Tuesday, 10 November 2020

ಮೆಲನಿಯಾಳ ಪ್ರತಿಮೆಯೂ, ಸ್ವಾಮಿಯ ಮಹಿಮೆಯು - ಎಫ್.ಎಂ.ಎನ್



 ಕಳೆದ ೨೦೧೯ರ ಸಾಲಿನ ಜುಲೈ ತಿಂಗಳ ಮೊದಲನೇ ವಾರದಲಿ, ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಪತ್ನಿ, ಅಮೆರಿಕದ ಮೊದಲ ಮಹಿಳೆ ಮೆಲನಿಯಾ ಟ್ರಂಪ್ ಅವಳ ಹುಟ್ಡೂರು ಸ್ಲೊವೆನಿಯಾದಲಿ, ನದಿಯ ಪಕ್ಕದ ಬಂಡೆಯೊಂದರ ಮೇಲೆ ಮರದ ಕಾಂಡವೊಂದರಲ್ಲಿ ಕಡೆದ ೯ ಅಡಿ ಎತ್ತರದ ಅವಳ ಪ್ರತಿಮೆಯನ್ನು ಅನಾವರಣಗೊಳಿಸಲಾಗಿತ್ತು.

 ಎರ್ರಾಬಿರ್ರಿ ಕರಗಸದಿಂದ ಕತ್ತರಿಸಿದ ಈ ಕಾಷ್ಠದ ಕೃತಿಯಲ್ಲಿ, ಅವಳ ಬಟ್ಟೆಗೆ ನೀಲಿ ಬಣ್ಣ ಬಳಿಯಲಾಗಿದೆ. ಅವಳು ಎಡಗೈಯನ್ನು ಆಶೀರ್ವದಿಸುವಂತೆ ಎತ್ತಿ ಹಿಡಿದಿದ್ದಾಳೆ. ಅಲ್ಲಿ ಸಾಸು, ವೈನು ಮತ್ತು ಕೇಕ್ ಗಳನ್ನು ಅವಳ ಹೆಸರಿನಲ್ಲಿ ಸವಿಯಲಾಗುತ್ತದೆ. ಆ ಜಾಗ ಪ್ರವಾಸಿ ತಾಣವಾಗಿದೆ. ಈ ಕಲಾಕೃತಿ ಹಲವಾರು ವಿವಾದಗಳಿಗೆ ಕಾರಣವಾದದ್ದು ಉಂಟು.

ವಿವಾದಗಳ ಕಾರಣ, ದುಷ್ಕರ್ಮಿಗಳು ಪ್ರತಿಮೆಯ ಕೊರಳಿಗೆ ಟಯರ್ ಇರಿಸಿ ಬೆಂಕಿ ಹಚಿದ್ದರು. ಆದಾದ ಮೇಲೆ ಮುಖ ಸುಟ್ಟ ಕಾಷ್ಠದ ಪ್ರತಿಮೆಯನ್ನು ತೆರವುಗೊಳಿಸಲಾಗಿದೆ. ಅದೇ ಜಾಗದಲ್ಲಿ ಈಗ ಕಂಚಿನ ಪ್ರತಿಮೆಯೊಂದನ್ನು ಪ್ರತಿಷ್ಠಾಪಿಸಲಾಗಿದೆ.

  ಮಾಟವಾಗಿಲ್ಲದ ಆ ಕಾಷ್ಠದ ಕೃತಿಯನ್ನು ಸ್ಪೇನ್ ನ ಬೋರ್ಜ ಎಂಬ ಊರಲ್ಲಿನ ಚರ್ಚಿನಲ್ಲಿದ್ದ ಮಾಸಿದ ಮುಳ್ಳಿನ ಕಿರೀಟ ತೊಟ್ಟ ಪ್ರಭು ಯೇಸುಸ್ವಾಮಿಯ ನೀರಿನ ಬಣ್ಣದ ಎದೆಮಟ್ಟದ ಅಂದಗೆಟ್ಟ ಚಿತ್ರಕ್ಕೆ ಹೋಲಿಸಲಾಗುತ್ತಿದೆ. ಆ ಅಂದಗೆಟ್ಟ ಚಿತ್ರವು ಆ ಊರಿನ ಚಹರೆಯನ್ನೇ ಬದಲಿಸಿದ್ದು ಮತ್ತೊಂದು ಆಸಕ್ತಿದಾಯಕ ಕತೆ.

   ನಿಮ್ಮ ತಪ್ಪೇ ಅದ್ಭುತ, ಅದುವೆ `ನನ್ನ ಮಹಿಮೆ: 


 ಅಪರಿಚಿತ ಹಳ್ಳಿಯೊಂದರ ಚರ್ಚಿನಲ್ಲಿದ್ದ ಮುಳ್ಳಿನ ಕಿರೀಟ ತೊಟ್ಟ ಯೇಸುಸ್ವಾಮಿಯ ಎದೆಮಟ್ಟದ ಚಿತ್ರವನ್ನು ೨೦೧೨ರಲ್ಲಿ ಸರಿಪಡಿಸಲು ಮುಂದಾದ ೮೨ರ ಹರೆಯದ ವಿಧವೆ, ಹವ್ಯಾಸಿ ಚಿತ್ರಕಲಾವಿದೆ, ಅದರ ಅಂದವನ್ನು ಕೆಡಿಸಿಬಿಟ್ಟಿದ್ದಾಳೆ.

 ಮಾಸಿದ ಚಿತ್ರವನ್ನು ಸರಿಪಡಿಸಲು ಮಾಡಿದ ಪ್ರಯತ್ನ ಪ್ರಭು ಯೇಸುಸ್ವಾಮಿಯ ಚಿತ್ರವು ಅಂದಗೆಡುವಂತೆ ಮಾಡಿತು. ವಿಧವೆಯನ್ನು, ಅವಳು ಅಂದಗೆಡಿಸಿದ ಚಿತ್ರವನ್ನು ಜನ ಅಪಹಾಸ್ಯ ಮಾಡುವಂತಾಯಿತು. ಇಂದಿನ ಟ್ವಿಟರ್ ಮತ್ತು ಫೇಸ್ಬುಕ್ ಸಾಮಾಜಿಕ ಮಾಧ್ಯಮಗಳಲ್ಲಿ ಅದು ಕುಖ್ಯಾತಿಯನ್ನು ಪಡೆಯಿತು. ವಿಡಂಬನೆಯ ಮಹಾಪೂರವೇ ಹರಿದು ಬಂದಿತು.

 ಆದರೆ, ಈ ವಿಡಂಬನೆ ಮತ್ತು ಅಪಹಾಸ್ಯ ಆ ಅಪರಿಚಿತ ಹಳ್ಳಿಗೆ ಸಾಕಷ್ಟು ಪ್ರಸಿದ್ಧಿ ತಂದುಕೊಟ್ಟಿತು. ಆ ಘಟನೆಯ ಎರಡು ವರ್ಷಗಳ ನಂತರ ಆ ಹಳ್ಳಿಯ ಚಿಕ್ಕ ಚರ್ಚಿನಲ್ಲಿನ ಆ ಅಂದಗೆಟ್ಟ ಯೇಸುಸ್ವಾಮಿಯ ಚಿತ್ರ ಪ್ರವಾಸಿಗರ ಆಕರ್ಷಣೆಯ ಕೇಂದ್ರ ಬಿಂದುವಾಗಿದೆ. 

  `ನನ್ನ ಕೆಲಸ ಮಹಿಮಾಭರಿತ ಆಗಿರುತ್ತದೆ, ನಿಮ್ಮ ದೊಡ್ಡ ತಪ್ಪೇ ನನ್ನ ಅದ್ಭುತವನ್ನು ಸಾರುವ ಸಾಧನ ಎಂದು ದೇವರು ಸಾರುತ್ತಾನೆ ಎನ್ನುವಂತೆ ಪ್ರತಿವರ್ಷವೂ ಲಕ್ಷಾಂತರ  ಪ್ರವಾಸಿಗರು ಈ ಅಂದಗೆಟ್ಟ ಚಿತ್ರವನ್ನು ಮತ್ತು ಸುತ್ತಲಿನ ರಮಣೀಯ ನಿಸರ್ಗದ ಅಂದವನ್ನು ಸವಿಯಲು ಬರುತ್ತಿದ್ದಾರೆ. ಸ್ಥಳೀಯ ವಸ್ತು ಸಂಗ್ರಾಹಲಯಕ್ಕೆ ಶುಕ್ರದೆಸೆ ಪ್ರಾಪ್ತವಾಗಿದೆ

 ಸದಾ ಮಲಗಿದ್ದಂತೆಯೇ ಇರುತ್ತಿದ್ದ ಊರಿನಲ್ಲಿ ಆರ್ಥಿಕ ಚಟುವಟಿಕೆಗಳು ಗರಿಗೆದರತೊಡಗಿವೆ. ಪ್ರವಾಸೋದ್ಯಮ ಲಗ್ಗೆ ಇಟ್ಟಿದೆ. ಹೊಟೇಲುಗಳು, ಲಾಜಿಂಗುಗಳು ಆರಂಭವಾಗಿವೆ. ಸ್ಥಳೀಯ ವೈನ್ ಉತ್ಪನ್ನಗಳ ಮೇಲೆ ಅಂದಗೆಟ್ಟ ಚಿತ್ರವನ್ನು ಬಳಸಲು ಪೈಪೋಟಿ ಆರಂಭವಾಗಿದೆ!

----------------

ಎಫ್.ಎಂ.ಎನ್

----------------


No comments:

Post a Comment

ಎತ್ತಿತೋರಿಸಲಾದ ಪೋಸ್ಟ್

ಅನ್ನಮ್ಮ’ಳಿಗೆ ೨೫೦ರ ಹಾಗೂ ಅತಿ.ವಂ.ಪೊತ್ತಕಮೂರಿಗೆ ೫೦ರ ಸ್ಮರಣೆಯ ಸಂಭ್ರಮ

ಬೆಂಗಳೂರಿನ ಉತ್ತರಹಳ್ಳಿಯ ಅನ್ನಮ್ಮನ ಬೆಟ್ಟ, ಅಲ್ಲಿನ ಅನ್ನಮ್ಮಳ ಸಮಾಧಿ, ಆ ಬೆಟ್ಟದ ಮೇಲಿನ ಶಿಲುಬೆ, ಅಲ್ಲಿ ಪ್ರತಿವರ್ಷ ತಪಸ್ಸು ಕಾಲದ ಐದನೇ ಭಾನುವಾರ ನಡೆಯುವ ಯೇಸು...