Monday, 9 November 2020

ಕನ್ನಡ ಸಾಹಿತ್ಯಕ್ಕೆ ಕ್ರೈಸ್ತ ಸಾಹಿತಿಗಳ ಕೊಡುಗೆಗಳು - ಡಾ. ಸಿಸ್ಟರ್ ಪ್ರೇಮ (ಎಸ್.ಎಮ್.ಎಮ್.ಐ)

=================

ಹಿಂದಿನ ಸಂಚಿಕೆಯಲ್ಲಿ ಕನ್ನಡ ಸಾಹಿತ್ಯಕ್ಕೆ ಕ್ರೈಸ್ತ ಸಾಹಿತಿಗಳ ಕೊಡುಗೆಗಳು ಎಂಬ ವಿಷಯದಡಿಯಲ್ಲಿ ಸಾಹಿತ್ಯ ಸಾಧಕ 

ಎ.ಎಂ ಜೋಸೆಫ್‌ರವರ ಬದುಕಿನ ಬಗ್ಗೆ ವಿವೇಚಿಸಿದ್ದೇವೆ. ಪ್ರಸ್ತುತ ಸಂಚಿಕೆಯಲ್ಲಿ ಅವರ ಸಾಹಿತ್ಯಿಕ ಸೇವಾ ವಿಚಾರಗಳ ಬಗ್ಗೆ ಪರಿಚಯಿಸುವ ಪುಟ್ಟ ಪ್ರಯತ್ನ ಮಾಡಿರುತ್ತೇನೆ.

================

ಸಾಹಿತ್ಯಿಕ ಸೇವೆ :

ಮರೆಯೇ ನೀ ತರುಣದೊಳುದರದಿನವ ಮಾಸಗಳು

ಪೊರೆದು ರಕ್ಷಕನ ಧರೆಗಿತ್ತ ಮಾತೆ

ಮರಿಯ  ಮರೆ(ಯೆ)ನು ಚರಣಾರವಿಂದಗಳ

ಪೊರೆಯೆಮ್ಮ ಧರ್ಮಮಾರ್ಗದಲ್ಲಿ ತಾಯೇ

ಎಂದು ತಮ್ಮನ್ನೇ ಧರ್ಮಮಾರ್ಗದಲ್ಲಿ ತೊಡಗಿಸಿಕೊಂಡು ಮಾತೆಮರಿಯಮ್ಮನವರ ಮಡಿಲಿಗೆ ತಮ್ಮ ಕೃತಿ ರತ್ನಗಳನ್ನು ತುಂಬಿಸಿ, ಸಾರ್ಥಕವಾದ ತುಂಬು ಜೀವನ ನಡೆಸಿ, ತಮ್ಮ ೭೫ನೇ ವಯಸ್ಸಿಲ್ಲಿ ನಿಧನರಾದ ಶ್ರೀ ಜೋಸೆಫ್ ಅಯ್ಯನವರು ನಮ್ಮ ಮಧ್ಯದಲ್ಲೇ ಇದ್ದ ಕ್ರೈಸ್ತ ಹಿರಿಯ ಸಾಹಿತಿಗಳಲ್ಲಿ ಒಬ್ಬರು. ಆ ಶತಮಾನದಲ್ಲಿ ಬದುಕಿದ್ದ ಪಂಡಿತಮಾನ್ಯ ಕ್ರೈಸ್ತ ಲೇಖಕರು. ಕನ್ನಡದಲ್ಲಿ ಮಾತನಾಡಲು ಹೆದರುತ್ತಿದ್ದ ಆ ಕಾಲದಲ್ಲಿ, ಅದರಲ್ಲೂ ಕಥೋಲಿಕ ಕ್ರೈಸ್ತ ಸಮಾಜದಲ್ಲಿದ್ದುಕೊಂಡು ಕನ್ನಡದಲ್ಲಿ ಬರೆದು ಪ್ರಕಟಿಸುವ ಧೈರ್ಯಮಾಡಿದ್ದು ಅವರ ಸಾಹಸವೇ ಸರಿ. ಕ್ರೈಸ್ತ ಸಮಾಜದಲ್ಲಿ ಕನ್ನಡವನ್ನು ಊರ್ಜಿತಗೊಳಿಸಲು ಇಂದಿಗೂ ಕನ್ನಡಪರ ಕ್ರೈಸ್ತರು ಹೋರಾಡುತ್ತಿರುವಾಗ ಅಂದಿನ ಸ್ಥಿತಿಗತಿ ಹೇಗಿರಬಹುದು! ಕನ್ನಡ ಲೇಖಕರಿಗೆ ಯಶಸ್ಸು, ಪ್ರೋತ್ಸಾಹ, ಬೆಂಬಲ ಇಲ್ಲದಿದ್ದ ಕಾಲದಲ್ಲಿ ಶ್ರೀ ಜೋಸೆಫರು ಕನ್ನಡ ಲೇಖಕರಾಗಲು ಬಯಸಿದರು. ತಮ್ಮ ಕೈಲಾದಷ್ಟು ಕನ್ನಡ ಸೇವೆಮಾಡಿ ಕನ್ನಡದಲ್ಲಿ ಕ್ರೈಸ್ತ ಸಾಹಿತ್ಯವನ್ನು ಬೆಳೆಸಿದರು. ಕಥೋಲಿಕ ಸಾಹಿತ್ಯಕ್ಕೆ ನಾಂದಿ ಹಾಡಿದರು, ಅತ್ತ ದೂರದ ಧಾರವಾಡದಲ್ಲಿ ರೆವರೆಂಡ್ ಉತ್ತಂಗಿ ಚೆನ್ನಪ್ಪನವರು ತಿರುಳ್‌ಗನ್ನಡದ ತಿರುಕರಾಗಿ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದರೆ ಇತ್ತ ಬೆಂಗಳೂರಿನಲ್ಲಿ ಶ್ರೀ ಎ.ಎಂ. ಜೋಸೆಫರು ಕಥೋಲಿಕ ಕ್ರೈಸ್ತರಾಗಿ, ಕನ್ನಡದ ದಾಸಾನುದಾಸರಾಗಿ ಕನ್ನಡ ಸಾಹಿತ್ಯ ಕ್ಷೇತ್ರವನ್ನು ಹಿಗ್ಗಿಸುವ ಕೆಲಸದಲ್ಲಿ ತೊಡಗಿದರು.  ಉತ್ತಂಗಿಯವರ ಏರೆತ್ತರಕ್ಕೆ ಏರದಿದ್ದರೂ, ಕಥೋಲಿಕ ಕ್ರೈಸ್ತರ ಉತ್ತಂಗಿಯಾಗುವ ಅವಕಾಶ ಒದಗಿ ಬರದಿದ್ದರೂ ಶ್ರೀ ಜೋಸೆಫರು ಕಥೋಲಿಕ ಸಾಹಿತ್ಯದ ಉತ್ತುಂಗವಾದರು. ಸ್ವತಂತ್ರವಾಗಿ ಕನ್ನಡ ಪುಸ್ತಕಗಳನ್ನು ರಚಿಸಿದ ಕೀರ್ತಿ ಉತ್ತಂಗಿಯವರದಾದರೆ, ಇಂಗ್ಲೀಷ್, ತಮಿಳು, ತೆಲುಗು ಮೂಲಗಳಿಂದ ಕನ್ನಡಕ್ಕೆ ಭಾಷಾಂತರಿಸಿ ಕೊಟ್ಟ ಕೀರ್ತಿ ಶ್ರೀ ಜೋಸೆಫರದು. ಭಾರತೀಯ ಕ್ರೈಸ್ತರಾಗಿ, ಹುಟ್ಟು ಕನ್ನಡಿಗರಾಗಿ ಸುಬೋಧ ರಾಮರಾಯರು, ಉತ್ತಂಗಿ ಚೆನ್ನಪ್ಪನವರು, ಮುಳಿಯ ತಿಮ್ಮಪ್ಪಯ್ಯನವರು, ನಾಟಕಕಾರ ನರಹರಿ ಶಾಸ್ತ್ರಿಗಳು, ಗಳಗನಾಥ ಮಾಸ್ತರರು, ಸಾಲಿ ರಾಮಚಂದ್ರರಾಯರು, ಮುಂತಾದವರ ಸಮಕಾಲೀನರಾಗಿ, ನಿಷ್ಠಾವಂತ ಸಾತ್ವಿಕ ವ್ಯಕ್ತಿಯಾಗಿ, ಸರಳ ಸೌಜನ್ಯದ ಗಣಿಯಾಗಿ, ಸದಾಚಾರ ಸಂಪನ್ನರಾಗಿ, ನೀತಿ ನಿಷ್ಠೆಗಳ ಯೋಗ್ಯ ಪಾಲಕರಾಗಿ, ಆ ಕಾಲದ ಕ್ರೈಸ್ತರ ವಾಚನಾಭಿರುಚಿಯ ವರ್ಧಕರಾಗಿದ್ದರು ಎಂಬುದನ್ನು ಅವರ ಬಗ್ಗೆ ತಿಳಿಸುವ ಒಂದು ಕಿರು ಪುಸ್ತಕದಿಂದ ತಿಳಿದಿರುತ್ತೇನೆ.  ಸಾಹಿತ್ಯ ಸಾಧಕ ಶ್ರೀ. ಎ. ಎಂ. ಜೋಸೆಫರು ಸುಮಾರು ೩೩ ದೊಡ್ಡ ಮತ್ತು ಚಿಕ್ಕ ಪುಸ್ತಕಗಳನ್ನು ಬರೆದು ಪ್ರಕಟಿಸಿದ್ದಾರೆ. ಊoಟಥಿ ತಿeeಞ, sಣಚಿಡಿs ಚಿಟಿಜ ಠಿಟಚಿಟಿeಣs ಮತ್ತು Six ಛಿomಠಿಚಿಟಿioಟಿs ಎಂಬ ಮೂರು ಇಂಗ್ಲೀಷ್ ಪುಸ್ತಕಗಳನ್ನು ಬಿಟ್ಟರೆ  ಬೇರೆಲ್ಲವೂ ಕನ್ನಡ ಪುಸ್ತಕಗಳು ಇವುಗಳಲ್ಲಿ ಕೇವಲ ಒಂದೆರಡು ಪುಸ್ತಕಗಳನ್ನು ಅವರ ಅಣ್ಣ ಬೆರ್ನಾಡ್‌ರ ಜೊತೆ ಕೂಡಿ ಬರೆದಿರುವುದಾಗಿ ತಿಳಿದು ಬಂದಿದೆ. ಸುಮಾರು ಹನ್ನೆರಡು ವಿಷಯಗಳಿಗೆ ಸಂಬಂಧಿಸಿದ ೩೩ ಪುಸ್ತಕಗಳಲ್ಲಿ, ೮ ಧಾರ್ಮಿಕ ವಿಚಾರಗಳಿಗೆ ಸಂಬಂಧಿಸಿದವು, ೬ ಸಾಧು ಸಂತರ ಜೀವನ ಚರಿತ್ರೆಗಳಾದರೆ ಉಳಿದ ಪುಸ್ತಕಗಳು ಚರಿತ್ರೆ-ಇತಿಹಾಸ, ಸಮಾಜಶಾಸ್ತ್ರ, ಖಗೋಳ ಶಾಸ್ತ್ರ, ಅರ್ಥಶಾಸ್ತ್ರ, ವಿಜ್ಞಾನ, ಶಿಕ್ಷಣ, ಸಂಗೀತ ಮತ್ತು ಪತ್ರಸಾಹಿತ್ಯ ಪ್ರಕಾರಗಳಿಗೆ ಸೇರಿರುತ್ತವೆ. 

ಕ್ರಿ.ಶ.೧೯೨೯ರಲ್ಲಿ ದೇವರಾಜ್‌ಬಹದ್ದೂರ್ ಪಾರಿತೋಷಕವನ್ನು ಡಾ.ಶಿವರಾಮಕಾರಂತ (ಭಾರತೀಯ ಚಿತ್ರಕಲಾ) ಮತ್ತು ಶ್ರೀ.ಆರ್.ಆರ್. ದಿವಾಕರ (ಉಪನಿಷತ್ ರಹಸ್ಯ) ಅವರುಗಳ ಜೊತೆ ಹಂಚಿಕೊಂಡ ಶ್ರೀ ಜೊಸೆಫರ ಫಬಿಯೋಲೆ ಪವಿತ್ರ ಧರ್ಮಸಭೆಯ ವೀರರ ಚರಿತ್ರೆಯನ್ನೊಳಗೊಂಡ ಕೃತಿ. ಕಾರ್ಡಿನಲ್ ವೈಸ್‌ಮನ್‌ರ ಇಂಗ್ಲೀಷ್ ಕೃತಿಯ ಭಾವಾನುವಾದವೇ ಈ ಕೃತಿ. ಇದು ಅವರ ಚೊಚ್ಚಲ ಕೃತಿಯೂ ಆಗಿರಬಹುದು. ಅವರ ಕಾಲದಲ್ಲಿಯೇ ಎರಡನೆಯ ಮುದ್ರಣ ಕಂಡರೂ ಇಂದು ಕ್ರೈಸ್ತರಿಗೆ ಇದು ಉಪಲಬ್ಧವಾಗಿಲ್ಲ.

ಪೊರೆದು ಪಾಲಿಸು ತಾಯೆ

ಧರೆಯೊಳಗೆ ಸಂತನ ತಾ

ಧರಿಸಿದವೊಲೀಕೃತಿಯ ಕನ್ನಡದಿ ನಿ

ದರೊಳು ಪೇಳಲೆಳಸಿದ

ತಿರುಸಭೆಯ ಅಹಿಂಸಾ

ಧುರ ವೀರವರರ 

ಚರಿತೆಯನು ನಾನು

ಪವಿತ್ರ ಧರ್ಮಸಭೆಯ ವೀರರ ಚರಿತ್ರೆಯನ್ನು ಕನ್ನಡದಲ್ಲಿ ಬರೆಯುತ್ತಿದ್ದೇನೆ, ಹರಸು, ಪಾಲಿಸು ತಾಯೆ ನಿನ್ನ ಸುತನ ಪಾಲಿಸಿದಂತೆ ಎಂದು ವಿನಮ್ರದಿಂದ ಪ್ರಾರ್ಥಿಸಿಕೊಂಡು ೪೦೮ ಪುಟಗಳ ಈ ಉದ್ಗ್ರಂಥವನ್ನು ಬರೆದು-

ತಂದೆಯೆ ನಿನ್ನಯ ಪಾದಕೆ

ಸಂದವು ಪಾವನವೆನುವರು-ಕಾಣ್ಕೆಯನಿದನೀ

ನಂದದಿ ಕೈಗೊಂಡೆಮ್ಮಂ

ಚೆಂದದಿ ಪಾವನರ ಮಾಡು ಜೇಸುಕೃಪಾಲಾ ಎಂದು ಮುಗಿಸಿದ್ದಾರೆ.

ಫಾತಿಮಾ ಮಾತೆ (೧೯೫೦), ಜೀವವಾದ ಜೇಸುನಾಥರು (೧೯೫೬), ಸಂಕಲ್ಪ ಹಠಯೋಗಿ (೧೯೫೬), ಎಲ್ಲಾ ಮತದವರಿಗೂ (೧೯೫೯), ಸಂತ ತೋಮಾಸರು (೧೯೬೪), ಕೆಂಪು ಮರಳು, ನಮ್ಮ ಒಡತಿಯ ಮಾಸ, ಅರ್ಚ ಜೂದಾಸ್, ಭಕ್ತಿಮಾಲೆ, ನನ್ನ ಬಲಿ, ಕ್ರಿಸ್ತನ ಪುನರಾಗಮನ, ಒಬ್ಬ ಪ್ರಖ್ಯಾತ ಪ್ರಸಂಗಿ, ಯೇಸು ಕ್ರಿಸ್ತರು ಕೇವಲ ಮಹಾಪುರುಷರೇ? (೧೯೬೫), ಅಂಜಲಿ, ಕಾಣಿಕೆ ಮತ್ತು ಆತ್ಮಪರಾಗ ಇವು ಎ.ಎಂ ಜೋಸೆಫರ ಧಾರ್ಮಿಕ ಕೃತಿಗಳು. ಫಾತಿಮಾ ಮಾತೆ ಜೀಯನ್ ಕಾಸ್ಟೆಲ್ ಬ್ರಾಂಕೋ ಸ್ವಾಮಿಯವರು ಬರೆದ More about Fatima ಎಂಬ ಇಂಗ್ಲೀಷ್ ಪುಸ್ತಕದ ಅನುವಾದವಾದರೆ ಸಂಕಲ್ಪ ಹಠಯೋಗಿ ಸಂತ ಇಗ್ನೇಷಿಯಸ್ ಲೊಯೋಲಾರವರ ಜೀವನ ಚರಿತ್ರೆಯಾಗಿದೆ. ಸಂತ ತೋಮಸರು ಎಂಬುದು ಭಾರತಕ್ಕೆ ಬಂದ ಸಂತ ತೋಮಸರ ಜೀವನ ಚರಿತ್ರೆಯಾದರೆ; ಕೆಂಪು ಮರಳು ಸಂತ ಜಾನ್ ಬ್ರಿಟ್ಟೊ ಅವರ ಜೀವನ ಚರಿತ್ರೆಯಾಗಿದೆ. ಭಕ್ತಿಮಾಲೆ, ನನ್ನ ಬಲಿ, ಅಂಜಲಿ ಮತ್ತು ಆತ್ಮ ಪರಾಗಗಳು ಭಕ್ತಿ ಮಾರ್ಗಸೂಚಿ ಜಪದ ಪುಸ್ತಕಗಳಾಗಿವೆ. ಜೋಸೆಫರ ಉಳಿದ ಪುಸ್ತಕಗಳೆಂದರೆ: ಶಿಕ್ಷಣದ ಕಲಾ ರಹಸ್ಯ (ಅಣ್ಣ ಬೆರ್ನಾರ್ಡರ ಜೊತೆ), ಸಂತತ್ಸವೃದ್ಧಿಯ ರಾಜಮಾರ್ಗ, ಆರು ಒಳನಾಡಿಗಳು, ತೆಲುಗು ಕ್ರಿಸ್ತುವರ ಚರಿತ್ರೆ, ಮಾವನವರಿಗೂ ಮಿತ್ರರಿಗೂ ಪತ್ರಗಳು, ಗ್ರಹಗಳು ಮತ್ತು ನಕ್ಷತ್ರಗಳು, ಕೊಲಂಬಸ್, ಸಂಗೀತಗಳು, ವಾಯು ನೀರು, ವಿದ್ಯುಚ್ಛಕಿ, ಪತ್ರವ್ಯವಹಾರ, ಆಸ್ಥಾನವಿಜ್ಞಾನ ಬೋಧನೆಗಳು, ಬ್ಯಾಂಕಿನಲ್ಲಿ ವ್ಯವಹಾರ ಮಾಡುವುದು ಹೇಗೆರೀ ಈ ಎಲ್ಲಾ ಪುಸ್ತಕಗಳ ಜೊತೆಗೆ ಹೊಸ ಒಡಂಬಡಿಕೆಯ ಸುಸಂದೇಶವನ್ನು ಕನ್ನಡಕ್ಕೆ ಭಾಷಾಂತರಿಸಿ ಕೊಟ್ಟಿರುವ ಶ್ರೀಯುತರು ವಂ. ಟಿ. ಫ್ರೆ ಎಂಬ ಗುರುಗಳು ಬರೆದಿರುವ ಒಥಿ ಆಚಿiಟಥಿ booಞ ಎಂಬುದನ್ನು ನನ್ನ ಅನುದಿನದ ಸಂಗೀತ ಎಂದು ಭಾಷಾಂತರಿಸಿಟ್ಟಿರುವ ೫೦೦ ಪುಟಗಳ ಹಸ್ತಪ್ರತಿಯನ್ನು ಬಿಟ್ಟು ಹೋಗಿದ್ದಾರೆ. 

ದಿವಂಗತ ಶ್ರೀ ಎ.ಎಂ.ಜೋಸೆಫರು ಅವರ ಜೀವತಾವಧಿಯಲ್ಲಿ ಯಾರಿಂದಲೂ ಗುರುತಿಸಲ್ಪಟ್ಟವರಲ್ಲ ಹಾಗೂ ಅವರು ಬದುಕಿದ್ದಾಗ ಅವರಿಗೆ ಯಾವ ಗೌರವವೂ ಸಲ್ಲಲಿಲ್ಲ. ಆದರೆ ಇತ್ತೀಚೆಗೆ ೨೫.೯.೮೮ರ ಅವಧಿಯಲ್ಲಿ ಡಾ.ಬಿ.ಎಸ್.ತಲ್ವಾಡಿಯವರು ಅವರ ಕಿರು ಜೀವನ ಚರಿತ್ರೆ ಸಾಹಿತ್ಯ ಸಾಧಕ ಎ. ಎಂ. ಜೋಸೆಫ್ ಎಂಬ ಪುಸ್ತಕವನ್ನು ಬರೆದು ಬಿಡುಗಡೆಮಾಡಿ ಶ್ರೀಯುತರಿಗೆ ಗೌರವವನ್ನು ಅರ್ಪಿಸಿದ್ದಾರೆ. ಒಬ್ಬ ಧೀಮಂತ ಕನ್ನಡ ಸಾಹಿತ್ಯ ಸಾಧಕ ಜೋಸೆಫ್‌ರವರು ತಮ್ಮ ಜೀವನದಂತ್ಯದಲ್ಲೂ ಕನ್ನಡ ಸಾಹಿತ್ಯದ ಬೆಳವಣಿಗೆಗಾಗಿ ದುಡಿದವರು.

ಕನಡಕ್ಕಾಗಿ ಸದಾ ದುಡಿದ ಶ್ರೀಯುತರು ನಾಲಿಗೆಯ ಕ್ಯಾನ್ಸರ್ ರೋಗದಿಂದ ನರಳಿ ಸುಮಾರು ೧೭ ದಿವಸಗಳ ಕಾಲ ಉಪವಾಸವಿದ್ದು ೧೭.೮.೧೯೬೫ರ ಬೆಳಗಿನ ಜಾವ ೫ ಘಂಟೆ ೧೦ ನಿಮಿಷಗಳಿಗೆ   ಯೇಸು, ಮರಿಯಾ, ಜೋಸೆಫ್ ಎಂದೂ ದೇವರ ಹೆಸರನ್ನು ಗುನುಗುತ್ತಾ         ದೈವಾಧೀನರಾದರು. ಶ್ರೀ ಜೋಸೆಫರು ಕನ್ನಡ ದಾಸರ ದಾಸರು. ಕಥೋಲಿಕ ಕನ್ನಡಿಗರ ಕನ್ನಡದ ಕಣ್ಣುಗಳು. ಇವರ ನಿಷ್ಠೆ ಮಾದರಿ ಎಮಗೆ.

ಕಷ್ಟ ಕಾರ್ಪಣ್ಯಗಳು ದುಷ್ಟೋಪತಾಪಗಳು

ಎನಿತೆನಿತೊ ಬಂದವು ನಿಮ್ಮ ಬಳಿಗೆ

ನಿಷ್ಠೆಯಿಂದಲಿ ನೀವು ಕರ್ತವ್ಯ ಮಾಡಿದಿರಿ

ಖ್ಯಾತಿ ಅಪಖ್ಯಾತಿಗಳ ಸುಟ್ಟು ಒಳಗೆ||

ಎಂಬುದಾಗಿ ಡಾ.ಬಿ.ಎಸ್ ತಲ್ವಾಡಿಯವರು ಅವರ ಗುಣಗಾನ ಮಾಡಿದ್ದಾರೆ.


ಇಂತಹ ಶ್ರೇಷ್ಠ ಕ್ರೈಸ್ತ ಕನ್ನಡಾಭಿಮಾನಿಗಳ ಸಾಧನೆ ನಮ್ಮೆಲ್ಲರಿಗೂ ಪ್ರೇರಣೆಯಾಗಲಿ. ಶ್ರೀಯುತರು ಸದಾ ಕ್ರಿಸ್ತನ ಚಿರಶಾಂತಿಯಲ್ಲಿ ವಿಶ್ರಮಿಸಲಿ.

==============

ಮುಂದಿನ ಸಂಚಿಕೆಯಲ್ಲಿ ಮತ್ತೋರ್ವ ಸೃಜನಶೀಲ ಕನ್ನಡ ಕ್ರೈಸ್ತ ಸಾಹಿತಿ ಹಾಗು ಕಾದಂಬರಿಕಾರ ಡಾ.ನಾ.ಡಿಸೋಜ ರವರ ಬಗ್ಗೆ ತಿಳಿಸಲಾಗುವುದು.

************

 

No comments:

Post a Comment

ಎತ್ತಿತೋರಿಸಲಾದ ಪೋಸ್ಟ್

ಅನ್ನಮ್ಮ’ಳಿಗೆ ೨೫೦ರ ಹಾಗೂ ಅತಿ.ವಂ.ಪೊತ್ತಕಮೂರಿಗೆ ೫೦ರ ಸ್ಮರಣೆಯ ಸಂಭ್ರಮ

ಬೆಂಗಳೂರಿನ ಉತ್ತರಹಳ್ಳಿಯ ಅನ್ನಮ್ಮನ ಬೆಟ್ಟ, ಅಲ್ಲಿನ ಅನ್ನಮ್ಮಳ ಸಮಾಧಿ, ಆ ಬೆಟ್ಟದ ಮೇಲಿನ ಶಿಲುಬೆ, ಅಲ್ಲಿ ಪ್ರತಿವರ್ಷ ತಪಸ್ಸು ಕಾಲದ ಐದನೇ ಭಾನುವಾರ ನಡೆಯುವ ಯೇಸು...