ಇದು ಮೌಢ್ಯಯುಗವಲ್ಲ ಮೊಬೈಲ್ ಯುಗ. ಬೆರಳ ತುದಿಯಲ್ಲಿ ಮೊಬೈಲ್ ಫೋನ್ ಸ್ಪರ್ಶಿಸಿದರೆ, ಜಗತ್ತೇ ಇಂದು ಕಣ್ಮುಂದೆ ಅನಾವರಣಗೊಳ್ಳುತ್ತದೆ. ಕುಳಿತಲ್ಲೇ ಜಗತ್ತಿನ ವಿದ್ಯಮಾನಗಳನ್ನೆಲ್ಲ ಕರಾರುವಾಕ್ಕಾಗಿ ತಿಳಿದುಕೊಳ್ಳಬಹುದು. ಇಂದು ತಂತ್ರಜ್ಞಾನ ಅಷ್ಟು ವ್ಯಾಪಕವಾಗಿ ಅಭಿವೃದ್ಧಿ ಹೊಂದಿದೆ. ಜಗತ್ತು ಇಪ್ಪತೊಂದನೆಯ ಶತಮಾನದಲ್ಲಿ ತನ್ನೊಳಗೊಂದು ಅಭೂತಪೂರ್ವ ಮಾಯಾ ತಂತ್ರವನ್ನೇ ಸೃಷ್ಟಿಸಿಕೊಂಡಿದೆ ಎಂದರೆ ತಪ್ಪಲ್ಲ.. ಆದರೆ, ಇಂತಹ ತಂತ್ರಜ್ಞಾನ ಮುಂದುವರೆದ ಕಾಲಘಟ್ಟದಲ್ಲೂ ಸಮಾಜದಲ್ಲಿ ಕೆಲವೊಂದು ಅನಿಷ್ಟ ಸಂಪ್ರದಾಯಗಳು, ಮೌಡ್ಯಗಳು ಇನ್ನೂ ಆಚರಣೆಯಲ್ಲಿರುವುದು ಮೌಢ್ಯಕ್ಕೆ ನೀರೆರೆದು ಪೋಷಿಸಿಕೊಂಡು ಬಂತಂದಿದೆ. ಬಹುತೇಕ ಎಲ್ಲಾ ಜನಾಂಗದವರೂ ಕೆಲವೊಂದು ಅಜ್ಞಾನದ ಮೌಢ್ಯಗಳಿಗೇ ಜೋತುಬಿದ್ದಿದ್ದಾರೆ. ಮನುಷ್ಯ ತನ್ನಲ್ಲಿರುವ ಸಾಮಾನ್ಯ ಪ್ರಜ್ಞೆಯನ್ನು ಬಳಸಿ ವಾಸ್ತವ ಸಂಗತಿಯನ್ನು ಅರಿಯುವ ಗೋಜಿಗೆ ಹೋಗುತ್ತಿಲ್ಲ. ಹಳೆಯ ಗೊಡ್ಡು ಸಂಪ್ರದಾಯಗಳಿಗೇ ಇನ್ನೂ ಅಂಟಿಕೊಂಡಿದ್ದಾನೆ. ಇದುವೇ ಅವನ ಜಾಯಮಾನ. ಮೌಢ್ಯವನ್ನು ಪ್ರೋತ್ಸಾಹಿಸುವವರೇ ಜ್ಯೋತಿಷಿಗಳು. ಅವರ ಮಾತುಗಳು ಗೊಡ್ಡು ಸಂಪ್ರದಾಯಗಳಿಗೆ ಮತ್ತಷ್ಟು ಪುಷ್ಟಿ ನೀಡುತ್ತಿವೆ. ಅವರ ಈ ನಡೆ ಅಜ್ಞಾನವೋ ಅವಿವೇಕವೋ ಏನೆಂದೇ ತಿಳಿಯುತ್ತಿಲ್ಲ. ಮಂತ್ರಿಸಿದರೆ ಮಾವಿನ ಕಾಯಿ ಬೀಳುವುದೆ? ಎಂಬ ಮಾತಿನ ಹಿನ್ನೆಲೆಯಲ್ಲಿ ಅಡಗಿರುವ ಸತ್ಯಾಂಶವನ್ನು ಸರಿಯಾಗಿ ಒಮ್ಮೆ ಯೋಚಿಸಿದರೆ, ನಮ್ಮಲ್ಲಿನ ವೈಚಾರಿಕ ಪ್ರಜ್ಞೆ ಗರಿಗೆದರಿ ನಿಲ್ಲುತ್ತದೆ. ಕಲ್ಲು ಹೊಡೆಯದಿದ್ದರೆ ಮಾವಿನ ಕಾಯಿ ಬೀಳುವುದಿಲ್ಲ ಎಂಬ ವಾಸ್ತವಾಂಶ ಗೊತ್ತಿದ್ದರೂ ಅದನ್ನು ಕಡೆಗಣಿಸಿ ಅಪ್ಪ ಹಾಕಿದ ಆಲದ ಮರಕ್ಕೇ ಜೋತು ಬೀಳುವ ಅವೈಜ್ಞಾನಿಕ ಪದ್ದತಿಗಳನ್ನೇ ಇನ್ನೂ ಅನುಸರಿಸುತ್ತಿದ್ದಾರೆ. ಒಂದು ವಿಧದಲ್ಲಿ ಮನುಷ್ಯ ಇನ್ನೂ ಅವುಗಳಿಗೇ ದಾಸಾನುದಾಸ. ಸಂಪ್ರದಾಯಗಳು ಹುಟ್ಟಿಕೊಂಡಿದ್ದು ಜನರ ಹಿತಕ್ಕಾಗಿಯೇ ಎಂಬುದು ಒಪ್ಪತಕ್ಕ ವಿಚಾರ. ಆದರೆ ಯುಗಗಳು ಉರುಳಿದಂತೆ ಅವುಗಳು ಬದಲಾವಣೆ ಹೊಂದಬೇಕಾದುದೂ ಸಹಜ. ಆದರೆ ಇಂದು ಆಚರಣೆಯಲ್ಲಿರುವ ಬಹುತೇಕ ಹಳೆಯ ಪದ್ದತಿಗಳು ಅರ್ಥಹೀನವಾಗಿದ್ದು ಅವು ನೈಜತೆ ಕಳೆದುಕೊಂಡಿವೆ.
ಇಂದು ಭವಿಷ್ಯ ನುಡಿಯುವ ಜ್ಯೋತಿಷಿಗಳಿಗೆ ಮಾತುಗಳೇ ಮೂಲ ವಸ್ತು. ಅರಳು ಹುರಿದಂತೆ ಮಣಿ ಪೋಣಿಸಿದಂತೆ ಅಣಿ ಮುತ್ತುಗಳಾಗಿ ಉದುರುವ ಮಾತುಗಳಲ್ಲೇ ಮಂಟಪ ಕಟ್ಟುತ್ತಾರೆ ಮತ್ತು ಕೆಡವುತ್ತಾರೆ. ಮಾತುಗಳನ್ನೇ ಮೂಲ ಬಂಡವಾಳವನ್ನಾಗಿಸಿಕೊಂಡಿರುವ ಅವರು ಸಮಾಜದಲ್ಲಿನ ಕೆಲವು ಸಂಪ್ರದಾಯಗಳಿಗೆ ಮೌಢ್ಯದ ಬಣ್ಣ ಹಚ್ಚಿ ಅವುಗಳನ್ನು ವೈಭವೀಕರಿಸುವುದೇ ಅವರ ಕೆಲಸ. ಸಮಸ್ಯೆಗಳ ಸೃಷ್ಟಿಕರ್ತರೂ, ಅವುಗಳ ನಿವಾರಕರೂ ಅವರೇ. ತಮ್ಮ ಸ್ವಹಿತಕ್ಕಾಗಿ ಸಮಸ್ಯೆಗಳನ್ನು ಸೃಷ್ಟಿಸಿ ಜನಸಾಮಾನ್ಯರನ್ನು ಶೋಷಣೆಗೆ ಒಳಪಡಿಸುವುದು ಎಷ್ಟರ ಮಟ್ಟಿಗೆ ಸರಿ? ಸಮಸ್ಯೆಗಳ ಪರಿಹಾರಕ್ಕಾಗಿ ಅವರು ಸೂಚಿಸುವ ಮಾರ್ಗೋಪಾಯಗಳು ಜನರನ್ನು ಗೊಂದಲಕ್ಕೆ ದೂಡಿಬಿಡುತ್ತವೆ. ಹಳೆಯ ಗಾದೆಯ ಮಾತೊಂದು ನೆನಪಿಗೆ ಬರುತ್ತದೆ. ಐನೋರ ಮಾತನ್ನು ಮೀರುವಂತಿಲ್ಲ, ಕಬ್ಬಿಣ ನುಂಗುವಂತಿಲ್ಲ ಗತ್ಯಂತರವಿಲ್ಲದ ಪರಿಸ್ಥಿತಿ ಅದಾಗಿಯೇ ಸೃಷ್ಟಿಯಾಗಿಬಿಡುತ್ತದೆ. ಸಮಾಜದಲ್ಲಿ ಮೌಢ್ಯಗಳು ಪ್ರತ್ಯಕ್ಷವಾಗಿಯೋ, ಪರೋಕ್ಷವಾಗಿಯೋ ಸೃಷ್ಟಿಯಾಗಲು ಒಂದು ರೀತಿಯಲ್ಲಿ ಜ್ಯೋತಿಷಿಗಳೇ ಮೂಲ ಕಾರಣ ಪುರುಷರು. ಅವುಗಳನ್ನು ಬಿತ್ತಿ ಬೆಳೆಸಿ ಪೋಷಿಸುತ್ತಿರುವವರು ಅವರೇ. ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಟಿ.ವಿ.ರೇಡಿಯೋ ಮತ್ತು ಮಾಧ್ಯಮಗಳ ಮೂಲಕ ಜನರನ್ನು ತಮ್ಮತ್ತ ಸೆಳೆಯುತ್ತಿದ್ದಾರೆ. ಅದರೊಂದಿಗೆ ಟ.ವಿ., ರೇಡಿಯೋ, ಮಾಧ್ಯಮಗಳೂ ಸಹ ಅವರ ಪ್ರಚಾರಕ್ಕೆ ಗರಿ ಮೂಡಿಸುತ್ತಿವೆ. ಜ್ಯೋತಿಷಿಗಳ ಸಲಹೆಗಳನ್ನು ಪಾಲಿಸುವಲ್ಲಿ ಪ್ರಜ್ಞಾವಂತರೂ ಹಿಂದೆ ಬಿದ್ದಿಲ್ಲ. ಅವರು ಕೂಡ ಅದಕ್ಕೆ ದಾಸ್ಯರೇ. ಅಸಮಾನ್ಯ ವಿದ್ಯಾರ್ಹತೆಗಳಿದ್ದು, ಸಾಮಾನ್ಯ ಜ್ಞಾನವಿಲ್ಲದಿದ್ದರೆ, ವಿದ್ಯಗೇನು ಕಿಮ್ಮತ್ತು?
ಜ್ಯೋತಿಷ್ಯ, ಹಸ್ತಸಾಮುದ್ರಿಕ, ಗಿಳಿಶಾಶ್ತ್ರ, ಇಲಿಶಾಸ್ತ್ರ ಮತ್ತು ಪ್ರಾಚೀನ ಕಾಲದ ಮೊರ ಮತ್ತು ತೆಂಗಿನ ಕಾಯಿ ಶಾಸ್ತ್ರಗಳು ಇನ್ನೂ ರೂಡಿಯಲ್ಲಿವೆ. ಸಾಮಾನ್ಯವಾಗಿ ಎಲ್ಲಾ ಕಾಯಿಲೆ ಸಮಸ್ಯೆಗಳಿಗೆ ವೈದ್ಯಕೀಯ ಚಿಕಿತ್ಸೆಗಳು ಲಭ್ಯವಿದ್ದರೂ, ಜ್ಯೋತಿಷಿಗಳ ಬಳಿ ಶಾಸ್ತ್ರ ಕೇಳುವುದು ಮಾಟ ಮಂತ್ರಗಾರರ ಮೊರೆ ಹೋಗುವುದು ಮತ್ತು ಅವರು ಸೂಚಿಸುವ ವಾಮಾಚಾರಗಳನ್ನು ಕೈಗೊಳ್ಳುವುದೂ ನಿಂತಿಲ್ಲ. ಅಂತಹ ಜನರಿಗೇನ ಕಡಿಮೆಯಿಲ್ಲ. ಮುಗ್ಧರು ಮೊದಲ್ಗೊಂಡು ಎಲ್ಲಾ ವರ್ಗದವರು ಜ್ಯೋತಿಷಿಗಳ ಮತ್ತು ಮಾಟಗಾರರ ಸಲಹೆ, ಸೂಚನೆಗಳನ್ನು ಯಥಾವತ್ತಾಗಿ ಪಾಲಿಸುತ್ತಾರೆ.
ಎಲ್ಲಾ ಶುಭ ಕಾರ್ಯಗಳಿಗೆ ಜ್ಯೋತಿಷಿಗಳ ಸಲಹೆ ಪಡೆಯುವುದು, ಭವಿಷ್ಯ ತಿಳಿದುಕೊಳ್ಳುವುದು, ಸಾಮುದ್ರಿಕ ಶಾಸ್ತ್ರ ಕೇಳುವುದು, ರಾಶಿ, ರಾಹುಕಾಲ, ಗುಳಿಕಕಾಲ, ತಿಥಿ, ವಾರ, ನಕ್ಷತ್ರ, ಗ್ರಹಗಳು, ಅಮಾವಾಸ್ಯೆ ಮತ್ತು ಹುಣ್ಣಿಮೆಗಳನ್ನು ಕಟ್ಟು ನಿಟ್ಟಾಗಿ ಆಚರಿಸುವುದು, ಗ್ರಹಣದಂದು ಉಪವಾಸ ವ್ರತಾಚರಣೆ, ಮಡಿ ಸಂಪ್ರದಾಯಗಳು, ಹರಕೆ ಹೊರುವುದು, ಎಂಜಲು ಎಲೆಗಳ ಮೇಲೆ ಉರುಳು ಸೇವೆ ಮಾಡುವುದು, ದೇವರ ಹೆಸರಿನಲ್ಲಿ ಭಿಕ್ಷೆ ಬೇಡುವುದು, ಕುರಿ, ಕೋಳಿ, ಕೋಣ ಮುಂತಾದ ಮೂಕ ಪ್ರಾಣಿಗಳನ್ನು ಬಲಿಕೊಡುವುದು, ದೈವೀ ಜಾತ್ರೆಗಳಲ್ಲಿ ಮಹಿಳೆಯರಿಂದ ಬೆತ್ತಲೆ ಸೇವೆ ಮಾಡಿಸುವುದು, ಬೆಂಕಿಯ ಮೇಲೆ ಜಿಗಿಯುವುದು, ಆವೇಶ ತಂದುಕೊಂಡು ಮೈಮೇಲೆ ದೇವರು ದೆವ್ವಗಳನ್ನು ಆಹ್ವಾನಿಸಿಕೊಳ್ಳುವುದು, ತಮ್ಮ ದೇಹವನ್ನು ತಾವೇ ವಿಚಿತ್ರವಾಗಿ ದಂಡಿಸಿಕೊಳ್ಳುವುದು, ಮುಂತಾದ ಮೌಢ್ಯಾಚರಣೆಗಳು ಇಂದಿನ ಆಧುನಿಕ ಕಾಲಘಟ್ಟದಲ್ಲೂ ಎಗ್ಗಿಲ್ಲದೆ ಜರುಗುತ್ತಲೇ ಇವೆ. ಗ್ರಹಣವೆಂದರೆ, ಸಾಮಾನ್ಯವಾಗಿ ಭೂಮಿಯ ಮೇಲೆ ಆವರಿಸುವ ಕಪ್ಪು ಛಾಯೆಯಷ್ಟೆ. ಆದರೆ ಅದು ಯಾವುದೋ ಕರಾಳ ಘಟನೆಯ ಅಶುಭ ಸಂಕೇತ ಎಂಬ ಮೂಢನಂಬಿಕೆ ಇನ್ನೂ ಸಮಾಜದಲ್ಲಿ ಹಾಸುಹೊಕ್ಕಾಗಿದೆ. ಅಂದು ಉಪವಾಸ, ಮಡಿ ಮುಂತಾದ ಸಂಪ್ರದಾಯಗಳನ್ನು ಕಟ್ಟು ನಿಟ್ಟಾಗಿ ಆಚರಿಸುವ ಪದ್ದತಿ ಇದೆ. ಕೆಲವು ಕಡೆ ಗ್ರಹಣದ ಸಮಯದಲ್ಲಿ ಅಸ್ವಸ್ಥ ಮಕ್ಕಳನ್ನು ಕುತ್ತಿಗೆ ಮಟ್ಟದವರೆಗೂ ನೆಲದಲ್ಲಿ ಹುಗಿಯುತ್ತಾರೆ. ಹಾಗೆ ಮಾಡಿದರೆ ಕಾಯಿಲೆಗಳು ವಾಸಿಯಾಗುತ್ತವೆ ಎಂಬ ಮೂಢ ನಂಬಿಕೆ ಅವರದು. ಅತಿ ವೃಷ್ಟಿ, ಅನಾವೃಷ್ಟಿ ಎನ್ನುವುದು ಪ್ರಕೃತಿಗೆ ಸಂಬಂಧಿಸಿದ ಸಹಜ ಕ್ರಿಯೆ. ಈ ಏರುಪೇರು ಅಲ್ಲಲ್ಲಿ ಆಗಾಗ್ಗೆ ಸಂಭವಿಸುತ್ತಲೇ ಇರುತ್ತದೆ. ಇತ್ತೀಚೆಗೆ ಉತ್ತರ ಕಾರ್ನಾಟಕದಲ್ಲಿ ಭಾರಿ ವರ್ಷಧಾರೆಯಿಂದ ನದಿ, ಅಣೆಕಟ್ಟುಗಳು, ಹಳ್ಳಕೊಳ್ಳಗಳು ತುಂಬಿ ಹರಿದು ನಗರ ಮೊದಲ್ಗೊಂಡು ಎಲ್ಲಾ ಪ್ರದೇಶಗಳು ಜಲಾವೃತಗೊಂಡು ಅಪಾರ ಹಾನಿ ಉಂಟಾಗಿರುವುದು ಸರಿಯಷ್ಟೆ. ಆದರೆ ಟ.ವಿ. ಮಾಧ್ಯಮದವರು ಇದಕ್ಕೊಂದು ಅವೈಜ್ಞಾನಿಕ ಕಾರಣಕೊಟ್ಟು ಗ್ರಹಣದ ಪರಿಣಾಮದಿಂದಲೇ ಇಷ್ಟೆಲ್ಲಾ ಅನಾಹುತಗಳು ಸಂಭವಿಸಿವೆ ಎಂದು ಜನಸಾಮಾನ್ಯರ ಮೇಲೆ ನಂಬಿಕೆಯ ಮೌಢ್ಯಗಳನ್ನು ಬಿತ್ತುತ್ತಿದ್ದಾರೆ.
ಇನ್ನು ರಾಹುಕಾಲ ಕುರಿತು ಒಂದೆರಡು ಮಾತುಗಳನ್ನು ಹೇಳುವುದು ಸೂಕ್ತ. ರಾಹುಕಾಲದ ಮೇಲೆ ನಂಬಿಕೆ ಇಟ್ಟು ಅದನ್ನು ಪಾಲಿಸುವುದು ಅವರವರ ಸ್ವಂತ ಹಾಗು ವೈಯಕ್ತಿಕ ವಿಚಾರ. ಅದನ್ನು ಯಾರೂ ಪ್ರಶ್ನಿಸುವಂತಿಲ್ಲ. ಆದರೆ ಸಾರ್ವತ್ರಿಕವಾಗಿ ಮತ್ತೊಬ್ಬರ ಕರ್ತವ್ಯಕ್ಕೆ ಅಡಚಣೆಯಾಗುವಂತೆ ರಾಹುಕಾಲವನ್ನು ಅನುಸರಣೆ ಮಾಡುವುದು ಸರಿಯಲ್ಲ. ರಾಹುಕಾಲದಲ್ಲಿ ಪ್ರಮಾಣವಚನ ಸ್ವೀಕರಿಸದೆ ಸದನದಿಂದ ಎದ್ದು ಹೊರನಡೆದ ಜನಪ್ರತಿನಿಧಿಯ ಪ್ರಸಂಗವೊಂದು ನೆನಪಿಗೆ ಬರುತ್ತದೆ. ಮತ್ತೊಂದು ಪ್ರಕರಣ ಹಾಸ್ಯಾಸ್ಪದವಾಗಿದೆ. ಮೇಲಾಧಿಕಾರಿಯಿಂದ ಬಂದ ಪತ್ರವನ್ನು ರಾಹುಕಾಲವೆಂದು ಸ್ವೀಕರಿಸದೆ ಅದನ್ನು ತಂದ ವ್ಯಕ್ತಿಯನ್ನು ಅಧೀನ ಅಧಿಕಾರಿಯೊಬ್ಬ ಸುಮಾರು ಒಂದೂವರೆ ಗಂಟೆ ಕಾಯಿಸಿದ್ದ. ನಂತರ ಗಡಿಯಾರ ನೋಡಿ ರಾಹುಕಾಲ ಮುಗಿದಿರುವುದನ್ನು ಖಾತ್ರಿಪಡಿಸಿಕೊಂಡು ಪತ್ರ ಸ್ವೀಕರಿಸಿ ಅದಕ್ಕೆ ಅಧಿಕೃತ ಸ್ವೀಕೃತ ದಾಖಲೆ ನೀಡಿ ಕಳುಹಿಸಿದ. ಪತ್ರವನ್ನು ತೆರೆದು ನೋಡಿದರೆ ಅದು ಅವನ ಸಸ್ಪೆಂಡ್ ಆದೇಶವಾಗಿತ್ತು !
ರಾಹುಕಾಲಕ್ಕೆ ಪುಷ್ಠಿ ನೀಡುವಂತ ಅನಿಷ್ಠ ಪದ್ದತಿ ನಮ್ಮ ಕಥೋಲಿಕ ಧರ್ಮದ ಕೆಲವರಲ್ಲಿ ಇನ್ನೂ ತಳುಕುಹಾಕಿಕೊಂಡಿದೆ. ಶುಭ ಕಾರ್ಯ ಅಥವಾ ವಿವಾಹ ಮುಂತಾದ ಕಾರ್ಯಕ್ರಮಗಳನ್ನು ಭಾನುವಾರ ಸಂಜೆ ೩.೦೦ ಗಂಟೆಯ ನಂತರ ೪.೩೦ ಗಂಟೆಯೊಳಗೆ ನೆರವೇರುವಂತೆ ಆಯೋಜಿಸಿರುತ್ತಾರೆ. ಸಂಜೆ ೪.೩೦ ರಿಂದ ೬.೦೦ ಗಂಟೆಯವರೆಗೆ ಅಂದು ರಾಹುಕಾಲ. ಆ ಸಮಯದಲ್ಲಿ ಯಾವುದೇ ಶುಭ ಕಾರ್ಯಗಳನ್ನು ನಡೆಸಲು ಹಿಂಜರಿಯುತ್ತಾರೆ. ಪ್ರಶ್ನೆ ಮಾಡಿದರೆ, ಸುಮ್ಮನೆ ರಿಸ್ಕ್ ಏತಕ್ಕೆ? ಎನ್ನುವಂತ ಉಡಾಫೆ ಮಾತುಗಳನ್ನಾಡುತ್ತಾರೆ. ರಾಹು ಕಾಲಕ್ಕೆ ಮುನ್ನವೇ ಬಲಿಪೂಜೆ ಪ್ರಾರಂಭಿಸಲು ವ್ಯವಸ್ಥೆಯಾಗಿರುತ್ತದೆ. ತಾಲಿ ಕಟ್ಟುವ-ಉಂಗುರ ಬದಲಾಯಿಸುವ ಸಾಂಗ್ಯದ ಪ್ರಕ್ರಿಯೆಗಳು ೪.೩೦ ಗಂಟೆಯೊಳಗೆ ಮುಗಿಯುವಂತೆ ಎಚ್ಚರಿಕೆ ವಹಿಸಿರುತ್ತಾರೆ. ಬಲಿಪೂಜೆ ರಾಹುಕಾಲದ ನಡುವೆ ಮುಗಿದರೂ ಪರವಾಗಿಲ್ಲ, ಆದರೆ ಸಂಜೆ ೪.೩೦ ಗಂಟೆಯೊಳಗೆ ಗಂಡು ಹೆಣ್ಣಿನ ಕೊರಳಿಗೆ ಮಾಂಗಲ್ಯ ಕಟ್ಟಿ ಮುಗಿದಿರಬೇಕು ಎಂಬುದು ಅವರ ನಿಲುವು.
ಇನ್ನು ರಾಹುಕಾಲದಲ್ಲಿ ಶವವನ್ನು ಸ್ಮಶಾನಕ್ಕೆ ಸಾಗಿಸಕೂಡದೆಂಬ ಸಂಪ್ರದಾಯವಿದೆ. ಎಲ್ಲಾ ಮುಗಿದು ಸತ್ತವರಿಗೆ ರಾಹುಕಾಲ ಮತ್ಯಾವ ಕೇಡನ್ನುಂಟು ಮಾಡುತ್ತದೆ? ರಾಹುಕಾಲಕ್ಕೂ ಶವಕ್ಕೂ ಯಾವ ನಂಟು? ಸತ್ತ ಆತ್ಮಕ್ಕೆ ಮುಕ್ತಿ ಸಿಗುವುದಿಲ್ಲ ಎಂಬುದು ಅವರ ಹುರುಳಿಲ್ಲದ ವಾದ. ಇನ್ನು ರಾಹುಕಾಲದಲ್ಲಿ ಹುಟ್ಟಿದವರ ಭವಿಷ್ಯ, ಅವರ ಬದುಕು? ಹೀಗೆ ರಾಹುಕಾಲ ಕುರಿತು ಅನೇಕ ಪ್ರಶ್ನೆಗಳು ಏಳುವುದುಂಟು. ಆದರೆ ಅವುಗಳಿಗೆ ಸಿಗುವ ಉತ್ತರಗಳು ಮಾತ್ರ ತೀರಾ ಅವೈಜ್ಞಾನಿಕ, ನಂಬಲಾಗದ ಮಿಥ್ಯೆಗಳು.
ಸಮಾಜದಲ್ಲಿ ಮತ್ತೊಂದು ದೊಡ್ಡ ಪಿಡುಗಾಗಿ ಕಾಡುತ್ತಿರುವುದೆಂದರೆ, ವಾಸ್ತುಶಾಸ್ತ್ರ. ಪ್ರತಿಯೊಂದು ಮನೆಯನ್ನೂ ಇಂದು ವಾಸ್ತುಶಾಸ್ತ್ರಕ್ಕೆ ತಕ್ಕಂತೆ ನಿರ್ಮಿಸಲಾಗುತ್ತಿದೆ. ಆರೋಗ್ಯಕ್ಕೆ ಪೂರಕವಾದ ಗಾಳಿ ಬೆಳಕುಗಳಿಗೆ ಪ್ರಾಧಾನ್ಯತೆ ನೀಡದಿದ್ದರೂ ವಾಸ್ತುವಿಗೇ ಹೆಚ್ಚು ಮಹತ್ವ ನೀಡುತ್ತಾರೆ. ಮನೆಯ ಪ್ರತಿಯೊಂದು ಭಾಗವೂ ವಾಸ್ತುವಿಗೆ ಅನುಗುಣವಾಗಿ ಇರುವಂತೆ ಕಟ್ಟೆಚ್ಚರ ವಹಿಸುತ್ತಾರೆ. ಗ್ರಹಗತಿಗಳು ಸರಿಯಿಲ್ಲವೆಂದು ಹಳೆಯ ಮನೆಗಳನ್ನು ಕೆಡವಿ, ವಾಸ್ತುವಿಗೆ ತಕ್ಕಂತೆ ಹೊಸದಾಗಿ ನಿರ್ಮಿಸಿಕೊಳ್ಳುತ್ತಾರೆ. ಹಿಂದಿನ ಕಾಲದಲ್ಲಿ ಯಾರೂ ವಾಸ್ತು ನಿಯಮವನ್ನು ಪಾಲಿಸುತ್ತಿರಲಿಲ್ಲ. ಮನೆಗಳನ್ನು ತಮ್ಮ ಅನುಕೂಲ ಹಾಗು ಸೌಕರ್ಯಕ್ಕೆ ತಕ್ಕಂತೆ ಕಟ್ಟಿಕೊಳ್ಳುತ್ತಿದ್ದರು. ಅವರೆಲ್ಲರೂ ಅಂತಹ ಮನೆಗಳಲ್ಲಿ ಚೆನ್ನಾಗಿಯೇ ಬದುಕಿ ಬಾಳಿದ್ದಾರೆ. ಯಾವ ಮನೆಯಲ್ಲಿ ಸಮೃದ್ಧವಾದ ಗಾಳಿ ಬೆಳಕು ಮತ್ತು ಇತರೆ ಸೌಲಭ್ಯಗಳು ಇರುವುದೋ ಅದೇ ವಾಸ್ತುಪೂರ್ಣ ಗೃಹವೆಂದು ಹೇಳಬಹುದು. ಇಂದು ವಾಸ್ತು ನಿಯಮದ ಪಾಲನೆ ರಾಜಕಾರಣಿಗಳನ್ನೂ ಬಿಟ್ಟಿಲ್ಲ. ಸರಕಾರಿ ಕಛೇರಿಗಳನ್ನು ಸಹ ವಾಸ್ತುವಿಗೆ ತಕ್ಕಂತೆ ಮಾರ್ಪಾಟು ಮಾಡಿಕೊಳ್ಳುವ ಕಾರ್ಯಗಳು ಮುಂದುವರೆದಿವ. ಚುನಾಯಿತ ಪ್ರತಿನಿಧಿಗಳು ತಮ್ಮ ಅಧಿಕಾರದ ಭದ್ರತೆಯ ಬಗ್ಗೆ ನಿಗಾ ವಹಿಸುತ್ತಾರೆಯೇ ಹೊರತು ಪ್ರಜೆಗಳ ಹಿತರಕ್ಷಣೆ ಬಗ್ಗೆ ವಹಿಸುವುದಿಲ್ಲ. ಅವರಿಗೆ ಪ್ರಜೆಗಳ ಮೇಲಿನ ನಂಬಿಕೆಗಿಂತ ವಾಸ್ತು ಶಾಸ್ತ್ರಗಳ ಮೇಲೆಯೇ ಹೆಚ್ಚು ನಂಬಿಕೆ.
ಐದು ವರ್ಷಗಳ ಹಿಂದೆ ಸರಕಾರ ಮೌಢ್ಯ ನಿಷೇಧ ಮಸೂದೆಯನ್ನು ಜಾರಿಗೆ ತರುವ ಯೋಜನೆಯೊಂದನ್ನು ರೂಪಿಸುವ ಸಲುವಾಗಿ ಮೌಢ್ಯ ಮತ್ತು ಧಾರ್ಮಿಕ ನಂಬಿಕೆಗಳ ಕುರಿತು ನಾಡಿನ ವಿಚಾರವಂತರ ಅಭಿಪ್ರಾಯ ಮತ್ತು ಸಲಹೆಗಳನ್ನು ಪಡೆದು ಪರಾಮರಿಸಿತ್ತು. ಮಸೂದೆ ಕುರಿತು ತಜ್ಞರಿಂದ ವಿಚಾರ ಮಂಡನೆ ಮತ್ತು ಅದರ ಸಾಧಕ-ಬಾಧಕಗಳ ಬಗ್ಗೆ ಉನ್ನತ ಮಟ್ಟದಲ್ಲಿ ಗಹನವಾದ ಚರ್ಚೆಯೂ ನಡೆದಿತ್ತು. ಆದರೆ ಕರಡು ಮಸೂದೆ ಸಿದ್ಧವಾಗಿ ಅದನ್ನು ಒಪ್ಪಿಗೆಗಾಗಿ ಸದನದಲ್ಲಿ ಮಂಡಿಸುವ ಮುನ್ನವೇ ಕಾಣದ ಕೈಗಳ ಒತ್ತಡಕ್ಕೋ, ರಾಜಕೀಯ ಪ್ರಭಾವಕ್ಕೋ ಮಸೂದೆ ಮಂಡನೆಯಾಗದೆ ನೆನೆಗುದಿಗೆ ಬಿದ್ದು ಹೋಯಿತು.
ಸಮಾಜದಲ್ಲಿ ಇಂದು ಮೌಢ್ಯಗಳು ಗಟ್ಟಿಯಾಗಿ ಬೇರುಬಿಟ್ಟಿವೆ. ಜನರಿಗೆ ಅವುಗಳ ಮೇಲಿನ ನಂಬಿಕೆಗಳೂ ಅಷ್ಟೇ ಬಲಿಷ್ಠವಾಗಿವೆ. ದೇವರು ಮತ್ತು ಮನುಷ್ಯನ ನಡುವೆ, ಪುರೋಹಿತಶಾಹಿ ವರ್ಗವು ನಿಯಂತ್ರಿಕ ಶಕ್ತಿಯಂತೆ ಕೆಲಸ ಮಾಡುತ್ತಿದೆ. ಬಹುಜನ ಸಮುದಾಯವನ್ನು ಅಂಧಕಾರದಲ್ಲಿಟ್ಟು ತಮ್ಮ ಸ್ವಾರ್ಥಸಾಧನೆಯನ್ನೇ ಮುಖ್ಯ ಧ್ಯೇಯವನ್ನಾಗಿ ಮಾಡಿಕೊಂಡಿದ್ದಾರೆ. ಪ್ರಜ್ಞಾವಂತರೂ ಕೂಡ ಮೌಢ್ಯ ಮತ್ತು ನಂಬಿಕೆಗಳಿಗೇ ತಮ್ಮನ್ನು ಒಡ್ಡಿಕೊಂಡಿದ್ದಾರೆ. ಸಮಾಜ ಇಂದು ವೈಚಾರಿಕ ಪ್ರಜ್ಞೆಯ ಬುನಾದಿ ಮೇಲೆ ಸದೃಡವಾಗಿ ನಿಲ್ಲಬೇಕಾಗಿದೆ, ಜನರೂ ನೈತಿಕ ನೆಲೆಗಟ್ಟಿನಲ್ಲಿ ಕೆಲವೊಂದು ಬದಲಾವಣೆಗಳನ್ನು ರೂಪಿಸಿಕೊಳ್ಳುವುದು ಅನಿವಾರ್ಯ ಮತ್ತು ಅಗತ್ಯ. ಮನುಷ್ಯನ ಬದುಕು ಅವನ ಕೈಯಲ್ಲಿರೋ ರೇಖೆಗಳಂತಾಗಲಿ ಅಥವಾ ಹಣೆಯಲ್ಲಿ ಕಾಣದ ಹಣೆ ಬರಹದಂತಾಗಲಿ ನಡೆಯುವುದಿಲ್ಲ. ಅಂತಹ ಕುರುಡು ಜೀವನ ನಡೆಸುವುದಕ್ಕಿಂತ ತಮ್ಮಲ್ಲಿರುವ ಜ್ಞಾನವನ್ನು, ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಂಡರೆ, ಅಲ್ಲಿಗೆ ಜೀವನ ಸಾರ್ಥಕ ಮತ್ತು ಪರಿಪೂರ್ಣ.
-------------------
ಎಲ್.ಚಿನ್ನಪ್ಪ,
ಸಾಹಿತಿ, ಬೆಂಗಳೂರು
-------------------
No comments:
Post a Comment