ಭರತಖಂಡದ ಧಾರ್ಮಿಕ ಗ್ರಂಥಗಳಾದ ವೇದಗಳು ಕ್ರಿಸ್ತಶಕ ಪೂರ್ವ ೧೭೦೦-೧೧೦೦ ವರ್ಷಗಳ ಹಿಂದೆ ರಚನೆಗೊಂಡಿವೆ. ಅವುಗಳ ರಚನೆಯಕಾಲದ ಪ್ರಕಾರ ಪಟ್ಟಿ ಮಾಡಿದಾಗ ಮೊದಲು ಋಗ್ವೇದ, ನಂತರ ಯಜುರ್‍ವೇದ, ಆನಂತರ ಸಾಮವೇದ, ಕೊನೆಗೆ ಅಥರ್ವಣ ವೇದ ಬರುತ್ತದೆ. ವೇದವನ್ನು ಸಂಹಿತೆ, ಬ್ರಾಹ್ಮಣ, ಅರಣ್ಯಕ ಮತ್ತು ಉಪನಿಷತ್‌ಎಂದು ವಿಂಗಡಿಸಲಾಗುತ್ತದೆ. ಮೊದಲಿನ ಮೂರು ಆಚರಣೆಗಳಿಗೆ ಮಹತ್ವ ನೀಡಿದ್ದರೆ, ಕೊನೆಯದಾದ ಉಪನಿಷತ್ತು ತತ್ವ ಜಿಜ್ಞಾಸೆಗೆ ಮುಡಿಪಾಗಿದೆ. ನಂತರದ ಕಾಲದಲ್ಲಿ ವಿವಿಧ ದೈವಿ ಶಕ್ತಿಗಳ, ದೇವರುಗಳ, ದೇವರ ಅವತಾರಗಳ ಹೆಚ್ಚುಗಾರಿಕೆಯನ್ನು ಸಾರಲು ೧೮ ಪುರಾಣಗಳು ರಚನೆಗೊಂಡವು ಎಂದು ಹೇಳಲಾಗುತ್ತದೆ.
ವೈವಿಧ್ಯತೆಯ ಬೀಡಾಗಿರುವ ಭರತಖಂಡದಲ್ಲಿ, ಜಗತ್ತಿನ ಸೃಷ್ಟಿಯ ಕುರಿತು ಹಲವಾರು ಕತೆಗಳಿವೆ. ಸೃಷ್ಟಿ ಒಂದೇ ಒಂದು ಕತೆಗೆ ಸೀಮಿತಗೊಂಡಿಲ್ಲ. ವೇದಗಳು, ಪುರಾಣಗಳು ಜಗತ್ತಿನ ಹುಟ್ಟಿನ ಬಗೆಗೆ ವಿವಿಧ ಬಗೆಯಲ್ಲಿ ವಿವರಣೆಗಳನ್ನು ನೀಡಿವೆ.* ಅವುಗಳಲ್ಲಿ ಹಿರಣ್ಯಗರ್ಭದ (ಬಂಗಾರದ ಮೊಟ್ಟೆ) ಪ್ರಸ್ತಾಪ ಹೆಚ್ಚಾಗಿ ಕಾಣಿಸಿಕೊಂಡಿದೆ.
ಆಗ ಎಲ್ಲ ಕಡೆಗೂ ಕತ್ತಲು ಆವರಿಸಿಕೊಂಡಿತ್ತು. ಎಲ್ಲವೂ ಒಂದು ಬಗೆಯಲ್ಲಿ ನಿದ್ರಾವಸ್ಥೆಯಲ್ಲಿ ಇದ್ದಂತಿತ್ತು. ಆಗ ಎಲ್ಲವೂ ಶೂನ್ಯವಾಗಿತ್ತು. ಯಾವ ಚಲನೆಯೂ ಇರಲಿಲ್ಲ, ಸ್ಥಿರವಾದದ್ದೂ ಇರಲಿಲ್ಲ. ಆಗ ಸ್ವಯಂಭು- ನಿರಾಕಾರದ, ಅರಿವಿಗೆ ಬಾರದ ಶಕ್ತಿಯೊಂದು ತನ್ನಿಂದ ತಾನೆ ಹುಟ್ಟಿತು. ಅದು ಆದಿ ಜಲರಾಶಿಯನ್ನು ಸೃಷ್ಟಿಸಿತು. ಅದರಲ್ಲಿ ಸೃಷ್ಟಿಯ ಬೀಜವನ್ನು ಪ್ರತಿಷ್ಠಾಪಿಸಿತು. ಆ ಸೃಷ್ಟಿ ಬೀಜ ಬಂಗಾರದ ಗರ್ಭ (ಬಂಗಾರದ ಮೊಟ್ಟೆ) - ಹಿರಣ್ಯಗರ್ಭದ ಆಕಾರ ತಾಳಿತು. ನಂತರ ಸ್ವಯಂಭು, ಆ ಹಿರಣ್ಯಗರ್ಭದ ಮೊಟ್ಟೆಯನ್ನು ಪ್ರವೇಶಿಸಿತು ಎಂದು ಮತ್ಸ್ಯ ಪುರಾಣ ಹೇಳುತ್ತದೆ.
ಋಗ್ವೇದ ಹೇಳುವ ಪ್ರಕಾರ, ಆದಿಯಲ್ಲಿ ದೈವಿ ಶಕ್ತಿ ಪುರುಷ ಇತ್ತು. ಅದಕ್ಕೆ ಹುಟ್ಟು ಇಲ್ಲ, ಸಾವೂ ಇರಲಿಲ್ಲ. ಅದು ನಿತ್ಯ ನಿರಂತರ. ಅದರಿಂದ ಪುರುಷ ಮತ್ತು ಮಹಿಳೆ (ಪ್ರಕೃತಿ)ಯ ಶಕ್ತಿಗಳು ಹೊಮ್ಮುತ್ತವೆ. ಅವುಗಳಿಂದಲೇ ದೇವರುಗಳು ಹುಟ್ಟುತ್ತಾರೆ. ವಿರಾಜ (ಸೂರ್‍ಯ)ನಿಂದ ಮತ್ತೆ ಪುರುಷ ಹುಟ್ಟುತ್ತಾನೆ. ದೇವರುಗಳು ಪುರುಷನೊಂದಿಗೆ ಯಜ್ಞಯಾಗಾದಿಗಳನ್ನು ನೆರವೇರಿಸಿದಾಗ, ಆ ಆದಿ ಪುರುಷನ ವಿವಿಧ ಅಂಗಾಂಗಗಳಿಂದಲೇ ಬ್ರಾಹ್ಮಣ, ಕ್ಷತ್ರಿಯ, ವೈಶ್ಯ ಮತ್ತು ಶೂದ್ರ ಕುಲಗಳು ಹುಟ್ಟುತ್ತವೆ. ಅವನ್ನು ವರ್ಣಗಳು ಎಂದು ಗುರುತಿಸಲಾಗುತ್ತದೆ. ಆ ಆದಿ ಪುರುಷನಿಂದಲೇ ಭೂಮಿ, ಅದರ ಮೇಲಿನ ಪ್ರಾಣಿಪಕ್ಷಿಗಳು, ಸಸ್ಯರಾಶಿ, ಭೂಮಿಯ ದಿಕ್ಕುಗಳು, ಮೇಲಿನ ಆಕಾಶ ಮತ್ತು ನಕ್ಷತ್ರಗಳು ಹುಟ್ಟಿಕೊಳ್ಳುತ್ತವೆ.
`ಶತಪಥ ಬ್ರಾಹ್ಮಣದಲ್ಲಿನ ವಿವರಣೆಯ ಪ್ರಕಾರ, ತಪಸ್ಸು ಮಾಡುವ ಪ್ರಜಾಪತಿ ತನ್ನನ್ನೇತಾನು ಸೃಷ್ಟಿಸಿಕೊಳ್ಳುತ್ತಾನೆ. ನೀರನ್ನು ಹೊರಗೆ ಬಿಟ್ಟು, ಮೊಟ್ಟೆಯ ರೂಪದಲ್ಲಿ ಅದನ್ನು ಪ್ರವೇಶಿಸುತ್ತಾನೆ. ಅದು ಸ್ವಚಲಿತಪೂರ್ಣವಾಗಿ ವಿಕಸನಗೊಳ್ಳುತ್ತದೆ. ಬಂಗಾರದ ಮೊಟ್ಟೆಯಿಂದ ಹೊರಬರುವ ಪ್ರಜಾಪತಿ ಭೂಮಿಯನ್ನು, ಆಕಾಶವನ್ನು ಅವುಗಳ ಮಧ್ಯೆ ವಾತಾವರಣವನ್ನು ಸೃಷ್ಟಿಸುತ್ತಾನೆ. ಮತ್ತೆ ತಪಸ್ಸು ಕೈಗೊಳ್ಳುವ ಪ್ರಜಾಪತಿ ದೇವರನ್ನು ಅಸುರರನ್ನು ಸೃಷ್ಟಿಸುತ್ತಾನೆ. ಮಹಾಪ್ರಳಯದ ನಂತರ ಉಳಿದುಕೊಳ್ಳುವ ಮನು, ಯಜ್ಞವನ್ನು ನೆರವೇರಿಸಿದಾಗ ಇಳಾ ಜನ್ಮತಾಳುತ್ತಾಳೆ. ಅವಳಿಂದಲೇ ಮಾನವ ಕುಲ ಅಸ್ತಿತ್ವದಲ್ಲಿ ಬರುತ್ತದೆ.
ಐತರೇಯ ಉಪನಿಷತ್ತಿನಲ್ಲಿ ಜಗತ್ತಿನ ಸೃಷ್ಟಿಯ ಆದಿಯಲ್ಲಿ `ಆತ್ಮನ್ ಎಂಬುದು ಅಸ್ತಿತ್ವದಲ್ಲಿತ್ತು. ತನ್ನಷ್ಟಕ್ಕೆ ತಾನೆ ಸ್ವರ್ಗ, ಆಕಾಶ, ಭೂಮಿ ಮತ್ತು ಪಾತಾಳ ಲೋಕಗಳು ಅಸ್ತಿತ್ವದಲ್ಲಿ ಬಂದಿದ್ದವು. ಆತ್ಮನ್, ನೀರಿನಿಂದ ಪುರುಷನನ್ನು ನಿರ್ಮಿಸಿತು. ಮಾತು, ಅಗ್ನಿ, ಪ್ರಾಣ (ಜೀವದ ಉಸಿರು), ಗಾಳಿ, ಬಗೆಬಗೆಯ ಅರಿವುಗಳನ್ನು, ದಿಕ್ಕುಗಳನ್ನು, ಮರಗಳನ್ನು ಮನಸ್ಸು, ಚಂದಿರ ಮುಂತಾದವನ್ನು ಸೃಷ್ಟಿಸಿತು ಎಂದು ತಿಳಿಸಲಾಗಿದೆ.
ಬೃಹದ್ ಅರಣ್ಯಕ ಉಪನಿಷತ್ತಿನ ಪ್ರಕಾರ, ಆದಿಯಲ್ಲಿ ಪುರುಷನೆಂಬ ಆತ್ಮನ್ ಇತ್ತು. ಆತ ತನ್ನದೊಂದು ಮನಸ್ಸನ್ನು ಸೃಷ್ಟಿಸುತ್ತಾನೆ. ಅವನು ಪ್ರಾರ್ಥನೆ(ಧ್ಯಾನ)ಯಲ್ಲಿ ತೊಡಗಿದಾಗ ನೀರು ಉದ್ಭವಿಸುತ್ತದೆ. ಅದರ ಮೇಲೆ ನೊರೆ ಮೂಡುತ್ತದೆ. ಆ ನೊರೆ ನಿಧಾನವಾಗಿ ಗಟ್ಟಿಯಾಗಿ ಭೂಮಿಯ ಆಕಾರ ಪಡೆಯುತ್ತದೆ. ಆತ ಭೂಮಿಯ ಮೇಲೆ ನಿಂತಾಗ, ಅವನ ಪ್ರಕಾಶಮಾನತೆಯಿಂದ ಅಗ್ನಿಯು ರೂಪತಾಳುತ್ತದೆ. ಆತ ತನ್ನನ್ನು ಬೆಂಕಿ, ಸೂರ್‍ಯ ಮತ್ತು ಗಾಳಿಯ ರೂಪದಲ್ಲಿ ವಿಭಜಿಸಿಕೊಳ್ಳುತ್ತಾನೆ. ಹೀಗಾಗಿ ಆದಿಯಲ್ಲಿ ಆತನ ಇರುವಿಕೆ- ಸಾರ ಅಷ್ಟೇ ಇತ್ತು. ಅದು ವ್ಯಕ್ತಿಯ ರೂಪಧಾರಣೆ ಮಾಡಿತು. ಅದು ಪುರುಷಾಕಾರ. ಒಂಟಿತನ ಅನುಭವಿಸಿದ ಆ ಪುರುಷ, ಪುರುಷ (ಪತಿ) ಮತ್ತು ಮಹಿಳೆಯ (ಪತ್ನಿ)ಯಾಗಿ ತನ್ನನ್ನು ವಿಭಜಿಸಿಕೊಂಡ. ಪುರುಷ, ಮಹಿಳೆಯನ್ನು ಕೂಡಿದಾಗ ಮಾನವರು ಹುಟ್ಟಿದರು. ಹಿಂದೆ ತಾವಿಬ್ಬರೂ ಒಬ್ಬರೆ ಆಗಿದ್ದವರು. ಆತನು ನನ್ನನ್ನು ಸೃಷ್ಟಿಸಿದಾತ, `ಆತನು ಹೇಗೆ ತಾನೆ ನನ್ನನ್ನು ಕೂಡಬಹುದು? ಎಂದುಕೊಂಡ ಮಹಿಳೆ ತಾನು ಬಚ್ಚಿಟ್ಟುಕೊಳ್ಳಬೇಕು ಎಂದುಕೊಳ್ಳುತ್ತಾಳೆ. ಅವಳು, ಆಕಳ ರೂಪ ತಾಳುತ್ತಾಳೆ. ಆಗ, ಪುರುಷ ಎತ್ತಿನ ರೂಪದಲ್ಲಿ ಅವಳನ್ನು ಕೂಡುತ್ತಾನೆ. ಆಗ ಹಸುಗಳು ಹುಟ್ಟುತ್ತವೆ. ಅದೇ ಬಗೆಯಲ್ಲಿ ಮಾನವರೂ ಸೇರಿಕೊಂಡಂತೆ ಕುದುರೆಗಳು, ಕುರಿಗಳಿಂದ ಹಿಡಿದು ಇರುವೆಯವರೆಗೆ ಎಲ್ಲಾ ಪ್ರಾಣಿಗಳ ಒಂದೊಂದು ಜೊತೆಗಳು ಅಸ್ತಿತ್ವದಲ್ಲಿ ಬರುತ್ತವೆ. ನಂತರ ಪುರುಷ ಅಗ್ನಿಯನ್ನು, ಸೋಮ (ಚಂದ್ರದೇವ) ಮತ್ತು ತನ್ನ ದೇಹದ ಉತ್ತಮ ಭಾಗಗಳಿಂದ ಅಜರಾಮರರಾದ ದೇವರುಗಳನ್ನು ಸೃಷ್ಟಿಸುತ್ತಾನೆ. ಆ ದೇವರುಗಳಿಗೆ ವಿಶೇಷ ಜವಾಬ್ದಾರಿಯನ್ನು ಕೊಟ್ಟು ಕೆಲವೊಂದು ವಿಶೇಷ ಶಕ್ತಿಗಳನ್ನು ದಯಪಾಲಿಸುತ್ತಾನೆ. ಪುನರ್ಜನ್ಮದ ನಂಬಿಗೆಯಲ್ಲಿ ಆಧ್ಯಾತ್ಮಿಕವಾಗಿ ಅವರವರ ಕರ್ಮಕ್ಕೆ ಅನುಸಾರ, ವೈಯಕ್ತಿಕ ಆತ್ಮ ಸ್ವರೂಪವು- ಹಾವು, ಚೇಳು, ಹಂದಿ, ನರಿ ಮೊದಲಾದ ಜನ್ಮ ಪಡೆದು, ಏರುಗತಿಯ ಏಣಿಯಲ್ಲಿ, ಅಂತಿಮವಾಗಿ ಕೊನೆಯ ಮೆಟ್ಟಿಲಾದ ಮನುಷ್ಯಜನ್ಮ ಪಡೆದು, ಕೊನೆಗೆ ಮುಕ್ತಿ ಪಡೆಯುತ್ತದೆ.
ವೇದ, ಉಪನಿಷತ್‌ಗಳಿಗಿಂತ ಇತ್ತೀಚಿನ ಸಾಂಖ್ಯ(ಯೋಗ) ಪಠ್ಯಗಳು, ಮೂಲದಲ್ಲಿ ಪುರುಷ ಮತ್ತು ಪ್ರಕೃತಿ ಎಂಬ ಎರಡು ಪ್ರತ್ಯೇಕ ಅಸ್ತಿತ್ವಗಳಿದ್ದವು. ಪ್ರಕೃತಿ, ಸತ್ವ (ಪಾಲನೆ)ರಜಸ್ (ಸೃಷ್ಟಿಯ) ಮತ್ತು ತಮಸ್ (ವಿನಾಶಕ) ಲಕ್ಷಣಗಳನ್ನು ಹೊಂದಿತ್ತು ಎಂದು ಪ್ರತಿಪಾದಿಸುತ್ತವೆ.
ಗರುಡ ಪುರಾಣದ ಪ್ರಕಾರ, ಆದಿಯಲ್ಲಿ ಬ್ರಹ್ಮನ ಹೊರತು ಬೇರೇನೂ ಇರಲಿಲ್ಲ. ವಿಶ್ವವು ಒಂದು ದೊಡ್ಡ ಜಲರಾಶಿಯಾಗಿತ್ತು. ಆ ಜಲರಾಶಿಯಲ್ಲಿನ ಬಂಗಾರದ ಮೊಟ್ಟೆಯಲ್ಲಿ ವಿಷ್ಣುವಿನ ಜನ್ಮವಾಯಿತು. ನಂತರ ವಿಷ್ಣು, ತನ್ನ ಹೊಕ್ಕಳಿನಿಂದ ಎದ್ದು ಕಮಲದಲ್ಲಿ ಕುಳಿತ ಚತುರ್ಮುಖ ಬ್ರಹ್ಮನನ್ನು ಸೃಷ್ಟಿಸುತ್ತಾನೆ. ಆ ನಂತರ ಬ್ರಹ್ಮ ದೇವರುಗಳನ್ನು, ಅಸುರರನ್ನು, ಪಿತೃಗಳನ್ನು ಮತ್ತು ಮನುಷ್ಯರನ್ನು ಸೃಷ್ಟಿಸುತ್ತಾನೆ. ಇವರೊಂದಿಗೆ ಯಕ್ಷರನ್ನು, ಗಂಧರ್ವರನ್ನೂ ಸೃಷ್ಟಿಸುತ್ತಾನೆ. ಅವನು ವಿವಿಧ ಅಂಗಗಳಿಂದ (ತಲೆಗೂದಲಿನಿಂದ ಸರಿಸೃಪಗಳು, ಎದೆಯಿಂದ ಕುರಿಗಳೂ, ಬಾಯಿಯಿಂದ ಆಡು, ಉದರದಿಂದ ಹಸುಗಳು - ಹೀಗೆ) ವಿವಿಧ ಪ್ರಾಣಿಪಕ್ಷಿಗಳ ಸೃಷ್ಟಿಯಾಗುತ್ತದೆ. ಮೈಮೇಲಿನ ರೊಮಗಳಿಂದ ಗಿಡಮರಗಳು ಹುಟ್ಟುತ್ತವೆ. ಅವನ ದೇಹ ಭಾಗದಿಂದ ನಾಲ್ಕು ವರ್ಣಗಳು, ಬಾಯಿಯಿಂದ ನಾಲ್ಕು ವೇದಗಳು ಜನ್ಮತಾಳುತ್ತವೆ. ವಿಷ್ಣುವಿನ ಮನಸ್ಸಿನಿಂದ ಮಾನಸ ಪುತ್ರರಾದ ದಕ್ಷ, ಕಶ್ಯಪು, ಮನುಸ್ವಯಂಭು ಮೊದಲಾದ ಹಲವಾರು ಗಂಡುಮಕ್ಕಳು ಹುಟ್ಟುತ್ತಾರೆ. ಅವರಿಂದ ದೇವಾನುದೇವತೆಗಳು ಇತರರು ಜನ್ಮತಾಳುತ್ತಾರೆ. ಕಶ್ಯಪುವಿನಿಂದ ಮಾನವರು ಹುಟ್ಟುತ್ತಾರೆ.
ವಿಷ್ಣು ಪುರಾಣದ ಪ್ರಕಾರ ಬ್ರಹ್ಮನೇ ಸೃಷ್ಟಿಕರ್ತ, ಮತ್ತು ಈ ಬ್ರಹ್ಮ ವಿಷ್ಣುವಿನ ಸತ್ವವೇ ಆಗಿರುತ್ತಾನೆ. ಶಿವ ಪುರಾಣವು ಹಿರಣ್ಯ ಗರ್ಭವು ಶಿವನ ಸೃಷ್ಟಿ ಎಂದು ಬಣ್ಣಿಸುತ್ತದೆ. ದೇವಿಭಾಗವತ ಪುರಾಣದ ಪ್ರಕಾರ, ಪುರುಷ ಮತ್ತು ಪ್ರಕೃತಿ ಜೊತೆಯಾಗಿಯೇ ಬಂದು ಸೃಷ್ಟಿಕರ್ತ ಬ್ರಹ್ಮನ ಹುಟ್ಟಿಗೆ ಕಾರಣರಾಗುತ್ತಾರೆ.
ಉಪನಿಷತ್‌ಗಳು ಪ್ರತಿಪಾದಿಸುವಂತೆ, ಭೂಮಿಯೂ ಸೇರಿದಂತೆ ವಿಶ್ವವು ಕಾಲಚಕ್ರದ ಸುಳಿಗೆ ಸಿಕ್ಕು ಒಂದೊಂದು ಚಕ್ರಗತಿಯ ಆವೃತ್ತಿಯಲ್ಲಿ ಸಂಭವಿಸುವ ಪ್ರಳಯವು ಹೊಸ ಹುಟ್ಟಿಗೆ ಮತ್ತು ಹಳೆಯದರ ನಾಶಕ್ಕೆ ಕಾರಣವಾಗುತ್ತಾ ಇರುತ್ತದೆ. ಪುನರಾವರ್ತನೆ ಆಗುವ ಈ ಕಾಲಚಕ್ರದಲ್ಲಿ ವಿಶ್ವವನ್ನು ಸೃಷ್ಟಿಸಲಾಗುತ್ತದೆ, ಅದನ್ನು ನಾಶಪಡಿಸಲಾಗುತ್ತದೆ ಮತ್ತೆ ಅದನ್ನು ಪುನಃ ಸೃಷ್ಟಿಸಲಾಗುತ್ತದೆ. ಕಟ್ಟುವ, ಕೆಡಹುವ ಕೆಲಸ ನಿರಂತರವಾದುದು. ಬ್ರಹ್ಮನು ಒಂದು ದಿನ ಕಳೆದ ಸಮಯಕ್ಕೆ ಸರಿಯಾಗಿ ಪ್ರಳಯವು ಸಂಭವಿಸುತ್ತದೆ, ಅದು ಪುನರಾವರ್ತನೆ ಆಗುತ್ತಲೇ ಇರುತ್ತದೆ.
ಬ್ರಹ್ಮ, ವಿಷ್ಣು, ಮಹೇಶ್ವರ (ಶಿವ) - ಈ ಮೂವರು ಪುರಾಣಗಳಲ್ಲಿ ಪ್ರಮುಖವಾಗಿ ಎದ್ದು ಕಾಣುವ ದೇವರುಗಳು. ಮೊದಲು ಆದಿ ಶಕ್ತಿ ಪ್ರಕೃತಿ ಇತ್ತು, ಆ ಶಕ್ತಿಯಿಂದಲೇ ಈ ದೇವರುಗಳ ಉತ್ಪತ್ತಿಯಾಯಿತು. ಬ್ರಹ್ಮ ಈ ಜಗತ್ತಿನ ಸೃಷ್ಟಿಕರ್ತನಾದರೆ, ವಿಷ್ಣು ಈ ಜಗತ್ತನ್ನು ಜತನದಿಂದ ಕಾಪಾಡುವವ. ಅವತಾರಗಳನ್ನು ಎತ್ತಿ ಜಗತ್ತು ಸರಿದಾರಿಯಲ್ಲಿ ಸಾಗುವಂತೆ ನೋಡಿಕೊಳ್ಳುವವ. ಇನ್ನು ಶಿವ, ಜಗತ್ತಿನ ನಾಶಕ್ಕೆ ಕಾರಣನಾಗುವವ ಎಂದು ಪುರಾಣಗಳು ಸಾರುತ್ತ್ತವೆ. ಕಶ್ಯಪ ಮುನಿಯ ಮಗನಾದ ಆದಿಶೇಷನು ಗ್ರಹಗಳ, ನಕ್ಷತ್ರಗಳ ಪರಿಭ್ರಮಣವನ್ನು ನಿಯಂತ್ರಿಸುವ ದೇವರು ಎಂದು ಪುರಾಣಗಳು ಹೇಳುತ್ತವೆ. ವಿಶ್ವದ ಗ್ರಹಗಳು ಅದರ ಸಾವಿರ ಹೆಡೆಯ ತಲೆಯ ಮೇಲೆ ಇವೆ. ಭೂಮಿಯನ್ನು ಒಂದು ತಲೆಯಿಂದ ಇನ್ನೊಂದು ತಲೆಗೆ ಬದಲಿಸಿದಾಗ ಭೂಕಂಪನವಾಗುತ್ತದೆ. ಆದಿಶೇಷ ಮುಂದೆ ಚಲಿಸಿದರೆ ಸೃಷ್ಟಿಕಾರ್ಯ ಆರಂಭವಾಗುತ್ತದೆ, ಅದು ಸುತ್ತಿಕೊಂಡರೆ ಸೃಷ್ಟಿ ವಿನಾಶದತ್ತ ಸಾಗುತ್ತದೆ.
ಭಾರತೀಯ ಪುರಾತನರ ವಿಶ್ವ ತಿಳಿವಳಿಕೆಯ ಪ್ರಕಾರ, ಐರಾವತ, ಪುಂಡರೀಕ, ವಾಮನ, ಕುಮುಂದ, ಆಂಜನ, ಪುಷ್ಪದಂತ, ಸರ್ವಭೂಮ, ಸುಪ್ರತಿಕಾ ಆನೆಗಳು ಭೂಮಿಯನ್ನು ಹೊತ್ತುಕೊಂಡು ನಿಂತಿವೆ. ಈ ಮಾಹಿತಿ, ಐದನೇ ಶತಮಾನದ ಅಮರಕೋಶದಲ್ಲಿ ದಾಖಲಾಗಿದೆ. ರಾಮಾಯಣದಲ್ಲಿ ನಾಲ್ಕು ದಿಕ್ಕಿಗೆ ಭೂಮಿಯನ್ನು ಹೊತ್ತ ನಾಲ್ಕು ಆನೆಗಳು ಇವೆ. ಅವು ಇಂತಿವೆ: ವಿರೂಪಾಕ್ಷ (ಪೂರ್ವ), ಮಹಾಪದ್ಮ (ದಕ್ಷಿಣ), ಸೌಮಾನಸ (ಪಶ್ಚಿಮ) ಮತ್ತು ಭದ್ರ (ಉತ್ತರ). ಇದಲ್ಲದೇ ಈ ಆನೆಗಳನ್ನು ಅಕುಪಾರ ಅಥವಾ ಚೌಕ ಹೆಸರಿನ ಮಹಾ ಆಮೆಯೊಂದು ಹೊತ್ತು ನಿಂತಿದೆ ಎಂಬ ಮಾಹಿತಿಯೂ ಕೆಲವು ಪುರಾತನ ಹೊತ್ತಿಗೆಗಳಲ್ಲಿ ದಾಖಲಾಗಿದೆ.
ಈ ಕೂರ್ಮವು (ಆಮೆ) ವಿಷ್ಣುವಿನ ದಶಾವತಾರಗಳಲ್ಲಿ ಎರಡನೇ ಅವತಾರ. ಆ ಸಮಯದ ಸಮುದ್ರ ಮಂಥನದಲ್ಲಿ ಮಂದರ ಪರ್ವತ ಕುಡುಗೋಲಾದಾಗ, ಅದು ದೃಢವಾಗಿ ನಿಂತು ಅದಕ್ಕೆ ಗಟ್ಟಿಜಾಗ ಒದಗಿಸಿತ್ತು. ವಿಶ್ವದ ಸುಸ್ಥಿತಿಯ ಉದ್ದೇಶದ ವಿಷ್ಣುವಿನ ದಶಾವತಾರಗಳ ಪಟ್ಟಿ ಹೀಗಿದೆ : ೧) ಮತ್ಸ್ಯ, ೨) ಕೂರ್ಮ, ೩) ವರಾಹ, ೪) ನರಸಿಂಹ, ೫) ವಾಮನ, ೬)ಪರಶುರಾಮ, ೭) ರಾಮ, ೮) ಕೃಷ (ಬಲರಾಮ), ೯) ಬುದ್ಧ (ವಿಠೋಬ/ ಜಗನ್ನಾಥ) ಮತ್ತು ೧೦) ಕಲ್ಕಿ. ಈಗಾಗಲೇ ಒಂಬತ್ತು ಅವತಾರಗಳು ಮುಗಿದಿದ್ದು, ಸದ್ಯದ ಕಲಿಯುಗದ ಕೊನೆಗೆ ಕಲ್ಕಿಯ ಅವತಾರವಾಗುವುದೆಂದು ನಿರೀಕ್ಷಿಸಲಾಗುತ್ತಿದೆ.
ಮತ್ಸ್ಯ, ಕೂರ್ಮ, ವರಾಹ, ನರಸಿಂಹ ಅವತಾರಗಳು ಸತ್ಯಯುಗದಲ್ಲಿ ಜರುಗಿದ್ದರೆ, ಪರಶುರಾಮ ಮತ್ತು ರಾಮನ ಅವತಾರತ್ರೇತಾಯಗದಲ್ಲಿ ಜರುಗಿವೆ. ಕೃಷ್ಣ (ಬಲರಾಮ) ದ್ವಾಪರಯುಗದಲ್ಲಿ ಮತ್ತು ಬುದ್ಧ (ವಿಠೋಬ, ಜಗನ್ನಾಥ) ಅವತಾರಗಳು ಕಲಿಯುಗದಲ್ಲಿ ಜರುಗಿವೆ. ಸಾಮಾನ್ಯವಾಗಿ ಬಲರಾಮನನ್ನು ಶೇಷನ ಅವತಾರ ಎಂದು ಕೊಂಡರೂ, ಶ್ರೀವೈಷ್ಞವರು ಬಲರಾಮನನ್ನು ಎಂಟನೇ ಅವತಾರವೆಂದು ಗುರುತಿಸುತ್ತಾರೆ. ಬುದ್ಧನನ್ನು ಬಿಟ್ಟು, ಕೃಷ್ಣನನ್ನು ಒಂಬತ್ತನೇ ಅವತಾರವೆಂದು ಅವರು ಗುರುತಿಸುತ್ತಾರೆ. ಮಹಾರಾಷ್ಟ್ರ ಮತ್ತು ಗೋವೆ ರಾಜ್ಯಗಳ ಜನಪದರು ಒಂಬತ್ತನೇ ಅವತಾರದಲ್ಲಿ ಬುದ್ಧನನ್ನು ಬದಿಗೆ ಸರಿಸಿ, ಅಲ್ಲಿ ವಿಷ್ಣುವಿನ ಅವತಾರವೆಂದು ವಿಠೋಬನನ್ನು ಕೂರಿಸುತ್ತಾರೆ. ಓರಿಸ್ಸಾ ರಾಜ್ಯದ ಜನಪದರು ಒಂಬತ್ತನೇ ಬುದ್ಧನ ಅವತಾರ ಬದಿಗೆ ಸರಿಸಿ, ಅಲ್ಲಿ ಜಗನ್ನಾಥನನ್ನು ಸೇರಿಸುತ್ತಾರೆ. ಅಧರ್ಮವು ಹೆಚ್ಚಾದಾಗ ಕಲ್ಕಿಯ ಅವತಾರವಾಗುತ್ತದೆ. ವಿಶ್ವವು ನಾಶವಾಗಿ, ಒಂದು ಕಾಲಚಕ್ರ ಉರುಳಿ ಮತ್ತೆ ಸತ್ಯಯುಗದ ಆರಂಭದೊಂದಿಗೆ ಇನ್ನೊಂದು ಕಾಲಚಕ್ರದಲ್ಲಿ ಹೊಸ ವಿಶ್ವದ ಮತ್ತೊಂದು ಆವೃತ್ತವು ಆರಂಭಗೊಳ್ಳುತ್ತದೆ.
---
*ಇದಿಷ್ಟು ಭರತಖಂಡದಲ್ಲಿ ಪ್ರಚಲಿತದಲ್ಲಿರುವ ಸೃಷ್ಟಿ ಕತೆಗಳ ಸಾರರೂಪ.
+ಇಲ್ಲಿ ಅವುಗಳ ಬಗೆಗೆ ಹೆಚ್ಚಿನ ಚರ್ಚೆ ನಡೆಸದೆ, ಪ್ರಾಥಮಿಕ ಮಾಹಿತಿಕೊಡಲು ಪ್ರಯತ್ನಿಸಲಾಗಿದೆ.
**********
No comments:
Post a Comment