ಶೀಲಗಳಲ್ಲಿ ಪ್ರಧಾನವಾದುದು ತಾಳ್ಮೆ. ಮಾನವನ ಸಂತೃಪ್ತಿಯ ಜೀವನಕ್ಕೆ ತಾಳ್ಮೆಯೇ ತಳಹದಿ. ಸ್ಥಿರವಾದ ಹಾಗೂ ಸಮೃದ್ಧಿಯ ಬದುಕಿಗೆ ತಾಳ್ಮೆ ಅತಿ ಅವಶ್ಯಕ. ಇದು ಮಾನವನ ಸಮಗ್ರ ಅಭಿವೃದ್ಧಿಗೆ ಚಾಲನೆ ನೀಡುವ ಅತ್ಯಂತ ಪ್ರಬಲ ಶಕ್ತಿ. ಈ ಕಾರಣದಿಂದಲೇ ತಾಳಿದವನು ಬಾಳಿಯಾನು, ತಾಳುವಿಕೆಗಿಂತ ತಪವು ಇಲ್ಲ ಎಂಬ ಹಿರಿಯರ ಅನುಭವದ ಮಾತುಗಳು ಇಂದಿಗೂ ಪ್ರಚಲಿತದಲ್ಲಿವೆ. ತಾಳ್ಮೆ, ಮಾನವನ ಜೀವನದ ಸಾಫಲ್ಯದ ಮಾರ್ಗವನ್ನು ವಿಶಾಲವಾಗಿ ತೆರೆಯುತ್ತದೆ. ಆದರೆ ಮಾನವ ತಾಳ್ಮೆ ಕಳೆದುಕೊಂಡಾಗ ತನ್ನ ಸಮೃದ್ಧಿಯ ಬದುಕಿಗೆ ಹಾಗೂ ಅಭ್ಯುದಯಕ್ಕೆ ತಾನೇ ಬೆಂಕಿಹಚ್ಚಿಕೊಂಡು ಸುಟ್ಟುಕೊಂಡಂತೆಯೇ ಸರಿ.
ತಾಳ್ಮೆ. ತಪಸ್ಸುಗಳಲ್ಲಿ ಅತಿ ಶ್ರೇಷ್ಠವಾದುದು. ತಾಳ್ಮೆ ಎಂದರೆ ಯಾರನ್ನೂ ದೂರದೆ, ಯಾವುದನ್ನೂ ಪ್ರಶ್ನಿಸದೆ ಜೀವನದ ಹಾದಿಯಲ್ಲಿ ಎದುರಾಗುವ ಎಲ್ಲಾ ಕಷ್ಟ-ನಷ್ಟಗಳಿಗೆ ಭಗವಂತನನ್ನು ಹೊಣೆಗಾರನÀನ್ನಾಗಿ ಮಾಡದೆ ನಿರೀಕ್ಷೆಯಿಂದ ಎಲ್ಲಾ ನಷ್ಟ ಸಂಕಟಗಳನ್ನೂ ನಗುನಗುತ್ತಲೇ ದಿಟ್ಟತನದಿಂದ ಎದುರಿಸಿ ಸ್ಥಿರ ಮನಸ್ಸಿನಿಂದಿರುವುದೇ. ಎಳೆಗರು ಎತ್ತಾಗುವವರೆಗೆ ರೈತ ಕಾಯುತ್ತಾನೆ, ಗರ್ಭಿಣಿಯಾದ ಮಹಿಳೆ ತನ್ನ ಉದರದಲ್ಲಿ ರೂಪುಗೊಳ್ಳುತ್ತಿರುವ ಕಂದನನ್ನು ಕಾಣಲು ನವ ಮಾಸಗಳು ಕಾಯುತ್ತಾಳೆ. ಕರಾಟೆಯ ಪಟು ಅವಕಾಶಕ್ಕಾಗಿ ಕಾಯುತ್ತಾನೆ. ಸನ್ಯಾಸಿ ಜ್ಞಾನಾರ್ಜನೆಗಾಗಿ ಕಾಯುತ್ತಾನೆ. ಭಕ್ತ ದೇವರ ದರುಶನಕ್ಕಾಗಿ ಕಾಯುತ್ತಾನೆ. ವಿಜ್ಞಾನಿ ತನ್ನ ಪ್ರಯೋಗದ ಫಲಕ್ಕಾಗಿ ಕಾಯುತ್ತಾನೆ. ಹೀಗೆ ಮಾನವ ನಿರೀಕ್ಷಿಸುವ ಫಲ ಅನುಭವಿಸಲು ಕಾಯಲೇಬೇಕು. ಶ್ರದ್ಧೆಯಿಂದ ಕಾಯುವವನಿಗೆ ದೇವರು ಸಹ ಒಲಿಯುವನು "ಕಾದಿದ್ದೆನು, ಪ್ರಭುವಿಗಾಗಿ ಕಾದಿದ್ದೆನು. ಕೊನೆಗಾತ ನನ್ನತ್ತ ಬಾಗಿ ಕಿವಿಗೊಟ್ಟನು" (ಕೀರ್ತನೆ 40:1) ಎನ್ನುತ್ತಾನೆ ಕೀರ್ತನಕಾರ.
ತಾಳ್ಮೆ ಮಾನವನಿಗೆ ಸ್ವ-ನಿಯಂತ್ರಣವನ್ನು, ವಿನಯವನ್ನು, ಉದಾರತೆಯನ್ನು ಕಲಿಸುತ್ತದೆ. ಮಾನವನು ತನ್ನ ಅರಿವಿನ ಅಂತರಾಳಕ್ಕಿಳಿದು ಆತ್ಮಸಂಗಮವಾಗಲು ತಾಳ್ಮೆ ಬೇಕು. ತಾಳ್ಮೆ ಮಾನವನ ಸಮಗ್ರ ಬದುಕನ್ನು ಹಸನುಗೊಳಿಸಿ ತನ್ನ ಸುತ್ತಮುತ್ತಲಿನ ಪರಿಸರದ ಅಭಿವೃದ್ಧಿಗೂ, ಜನತೆಯ ಅಭಿವೃದ್ಧಿಗೂ, ರಚನಾತ್ಮಕ ಬದುಕಿಗೂ ಆದರ್ಶವಾಗುತ್ತದೆ. ತಾಳ್ಮೆ ಎಲ್ಲಕ್ಕಿಂತ ಅಧಿಕವಾಗಿ ದೇವ ಮಾನವರ ಸಂಬಂಧವನ್ನು ಬೆಸೆಯುತ್ತದೆ. "ನಂಬಿಕೆ ನಿರೀಕ್ಷೆಯನ್ನು ಹೊಂದಿರುವ ನೀವು ಉಲ್ಲಾಸದಿಂದಿರಿ, ಸಂಕಟ ಬಂದಾಗ ಸಹನೆಯಿಂದಿರಿ. ಬೇಸರಗೊಳ್ಳದೆ ಪ್ರಾರ್ಥನೆ ಮಾಡಿರಿ" (ರೋಮನರಿಗೆ 12:12) ಎನ್ನುತ್ತಾನೆ ಸಂತ ಪೌಲ. ಈತ ತಾಳ್ಮೆಯನ್ನೇ ತನ್ನ ಬದುಕಾಗಿಸಿಕೊಂಡಿದ್ದ.
ತಾಳ್ಮೆ ವಿಶ್ವಾಸವನ್ನು ಶುದ್ಧೀಕರಿಸುತ್ತದೆ. ಭಗವಂತ ಭಕ್ತನನ್ನು ಪರಿಪರಿಯಾಗಿ ಶೋಧಿಸುತ್ತಾನೆ. ಅಕ್ಕಸಾಲಿಗನು ಚಿನ್ನವನ್ನು ಬೆಂಕಿಯಲ್ಲಿಟ್ಟು ಶುದ್ಧೀಕರಿಸುವಂತೆ. ಭಕ್ತನನ್ನು ಭಗವಂತ ಹಲವು ವಿಧದಲ್ಲಿ ಪರೀಕ್ಷೆಗೆ ಒಳಪಡಿಸುತ್ತಾನೆ. ಆಗ ಭಕ್ತ ತಾಳ್ಮೆಯನ್ನು ಕಳೆದುಕೊಳ್ಳದೆ ವಿನಯದಿಂದ ಶಿರಬಾಗಿದರೆ ಭಕ್ತನ ಭಕ್ತಿಗೆ ಭಗವಂತ ಯಥೇಚ್ಚವಾಗಿ ಫಲ ನೀಡುತ್ತಾನೆ. "ಸದ್ಯಕ್ಕೆ ನೀವು ಕೊಂಚಕಾಲ ಹಲವಿಧವಾದ ಪರಿಶೋಧನೆಗಳ ನಿಮಿತ್ತ ದುಃಖವನ್ನು ಅನುಭವಿಸಬೇಕಾಗಿದ್ದರೂ ಪ್ರತ್ಯಕ್ಷವಾಗಲಿರುವ ಆ ಸಿರಿಸಂಪತ್ತನ್ನು ಜ್ಞಾಪಿಸಿಕೊಂಡು ಹರ್ಷಚಿತ್ತರಾಗಿರಿ" (1ನೇ ಪೇತ್ರ 1:6) ಎಂದು ಕರೆ ನೀಡುತ್ತಾನೆ ಸಂತ ಪೇತ್ರ.
ತಾಳ್ಮೆ ಭರವಸೆಗೆ ಭದ್ರ ತಳಹದಿ. ತಳಹದಿಯು ಆಳವಾದಷ್ಟೂ ಕಟ್ಟಡ ಸುಭದ್ರವಾಗಿರಲು ಸಾಧ್ಯ. ಹಾಗೆಯೇ ಮಾನವನ ಬದುಕು ದೇವರಲ್ಲಿ ನೆಲೆಗೊಳ್ಳುವ ಮುನ್ನ ಶುದ್ಧವಾದಷ್ಟೂ ನಿಕಟ ಸಂಬಂಧವನ್ನು ಬೆಸೆಯಲು ಸಾಧ್ಯವಾಗುತ್ತದೆ. ಇದನ್ನು ಸಂತ ಪೌಲನು "ಪ್ರತ್ಯಕ್ಷವಾಗದೆ ಇರುವುದನ್ನು ನಾವು ನೀರೀಕ್ಷಿಸುವವರಾಗಿದ್ದರೆ, ಅದಕ್ಕಾಗಿ ತಾಳ್ಮೆಯಿಂದ ಕಾದುಕೊಂಡಿರುತ್ತೇವೆ" (ರೋಮ 8:25) ಎನ್ನುತ್ತಾನೆ. ಹಾಗೆಯೇ "ಸತ್ಕಾರ್ಯಗಳನ್ನು ಮಾಡುವುದರಲ್ಲಿ ಬೇಸರ ಪಡದಿರೋಣ, ಎದೆಗುಂದದಿರೋಣ; ಆಗ ಸೂಕ್ತ ಕಾಲದಲ್ಲಿ ಸತ್ಫಲವನ್ನು ಕೊಯ್ಯುವೆವು" (ಗಲಾತ್ಯ 6:9) ಎಂಬುದು ಭಕ್ತನೊಬ್ಬನ ಅನುಭವ.
ತಾಳ್ಮೆ ಸಹನೆಯನ್ನು ಪೋಷಿಸುತ್ತದೆ. ತಾಳ್ಮೆಯಿಂದ ಮಿಂದೆದ್ದ ಮಾನವ ಸುಖದಃಖಗಳನ್ನು ಸಮವಾಗಿ ಸ್ವೀಕರಿಸಲು ಅನುವಾಗುತ್ತಾನೆ. ಇದನ್ನೇ ಸಂತ ಯಾಕೋಬನು "ನನ್ನ ಪ್ರಿಯ ಸಹೋದರರೇ, ನಿಮಗೆ ವಿವಿಧ ಸಂಕಟ ಶೋಧನೆಗಳು ಬಂದೊದಗಿದಾಗ ಅವುಗಳನ್ನು ಸಂತೋಷದಿಂದ ಸಹಿಸಿಕೊಳ್ಳಿ. ಇವು ನಿಮ್ಮ ವಿಶ್ವಾಸವನ್ನು ಒರೆಗೆ ಹಚ್ಚಿ ನಿಮ್ಮನ್ನು ದೃಢಪಡಿಸುತ್ತವೆ; ನಿಮ್ಮನ್ನು ಸಹನಶೀಲರನ್ನಾಗಿ ಮಾಡುತ್ತವೆ. ಈ ಸಹನೆ ಸಿದ್ದಿಗೆ ಬಂದಾಗ ನೀವು ಯಾವ ಕುಂದು ಕೊರತೆ ಇಲ್ಲದೆ, ಪರಿಪೂರ್ಣರೂ ಸರ್ವಗುಣ ಸಂಪನ್ನರೂ ಆಗುತ್ತೀರಿ (ಯಾಕೋಬ 1:2-4) ಎನ್ನತ್ತಾನೆ. ತಾಳ್ಮೆ ಮಾನವನನ್ನು ಪರಿಪೂರ್ಣತೆಯೆಡೆಗೆ ನಡೆಸುತ್ತದೆ ಎಂಬುದನ್ನು ಕೀರ್ತನಕಾರ "ನನ್ನ ಜೀವಾಯುಸ್ಸು ಎನಿತು? ನನ್ನ ಬಾಳಿನ ಮುಗಿವೆಂದು? ತಿಳಿಯಪಡಿಸು ನನಗೆ ಪ್ರಭು, ನಾನು ಬಲು ಅಸ್ಥಿರನೆಂದು. ನನ್ನಾಯುಸ್ಸು ಗೇಣುದ್ದ, ನಿನ್ನೆಣಿಕೆಗದು ಶೂನ್ಯ ಮಾನವ ಜೀವನ ಕೇವಲ ಉಸಿರಿಗೆ ಸರಿಸಮಾನ. ನರಮಾನವನು ಮೆರೆದಾಡುವನು ಮಾಯೆಯಂತೆ. ಅವನ ಸಡಗರವೆಲ್ಲವೂ ನಿರರ್ಥಕದಂತೆ, ಕೂಡಿಪನಾತ ಸಿರಿ ಅದು ಯಾರದಾಗುವುದೆಂದು ಅರಿಯದೆ. ಇಂತಿರಲು ಪ್ರಭು, ನಾನೇಕೆ ಕಾದಿರಬೇಕು? ನೀನೇ ಅಲ್ಲವೆ ನನಗೆ ನಂಬಿಕೆ, ಇದು ಸಾಕು" (ಕೀರ್ತನೆ 39:4-7) ಎಂದು ಉದ್ಗರಿಸಿ ಸಂತೃಪ್ತನಾಗುತ್ತಾನೆ.
ತಾಳ್ಮೆ ಮಾನವನ ಅಂತರಂಗದಲ್ಲಿ ಸ್ಥಿರವಾಗಿ ನೆಲೆನಿಲ್ಲಲು ಪವಿತ್ರಾತ್ಮರ ಅಭಯ ಬೇಕೇಬೇಕು. ಪವಿತ್ರಾತ್ಮರು ತಾಳ್ಮೆ ಎಂಬ ಶೀಲ, ಅಂತರಂಗದಲ್ಲಿ ಆಳವಾಗಿ ಬೇರೂರಲು ಪ್ರೇರಕಶಕ್ತಿಯಾಗಿ ಕಾರ್ಯ ನಿರ್ವಹಿಸುತ್ತಾರೆ. ಇದನ್ನು ಗಲಾತ್ಯರಿಗೆ ಬರೆದ ಪತ್ರಿಕೆಯಲ್ಲಿ "ಪವಿತ್ರಾತ್ಮ ನಮ್ಮ ಜೀವಾಳವಾಗಿದ್ದಾರೆ, ಅವರೇ ನಮ್ಮ ಜೀವನದ ಮಾರ್ಗದರ್ಶಿಯೂ ಆಗಿರಬೇಕು. ನಾವು ಅಹಂಕಾರಿಗಳಾಗಿರಬಾರದು; ಒಬ್ಬರನ್ನೊಬ್ಬರು ಕೆಣಕಬಾರದು; ಒಬ್ಬರ ಮೇಲೊಬ್ಬರು ಹೊಟ್ಟೆಕಿಚ್ಚು ಪಡಬಾರದು" (ಗಲಾತ್ಯ 5:25-26) ಎಂದು ಎಚ್ಚರಿಸಲಾಗಿದೆ. ಯಾರು ನಿಷ್ಠೆಯಿಂದ ಹಾಗೂ ಪ್ರಾಮಾಣಿಕತೆಯಿಂದ ಯಾವ ಕಾರಣಕ್ಕೂ ಗೊಣಗದೆ ಇತರರ ಮನ ನೋಯಿಸದೆ ಶ್ರದ್ಧೆಯಿಂದ ತಮ್ಮ ಕಾಯಕದಲ್ಲಿ ತೊಡಗಿಕೊಳ್ಳುವರೋ ಅವರು ಒಡೆಯರಾಗಲು ಅರ್ಹರು ಎಂಬದನ್ನು ಕೀರ್ತನÉಕಾರನು "ಪ್ರಭುವಿನ ಮುಂದೆ ಪ್ರಶಾಂತನಾಗಿರು ಆತನಿಗೊಸ್ಕರ ಕಾದಿರು. ಸ್ವಾರ್ಥಿಗಳ, ಕುತಂತ್ರಿಗಳ ಏಳಿಗೆಯ ಕಂಡು ಉರಿಗೊಳ್ಳದಿರು. ಆಡಗಿಸು ಕೋಪವನು; ವರ್ಜಿಸು ಕ್ರೋಧವನು ಕಿಡಿಕಿಡಿಯಾಗಬೇಡ, ತರುವುದು ಕೇಡನು. ವಧಿತರಾಗಿ ನಾಶವಾಗುವರು, ಕೇಡು ಮಾಡುವವರು. ಪ್ರಭುವಿಗಾಗಿ ಕಾಯುವವರು ನಾಡಿಗೊಡೆಯರಾಗುವರು" (ಕೀರ್ತನೆ 37:7-9) ಎಂದು ಸ್ಪಷ್ಟಪಡಿಸುತ್ತಾನೆ.
ತಾಳ್ಮೆ ಮಾನವರಿಗೆ ಮಾತ್ರ ಸೀಮಿತವಲ್ಲ. ದೇವರೂ ಸಹ ತನ್ನ ಜನ ತನ್ನ ಬಳಿ ಬರುವಂತೆ, ಮನಃಪರಿರ್ವತನೆ ಹೊಂದುವಂತೆ ಬೇಸರಗೊಳ್ಳದೆ ತಾಳ್ಮೆಯಿಂದ ಕಾಯುತ್ತಾರೆ. ಅದಕ್ಕೆ ಉದಾಹರಣೆಯಾಗಿ ಪ್ರಭು ಯೇಸು ಈ ಕಥೆಯನ್ನು ಹೇಳುತ್ತಾರೆ "ಒಬ್ಬನು ತನ್ನ ದ್ರಾಕ್ಷಿ ತೋಟದಲ್ಲಿ ಒಂದು ಅಂಜೂರದ ಮರವನ್ನು ನೆಡಿಸಿದ್ದ. ಒಮ್ಮೆ ಅವನು ಬಂದು ಅದರಲ್ಲಿ ಹಣ್ಣು ಹುಡುಕಲು ಒಂದೂ ಕಾಣಲಿಲ್ಲ. ತೋಟಗಾರನನ್ನು ಕರೆದು, ನೋಡು, ಮೂರು ವರ್ಷಗಳಿಂದ ಈ ಮರದಲ್ಲಿ ಹಣ್ಣನ್ನು ಹುಡುಕುತ್ತಾ ಇದ್ದೇನೆ. ಒಂದಾದರೂ ಕಂಡುಬರಲಿಲ್ಲ. ಇನ್ನು ಇದನ್ನು ಕಡಿದು ಹಾಕು. ಭೂಮಿಗೆ ಭಾರವಾಗಿ ಅದರ ಸಾರವನ್ನು ಇದೇಕೆ ವ್ಯರ್ಥಮಾಡಬೇಕು? ಎಂದು ಹೇಳಿದ. ಆದಕ್ಕೆ ತೋಟಗಾರನು, ಸ್ವಾಮೀ, ಈ ಒಂದು ವರ್ಷ ಇದು ಹಾಗೆಯೆ ಇರಲಿ ಬಿಡಿ. ಅಷ್ಟರಲ್ಲಿ ಸುತ್ತಲೂ ಪಾತಿ ತೆಗೆದು ಗೊಬ್ಬರ ಹಾಕುತ್ತೇನೆ. ಅದು ಮುಂದಿನ ವರ್ಷ ಹಣ್ಣು ಬಿಟ್ಟರೆ ಸರಿ; ಇಲ್ಲದಿದ್ದರೆ ಕಡಿದು ಹಾಕೋಣ, ಎಂದನು (ಲೂಕ 13:6-9). ಆಗ ತೋಟದ ಯಜಮಾನ (ದೇವರು) ಒಂದು ವರ್ಷ ತಾಳ್ಮೆಯಿಂದ ಕಾಯುತ್ತಾನೆ. ಏಕೆಂದರೆ "ಪ್ರಭು ದಯಾಳು, ಕೃಪಾಪೂರ್ಣನು. ಸಹನಶೀಲನು, ಪ್ರೀತಿಮಯನು" (ಕೀರ್ತನೆ 103-:8) ಎಂಬುದು ಕೀರ್ತನಕಾರನ ಅನುಭವ.
ಇಂದು ಮಕ್ಕಳಿಗೆ ತಂದೆತಾಯಿಯರ ಮಾತು ಕೇಳುವ ತಾಳ್ಮೆ ಇಲ್ಲ, ವಿದ್ಯಾಥಿಗಳಿಗೆ ಶಿಕ್ಷಕರ ಮಾತು ಕೇಳುವ ತಾಳ್ಮೆ ಇಲ್ಲ, ಯುವಕರಿಗೆ ಹಿರಿಯರ ಮಾತು ಕೇಳುವ ತಾಳ್ಮೆ ಇಲ್ಲ, ರಾಜಕೀಯ ನಾಯಕರುಗಳಿಗೆ ಉನ್ನತ ಅಧಿಕಾರಿಗಳ ಮಾತು ಕೇಳುವ ತಾಳ್ಮೆ ಇಲ್ಲ. ಇದ್ದವರಿಗೆ ಇಲ್ಲದವರ ಮಾತು ಕೇಳವ ತಾಳ್ಮೆ ಇಲ್ಲ. ಈ ಕಾರಣದಿಂದಲೇ ಎಲ್ಲವೂ ಏರುಪೇರಾಗಿ ಜೀವನ ಅಸ್ತವ್ಯಸ್ತವಾಗಿ ಹಳಿ ತಪ್ಪಿ ರಚನಾತ್ಮಕ ಪ್ರಗತಿಗೆ ಅಡೆತಡೆಯಾಗಿ ಈ ಮಾನವ ಜೀವನಕ್ಕೆ ಅರ್ಥವೇ ಇಲ್ಲವಾಗುತ್ತಿದೆ. ಸ್ವಲ್ಪ ತಾಳ್ಮೆಯು, ಎದುರಾಗಬಹುದಾದ ದೊಡ್ಡ ಯುದ್ಧವನ್ನೇ ನಿಲ್ಲಸಬಲ್ಲದು. ತಾಳ್ಮೆ ಮಾನವನ ಅರಿಷಡ್ವರ್ಗಗಳನ್ನು ದಮನಮಾಡಿ ಪ್ರಶಾಂತತೆಯ ಹೊನಲನ್ನೇ ಹರಿಸಬಲ್ಲದು. ತಾಳ್ಮೆಯನ್ನು ರೂಡಿಸಿಕೊಂಡರೆ ಮಾನವ ತನ್ನ ಜೀವನದ ದಿಕ್ಕನ್ನೇ ಬದಲಿಸಬಹುದು. ಈ ಮಾನವ ಜೀವನ ತುಂಬಾ ಅಮೂಲ್ಯವಾದುದು. ಇದು ಭಗವಂತನ ಅತ್ಯಮೂಲ್ಯವಾದ ಉದಾರ ಉಡುಗೊರೆ. ಇದು ಸಾರ್ಥಕವಾಗಬೇಕಾದರೆ ತಾಳ್ಮೆ ಮಾನವರ ಅಂತರಂಗದಲ್ಲಿ ನೆಲೆನಿಂತು ಆಳವಾಗಿ ಬೇರು ಬಿಡಬೇಕು. ಆಗ ಅದನ್ನು ಕಿತ್ತೆಸೆಯಲು ಭಗವಂತನಿಗೂ ಸ್ವಲ್ಪ ಕಷ್ಟವೇ!
====================
No comments:
Post a Comment