Monday, 9 November 2020

ಸ್ವಾತಂತ್ರ ಮತ್ತು ಶಿಕ್ಷಣ - ಶಿವಮೂರ್ತಿ

 ಪ್ರಕೃತಿಯ ಮಡಿಲಲ್ಲಿ ಊಹಿಸಲು ಸಾಧ್ಯವಾಗದಷ್ಟು ಅತಿದೊಡ್ಡ ಗಾತ್ರ ಹೊಂದಿರುವ ಬ್ರಹ್ಮಾಂಡದಲ್ಲಿ ವಿವಿಧ ಜೀವಸಂಕುಲವು ಕಾಣಿಸಿಕೊಳ್ಳುತ್ತಿವೆ ಎಂದಾದರೆ ಅದು     ಸೌರವ್ಯೂಹದಲ್ಲಿರುವ ೮ ಗ್ರಹಗಳ ಪೈಕಿ  ನಮ್ಮ ಭೂಮಿ ಮಾತ್ರ. ಇದನ್ನ ನಾವು Habitable zone 
ಅಂತ ಹೇಳ್ತಿವಿ. ಹೀಗೆಂದರೆ ಜೀವಿಸುವುದಕ್ಕೆ      ಯೋಗ್ಯವಾದ ಗ್ರಹ ಎಂದರ್ಥ. ಸರಿಯಾದ ಗಾಳಿ, ನೀರು, ಬೆಳಕು, ಆಹಾರ, ಬದುಕಲಿಕ್ಕೆ ಅಗತ್ಯವಾದ ಮೂಲಭೂತ ಸೌಕರ್ಯಗಳಿಗೆ ಇಲ್ಲಿ ಯಾವುದೇ ರೀತಿಯ ಸಮಸ್ಯೆಯಿಲ್ಲ. ಆದರೆ ಮನುಷ್ಯನ ಅಂತರಾಳಕ್ಕೆ ಸಂಬಂಧಪಟ್ಟಂತೆ ಜಗತ್ತಿನ ಕೋಟ್ಯನುಕೋಟಿ ಮನುಷ್ಯರಲ್ಲಿ ಒಂದಲ್ಲ ಒಂದು ರೀತಿಯ ಅತೃಪ್ತಿ ಇದೆ. ಭಿನ್ನವಾದ ವೈಮನಸ್ಸು ನೆಮ್ಮದಿಯಿಲ್ಲದ ಬಾಳ ಪಯಣ ಒಂದೆತ್ತಿನ ಬಂಡಿಯಂತೆ ಸಾಗುತ್ತಲೇ ಇದೆ.

 ಕೆಲವರ ಹತ್ತಿರ ದುಡ್ಡಿದೆ, ನೆಮ್ಮದಿಯಿಲ್ಲದ ರೋದನೆ ಸಾಕಷ್ಟಿದೆ. ಕೆಲವರ ಹತ್ತಿರ ನೆಮ್ಮದಿ ಇದೆ ಆದರೆ ಬಡತನದ ಬಾಗಿಲು ಯಾವಾಗಲೂ ತೆರೆಯುತ್ತಲೇ ಇದೆ.

 ಅಲ್ಲೊಬ್ಬ ತುತ್ತು ಅನ್ನಕ್ಕಾಗಿ ಪರದಾಡುತ್ತಿದ್ದಾನೆ ಇಲ್ಲೊಬ್ಬ ಇಡೀ ಜಗತ್ತೇ ನನ್ನದೆಂದು ಸಿಕ್ಕಸಿಕ್ಕ ಭೂಮಿಗೆಲ್ಲಾ ಮಾಲಿಕನಾಗಲು ಹೊರಟಿದ್ದಾನೆ.

ಅದ್ಯಾವುದೋ ಒಂದು ಮಷೀನ್ ತಯಾರಿಸಿದ ಕಾಗದದ ಚೂರಿನಿಂದ ಆ ಮನುಷ್ಯ ಪ್ರಕೃತಿಯೇ  ನನ್ನದೆಂದು ಬೀಗುತ್ತಿದ್ದಾನೆ.

 ಭೂಮಿಯೊಳಗಿನ ಲಾವಾರಸ ಭೂಮಿಯ ಸುತ್ತಲೂ ಸುತ್ತುವರಿದ ನೀಲಿ ಪ್ರದೇಶವಾದ ನೀರು ಸುನಾಮಿಯ ಹೆಸರಲ್ಲಿ ಪ್ರಕೃತಿಯು ತಾಳ್ಮೆ ಕಳೆದುಕೊಂಡು ಬೀಗಿದರೆ ಅವನ ಜೊತೆ ಸರ್ವವು ನೆಲಸಮವಾಗುವುದರಲ್ಲಿ ಅನುಮಾನದ ಪ್ರಶ್ನೆಯೇ ಇಲ್ಲ ಎನ್ನುವುದು ಅವನಿಗರಿಯದ ಸಂಗತಿ. ಇದು ಪ್ರಕೃತಿ ಮತ್ತು ಮನುಷ್ಯನ ತರ್ಕಬದ್ಧ ವಾದ.

ಇಷ್ಟಾಗಿಯೂ ಮನುಷ್ಯ ಪ್ರಕೃತಿಯ ಮೇಲೆ ಮಾಡುತ್ತಿರುವ ದಬ್ಬಾಳಿಕೆ ಮನುಷ್ಯ ಮನುಷ್ಯನಿಗೆ ಮಾಡುತ್ತಿರುವ ದಬ್ಬಾಳಿಕೆಯು ಮಾತ್ರ ನಿರಂತರವಾಗಿದೆ.ಮಂಗನಿಂದ ಮಾನವನಾದ ಅನ್ನೋದನ್ನ ವಿಜ್ಞಾನದ ಆರಂಭದಲ್ಲಿ ನಾವು ಅರಿತುಕೊಂಡಿದ್ದೇವೆ. ದಿನದಿಂದ ದಿನಕ್ಕೆ ಬೇರೆಬೇರೆ ಪ್ರದೇಶಗಳಿಗೆ ಮಾನವ ಸ್ಥಳಾಂತರಗೊಂಡು ಅಲೆಮಾರಿ ಜೀವನ ನಡೆಸುತ್ತಿದ್ದ ಅನ್ನೋದು ವಿಪರ್ಯಾಸವೇನಲ್ಲ. ಅಂದಿನ ಕಾಲಘಟ್ಟದಲ್ಲಿ ಮಾನವ ಬೆಳೆಯುತ್ತಿರುವ ಮಗುವಾಗಿದ್ದ ಎಂದು ಹೇಳಬಹುದು. ಗಡ್ಡೆಗೆಣಸು,ಹಣ್ಣು ಹಂಪಲು ತಿಂದು ಜೀವನ ನಡೆಸುತ್ತಿದ್ದ ಕಾಲವದು. ಎರಡು ಕಲ್ಲುಗಳ ನಡುವೆ ಘರ್ಷಣೆಯಾಗಿ ಬೆಂಕಿಯನ್ನು ಕಂಡುಕೊಂಡು ಕಾಡು ಪ್ರಾಣಿಗಳನ್ನು ಕೊಂದು ಬೆಂಕಿಯಿಂದ ಸುಟ್ಟು ಸೇವಿಸುತ್ತಿದ್ದ. ಅಲ್ಲಿಂದ ಒಂದೆಡೆ ಗವಿಯಲ್ಲಿದ್ದು ಕೊಂಡು ಜೀವನ ಮಾಡಲು ಕಲಿತ. ಮುಂದೆ ಕೃಷಿ ಮಾಡುವ ಯೋಜನೆ ರೂಪಿಸಿಕೊಂಡು ಹೊರಟ. ಆ ಸಂದರ್ಭದಲ್ಲಿ ಅವನ ಮನಸ್ಸಿಗೆ ಹೊಕ್ಕ ಸಂಗ್ರಹಣೆಯ ಆಲೋಚನೆ ವಾಸಿಸುವ ಯೋಜನೆಯಲ್ಲಿ ಬಂದ ಮಾನವ ಇಂದು ಭೂಮಿ ನನ್ನದು ಅದರೊಳಗಿನ ಸಂಪತ್ತು ನನ್ನದು ಎಂದು ಹೀಗೆ ತನ್ನ ಆವಶ್ಯಕತೆಗೂ ಮೀರಿ ಆಸೆಪಡುವಲ್ಲಿ ಮನುಷ್ಯ ಯಶಸ್ವಿ ಸಾಧಿಸಿದ್ದಾನೆ. ದೇಶದೇಶಗಳ ಮೇಲೆ, ರಾಜ್ಯ ರಾಜ್ಯಗಳ ಮೇಲೆ, ರಾಜ್ಯ ಸಂಸ್ಥಾನಗಳ ಮೇಲೆ ಮನುಷ್ಯ ಮನುಷ್ಯನ ಮೇಲೆ, ಅಷ್ಟೇ ಅಲ್ಲದೆ ಇಂದು ಇಡೀ ಸಮಾಜದ ಮೇಲೆ ಅವನ ದಬ್ಬಾಳಿಕೆ ಶೋಷಣೆ ಮಿತಿಮೀರಿಹೋಗಿದೆ.

ಅಂದು ಯಾವುದೋ ಒಂದು ಯೂರೋಪ್ ಎಂಬ ಖಂಡದ ಜನಾಂಗದವರು ಭಾರತಕ್ಕೆ ಜಲಮಾರ್ಗ ಕಂಡು ಹಿಡಿಯುವಲ್ಲಿ ತಮ್ಮ ಗುರಿ ತಲುಪಿ ಯಶಸ್ವಿಯಾದರು. ಮೇ೧೭-೨೦೨೦ಕ್ಕೆ ಇಂದಿಗೆ ಸರಿಯಾಗಿ ೫೨೨ ವರ್ಷಗಳು ಕಳದೇ ಬಿಟ್ಟವು.

ಆ ದಿನ ಭಾರತಕ್ಕೆ ಯುರೋಪಿಯನ್ನರ ಅಂದರೆ ಪೋರ್ಚುಗೀಸರ ಆಗಮನ ಆಗಿಯೇ ಬಿಟ್ಟಿತು. ಭಾರತಕ್ಕೆ ಮೊದಲು ಬಂದ ಯೂರೋಪಿಯನ್ನರಲ್ಲಿ ಇವರೇ ಮೊದಲು ಮತ್ತು ಇವರೇ ಕೊನೆಯವರು ಅನ್ನೋದು ಸ್ವಲ್ಪ ವಿಭಿನ್ನ ಸಂಗತಿ.

ನಂತರದಲ್ಲಿ ಡಚ್ಚರು ಬ್ರಿಟಿಷರು ಮತ್ತು ಕೊನೆಯಲ್ಲಿ ಬಂದವರೇ ಫ್ರೆಂಚರು ಅನ್ನೋದು ಐತಿಹಾಸಿಕ ಅನುಕ್ರಮವಾಗಿದೆ. ಅಷ್ಟು  ದೇಶಗಳಲ್ಲಿ  ದೀರ್ಘಕಾಲ ಭಾರತವನ್ನಾಳಿದ, ಕೊಳ್ಳೆಹೊಡೆದ, ಅಮಾಯಕರ ಬಲಿ ಪಶು ಮಾಡಿದ ಪ್ರಶಸ್ತಿ ಬ್ರಿಟಿಷರು ಅಂದರೆ ಇಂದಿನ ಇಂಗ್ಲೆಂಡ್ ದೇಶಕ್ಕೆ ಸೇರಬೇಕಾಗಿದೆ.

೧೭೫೭ರ ಪ್ಲಾಸಿ ಕದನ ಆರಂಭವಾದ ಸಂದರ್ಭದಿಂದಲೂ ಭಾರತದ ಮೇಲಿನ ಇವರ  ಶೋಷಣೆ ದಬ್ಬಾಳಿಕೆ ೧೯೪೭ ಆಗಸ್ಟ್ ೧೫ರ ವರೆಗೂ ಮುಗಿಯದ ಕಥೆಯಾಗಿತ್ತು. ಭಾರತೀಯ ವೀರಪುತ್ರರ ಹೋರಾಟದ ಫಲವಾಗಿ ಮತ್ತು ಅಂದಿನ ಬ್ರಿಟಿಷ್ ಪ್ರಧಾನಿ ಕ್ಲೆಮೆಂಟ್ ಆಟ್ಲಿ, ಹಾಗೆಯೇ ವೈಸರಾಯ್ ಮೌಂಟ್ ಬ್ಯಾಟನ್‌ರವರ ಕೊಡುಗೆಯಾಗಿ ದೇಶಕ್ಕೆ ಸ್ವಾತಂತ್ರ ಸಿಕ್ಕೆ ಬಿಡ್ತು.

ಅಂದರೆ ಆ ದಿನ ನಾವು ಪರಕೀಯರಿಂದ ವಿಮುಕ್ತರಾಗಿ ದೇಶದೆಲ್ಲೆಡೆ ಸಂಭ್ರಮ ಆಚರಿಸಿ ಸಿಹಿ ಹಂಚಿ ಕೊಂಡೆವು. ಅಂದಿನಿಂದ ಇಂದಿನವರೆಗೆ ಪ್ರತಿವರ್ಷ ಆಗಸ್ಟ್ ೧೫ರಂದು ರಾಷ್ಟ್ರೀಯ ಹಬ್ಬವಾಗಿ ಆಚರಿಸುತ್ತೇವೆ.

 ಇಂಗ್ಲಿಷರ  ಪೈಕಿ ಜನವರಿ ೧ರಂದು ಹೊಸ ವರ್ಷದ ಸಂಭ್ರಮಾಚರಣೆ ಮಾಡುತ್ತೇವೆ ಹಾಗೆ ಪರಿಸರದ ಬದಲಾವಣೆ ಮತ್ತು ಚಿಗುರೊಡೆಯುವ ಹಸಿರು ಎಲೆಗಳ ಆಧಾರದ ಮೇಲೆ ಯುಗಾದಿಯ ಸಂದರ್ಭದಲ್ಲಿ ಹೊಸ ವರ್ಷಾಚರಣೆ ಮಾಡುತ್ತೇವೆ. ರಾಷ್ಟ್ರೀಯವಾಗಿ ಹೇಳಬೇಕೆಂದರೆ ಆಗಷ್ಟ್ ೧೫ ರಂದು ಭಾರತೀಯರ ಹೊಸ ಜೀವನ ಆರಂಭವಾದ ದಿನ ಎಂದು ಹೇಳಿದರೆ ತಪ್ಪಾಗದು. ಇತಿಹಾಸ ಏನೇ ಇರಲಿ ಪ್ರಸ್ತುತ ಸ್ಥಿತಿಯ ಬಗ್ಗೆ ನಾವೆಲ್ಲ ಹೆಚ್ಚೆಚ್ಚು ಯೋಚಿಸಬೇಕಾಗಿದೆ. ದೇಶದಲ್ಲಾಗುವ ಅನ್ಯಾಯ ಅಕ್ರಮಗಳ ವಿರುದ್ಧ ಬಂಡಾಯವೇಳಲೇ ಬೇಕಾಗಿದೆ ರಾಷ್ಟ್ರ ಮತ್ತು ರಾಜ್ಯ ರಾಜಕಾರಣದಲ್ಲಿ ಆಗುವ ಭ್ರಷ್ಟಾಚಾರದ ವಿರುದ್ಧ ಕದನ ಮಾಡಬೇಕಾಗಿದೆ.

ಸ್ವ-ದೇಶದ ಜನ ತಮ್ಮ ಅನುಕೂಲಕ್ಕೆ ತಕ್ಕಂತೆ ಬದುಕಲು, ಶೋಷಣೆ ರಹಿತವಾಗಿ ಜೀವಿಸಲು, ತಮಗಿಷ್ಟ ಬಂದಂತೆ ಅವರು ತಮ್ಮ ಬದುಕನ್ನು ರೂಪಿಸಿಕೊಳ್ಳಲು, ಇಷ್ಟು ವರ್ಷಗಳ ಕಾಲ ನಾವು ಅವರಿಗೆ ನೀಡಿದ ಕಾರಣವಿಲ್ಲದೆ ಶಿಕ್ಷೆಗಳು ನಿಲ್ಲಲಿ ಎಂದು ಹೀಗೆ ಹತ್ತು ಹಲವು ವಿಚಾರಗಳನ್ನು ಮುಂದಿಟ್ಟುಕೊಂಡು ಮತ್ತು ರಾಷ್ಟ್ರೀಯ ಮಹಾತ್ಮರ ಉಪವಾಸ, ತ್ಯಾಗ ಬಲಿದಾನಗಳ ಹೋರಾಟಕ್ಕೆ ಹೆದರಿ ಬ್ರಿಟೀಷರು ನಮ್ಮ ಭಾರತವನ್ನು ಮರಳಿ ನಮಗೆ ಆರ್ಪಿಸಿ ಹೋದರು. ಆದರೆ ಅಂದು ಮಹಾತ್ಮರು ಕಂಡ ಸುಖಿ ಸಾಮ್ರಾಜ್ಯ, ರಾಮರಾಜ್ಯದ ಕನಸುಗಳು ಇಂದಿಗೂ ಕನಸಾಗಿಯೇ ಉಳಿದಿವೆ. ಸ್ವಾತಂತ್ರ ಸಿಕ್ಕು ೭೪ ವರ್ಷ ಕಳೆದರೂ ದೇಶದಲ್ಲಿ ಹಸಿವಿನ ಅಳಲು ಅರಗಿಸಿಕೊಳ್ಳಲಾರದಂತಿದೆ. ಕೂಸು ಕಂದಮ್ಮಗಳು ಅಪೌಷ್ಟಿಕತೆಯ ಬೇಲಿಗೆ ಬಂದಿಯಾಗಿವೆ. ಯುವ ಸಮುದಾಯವಂತೂ  ಇಲ್ಲಸಲ್ಲದ ವಿಚಾರಗಳಿಗೆ ಬಲಿಯಾಗುತ್ತಿದೆ.

ನ್ಯಾಯದ ಕೋಟೆಯು ಅನ್ಯಾಯದ ಮಳೆಗೆ ತೊಯ್ದು ಕುಸಿದುಬಿದ್ದಿದೆ. ಸಿರಿವಂತನಿಗೆ ಸಿರಿವಂತನೆ ಸಾಟಿ ಬಡವನಿಗೆ ಬಡವನೇ ಸಾಟಿ ಎಂಬುದು ಪ್ರಾಯೋಗಿಕವಾಗಿ ಸಾಬೀತಾಗುತ್ತಿದೆ.

ಎಷ್ಟು ದಿನಗಳ ಕಾಲ ಹೀಗೆಯೇ ಬಡವ ಬಡವನಾಗಿ ಉಳಿಯಬೇಕು? ಅವನ ಅಭಿವೃದ್ಧಿಯ ಬೆಳವಣಿಗೆಗೆ ಅಡ್ಡಬೇಲಿ ಹಾಕುತ್ತಿರುವವರಾದರು ಯಾರು ಎಂಬುದು ಯಕ್ಷಪ್ರಶ್ನೆಯಾಗಿದೆ?

ಬಡತನವನ್ನು ಮೆಟ್ಟಿನಿಲ್ಲುವ ಸಾಮರ್ಥ್ಯವು ಮನುಷ್ಯನಿಗೆ ಇದೆ ಅನ್ನೋದನ್ನ ಮರೆತಂತಿದೆ. ಸ್ವಾತಂತ್ರ್ಯ ಸಿಕ್ಕು ಎರಡು ವರ್ಷಗಳ ನಂತರ ನಮಗೆ ಸಂವಿಧಾನ ವರದಾನವಾಯಿತು. ಅದರ ಸೃಷ್ಟಿಕರ್ತ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ೨ ಪ್ರಮುಖ ಹಕ್ಕುಗಳನ್ನ ನೀಡಿ ದೇವರೆನಿಸಿಕೊಂಡರು.

ಮತದಾನ ಮತ್ತು ಶಿಕ್ಷಣದ ಹಕ್ಕುಗಳನ್ನು ನೀಡಿ ಕೊರಗುತ್ತಿರುವ ಜನಾಂಗಕ್ಕೆ ಶೋಷಿತರ ಬದುಕಿಗೆ ಮರುಜನ್ಮ ನೀಡಿದರು.

ನಾವು ಬದುಕಿನಲ್ಲಿ ಎಲ್ಲಾ ರೀತಿಯ ಹಕ್ಕುಗಳನ್ನು ಪಡೆಯುವಲ್ಲಿ ವಿಫಲರಾದರೂ ಈ ಎರಡು ಹಕ್ಕುಗಳಿಂದ ಮನುಷ್ಯ ನಿಜಕ್ಕೂ ಅಭಿವೃದ್ಧಿಯ ಪಥ ಹಿಡಿಯುತ್ತಾನೆ ಎಂಬುದು ಸತ್ಯ ಸಂಗತಿಯಾಗಿದೆ. ಇನ್ನು ಇವೆರಡರಲ್ಲಿ ಮತದಾನದ ವಿಚಾರ ಬಂದಾಗ ನಾವು ಸರಿಯಾದ ರೀತಿ ಮತದಾನ ಮಾಡದೆ ಉತ್ತಮ ನಾಯಕರನ್ನು ಆರಿಸದೆ ಹೋದರೆ ಅಲ್ಲಿ ಕೂಡ ದುರ್ಬಲರಾಗುವ ಸಾಧ್ಯತೆ ಹೆಚ್ಚಿರುತ್ತದೆ. ಎಲ್ಲವೂ ಕೈಕೊಟ್ಟಾಗ ಶಿಕ್ಷಣವು ನಮ್ಮ ಮನೋಬಲವನ್ನ ಹೆಚ್ಚಿಸುತ್ತದೆ ಎಂಬುದಕ್ಕೆ ಸಾಕಷ್ಟು ಸಾಕ್ಷಿಗಳು ನಮ್ಮ ಮಧ್ಯೆಯೇ ಇವೆ.

ಈ ಸಮಾಜದಲ್ಲಿ ಎಲ್ಲಾ ರೀತಿಯ ವ್ಯಕ್ತಿತ್ವಗಳನ್ನು ಕಾಣುತ್ತೇವೆ. ಕ್ರೀಡಾಪಟುಗಳು ಸೋತಿದ್ದನ್ನು ನೋಡಿದ್ದೇವೆ, ಚುನಾವಣೆಯಲ್ಲಿ ನಿಂತು ಒಂದೆರಡು ಮತಗಳಲ್ಲಿ ತಮ್ಮ ಕುರ್ಚಿ ಆಸೆ ಬಿಟ್ಟ ರಾಜಕಾರಣಿಗಳನ್ನೂ ಕಂಡಿದ್ದೇವೆ. ಆದರೆ ಪ್ರಾಮಾಣಿಕತೆಯ ಶಿಕ್ಷಣ ಪಡೆದು ನಿರಂತರ ಶ್ರಮ ವಹಿಸಿದ ವ್ಯಕ್ತಿಯ ಸೋಲನ್ನ ಕಂಡದ್ದು ಬಹುಶಃ ಇತಿಹಾಸದಲ್ಲಿ ಯಾರು ಕಂಡಿಲ್ಲ. ಪ್ರಾಮಾಣಿಕ ಓದುಗನ ಬದುಕು ಸೋಲಲು ಸಾಧ್ಯವೇ ಇಲ್ಲ ಅನ್ನೋದಕ್ಕೆ ಉದಾಹರಣೆ ನಮ್ಮ ಸಂವಿಧಾನ ಶಿಲ್ಪಿ ಯನ್ನ ಬಿಟ್ಟು ಬೇರೊಬ್ಬ  ವ್ಯಕ್ತಿಯ ಹೆಸರನ್ನ  ಹೇಳಲು ನನಗೆ ಅಸಾಧ್ಯದ ವಿಚಾರ. ಆತನ ನಿರಂತರ ಶಿಕ್ಷಣದ ಫಲ ಇವತ್ತು ಆತನನ್ನು ಜ್ಞಾನದ ಭಂಡಾರವನ್ನಾಗಿಸಿದೆ.

ಆತನ ಅಭ್ಯಾಸದ ನಿಯಮಗಳು ಇಂದು ಜಗತ್ತಿನ ಅಂಧಕಾರರ ಪಾಲಿಗೆ ಬೆಳಕಾಗಿವೆ. ಆತನ ಪ್ರಾಮಾಣಿಕ ಶಿಕ್ಷಣ ಇಂದು ಆತನನ್ನ ದೇವರನ್ನಾಗಿಸಿದೆ. ಇದಿಷ್ಟು ಸಾಕಲ್ಲವೇ ಶಿಕ್ಷಣದ ಮಹತ್ವ ಅರಿತುಕೊಳ್ಳಲು. ಈಗಾಗಲೇ ನಿಮಗೆಲ್ಲ ನನ್ನ ಜೀವಕೋಶಗಳ ಇಂಚಿಂಚಿನ ಭಾವನೆಗಳು ಅರ್ಥವಾಗಿವೆ ಎಂದುಕೊಂಡಿದ್ದೇನೆ. ಅದೇ ನಿಟ್ಟಿನಲ್ಲಿ ಅಂಬೇಡ್ಕರರ ಒಂದು ಮಾತು ಹೇಳಬಯಸುತ್ತೇನೆ ಮೈ ಮೇಲೆ ಹರಕು ಬಟ್ಟೆ ಇದ್ದರೂ ಚಿಂತೆಯಿಲ್ಲ ಕೈಯಲ್ಲೊಂದು ಪುಸ್ತಕ ಮತ್ತು ಪೆನ್ನಿರಲಿ ಎಂದು. ಇವೆರಡರಿಂದ ನಾವು ಜಗತ್ತನ್ನೇ ಗೆಲ್ಲಬಹುದು ಎನ್ನುವುದು ಅವರ ವ್ಯಕ್ತಿತ್ವದ ಮಾತಾಗಿದೆ. ಅದನ್ನ ನಮ್ಮ ಬದುಕಿನಲ್ಲಿಯೂ ಅಳವಡಿಸಿಕೊಂಡಿದ್ದೇ ನಿಜವಾದಲ್ಲಿ ಬದುಕು ಸಾರ್ಥಕವಾಗುತ್ತದೆ.

 ದೇಶ ರಾಮ ರಾಜ್ಯವಾಗುವುದು ಸ್ವಾತಂತ್ರ್ಯ ಸಂಗ್ರಾಮಕ್ಕೂ ಒಂದರ್ಥ ಸಿಗುವುದು ಅನ್ನೋದು ನನ್ನ ನಿಖರ ಅಭಿಪ್ರಾಯ. ಓದಿನ ಅಭ್ಯಾಸ ನಿರಂತರವಾಗಿರಲಿ. ಸಂಧರ್ಭ ಯಾವುದೇ ಆಗಿರಲಿ, ಅಭ್ಯಾಸದ ಗಮನ ನಿರಂತರವಾಗಿರಲಿ. ಸರ್ವ ಶಕ್ತಿಗಳ ಮಾಲಿಕನು ಸರಸ್ವತಿಯ ಪುತ್ರನಾಗುತ್ತಾನೆ. ಜ್ಞಾನದಿಂದ ಎಲ್ಲವನ್ನು ನಾವು ಗಳಿಸಿಕೊಳ್ಳಬಹುದು. ಜ್ಞಾನಕ್ಕಿಂತ ಮಿಗಿಲಾದ ಶಕ್ತಿ ಈ ಜಗತ್ತಿನಲ್ಲಿ ಮತ್ತೊಂದು ಇಲ್ಲ. 

**********



No comments:

Post a Comment

ಎತ್ತಿತೋರಿಸಲಾದ ಪೋಸ್ಟ್

ಅನ್ನಮ್ಮ’ಳಿಗೆ ೨೫೦ರ ಹಾಗೂ ಅತಿ.ವಂ.ಪೊತ್ತಕಮೂರಿಗೆ ೫೦ರ ಸ್ಮರಣೆಯ ಸಂಭ್ರಮ

ಬೆಂಗಳೂರಿನ ಉತ್ತರಹಳ್ಳಿಯ ಅನ್ನಮ್ಮನ ಬೆಟ್ಟ, ಅಲ್ಲಿನ ಅನ್ನಮ್ಮಳ ಸಮಾಧಿ, ಆ ಬೆಟ್ಟದ ಮೇಲಿನ ಶಿಲುಬೆ, ಅಲ್ಲಿ ಪ್ರತಿವರ್ಷ ತಪಸ್ಸು ಕಾಲದ ಐದನೇ ಭಾನುವಾರ ನಡೆಯುವ ಯೇಸು...