Sunday, 8 November 2020

ಕುವೆಂಪು ವಿರಚಿತ - ಜಲಗಾರ' ನಾಟಕದಿಂದ

 ಜಲಗಾರ : ಮಾನುಷವಾಗಿ ಕಂಡರೂ ಅಮಾನುಷವಾಗಿ

ತೋರುತಿಹೆ! ಮಿಣುಕುತಿಹ ತಾರೆಗಳನೇಳಿಸುವ

ಕಂಗಳಿಂದೇಕೆನ್ನ ನೋಡುತಿಹೆ ಇಂತು?

ನೀನಾರು? ಆಕೃತಿಯೆ?

ಜಗದ ಜಲಗಾರ : ನಾನೊಬ್ಬ ಜಲಗಾರ.

ಅಂಜದಿರು, ಸೋದರನೆ! ಜಗದ ಜಲಗಾರ

ನಾನು! ಶಿವನೆಂದು ಕರೆಯುವರು ಎನ್ನ!

ರುದ್ರನೆಂಬರು ಎನ್ನ; ಶಿವನೆಂಬರೆನ್ನ;

ಹೇಸುವರು, ಅಂಜುವರು, ಜಲಗಾರನೆನಲು!

ಜಲಗಾರ: ನಿನ್ನನಾ ಶಿವನೆಂದು ನಂಬುವುದೆಂತು? ಹೇ ದೇವ,

ನಿನ್ನೀ ರೂಪಮಂ ನಾನೆಂದುಮಾವೆಡೆಯೊಳುಂ

ಕಂಡರಿಯೆ, ಕೇಳರಿಯೆ. ತಿಳಿದವರು, ಪಂಡಿತರು,

ಬೇರೊಂದು ರೀತಿಯಲ್ಲಿ ಬಣ್ಣಿಸಿರುವರು ನಿನ್ನ

ಜಗದ ಜಲಗಾರ: "ನಾನು ಶಾಸ್ತ್ರಿಗಳ ಶಿವನಲ್ಲ, ಕಾವ್ಯಗಳ ಶಿವನಲ್ಲ ಬೆಳ್ಳಿಬೆಟ್ಟದ ಮೇಲೆ ಗಿರಿಜೆಯೊಡಗೂಡಿ ಸರಸವಾಡುವ ರಸಿಕ ಶಿವನಲ್ಲ! ಬ್ರಹ್ಮಾಂಡ ಒತ್ತುತಿಹ ಕಸದ ರಾಸಿಯ ಮೇಲೆ ಹತ್ತಿ, ನಿಂತು ನರ್ತನವೆಸಗುತಿಹ ತೋಟಿ ನಾನು! ನಿಜಶಿವನು ಜಲಗಾರ! ನಿನ್ನ ಮುಂದಿಹನು, ನೋಡು"

ಜಲಗಾರ : ಪಂಡಿತರದೇಕಂತು ಬಣ್ಣಿಪರು ನಿನ್ನ?" 

ಜಗದ ಜಲಗಾರ: "ಶಾಸ್ತ್ರಿಗಳ ಕಂಗಳಿಗೆ ನಾನು ನೋಡಲು ಕುರೂಪಿಯಾಗಿದರಿಂದ ತಣ್ಗದಿರನೊಡವೆ ಮಾಡಿದರು. ಅವರ ಭಾಗಕೆ ನಾನು ಪಾಪಿಯಾಗಿದ್ದರಿಂದ ಗಂಗೆಯನ್ನು ತಲೆಯಲ್ಲಿಟ್ಟು ಶುದ್ಧ ಮಾಡಿದರು! ಅಸ್ಪೃಶ್ಯನಾಗಿದ್ದರಿಂದ ಹಣೆಗಣ್ಣಿನ ಬೆಂಕಿಯಿಂದ ಸುಟ್ಟರು. ರೌದ್ರವಾಗಿ ನಾನು ಕಾಣಬೇಕೆಂದು ಹಾವುಗಳ ಸುತ್ತಿದರು 

ಚಂದ್ರನಿಲ್ಲದೆ, ಗೆಂಗೆ

ಇಲ್ಲದೆಯೆ, ಹೆಣೆಗಣ್ಣು ಹಾವುಗಳು ಇಲ್ಲದೆಯೆ,

ಜಿನವಾರ ಬೂದಿಗಳು ಇಲ್ಲದೆಯೆ, ಶಿವಗುಡಿಗೆ

ಸೇರಿಸರು ಶಿವನಾದ ಎನ್ನ. ಅದರಿಂದ

ನಿಜವಾದ ಶಿವನು, ಜಲಗಾರ ಶಿವನು,

ಶಿವಗುಡಿಯ ಪೀಠದಲಿ ಎಂದೆಂದಿಗೂ ಇಲ್ಲ!"


ಜಲಗಾರ: ನೀನು ಮತ್ತೆಲ್ಲಿರುವೆ? 


ಜಗದ ಜಲಗಾರ: "ಬೀದಿ ಗುಡಿಸುವ ಬಡವನೆದೆಯಲ್ಲಿ ನಾನಿರುವೆ!

ಉಳುತಿರುವ ಒಕ್ಕಲಿಗನೆಡೆಯಲ್ಲಿ ನಾನಿರುವೆ!

ಎಲ್ಲಿ ಹೊಲೆಯನು ನನ್ನ ಕಾರ್ಯದಲಿ ತೊಡಗಿಹನೊ

ಅಲ್ಲಿ ನಾನವನ ಪಕ್ಕದೊಳಿರುವೆ. ಕುಂಟರನು,

ಕುರುಡರನು, ದೀನರನು, ಅನಾಥರನು ಕೈಹಿಡಿದು

ಪೊರೆಯುತಿಹನೆಡೆಯಿರುವೆ

ಊರ ತೋಟಿಯು ನೀನು; ಜಗದ ತೋಟಿಯು ನಾನು!

ಬಾ ಎನ್ನ ಸೋದರನೆ. ನೀನೆನ್ನ ನಿಜಭಕ್ತ!

ನಿನ್ನದೇ ಶಿವಭಕ್ತಿ! ನೀನೇ ಶಿವಭಕ್ತ!

ನೀನೆ ನಾನಾಗಿಹೆನು! ನಾನೆ ನೀನಾಗಿರುವೆ!

ಶಿವ ನೀನು! ಶಿವ ನೀನು!"

**********


No comments:

Post a Comment

ಎತ್ತಿತೋರಿಸಲಾದ ಪೋಸ್ಟ್

ಅನ್ನಮ್ಮ’ಳಿಗೆ ೨೫೦ರ ಹಾಗೂ ಅತಿ.ವಂ.ಪೊತ್ತಕಮೂರಿಗೆ ೫೦ರ ಸ್ಮರಣೆಯ ಸಂಭ್ರಮ

ಬೆಂಗಳೂರಿನ ಉತ್ತರಹಳ್ಳಿಯ ಅನ್ನಮ್ಮನ ಬೆಟ್ಟ, ಅಲ್ಲಿನ ಅನ್ನಮ್ಮಳ ಸಮಾಧಿ, ಆ ಬೆಟ್ಟದ ಮೇಲಿನ ಶಿಲುಬೆ, ಅಲ್ಲಿ ಪ್ರತಿವರ್ಷ ತಪಸ್ಸು ಕಾಲದ ಐದನೇ ಭಾನುವಾರ ನಡೆಯುವ ಯೇಸು...