ದೇವರ ಸೃಷ್ಟಿಯಲ್ಲಿ ಅಗ್ರಸ್ಥಾನವನ್ನು ಹೊಂದಿರುವ ಏಕೈಕ ಜೀವಿ ಎಂದರೆ ಅದು ಮಾನವ ಮಾತ್ರ. ಈ ಮಾನವ ಜೀವಿ ಅತಿ ಮೌಲ್ಯವುಳ್ಳ ಜೀವಿ. ಈ ಜೀವಿಯ ಅಂತಿಮ ನೆಲೆ ಈ ಅಸ್ಥಿರ ಲೋಕವಲ್ಲ. ತ್ರೈಕದೇವನ ಶಾಶ್ವತ ನಿವಾಸ, ಸ್ವರ್ಗ. ಅದರೆ ಸೃಷ್ಟಿಯ ಈ ಅತ್ಯುನ್ನತ ಜೀವಿ, ಆಸೆ ಆಮಿಷಗಳಿಗೆ ಬಲಿಯಾಗಿ ಜೀವನದ ಪಥದಲ್ಲಿ ಕಷ್ಟಕೋಟಲೆಗಳಿಗೆ ಸಿಲುಕಿ ಸೊರಗಿ ತನ್ನನ್ನು ಸೃಷ್ಟಿಸಿದ ಪ್ರಭುವನ್ನು ಮರೆತು, ಈ ಜೀವನ ನಶ್ವರ, ತಾನು ನಿಷ್ಪ್ರಯೋಜಕ ವೆಂದು ಹತಾಶೆಗೊಳಗಾಗುತ್ತಾನೆ. ಅದು ಅವನನ್ನು ಸಂಪೂರ್ಣವಾಗಿ ಕುಗ್ಗಿಸಿ ಧ್ವಂಸಗೊಳಿಸಲು ಯತ್ನಿಸುತ್ತದೆ. ಆಗ ಮಾನವ ಸೊರಗಿ ಸೋತು ಹತಾಶೆಯ ಘೋರಕೂಪದಲ್ಲಿ ಬಿದ್ದು ದಿಕ್ಕುತೋಚದೆ ನೆಲಕಚ್ಚುತ್ತಾನೆ. ಹಾಗಾದರೆ ಈ ಹತಾಶೆ ಎಂದರೇನು!
ಮಾನವ ಭರವಸೆಯ ಜೀವಿ. ಅದರೆ ಜೀವನದಲ್ಲಿ ಉಂಟಾಗುವ ಏರುಪೇರುಗಳಿಂದ ಭರವಸೆಯ ಬೇರುಗಳು ಸೊರಗಿ ಶೀಘ್ರವಾಗಿ ಒಣಗಲಾರಂಭಿಸುತ್ತವೆ, ಆಗ ನಿರಾಶೆಯ ಬೇರು ಜೀವಸೆಲೆ ತುಂಬಿ ಚಿಗುರಲಾರಂಬಿಸುತ್ತದೆ. ಇಂತಹ ದುಸ್ಥಿತಿಯಲ್ಲಿ ಮಾನವ ತನ್ನ ಸೃಷ್ಟಿಯ ಪ್ರಭುವಿನಲ್ಲಿ, ತನ್ನ ಮಾತಾಪಿತೃಗಳಲ್ಲಿ, ಸ್ನೇಹಿತರಲ್ಲಿ, ಬಂಧುಬಳಗದವರಲ್ಲಿ ಹಾಗೂ ಅಂತಿಮವಾಗಿ ಎಲ್ಲರಲ್ಲಿಯೂ ತನ್ನ ಭರವಸೆಯನ್ನು ಕಳೆದುಕೊಂಡು ಈ ಜೀವನ ಒಂದು ಭ್ರಮೆ, ಹುಸಿ ಎಂದು ಊಹಿಸಿ ನಿರಾಶೆಯ ಬಂಡೆಯ ಮೇಲೆ ಬಿದ್ದು ನುಚ್ಚುನೂರಾಗುತ್ತಾನೆ. ಅಂದರೆ ಮಾನವ ಶ್ಯೂನ್ಯದ ಕಗ್ಗತ್ತಲೆಯ ತಳಸ್ಪರ್ಶವನ್ನು ತಲುಪುತ್ತಾನೆ. ಇಂಥಹ ಕಠೋರವಾದ ಹೀನ ಸ್ಥಿತಿಯನ್ನು ಹತಾಶೆ ಎನ್ನಬಹುದು. ಇಲ್ಲಿ ಮಾನವ ಮೇಲ್ಮುಖವಾಗಿ (ಬೆಳಕಿನತ್ತ) ಚಲಿಸುವ ಬದಲು ಕೆಳಮುಖವಾಗಿ (ಕತ್ತಲೆಯತ್ತ) ಚಲಿಸುತ್ತಾನೆ. ಅಂದರೆ ತನ್ನ ಅಪಾರ ಪ್ರೀತಿಯ ಸೃಷ್ಟಿಯ ಪ್ರಭುವಿಗೆ ಶರಣಾಗುವ ಬದಲು ಸೈತಾನನಿಗೆ ದಾಸನಾಗಿ ನಶಿಸಲು ಆರಂಭಿಸುತ್ತಾನೆ.
ಭರವಸೆ ಮಾನವನ ರಚನಾತ್ಮಕ ಹಾಗೂ ನಿರಂತರ ಪ್ರಗತಿಗೆ ನಾಂದಿಯಾದರೆ, ಹತಾಶೆ ಅವನ ಅವನತಿಗೆ (ವಿನಾಶಕ್ಕೆ) ಕಾರಣವಾಗುತ್ತದೆ. ಪ್ರತಿ ಮಾನವನ ಬದುಕಿನ ಪಥದಲ್ಲಿ ವಿವಿಧ ಹಂತಗಳಲ್ಲಿ ಹತಾಶೆ ಮೊರೆವ ಸಮುದ್ರದ ಅಲೆಗಳಂತೆ ನಿರಂತರವಾಗಿ ಅಪ್ಪಳಿಸುತ್ತಲೇ ಇರುತ್ತವೆ. ಅದಕ್ಕೆ ಅಂತ್ಯವೇ ಇಲ್ಲ. ಆದರೆ ಮೀನುಗಾರನು ಸಮುದ್ರದಲ್ಲಿ ಅಲೆಗಳು ಬರುತ್ತವೆಂದು ತನ್ನ ನಿತ್ಯದ ಕಾಯಕವನ್ನು ಬಿಡುವುದಿಲ್ಲ, ನಾವಿಕ ಹಡಗು ನಡೆಸುವುದನ್ನು ನಿಲ್ಲಿಸುವುದಿಲ್ಲ. ಹಾಗೆಯೇ ಮಾನವನ ಅಂತರಂಗದಲ್ಲಿ ಪುಂಖಾನುಪುಂಖವಾಗಿ ಉದಯಿಸುವ ಹತಾಶೆಯ ಸುನಾಮಿಯಂತಹ ಅಲೆಗಳನ್ನು ಅದೇ ಮಾನವನ ಅಂತರಂಗದಲ್ಲಿ ಸುಪ್ತವಾಗಿ ನೆಲೆಸಿರುವ ಭರವಸೆಯ ತರಂಗಗಳು ಬಡಿದೋಡಿಸಲು ನಿರಂತರವೂ ವೀರಾವೇಶದಿಂದ ಕಾದಾಡುತ್ತವೆ.
ಹತಾಶೆ ಮಾನವನ ಸೃಜನಶೀಲತೆಯನ್ನು ನಂದಿಸುತ್ತದೆ. ಅದು ಮಾನವನ ರಚನಾತ್ಮಕ ಕುಶಲತೆಯನ್ನು ಕುಂದಿಸುತ್ತದೆ. ಉತ್ಸಾಹದ ಕಾರಂಜಿಯನ್ನು ಮುಚ್ಚಿಹಾಕುತ್ತದೆ. ಸಕಾರಾತ್ಮಕ ಹಾಗೂ ಸಮತೋಲನವಾದ ಸಮೃದ್ದಿಯ ಬೆಳವಣಿಗೆಗೆ ಅಡ್ಡಗಾಲು ಹಾಕುತ್ತದೆ. ಆದರೆ ಮಾನವನ ಅಂತರಂಗದಲ್ಲೇ ಅದನ್ನು ಮೆಟ್ಟಿ ನಿಲ್ಲುವ ಅದಮ್ಯ ಚೈತನ್ಯವಿದೆ. ಆ ಅದಮ್ಯ ಚೈತನ್ಯದ ಪ್ರಬಲ ಶಕ್ತಿಯಿಂದ ಹತಾಶೆಯಿಂದ ಕುಂದುತ್ತಿರುವ ಕುಲುಮೆ ಚೇತನಗೊಂಡು ಪ್ರಜ್ವಲಿಸುವ ಪ್ರದೀಪವಾಗಿ ಬೆಳಗಬಲ್ಲದು. ಹತಾಶೆಯ ಭೋರ್ಗರೆವ ಕಡಲನ್ನು ಶಾಂತವಾಗಿಸಿ ಸದಾ ಪುಟಿಯುತ್ತ ನವಚೈತನ್ಯದ ಬುಗ್ಗೆಯನ್ನು ನಿರ್ಮಿಸಬಲ್ಲದು. ಹಾಗಾದರೆ ಆ ಅದಮ್ಯ ಚೈತನ್ಯಶಕ್ತಿ ಯಾವುದು?
ಪ್ರತಿ ಮಾನವನ ಅಂತರಂಗದಲ್ಲಿ ಸುಪ್ತವಾಗಿ ಅಡಗಿರುವ ದಿವ್ಯಾತ್ಮ ಶಕ್ತಿಯೇ ಆ ಅದಮ್ಯ ಚೈತನ್ಯ. ಮಾನವ ಶರೀರ ಬಡವಾಗಬಹುದು, ಮನಸ್ಸು ಜಡವಾಗಬಹುದು, ಚಿಂತನಾಶಕ್ತಿ ಕುಂದಬಹುದು ಆದರೆ ದಿವ್ಯಾತ್ಮ ಶಕ್ತಿ ಮಾತ್ರ ಎಂದಿಗೂ ಕುಂದಲಾರದು. ಶರೀರಕ್ಕೆ ಮುಪ್ಪಿದೆ, ಸಾವಿದೆ. ಆದರೆ ದಿವ್ಯಾತ್ಮ ಶಕ್ತಿಗಿಲ್ಲ ಸಾವು. ಈ ದಿವ್ಯಾತ್ಮ ಶಕ್ತಿ ನಿತ್ಯವೂ ನೂತನವಾದುದು. ಅದು ಬೂದಿಮುಚ್ಚಿದ ಕೆಂಡದಂತೆ ನವ ನೂತನವಾಗಿರುತ್ತದೆ. ಅದು ಹತಾಶೆಯ ಕಡುವಿರೋಧಿ. ಅದಕ್ಕೆ ಹತಾಶೆಯ ನೆರಳು ಸಹ ತಾಗಲು ಸಾಧ್ಯವಿಲ್ಲ. ಅದು ನಿರಂತರವೂ ಕ್ರಿಯಾತ್ಮಕವಾಗಿ ಪುಟಿಯುವ, ನಂದದೆ ಪ್ರಶಾಂತವಾಗಿ ಪ್ರಜ್ವಲಿಸುವ ಕುಲುಮೆ. ಅದು ಹತಾಶೆಯ ಅಲೆಗಳನ್ನು ನಯವಾಗಿ ಬಗ್ಗುಬಡಿದು ನಿಯಂತ್ರಿಸಿ; ಪ್ರಶಾಂತತೆಯ ಅಲೆಗಳ ಸರಮಾಲೆಯನ್ನು ಎಡಬಿಡದೆ ಬಿಡುಗಡೆ ಮಾಡುತ್ತದೆ. ಆದರೆ ಈ ದಿವ್ಯಾತ್ಮ ಶಕ್ತಿ ಮಾನವನಲ್ಲಿ ನಿರಂತರವಾಗಿ ಕ್ರಿಯಾಶೀಲವಾಗಿರಲು "ಕಿವಿಗೊಡುವನು ಪ್ರಭು ಸಜ್ಜನರ ಮೊರೆಗೆ. ನೆರವೀವನವರ ಕಷ್ಟನಿವಾರಣೆಗೆ. ಸನಿಹದಲ್ಲಿಹನು ಪ್ರಭು ಭಗ್ನ ಹೃದಯಿಗಳಿಗೆ. ಉದ್ಧಾರಕನಾತನು ಮನಸ್ಸು ಕುಗ್ಗಿದವರಿಗೆ" (ಕೀರ್ತನೆ ೩೪:೧೭-೧೮) ಎಂಬ ಕೀರ್ತನಕಾರನ ಅಂತರಾಳದ ಭರವಸೆಯ ಪ್ರಾರ್ಥನೆ ಮಾನವನ ಅಂತರಂಗದಲ್ಲಿ ಸ್ಥಿರವಾಗಿ ನೆಲೆನಿಂತು ದಿವ್ಯಾತ್ಮಶಕ್ತಿಗೆ ಪೂರಕವಾಗಬೇಕು. ಆಗ ಹತಾಶೆಯ ಅಲೆಗಳು ಹಣ್ಣೆಲೆಗಳಂತೆ ಉದುರಲಾರಂಭಿಸುತ್ತವೆ.
ಹತಾಶೆ ಮಾನವನ ನಂಬಿಕೆಗಳನ್ನು ಪದೇ ಪದೇ ನುಚ್ಚುನೂರಾಗಿಸಿ ಸೋಲಿನ ಆಳಕ್ಕೆ ತಳ್ಳುತ್ತದೆ. ಆದರೆ ಈ ಸ್ಥಿತಿಯಿಂದ ಮೇಲೇಳಲು ದಿವ್ಯಾತ್ಮಶಕ್ತಿ ಕ್ಷಣಕ್ಷಣವೂ ತುಡಿಯುತ್ತಿರುತ್ತದೆ. ಹತಾಶೆ ಮಾನವನನ್ನು ಉಸಿರುಗಟ್ಟಿಸಿ ಸಮಾಧಿ ಮಾಡಿದರೂ ಅಲ್ಲಿಂದಲೂ ಪುಟಿದೆದ್ದು ಮೇಲೇಳುವಂತಹ ಶಕ್ತಿ ಆ ದಿವ್ಯಾತ್ಮಶಕ್ತಿಗಿದೆ. ಇದನ್ನೇ ಸಂತ ಪೌಲನು "ನಾವು ಇಕ್ಕಟ್ಟುಬಿಕ್ಕಟ್ಟುಗಳಿಗೆ ಒಳಗಾಗಿದ್ದರೂ ನಜ್ಜುಗುಜ್ಜಾಗಲಿಲ್ಲ; ಸಂಶಯ ಸಂದೇಹಗಳಿಗೊಳಗಾದರೂ ನಿರಾಶೆಗೊಳ್ಳಲಿಲ್ಲ" (೧ಕೊರಿಂಥಿ೪:೮) ಎಂಬ ಭರವಸೆಯ ಮಾತುಗಳನ್ನಾಡುತ್ತಾನೆ. ಹಾಗೆಯೇ "ಎನ್ನ ಮನವೆ, ಚಿಂತಿಸುವೆಯೇಕೆ? ವ್ಯಥೆಪಡುವುದೇಕೆ? ದೇವನಲ್ಲಿಡು ನಂಬಿಕೆ ಮತ್ತೆ ಸ್ತುತಿಸುವೆ ನಾನಾತನನು, ಮುಕ್ತಿದಾತ ಪರಮಾತ್ಮ ಆತನೆನಗೆ" (ಕೀರ್ತನೆ ೪೩:೫) ಎಂಬ ಸ್ಥಿರ ನಂಬಿಕೆಯನ್ನು ಅಂತರಾತ್ಮದಲ್ಲಿ ಮನೆ ಮಾಡಿಕೋ ಎನ್ನುತ್ತಾನೆ ಕೀರ್ತನಕಾರ. ಹತಾಶೆಯ ಸರಮಾಲೆಗಳು ಮಾನವನನ್ನು ಕಟ್ಟಿ ಹಾಕಲು ಶತಾಯಗತಾಯ ಪ್ರಯತ್ನಿಸಿದರೂ "ಉರುಲೊಡ್ಡಿಹರು ನಾ ನಡೆಯುವ ಮಾರ್ಗದಲೆ. ನಾ ಮನಗುಂದಿರೆ, ಪರಿಹಾರವನು ನೀ ಬಲ್ಲೆ" (ಕೀರ್ತನೆ ೧೪೨:೨) ಎಂಬ ಕೀರ್ತನಕಾರನ ಭರವಸೆಯ ಕಾರಂಜಿ ಕೊನೆಯಿಲ್ಲದೆ ಹೊರ ಹೊಮ್ಮಲು ಆರಂಭಿಸಿದರೆ ಆ ದಿವ್ಯಾತ್ಮಶಕ್ತಿಯ ಮುಂದೆ ಹತಾಶೆ ಮಂಡಿಯೂರುತ್ತದೆ.
ಹತಾಶೆ ಮಾನವನನ್ನು ಎಡಬಿಡದೆ ಬಿಗಿದಪ್ಪಿ ಉಸಿರುಗಟ್ಟಿಸಿದರೂ ದಿವ್ಯಾತ್ಮಶಕ್ತಿಯನ್ನು ಕಿಂಚಿತ್ತಾದರೂ ನಂದಿಸಲು ಸಾಧ್ಯವೇ ಇಲ್ಲ. ಏಕೆಂದರೆ ಅದು ಪವಿತ್ರಾತ್ಮರ ಶಕ್ತಿ. ಅದು ನಿರಂತರವೂ ಸಜೀವಉಳ್ಳದ್ದು ಹಾಗೂ ಕ್ರಿಯಾತ್ಮಕವಾದುದು. ಆ ಸೃಜನಶೀಲತೆಯ ಕಾರಂಜಿಯನ್ನು ಸ್ತಬ್ಧಗೊಳಿಸಲು ಯಾವ ದುಷ್ಟ ಶಕ್ತಿಯಿಂದಲೂ ಸಾಧ್ಯವಿಲ್ಲ ಎಂಬ ಭರವಸೆ ಅಂತರಾತ್ಮದಲ್ಲಿ ಸ್ಥಿರವಾಗಿ ಮನೆಮಾಡಿ "ಸೊರಗಿದೆ ನನ್ನ ಚೈತನ್ಯ ನಿಬ್ಬೆರಗಾಗಿದೆ ನನ್ನ ಹೃದಯ ನೆನಸಿಕೊಳ್ಳುತಿಹೆನು ಹಳೆಯ ಕಾಲವನು ಧ್ಯಾನಿಸುತಿಹೆನು ನಿನ್ನ ಕೈಕೆಲಸಗಳನು ಬೇಡುತಾ ನಿನ್ನಕಡೆ ಕೈಚಾಚಿದೆ ನಿನಗಾಗಿ ನನ್ನಾತ್ಮ ತವಕಪಡುತ್ತಿದೆ ಸದುತ್ತರ ಪಾಲಿಸು ಪ್ರಭೂ, ಸೊರಗಿದೆ ಎನ್ನ ಚೇತನ ನೀ ವಿಮುಖನಾದರೆ ನಾ ನರಕಹೊಕ್ಕವರಿಗೆ ಸಮಾನ" (ಕೀರ್ತನೆ ೧೪೩:೪-೭) ಎಂಬ ಕೀರ್ತನಕಾರನ ಪ್ರಾರ್ಥನಾಶಕ್ತಿಯನ್ನು ಅಂತರಂಗದಲಿ ಝೇಂಕರಿಸಿ, ಹತಾಶೆಯ ಬಂಡೆ ಪುಡಿಪುಡಿಯಾಗಿ, ಭರವಸೆಯ ಸೆಲೆ ನಿರಂತರ ಚಿಲುಮೆಯಾಗಿ ಚಿಮ್ಮಲಾರಂಭಿಸುತ್ತದೆ.
ಈ ದಿವ್ಯಾತ್ಮ ಶಕ್ತಿ ಎಲ್ಲಾ ಮಾನವರಲ್ಲಿಯೂ ಸುಪ್ತವಾಗಿ ಅಡಗಿದೆ ಇದಕ್ಕೆ ಚಾಲನೆ ದೊರೆತರೆ ಎಂಥಹ ಹತಾಶೆಯನ್ನಾದರೂ ಸಂಪೂರ್ಣವಾಗಿ ಕಿತ್ತೊಗೆಯಬಹುದು. ಏಕೆಂದರೆ ಹತಾಶೆಯಿಂದ ಮಾನವ ನಲುಗಲಾರಂಬಿಸಿದಾಗ "ಹೆದರಬೇಡ, ನಾನಿದ್ದೇನೆ ನಿನ್ನೊಂದಿಗೆ ಭಯಭ್ರಾಂತನಾಗಬೇಡ, ನಾನೇ ದೇವರು ನಿನಗೆ ಶಕ್ತಿ ನೀಡುವೆ, ಸಹಾಯಮಾಡುವೆ ನಿನಗೆ, ನನ್ನ ವಿಜಯಹಸ್ತದ ಆಧಾರ ಇದೆ ನಿನಗೆ" (ಯೆಶಾಯ ೪೧:೧೦) ಎನ್ನುತ್ತಾರೆ ಸೃಷ್ಟಿಯ ಪ್ರಭು. ಹಾಗೆಯೇ ಪ್ರಭು ಮುಂದುವರಿದು "ನೀನೆನ್ನ ದೃಷ್ಟಿಗೆ ಅಮೂಲ್ಯನು, ಘನವಂತನು, ಅತಿಪ್ರಿಯನು ಎಂದೇ ನಿನ್ನ ಪ್ರಾಣರಕ್ಷಣೆಗಾಗಿ ತ್ಯಜಿಸುವೆನು ಜನರನ್ನೂ ಜನಾಂಗಗಳನ್ನೂ" (ಯೆಶಾಯ ೪೩:೪) ಎನ್ನುತ್ತಾರೆ. ಹಾಗೆಯೇ ಇನ್ನೂ ಮುಂದುವರಿದು "ನಾನೇ ಇರುವೆ ನಿನ್ನ ಸಂಗಡ ನೀ ಜಲರಾಶಿಯನ್ನು ದಾಟುವಾಗ ಮುಳುಗಿಸದು ನೀ ಅದನ್ನು ಹಾದುಹೋಗುವಾಗ ಸುಡದು ಬೆಂಕಿ, ದಹಿಸದು ಜ್ವಾಲೆ, ಅದರ ಮಧ್ಯೆ ನೀ ನಡೆವಾಗ" (ಯೆಶಾಯ ೪೩:೨) ಎನ್ನುತ್ತಾರೆ ಸೃಷ್ಟಿಯಪ್ರಭು.
ಹೀಗಿರುವಾಗ ಹತಾಶೆ ಯಾಕೆ? ಮಾನವನ ಅಂತರಂಗದಲಿ ಒಣಗುತ್ತಿರುವ ಭರವಸೆಯ ಬೇರುಗಳು ಚಿಗುರಲು, ಚಿಗುರುತ್ತಿರುವ ಹತಾಶೆ ಬೇರುಗಳು ಒಣಲಾರಂಭಿಸುತ್ತವೆ. ಹತಾಶೆ ಬದುಕನ್ನು ಕತ್ತಲಾಗಿಸಿದರೆ, ಭರವಸೆ ಬದುಕನ್ನು ಬೆಳಗಿಸುತ್ತದೆ. ಇಂದು ವಿಶ್ವದಾದ್ಯಂತ ಹರಡಿರುವ ಕೊರೋನ ವೈರಸ್ ಮಾನವನ ಬದುಕಿನ ವಿವಿಧ ಸ್ತರಗಳಲ್ಲಿ ಉಂಟುಮಾಡುತ್ತಿರುವ ಭಯಂಕರ ನೋವು ಹಾಗೂ ತುಂಬಲಾರದ ನಷ್ಟಗಳು ಮಾನವನನ್ನು ಹತಾಶೆಯ ಗೂಡಿನಲ್ಲಿ ಬಂಧಿಸಲು ಸತತ ಪ್ರಯತ್ನ ಮಾಡುತ್ತವೆ. ಆದರೆ ಮಾನವನ ಹೃದಯಲ್ಲಿ ಪ್ರಸನ್ನರಾಗಿರುವ ಪವಿತ್ರಾತ್ಮರ ಜೀವಂತ ಪ್ರಭೆಯನ್ನು ನಂದಿಸಲು ಇದರಿಂದ ಸಾಧ್ಯವೇ ಇಲ! ಏಕೆಂದರೆ ಅದು ಅನಂತ ದಿವ್ಯ ಚೇತನ! ಆ ದಿವ್ಯ ಚೇತನ ಎಲ್ಲಾ ತರದ ಹತಾಶೆಯನ್ನು ಬಗ್ಗುಬಡಿದು, ಆತ್ಮ ಶಕ್ತಿಯನ್ನು ಉದ್ದೀಪನಗೊಳಿಸಿ, ಬದುಕನ್ನು ಹಸನು ಮಾಡುತ್ತದೆ ಹಾಗೂ ಮಾನವನ ಬದುಕಿನಲ್ಲಿ ಅದು ಹಚ್ಚಳಿಯದ ಹೊಂಬೆಳಕನ್ನು ಹೊನಲು ಹೊನಲಾಗಿ ಹರಿಸುತ್ತದೆ. ಈ ದಿವ್ಯಾತ್ಮ ಶಕ್ತಿಯ ಬೆಳಕಿನ ಮುಂದೆ ಹತಾಶೆಯ ಕತ್ತಲು ಹೇಗೆ ತಾನೆ ನಿಲ್ಲಲು ಸಾಧ್ಯ!
**********
No comments:
Post a Comment