Sunday, 8 November 2020

ಈ ದೇಗುಲದಲ್ಲಿ ದೇವರಿಲ್ಲ .... - ಜೋವಿ

ಕಥೋಲಿಕ ಕ್ರೈಸ್ತ ಧಾರ್ಮಿಕ ವಿಧಿ ಆಚರಣೆಗಳನ್ನು ಪ್ರಾರ್ಥನೆಗಳನ್ನೂ ಒಳಕೊಂಡ ಒಂದು ಸಮಗ್ರ ಮೊಬೈಲ್ ಅಪ್ಲಿಕೇಷನ್ ಸಿದ್ಧಪಡಿಸಿ ಅದರ ಮೂಲಕ ಕ್ರೈಸ್ತರ ಆಧ್ಯಾತ್ಮಿಕ ಬದುಕಿಗೆ ಒತ್ತಾಸೆ ಒದಗಿಸಬೇಕೆಂಬ ಅಲೋಚನೆ ಹುಟ್ಟಿದ್ದು ಸುಮಾರು ಎರಡು ವರ್ಷಗಳ ಹಿಂದೆ. ಈ ಕಾರಣಕ್ಕಾಗಿ ನಾವು ಸುಮಾರು ಇಪ್ಪತ್ತು ಮಂದಿ ಜತೆ ಸೇರಿದಾಗ ಅಪ್ಲಿಕೇಷನ್ ಅಭಿವೃದ್ಧಿಯ ಕಾರ್ಯಕ್ಕೆ ತಕ್ಷಣವೇ ಚಾಲನೆ ದೊರೆಯಿತು. ಆರ್ಥಿಕ ಸಹಾಯದೊಂದಿಗೆ ನಮ್ಮ ಜತೆ ಇರುತ್ತೇವೆ ಎಂದು ಕೆಲವರು ಭರವಸೆ ಕೊಟ್ಟರೆ, ಇನ್ನೂ ಕೆಲವರು ಅಪ್ಲಿಕೇಷನ್‌ಗೆ ಬೇಕಾದ ಪಠ್ಯಗಳನ್ನು ಒದಗಿಸುತ್ತೇವೆ ಎಂದು ಭರವಸೆಗಳ ಮಾತುಗಳನ್ನು ಹೇಳಿ ನಮ್ಮನ್ನು ಹುರಿದುಂಬಿಸಿದರು. ಕಾಲಕ್ರಮೇಣ ಜವಾಬ್ದಾರಿ ವಹಿಸಿಕೊಂಡ ಜನರಲ್ಲಿ ದೃಢತೆ ಮತ್ತು ಬದ್ಧತೆಗಳ ಕೊರೆತೆ ಇದೆ ಎಂದು ತಿಳಿದುಕೊಳ್ಳಲು  ನಮಗೆ ಜಾಸ್ತಿ ದಿನಗಳು ಬೇಕಾಗಲಿಲ್ಲ. ವಹಿಸಿಕೊಂಡ ಜವಾಬ್ದಾರಿಯಿಂದ ಒಬೊಬ್ಬರಾಗಿ ನುಣುಚಿಕೊಳ್ಳಲು ಪ್ರಾರಂಭಿಸಿದರು. ಇನ್ನೊಂದು ಕಡೆ, ಅಪ್ಲಿಕ್ಲೇಷನ್ ಅಭಿವೃದ್ಧಿಪಡಿಸಿಕೊಡಲು ಮುಂಗಡ ಹಣ ತೆಗೆದುಕೊಂಡಿದ್ದ  ಕಂಪನಿಯ ಮಾಲಿಕ ಅಭಿವೃದ್ಧಿಯ ಕೆಲಸವನ್ನು ಅಲ್ಪಸ್ವಲ್ಪ ಮಾಡಿ, ಕೊನೆಗೆ ನಮ್ಮ ನಿರೀಕ್ಷೆಯನ್ನು ಪೂರೈಸಲು ಸಾಧ್ಯವಾಗದೆ ಕೈಚೆಲ್ಲಿದ್ದ. ಈ ಎಲ್ಲಾ ಕಾರಣಗಳಿಂದ ಮೊಬೈಲ್ ಆಪ್ ಸಿದ್ಧ ಪಡಿಸುವ ಯೋಚನೆಯನ್ನೇ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಯಿತು.

ಕೂಸು ಹುಟ್ಟುವುದಕ್ಕಿಂತ ಮುಂಚೆ ಕುಲಾವಿ ಹೊಲಿಸಿದರಂತೆ, ಅಪ್ಲಿಕೇಷನ್ ಅಭಿವೃದ್ಧಿ ಪಡಿಸುವ ಮುಂಚೇನೆ ನಾವು ಅದರ ಬಗ್ಗೆ ಜಾಹೀರಾತು ಕೊಟ್ಟಿದ್ದೆವು. ನಾವು ಪ್ರಕಟಿಸಿದ ಪೂಜಾ ಪಂಚಾಂಗದಲ್ಲೂ ಇದರ ಬಗ್ಗೆ ಕೆಲವೊಂದು ಆಕರ್ಷಕ ಪೋಸ್ಟರ್ಸಗಳ  ಜೊತೆಗೆ ಒಂದು ಪೀಠಿಕೆ ಕೂಡ ಪ್ರಕಟಿಸಿದ್ದೆವು. ಆದ್ದರಿಂದ ನಾವು ನೀಡಿದ್ದ ಭರವಸೆಯನ್ನು ಈಡೇರಿಸಬೇಕಾಯಿತು. ಆದರೆ ನಾವು ಕೈಗೊಂಡ ಯೋಜನೆ ಎಂಬ ಮಗು ಹುಟ್ಟುವ ಮೊದಲ್ಲೇ ಸತ್ತು ಹೋಗಿತ್ತು. ಈ ಕಾರಣಕ್ಕಾಗಿ ನಾನಾಂತೂ ಈ ಮೊಬೈಲ್ ಅಪ್ಲಿಕೇಷನ್ ಸಿದ್ಧಪಡಿಸುವ ಯೋಜನೆಯ ಬಗ್ಗೆ ತುಂಬಾ ಋಣಾತ್ಮಕನಾಗಿಬಿಟ್ಟಿದ್ದೆ. ತಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ಜವಾಬ್ದಾರಿ ವಹಿಸಿಕೊಂಡಿದ್ದ ಜನರ ಮೇಲೆ ಮತ್ತು ನನ್ನ ಬಗ್ಗೆಯೇ ಒಂದು ಅಸಹನೀಯ ಭಾವನೆ ಆವರಿಸಿಕೊಂಡಿತ್ತು. 

ಈ ಆಪ್ ಸಿದ್ಧಗೊಳಿಸುವ ಭರದಲ್ಲಿ ದುಡ್ಡು, ನಿದ್ದೆ, ಸಮಯ ಹೀಗೆ ಎಲ್ಲವನ್ನು ಕಳೆದುಕೊಂಡಿದ್ದ ನನಗೆ ಈ ಆಪ್ ಸಹವಾಸವೇ ಬೇಡವೆಂದು ಕೈಬಿಟ್ಟೆ. ಹೀಗೆ ಎರಡು ವರ್ಷಗಳು ಉರುಳಿದವು. ಆದರೆ ಮೊಬೈಲ್ ಅಪ್ಲಿಕೇಷನ್ ಬಗ್ಗೆ ನಾವು ಕೊಟ್ಟಿದ್ದ ಭರವಸೆ ಮತ್ತು ಜಾಹೀರಾತುಗಳು ನನ್ನನ್ನು ಸದಾ ಕಾಡುತ್ತಿದ್ದವು. ನಾವು ಕೊಟ್ಟ ಭರವಸೆಯನ್ನು ಈಡೀರಿಸಬೇಕೆಂದು ನನ್ನ ಮನಸ್ಸು ಸದಾ ಹೇಳುತ್ತಿತ್ತು. ಆದರೆ ಪುನಃ ಅಪ್ಲಿಕೇಷನ್ ಅಭಿವೃದ್ಧಿ ಪಡಿಸುವ              ಯೋಜನೆಯನ್ನು ಕೈಗೆತ್ತಿಕೊಳ್ಳಲು ಯಾಕೋ ಮನಸ್ಸು ಹಿಂದೇಟು ಹಾಕುತಿತ್ತು. ಈ ಮಧ್ಯೆ ನನಗೂ ಕೈತುಂಬ ಕೆಲಸಗಳಿದ್ದವು. ಹೆಗಲ ಮೇಲೆ ಬೇರೆ ಬೇರೆ ಜವಾಬ್ದಾರಿಗಳಿದ್ದವು. ಆದರೆ ಕೊರೊನಾ ಸಾಂಕ್ರ್ರಮಿಕ ರೋಗದಿಂದ ಇಡೀ ದೇಶವೇ ಸ್ತಬ್ಧವಾಗಿ, ತರಾತುರಿಯಲ್ಲಿ ಘೋಷಣೆಯಾದ ಲಾಕ್ ಡೌನ್‌ನಿಂದ ನಾವೆಲ್ಲರೂ     ಮನೆಬಂದಿಯಾಗಿಬಿಟ್ಟೆವು.  ಇಂತಹ ಪರಿಸ್ಥಿತಿಯಲ್ಲಿ, ಮತ್ತೊಮ್ಮೆ ನಮ್ಮ ಆಪ್   ಕೆಲಸಕ್ಕೆ ಚಾಲನೆ ಸಿಕ್ಕಿತು. ಪುನಃ ಆಸಕ್ತಿವಹಿಸಿ ಕಾರ್ಯಪ್ರವೃತರಾಗುವ ಕೆಲವೇ ಕೆಲ ಜನರನ್ನು ಸಂಘಟಿಸಿದೆ. ಆಪ್ ಬಗ್ಗೆ ಮತ್ತೊಮ್ಮೆ ಅವರಲ್ಲಿ ಪ್ರಸ್ತಾಪ ಮಾಡಿ, ತಂಡದಲ್ಲಿದ್ದ ಜನರ ಸಹಾಯಬೇಡಿದೆ. ಕೆಲವರು ಸಂಪೂರ್ಣ ಬೆಂಬಲ ವ್ಯಕ್ತಪಡಿಸಿ, ಆಪ್  ಅಭಿವೃದ್ಧಿಗೆ ಶಕ್ತಿ ಮೀರಿ ದುಡಿದರು. ಇನ್ನೂ ಕೆಲವರು ಭರವಸೆ ಕೊಟ್ಟು, ಜವಾಬ್ದಾರಿಯಿಂದ ನುಣುಚಿಕೊಂಡರು. ಕೊನೆಗೆ ಹತ್ತಾರು ಜನರ ಶ್ರಮದಿಂದ ನಮ್ಮ ಆಪ್ ಬೆಂಗಳೂರು ಮಹಾಧರ್ಮಾಧ್ಯಕ್ಷರಿಂದ ಲಾಂಚ್ ಆಗಿ ಒಂದೇ ದಿನದಲ್ಲಿ ಸುಮಾರು ೫೦೦ ಜನರು ಆಪ್ ಅನ್ನು ಡೌನ್‌ಲೋಡ್ ಮಾಡಿಕೊಂಡು ಉತ್ತಮ ಪ್ರತಿಕ್ರಿಯೆ ನೀಡಿದ್ದಾರೆ. ಈಗ, ಸಾಧನೆಯ ತೃಪ್ತಿ ನಮ್ಮನ್ನು ತುಂಬಿಕೊಂಡು ನಮ್ಮ ಹೊಸ      ಯೋಜನೆಗಳಿಗೆ ಕೈ ಹಾಕಲು ಧೈರ್ಯಕೊಟ್ಟಿದೆ.

ಇದು ಒಬ್ಬನ ಶ್ರಮಫಲವೇ ಅಲ್ಲ. ಹತ್ತಾರು ಜನರು ಶ್ರಮವಹಿಸಿ ಸಿದ್ಧಪಡಿಸಿರುವ ಅಪ್ಲಿಕೇಷನ್. ಕೆಲವರು ನಿದ್ದೆ ಊಟ ಹೀಗೆ ತಮ್ಮ ದೈಹಿಕ ಬೇಡಿಕೆಗಳ ಬಗ್ಗೆ ತಲೆಕೆಡಿಸಿಕೊಳ್ಳದೆ, ನಮ್ರತೆಯಿಂದ ದುಡಿದಿದ್ದಾರೆ. ಕೆಲವರು ಆರ್ಥಿಕ ಸಹಾಯವನ್ನು ನೀಡಿ ಪ್ರೋತ್ಸಾಹಿಸಿದ್ದಾರೆ. ಇನ್ನೂ ಕೆಲವರು ಅಪ್ಲಿಕೇಷನ ಸಿದ್ಧತೆಯ ಕೆಲಸಕಾರ್ಯಗಳ ಬಗ್ಗೆ ಪ್ರತಿದಿನ ದೂರವಾಣಿಯ ಮೂಲಕ ವಿಚಾರಿಸಿ, ಪ್ರೋತ್ಸಾಹ ನೀಡಿದ್ದಾರೆ. ಇದು ಸಾಧ್ಯವಾಗಿದ್ದು ತಂಡದ ಶ್ರಮದಿಂದ ಮತ್ತು ಅವರ ಬದ್ಧತೆಯಿಂದ. ಕ್ರಿಸ್ತದನಿಯ ಅಪ್ಲಿಕೇಷನ್‌ನ ಯೋಜನೆಯನ್ನು ಸಾಕಾರಗೊಳ್ಳಿಸಲು ದುಡಿದ     ಪ್ರತಿಯೊಬ್ಬರಿಗೂ ದನಿ ಮಾಧ್ಯಮ ಮನೆ ವಂದಿಸುತ್ತಿದೆ. ನಿಮ್ಮ ಸಹಕಾರ ಹೀಗೆ ಮುಂದುವರಿಯಲೆಂದು ದನಿ ಮಾಧ್ಯಮ ಮನೆಯ ಪರವಾಗಿ ನಾನು ನಿಮ್ಮನ್ನು ಬೇಡಿಕೊಳ್ಳುತ್ತೇನೆ. ಕೊನೆಗೆ ಕ್ರಿಸ್ತದನಿಯು ಹೆಚ್ಚಿನ ಜನರಿಗೆ ತಲುಪಲಿ ಮತ್ತು ಆಧ್ಯಾತ್ಮಿಕ ಬದುಕಿಗೆ ಸಹಕಾರಿ ಆಗಲೆಂದು ಪ್ರಾರ್ಥಿಸುತ್ತೇನೆ. 

**********

ನಮ್ಮ ದೇಶವು ಜಾತ್ಯತೀತ ಗುಣವನ್ನೇ ಕಳೆದುಕೊಳ್ಳುತ್ತಿದೆ. ದಿನೇ ದಿನೇ ಕೋಮುವಾದವು ಬಲಗೊಳ್ಳುತ್ತಿದೆ. ಜನರು ಕೂಡ ದೇಶದ ಸಂವಿಧಾನದ ಮೂಲ ಆಶಯವನ್ನು ಮರೆತು ಕೋಮುವಾದವನ್ನು ಒಪ್ಪಿಕೊಳ್ಳುತ್ತಿದ್ದಾರೆ. ಕೋಮುವಾದಕ್ಕೆ ಪ್ರಭುತ್ವದ ಬಲ ಸೇರಿ ಸಮುದಾಯಗಳ ನಡುವೆ ಒಡಕು ಮೂಡಿಸುತ್ತಿವೆ. ಆಳುವವರಲ್ಲಿ ಜನರ ಒಳಿತಿನ ಬಗ್ಗೆ ಅಷ್ಟೇನೂ ಬದ್ಧತೆ ಕಾಣುತ್ತಿಲ್ಲ. ದೇಶದ ಅಭಿವೃದ್ಧಿಗೆ ಬೇಕಾದ ಸಂಕಲ್ಪವಿಲ್ಲ. ಮುಖ್ಯವಾಗಿ ಅವರಲ್ಲಿ ಆದ್ಯತೆಗಳ ಬಗ್ಗೆ ಸ್ಪಷ್ಟತೆ ಇಲ್ಲದಿರುವುದು ದೇಶದ ದೌರ್ಭಾಗ್ಯವೇ ಸರಿ. 

ಜಾತ್ಯತೀತ ಮೌಲ್ಯಗಳಲ್ಲಿ ನಂಬಿಕೆಯಿರುವ        ಬುದ್ಧಿ ಜೀವಿಗಳು ಬಹುತ್ವ ಭಾರತದ ಪರ ವಹಿಸಿ, ಕೋಮುವಾದಿಗಳನ್ನು  ವಿರೋಧಿಸಿದರೆ, ಅವರನ್ನು ದೇಶದ್ರೋಹಿಗಳೆಂದು ಜರಿಯಲಾಗುತ್ತಿದೆ. ನಾನಾ ರೀತಿಯ ಷಡ್ಯಂತ್ರಗಳು ಅವರ ವಿರುದ್ಧ ನಡೆಯುತ್ತಿದೆ. ಇನ್ನೊಂದು ಕಡೆ, ಕರೊನಾ ರೋಗವು ಸಾವಿರಾರು ಜನರನ್ನು ಬಲಿ ತೆಗೆದುಕೊಳ್ಳುತ್ತಿದೆ. ಅದರಲ್ಲೂ ಯಾವುದೇ ರೀತಿಯ ಆರೋಗ್ಯ ಸೌಲಭ್ಯಗಳನ್ನು ದಕ್ಕಿಸಿಕೊಳ್ಳಲಾಗದೇ ಬಡವರು ಹತಾಶರಾಗಿದ್ದಾರೆ. ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ಕೆಲವೊಂದು ಖಾಸಗಿ ಆಸ್ಪತ್ರೆಗಳು ಪರಿಸ್ಥಿತಿಯ ಲಾಭವನ್ನು ಪಡೆದುಕೊಂಡು ದುಡ್ಡು ಮಾಡುವ ದಂಧೆಗೆ ಇಳಿದಿದ್ದಾರೆ. ಈ ದಂಧೆಯಲ್ಲಿ ರಾಜಕಾರಣಿಗಳು ಭಾಗಿಯಾಗಿರುವುದು ಅಕ್ಷಮ್ಯ ಬೆಳವಣಿಗೆ ಎಂದೇ ಹೇಳಬಹುದು. ಇನ್ನೊಂದು ಕಡೆ, ದೇಶದ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ. ಸಾವಿರಾರು ಜನರು ಉದ್ಯೋಗಗಳನ್ನು ಕಳೆದುಕೊಂಡು ಜೀವನೋಪಾಯಕ್ಕೆ ಕಷ್ಟಪಡುತ್ತಿದ್ದಾರೆ. ದೇಶದಲ್ಲಿ ಸರಿಯಾದ ಆರೋಗ್ಯ ವ್ಯವಸ್ಥೆಯ ಮೂಲಸೌಕರ್ಯಗಳಿಲ್ಲ. ಇಂತಹ ಹಿನ್ನಲೆಯಲ್ಲಿ ರಾಮಮಂದಿರದ ನಿರ್ಮಾಣಕ್ಕೆ ಭೂಮಿಪೂಜೆಯ ಮೂಲಕ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಚಾಲನೆ ಕೊಟ್ಟಿದ್ದಾರೆ. ಈ ದಿನ ತ್ಯಾಗ ಬಲಿದಾನದ ಸಂಕೇತ ಹಾಗೂ ಸಂಕಲ್ಪದ ದಿನವಾಗಿದೆ ಎಂದು ಹೇಳಿರುವ ಪ್ರಧಾನಿಯವರು ಭೂಮಿ ಪೂಜೆಯ ದಿನವನ್ನು ಆಗಸ್ಟ್ ೧೫ರ ಸ್ವಾತಂತ್ರೋತ್ಸವದೊಂದಿಗೆ ತಳುಕು ಹಾಕಿರುವುದು ಅಥವ ಸಮೀಕರಿಸಿರುಸುವುದು ಎಷ್ಟು ಸರಿ ಎಂಬ ಪ್ರಶ್ನೆ ನಮ್ಮಲ್ಲಿ ಮೂಡದಿರದು. ಜತೆಗೆ ನಿರ್ಮಾಣ ಪ್ರಕ್ರಿಯೆಯಲ್ಲಿ ಸರ್ಕಾರ ನೇರವಾಗಿ ಗುರುತಿಸಿಕೊಂಡಿರುವುದು ಕೂಡ ಪ್ರಶ್ನಾರ್ಹವಾಗಿದೆ. ಇದು ಒಂದು ಟ್ರಸ್ಟ್‌ನ ಕಾರ್ಯಕ್ರಮವಾಗಿದ್ದರೂ ಅದು ಸರ್ಕಾರದ, ಒಂದು ಪಕ್ಷದ, ಒಂದು ಸಿದ್ಧಾಂತದ ಕಾರ್ಯಕ್ರಮದಂತೆ ಬಿಂಬಿಸಿರುವ ಸರ್ಕಾರದ ನಡೆತೆ ತಪ್ಪು ಎಂದು ಹೇಳಬೇಕಾಗಿದೆ.

ಇಲ್ಲಿ ಇನ್ನೊಂದು ಪ್ರಶ್ನೆ ನಮ್ಮಲ್ಲಿ ಏಳದೆ ಇರದು. ಕೊರೊನಾ ವೈರಾಣುವಿಂದ ಸೋಂಕು ದೇಶದಲ್ಲಿ ತೀವ್ರಗೊಂಡು ಜನಸಾಮಾನ್ಯರು ಆತಂಕಗೊಂಡಿರುವ ಹಾಗೂ ಆರ್ಥಿಕ ಹಿಂಜರಿತದಿಂದ ಶ್ರೀಸಾಮಾನ್ಯರ ಬದುಕು ದುಸ್ತರಗೊಂಡಿರುವ ಸಂದರ್ಭದಲ್ಲಿ ಅದ್ಧೂರಿ ಮಂದಿರ ನಿರ್ಮಾಣದ ಭೂಮಿಪೂಜೆಯ ಕಾರ್ಯಕ್ರಮ ಬೇಕಾಗಿತ್ತಾ? ಅದರಲ್ಲೂ ಸ್ವತಃ ಪ್ರಧಾನ ಮಂತ್ರಿಯು ಆಸಕ್ತಿವಹಿಸಿ ಭೂಮಿಪೂಜೆ ಮಾಡಿರುವುದು ಧರ್ಮರಾಜಕಾರಣದ ಭಾಗವಾಗಿಯೇ ನಾವು ನೋಡಬೇಕಾಗಿದೆ. ಈ ಒಂದು ಸಂದರ್ಭದಲ್ಲಿ ನಾಗೇಶ್ ಹೆಗಡೆಯವರ ಫೇಸ್‌ಬುಕ್‌ನಲ್ಲಿ ಕಾಣಿಸಿಕೊಂಡ ಈ ಬರಹವನ್ನು ಮತ್ತು ಅವರೇ ಅನುವಾದಿಸಿರುವ ರವೀಂದ್ರ ನಾಥ ಟಾಗೋರ್‌ರವರ ಕವಿತೆಯನ್ನು ಉಲ್ಲೇಖಿಸಿ, ಬಹುತ್ವ ಭಾರತ ಉಳಿವಿಗೆ ಶಕ್ತಿಮೀರಿ ದುಡಿಯೋಣ ಎಂದು ಕೇಳಿಕೊಳ್ಳುತ್ತೇನೆ.

 [ಅಯೋಧ್ಯೆಯಲ್ಲಿ ಶಿಲಾನ್ಯಾಸ ನಡೆಯುತ್ತಿದ್ದ ಸಂದರ್ಭದಲ್ಲಿ ಕವಿ ರವೀಂದ್ರನಾಥ ಠಾಕೂರರ ಕವನವೊಂದು ವೈರಲ್ ಆಗಿತ್ತು. ಹಿಂದೂ ಪಂಚಾಂಗದ ಪ್ರಕಾರ ನಿನ್ನೆಗೆ ಸರಿಯಾಗಿ ೧೨೦ ವರ್ಷಗಳ ಹಿಂದೆ (ಬಂಗಾಳಿ ೧೩೦೭ ಶಕೆಯ ಶ್ರಾವಣ ಬಹುಳ ಪಂಚಮಿಯಂದು)ಗುರುದೇವ ರವೀಂದ್ರರು ಈ ಕವನವನ್ನು ಬರೆದಿದ್ದರೆಂದು ಹೇಳಲಾಗುತ್ತಿದೆ. ಇಂದಿನ ದಿ ಟೆಲಿಗ್ರಾಫ್ ಪತ್ರಿಕೆಯ ಮೊದಲ ಪುಟದಲ್ಲಿ ಇದು ಪ್ರಕಟವಾಗಿದೆ.]      

ದೀನೋ ದಾನ್ ಹೆಸರಿನ ಈ ಬಂಗಾಳಿ ಕವನದ ಇಂಗ್ಲಿಷ್ ಅನುವಾದದ ಅಜಮಾಸು ಕನ್ನಡ ತರ್ಜುಮೆ ಹೀಗಿದೆ: 

"ಈ ದೇಗುಲದಲ್ಲಿ ದೇವರಿಲ್ಲ 

ಎಂದುಸುರಿದ ಆ ಸಂತ

ರಾಜನಿಗೆ ಕೋಪ ಉಕ್ಕಿ ಬಂತು

"ಏನೆಂದೆ ದೇವನಿಲ್ಲವೆ? 

ನೀನೇನು ಸಂತನೋ ನಾಸ್ತಿಕನೊ?

ಕಾಣುವುದಿಲ್ಲವೆ ನಿನಗೆ ವಜ್ರಖಚಿತ ಪೀಠ

ದೇವಮೂರ್ತಿಯ ಮಿನುಗುವ ಮುಕುಟ?"

 

"ಕಾಣುತ್ತಿವೆ ನನಗೆ. ರಾಜನ ಡೌಲತ್ತಿನ 

ಚಿಹ್ನೆಗಳಷ್ಟೇ ಕಾಣುತ್ತಿವೆ.

ಹೇ ರಾಜಾ, ನೀನು ನಿನ್ನ ಪ್ರತಿಷ್ಠೆಯನ್ನೇ 

ಅಲ್ಲಿ ಪ್ರತಿಷ್ಠಾಪಿಸಿಕೊಂಡಿರುವೆ, 

ದೇವರನ್ನಲ್ಲ" ಸಂತ ಉಸುರಿದ


ಕೆಂಗಣ್ಣು ಬೀರಿ ರಾಜ ಗುಡುಗಿದ: 

ಗಗನಚುಂಬಿ ಈ 

ದೇಗುಲದ ಮೇಲೆ ಇಪ್ಪತ್ತು ಲಕ್ಷ 

ಚಿನ್ನದ ವರಹಗಳನ್ನು ಸುರಿದಿದ್ದೇನೆ, ಶಾಸ್ತ್ರೋಕ್ತ 

ಪೂಜೆ ಮಾಡಿದ್ದೇನೆ, ದೇವರಿಲ್ಲವೆನ್ನಲು 

ನಿನಗೆಷ್ಟು ಧೈರ್ಯ?


ಸಂತ ಶಾಂತವಾಣಿಯಲ್ಲಿ ಹೇಳಿದ: 

ಇದೇ ವರ್ಷ ನಿನ್ನ ಇಪ್ಪತ್ತು ಲಕ್ಷ

ಪ್ರಜೆಗಳು ಬರಗಾಲಕ್ಕೆ ತುತ್ತಾಗಿದ್ದಾರೆ

ಕೂಳಿಲ್ಲದೆ, ನೀರಿಲ್ಲದೆ ಕಂಗಾಲಾಗಿದ್ದಾರೆ

ನಿನ್ನ ಬಾಗಿಲಿಗೆ ಬಂದು ಅಂಗಲಾಚಿದ್ದಾರೆ

ನಿನ್ನರಮನೆಯಿಂದ ನೂಕಿಸಿಕೊಂಡಿದ್ದಾರೆ.

ಅವರೆಲ್ಲ ಗುಡ್ಡಬೆಟ್ಟಗಳಲ್ಲಿ, ರಸ್ತೆಬದಿಗಳಲ್ಲಿ, 

ಪಾಳುಗುಡಿಗಳಲ್ಲಿ ಆಸರೆ ಪಡೆದು ಒರಗಿದ್ದಾರೆ


ಇದೇ ವರ್ಷ ನೀನು ಇಪ್ಪತ್ತು ಲಕ್ಷ ಚಿನ್ನದ ವರಹಗಳನ್ನು 

ಸುರಿದು ದೇಗುಲ ಕಟ್ಟಿದ್ದೀಯೆ. ಅದನ್ನು ನೋಡಿ

ದೇವರು ಹೇಳಿದ್ದೇನು ಗೊತ್ತೆ? 


ನೀಲಾಕಾಶದ ಮಿನುಗುವ ತಾರೆಗಳಲ್ಲಿ ನಾನಿದ್ದೇನೆ

ಸತ್ಯ, ಶಾಂತಿ, ದಯೆ ಮತ್ತು ಪ್ರೀತಿಯೇ 

ನನ್ನ ಮನೆಯ ಅಡಿಪಾಯಗಳಾಗಿವೆ

ತನ್ನದೇ ಪ್ರಜೆಗಳಿಗೆ ಆಸರೆ ಕೊಡಲಾಗದ 

ಈ ಜಿಪುಣ ರಾಜ

ನನಗೇನು ದೇಗುಲ ಕಟ್ಟಿಸಿಯಾನು" ಎನ್ನುತ್ತ 

ದೇವರು ನಿನ್ನ ಆ 

ದೇಗುಲವನ್ನು ಬಿಟ್ಟು ದೂರ ನಡೆದಿದ್ದಾನೆ ರಾಜನ್


ಸಾಲುಮರಗಳ ನೆರಳಿನಲ್ಲಿ ಬಿದ್ದಿರುವ ಆ ಗರೀಬರ 

ಮನದಲ್ಲಿ ನೆಲೆಸಿದ್ದಾನೆ ಅವನೀಗ

ವಿಶಾಲ ಸಾಗರದ ಮೇಲಿನ ನೀರ್ಗುಳ್ಳೆಗಳಂತೆ 

ಈ ನಿನ್ನ ದೇಗುಲ ಟೊಳ್ಳುಪೊಳ್ಳಾಗಿ ಮಿನುಗುತ್ತಿದೆ

ನಿನ್ನ ಪ್ರತಿಷ್ಠೆ ಮತ್ತು ಸಂಪತ್ತಿನ ಪ್ರತೀಕವಾಗಿ ....

**********


No comments:

Post a Comment

ಎತ್ತಿತೋರಿಸಲಾದ ಪೋಸ್ಟ್

ಅನ್ನಮ್ಮ’ಳಿಗೆ ೨೫೦ರ ಹಾಗೂ ಅತಿ.ವಂ.ಪೊತ್ತಕಮೂರಿಗೆ ೫೦ರ ಸ್ಮರಣೆಯ ಸಂಭ್ರಮ

ಬೆಂಗಳೂರಿನ ಉತ್ತರಹಳ್ಳಿಯ ಅನ್ನಮ್ಮನ ಬೆಟ್ಟ, ಅಲ್ಲಿನ ಅನ್ನಮ್ಮಳ ಸಮಾಧಿ, ಆ ಬೆಟ್ಟದ ಮೇಲಿನ ಶಿಲುಬೆ, ಅಲ್ಲಿ ಪ್ರತಿವರ್ಷ ತಪಸ್ಸು ಕಾಲದ ಐದನೇ ಭಾನುವಾರ ನಡೆಯುವ ಯೇಸು...