ಕನ್ನಡದ ಬಗ್ಗೆ ಅತ್ಯಂತ ಹೆಚ್ಚು ಕವನಗಳನ್ನು ಬರೆದವರು ಕುವೆಂಪು. ಉಳಿದವರು ನಾವೆಲ್ಲ ನೆನಪಲ್ಲಿ ಇಟ್ಟುಕೊಳ್ಳಬಹುದಾದ ಉತ್ಕೃಷ್ಟ ಕವಿತೆಗಳನ್ನು ಬರೆದಿದ್ದಾರೆ.
ಒಂದೇ ಒಂದೇ ಒಂದೇ ಕರ್ನಾಟಕ ಒಂದೇಹಿಂದೆ ಮುಂದೆ ಎಂದೆ ಕರ್ನಾಟಕ ಒಂದೇ
ಜಗದೇಳಿಗೆಯಾಗುವುದಿದೆ ಕರ್ನಾಟಕದಿಂದೆ
ಇಲ್ಲಿಯ ಜನ ಮನ ಭಾಷೆಯು ಕನ್ನಡವದು ಒಂದೇ?
- ದ ರಾ ಬೇಂದ್ರೆ
ಮಾನವನಾಗಿ ಹುಟ್ಟಿದ ಮೇಲೆ ಏನೇನ್ ಕಂಡಿ
ಸಾಯೋತನಕ ಸಂಸಾರದಲ್ಲಿ ಗಂಡಾ ಗುಂಡಿ
ಏರಿಕೊಂಡು ಹೋಗೋದಿಲ್ಲ ಸತ್ತಾಗ್ ಬಂಡಿ
ಇರೋದ್ರೊಳಗೆ ಒಮ್ಮೆ ನೋಡು ಜೋಗಾದ್ಗುಂಡಿ
- ಮೂಗೂರು ಮಲ್ಲಪ್ಪ
ಎನಿತು ಇನಿದು ಈ ಕನ್ನಡ ನುಡಿಯು
ಮನವನು ತಣಿಸುವ ಮೋಹನ ಸುಧೆಯು!
ಗಾನವ ಬೆರೆಯಿಸಿ ವೀಣೆಯ ದನಿಯೊಳು
ವಾಣಿಯ ನೇವುರ ನುಡಿಸುತೆ ಕುಣಿಯಲು
ಮಾಣದೆ ಮೆರೆಯುವ ಮಂಜುಲ ರವವೋ?
ಎನಿತು ಇನಿದು ಈ ಕನ್ನಡ ನುಡಿಯು !
- ಆನಂದಕಂದ (ಬೆಟಗೇರಿ ಕೃಷ್ಣ ಶರ್ಮ)
ನರಕಕ್ಕ್ ಇಳ್ಸಿ ನಾಲ್ಗೆ ಸೀಳ್ಸಿ
ಬಾಯ್ ಒಲಿಸಾಕಿದ್ರೂನೆ-
ಮೂಗ್ನಲ್ ಕನ್ನಡ್ ಪದವಾಡ್ತೀನಿ !
ನನ್ ಮನಸನ್ ನೀ ಕಾಣೆ
- ಜಿ ಪಿ ರಾಜರತ್ನಂ
ನನ್ನ ಕನ್ನಡ ನುಡಿಯೆ ನೀನೆಷ್ಟು ಚಂದ
ಏನು ಗೀಚಿದರು ಆಗುವುದು ಶ್ರೀಗಂಧ
ಸಿಂಗರದ ಗಣಿ ನಿನ್ನ ಶಬ್ದ ಸಂಪತ್ತು
ಬಂಗಾರಗಿಂತಲೂ ಶ್ರೇಷ್ಠ ನುಡಿ ಮುತ್ತು
ಬಂಗಾರವೆನ್ನುವುದು ಕನ್ನಡದ ಭಾಷೆ
ನುಡಿಯಲ್ಲಿ ಮೂಡುವುದು ನನ್ನ ಆಸೆ
ನನ್ನ ಮಡದಿಗೆ ಕೂಡಾ ಕನ್ನಡವೆ ಚಿನ್ನ
ಕನ್ನಡದ ನುಡಿ ನನ್ನ ಜೀವಿತದ ಅನ್ನ
- ದಿನಕರ ದೇಸಾಯಿ
ಬೆಂಕಿ ಬಿದ್ದಿದೆ ಮನೆಗೆ ಓ ಬೇಗ ಬನ್ನಿ
ಎಲ್ಲರೂ ಎದ್ದೆದ್ದು ಓಡಿ ಬನ್ನಿ
ಕನ್ನಡದ ಗಡಿಕಾಯೆ, ಗುಡಿಕಾಯೆ, ನುಡಿಕಾಯೆ
ಕಾಯಲಾರೆನೆ ಸಾಯೆ ಓ ಬನ್ನಿ -ಬೆಂಕಿ ಬಿದ್ದಿದೆ ಮನೆಗೆ!
ಅಕ್ಕಂದಿರೆ ಅಣ್ಣಂದಿರೆ, ತಂಗಿಯರೆ ತಮ್ಮಂದಿರೆ
ಬೆಂಕಿಯನ್ನಾರಿಸಲು ಬೇಗ ಬನ್ನಿ
ಕನ್ನಡದ ಒಲವೊಂದೆ ಛಲವೊಂದೆ, ನೆಲವೊಂದೆ
ನಾಡ ನುಳಿಸುವೆನಂದರೆ ಓಡಿ ಬನ್ನಿ ಬೆಂಕಿ ಬಿದ್ದಿದೆ ಮನೆಗೆ!
- ಕಯ್ಯಾರ ಕಿಞ್ಞಣ್ಣ ರೈ
ಹೊತ್ತಿತೋ ಹೊತ್ತಿತು ಕನ್ನಡದ ದೀಪ
ಮುಗಿಯಿತೋ ಮುಗಿಯಿತು ಶತಮಾನಗಳ ಶಾಪ..
ಹೊತ್ತಿತೋ ಹೊತ್ತಿತು ಕನ್ನಡದ ದೀಪ
ಹೊತ್ತಿತೋ.. ಹೊತ್ತಿತು?ಕನ್ನಡದ ದೀಪ
ಉರಿವವರು ಬೇಕಿನ್ನು ಇದರೆಣ್ಣೆಯಾಗಿ
ಸುಡುವವರು ಬೇಕಿನ್ನು ನಿಡುಬತ್ತಿಯಾಗಿ..
ಧರಿಸುವವರು ಬೇಕಿನ್ನು ಸಿರಿಹಣತೆಯಾಗಿ
- ಸಿದ್ದಯ್ಯ ಪುರಾಣಿಕ
No comments:
Post a Comment