲಿ, ಸಿಡುಬು ರೋಗವನ್ನು ತರುವ, ಅದರಿಂದ ರಕ್ಷಣೆಯನ್ನು ಕೊಡುವ, ಹುಣ್ಣು, ಬೊಕ್ಕೆಗಳನ್ನು ನಿವಾರಿಸುವ, ಪಿಶಾಚಿಗಳನ್ನು ಓಡಿಸುವ ದೇವತೆಯೆಂದು ಗುರುತಿಸಲಾಗುವ ಸೀತಾಳ ದೇವಿಗೆ ವರ್ಷದ ಒಂದು ದಿನವನ್ನು ನಿಗದಿ ಮಾಡಲಾಗಿದೆ. ಭಾರತೀಯ ಪುರಾಣ ಕತೆಯ ಪ್ರಕಾರ ಶಿವ, ವಿಷ್ಣು, ಬ್ರಹ್ಮ ತ್ರಿಮೂರ್ತಿಗಳಲ್ಲಿ ಒಬ್ಬನಾದ ಮುಕ್ಕಣ್ಣ ಶಿವನ ಸಿಟ್ಟಿಗೆ ಗುರಿಯಾಗಿ ಮೂರನೆ ಕಣ್ಣು ಬಿಟ್ಟಡಾಗ ಬೂದಿಯಾದ ಕಾಮದೇವ/ ಕಾಮಣ್ಣನನ್ನು ಸುಟ್ಟು ಸಂಭ್ರಮಿಸುವ ಬಣ್ಣದ ಓಕುಳಿಯ ಹೋಳಿ ಹಬ್ಬದ ನಂತರದ ಎಂಟನೇ ದಿನವನ್ನು ಸೀತಾಳ ಅಷ್ಟಮಿ ಎಂದು ಹೆಸರಿಸಿ ಹಬ್ಬವನ್ನು ಆಚರಿಸಲಾಗುತ್ತದೆ. ದುರ್ಗೆಯ ಅವತಾರವೆಂದು ಗುರುತಿಸಲಾಗುವ ಸೀತಾಳಮ್ಮಳನ್ನು, ಒಂದು ಕೈಯಲ್ಲಿ ಕಸಬರಿಗೆ, ಇನ್ನೊಂದು ಕೈಯಲ್ಲಿ ಔಷಧಿ ನೀರಿನ ಕೊಡ ಹಿಡಿದುಕೊಂಡು, ಜ್ವರಾಸುರ- ಜ್ವರದ ಅಸುರ ಎನ್ನುವ ಕತ್ತೆಯ ಮೇಲೆ ಸವಾರಿ ಮಾಡುವ ದೇವತೆಯಂತೆ ಚಿತ್ರಿಸಲಾಗುತ್ತದೆ.
ಈ ನಾಡಿನ ಜಾಯಮಾನದಂತೆಯೇ ಬೆಂಗಳೂರಿನ ಶಿವಾಜಿನಗರದ ಸಂತ ಮಾತೆ ಮರಿಯಳು ನಮ್ಮ ನಾಡಿನಲ್ಲಿ ಇಂದು ಆರೋಗ್ಯ ಭಾಗ್ಯವನ್ನು ದಯಪಾಲಿಸುವ ದೇವತೆಯಾಗಿ ಕಂಗೊಳಿಸುತ್ತಿದ್ದಾಳೆ.
ಜಾತಿ, ಮತ, ಧರ್ಮ, ಭಾಷೆ, ರಾಜ್ಯಗಳ ಗಡಿಗಳನ್ನು ದಾಟುವ ಭಕ್ತಾದಿಗಳು ಆರೋಗ್ಯಕ್ಕಾಗಿ ಅವಳಲ್ಲಿ ಮೊರೆಯಿಡುವ ಸಂಪ್ರದಾಯಕ್ಕೆ ಇದುವರೆಗೂ ಯಾವುದೇ ಚ್ಯುತಿ ಬಂದಿಲ್ಲ.
ಕಾಲಕ್ರಮೇಣ ಕರ್ನಾಟಕ ಮಾತೆ- ಭುವನೇಶ್ವರಿಯ ಪ್ರತಿರೂಪವಾಗಿ ಬೆಂಗಳೂರಿನ ಶಿವಾಜಿನಗರದ ಮಾತೆ ಮರಿಯಳು ಕರ್ನಾಟಕ ಮಾತೆಯಾಗಿ ಜನಮಾನಸದಲ್ಲಿ ನೆಲೆಯೂರಬಹುದಾದ ಸಕಲ ಲಕ್ಷಣಗಳೂ ಗೋಚರಿಸುತ್ತಿರುವುದನ್ನು ಗಮನಿಸದೇ ಇರಲಾಗದು.
ಅಶ್ವತ್ಥ ಕಟ್ಟೆ ಮತ್ತು ಮಾತೆ ಮರಿಯಳ ಮಂಟಪಗಳು:
ಕೂಡು ರಸ್ತೆಗಳ ಅಂಚಿನಲ್ಲಿರುವ, ಸಕಲ ಸಾರ್ವಜನಿಕರಿಗೆ ಸದಾ ಕಾಲವೂ ಮುಕ್ತವಾಗಿರುವ ಮಾತೆ ಮರಿಯಳ ಮೋಹಕ ಮಂಟಪಗಳು, ದಿನದ ಯಾವುದೇ ಸಮಯದಲ್ಲೂ ಭಕ್ತಾದಿಗಳು ಸಾಗಿ ತಮ್ಮ ಪ್ರಾರ್ಥನೆಯನ್ನು, ಹರಕೆಯನ್ನು ಸಲ್ಲಿಸುವ ಮುಕ್ತ ಅವಕಾಶವನ್ನು ಒದಗಿಸಿವೆ.
ಇಲ್ಲಿ ನಿಗದಿತ ಸಮಯದ ನಿರ್ಬಂಧವಿಲ್ಲ. ಮಧ್ಯವರ್ತಿಯ ಗೊಡವೇ ಇಲ್ಲಿಲ್ಲ. ಎಲ್ಲರಿಗೂ ದೇವರೊಂದಿಗೆ `ನೇರಾ ನೇರಾ ಒಡನಾಟ. ಇದು ಆಸ್ತಿಕ ಭಕ್ತಾದಿಗಳ ಜನಪದ ಸಂಸ್ಕೃತಿ.
ಜನಪದರ ಸಂಸ್ಕೃತಿಯ ಅಂಗವಾಗಿರುವ ಜನಪದರ ಶ್ರದ್ಧಾಭಕ್ತಿಯ ಕೇಂದ್ರಗಳಾಗಿರುವ, ಈ ಮಾತೆ ಮರಿಯಳ ಮಂಟಪಗಳನ್ನು, ಪವಿತ್ರ ಸ್ಥಳಗಳೆಂದು ಜನಜನಿತಗೊಂಡಿರುವ ಅಶ್ವತ್ಥ ಮರಗಳಿರುವ ಕಟ್ಟೆಗಳಿಗೆ, ನಾಗರ ಕಲ್ಲುಗಳನ್ನು ಹೊಂದಿರುವ ಅಶ್ವತ್ಥ ಕಟ್ಟೆಗಳಿಗೆ ಹೋಲಿಸಿದರೆ ತಪ್ಪಾಗದು. ಈ ಅಶ್ವತ್ಥ ಅಥವಾ ಜನ ಬಳಕೆಯಲ್ಲಿ ಅರಳಿ ಮರಗಳಿರುವ ಕಟ್ಟೆಗಳು ಒಮ್ಮೊಮ್ಮೆ ಪ್ರತ್ಯೇಕವಾಗಿಯೂ ಕೆಲವೊಮ್ಮೆ ದೇವಾಲಯಗಳ ಭಾಗವಾಗಿಯೂ ಇರುವುದುಂಟು.
ಬೆಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ರುವ ಅಶ್ವತ್ಥ ಮರದ ಕಟ್ಟೆಗಳ ಕುರಿತಂತೆ ಬೆಂಗಳೂರಿನ `ಎವರಿಡೇ ಸಿಟಿ ಲ್ಯಾಬ್ ಸಂಸೆಯು, ೨೦೨೦ ಸಾಲಿನ ಪೂರ್ವಾರ್ಧದಲಿ, `ಅಶ್ವತ್ಥ ಕಟ್ಟೆ ಆಜ್ ಎ ನೇಬರಹುಡ್ ಕಮ್ಯುನಿಟಿ ಸ್ಪೇಸ್ ಇನ್ ಬೆಂಗಳೂರು ವಿವರಣೆಯೊಂದಿಗೆ `ದಿ ಸೇಕ್ರೆಡ್ ಆಂಡ್ ಪಬ್ಲಿಕ್ ಹೆಸರಿನ ಹೊತ್ತಿಗೆಯೊಂದನ್ನು ಇಂಗ್ಲಿಷ್ ಭಾಷೆಯಲ್ಲಿ ಹೊರತಂದಿದೆ.
ಕೆಲವು ವರ್ಷಗಳ ಹಿಂದೆ `ನೆರಳು ಸಂಸ್ಥೆಯ ಆಶ್ರಯದಲ್ಲಿ ಬೆಂಗಳೂರು ವೃಕ್ಷಗಳ ಉತ್ಸವದಲ್ಲಿ ಭಾಗವಹಿಸಿದ್ದ `ಎವರಿಡೇ ಸಿಟಿ ಲ್ಯಾಬ್ ಸಂಸ್ಥೆಯ ಸಹ ಸಂಸ್ಥಾಪಕಿ ಕಿರಣ್ ಕೇಸ್ವಾನಿ, ಆಸಕ್ತಿ ತಳೆದು ಬೆಂಗಳೂರಿನಲ್ಲಿರುವ ಅಶ್ವತ್ಥ ಕಟ್ಟೆಗಳ ಬಗ್ಗೆ ಸಂಶೋಧನಾ ಪ್ರಬಂಧ ಸಿದ್ಧಪಡಿಸುವ ಆಶಯದಿಂದ, ಎರಡು ವರ್ಷಗಳ ಹಿಂದೆಯೇ ಅಜೀಂ ಪ್ರೇಮಜೀ ವಿಶ್ವವಿದ್ಯಾಲಯದ ಕದ ತಟ್ಟಿದ್ದರು. ಅದರ ಫಲವಾಗಿ ಹೊರಬಂದಿರುವ ಈ ಪುಸ್ತಕದಲ್ಲಿ ಬೆಂಗಳೂರಿನ ೨೦ ಅಶ್ವತ್ಥ ಕಟ್ಟೆಗಳ ಬಗೆಗೆ, ಆಯಾ ಕಟ್ಟೆಗಳ ಹತ್ತಿರದ ತಲಾ ೨೦ ಜನರನ್ನು ಸಂಪರ್ಕಿಸಿ ಸಮಗ್ರ ಅಧ್ಯಯನ ನಡೆಸಲಾಗಿದೆ.
ಬೆಂಗಳೂರಿನಲ್ಲಿರುವ ಆಸ್ತಿಕರ ಶ್ರದ್ಧಾ ಕೇಂದ್ರಗಳಾಗಿರುವ ಅಶ್ವತ್ಥ ಕಟ್ಟೆಗಳ ಬಗೆಗೆ ಆಸಕ್ತರು ಅಧ್ಯಯನ ನಡೆಸಿದಂತೆ ಬೆಂಗಳೂರಿನ ವಿವಿಧ ಬಡಾವಣೆಗಳಲ್ಲಿರುವ ಮಾತೆ ಮರಿಯಳ ಮಂಟಪಗಳ ಕುರಿತು ಅಧ್ಯಯನ ನಡೆದಿಲ್ಲ.
ಯಾರಾದರು ಆಸಕ್ತರು ಈ ನಿಟ್ಟಿನಲ್ಲಿ ಅಧ್ಯಯನ ನಡೆಸಬೇಕಿದೆ. ಬೆಂಗಳೂರಿನ ಯೇಸು ಸಭೆಗೆ ಸೇರಿದ ಸಂತ ಜೋಸೆಫ್‌ರ ಕಾಲೇಜು ಇಂದು ಸ್ವಾಯತ್ತ ಕಾಲೇಜು ಮತ್ತು ಕ್ರೈಸ್ಟ್ ಕಾಲೇಜು ವಿಶ್ವವಿದ್ಯಾಲಯವಾಗಿ ಮೇಲ್ದರ್ಜೆಗೆ ಏರಿದೆ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಹಲವಾರು ಕ್ರೈಸ್ತ ಸನ್ಯಾಸಿ ಸಭೆಗಳು ಮತ್ತು ಖಾಸಗಿಯಾಗಿ ಕ್ರೈಸ್ತರೇ ನಡೆಸುವ ಸ್ನಾತಕೋತ್ತರ ಕೇಂದ್ರಗಳನ್ನು ಹೊಂದಿರುವ ಕಾಲೇಜುಗಳಿವೆ. ರಾಜ್ಯದ ಕೆಲವು ವಿಶ್ವವಿದ್ಯಾಲಯಗಳಲ್ಲಿ ಕ್ರೈಸ್ತ ಅಧ್ಯಯನ ಪೀಠಗಳಿವೆ. ಆದರೂ ಈ ನಿಟ್ಟಿನಲ್ಲಿ ಅಂದರೆ ಶ್ರದ್ಧಾ ಕೇಂದ್ರಗಳಾದ ಮೇರಿ ಮಾತೆಯ ಮೋಹಕ ಮಂಟಪಗಳ ಕುರಿತ ಅಧ್ಯಯನಕ್ಕೆ ಇನ್ನೂ ಮಹೂರ್ತ ಕೂಡಿಬಂದಂತಿಲ್ಲ. ಇದು ವಿಷಾದದ ಸಂಗತಿ.
**********
No comments:
Post a Comment