ಸೋಲು ಗೆಲುವ ಸೆಣೆಸುತ್ತಿರಲು
ಹಿಂದಕ್ಕೇಕೆ ಸರಿಯುವೆ
ಅಂದು ಸೋತಿಹ ಸಿದ್ದನೇ
ಇಂದು ಗೆದ್ದಿಹ ಬುದ್ದನು
ಎಂದು ನೀನು ತಿಳಿಯುವೆ ?
ಗಾಳಿ ಗೆದ್ದಿತು ಮೋಡ ಸೋತಿತು
ಅರಿವ ಮಳೆಯು ಸುರಿಯಿತು
ಬೆಟ್ಟ ನಿಂತಿತ್ತು ಗಾಳಿಯ ತಡೆಯಿತು
ಗಾಳಿ ಸೋತು ನಾಚಿ ಬೀಸಿತು
ಗೆದ್ದ ಬೆಟ್ಟವು ತಾನ್ ನಲಿಯಿತು
ಸೋತ ಮೋಡದ ಅರಿವ ಮಳೆಯದು
ನದಿಯನು ಸೇರಿ ಬೆಟ್ಟವ ಕೊರೆದು
ತನ್ನ ಗೆಲುವ ಮೆರೆಯಿತು
ಆ ನೀಲಿ ಕಡಲಿಗೆ ಸೋತಿತು
ಅಲೆಯಾಗಿ ಮತ್ತೆ ಮೊರೆಯಿತು
ಗಾಳಿ ಮತ್ತೆ ಗೆಲುವಾಗಿ ಬೀಸಿತು
ಸೋಲು ಗೆಲುವ ಸೆಣೆಸುತ್ತಿರಲು
ಹಿಂದಕ್ಕೇಕೆ ಸರಿಯುವೆ ?
ಸೋಲು ಗೆಲುವಿನ ರಾಟೆ ತಿರುವಲಿ
ಅನುಭವದ ಕೊಡವು ತುಂಬಲಿ
ಬದುಕು ಸೋಲಲಿ ಸೋತು ಗೆಲ್ಲಲಿ
ಗೆಲುವ ತಟವ ಅದು ಸೇರಲಿ
ಗೆದ್ದ ಹಮ್ಮನು ಸೋತ ವಿನಯವು
ಎಂದೆಂದೂ ಸದಾ ಗೆಲ್ಲಲಿ
ಇಂದು ಸೋತರೆ ನಾಳೆ ಗೆಲ್ಲುವೆ
ಇರುಳು ಸೋತರೆ ಗೆಲುವ ಹಗಲಿದೆ
ಎಂದು ಮನುಜ ತಿಳಿಯಲಿ
ಸೋತು ಗೆಲುವ ಅರಿಯಲಿ
- ಆಜು
(ಮರಿಯಾಪುರ)
=============
No comments:
Post a Comment