Tuesday, 10 November 2020

ಬದ್ಧತೆ - ಡಾ. ಫಾ. ವಿಜಯ ಕುಮಾರ್ ಪಿ

 ಬದ್ಧತೆಯ ಬದುಕು ಮಾನವನ ಸಮಗ್ರ ಅಭಿವೃದ್ಧಿಗೆ ನಾಂದಿಯಾಗುತ್ತದೆ. ಬದ್ಧತೆಯು ಒಂದು ಅತ್ಯುತ್ತಮ ಶೀಲ. ಬದ್ಧತೆಯುಳ್ಳ ಮಾನವ ಸ್ಥಿರತೆಯಲ್ಲಿ ಬೇರೂರಿ ಶುದ್ಧ ಬದುಕನ್ನು ರೂಪಿಸಿಕೊಳ್ಳುತ್ತಾನೆ. ಸಮಾಜದ ಅಭ್ಯುದಯಕ್ಕೆ ಅವನು ಉತ್ತಮ ಕೊಡುಗೆಗಳನ್ನು ಕೊಡುವವನಾಗುತ್ತಾನೆ. ಈ ಬದ್ಧತೆಯ ಶೀಲವನ್ನು ಪುಟ್ಟ ವಯಸ್ಸಿನಿಂದಲೆ ರೂಢಿಸಿಕೊಳ್ಳಲು ಪ್ರಾರಂಭಿಸಿದರೆ ಅದು ಜೀವನದುದ್ದಕ್ಕೂ ಉತ್ತಮ ಕಾರ್ಯ ಸಾಧನೆಗೆ ಮಾರ್ಗ ಸೂಚಿಯಾಗುತ್ತದೆ.ಬದ್ಧತೆ ಎಂದರೆ ಒಬ್ಬ ವ್ಯಕ್ತಿ ಒಂದು ನಿಖರವಾದ ಉತ್ತಮ ಕಾಯಕದಲ್ಲಿ ತನ್ನನ್ನು ತಾನೇ ಮರೆತು ಸಂಪೂರ್ಣವಾಗಿ ತೊಡಗಿಸಿಕೊಳ್ಳುವುದು. ಜನೋಪಯೋಗಿ ಕಾಯಕದಲ್ಲಿ ತನ್ಮಯನಾಗುವುದು. ಬದ್ಧತೆ ಎಂದರೆ ಮಾನವಕುಲಕ್ಕೆ ಒಳಿತಾಗುವ ಯಾವುದೇ 

ಕಾಯಕ ಮಾಡಿದರೂ ಅದನ್ನು ಪ್ರಾಮಾಣಿಕತೆಯಿಂದಲೂ, ಶ್ರದ್ಧೆಯಿಂದಲೂ, ವಿಚಲಿತನಾಗದೆ, ಕುಹಕಮಾತುಗಳಿಗೆ ಕಿವಿಗೊಡದೆ ಉತ್ತಮವಾಗಿ ಮಾಡುವುದು. ಹೀಗೆ ಮಾಡಿದಾಗ ಅಂಥ ಕಾಯಕವು ಮನಸ್ಸಿಗೆ ನೆಮ್ಮದಿಯನ್ನೂ ಜೀವನಕ್ಕೆ ಸಂತೃಪ್ತಿಯನ್ನೂ ನೀಡುತ್ತದೆ. ಇದನ್ನೇಸಂತ ಪೌಲನುನೀವು ಏನನ್ನು ಮಾಡಿದರೂ ಪೂರ್ಣ ಮನಸ್ಸಿನಿಂದ ಮಾಡಿ; ಮನುಷ್ಯರನ್ನು ಮೆಚ್ಚಿಸುವುದಕ್ಕಾಗಿ ಅಲ್ಲ, ಪ್ರಭುವನ್ನು ಮೆಚ್ಚಿಸುವುದಕ್ಕಾಗಿ ಮಾಡಿ(ಕೊಲೊಸ್ಸೆ ೩:೨೩) ಎಂದು ಪ್ರೇರೇಪಿಸುತ್ತಾನೆ. ಆದರೆ ಇಂದು ಮಾನರಲ್ಲಿ ಇಂಥಹ ಬದ್ಧತೆ ಮಾಯವಾಗುತ್ತಿದೆ. ಎಲ್ಲಾ ಕಾರ್ಯಕ್ಷೇತ್ರಗಳಲ್ಲಿಯೂ ಬದ್ಧತೆ ಕುಸಿದುಹೋಗುತ್ತಿರುವುದು ಮಾನವನ ಅಧಃಪತನಕ್ಕೆ ನಾಂದಿಯಾಗುತ್ತಿದೆ.

ಮಾನವನಲ್ಲಿ ಬದ್ಧತೆ ಮರೆಯಾದರೆ ಸಾಮಾಜಿಕ ಆರ್ಥಿಕ ಹಾಗೂ ಶೈಕ್ಷಣಿಕ ಬೆಳವಣಿಗೆಗಳು ಮಾತ್ರವಲ್ಲ ಮಾನವನ ಪರಿಪೂರ್ಣತೆಗೆ ಅತಿ ಅವಶ್ಯವಾಗಿರುವ ಅಧ್ಯಾತ್ಮದ ಬೆಳವಣಿಗೆಯ ಮೆಲುಗಳು ಸಹ ಕುಸಿದುಬಿದ್ದು ಸರ್ವ ಪ್ರಗತಿಯು ಸ್ತಬ್ಧವಾಗುತ್ತವೆ. ಆಗ ಮಾನವನ ಕನಸುಗಳು, ಭರವಸೆಗಳು ಮತ್ತು ನಂಬಿಕೆಗಳು ನುಚ್ಚುನೂರಾಗಿ ಜೀವನ ಭ್ರಮನಿರಸನ ಹೊಂದಿ ಸಂಕಷ್ಟದ ಸುಳಿಯಲ್ಲಿ ಸಿಲುಕಿಕೊಳ್ಳುತ್ತದೆ. ಇದರಿಂದ ಹೊರಬಂದು ಮತ್ತೆ ಜೀವನ ಕಟ್ಟಿಕೊಳ್ಳಲು ಅತೀ ಪ್ರಯಾಸ ಪಡಬೇಕಾಗುತ್ತದೆ. ಬದ್ಧತೆಯ ಬದುಕು ಮಾನವನ ಸಕಾರಾತ್ಮ ಪ್ರಗತಿಗೆ ಪೂರಕವಾಗಿ ಕಾರ್ಯ ನಿರ್ವಹಿಸುತ್ತದೆ. ಆದರೆ ಇಂದು ಮಾನವನ ಬದುಕಿನಲ್ಲಿ ಬದ್ಧತೆ ಮರೀಚಿಕೆಯಾಗಿ ಲಂಚಾವತಾರ, ಕಬಳಿಕೆ, ಮೋಸ ವಂಚನೆಗಳು, ಲಂಪಟತನ ಮುಗಿಲು ಮುಟ್ಟುತ್ತಿವೆ. ಮಾನವ ತನ್ನ ನೈಜತೆಯನ್ನು ಮರೆತು ಈ ಲೋಕದ ಯಾಂತ್ರಿಕ ಬದುಕಿಗೆ ಮಾರುಹೋಗಿ ಯಂತ್ರದಂತೆ ದುಡಿದು ಸವಕಲಾಗುತ್ತಿದ್ದಾನೆ. ಆತ್ಮಸಾಕ್ಷಾತ್ಕಾರದ ಪರಿವೆ ಇಲ್ಲದೆ ಕಂಡೂ ಕಾಣದಂತೆ ಮಾಯವಾಗುವ ಹಣ-ಅಂತಸ್ತಿನ ವ್ಯಾಮೋಹಕ್ಕೆ ಬಲಿಯಾಗಿ ಕತ್ತಲೆಯ ಕೂಪದಲ್ಲಿ ಸಿಲುಕಿ ದಿಕ್ಕುತೊಚದೆ ನಲುಗುತ್ತಿದ್ದಾನೆ. ಯಾಕೆಂದರೆ ಬದ್ಧತೆ ಇಲ್ಲದ ಬದುಕು ಸವಿ ಇಲ್ಲದ ಜೇನಂತೆ, ಪಾಳುಬಿದ್ದ ಮನೆಯಂತೆ.

ಬದ್ಧತೆಯನ್ನು ಮರೆತು ಕ್ಷಣ-ಕ್ಷಣಕ್ಕೂ ಸ್ವಾರ್ಥಿಯಾಗುತ್ತಿರುವ ಮಾನವ ಈ ಲೋಕದ ಸರ್ವ ಸಂಕೋಲೆಗಳಿಂದ ಮುಕ್ತನಾಗಲು ನಿರಂತರವೂ ದೇವರೆಡೆಗೆ ಸಾಗುತ್ತಿರಬೇಕು. ಯಾಕೆಂದರೆ ದೇವರೆ ಮಾನವನಿಗೆ ಆದಿಯೂ ಅಂತ್ಯವೂ ಸರ್ವ ಶ್ರೀಮಂತಿಕೆಯೂ ಆಗಿದ್ದಾರೆ. ಅವರನ್ನು ಮರೆತು ಮಾನವನು ಬೇರೆಲ್ಲದರಲ್ಲಿ ಬದ್ಧನಾಗಿದ್ದರೂ ಅತನ ಬಾಳು ಸಂಪೂರ್ಣವಾಗುವುದಿಲ್ಲ. ಈ ಕಾರಣ ಮಾನವ ತನ್ನ ಸೃಷ್ಟಿಯ ಪ್ರಭುವಿಗೆ ನಿರಂತರವೂ ಬದ್ಧನಾಗಿರಲು ಕರೆ ಹೊಂದಿದ್ದಾನೆ. ದೇವರು ಸದ್ಭಕ್ತನಾಗಿದ್ದ ನೋವನಿಗೆನರಮಾನವರೆಲ್ಲರಿಗೆ ಸರ್ವನಾಶವನ್ನು ತೀರ್ಮಾನಿಸಿದ್ದೇನೆ. ಜಗವೆಲ್ಲವೂ ಹಿಂಸಾಚಾರದಿಂದ ತುಂಬಿಹೋಗಿದೆ. ನಾನು ಅವರನ್ನೂ,            ಜಗದಲ್ಲಿರುವುದೆಲ್ಲವನ್ನೂ ಅಳಿಸಿಬಿಡುತ್ತೇನೆ. ನೀನು ತುರಾಯಿಮರದಿಂದ ನಾವೆಯೊಂದನ್ನು ಮಾಡಿಕೊ; ಅದರ ತುಂಬ ಕೊಠಡಿಗಳಿರಲಿ; ಅದರ ಒಳಕ್ಕೂ ಹೊರಕ್ಕೂ ರಾಳಪದಾರ್ಥವನ್ನು ಹಚ್ಚು(ಆದಿಕಾಂಡ ಅಧ್ಯಾಯ ೬:೧೩-೧೪)ರು.ನೋವನು ದೈವಾಜ್ಞೆಗೆ ಬದ್ಧನಾಗಿ ನಾವೆಯನ್ನು ಕಟ್ಟುತ್ತಿರುವಾಗ ಹಲವರು ಮೂದಲಿಸಿದರು, ಕುಹಕದ ಮಾತನಾಡಿದರು, ದಡ್ಡನೆಂದು ಜರಿದರು. ಆದರೆ ನೋವ ಮಾತ್ರ ದೈವಾಜ್ಞೆಯನ್ನು ಮೀರದೆ ಬದ್ಧತೆಯಿಂದ ನಡೆದುಕೊಂಡನು, ರಕ್ಷಣೆಯನ್ನು ಹೊಂದಿದನು. ಮಿಕ್ಕೆಲ್ಲರೂ ಜಲಾವೃತವಾಗಿ ಅಂತ್ಯಗೊಂಡರು.ಮನುಷ್ಯರುಮೊದಲ್ಗೊಂಡು ಪ್ರಾಣಿಪಕ್ಷಿ, ಕ್ರಿಮಿಕೀಟದವರಗೆ ಭೂಮಿಯ ಮೇಲಿನದೆಲ್ಲವೂ ನಾಶವಾಯಿತು. ನೋವನು ಹಾಗೂ ಅವನೊಂದಿಗೆ ನಾವೆಯಲ್ಲಿದ್ದ ಜೀವಿಗಳು ಮಾತ್ರ ಉಳಿದುಕೊಂಡವು. ಪ್ರಳಯದ ನೀರು ಭೂಮಿಯ ಮೇಲೆ ನೂರೈವತ್ತು ದಿನಗಳವರೆಗೂ ಪ್ರಬಲವಾಗಿಯೇ ಇತ್ತು(ಆದಿಕಾಂಡ ೭:೨೩-೨೪). ಅಂದು ಜಗವಿಡೀ ಕೆಟ್ಟುಹೋದರೂ ದೇವರು ಮಾತ್ರ ತಮ್ಮ ಬದ್ಧತೆಯಿಂದ ಹಿಂದೆ ಸರಿಯಲಿಲ್ಲ ಬದಲಾಗಿಬಿತ್ತನೆ-ಕೊಯಿಲು, ಚಳಿ-ಬಿಸಿಲು, ಗ್ರೀಷ್ಮ-ಹೇಮಂತ, ಹಗಲು-ಇರುಳು ಈ ಕ್ರಮಕ್ಕೆ ಇರದು ಅಂತ್ಯ ಜಗವಿರುವವರೆಗು(ಆದಿಕಾಂಡ ೮:೨೨) ಎಂದು ನೋವನ ಬದ್ಧತೆಗೆ ದೇವರು ಅಭಯವನ್ನಿತ್ತರು. ಅಂದಿನಿಂದ ಇಂದಿನವರೆಗೂ ಮಾನವನ ಬದ್ಧತೆಯಲ್ಲಿ ಕೊರತೆ ಕಂಡುಬಂದರೂ ದೇವರು ಮಾತ್ರ ಮಾನವನ ರಕ್ಷಣೆಗೆ ಬದ್ಧರಾಗಿದ್ದಾರೆ.

ಆದರೆ ಈ ಸತ್ಯವನ್ನು ಗ್ರಹಿಸಿಕೊಳ್ಳುವುದರಲ್ಲಿ ಮಾನವ ಇನ್ನೂ ಸಹ ಆಸಕ್ತಿ ತೋರದಿರುವುದು ವಿಪರ್ಯಾಸ. ಆದರೆ ದೇವರು ಮಾನವನ ರಕ್ಷಣಾ ಕಾರ್ಯವನ್ನು ಮುಂದವರಿಸುತ್ತಲೇ ಇದ್ದಾರೆ. ಮಾನವ ಕುಲದ ರಕ್ಷಕರಾಗಿ ಆಗಮಿಸಿದ ಪ್ರಭು ಯೇಸು ಸಹ ಮಾನವನನ್ನು ಬದ್ಧತೆಯ ಬದುಕಿಗೆ ಆಹ್ವಾನಿಸುತ್ತಾನಿನ್ನ ಸರ್ವೇಶ್ವರನಾದ ದೇವರನ್ನು ನಿನ್ನ ಪೂರ್ಣ ಹೃದಯದಿಂದಲೂ ನಿನ್ನ ಪೂರ್ಣ ಆತ್ಮದಿಂದಲೂ ನಿನ್ನ ಪೂರ್ಣ ಮನಸ್ಸಿನಿಂದಲೂ ಪ್ರೀತಿಸು. ಇದೇ ಪ್ರಮುಖ ಹಾಗೂ ಪ್ರಥಮ ಆಜ್ಞೆ. ಇದಕ್ಕೆ ಸರಿ ಹೊಂದುವ ಎರಡನೇ ಆಜ್ಞೆ ಯಾವುದೆಂದರೆ,ನಿನ್ನನ್ನು ನೀನೇ ಪ್ರೀತಿಸಿಕೊಳ್ಳುವಂತೆ ನಿನ್ನ ನೆರೆಯವನನ್ನೂ ಪ್ರೀತಿಸು (ಮತ್ತಾಯ ೨೨:೩೭-೩೮)ಎನ್ನುತ್ತಾರೆ. ಆದರೆ ಮಾನವ ಈ ದೈವಾಜ್ಞೆಗೆ ಬದ್ಧನಾಗುವ ಬದಲು ಲೌಕಿಕ ಆಶೆಆಕಾಂಕ್ಷೆಗಳಿಗೆ ಬದ್ಧನಾಗಿ ಸ್ವಾರ್ಥದಿಂದ ತುಂಬಿ ತನ್ನ ದುಷ್ಟತನವನ್ನು ಮುಂದುವರಿಸುತ್ತಿದ್ದಾನೆ. ಆದರೆ ಪ್ರಭುಯಾರಿಗಾದರೂ ನನ್ನನ್ನು ಹಿಂಬಾಲಿಸಲು ಮನಸ್ಸಿದ್ದರೆ, ಅವನು ತನ್ನನ್ನು ತಾನೇ ಪರಿತ್ಯಜಿಸಿ, ತನ್ನ ಶಿಲುಬೆಯನ್ನು ಅನುದಿನವೂ ಹೊತ್ತುಕೊಂಡು ನನ್ನನ್ನು ಹಿಂಬಾಲಿಸಲಿ. ತನ್ನ ಪ್ರಾಣವನ್ನು ಉಳಿಸಿಕೊಳ್ಳಲು ಹಾತೊರೆಯುವವನು ಅದನ್ನು ಕಳೆದುಕೊಳ್ಳುವನು. ಆದರೆ ನನ್ನ ನಿಮಿತ್ತ ತನ್ನ ಪ್ರಾಣವನ್ನು ಕಳೆದುಕೊಳ್ಳುವವನು ಅದನ್ನು ನಿತ್ಯಕ್ಕೂ ಉಳಿಸಿಕೊಳ್ಳುವನು. ಒಬ್ಬನು ಪ್ರಪಂಚನ್ನೆಲ್ಲಾ ಗೆದ್ದುಕೊಂಡು ತನ್ನ ಪ್ರಾಣವನ್ನೇ ಕಳೆದುಕೊಂಡರೆ ಅಥವಾ ತೆತ್ತರೆ ಅವನಿಗೆ ಅದರಿಂದ ಬರುವ ಲಾಭವಾದರೂ ಏನು?(ಲೂಕ ೯:೨೩-೨೫) ಎಂದು ಮರಳಿ ಎಚ್ಚರಿಸುತ್ತಾರೆ. ಯಾರು ಈ ಎಚ್ಚರಿಕೆಗೆ ಕಿವಿಗೊಡುವರೋ ಅಂಥವರು ಬದ್ಧತೆಯ ಬದುಕಿಗೆ ಮರಳಿ, ರಕ್ಷಣೆಯ ಆನಂದ ಸವಿಯನ್ನು ಸವಿಯ ಬಲ್ಲರು. ಆದರೆ ಯೇಸುನೇಗಿಲಿಗೆ ಕೈಹಾಕಿ ಹಿಂದಕ್ಕೆ ನೋಡುವವನು ದೇವರ ಸಾಮ್ರಾಜ್ಯಕ್ಕೆ ತಕ್ಕವನಲ್ಲ(ಲೂಕ ೯:೬೧) ಎಂದು ಸಹ ಮುನ್ನೆಚ್ಚರಿಕೆ ನೀಡುತ್ತಾರೆ.ಇದನ್ನು ಸಮಗ್ರವಾಗಿ ಗ್ರಹಿಸಿಕೊಂಡಿದ್ದ ಪೌಲನು ತನ್ನ ಬದ್ಧತೆಯನ್ನುನನಗಂತೂ ಬದುಕುವುದೆಂದರೆ ಕ್ರಿಸ್ತಯೇಸುವೇ; ಸಾಯುವುದು ಲಾಭವೇ(ಫಿಲಿಪ್ಪಿಯರಿಗೆ ೧:೨೧) ವ್ಯಕ್ತಪಡಿಸುತ್ತಾನೆ.

ರೆ ದೇವರ ಚಿತ್ತಕ್ಕೆ ಬದ್ಧರಾಗಿ ಈ ಸುಂದರ ಜೀವನದ ಸವಿಯನ್ನು ಅರ್ಥೈಸಿ ಕೊಳ್ಳುವವರು ಸರ್ವಕಾಲದಲ್ಲಿಯೂ ಸ್ಮರಣೆಗೆ ಪಾತ್ರರಾಗುತ್ತಾರೆ. ಗಾಂಧೀಯವರು ಸ್ವಾತಂತ್ರ್ಯದ ಹೋರಾಟದಲ್ಲಿ ಬದ್ಧತೆಯನ್ನು ಪ್ರದರ್ಶಿಸಿದರು. ಡಾ. ಅಬ್ದುಲ್ ಕಲಾಂ ಬದ್ಧತೆಗೆ ಪತೀಕವಾಗಿದ್ದರು. ಸಂತರಾದ ಕಲ್ಕತ್ತದ ಮದರ್ ತೆರೇಸ ತಮ್ಮ ಜೀವನದುದ್ದಕ್ಕೂ ಕ್ರಿಸ್ತನಿಗೆ ಬದ್ಧರಾಗಿದ್ದರು. ಹೀಗೆ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ನಾವು ನಮ್ಮ ಜೀವನದ ಪಥದಲ್ಲಿ ಬದ್ಧತೆಯನ್ನು ರೂಢಿಸಿಕೊಂಡರೆ ಈ ಮುಗಿವಿಲ್ಲದ ಪಟ್ಟಿಯಲ್ಲಿ ಸೇರಿಕೊಳ್ಳುವುದು ಮಾತ್ರವಲ್ಲ ನಿರಂತರ ಹೊಳೆಯುವ ದೃವತಾರೆಯಾಗಬಹುದು!

   ---------------------------------

ಡಾ. ಫಾ. ವಿಜಯ ಕುಮಾರ್ ಪಿ, 

ಬಳ್ಳಾರಿ ಧರ್ಮಕ್ಷೇತ್ರ

---------------------------------



No comments:

Post a Comment

ಎತ್ತಿತೋರಿಸಲಾದ ಪೋಸ್ಟ್

ಅನ್ನಮ್ಮ’ಳಿಗೆ ೨೫೦ರ ಹಾಗೂ ಅತಿ.ವಂ.ಪೊತ್ತಕಮೂರಿಗೆ ೫೦ರ ಸ್ಮರಣೆಯ ಸಂಭ್ರಮ

ಬೆಂಗಳೂರಿನ ಉತ್ತರಹಳ್ಳಿಯ ಅನ್ನಮ್ಮನ ಬೆಟ್ಟ, ಅಲ್ಲಿನ ಅನ್ನಮ್ಮಳ ಸಮಾಧಿ, ಆ ಬೆಟ್ಟದ ಮೇಲಿನ ಶಿಲುಬೆ, ಅಲ್ಲಿ ಪ್ರತಿವರ್ಷ ತಪಸ್ಸು ಕಾಲದ ಐದನೇ ಭಾನುವಾರ ನಡೆಯುವ ಯೇಸು...