Tuesday, 10 November 2020

ಕನ್ನಡ ಸಾಹಿತ್ಯಕ್ಕೆ ಕ್ರೈಸ್ತ ಸಾಹಿತಿಗಳ ಕೊಡುಗೆಗಳು - ಡಾ. ಸಿಸ್ಟರ್ ಪ್ರೇಮ (SMMI)

 ---------------------------------------------------

ಹಿಂದಿನ ಸಂಚಿಕೆಯಲ್ಲಿ ಕನ್ನಡ ಸಾಹಿತ್ಯಕ್ಕೆ ಕ್ರೈಸ್ತ ಸಾಹಿತಿಗಳ ಕೊಡುಗೆಗಳು ಎಂಬ ವಿಷಯದಡಿಯಲ್ಲಿ ಸಾಹಿತ್ಯ ಸಾಧಕ ಎ.ಎಂ ಜೋಸೆಫ್‌ರವರ ಬದುಕಿನ ಬಗ್ಗೆ ವಿವೇಚಿಸಿದ್ದೇವೆ. ಈ ಪ್ರಸ್ತುತ ಸಂಚಿಕೆಯಲ್ಲಿ ಮತ್ತೋರ್ವ ಸೃಜನಶೀಲ ಕನ್ನಡ ಕ್ರೈಸ್ತ ಸಾಹಿತಿ ಹಾಗು ಕಾದಂಬರಿಕಾರ ಡಾ.ನಾ.ಡಿಸೋಜರವರನ್ನು ಪರಿಚಯಿಸಿಕೊಡುವ ಪುಟ್ಟ ಪ್ರಯತ್ನ ಮಾಡಿರುತ್ತೇನೆ. 

-------------------------------------------------------

ಡಾ. ನಾ. ಡಿಸೋಜ :


ಡಾ.ನಾ.ಡಿಸೋಜ ಒಬ್ಬ ಉತ್ತಮ ಚಿಂತಕ, ಸೃಜನಶೀಲ ಸಾಹಿತಿ, ಕನ್ನಡ ಕಾದಂಬರಿ ಲೋಕದಲ್ಲಿ ತಮ್ಮನ್ನೇ ತಾವು ನಾಟಿಕೊಂಡು ಹೆಮ್ಮರವಾಗಿ ಬೆಳೆದಿರುವ ಕನ್ನಡದ ಖ್ಯಾತ ಕ್ರೈಸ್ತ ಕಾದಂಬರಿಕಾರ. ಕಾದಂಬರಿ ಕ್ರೇತ್ರಕ್ಕೆ ಸಂಬಂಧಿಸಿದಂತೆ ಡಾ.ನಾ.ಡಿಸೋಜರವರ ೪೦ ಕಾದಂಬರಿಗಳು, ೪೦೦ ಸಣ್ಣ ಕಥೆಗಳು ಹಾಗೂ ವಿಶೇಷವಾದ ಮಕ್ಕಳ ಸಾಹಿತ್ಯ, ನಾಟಕಗಳು, ಜೀವನ ಚರಿತ್ರೆಗಳು ಪ್ರಸ್ತುತ ಕನ್ನಡ ನೆಲೆಯಲ್ಲಿ ಅಧಿಕೃತ ಸ್ಥಾನವನ್ನು ಪಡೆದಿವೆ. ಈಗಾಗಲೇ ಇವರ ಬಗ್ಗೆ ೪ ಎಂ.ಫಿಲ್ ಮತ್ತು ಡಾಕ್ಟರೇಟ್ ಪ್ರಬಂಧಗಳು ಹೊರಬಂದಿವೆ. ಇಂತಹ ಸಂಪನ್ಮೂಲ ಕ್ರೈಸ್ತ ಸಾಹಿತಿಯ ಸಾಧನೆ ನಿಜವಾಗಿಯು ಶ್ಲಾಘನೀಯ. ಡಾ.ಡಿಸೋಜರಿಗೆ ಸಂಧಿರುವ ಸಾಹಿತ್ಯಿಕ ಗೌರವ ಪ್ರಶಸ್ತಿಗಳು ಹಾಗೂ ಜನಮನ್ನಣೆ ಪ್ರಸ್ತುತ ಕನ್ನಡ ಸಾಹಿತ್ಯದಲ್ಲಿ ಗಮನಾರ್ಹ. ಇವರ ಪ್ರಮುಖ ಕಾದಂಬರಿಗಳಾದ ಕಾಡಿನ ಬೆಂಕಿ ಮತ್ತು ದ್ವೀಪ ಚಲನಚಿತ್ರಗಳಾಗಿ ಮನ್ನಣೆ   ಪಡೆದಿವೆ. ಅಲ್ಲದೇ ಡಾ.ನಾ.ಡಿಸೋಜ ಒಬ್ಬ ಉತ್ತಮ ಚಿಂತಕರು ಹಾಗೂ ಕನ್ನಡ ನುಡಿಯ ಪರಿಚಾರಕರು ಮಿಗಿಲಾಗಿ ೨೦೧೪ರ ೮೦ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯನ್ನು ವಹಿಸಿದಂತಹ ಒಬ್ಬ     ಧಿಮಂತ ಕ್ರೈಸ್ತ ಸಾಹಿತಿಯೂ ಹೌದು.

ಬದುಕು: ಇವರು ನಿಸರ್ಗದ ಮಡಿಲಾದ ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿ ೬.೬.೧೯೩೭ರಂದು ಜನಿಸಿದರು. ತಂದೆ ಎಫ್. ಪಿ. ಡಿಸೋಜ, ತಾಯಿ ರೋಪಿನ್ ಡಿಸೋಜ. ಮಲೆನಾಡಿನ ಮಂದಾರದಲ್ಲಿ ಅರಳಿದ ಇವರ ಪ್ರಾಥಮಿಕ ಶಿಕ್ಷಣ ಸಾಗರ ಎಂಬ ಊರಿನ ಸರ್ಕಾರಿ ಪ್ರಾಥಮಿಕ ಪಾಠಶಾಲೆಯಲ್ಲಿ ಪ್ರಾರಂಭವಾಯಿತು. ಪ್ರಕೃತಿಯ ಪ್ರಭಾವ ಎಳೆಯ ಮನಸ್ಸಿನ ಮೇಲೆ ತುಂಬಾ ಪರಿಣಾಮವನ್ನುಂಟು ಮಾಡಿತು. ಜೊತೆಗೆ ತಂದೆ-ತಾಯಿಯ ಪ್ರೀತಿ, ಒಡಹುಟ್ಟಿದವರ ಒಡನಾಟ ಇವರ ಮನೋಲ್ಲಾಸಕ್ಕೆ ಕಾರಣವಾಯಿತು. ಅವರ ತಾಯಿ ಹೇಳುತ್ತಿದ್ದ ಜನಪದ ಕಥೆಗಳು ಮತ್ತು ಗೀತೆಗಳ ರಸದೂಟ ಮತ್ತು  ಮನೆಯಲ್ಲಿನ ಸಾಹಿತ್ಯಿಕ ವಾತಾವರಣ ಶ್ರೀಯುತರು ಬಹು ಎತ್ತರಕ್ಕೆ ಸಾಹಿತಿಯಾಗಿ ಬೆಳೆಯಲು ಪ್ರೇರಣೆಯಾಯಿತು ಎಂದರೆ ತಪ್ಪಾಗಲಾರದು.

ಡಾ. ನಾ.ಡಿಸೋಜ ಅವರ ತಾಯಿ ರೋಪಿನರವರು ಬಹಳಷ್ಟು ಜನಪದ ಕಥೆಗಳನ್ನು ಸ್ವಾರಸ್ಯವಾಗಿ, ಸಂಭಾಷಣಾ ಶೈಲಿಯಲ್ಲಿ ಆಯಾ ಪಾತ್ರಗಳು ಕಣ್ಣಿಗೆ ಕಟ್ಟುವಂತೆ ಹೇಳುತ್ತಿದ್ದರಂತೆ. ರಾಜ ರಾಣಿಯರ ಮತ್ತು ಸಂತರ ಕಥೆಗಳನ್ನು ಹೇಳಿಕೊಡುತ್ತಿದ್ದರಂತೆ. ಅಂಥ ಕಥೆಗಳಲ್ಲಿ ನೀಲಕಂಠರಾಯನ ಕಥೆ ನಾ.ಡಿಸೋಜರ ಮನಸ್ಸಿಗೆ ತುಂಬಾ ಹಿಡಿಸಿದ್ದಾಗಿ ಹೇಳುತ್ತಾರೆ. ಶಾಲಾ ಮಾಸ್ತರರಾಗಿದ್ದ ಇವರ ತಂದೆಯವರು ಕೂಡ ಸಾಹಿತ್ಯಾಭಿಮಾನಿ. ಇವರು ಮಕ್ಕಳಿಗೆ ಕಲಿಸಲೆಂದು ತಾವು ಬರೆದುಕೊಂಡಿದ್ದ ಕನ್ನಡ ಗೀತೆಗಳ ಪುಸ್ತಕದಲ್ಲಿ ನಾ.ಡಿಸೋಜರವರು ಓದಿದ ಪ್ರಥಮ ಕೃತಿ ದೋಣಿ ಸಾಗಲಿ ಅಷ್ಟೇ ಅಲ್ಲದೇ ಇತರೆ ಹಾಡುಗಳು ಐದನೇ ವಯಸ್ಸಿಗೇನೆ ನಾ.ಡಿಸೋಜರಿಗೆ ಬಾಯಿಪಾಠವಾಗಿದ್ದವು. ಶ್ರೀಯುತರ ತಂದೆ ಫಿಲಿಪ್ ಡಿಸೋಜರವರು ತಮ್ಮ ಉತ್ತಮ ಕೈ ಬರಹ ಹಾಗೂ ಸಾಹಿತ್ಯ ರಚನೆಗಾಗಿ ಮೈಸೂರು ಮಹಾರಾಜರಿಂದ ಪದಕ ಪಡೆದಿದ್ದರು ಎಂದ ಮೇಲೆ ಡಾ.ನಾ.ಡಿಸೋಜ ಅವರ ಸಾಹಿತ್ಯಿಕ ಪರಿಸರವೇನೆಂದು ವಿವರಿಸಿ ಹೇಳಬೇಕಾಗಿಲ್ಲ. 

ಡಾ.ನಾ.ಡಿಸೋಜರ ಮನೆಯಲ್ಲಿ ಜಾನಪದ ವಾತಾವರಣ ಎದ್ದು ಕಾಣುತ್ತಿಂತೆ. ಶಾಲೆಯಲ್ಲಿ ಅಂದಿನ ಪ್ರಸಿದ್ಧ ಕವಿಗಳಾಗಿದ್ದ ದಾರಬೇಂದ್ರೆ, ಕುವೆಂಪುರವರ ಪದ್ಯಗಳ ಬಾಯಿಪಾಠ ಶ್ರೀಯುತರ ಒಡಲಾಳದಲ್ಲಿ ಗೂಡುಕಟ್ಟಿದ್ದವು. ಸಾಗರದ ಪ್ರೌಢಶಾಲೆಯ ಕನ್ನಡ ಉಪಾಧ್ಯಾಯರು ಕನ್ನಡ ಸಾಹಿತ್ಯಾಭಿರುಚಿಯನ್ನು ಡಾ.ನಾ.ಡಿಸೋಜರ ಎದೆಯಲ್ಲಿ ಒತ್ತಿದರೂ, ಬೆಳೆಯಲಾಗದೆ, ಬರೆಯಲಾಗದೆ ತಮಗೆ ತಾವೇ ಅನೇಕ ಪ್ರಶ್ನೆಯನ್ನು ಹಾಕಿಕೊಳ್ಳುತ್ತಾ ಏಕೆ ಬರೆಯಬೇಕು? ಹೇಗೆ ಬರೆಯಬೇಕು? ಯಾರಿಗೆ ಬರೆಯಬೇಕು? ಈ ಪ್ರಶ್ನೆಗಳೇ ನನ್ನನ್ನು ಲೇಖಕರನ್ನಾಗಿ ಮಾಡಿದವು ಎಂದು ಶ್ರೀಯುತರು ತಾವೆ ಸ್ವತಃ ಅಭಿಪ್ರಾಯಪಟ್ಟಿರುತ್ತಾರೆ. ಚಿಕ್ಕ   ವಯಸ್ಸಿನಲ್ಲಿಯೇ ತಂದೆಯನ್ನು ಕಳೆದುಕೊಂಡ ಡಾ.ನಾ.ಡಿಸೋಜರ ಕುಟುಂಬವನ್ನು ಸಾಕಿದವರು ಇವರ ತಾಯಿ. ಓದು ಬರಹ ಸಾಕಷ್ಟು ಇಲ್ಲದಿದ್ದರೂ ಮನೆಯನ್ನು ಅಚ್ಚುಕಟ್ಟಾಗಿ ನಡೆಸಿಕೊಂಡು ಬಂದ ಒಬ್ಬ ಧೀರ ಮಹಿಳೆ. ಮಕ್ಕಳ ಬಾಯಲ್ಲಿ ಒಂದು ಕೆಟ್ಟ ಶಬ್ದ ಬಂದರೂ ಬಾಯಿಗೆ ಮೆಣಸಿನ ಕಾಯಿ ಇಡುತ್ತಿದ್ದ ಶಿಸ್ತಿನ ತಾಯಿ, ನೆರೆಹೊರೆಯವರೊಂದಿಗೆ  ಅಭಿಮಾನದಿಂದ ಬದುಕಬೇಕು ಅನ್ನುವುದನ್ನು ಇವರಿಗೆ ಕಲಿಸಿದ, ಇವರ ಮೇಲೆ ಅಪರಿಮಿತವಾದ ಪ್ರೀತಿ ಇರಿಸಿದ, ಕೆಟ್ಟ ಚಟಗಳು ಇತ್ಯಾದಿ ದುರಭ್ಯಾಸಗಳು ಇವರ ಬಳಿ ಸುಳಿಯದ ಹಾಗೆ ಕಾಪಾಡಿದವರು ಇವರ ತಾಯಿ. ಅಂದು ಮನೆಯಲ್ಲಿ ಬಡತನವಿತ್ತು ಆದರೆ ಅದರ ಜೊತೆಗೆ ಹೇಗೆ ಹೊಂದಿಕೊಂಡು ಹೋಗಬೇಕು ಅನ್ನವುದನ್ನು ಇವರಿಗೆಲ್ಲಾ ಕಲಿಸಿದವರೇ ಇವರ ತಾಯಿ.

ಡಾ.ನಾ.ಡಿಸೊಜ ಅವರ ತಂದೆ ಒಳ್ಳೆಯ ಕತೆಗಾರರು. ಇವರ ಅಮ್ಮ ಕೂಡ ಮದುವೆಯ ಹಾಡುಗಳು, ಒಗಟುಗಳು ಮತ್ತು ಗಾದೆ ಹೇಳುವುದರಲ್ಲಿ ತುಂಬ ಪರಿಣಿತರು. ಇವರ ಒಂದೊಂದು ಕತೆ ಆರು ಏಳು ದಿನ ಮುಂದುವರೆಯುತಿತ್ತು. ತಂದೆ ತಾಯಿಯರಿಬ್ಬರ ಕಥಾ ಜೀವದ್ರವ್ಯ ಡಿಸೋಜ ಅವರಿಗೆ ಹೇರಳವಾಗಿಯೇ ದಕ್ಕಿದೆ. ತಾಯಿ ಹೇಳಿದ ಕತೆಯನ್ನು ಮೀನುಗಾರ ದೊರೆ ಎಂಬ ಪುಸ್ತಕ ರೂಪದಲ್ಲಿ ಹೊರತಂದರು. ಹೀಗೆ ನಾ. ಡಿಸೋಜರವರ ಬಾಲ್ಯದಿಂದಲೂ ಮನೆಯಲ್ಲಿ ಒಂದು ರೀತಿಯ ಸಾಹಿತ್ಯಿಕ, ಸಾಂಸ್ಕೃತಿಕ ವಾತಾವರಣವೇ ಇತ್ತು. ಡಾ.ನಾ.ಡಿಸೋಜ ಇದನ್ನೆಲ್ಲಾ ರೂಢಿಸಿಕೊಂಡಿದ್ದು ಬಹು ವಿಶೇಷ. ಇವರ ತಂದೆಗೆ ಮಕ್ಕಳ ಕವಿತೆಗಳೆಂದರೆ ಬಹು ಇಷ್ಟ. ಮಕ್ಕಳಿಗಾಗಿ ಅನೇಕ ಕವಿತೆಗಳನ್ನು ಬರೆದಿದ್ದಾರೆ. ನಾ. ಡಿಸೋಜರವರು ತನ್ನ ಅಕ್ಕ ಮತ್ತು ಅಣ್ಣ ಪುಸ್ತಕ ಭಂಡಾರದಿಂದ ತಂದ ಕಾದಂಬರಿಗಳನ್ನು ತಾಯಿಗೆ ಓದಿ ಹೇಳಬೇಕಾಗಿತ್ತು. ಇದು ಇವರ ತಾಯಿಯ ಬೇಸರ ನೀಗುವುದರ ಜೊತೆಗೆ ಇವರ ಸಾಹಿತ್ಯಭಿರುಚಿಯನ್ನು ಹೆಚ್ಚಿಸಿತು. ಇವರು ಅಮ್ಮನಿಗಾಗಿ ನಿಸರ್ಗ, ಕಣ್ಣೀರು, ಇಜ್ಜೋಡು, ಸಂಧ್ಯಾರಾಗ ಮೊದಲಾದ ಕಾದಂಬರಿಗಳನ್ನು ಓದಿ ಹೇಳುತ್ತಿದ್ದ ನೆನಪನ್ನು ಶ್ರೀಯುತರು ಈಗಲೂ ಹೇಳುತ್ತಿರುತ್ತಾರೆ. ಕೆಲ ಸಂದರ್ಭದಲ್ಲಿ ನಾ.ಡಿಸೋಜ ಮತ್ತು ಇವರ ಅಮ್ಮ ಕಥಾ ಪ್ರವಾಹದ ಜೊತೆಯಲ್ಲಿ ತೇಲಿಹೋಗಿ ಒಟ್ಟಿಗೇನೆ ಕಂಬನಿ ಮಿಡಿಯುತ್ತಿದ್ದುದೂ ಉಂಟು. ಡಾ. ನಾ.ಡಿಸೋಜ ಅವರ ಇಂದಿನ ಸಾಹಿತ್ಯ ಪ್ರೇಮಕ್ಕೆ ಇದೂ ಕೂಡ ಬಹು ದೊಡ್ಡ ಪ್ರೇರಣೆಯಾಗಿತ್ತು ಎಂದರೆ ತಪ್ಪೇನಿಲ್ಲ.

ಕ್ರಿ.ಶ. ೧೯೬೯ರಲ್ಲಿ ನಾ. ಡಿಸೋಜರವರು ಫಿಲೋಮಿನರ ಕೈ ಹಿಡಿದು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಇವರಿಗೆ ಶೋಭ, ನರೇಶ್, ನವೀನ್ ಮತ್ತು ಸಂತೋಷ್ ಎಂಬ ಮೂವರು ಮಕ್ಕಳಿದ್ದು ಇವರು ಒಳ್ಳೆ ರೀತಿಯಲ್ಲಿ ಕುಟುಂಬವನ್ನು ಕಟ್ಟಿಕೊಂಡು ಸುಖ ಸಂತೋಷದಲ್ಲಿದ್ದಾರೆ. ಹೀಗೆ ಡಿಸೋಜರ ಮಕ್ಕಳೆಲ್ಲಾ ತಮ್ಮ ತಮ್ಮ ವೃತ್ತಿ ಕ್ಷೇತ್ರಗಳಲ್ಲಿ ಒಳ್ಳೆಯ ಹೆಸರುಗಳನ್ನು ಸಂಪಾದಿಸಿಕೊಂಡು ತೃಪ್ತಿಯಲ್ಲಿರುವುದು ಸಂತಸದ ಸಂಗತಿ. ನಾ. ಡಿಸೋಜರವರು ಸಂಪೂರ್ಣವಾಗಿ ತಮ್ಮನ್ನು ತಾವು ಸಾಹಿತ್ಯಿಕ ಚಟುವಟಿಕೆಗಳಲ್ಲಿ, ಸಾರ್ವಜನಿಕ ಬದುಕು ಮತ್ತು ಅದರಲ್ಲಿನ ಹೋರಾಟಗಳೊಡನೆ ತೊಡಗಿಸಿಕೊಳ್ಳಲು ಸಾಧ್ಯವಾಗಿರುವುದು ಶ್ರೀಮತಿ ಫಿಲೋಮಿನಾ ಡಿಸೋಜ ಅವರಿಂದ. ಇದಕ್ಕೊಂದು ಪ್ರತ್ಯೇಕವಾದ ಮನಸ್ಥಿತಿಯೇ ಬೇಕು. ಕುಟುಂಬ ನಿರ್ವಹಣೆಯ ಸಂಗಡ ಗಂಡನ ಪ್ರವೃತ್ತಿಯ ಎಲ್ಲಾ ಕಾರ್ಯ ಚಟುವಟಿಕೆಗಳ ಪರಿಜ್ಞಾನ ಮತ್ತು ಬೆಂಬಲ ಇರಬೇಕಾಗುತ್ತದೆ. ಇಲ್ಲಿ ಶ್ರೀಮತಿ ಫಿಲೋಮಿನಾ ಅವರದು ಎತ್ತಿದ ಕೈ. ಸಾಗರದವರೆ ಆದ ಇವರು ಡಿಸೋಜರನ್ನು ಕಾಣಲು ಬರುವ ಎಲ್ಲರನ್ನು ಪ್ರೀತಿಯಿಂದ ಸತ್ಕರಿಸುವಲ್ಲಿ ಮುಂದು. ನೆರೆಹೊರೆಯವರ ಕುಟುಂಬಗಳಲ್ಲಿನ ಕಷ್ಟ ಸುಖಗಳಿಗೆ ಸ್ಪಂದಿಸುವ ಇವರು ಡಾ.ನಾ.ಡಿಸೋಜರು ಸಾಧಿಸಿರುವ ಸಾಧನೆ, ಪಡೆದಿರುವ ಹೆಸರು, ಗೌರವ ಸನ್ಮಾನ, ಪ್ರಶಸ್ತಿಗಳ ಹಿಂದೆ ನಿಂತಿದ್ದಾರೆ. ಈ ಎಲ್ಲಾ ವಿಚಾರಗಳನ್ನು ಡಾ. ನಾ.ಡಿಸೋಜರ ಬದುಕು ಮತು  ಬರಹಕ್ಕೆ ಸಂಬಂಧಿಸಿದಂತೆ ಲಭ್ಯವಿರುವ ಕೃತಿಗಳನ್ನು ಓದುವಾಗ ಗಮನಿಸಿರುತ್ತೇನೆ.

ಡಾ.ನಾ.ಡಿಸೋಜರವರ ಸಾಹಿತ್ಯಿಕ ಕೊಡುಗೆಗಳು


ಕಾದಂಬರಿಗಳು:ಕ್ರಿ.ಶ ೧೯೬೪ರಲ್ಲಿ ಬಂಜೆ ಬೆಂಕಿ ಎಂಬ ಚೊಚ್ಚಲ ಕಾದಂಬರಿಯಿಂದ ನಾ.ಡಿಸೋಜರವರು ಕನ್ನಡ ಕಾದಂಬರಿ ಕ್ಷೇತ್ರಕ್ಕೆ ಕಾಲೂರಿ ಅನೇಕ ಕಾದಂಬರಿಗಳನ್ನು ಬರೆದು ಪ್ರಕಟಿಸಿದ್ದಾರೆ. ಇವರ ಹಲವು ಕಾದಂಬರಿಗಳು, ಕಥೆಗಳು ಈಗಾಗಲೇ ತಮಿಳು, ಹಿಂದಿ, ತೆಲುಗು, ಇಂಗ್ಲೀಷ್, ಕೊಂಕಣಿ ಭಾಷೆಗಳಿಗೆ ಅನುವಾದವಾಗಿವೆ. ಶ್ರೀಯುತರು ತಮ್ಮ ಬಿಡುವಿನ ವೇಳೆಯನ್ನು ವ್ಯರ್ಥವಾಗಲು ಬಿಡದೆ ಸಾಹಿತ್ಯ ರಚನೆಯಲ್ಲಿ ಸದಾ ತಮ್ಮನ್ನು ತೊಡಗಿಸಿಕೊಂಡು ವಸ್ತು ನಿಷ್ಠವಾದ ಕೃತಿ-ಕಾದಂಬರಿಗಳನ್ನು ರಚಿಸಿರುವುದು ಪ್ರಶಂಸನೀಯ. 

ಉದಾಹರಣೆಗೆ ಬಂಜೆ ಬೆಂಕಿ, ಮಂಜಿನ ಕಾನು, ಈ ನೆಲ ಈ ಜಲ, ಅಜ್ಞಾತ, ಕೆಂಪು ತ್ರಿಕೋನ, ನೆಲೆ, ಮಾನವ, ತಿರುಗೋಡಿನ ರೈತ ಮಕ್ಕಳು, ಇಕ್ಕೇರಿಯಲ್ಲಿ ಕ್ರಾಂತಿ, ಶಿವನಡಂಗುರ, ದ್ವೀಪ, ಜೀವಕಳೆ, ಪ್ರಜ್ಞಾಬಲಿ, ವಿಷವರ್ತುಲ, ಮುಳುಗಡೆ, ಕಾಡಿನ ಬೆಂಕಿ, ಪ್ರೀತಿಯೊಂದೆ ಸಾಲದೆ, ದುರ್ಗವೆಂಬ ವ್ಯೂಹ, ರಾಗ ವಿರಾಗ, ವಿಷಾನಿಲ, ಸೇತುವೆ, ಒಂದು ಜಲಪಾತದ ಸುತ್ತ, ಗಾಂಧಿ ಬಂದರು, ಶೃಂಗೇರಿಯಲ್ಲಿ ಶಾಂತಿ, ಒಡ್ಡು, ಒಡಲು ಕಾಯುವುದಿಲ್ಲ, ನೀರು, ತಿರುವು, ಚಿನ್ನದ ಮೊಟ್ಟೆ, ಕೊಳಗ, ಇಂಜಿನಿಯರ್ ಆತ್ಮಕತೆ, ಇಗರ್ಜಿ ಸುತ್ತಲಿನ ಹತ್ತು ಮನೆಗಳು, ಕೈತಾನ ಗಾಂಧಿಯ ಸ್ವಾತಂತ್ರ್ಯ ಹೋರಾಟ, ಸುಣ್ಣಬಳಿದ ಸಮಾಧಿಗಳು, ಹರಿವ ನದಿ, ಆಸರೆ ಮತ್ತು ಮುಖವಾಡದವರು. ಹೀಗೆ ಹತ್ತಾರು ಕಾದಂಬರಿಗಳನ್ನು ರಚಿಸಿರುವುದರೊಂದಿಗೆ ಸಣ್ಣ ಕಥಾ ಸಂಕಲನ, ನಾಟಕಗಳು, ಮಕ್ಕಳ ನಾಟಕಗಳು, ಬಾನುಲಿ ನಾಟಕಗಳು, ಮಕ್ಕಳ ಪುಸ್ತಕಗಳು ಮತ್ತು ಜೀವನ ಚರಿತ್ರೆಗಳಿಗೆ ಸಂಬಂಧಿಸಿದಂತೆ ಹಲವಾರು ಕೃತಿಗಳನ್ನು ಕನ್ನಡ ಓದುಗರಿಗೆ ನೀಡಿ ಸೈ ಎನಿಸಿಕೊಂಡಿದ್ದಾರೆ. ಇವರು ರಚಿಸಿರುವ ಸಾಹಿತ್ಯ ಕುರಿತು ಅದರ ಉದ್ದ, ಅಗಲ, ಆಳ ಎತ್ತರವನ್ನು ಒಮ್ಮೆಲೆ ಅಳತೆ ಮಾಡುವುದು ಅಷ್ಟು ಸುಲಭವಲ್ಲ ಹಾಗೆಯೇ ಅಷ್ಟು ಸಾಧ್ಯವೂ ಅಲ್ಲ. ಸುಮಾರು ೪೦ ಕಾದಂಬರಿಗಳು, ೪೦೦ ಸಣ್ಣ ಕಥೆಗಳು, ಸಾಕಷ್ಟು ಮಕ್ಕಳ ಕೃತಿಗಳು, ಹತ್ತು ನಾಟಕಗಳು, ಒಂದೆರಡು ಜಾನಪದ ಸಂಗ್ರಹಗಳು ಮತ್ತು ಸಾವಿರಾರು ಬಿಡಿ ಲೇಖನಗಳಲ್ಲಿ ಹರಿದು ಬಂದಿರುವ ಇವರ ಪ್ರಮುಖ ದನಿಗಳನ್ನು ಎತ್ತಿ ತೋರಿಸುವುದು ಸಾಧ್ಯವಿಲ್ಲ. ಇವರು ಬರೆದಿರುವ ಕಾದಂಬರಿಗಳನ್ನು ಎರಡು ರೀತಿಯಲ್ಲಿ ಕಾಣಬಹುದು.

೧. ಪರಿಸರ ಸಂಬಂಧಿ ಕಾದಂಬರಿಗಳು: ಡಾ.ನಾಡಿಸೋಜರ ಹೆಚ್ಚಿನ ಕತೆ ಕಾದಂಬರಿಗಳಲ್ಲಿ ನಮಗೆ ನೇರವಾಗಿ ಗೊತ್ತಾಗದ ರೀತಿಯಲ್ಲಿ ಪರಿಸರ ಒಂದು ಪಾತ್ರವಾಗಿ ಮೂಡಿ ಬರುತ್ತದೆ. ಕಾಡಿನ ಪಾತ್ರ, ಭೂಮಿಯ ಪಾತ್ರ ಮತ್ತು ನೀರಿನ ಪಾತ್ರ ಇದ್ದೆ ಇರುತ್ತದೆ. ಖಿhe oಟಜ mಚಿಟಿ ಚಿಟಿಜ ಣhe seಚಿ ಕಾದಂಬರಿಯಲ್ಲಿ ಇಡೀ ಸಮುದ್ರವೇ ಒಂದು ಪಾತ್ರವೇ ಸರಿ.  ಶಿವರಾಮ ಕಾರಂತರ ಒಂದೆರಡು ಕಾದಂಬರಿಯಲ್ಲಿ ಸಮುದ್ರ ಸಹ ಒಂದು ಪಾತ್ರ. ಡಾ.ನಾ.ಡಿಸೋಜರ ಕತೆ ಕಾದಂಬರಿಗಳು ಸಹ ಇದೇ ಧಾಟಿಯವು. ಮುಳುಗಡೆ, ಒಂದು ಜಲಪಾತದ ಸುತ್ತ, ದ್ವೀಪ, ನೀರು, ಕುಂಜಾಲು ಕಣಿವೆಯ ಕೆಂಪು ಹೂವು, ಒಡ್ಡು - ಡಾ.ನಾ.ಡಿಸೋಜರ ಈ ಕಾದಂಬರಿಗಳು ತಮ್ಮದೆ ಆದ ಕತೆಯ ಹೂರಣವನ್ನು ಹೊತ್ತಿದ್ದರೂ ಜೊತೆಗೆ ಪರಿಸರದ ಆಶಯವನ್ನು ಕೂಡ ಹೊಂದಿವೆ.

೨.ಐತಿಹಾಸಿಕ ಕಾದಂಬರಿಗಳು: ಸಾರ್ವಜನಿಕವಾಗಿ ಇತಿಹಾಸ ಇಂದು ಅತ್ಯಂತ ಹೆಚ್ಚು ವಿವಾದಾತ್ಮಕ ವಿಚಾರವಾಗಿ ಪರಿಣಮಿಸಿದೆ. ಇತಿಹಾಸದ ಹೆಸರಿನಲ್ಲಿ ಜನರನ್ನು ದಾರಿ ತಪ್ಪಿಸುವ, ದ್ವೇಷಿಸುವ, ಅವರಲ್ಲಿ ಅಪನಂಬಿಕೆಗಳನ್ನು ಬಿತ್ತುವ ಪ್ರಯತ್ನಗಳನ್ನು ಮಾಡಲಾಗುತ್ತಿದೆ. ಇಂತಹ ಸಂದರ್ಭದಲ್ಲಿ ಸಮಚಿತ್ತದಿಂದ ಬರೆಯುವ ಇತಿಹಾಸಗಳ ಅಗತ್ಯ ಎಂದಿಗಿಂತ ಇಂದು ಇದೆ. ಹಾಗೆಯೇ ಇತಿಹಾಸವನ್ನು ಆಧರಿಸಿ ಬರೆಯುವ ಸಾಹಿತ್ಯ ಕೃತಿಗಳೂ ಕೂಡ ಜೀವಸತ್ವದಿಂದ ಕೂಡಿರಬೇಕು. ಸೃಜನಶೀಲತೆಯ ಹೆಸರಿನಲ್ಲಿ ಇತಿಹಾಸದ ಅಂಶಗಳ ಅಂದಗೆಡಿಸಬಾರದು. ಹೀಗಾಗಿ ಐತಿಹಾಸಿಕ ಕತೆ, ಕಾದಂಬರಿ ಮತ್ತು ನಾಟಕಗಳನ್ನು ರಚನೆ ಮಾಡುವ ಜವಾಬ್ದಾರಿ ಬಹು ವಿಶೇಷವಾದುದು. ಕನ್ನಡ ಪರಂಪರೆಯಲ್ಲಿ ಈ ರೀತಿಯ ಬರವಣಿಗೆಯಲ್ಲಿ ಅನೇಕರು ಗೆದ್ದಿದ್ದಾರೆ. ಕೆಲವು ಕಾದಂಬರಿಗಳು ವಿರೋಧಗಳನ್ನು ಎದುರಿಸಿದ್ದು ಉಂಟು. ಐತಿಹಾಸಿಕ ಅಂಶಗಳನ್ನು ತನಗೆ ಬೇಕಾದ ಹಾಗೆ ತಿರುಚದೆ ಸಾಹಿತ್ಯಿಕ ಕೃತಿಗಳನ್ನು ರಚನೆ ಮಾಡಿರುವ ಲೇಖಕರಲ್ಲಿ ಡಾ.ನಾ.ಡಿಸೋಜ ಮುಖ್ಯರಾಗುತ್ತಾರೆ. ಇವರು ತಾನು ಹುಟ್ಟಿ ಬೆಳೆದಿರುವ ಪ್ರದೇಶದ ನೆಲ, ಜಲ ಮತ್ತು ಜನರ ಕತೆಗಳನ್ನು ಬರೆದ ಹಾಗೆ ರಾಜ ಮಹಾರಾಜರ ಕತೆಗಳನ್ನು ಬರೆದಿದ್ದಾರೆ. ಸಾಗರ ಎಂಬ ಊರಿನ ಸುತ್ತ ಮುತ್ತಲಿರುವ ಕೆಳದಿ-ಇಕ್ಕೇರಿಗಳು, ಗೇರಸೊಪ್ಪ, ಆನಂದಪುರ, ಭಟ್ಕಳ, ಬನವಾಸಿ ಇವೆಲ್ಲಾ ಒಂದು ಕಾಲದಲ್ಲಿ ಐತಿಹಾಸಿಕ ಹಿನ್ನಲೆಯ ರಾಜ್ಯಗಳು. ಕೆಳದಿ ರಾಜರು ಆಳಿದ ಸಾಮ್ರಾಜ್ಯವಿದು. ವಿದೇಶಿ ಪ್ರವಾಸಿಗರಂತೂ ಈ ಸಾಮ್ರಾಜ್ಯವನ್ನು ಮುಕ್ತಕಂಠದಿಂದ ಹೊಗಳಿದ್ದಾರೆ. ಡಾ. ನಾ. ಡಿಸೋಜರು ಮಲೆನಾಡಿನವರೇ ಆಗಿದ್ದು ಇಲ್ಲಿ ಆಳಿರುವ ರಾಜ ಮಹಾರಾಜರ, ಜನರ ಜೀವನ ಶೈಲಿ ಮತ್ತು ಸಾಹಿತ್ಯ ಇವರನ್ನು ಬಹಳವಾಗಿ ಕಾಡಿದೆ. ಹೀಗಾಗಿ ಇವರು ಕೆಲವು ಐತಿಹಾಸಿಕ ಕಾದಂಬರಿಗಳನ್ನು ರಚಿಸಿದ್ದಾರೆ. ಅವುಗಳೆಂದರೆ, ಶೃಂಗೇರಿಯಲ್ಲಿ ಶಾಂತಿ, ಇಕ್ಕೇರಿಯಲ್ಲಿ ಕ್ರಾಂತಿ ಮತ್ತು ರಾಗವಿರಾಗ. ಹೀಗೆ ಕನ್ನಡದಲ್ಲಿ ಐತಿಹಾಸಿಕ ಕಾದಂಬರಿಗಳಿಗೆ ತನ್ನದೇ ಆದ ಇತಿಹಾಸವಿದೆ. ಎಷ್ಟೋ ಕಾದಂಬರಿಕಾರರು ಇತಿಹಾಸದ ಸತ್ಯಗಳನ್ನು ತಿರುಚಿ ಬರೆದರೆ ಡಾ.ನಾ.ಡಿಸೋಜರವರು ಬಹಳ ಜವಾಬ್ದಾರಿಯಿಂದ ಐತಿಹಾಸಿಕ ಕಾದಂಬರಿಗಳನ್ನು ಹೊರ ತಂದಿದ್ದಾರೆ. 

ಮಕ್ಕಳ ಸಾಹಿತ್ಯ ಮತ್ತು ಬಿಡಿ ಲೇಖನಗಳು

ಡಾ.ನಾ.ಡಿಸೋಜರವರು ಹಲವಾರು ಕಾದಂಬರಿಗಳನ್ನು ನೀಡುವುದರ ಜೊತೆಗೆ ಮಕ್ಕಳ ಸಾಹಿತ್ಯ ಹಾಗು ಕೆಲವು ಬಿಡಿ ಲೇಖನಗಳೆಡೆಗೂ ತಮ್ಮ ಲೇಖನಿಯನ್ನು ಹರಿಸಿರುವುದು ಸಂತಸದ ವಿಷಯವಾಗಿದೆ. 

 ಮಕ್ಕಳ ಸಾಹಿತ್ಯ: ಅಂದು ಮತ್ತು ಇಂದು ಮಕ್ಕಳ ಸಾಹಿತ್ಯ ಬಹಳ ಮುಖ್ಯವಾದದ್ದು ಎಂದು ಎಲ್ಲರೂ ಒಪ್ಪಿಕೊಂಡರೂ ಅದರ ಬಗ್ಗೆ ಕೃಷಿ ಮಾಡಿರುವ ಮತ್ತು ಮಾಡುತ್ತಿರುವ ಸಾಹಿತಿಗಳು ಕೇವಲ ಬೆರಳಣಿಕೆಯಷ್ಟು ಮಂದಿ ಮಾತ್ರ. ಮಕ್ಕಳ ಸಾಹಿತಿಗಳೆಂದರೆ ಅಷ್ಟಕಷ್ಟೆ. ಎಂದಿಗಿಂತಲೂ ಇವತ್ತು ಮಕ್ಕಳ ಸಾಹಿತ್ಯದ ಪ್ರಾಮುಖ್ಯತೆ ಹೆಚ್ಚುತ್ತಿದೆ. ಅಗತ್ಯವೋ ಅನಗತ್ಯವೋ ಮಕ್ಕಳು ಟಿ.ವಿ ಮುಂದೆ ಬಹಳ ಸಮಯವನ್ನು ಕಳೆಯುತ್ತಿರುತ್ತಾರೆ. ಮಕ್ಕಳಿಗೆ ಏನು ಬೇಕು ಎಂಬುವುದರ ಬಗ್ಗೆ ಕೂಡ ಅವರಿಗೆ ಸರಿಯಾದ ಕಲ್ಪನೆ ಇರುವುದಿಲ್ಲ. ಈ ಬಗ್ಗೆ ಶಿಕ್ಷಣ ತಜ್ಞರು, ಕವಿ, ಸಾಹಿತಿಗಳು, ರಂಗಕರ್ಮಿಗಳು ತೀವ್ರವಾಗಿ ಯೋಚಿಸುವ ಅಗತ್ಯವಿದೆ. ಇತ್ತೀಚಿನ ದಿನಗಳಲ್ಲಿ ಮಕ್ಕಳ ಸಾಹಿತ್ಯವೆಂದರೆ ಒಂದು ರೀತಿಯ ಅನಾದಾರ ನಮ್ಮಲ್ಲಿ ಇದೆ. ನಮ್ಮ ಹಿರಿಯ ಕವಿಗಳಾದ ಪಂಜೆಮಂಗೇಶರಾಯರು, ಶಿವರಾಮಕಾರಂತರು ಮತ್ತು ರಾಜರತ್ನಂ- ಇವರೆಲ್ಲರೂ ಮಕ್ಕಳ ಸಾಹಿತ್ಯಕ್ಕೆ ತುಂಬ ಕೆಲಸ ಮಾಡಿದ್ದಾರೆ. ಇವರಾರಿಗೂ ಮಕ್ಕಳ ಸಾಹಿತ್ಯ ಬಗ್ಗೆ ಕೀಳರಿಮೆ ಇರಲಿಲ್ಲ. ಮಹಾಕಾವ್ಯಗಳಿಗೆ ಮತ್ತು  ಮಹಾ ಕಾದಂಬರಿಗಳಿಗೆ ಕೊಟ್ಟ ಸ್ಥಾನಮಾನವನ್ನು ಶಿಶು ಸಾಹಿತ್ಯಕ್ಕೂ ಕೊಟ್ಟಿದ್ದರು ಅಲ್ಲದೆ ಕತೆ ಕಾದಂಬರಿಗಳನ್ನು ಬರೆಯುವ ಆಸಕ್ತಿಯಲ್ಲಿಯೇ, ಮಕ್ಕಳಿಗೋಸ್ಕರವೆಂದೇ ಕತೆ, ಕಾದಂಬರಿ, ಮಿನಿ ಕಾದಂಬರಿ ಮತ್ತು ನಾಟಕಗಳನ್ನು ಬರೆಯುತ್ತಿದ್ದರು ಅಲ್ಲದೆ ಅವರು ಬರೆದ ಮಕ್ಕಳ ಪುಸ್ತಕಗಳು ಒಂದಕ್ಕಿಂತ ಹೆಚ್ಚು ಮುದ್ರಣಗಳನ್ನು ಕಂಡಿವೆ ಮತ್ತು  ಕಾಣುತ್ತಿವೆ ಎಂಬುದು ಸಹ ಬಹುಮುಖ್ಯ.

ಡಾ. ನಾ. ಡಿಸೋಜರವರ ಮಕ್ಕಳ ಕಾದಂಬರಿ ಮುಳುಗಡೆಯ ಊರಿಗೆ ಬಂದವರು ಎಂಬ ಕಥೆಗೆ ಕೇಂದ್ರ ಸಾಹಿತ್ಯ ಅಕಾಡೆಮಿಯ ಬಾಲಸಾಹಿತ್ಯ ಪುರಸ್ಕಾರ (ರೂ.೫೦,೦೦೦/-ಬಹುಮಾನ ಸಮೇತ) ಬಂದಿರುವುದು ಕನ್ನಡ ನಾಡು ನುಡಿಗೆ ಸಂದ ಗೌರವ. ಡಾ.ನಾ.ಡಿಸೋಜರವರು ಕನ್ನಡದ ಹಿರಿಯ ಕತೆಗಾರರು, ಕಾದಂಬರಿಗಾರರು ಆಗಿದ್ದರೂ ಮಕ್ಕಳ ಸಾಹಿತ್ಯಕ್ಕೆ ಅವರು ನೀಡಿರುವ ಕೊಡುಗೆ ಬಹು ಅನನ್ಯ. ಮಕ್ಕಳ ಮನಸನ್ನು ತಟ್ಟುವ, ತೆರೆಯುವ, ಅರಳಿಸುವ ಶಕ್ತಿ ಅವರ ಬರವಣಿಗೆಯಲ್ಲಿದೆ, ಒಂದು ರೀತಿಯಲ್ಲಿ ಮಕ್ಕಳ ಸಾಹಿತ್ಯವು ಎಲ್ಲ ಸಾಹಿತಿಗಳ ಮನೆಯ ಹಿತ್ತಲಲ್ಲಿ ಬೆಳೆಯಬಹುದಾದ ಹೀರೇಕಾಯಿ ಅಲ್ಲವೆನ್ನುವುದು ಸಹ ಸತ್ಯ. ಇದಕ್ಕೆ ಬರಹಗಾರನಿಗೆ ಪ್ರತ್ಯೇಕವಾದ ಒಂದು ಮಾನಸಿಕ ಸ್ಥಿತಿಯೇ ಬೇಕು. ಮಕ್ಕಳ ಮನಸ್ಸನ್ನು ಅರಿಯುವ ಶಕ್ತಿ ಬೇಕು. ಜೊತೆಗೆ ಮಕ್ಕಳ ಅಗತ್ಯತೆಗಳ ಪೂರ್ಣ ಅರಿವು ಇರಬೇಕು. ಡಾ.ನಾ. ಡಿಸೋಜರಿಗೆ ಆ ಶಕ್ತಿ, ಆ ಮನಸ್ಸು ಇದ್ದುದ್ದರಿಂದಲೇ ಮಕ್ಕಳ ಸಾಹಿತ್ಯ ಕ್ಷೇತ್ರಕ್ಕೆ ಅವರು ನೀಡಿರುವ ಕೊಡುಗೆ ಸಾಕ್ಷಿಯಾಗಿದೆ. ಒಬ್ಬ ಬರಹಗಾರ ಇದ್ದಕ್ಕಿದ್ದಂತೆ ಒಂದು ವೈಚಾರಿಕ ಕೃತಿಯನ್ನು ರಚಿಸಬಹುದು ಆದರೆ ಒಂದು ಮಕ್ಕಳ ಕೃತಿಯನ್ನು ರಚಿಸುವುದು ತಿಳಿದಷ್ಟು ಸುಲಭವಲ್ಲ. ಮನಸ್ಸಿನೊಳಗೊಂದು ಮಕ್ಕಳ ಬಗ್ಗೆ ಪ್ರೀತಿಯ ಕಳಕಳಿ ಮತ್ತು ಕಾಳಜಿಗಳು ಬೇಕು. ಡಾ.ನಾ.ಡಿಸೋಜಾರ ಶಕ್ತಿ ಇದ್ದದ್ದೇ ಇಲ್ಲಿ. ಮುಳುಗಡೆ ಕಾದಂಬರಿ ಬಂದಾಗ ಮುಳುಗಡೆ ಎನ್ನುವ ಶಬ್ದ ಅನಾವರಣಗೊಂಡ ರೀತಿಯೇ ಬಹು ಅನೀರಿಕ್ಷಿತ ಹಾಗು ಅಷ್ಟೇ ನೂರಾರು ಅರ್ಥ ಛಾಯೆಗಳು ಹೊರಬಂದವು. ಇವರಿಗೆ ಇಷ್ಟರಿಂದಲೇ ತೃಪ್ತಿಯಾಗಲಿಲ್ಲ. ಈ ಭೂಮಿಯ ಮೇಲಿನ ನೀರಿನ ಸವಾರಿಯ ಅಪಾಯ ಮತ್ತು ದುರಂತಗಳನ್ನು ಮಕ್ಕಳಿಗೂ ತಿಳಿಸಬೇಕೆನ್ನುವ ಕಾತುರ ಮತ್ತು ಕಾಳಜಿಯೇ ಮುಳುಗಡೆಯ ಊರಿಗೆ ಬಂದವರು ಕಾದಂಬರಿಯ ವಿಶೇಷ. ಗಾಢವಾದ ಸಮಸ್ಯೆಯೊಂದು ಚಿಕ್ಕ ಮಕ್ಕಳ ಮನಸ್ಸಿಗೂ ನಾಟಬೇಕು, ಪರಿಸರದ ವೈಪರಿತ್ಯಗಳು, ಮನುಷ್ಯ ತನ್ನ ಸುಖಕ್ಕಾಗಿ ಪ್ರಕೃತಿಯನ್ನು ದುರುಪಯೋಗ ಪಡಿಸುತ್ತಿರುವ ಕಲ್ಪನೆ, ಇವೆಲ್ಲಾ ಈಗಿನಿಂದಲೇ ಮಕ್ಕಳ ಮನಸ್ಸಿನಲ್ಲಿ ಮೂಡಬೇಕು, ಮೂಡಿಸಬೇಕು ಎನ್ನುವ ಇವರ ಕಾಳಜಿ ಬಹು ಅರ್ಥಪೂರ್ಣ. ಇವರು ಬರೆದಿರುವ ಮಕ್ಕಳ ಸಾಹಿತ್ಯವೆಂದರೆ ಮುಳುಗಡೆ, ನೇತ್ರಾಣಿ ಗುಡ್ಡಕ್ಕೆ ಯಾತ್ರೆ, ಹಕ್ಕಿಗೊಂದು ಗೂಡು ಕೊಡಿ ಜೊತೆಗೆ ಮಕ್ಕಳ ನಾಟಕಗಳು ಮತ್ತು ಮಕ್ಕಳ ಕವಿತೆಗಳು ಇನ್ನೂ ಮುಂತಾದವುಗಳು. 

ಬಿಡಿ ಲೇಖನಗಳು: ಡಾ. ನಾ. ಡಿಸೋಜರವರು ಸುಮಾರು ೩೦೦೦ ಲೇಖನಗಳನ್ನು ಬರೆದಿದ್ದಾರೆ ಎನ್ನುವುದೇ ಬಹು ವಿಶೇಷ. ಬರವಣಿಗೆ ಪ್ರಾರಂಭಿಸಿದ್ದೇ ಪದ್ಯ ಮತ್ತು ಲೇಖನಗಳಿಂದ. ಬಹುಬೇಗ ಪದ್ಯಗಳನ್ನು ಕೈ ಬಿಟ್ಟು ಗದ್ಯಕ್ಕೆ ಒಗ್ಗಿಕೊಂಡರು. ಸಾಮಾನ್ಯವಾಗಿ ಹತ್ತಾರು ಪತ್ರಿಕೆಗಳಲ್ಲಿ ಡಾ.ನಾ.ಡಿಸೋಜರ ನಾಲ್ಕು ಲೇಖನಗಳಾದರೂ ಇದ್ದ ಕಾಲವಿತ್ತು. ಈಗ ಲೇಖನಗಳ ಪ್ರಮಾಣ ಕಡಿಮೆಯಾಗಿದೆ. ಅಂದು ಪತ್ರಿಕಾ ಸಂಪಾದಕರುಗಳಿಗೆ ಇವರ ಲೇಖನಗಳೆಂದರೆ ತುಂಬ ಅಚ್ಚುಮೆಚ್ಚು. ಡಾ.ನಾ.ಡಿಸೋಜರ ಲೇಖನಗಳ ಹರಿವು ವಿಶಾಲವೂ ವೈವಿಧ್ಯಮಯವೂ ಆಗಿದೆ. ಗುಬ್ಬಚ್ಚಿಗಳು ಗೂಡು ಕಟ್ಟುವದರಿಂದ ಹಿಡಿದು ಒಬ್ಬ ಇಂಜಿನಿಯರ್ ಸೇತುವೆ ಕಟ್ಟುವುದರವರೆಗಿನ ವಿಸ್ತಾರ ಈ ಲೇಖನಗಳಿಗಿವೆ. ಇವರ ಲೇಖನಗಳ ವೈಖರಿಗಳೇ ಹೀಗೆ ಕರ್ನಾಟಕದ ಪ್ರಾಚೀನ ಕ್ರೈಸ್ತರು ಹಾಗು ಹಕ್ಕಿಪಿಕ್ಕಿ ಜನಾಂಗಗಳಿಂದ ಹಿಡಿದು ಮುರುಡೇಶ್ವರ, ಕುಮಟಾ ಹೊನ್ನಾವರದ ಮೀನುಗಾರರವರೆಗೂ ಬರೆದಿದ್ದಾರೆ. ಇವರ ಲೇಖನಗಳಲ್ಲಿ ಕತೆಗಾರನ ಸ್ಪರ್ಶ ಇರುತ್ತದೆ. ಕತೆಗಾರನು ಬರೆಯುವ ಲೇಖನಗಳಿಗೂ, ಲೇಖನಗಳನ್ನು ಬರೆಯುವ ಕತೆಗಾರನಿಗೂ ವ್ಯತ್ಯಾಸ ಇದ್ದೇ ಇದೆ. ಡಿಸೋಜರವರು ಮೊದಲನೇ ವರ್ಗಕ್ಕೆ ಸೇರಿದವರು. ಹೀಗಾಗಿ, ಅವರ ಲೇಖನಗಳಿಗೆ ಪತ್ರಿಕೆಗಳಲ್ಲಿ ಹೆಚ್ಚಿನ ಪ್ರಾಧಾನ್ಯತೆ ಇತ್ತು.  ಸುಧಾ, ತರಂಗ, ಪ್ರಜಾವಾಣಿ, ಕನ್ನಡಪ್ರಭಾ, ಸಂಯುಕ್ತ ಕರ್ನಾಟಕ ಮುಂತಾದ ಪತ್ರಿಕೆಗಳಿಗೆ ಹೆಚ್ಚು ಬೇಡಿಕೆ ಇರಿಸಿಕೊಂಡಿದ್ದರು. ಇವರ ಲೇಖನಗಳನ್ನು ಬಯಸುತ್ತಿದ್ದ ಪತ್ರಿಕೆಗಳಿಗೆ ವೈವಿಧ್ಯಮಯವಾಗಿ ಬೇರೆ ಬೇರೆ ಹೆಸರುಗಳಲ್ಲಿ ಇವರು ಲೇಖನಗಳನ್ನು ಬರೆಯುತ್ತಿದ್ದರು. ಇವರ ವಿಷಯಧಾರಿತ ಲೇಖನಗಳನ್ನು ಕೆಲವು ವರ್ಗಗಳನ್ನಾಗಿ ವಿಂಗಡಿಸಬಹುದು. ಜಾನಪದ ಸಂಬಂಧ ಲೇಖನಗಳು, ಜನಾಂಗಿಕ ಅಧ್ಯಯನ ಲೇಖನಗಳು, ಪರಿಸರ ಲೇಖನಗಳು, ಪರಿಚಯ ಲೇಖನಗಳು ಮತ್ತು ವೈಚಾರಿಕ ಲೇಖನಗಳು.

ಕಾದಂಬರಿ ಕ್ರೇತ್ರಕ್ಕೆ ಸಂಬಂಧಿಸಿದಂತೆ ಡಾ. ನಾ. ಡಿಸೋಜ ಅವರ ೪೦ ಕಾದಂಬರಿಗಳು, ೪೦೦ ಸಣ್ಣ ಕಥೆಗಳು ಹಾಗೂ ವಿಶೇಷವಾದ ಮಕ್ಕಳ ಸಾಹಿತ್ಯ, ನಾಟಕಗಳು, ಜೀವನ ಚರಿತ್ರೆಗಳು ಪ್ರಸ್ತುತ ಕನ್ನಡ ನೆಲೆಯಲ್ಲಿ ಅಧಿಕೃತ ಸ್ಥಾನವನ್ನು ಪಡೆದಿವೆ. ಈಗಾಗಲೇ ಇವರ ಬಗ್ಗೆ ೪ ಎಂ. ಫಿಲ್ ಮತ್ತು ಡಾಕ್ಟರೇಟ್ ಪ್ರಬಂಧಗಳು ಹೊರಬಂದಿವೆ. ಇಂತಹ ಸಂಪನ್ಮೂಲ ಕ್ರೈಸ್ತ ಸಾಹಿತಿಯ ಸಾಧನೆ ನಿಜವಾಗಿಯು ಶ್ಲಾಘನೀಯ. ಡಿಸೋಜರಿಗೆ ಸಂಧಿರುವ ಸಾಹಿತ್ಯಿಕ ಗೌರವ ಪ್ರಶಸ್ತಿಗಳು ಹಾಗೂ ಜನಮನ್ನಣೆ ಪ್ರಸ್ತುತ ಕನ್ನಡ ಸಾಹಿತ್ಯದಲ್ಲಿ ಗಮನಾರ್ಹ. ಇವರ ಪ್ರಮುಖ ಕಾದಂಬರಿಗಳಾದ ಕಾಡಿನ ಬೆಂಕಿ ಮತ್ತು ದ್ವೀಪ ಚಲನಚಿತ್ರಗಳಾಗಿ ಮನ್ನಣೆ ಪಡೆದಿವೆ. ಅಲ್ಲದೇ ಡಾ. ನಾ. ಡಿಸೋಜ ಒಬ್ಬ ಉತ್ತಮ ಚಿಂತಕರು ಹಾಗೂ ಕನ್ನಡ ನುಡಿಯ ಪರಿಚಾರಕರು ಮಿಗಿಲಾಗಿ ಕ್ರಿ.ಶ.೨೦೧೪ರ ೮೦ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯನ್ನು ವಹಿಸಿದಂತಹ ಒಬ್ಬ ಧೀಮಂತ ಕ್ರೈಸ್ತ ಸಾಹಿತಿಯೂ ಹೌದು. ಹೀಗೆ ಕನ್ನಡ ಸಾಹಿತ್ಯವನ್ನು ಬೆಳೆಸಲು ಶ್ರಮಿಸಿದ ಹಾಗು ಶ್ರಮಿಸುತ್ತಿರುವ ಶ್ರೀಯುತರಿಗೆ ಸದಾ ದೇವರು ಆರೋಗ್ಯವನ್ನು ನೀಡಲಿ ಎಂದು ಹಾರೈಸುವ. 

-----------------------------

ಡಾ. ಸಿಸ್ಟರ್ ಪ್ರೇಮ (SಒಒI)

ಪ್ರಾಂಶುಪಾಲರು, ತೆರೇಸಾ ಕಾಲೇಜ್, ಬೆಂಗಳೂರು

-----------------------------



No comments:

Post a Comment

ಎತ್ತಿತೋರಿಸಲಾದ ಪೋಸ್ಟ್

ಅನ್ನಮ್ಮ’ಳಿಗೆ ೨೫೦ರ ಹಾಗೂ ಅತಿ.ವಂ.ಪೊತ್ತಕಮೂರಿಗೆ ೫೦ರ ಸ್ಮರಣೆಯ ಸಂಭ್ರಮ

ಬೆಂಗಳೂರಿನ ಉತ್ತರಹಳ್ಳಿಯ ಅನ್ನಮ್ಮನ ಬೆಟ್ಟ, ಅಲ್ಲಿನ ಅನ್ನಮ್ಮಳ ಸಮಾಧಿ, ಆ ಬೆಟ್ಟದ ಮೇಲಿನ ಶಿಲುಬೆ, ಅಲ್ಲಿ ಪ್ರತಿವರ್ಷ ತಪಸ್ಸು ಕಾಲದ ಐದನೇ ಭಾನುವಾರ ನಡೆಯುವ ಯೇಸು...